ಪರಿಸರ ಮತ್ತು ಅರಣ್ಯ ಸಚಿವಾಲಯ

ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಣಕ್ಕೆ ಕಠಿಣ ಕಾನೂನು ಜಾರಿಗೆ ಕ್ರಮ ಕೈಗೊಳ್ಳಲು ಅರಣ್ಯ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ರಾಜ್ಯಗಳಿಗೆ ಕರೆ


ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನದಂದು ಕರ್ತವ್ಯದಲ್ಲಿದ್ದಾಗ ಪ್ರಾಣತೆತ್ತ ಅರಣ್ಯ ಸಿಬ್ಬಂದಿಗೆ ಗೌರವ ನಮನ ಸಲ್ಲಿಸಿದ ಪರಿಸರ ಸಚಿವಾಲಯ

Posted On: 11 SEP 2020 8:09PM by PIB Bengaluru

15ನೇ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನದ ಅಂಗವಾಗಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಅರಣ್ಯದಲ್ಲಿ ಕಾಡ್ಗಿಚ್ಚು, ಕಳ್ಳ ಸಾಗಾಣೆದಾರರು ಮತ್ತು ಮಾಫಿಯಾದಿಂದ ನಮ್ಮ ನೈಸರ್ಗಿಕ ಸಂಪನ್ಮೂಲಗಳು ಮತ್ತು ಅಮೂಲ್ಯ ಪ್ರಾಣಿ, ಪಕ್ಷಿ ಪ್ರಬೇಧಗಳನ್ನು ರಕ್ಷಿಸುವ ಕಾರ್ಯದಲ್ಲಿ ಹುತಾತ್ಮರಾದ ಸಿಬ್ಬಂದಿಗೆ ಗೌರವ ನಮನ ಸಲ್ಲಿಸಿದರು.

WhatsApp Image 2020-09-11 at 17.19.55.jpeg

ಶ್ರೀಗಂಧ ಕಳ್ಳರು, ಅರಣ್ಯ ಸಿಬ್ಬಂದಿಯನ್ನು ಕೊಲ್ಲುತ್ತಿರುವ ಘಟನೆಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶ್ರೀ ಜಾವಡೇಕರ್, ಶ್ರೀಗಂಧವನ್ನು ವ್ಯಾಪಕವಾಗಿ ಬೆಳೆಸಲು ಅನುಕೂಲವಾಗುವಂತೆ ಕಾನೂನಿಗೆ ಅಗತ್ಯ ತಿದ್ದುಪಡಿಗಳನ್ನು ತಂದು ನಿರ್ಬಂಧಗಳನ್ನು ಸಡಿಲಿಸಬೇಕಾಗಿದೆ ಎಂದರು. ಅರಣ್ಯದಲ್ಲಿ ಬೆಂಕಿಯ ವಿರುದ್ಧ ಮತ್ತು ಒಂದು ಕೊಂಬಿನ ಘೇಂಡಾಮೃಗ, ಹುಲಿ, ಆನೆ ಮತ್ತಿತರ ವನ್ಯಮೃಗಗಳಿಂದ ದಾಳಿಗೆ ತುತ್ತಾಗಿ ಪ್ರಾಣತೆತ್ತ ಅರಣ್ಯ ಸಿಬ್ಬಂದಿಗೆ ಗೌರವ ಸಲ್ಲಿಸಿದರು. 2019-21ನೇ ಸಾಲಿನಲ್ಲಿ ಕರ್ತವ್ಯದಲ್ಲಿದ್ದಾಗ ಮೃತಪಟ್ಟ ಅರಣ್ಯ ಸಿಬ್ಬಂದಿಯ ಸ್ಮರಣಾರ್ಥ ಅವರ ಕುಟುಂಬದವರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ಮರಳು ಮಾಫಿಯಾಗೆ ಕಠಿಣ ಎಚ್ಚರಿಕೆಯನ್ನು ನೀಡಿದ ಕೇಂದ್ರ ಸಚಿವರು, ಪರಿಸ್ಥಿತಿಯನ್ನು ಅವಲೋಕಿಸಲಾಗುವುದು ಮತ್ತು ಯಾರು ಕಾನೂನು ಪಾಲನೆ ಮಾಡುವುದಿಲ್ಲವೋ ಅಂತಹವರನ್ನು ಶಿಕ್ಷಿಸಲಾಗುವುದು ಎಂದರು. ಹೊಸ ಸುಸ್ಥಿರ ಮರಳು ಗಣಿಗಾರಿಕೆ ನೀತಿ ಮತ್ತು ನಿಯಮಗಳ ನಡುವೆಯೂ ಹಲವು ರಾಜ್ಯಗಳು ಮತ್ತು ಪ್ರದೇಶಗಳಲ್ಲಿ ನಿಯಮಗಳು ಪಾಲನೆಯಾಗುತ್ತಿಲ್ಲ ಎಂದು ಕೇಂದ್ರ ಸಚಿವರು ಹೇಳಿದರು. ಆಳ್ವಾರ್ ನ ಸರಿಸ್ಕಾ ಹುಲಿ ಮೀಸಲು ಪ್ರದೇಶದೊಳಗೆ ಗಣಿ ಮಾಫಿಯಾದ ಶಂಕಿತ ಸದಸ್ಯರನ್ನು ತಡೆಯಲು ಹೊರಟ ಅರಣ್ಯ ಹೋಮ್ ಗಾರ್ಡ್ ಕೆವಲ್ ಸಿಂಗ್ ಮತ್ತು ಸಹೋದ್ಯೋಗಿ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಲ್ಲಲಾಗಿದೆ.

ರಾಜ್ಯ ಸರ್ಕಾರಗಳು ಮರಳು ಗಣಿಗಾರಿಕೆ ಮಾಫಿಯಾ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಅದನ್ನು ಕೊನೆಗಾಣಿಸಲು ಕಠಿಣ ಕಾನೂನುಗಳನ್ನು ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು. ನದಿ ಪಾತ್ರಗಳಲ್ಲಿ ನೈಸರ್ಗಿಕ ಸಂಪನ್ಮೂಲಗಳು ಸವಕಳಿ ಆಗುವುದನ್ನು ನಿಯಂತ್ರಿಸಲು ಸುಸ್ಥಿರ ಮರಳು ಗಣಿಗಾರಿಕೆ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಚಿವರು ಮನವಿ ಮಾಡಿದರು. ನದಿ ಪಾತ್ರಗಳು ಸಂಪೂರ್ಣವಾಗಿ ಬತ್ತಿ ಹೋಗುವುದನ್ನು ತಡೆಯಲು ಸುಸ್ಥಿರ ಮರಳು ಗಣಿಗಾರಿಕೆ ಪದ್ಧತಿಯನ್ನು ಪಾಲನೆ ಮಾಡಬೇಕು ಮತ್ತು ಸುಸ್ಥಿರ ಮರಳು ಗಣಿಗಾರಿಕೆ ಪದ್ಧತಿ ಉಪಕ್ರಮಗಳನ್ನು ಜಾರಿಗೊಳಿಸಲು ಮುಂದಾಗುವ ಅರಣ್ಯ ಮತ್ತು ಕಂದಾಯ ಸಿಬ್ಬಂದಿಗಳನ್ನು ಕೊಲೆ ಮಾಡುವಂತಹ ಕೃತ್ಯಗಳು ಸಂಪೂರ್ಣವಾಗಿ ಒಪ್ಪುವಂತಹುವುಲ್ಲ ಮತ್ತು ಅಂತಹ ತಪ್ಪಿತಸ್ಥರಿಗೆ ಖಂಡಿತ ಶಿಕ್ಷೆಯಾಗುವಂತೆ ನೋಡಿಕೊಳ್ಳಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಭಾರತದ ಆಕರ್ಷಕ ಮತ್ತು ವ್ಯಾಪಕ ಜೀವ ವೈವಿಧ್ಯತೆಯನ್ನು ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಪಡೆ ಅವಿರತವಾಗಿ ರಕ್ಷಿಸುವ ಕಾರ್ಯದಲ್ಲಿ ತೊಡಗಿದೆ ಮತ್ತು ಭರಿಸಲಾಗದ ಸಂಪತ್ತನ್ನು ಸುಧಾರಿಸಲು ಹಾಗೂ ರಕ್ಷಿಸಲು ಶ್ರಮಿಸುತ್ತಿದೆ. ಕಳೆದ ಕೆಲವು ವರ್ಷಗಳಿಂದೀಚೆಗೆ ಪ್ರಕೃತಿಯಲ್ಲಿನ ಅಪರೂಪದ ಸಸ್ಯ ಹಾಗೂ ಪ್ರಾಣಿ ಪ್ರಬೇಧಗಳನ್ನು ರಕ್ಷಿಸುವಲ್ಲಿ ಮತ್ತು ಮಾನವ ವನ್ಯಜೀವಿ ಸಂಘರ್ಷಗಳಲ್ಲಿ ಇಲಾಖೆ ತನ್ನ ಹಲವು ಅರಣ್ಯ ರಕ್ಷಕರನ್ನು ಕಳೆದುಕೊಂಡಿದೆ.

WhatsApp Image 2020-09-11 at 17.20.26.jpeg

ದೇಶದ ನಾನಾ ಭಾಗಗಳಲ್ಲಿ ನಮ್ಮ ಪರಿಸರ, ಅರಣ್ಯ ಮತ್ತು ವನ್ಯಜೀವಿ ರಕ್ಷಣೆಯಲ್ಲಿ ತಮ್ಮ ಶೌರ್ಯ ಮತ್ತು ಸಾಹಸ ಮೆರೆದು, ಬಲಿದಾನಗೈದ ಅರಣ್ಯ ಸಿಬ್ಬಂದಿಯನ್ನು ಸ್ಮರಿಸಲು ಭಾರತ ಸರ್ಕಾರದ ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯ, ಪ್ರತಿ ವರ್ಷ ಸೆಪ್ಟೆಂಬರ್ 11 ಅನ್ನು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನಾಗಿ ಘೋಷಿಸಿದೆ.

ಅರಣ್ಯ ಹುತಾತ್ಮರ ದಿನಕ್ಕೆ ಸೆಪ್ಟೆಂಬರ್ 11ರ ದಿನಾಂಕವನ್ನೇ ಆಯ್ದುಕೊಳ್ಳಲು ಅದಕ್ಕೆ ಒಂದು ಐತಿಹಾಸಿಕ ಮಹತ್ವವಿದೆ. ಇದೇ ದಿನ 1730ರಲ್ಲಿ ಅಮೃತಾದೇವಿ ನೇತೃತ್ವದಲ್ಲಿ ಬಿಷ್ಣೋಯ್ ಬುಡಕಟ್ಟು ಸಮುದಾಯದ ಸುಮಾರು 360 ಮಂದಿ ಮರಗಳನ್ನು ಕಡಿಯುವುದಕ್ಕೆ ಆಕ್ಷೇಪ ಎತ್ತಿದ್ದರು ಮತ್ತು ಮರಗಳನ್ನು ರಕ್ಷಿಸಲು ಪ್ರತಿಭಟನೆ ನಡೆಸುತ್ತಿದ್ದ ಜನರನ್ನು ರಾಜಸ್ಥಾನದ ಖೇಜಾರ್ಲಿಯಲ್ಲಿ ದೊರೆಯ ಆದೇಶದ ಮೇರೆಗೆ ಕೊಲ್ಲಲಾಯಿತು. ಡೆಹ್ರಾಡೂನ್ ನ ಎಫ್ ಆರ್ ಐನ ಬ್ರಾಂಡೀಸ್ ರಸ್ತೆಯ ಸಮೀಪ ಸ್ಮಾರಕ ಸ್ಥಳದಲ್ಲಿ 2012ರ ಅಕ್ಟೋಬರ್ 3ರಂದು ಸ್ಮಾರಕಸ್ಥಂಬದ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ನಮ್ಮ ದೇಶದ ಅರಣ್ಯ ಮತ್ತು ಜೀವವೈವಿಧ್ಯ ರಕ್ಷಿಸುವ ಕಾರ್ಯದಲ್ಲಿ ಹುತಾತ್ಮರಾದ ಅರಣ್ಯ ಸಿಬ್ಬಂದಿಗೆ ಗೌರವ ಸಲ್ಲಿಸಲು ಡೆಹ್ರಾಡೂನ್ ನ ಅರಣ್ಯ ಮೀಸಲು ಸಂಸ್ಥೆ(ಎಫ್ ಆರ್ ಐ) ಕ್ಯಾಂಪಸ್ ಆವರಣದಲ್ಲಿ ಅರಣ್ಯ ಸ್ಮಾರಕವನ್ನು ನಿರ್ಮಿಸಲಾಯಿತು.

ಪರಿಸರ ಸಚಿವಾಲಯ, ಜಪಾನ್ ಅಂತಾರಾಷ್ಟ್ರೀಯ ಸಹಕಾರ ಏಜೆನ್ಸಿ (ಜೈಕಾ) ನೆರವಿನೊಂದಿಗೆಅರಣ್ಯ ಸಿಬ್ಬಂದಿಯ ನಿರ್ವಹಣಾ ಮತ್ತು ತರಬೇತಿ ಸಾಮರ್ಥ್ಯಾಭಿವೃದ್ಧಿ” ಕಾರ್ಯಕ್ರಮವನ್ನು 13 ರಾಜ್ಯಗಳಲ್ಲಿ ಕೈಗೊಳ್ಳಲಾಗಿದ್ದು, ಆಯಾ ರಾಜ್ಯ ಸರ್ಕಾರಗಳ ಮುಂಚೂಣಿ ಸಿಬ್ಬಂದಿಗಳಲ್ಲಿ ಒಟ್ಟಾರೆ ಗುಣಾತ್ಮಕ ಮತ್ತು ಋಣಾತ್ಮಕ ಸುಧಾರಣೆಗಳನ್ನು ತರುವಲ್ಲಿ ಮಹತ್ವದ ಪಾತ್ರವಹಿಸುತ್ತಿದೆ. ಜೈಕಾ ಈಗಾಗಲೇ ಎರಡನೇ ಹಂತದ ಯೋಜನೆಗೂ ಒಪ್ಪಿಗೆ ನೀಡಿದೆ. ಸಚಿವಾಲಯದ ಬಲವರ್ಧನೆಗೆ ಮುಂಚೂಣಿ ಸಿಬ್ಬಂದಿ ಮತ್ತು ಅವರ ಕುಟುಂಬ ವರ್ಗದವರಿಗಾಗಿ ಪ್ರತ್ಯೇಕ ಮಾರ್ಗಸೂಚಿ ರೂಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

2019-20ನೇ ಸಾಲಿನಲ್ಲಿ ಕರ್ತವ್ಯದಲ್ಲಿದ್ದಾಗ ಮೃತಪಟ್ಟ ಅರಣ್ಯ ಸಿಬ್ಬಂದಿಯ ಪಟ್ಟಿ ಹಾಗೂ ಪ್ರಮಾಣಪತ್ರಗಳ ವಿವರ ಈ ಲಿಂಕ್ ನಲ್ಲಿ ಲಭ್ಯವಿದೆ.

***


(Release ID: 1653522) Visitor Counter : 263