ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
“ಉನ್ನತ ಶಿಕ್ಷಣದ ಪರಿವರ್ತನೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ – 2020 ಪಾತ್ರ” ಕುರಿತ ರಾಜ್ಯಪಾಲರ ಸಮಾವೇಶ ಉದ್ಘಾಟಿಸಿದ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್
ರಾಜ್ಯಪಾಲರ ಸಮಾವೇಶದ ಉದ್ಘಾಟನಾ ಗೋಷ್ಠಿಯನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿ
21ನೇ ಶತಮಾನದ ಆಶೋತ್ತರಗಳು ಮತ್ತು ಅಗತ್ಯತೆಗಳಿಗೆ ಅನುಗುಣವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಭಾರತವನ್ನು ಮುನ್ನಡೆಸಲಿದೆ: ರಾಷ್ಟ್ರಪತಿ ರಾಮನಾಥ್ ಕೋವಿಂದ್
ಶಿಕ್ಷಣ ನೀತಿ ಮತ್ತು ಶಿಕ್ಷಣ ವ್ಯವಸ್ಥೆ ದೇಶದ ಆಶೋತ್ತರಗಳನ್ನು ಈಡೇರಿಸುವಲ್ಲಿ ಅತ್ಯಂತ ಪ್ರಮುಖ ವಿಧಾನಗಳು - ಪ್ರಧಾನಮಂತ್ರಿ
ಸರ್ವರ ಭಾಗಿದಾರಿಕೆಯೊಂದಿಗೆ ನಾವು ಯಾವುದೇ ವಿಳಂಬವಿಲ್ಲದೆ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುತ್ತೇವೆ – ಶಿಕ್ಷಣ ಸಚಿವರು
Posted On:
07 SEP 2020 6:56PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರು ನವದೆಹಲಿಯಲ್ಲಿಂದು ‘ಉನ್ನತ ಶಿಕ್ಷಣದ ಪರಿವರ್ತನೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ–2020 ಪಾತ್ರ’ ಕುರಿತಂತೆ ರಾಜ್ಯಪಾಲರ ವರ್ಚುಯಲ್ ಸಮಾವೇಶವನ್ನು ಉದ್ಘಾಟಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಮಾವೇಶದ ಉದ್ಘಾಟನಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಅದರಲ್ಲಿ ಕೇಂದ್ರ ಶಿಕ್ಷಣ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಖ್, ಶಿಕ್ಷಣ ಖಾತೆ ರಾಜ್ಯ ಸಚಿವ ಶ್ರೀ ಸಂಜಯ್ ಧೋತ್ರೆ, ರಾಜ್ಯಪಾಲರುಗಳು, ಲೆಫ್ಟಿನೆಂಟ್ ಗವರ್ನರ್ ಗಳು / ರಾಜ್ಯಗಳ ಆಡಳಿತಾಧಿಕಾರಿಗಳು ಮತ್ತು ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರು ಪಾಲ್ಗೊಂಡಿದ್ದರು.
ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಭಾರತದ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರು, ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) 21ನೇ ಶತಮಾನದ ಆಶೋತ್ತರಗಳು ಮತ್ತು ಅಗತ್ಯತೆಗಳಿಗೆ ತಕ್ಕಂತೆ ಯುವ ಜನಾಂಗವನ್ನು ವಿಶೇಷವಾಗಿ ಮುನ್ನಡೆಸುತ್ತದೆ ಎಂದರು. ದೂರದೃಷ್ಟಿಯ ನಾಯಕತ್ವಕ್ಕೆ ಮತ್ತು ಐತಿಹಾಸಿಕ ದಾಖಲೆಯ ವಿನ್ಯಾಸಗೊಳಿಸುವಲ್ಲಿ ಸ್ಪೂರ್ತಿದಾಯಕ ಪಾತ್ರ ವಹಿಸಿದ್ದಕ್ಕಾಗಿ ರಾಷ್ಟ್ರಪತಿಗಳು ಪ್ರಧಾನಮಂತ್ರಿಯವರನ್ನು ಅಭಿನಂದಿಸಿದರು ಮತ್ತು ಅವರು ಡಾ. ಕಸ್ತೂರಿರಂಗನ್ ಹಾಗೂ ಆ ಕಾರ್ಯಕ್ಕೆ ನೆರವಾದ ಎಲ್ಲ ಸಚಿವರು ಮತ್ತು ಶಿಕ್ಷಣ ಸಚಿವಾಲಯದ ಎಲ್ಲ ಅಧಿಕಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 2.5 ಲಕ್ಷ ಗ್ರಾಮ ಪಂಚಾಯಿತಿಗಳು, 12,500 ಸ್ಥಳೀಯ ಸಂಸ್ಥೆಗಳು ಮತ್ತು 675ಕ್ಕೂ ಅಧಿಕ ಜಿಲ್ಲೆಗಳಿಂದ ಸುಮಾರು 2 ಲಕ್ಷಕ್ಕೂ ಅಧಿಕ ಸಲಹೆಗಳನ್ನು ಸ್ವೀಕರಿಸಿ ವಿಸ್ತೃತ ಸಮಾಲೋಚನೆ ನಂತರ ರಾಷ್ಡ್ರೀಯ ಶಿಕ್ಷಣ ನೀತಿ ಸಿದ್ಧಪಡಿಸಲಾಗಿದೆ ಎಂದರು. ಆ ಬದಲಾವಣೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದರೆ ಭಾರತ ಶಿಕ್ಷಣದಲ್ಲಿ ಸೂಪರ್ ಪವರ್ ಆಗಿ ಅಭಿವೃದ್ಧಿ ಹೊಂದಲಿದೆ ಎಂದು ಹೇಳಿದರು.
ಎನ್ ಇಪಿ ಕುರಿತು ವಿಸ್ತೃತವಾಗಿ ಮಾತನಾಡಿದ ರಾಷ್ಟ್ರಪತಿಗಳು, ರಾಜ್ಯಗಳ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರು ಎನ್ಇಪಿ ಅನುಷ್ಠಾನದಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ ಎಂದರು. ಸುಮಾರು 400 ರಾಜ್ಯ ವಿಶ್ವವಿದ್ಯಾಲಯಗಳು ಮತ್ತು ಅವುಗಳ ಜೊತೆ ಸುಮಾರು 40ಸಾವಿರ ಕಾಲೇಜುಗಳು ಸಂಯೋಜನೆಗೊಂಡಿವೆ, ಆದ್ದರಿಂದ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರು ಈ ವಿಶ್ವವಿದ್ಯಾಲಯಗಳೊಂದಿಗೆ ಸಮನ್ವಯ ಮತ್ತು ಸಂವಾದ ಸ್ಥಾಪಿಸುವುದು ಅತ್ಯಗತ್ಯವಾಗಿದೆ ಎಂದು ರಾಷ್ಟ್ರಪತಿ ಹೇಳಿದರು.
ಶಿಕ್ಷಣ, ಸಾಮಾಜಿಕ ನ್ಯಾಯದ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂದು ರಾಷ್ಟ್ರಪತಿ ಕೋವಿಂದ್ ಹೇಳಿದರು ಮತ್ತು ಆದ್ದರಿಂದ ರಾಷ್ಟ್ರೀಯ ಶಿಕ್ಷಣ ನೀತಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಸೇರಿ ಜಿಡಿಪಿಯ ಶೇ.6ರಷ್ಟು ಹಣವನ್ನು ಹೂಡಿಕೆ ಮಾಡಬೇಕಾಗಿದೆ ಎಂದು ಕರೆ ನೀಡಿದರು. ಕ್ರಿಯಾಶೀಲ ಪ್ರಜಾಪ್ರಭುತ್ವ ಸಮಾಜ ನಿರ್ಮಾಣಕ್ಕಾಗಿ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಬಲವರ್ಧನೆಗೆ ಎನ್ ಇಪಿ ಹೆಚ್ಚಿನ ಒತ್ತು ನೀಡುತ್ತದೆ ಎಂದು ಅವರು ಹೇಳಿದರು. ಇದೇ ವೇಳೆ, ವಿದ್ಯಾರ್ಥಿಗಳಲ್ಲಿ ಮೂಲಭೂತ ಹಕ್ಕುಗಳು, ಕರ್ತವ್ಯಗಳು, ಸಾಂವಿಧಾನಿಕ ಮೌಲ್ಯಗಳು ಮತ್ತು ದೇಶಭಕ್ತಿಯನ್ನು ಮೂಡಿಸಲು ನೆರವಾಗಲಿದೆ ಎಂದರು.
ಭಾರತದ ರಾಷ್ಟ್ರಪತಿಗಳ ಭಾಷಣದ ಪೂರ್ಣಪಠ್ಯಕ್ಕಾಗಿ ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ
https://pib.gov.in/PressReleasePage.aspx?PRID=1651942
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ದೇಶದ ಅಶೋತ್ತರಗಳನ್ನು ಈಡೇರಿಸಲು ಶಿಕ್ಷಣ ನೀತಿ ಮತ್ತು ಶಿಕ್ಷಣ ವ್ಯವಸ್ಥೆ ಅತ್ಯಂತ ಪ್ರಮುಖ ವಿಧಾನಗಳಾಗಿವೆ ಎಂದರು.
ಶಿಕ್ಷಣದ ಹೊಣೆಗಾರಿಕೆ ಕೇಂದ್ರ, ರಾಜ್ಯಗಳು ಮತ್ತು ಸ್ಥಳೀಯ ಮಟ್ಟದ ಸರ್ಕಾರಗಳ ನಡುವೆ ಹಂಚಿಕೆಯಾಗಿದ್ದರೂ, ನೀತಿಯಲ್ಲಿ ಅವುಗಳ ಹಸ್ತಕ್ಷೇಪ ಅತ್ಯಂತ ಕನಿಷ್ಠಮಟ್ಟದ್ದಾಗಿರುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಹೆಚ್ಚು ಹೆಚ್ಚು ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಯೋಜನೆಯಲ್ಲಿ ತೊಡಗಿಸಿಕೊಂಡಾಗ ಶಿಕ್ಷಣ ನೀತಿಯ ಪ್ರಸ್ತುತತೆ ಮತ್ತು ಸಮಗ್ರತೆ ಹೆಚ್ಚಾಗುತ್ತದೆ ಎಂದು ಹೇಳಿದರು. ರಾಷ್ಟ್ರೀಯ ಶಿಕ್ಷಣ ನೀತಿ 2020 ಯನ್ನು ಶಿಕ್ಷಣ ವಲಯಕ್ಕೆ ಸಂಬಂಧಿಸಿದವರು ಸೇರಿ ದೇಶಾದ್ಯಂತ ಕೋಟ್ಯಾಂತರ ಜನರ ಅಭಿಪ್ರಾಯವನ್ನು ಸ್ವೀಕರಿಸಿದ ನಂತರ ರೂಪಿಸಲಾಗಿದೆ ಮತ್ತು ಈಗ ಶಿಕ್ಷಕರು ಮತ್ತು ಶಿಕ್ಷಣ ತಜ್ಞರು ಸೇರಿದಂತೆ ಎಲ್ಲರೂ ನೀತಿಯನ್ನು ಪಡೆದುಕೊಂಡಿದ್ದಾರೆ. ನೀತಿಯನ್ನು ಸಾರ್ವತ್ರಿಕವಾಗಿ ಅಂಗೀಕರಿಸಲಾಗುತ್ತಿದೆ ಎಂದು ಹೇಳಿದರು.
ಎನ್ ಇಪಿ ಉದ್ದೇಶ ಕೇವಲ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಯನ್ನು ತರುವುದು ಮಾತ್ರವಲ್ಲ, 21ನೇ ಶತಮಾನದ ಭಾರತದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಹೊಸ ಆಯಾಮ ನೀಡುವುದಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ನೀತಿಯ ಉದ್ದೇಶ ಭಾರತವನ್ನು ಸ್ವಾವಲಂಬಿ ಅಥವಾ ಆತ್ಮ ನಿರ್ಭರಗೊಳಿಸುವುದು, ಆ ಮೂಲಕ ಬದಲಾಗುತ್ತಿರುವ ಜಗತ್ತಿನಲ್ಲಿ ನಮ್ಮ ಮುಂದಿನ ಯುವ ಜನಾಂಗವನ್ನು ಭವಿಷ್ಯದ ಅಗತ್ಯತೆಗಳಿಗೆ ತಕ್ಕಂತೆ ಕೌಶಲ್ಯ ಮತ್ತು ಜ್ಞಾನದ ಮೂಲಕ ಸಜ್ಜಗೊಳಿಸುವುದಾಗಿದೆ ಎಂದರು.
ಹೊಸ ಶಿಕ್ಷಣ ನೀತಿಯು ಓದುವುದಕ್ಕಿಂತ ಹೆಚ್ಚಾಗಿ ಕಲಿಕೆಯ ಮೇಲೆ ಗಮನ ಹರಿಸುತ್ತದೆ ಮತ್ತು ಪಠ್ಯಕ್ರಮವನ್ನು ಮೀರಿ ವಿಮರ್ಶಾತ್ಮಕ ಚಿಂತನೆಗೆ ಒತ್ತು ನೀಡುತ್ತದೆ. ಪ್ರಕ್ರಿಯೆಗಿಂತ ಭಾವೋದ್ರೇಕಕ್ಕೆ, ಪ್ರಾಯೋಗಿಕತೆ ಮತ್ತು ಕಾರ್ಯಕ್ಷಮತೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಅವರು ಹೇಳಿದರು.
ಹೊಸ ಶಿಕ್ಷಣ ನೀತಿ ಭಾರತವನ್ನು 21ನೇ ಶತಮಾನದ ಆರ್ಥಿಕ ಅರಿವಿನ ರಾಷ್ಟ್ರವಾಗಿ ಮಾಡುವ ಗುರಿ ಹೊಂದಿದೆ. ಹೊಸ ಶಿಕ್ಷಣ ನೀತಿ ಕಡಲಾಚೆಯ ಅಗ್ರ ಅಂತರಾಷ್ಟ್ರೀಯ ವಿಶ್ವವಿದ್ಯಾಲಯಗಳ ಕ್ಯಾಂಪಸ್ ಭಾರತದಲ್ಲಿ ನೆಲೆಗೊಳ್ಳುವುದಕ್ಕೆ ಅವಕಾಶ ಕಲ್ಪಿಸಿ ಪ್ರತಿಭಾ ಫಲಾಯನ ತಡೆಯಲಿದೆ ಎಂದು ಹೇಳಿದರು.
ಭಾರತದ ಪ್ರಧಾನಮಂತ್ರಿಗಳ ಭಾಷಣದ ಪೂರ್ಣಪಠ್ಯಕ್ಕಾಗಿ ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ
https://pib.gov.in/PressReleasePage.aspx?PRID=1651934
ಸ್ವಾಗತ ಭಾಷಣ ಮಾಡಿದ ಕೇಂದ್ರ ಶಿಕ್ಷಣ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ , ರಾಷ್ಟ್ರೀಯ ಶಿಕ್ಷಣ ನೀತಿಯ ಪಯಣ, ಬೆಳವಣಿಗೆ ಮತ್ತು ಸಮಾಲೋಚನಾ ಪ್ರಕ್ರಿಯೆಯ ಬಗ್ಗೆ ವಿವರಿಸಿದರು. ಲಕ್ಷಾಂತರ ಗ್ರಾಮಗಳು, ಬ್ಲಾಕ್ ಗಳು, ಜಿಲ್ಲೆಗಳು, ಶೈಕ್ಷಣಿಕ ತಜ್ಞರು, ಉಪಕುಲಪತಿಗಳು, ಪ್ರಾಂಶುಪಾಲರು, ಶಿಕ್ಷಕರು ಮತ್ತು ವಿಜ್ಞಾನಿಗಳ ಜೊತೆ ವ್ಯಾಪಕ ಸಮಾಲೋಚನೆಯ ಫಲವೇ ಹೊಸ ಶಿಕ್ಷಣ ನೀತಿಯಾಗಿದೆ ಎಂದರು.
ರಾಷ್ಟ್ರೀಯ ಸಂಶೋಧನಾ ಫೌಂಡೇಷನ್ ಮೂಲಕ ಹೊಸ ಆಯಾಮ ಮತ್ತು ಸಂಶೋಧನೆಗೆ ಬೆಂಬಲ ನೀಡಲಾಗುವುದು ಎಂದು ಅವರು ಬಲವಾಗಿ ಪ್ರತಿಪಾದಿಸಿದರು. ರಾಷ್ಟ್ರೀಯ ಶಿಕ್ಷಣ ನೀತಿ ನಮ್ಮ ಶೈಕ್ಷಣಿಕ ವ್ಯವಸ್ಥೆಯನ್ನು ಸರಳ ಮತ್ತು ಸ್ಥಿರಗೊಳಿಸಲಿದೆ. ಸುಧಾರಣೆ, ಪರಿವರ್ತನೆ ಮತ್ತು ಸಾಧನೆ ಇವು ನೀತಿಯ ಪ್ರಮುಖ ಆದ್ಯತೆಗಳಾಗಿವೆ, ಸ್ವಚ್ಛ, ಸ್ವಾಸ್ಥ್ಯ, ಸಾಕ್ಷಾತ್ ಆತ್ಮ ನಿರ್ಭರ್ ಮತ್ತು ಎಕ್ ಭಾರತ್- ಶ್ರೇಷ್ಠ ಭಾರತ್ ನಿರ್ಮಾಣಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಮಾರ್ಗಸೂಚಿಯಾಗಲಿದೆ ಎಂದರು.
ಶಿಕ್ಷಣ ಖಾತೆ ರಾಜ್ಯ ಸಚಿವ ಶ್ರೀ ಸಂಜಯ್ ಧೋತ್ರೆ, ರಾಜ್ಯಪಾಲರ ಸಮಾವೇಶದಲ್ಲಿ ಹೊರಬಂದ ನಾನಾ ಆಯಾಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಸಮಾವೇಶದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.
ಸಮಾವೇಶದ ವೇಳೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜ್ಯಪಾಲರು, ಲೆಫ್ಟಿನೆಂಟ್ ಗೌವರ್ನರ್ ಗಳು ಮತ್ತು ಶಿಕ್ಷಣ ಸಚಿವರ ಚರ್ಚಾಗೋಷ್ಠಿಗಳು ನಡೆದವು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 ಅಡಿಯಲ್ಲಿ ಉನ್ನತ ಶಿಕ್ಷಣದಲ್ಲಿ ಆಗಲಿರುವ ಸಂಭಾವ್ಯ ಪರಿವರ್ತನೆಗಳು ಮತ್ತು ಮುಂದಿನ ದಿಕ್ಸೂಚಿ ಕುರಿತು ವಿಸ್ತೃತವಾಗಿ ಸಮಾಲೋಚನೆ ನಡೆಸಲಾಯಿತು. ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗೌವರ್ನರ್ ಗಳು ರಾಷ್ಟ್ರಪತಿಗಳು ಹಾಗೂ ಇನ್ನಿತರರಿಗೆ ತಮ್ಮ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕುರಿತು ಹಲವು ಅಂಶಗಳನ್ನು ತಿಳಿಸಿದರು.
ಎನ್ ಇಪಿ ಕರಡು ಸಮಿತಿಯ ಅಧ್ಯಕ್ಷ ಪ್ರೊ.ಕೆ.ಕಸ್ತೂರಿ ರಂಗನ್ ಅವರು ವಿಶೇಷ ಅಧಿವೇಶನದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದರು ಮತ್ತು ಎನ್ ಇಪಿ ಸಮಾಲೋಚನಾ ಪ್ರಕ್ರಿಯೆಯ ಹಾದಿ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯ ನಾನಾ ಆಯಾಮಗಳನ್ನು ಬಿಡಿಸಿಟ್ಟರು. ಯುಜಿಸಿ ಅಧ್ಯಕ್ಷ ಪ್ರೊ.ಡಿ.ಪಿ.ಸಿಂಗ್ ಅವರು ಶಿಕ್ಷಣದ ಪರಿವರ್ತನೆಯಲ್ಲಿ ಎನ್ ಇಪಿ ಪಾತ್ರದ ಕುರಿತು ತಾಂತ್ರಿಕ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಪ್ರಿನ್ಸಟನ್ ವಿಶ್ವವಿದ್ಯಾಲಯದ ಖ್ಯಾತ ಗಣಿತ ತಜ್ಞ ಮತ್ತು ಎನ್ ಇಪಿ ಕರಡು ಸಮಿತಿಯ ಸದಸ್ಯ ಪ್ರೊ.ಮಂಜುಳ್ ಭಾರ್ಗವ್, ಕರಡು ಎನ್ ಇಪಿ ಸದಸ್ಯ ಪ್ರೊ.ಎಂ.ಕೆ.ಶ್ರೀಧರ್ ಮತ್ತಿತರರು ಅತಿಥಿ ಭಾಷಣಕಾರರಾಗಿ ಭಾಗವಹಿಸಿದ್ದರು. ಭಾಷಣಕಾರರು ರಾಷ್ಟ್ರದ ಅಭಿವೃದ್ಧಿಯಲ್ಲಿ ಶಿಕ್ಷಣ ಗಂಭೀರ ಪಾತ್ರವಹಿಸುತ್ತಿರುವುದರ ಬಗ್ಗೆ, ಭಾರತ ಎದುರಿಸುತ್ತಿರುವ ಸಾಮಾಜಿಕ ಸವಾಲುಗಳು ಮತ್ತು ಅವುಗಳಿಗೆ ಸಂಶೋಧನೆ ಮತ್ತು ಆವಿಷ್ಕಾರಗಳ ಮೂಲಕ ಲಭ್ಯವಿರುವ ಪರಿಹಾರಗಳು, 21ನೇ ಶತಮಾನದಲ್ಲಿ ಜ್ಞಾನದ ಬೆಳವಣಿಗೆ, ಸ್ಟೆಮ್ ಮೂಲಕ ಕಲೆ ಮತ್ತು ಮಾನವೀಯತೆಯನ್ನು ಒಂದು ಗೂಡಿಸುವುದು ಮತ್ತು ಬಹುಶಿಸ್ತೀಯ ಸಮಗ್ರ ಶಿಕ್ಷಣ ಪದ್ದತಿ ಸೇರಿ ಹಲವು ಆಯಾಮಗಳ ಕುರಿತು ಮಾತನಾಡಿದರು.
***
(Release ID: 1652172)
Visitor Counter : 185