ರೈಲ್ವೇ ಸಚಿವಾಲಯ
ಭಾರತೀಯ ರೈಲ್ವೇಯ ಪರಿವರ್ತನೆಯ ಪ್ರಯಾಣದಲ್ಲಿ ಕೈಜೋಡಿಸಲು ಕೈಗಾರಿಕೋದ್ಯಮದ ನಾಯಕರಿಗೆ ರೈಲ್ವೇ ಮತ್ತು ವಾಣಿಜ್ಯ ಸಚಿವರಾದ ಶ್ರೀ ಪಿಯೂಶ್ ಗೋಯಲ್ ಮನವಿ
ಆತ್ಮನಿರ್ಭರ ಭಾರತಕ್ಕಾಗಿ ತಂತ್ರಜ್ಞಾನ ಮತ್ತು ಸಹಭಾಗಿತ್ವದ ಬಳಕೆ ಕುರಿತ ಸಿ.ಐ.ಐ. ರೈಲ್ ಕನೆಕ್ಟ್ ಉದ್ದೇಶಿಸಿ ಶ್ರೀ ಗೋಯಲ್ ಭಾಷಣ
ಅಧಿವೇಶನದಲ್ಲಿ ಭಾರತೀಯ ರೈಲ್ವೇಯಲ್ಲಿ ಪರಿವರ್ತನೆಯ ದಿಕ್ಪಥದ ರೂಪರೇಖೆ ಮುಂದಿಟ್ಟ ರೈಲ್ವೇ ಮಂಡಳಿ ಅಧ್ಯಕ್ಷ ಶ್ರೀ ವಿನೋದ್ ಕುಮಾರ್
Posted On:
08 SEP 2020 5:07PM by PIB Bengaluru
ಭಾರತೀಯ ಉದ್ಯಮಗಳ ಮಹಾ ಒಕ್ಕೂಟ (ಸಿ.ಐ.ಐ.) ವು ಇಂದು ಅಂದರೆ 2020 ರ ಸೆಪ್ಟೆಂಬರ್ 8 ರಂದು ವರ್ಚುವಲ್ ವೇದಿಕೆಯಲ್ಲಿ ರೈಲ್ ಕನೆಕ್ಟ್ ನ ಎರಡನೆ ಆವೃತ್ತಿಯನ್ನು ಆಯೋಜಿಸಿತ್ತು. ಈ ಸಮ್ಮೇಳನವು ಭಾರತೀಯ ರೈಲ್ವೇಯ ಭವಿಷ್ಯದ ಯೋಜನೆಗಳು , ದೇಶೀಯ ಉತ್ಪಾದನೆ ಮತ್ತು ಭಾರತದಲ್ಲಿ ರೈಲ್ವೇ ಉದ್ಯಮದ ವ್ಯವಹಾರಕ್ಕೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮಂಥನ ನಡೆಸಿತು. ಸಾರ್ವಜನಿಕ ಹಾಗು ಖಾಸಗಿ ಸಹಭಾಗಿತ್ವವೂ ಒಳಗೊಂಡಂತೆ ರೈಲ್ವೇ ಸಾರಿಗೆ ರಂಗದಲ್ಲಿ ಉದ್ಭವಿಸುತ್ತಿರುವ ಅವಕಾಶಗಳು , ತಂತ್ರಜ್ಞಾನ, ನಗರ ಸಂಚಾರ ವ್ಯವಸ್ಥೆ , ನಿಲ್ದಾಣಗಳ ಅಭಿವೃದ್ದಿ, ಲೊಕೋಮೋಟಿವ್ ಗಳ ಆಧುನೀಕರಣ, ರೈಲ್ವೇ ಸರಕು ಸಾಗಾಟ, ಸಂಪರ್ಕ ತಂತ್ರಜ್ಞಾನ ಮತ್ತು ಸುರಕ್ಷೆ , ಆರೋಗ್ಯ ಹಾಗು ರೈಲ್ವೇ ವ್ಯವಸ್ಥೆಯ ಸುಸ್ಥಿರತೆಯ ಗುಣಮಟ್ಟಗಳು ಕುರಿತಂತೆ ವಿಚಾರ ವಿಮರ್ಶೆ ಉದ್ದೇಶ ಇದರದ್ದಾಗಿದೆ. ಸಮಾರಂಭದಲ್ಲಿ ರೈಲ್ವೇ ಮತ್ತು ವಾಣಿಜ್ಯ ಹಾಗು ಕೈಗಾರಿಕಾ ಸಚಿವರಾದ ಶ್ರೀ ಪಿಯೂಶ್ ಗೋಯಲ್ , ರೈಲ್ವೇ ಮಂಡಳಿಯ ಅಧ್ಯಕ್ಷ ಮತ್ತು ಸಿ.ಇ.ಒ. ಶ್ರೀ ವಿನೋದ್ ಕುಮಾರ್ ಯಾದವ್, ಸಿ.ಐ.ಐ. ಯ ಮಹಾ ನಿರ್ದೇಶಕ ಶ್ರೀ ಚಂದ್ರಜಿತ್ ಬ್ಯಾನರ್ಜಿ ಮತ್ತು ಕೈಗಾರಿಕೋದ್ಯಮದ ನಾಯಕರು ಪಾಲ್ಗೊಂಡಿದ್ದರು.
ಉದ್ಘಾಟನಾ ಅಧಿವೇಶನದಲ್ಲಿ ಮಾತನಾಡಿದ ಶ್ರೀ ಗೋಯಲ್ ಅವರು “ ಭಾರತೀಯ ರೈಲ್ವೇಯನ್ನು ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬೆಳವಣಿಗೆಯ ಇಂಜಿನ್ ಎಂದು ಅತ್ಯಂತ ಸಮರ್ಪಕವಾಗಿ ಬಣ್ಣಿಸಿದ್ದಾರೆ. ಗ್ರಾಹಕರಿಗೆ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮತ್ತು ಉತ್ತಮ ಸೇವಾ ಅನುಭವ ನೀಡುವಂತೆ ಬಲಿಷ್ಟವಾಗಿ ರೂಪಿಸುವುದು ಅವರ ಚಿಂತನೆಯಾಗಿದೆ. ಇದು ರೈಲ್ವೇಯ ಜೊತೆ ಇರುವ ಭಾವನಾತ್ಮಕ ಪ್ರೀತಿಯನ್ನೂ ಒಳಗೊಂಡಿರುತ್ತದೆ. ರೈಲ್ವೇಯಲ್ಲಿ ಪರಿವರ್ತನೆಗಳು ಆಗುತ್ತಿವೆ. ಕೋವಿಡ್ ಹಂತದಲ್ಲಿ ಭಾರತೀಯ ರೈಲ್ವೇಯು ಅಡೆತಡೆಗಳನ್ನು ನಿವಾರಿಸುವ, ನಿಭಾಯಿಸುವ , ಶ್ರಮಿಕ ರೈಲುಗಳನ್ನು ಓಡಿಸುವ, ಸರಕು ಸಾಗಾಣಿಕೆ ಪಾಲನ್ನು ಮರಳಿ ತರುವ ,ಪುನರುಜ್ಜೀವನ ಪ್ರಕ್ರಿಯೆಗಳನ್ನು ಕೈಗೊಂಡಿತು. ನೀತಿ ಬದಲಾವಣೆ ಜಾರಿಗೆ ತರುವ , ಖಾಸಗಿ ವಲಯದ ಜೊತೆ ಕೈಜೋಡಿಸುವ , ತಂತ್ರಜ್ಞಾನ ಪೂರೈಕೆದಾರರ ಜೊತೆಗೂಡಿ , ಮೂಲ ಸೌಕರ್ಯಗಳನ್ನು ಸುಧಾರಿಸುವ ಅವಕಾಶಗಳನ್ನು ಅದು ಬಳಸಿಕೊಂಡಿತು” ಎಂದರು. ಭಾರತೀಯ ರೈಲ್ವೇಯು ನಿವ್ವಳ ಶೂನ್ಯ ಕಾರ್ಬನ್ ಹೊರಸೂಸುವಿಕೆಯ ನಿಟ್ಟಿನಲ್ಲಿ ದಾಪುಗಾಲಿಡುತ್ತಿದೆ ಎಂದು ಹೇಳಿದ ಸಚಿವರು, ಭಾರತೀಯ ರೈಲ್ವೇಗೆ ಸರಕು ಸಾಗಾಣಿಕೆ ವಲಯದಲ್ಲಿ ಕಡಿಮೆ ವೆಚ್ಚದಾಯಕ ಪರಿಹಾರಗಳನ್ನು ಒದಗಿಸಲು ಮತ್ತು ಸಾಗಾಣಿಕೆ ವೆಚ್ಚವನ್ನು ಕಡಿಮೆ ಮಾಡಲು ಕೈಗಾರಿಕೋದ್ಯಮದ ನಾಯಕರು ಸಹಯೋಗ ನೀಡಬೇಕು ಎಂದು ಮನವಿ ಮಾಡಿದರು. ಆತ್ಮ ನಿರ್ಭರ ರೈಲ್ವೇಯು ರೈಲ್ವೇ ಮತ್ತು ಕೈಗಾರಿಕೋದ್ಯಮಗಳೆರಡನ್ನು ಅವಲಂಬಿಸಿದೆ ಎಂಬುದನ್ನವರು ಒತ್ತಿ ಹೇಳಿದರು.
ರೈಲ್ವೇ ಮಂಡಳಿಯ ಅಧ್ಯಕ್ಷರಾದ ಶ್ರೀ ವಿನೋದ್ ಕುಮಾರ್ ಯಾದವ್ ಅವರು ತಮ್ಮ ಭಾಷಣದಲ್ಲಿ ಆಧುನೀಕರಣ, ಸ್ವಾವಲಂಬನೆ, ಮತ್ತು ಹಸಿರು ರೈಲ್ವೇ ಗಳ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ವಿವಿಧ ಕ್ರಮಗಳ ಬಗ್ಗೆ ವಿವರ ನೀಡಿದರು. ಭಾರತೀಯ ರೈಲ್ವೇ ಪರಿವರ್ತನೆಯ ದಿಕ್ಕಿನಲ್ಲಿ ಕೈಗೊಳ್ಳಲಾಗುವ ಯೋಜನೆ ಮತ್ತು ಉದ್ಯಮದ ಜೊತೆಗಿನ ಸಹಭಾಗಿತ್ವದ ಬಗ್ಗೆ ಅವರು ಮಾತನಾಡಿದರು.
ಸಮ್ಮೇಳನದಲ್ಲಿ ಪಾಲ್ಗೊಂಡ ವಿವಿಧ ಉದ್ಯಮಗಳ ನಾಯಕರು ಲಾಕ್ ಡೌನ್ ಅವಧಿಯಲ್ಲಿ ರೈಲ್ವೇಯು ವಹಿಸಿದ ಪ್ರಮುಖ ಪಾತ್ರದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು ಹಾಗು ರೈಲ್ವೇಯಲ್ಲಾದ ಗಮನಾರ್ಹ ಬದಲಾವಣೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
***
(Release ID: 1652628)
Visitor Counter : 165