ಪ್ರಧಾನ ಮಂತ್ರಿಯವರ ಕಛೇರಿ

ರಾಷ್ಟ್ರೀಯ ಶಿಕ್ಷಣ ನೀತಿ - 2020 ಕುರಿತ ರಾಜ್ಯಪಾಲರ ಸಮಾವೇಶ ಉದ್ದೇಶಿಸಿ ಭಾಷಣ ಮಾಡಲಿರುವ ಗೌರವಾನ್ವಿತ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿ

Posted On: 06 SEP 2020 8:00AM by PIB Bengaluru

ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2020ರ ಸೆಪ್ಟಂಬರ್ 7ರಂದು ಬೆಳಿಗ್ಗೆ 10.30ಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ರಾಜ್ಯಪಾಲರ ಸಮಾವೇಶದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಲಿದ್ದಾರೆ.
ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ ಆಯೋಜಿಸಿರುವ ಈ ಸಮಾವೇಶದ ಶೀರ್ಷಿಕೆ “ಉನ್ನತ ಶಿಕ್ಷಣ ಪರಿವರ್ತನೆಯಲ್ಲಿ ಎನ್ ಇಪಿ-2020 ಪಾತ್ರ’’ ಎಂಬುದಾಗಿದೆ.
ಹಿಂದೆ 1986ರಲ್ಲಿ ಶಿಕ್ಷಣ ಕುರಿತಾದ ರಾಷ್ಟ್ರೀಯ ನೀತಿ ಪ್ರಕಟವಾಗಿತ್ತು, ಅದಾದ 34 ವರ್ಷಗಳ ನಂತರ 21ನೇ ಶತಮಾನದಲ್ಲಿ ಘೋಷಿಸಿರುವ ಮೊದಲ ಶಿಕ್ಷಣ ನೀತಿ ಎಂದರೆ ಎನ್ ಇಪಿ-2020.  ಎನ್ಇಪಿ ಅಡಿಯಲ್ಲಿ ಶಾಲಾ ಮತ್ತು ಉನ್ನತ ಶಿಕ್ಷಣ ಮಟ್ಟ ಎರಡಲ್ಲೂ ಮಹತ್ವದ ಸುಧಾರಣೆಗಳನ್ನು ತರಲು ಉದ್ದೇಶಿಸಲಾಗಿದೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಭಾರತವನ್ನು ಸಮಾನ, ಸ್ಪರ್ಧಾತ್ಮಕ ಮತ್ತು ಕ್ರಿಯಾಶೀಲ ಜ್ಞಾನದ ಸಮಾಜವನ್ನಾಗಿ ರೂಪಿಸಲಿದೆ. ನೀತಿ ಭಾರತ ಕೇಂದ್ರಿತ ಶಿಕ್ಷಣ ವ್ಯವಸ್ಥೆಯಾಗಿದ್ದು, ಅದು ನೇರವಾಗಿ ಭಾರತವನ್ನು ಜಾಗತಿಕ ಸೂಪರ್ ಶಕ್ತಿಯನ್ನಾಗಿ ಪರಿವರ್ತನೆಗೊಳಿಸಲಿದೆ.
ಸಮಗ್ರ ಸುಧಾರಣೆ ಉದ್ದೇಶದ ಎನ್ ಇಪಿ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ತರಲಿದೆ ಮತ್ತು ಭಾರತದ ಗೌರವಾನ್ವಿತ ಪ್ರಧಾನಮಂತ್ರಿ ಅವರ ಆತ್ಮ ನಿರ್ಭರ ಭಾರತ ಕರೆಗೆ ಪೂರಕವಾಗಿ ಶೈಕ್ಷಣಿಕ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲಿದೆ.
ರಾಷ್ಟ್ರೀಯ ಶಿಕ್ಷಣ ನೀತಿ 2020ರ ನಾನಾ ಆಯಾಮಗಳ ಬಗ್ಗೆ ದೇಶಾದ್ಯಂತ ನಾನಾ ವೆಬಿನಾರ್ ಗಳು, ವರ್ಚುಯಲ್ ಸಮಾವೇಶಗಳು ಮತ್ತು ಶೃಂಗಸಭೆಗಳು ನಡೆಯುತ್ತಿವೆ.
ಶಿಕ್ಷಣ ಸಚಿವಾಲಯ ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗ ಈ ಹಿಂದೆ ಆಯೋಜಿಸಿದ್ದ “ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020ರಡಿ ಉನ್ನತ ಶಿಕ್ಷಣದಲ್ಲಿ ಪರಿವರ್ತನೆಯ ಸುಧಾರಣೆಗಳು’’ ಕುರಿತ ಸಮಾವೇಶವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋಧಿ ಭಾಷಣ ಮಾಡಿದ್ದರು.
ಸೆಪ್ಟಂಬರ್ 7ರಂದು ನಡೆಯಲಿರುವ ರಾಜ್ಯಪಾಲರ ಸಮಾವೇಶದಲ್ಲಿ ಎಲ್ಲ ರಾಜ್ಯಗಳ ಶಿಕ್ಷಣ ಸಚಿವರು, ರಾಜ್ಯಗಳ ವಿಶ್ವವಿದ್ಯಾಲಯಗಳು ಉಪ ಕುಲಪತಿಗಳು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಗೌರವಾನ್ವಿತ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗಳು ಮಾಡಲಿರುವ ಭಾಷಣವನ್ನು ಡಿಡಿ ನ್ಯೂಸ್ ನೇರ ಪ್ರಸಾರ ಮಾಡಲಿದೆ.

***



(Release ID: 1651738) Visitor Counter : 216