ಉಪರಾಷ್ಟ್ರಪತಿಗಳ ಕಾರ್ಯಾಲಯ

ಭಾರತೀಯ ಭಾಷೆಗಳಿಗೆ ಸಮಾನ ಗೌರವ ನೀಡುವಂತೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಕರೆ

ನಮ್ಮ ಶ್ರೀಮಂತ ಭಾಷಾ ವೈವಿಧ್ಯತೆಯ ಬಗ್ಗೆ ನಾವು ಹೆಮ್ಮೆ ಪಡಬೇಕು

ಹಿಂದಿ ಮತ್ತು ಇತರ ಭಾರತೀಯ ಭಾಷೆಗಳನ್ನು ಪರಸ್ಪರ ಪೂರಕವಾಗಿ ನೋಡಬೇಕು

ಯಾವುದೇ ಭಾಷೆಗೆ ಹೇರಿಕೆ ಅಥವಾ ವಿರೋಧ ಇರಬಾರದು

ಮಾತೃಭಾಷೆಯಲ್ಲಿ ಶಾಲಾ ಶಿಕ್ಷಣಕ್ಕೆ ಉಪ ರಾಷ್ಟ್ರಪತಿ ಕರೆ

ನಮ್ಮ ಭಾಷೆಗಳ ನಡುವೆ ಸಂವಾದವನ್ನು ಹೆಚ್ಚಿಸಲು ಪ್ರಕಾಶಕರು ಮತ್ತು ಶಿಕ್ಷಣ ತಜ್ಞರು ಕೆಲಸ ಮಾಡಬೇಕು

ವೆಬಿನಾರ್ ನಲ್ಲಿ ಹಿಂದಿ ದಿವಸ್ -2020 ಉದ್ದೇಶಿಸಿ ಭಾಷಣ

Posted On: 14 SEP 2020 1:54PM by PIB Bengaluru

ಎಲ್ಲಾ ಭಾಷೆಗಳಿಗೂ ಸಮಾನ ಗೌರವ ನೀಡಬೇಕು ಮತ್ತು ಯಾವುದೇ ಭಾಷೆಯನ್ನು ಹೇರಬಾರದು ಅಥವಾ ವಿರೋಧಿಸಬಾರದು ಎಂದು ಉಪ ರಾಷ್ಟ್ರಪತಿ ಶ್ರೀ ಎಂ.ವೆಂಕಯ್ಯ ನಾಯ್ಡು ಅವರು ಇಂದು ಹೇಳಿದ್ದಾರೆ.

ಹಿಂದಿ ದಿವಸ್ -2020 ಅಂಗವಾಗಿ ಮಧುಬನ್ ಎಜುಕೇಷನಲ್ ಬುಕ್ಸ್ ಆಯೋಜಿಸಿದ್ದ ಆನ್ಲೈನ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಉಪ ರಾಷ್ಟ್ರಪತಿಯವರು, ನಮ್ಮ ಎಲ್ಲಾ ಭಾಷೆಗಳಿಗೆ ಶ್ರೀಮಂತ ಇತಿಹಾಸವಿದೆ ಮತ್ತು ನಮ್ಮ ಭಾಷಾ ವೈವಿಧ್ಯತೆ ಮತ್ತು ಸಾಂಸ್ಕೃತಿಕ ಪರಂಪರೆಯ ಬಗ್ಗೆ ನಾವು ಹೆಮ್ಮೆ ಪಡಬೇಕು ಎಂದರು.

ಮಹಾತ್ಮ ಗಾಂಧೀಜಿಯವರು 1918 ರಲ್ಲಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾವನ್ನು ಸ್ಥಾಪಿಸಿದ್ದನ್ನು ಪ್ರಸ್ತಾಪಿಸಿದ ಉಪರಾಷ್ಟ್ರಪತಿಯವರು, ಹಿಂದಿ ಮತ್ತು ಇತರ ಭಾರತೀಯ ಭಾಷೆಗಳನ್ನು ಪರಸ್ಪರ ಪೂರಕವಾಗಿ ನೋಡಬೇಕು ಎಂದು ಒತ್ತಿ ಹೇಳಿದರು.

ನಾಗರಿಕರಲ್ಲಿ ಪರಸ್ಪರ ಅಭಿಮಾನ, ಪ್ರೀತಿ ಮತ್ತು ವಾತ್ಸಲ್ಯವನ್ನು ಹೆಚ್ಚಿಸಲು, ಹಿಂದಿಯೇತರ ರಾಜ್ಯಗಳ ವಿದ್ಯಾರ್ಥಿಗಳು ಹಿಂದಿ ಕಲಿಯಬೇಕು ಮತ್ತು ಹಿಂದಿ ಮಾತನಾಡುವ ರಾಜ್ಯಗಳ ವಿದ್ಯಾರ್ಥಿಗಳು ತಮಿಳು, ತೆಲುಗು, ಕನ್ನಡ ಮುಂತಾದ ಒಂದು ಭಾರತೀಯ ಭಾಷೆಯನ್ನು ಕಲಿಯಬೇಕು ಎಂದು ಶ್ರೀ ನಾಯ್ಡು ಸಲಹೆ ನೀಡಿದರು.

ಹೊಸ ಶಿಕ್ಷಣ ನೀತಿ-2020 ರಲ್ಲಿ ಮಾತೃಭಾಷೆಗೆ ನೀಡಿರುವ ಪ್ರಾಮುಖ್ಯತೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಉಪ ರಾಷ್ಟ್ರಪತಿಯವರು, ಅಂತರ್ಗತ ಶಿಕ್ಷಣಕ್ಕಾಗಿ ಮಾತೃಭಾಷೆಯಲ್ಲಿ ಶಿಕ್ಷಣವನ್ನು ಒದಗಿಸಬೇಕೆಂದು ಕರೆ ನೀಡಿದರು. "ಇದು ಮಕ್ಕಳಿಗೆ ವಿಷಯವನ್ನು ಉತ್ತಮವಾಗಿ ಕಲಿಯಲು ಮತ್ತು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಅವರು ತಮ್ಮನ್ನು ತಾವು ಉತ್ತಮವಾಗಿ ರೂಪಿಸಿಕೊಳ್ಳಲು ನೆರವಾಗುತ್ತದೆ" ಎಂದು ಅವರು ಹೇಳಿದರು.

ಮಾತೃಭಾಷೆಯಲ್ಲಿ ಶಿಕ್ಷಣಕ್ಕಾಗಿ ಹಿಂದಿ ಮತ್ತು ಇತರ ಭಾರತೀಯ ಭಾಷೆಗಳಲ್ಲಿ ಉತ್ತಮ ಪುಸ್ತಕಗಳ ಸುಲಭವಾಗಿ ಲಭ್ಯವಾಗಬೇಕಿದೆ. ಪ್ರಕಾಶನ ಸಂಸ್ಥೆಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.ಎಂದು ಅವರು ಹೇಳಿದರು,

ಎಲ್ಲಾ ಭಾರತೀಯ ಭಾಷೆಗಳು ಒಟ್ಟಾಗಿ ಬೆಳೆಯುವ ಅಗತ್ಯವನ್ನು ವ್ಯಕ್ತಪಡಿಸಿದ ಶ್ರೀ ನಾಯ್ಡು, ನಮ್ಮ ಭಾಷೆಗಳ ನಡುವೆ ಸಂವಾದವನ್ನು ಹೆಚ್ಚಿಸಲು ಕೆಲಸ ಮಾಡುವಂತೆ ಪ್ರಕಾಶಕರು ಮತ್ತು ಶಿಕ್ಷಣ ತಜ್ಞರಿಗೆ ಕರೆ ನೀಡಿದರು.

ಮಧುಬನ್ ಎಜುಕೇಷನಲ್ ಬುಕ್ಸ್ ಸಿಇಒ ಶ್ರೀ ನವೀನ್ ರಜ್ಲಾನಿ, ಎನ್ಸಿಇಆರ್ಟಿಯ ಪ್ರೊ.ಉಷಾ ಶರ್ಮಾ ಮತ್ತು ಪ್ರೊ.ಪವನ್ ಸುಧೀರ್ ಇಂದ್ರಪ್ರಸ್ಥ ವಿಶ್ವವಿದ್ಯಾಲಯದ ಪ್ರೊ.ಸರೋಜ್ ಶರ್ಮಾ ಉಪಸ್ಥಿತರಿದ್ದರು.

***(Release ID: 1654099) Visitor Counter : 25