ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ರಾಷ್ಟ್ರಪತಿ ಶ್ರೀ ರಾಮನಾಥ ಕೋವಿಂದ್ ಅವರಿಂದ ಶಿಕ್ಷಕರ ದಿನದಂದು 47 ಶಿಕ್ಷಕರಿಗೆ ವರ್ಚುಯಲ್ ರೂಪದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

Posted On: 04 SEP 2020 5:50PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರು, ನವದೆಹಲಿಯಲ್ಲಿ ನಾಳೆ ವರ್ಚುಯಲ್ ರೂಪದಲ್ಲಿ ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಶಿಕ್ಷಣ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಖ್ ಮತ್ತು ಸಹಾಯಕ ಸಚಿವ ಶ್ರೀ ಸಂಜಯ್ ದೋತ್ರೆ ಅವರು ಭಾಗವಹಿಸಲಿದ್ದಾರೆ. ಶಿಕ್ಷಕರ ದಿನದಂದು ಅತ್ಯಮೂಲ್ಯ ಸೇವೆ ಸಲ್ಲಿಸಿರುವ ದೇಶದ ಶಿಕ್ಷಕರನ್ನು ಗುರುತಿಸಿ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ನೀಡಲಾಗುವುದು ಮತ್ತು   ಶಾಲಾ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ತಮ್ಮ ಬದ್ಧತೆ ತೋರಿರುವುದಲ್ಲದೆ, ತಮ್ಮ ವಿದ್ಯಾರ್ಥಿಗಳ ಜೀವನವನ್ನು ಶ್ರೀಮಂತಗೊಳಿಸಿರುವ ಶಿಕ್ಷಕರನ್ನು ಗೌರವಿಸಲಾಗುವುದು.

#OurTeachersOurHeroes

ನಮ್ಮ ಶಿಕ್ಷಕರೇ ನಮ್ಮ ನಾಯಕರು

2020ನೇ ಸಾಲಿನ ಶಿಕ್ಷಕರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ ಸೆಪ್ಟೆಂಬರ್ 5ರಂದು ಬೆಳಗ್ಗೆ 11 ಗಂಟೆಗೆ ನಮ್ಮ ಜೊತೆ ಸೇರಿ;

ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀ ರಾಮನಾಥ್ ಕೋವಿಂದ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡುವರು.@rashtrapatibhvn #TeachersFromIndia #NAT2020 pic.twitter.com/6fNtIfp4vf

—ಡಾ. ರಮೇಶ್ ಪೋಖ್ರಿಯಾಲ್ ನಿಶಾಂಖ್ (@DrRPNishank) ಸೆಪ್ಟೆಂಬರ್ 4, 2020

2018ರಲ್ಲಿ ಶಿಕ್ಷಕರ ರಾಷ್ಟ್ರೀಯ ಪ್ರಶಸ್ತಿ ಆಯ್ಕೆಯ ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಯಿತು ಮತ್ತು ಆ ಪ್ರಕ್ರಿಯೆಯನ್ನು ಆನ್ ಲೈನ್ ಮತ್ತು ಪಾರದರ್ಶಕಗೊಳಿಸಲಾಯಿತು ಹಾಗೂ ರಾಷ್ಟ್ರಮಟ್ಟದ ಆಯ್ಕೆ ಸಮಿತಿ ಸೇರಿ ಮೂರು ಹಂತಗಳನ್ನು ರಚಿಸಲಾಯಿತು.

     i.        ಶಿಕ್ಷಕರೇ ಸ್ವತಃ mhrd.gov.in ನಲ್ಲಿ ಸ್ವಯಂ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

   ii.         ಎಲ್ಲಾ ಶಿಕ್ಷಕರು ಇದಕ್ಕೆ ಅರ್ಹರು. ಇದಕ್ಕೆ ಕನಿಷ್ಠ ಸೇವಾ ಅವಧಿ ಅಗತ್ಯವಿಲ್ಲ.

  iii.        ಅಂತಿಮ ಆಯ್ಕೆಗೆ ಯಾವುದೇ ರಾಜ್ಯ/ಕೇಂದ್ರಾಡಳಿತ ಪ್ರದೇಶ/ಸಂಸ್ಥೆಯ ಕೋಟಾ ಇಲ್ಲ.

  iv.        ರಾಜ್ಯಗಳು/ಕೇಂದ್ರಾಡಳಿತ ಪ್ರದೇಶ/ಸಂಸ್ಥೆಗಳಿಂದ ಸ್ವೀಕರಿಸಲ್ಪಟ್ಟ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿಯನ್ನು ಸ್ವತಂತ್ರ ರಾಷ್ಟ್ರೀಯ ಆಯ್ಕೆ ಸಮಿತಿ ಪರಿಶೀಲಿಸಿ ಅಂತಿಮ ಆಯ್ಕೆ ಮಾಡಲಿದೆ.

   v.        ಪ್ರಶಸ್ತಿಗಳ ಸಂಖ್ಯೆ 45ಕ್ಕೆ ಸೀಮಿತಗೊಳಿಸಲಾಗಿದೆ(ಹೆಚ್ಚುವರಿಯಾಗಿ ಆಯ್ಕೆ ಸಮಿತಿ ವಿಶೇಷಚೇತನ ಶಿಕ್ಷಕ ವರ್ಗದವರೂ ಸೇರಿ ಮತ್ತಿತರ ಇಬ್ಬರು ಶಿಕ್ಷಕರನ್ನು ಆಯ್ಕೆ ಮಾಡಬಹುದು)

ಆನ್ ಲೈನ್ ಪೋರ್ಟಲ್ www.mhrd.gov.in ಮೂಲಕ ಶಿಕ್ಷಕರು ಸ್ವಯಂ ಅರ್ಜಿ ಸಲ್ಲಿಸಬೇಕು. ಮೊದಲ ಹಂತದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ಆಯ್ಕೆ ಸಮಿತಿ(ಡಿಎಸ್ ಸಿ) ಅರ್ಜಿಗಳನ್ನು ಪರಿಶೀಲಿಸಲಿದೆ. ನಿಗದಿತ ಆಯ್ಕೆ ಮಾನದಂಡಗಳನ್ನು ಆಧರಿಸಿ ಡಿಎಸ್ ಸಿ ಮೂರು ಹೆಸರುಗಳನ್ನು ತಾತ್ಕಾಲಿಕ ಆಯ್ಕೆ ಮಾಡಲಿದೆ ಮತ್ತು ಆ ಹೆಸರುಗಳನ್ನು ಆನ್ ಲೈನ್ ಪೋರ್ಟಲ್ ಮೂಲಕ ರಾಜ್ಯ ಆಯ್ಕೆ ಸಮಿತಿಗೆ ಕಳುಹಿಸಲಿದೆ.

ಎರಡನೇ ಹಂತದಲ್ಲಿ ರಾಜ್ಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿ ಅಧ್ಯಕ್ಷತೆಯ ರಾಜ್ಯ ಆಯ್ಕೆ ಸಮಿತಿ(ಎಸ್ಎಸ್ ಸಿ) ಪರಿಶೀಲನೆ ನಡೆಸಲಿದೆ. ಈ ಎಸ್ಎಸ್ ಸಿ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಲಿದೆ ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿಗದಿಪಡಿಸಿರುವ ಗರಿಷ್ಠ ಸಂಖ್ಯೆಯ ಅಭ್ಯರ್ಥಿಗಳ ಹೆಸರುಗಳನ್ನು ಒಳಗೊಂಡ ಪಟ್ಟಿ ತಯಾರಿಸಿ, ಆನ್ ಲೈನ್ ಪೋರ್ಟಲ್ ಮೂಲಕ ಸ್ವತಂತ್ರ ರಾಷ್ಟ್ರೀಯ ಆಯ್ಕೆ ಸಮಿತಿಗೆ ಶಿಫಾರಸ್ಸು ಮಾಡಲಿದೆ.

2020ರ ಶಿಕ್ಷಕರ ರಾಷ್ಟ್ರೀಯ ಪ್ರಶಸ್ತಿಗಳಿಗೆ ಅಂತಿಮ ಆಯ್ಕೆಯನ್ನು ರಾಷ್ಟ್ರಮಟ್ಟದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಡಿ ಬರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ನಿವೃತ್ತ ಕಾರ್ಯದರ್ಶಿ ಅಧ್ಯಕ್ಷತೆಯ ಸ್ವತಂತ್ರ ಆಯ್ಕೆ ಸಮಿತಿ ನಡೆಸಲಿದೆ. ರಾಜ್ಯಗಳು ಮತ್ತು ಸಂಸ್ಥೆಗಳು ಕಳುಹಿಸಿರುವ ಅಭ್ಯರ್ಥಿಗಳ ಪಟ್ಟಿಯನ್ನು ಆಯ್ಕೆ ಸಮಿತಿ ಪರಿಶೀಲನೆ ನಡೆಸಿ, ಹೊಸದಾಗಿ ಮೌಲ್ಯಮಾಪನ ಮಾಡಲಿದೆ. ಈ ವರ್ಷ ಅಭ್ಯರ್ಥಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಆಯ್ಕೆ ಸಮಿತಿ ಮುಂದೆ ಹಾಜರಾಗಿ ಅದರ ಮುಂದೆ ಪ್ರಾತ್ಯಕ್ಷಿಕೆಗಳನ್ನು ಸಲ್ಲಿಸಿದರು. ಆಯ್ಕೆ ಸಮಿತಿ 47 ಶಿಕ್ಷಕರನ್ನು ಆಯ್ಕೆ ಮಾಡಿದೆ.

ಆಯ್ಕೆಯಾಗಿರುವ ಪ್ರಶಸ್ತಿ ವಿಜೇತರು ತಮ್ಮ ಬದ್ಧತೆ ಮತ್ತು ಪರಿಶ್ರಮದಿಂದ ಕೇವಲ ಶಾಲಾ ಶಿಕ್ಷಣದ ಗುಣಮಟ್ಟವನ್ನು ಮಾತ್ರ ಸುಧಾರಣೆ ಮಾಡಿಲ್ಲ, ಅವರು ವಿದ್ಯಾರ್ಥಿಗಳ ಹಾಗೂ ಸಮುದಾಯಗಳ ಜೀವನವನ್ನು ಹಲವು ಕಾರ್ಯಕ್ರಮಗಳ ಮೂಲಕ ಶ್ರೀಮಂತಗೊಳಿಸಿದ್ದಾರೆ. ಅವುಗಳೆಂದರೆ, ಪ್ರವೇಶ ಹೆಚ್ಚಳಕ್ಕೆ ಕ್ರಮ, ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ತಗ್ಗಿಸುವುದು, ಆನಂದದ ಮತ್ತು ಪ್ರಯೋಗಾತ್ಮಕ ಕಲಿಕಾ ವಿಧಾನಗಳ ಅಳವಡಿಕೆ, ಕಡಿಮೆ ವೆಚ್ಚದ ಟಿಎಲ್ಎಂಗಳ ಅಭಿವೃದ್ಧಿ ಮತ್ತು ಬಳಕೆ, ಪಠ್ಯೇತರ ಚಟುವಟಿಕೆಗಳ ಆಯೋಜನೆ ಮತ್ತು ಸಹಪಠ್ಯ ಚಟುವಟಿಕೆಗಳಿಗೆ ಉತ್ತೇಜನ, ಮಕ್ಕಳಲ್ಲಿ ಸಾಮಾಜಿಕ ಜಾಗೃತಿ ಹೆಚ್ಚಿಸುವುದು, ಸಮುದಾಯದ ಪಾಲ್ಗೊಳ್ಳುವಿಕೆಗೆ ಉತ್ತೇಜನ, ಕಲಿಕೆಯಲ್ಲಿ ಐಸಿಟಿ ಸೂಕ್ತ ಹಾಗೂ ಪರಿಣಾಮಕಾರಿ ಬಳಕೆ ಹಾಗೂ ರಾಷ್ಟ್ರ ನಿರ್ಮಾಣ ಮತ್ತು ರಾಷ್ಟ್ರದ ಐಕ್ಯತೆಗೆ ಉತ್ತೇಜನ ಮತ್ತಿತರ ಕ್ರಮಗಳೂ ಸೇರಿವೆ.   

2020ರ ಸೆಪ್ಟೆಂಬರ್ 5 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭ ನೇರ ಪ್ರಸಾರದ ಲಿಂಕ್ ಈ ಕೆಳಗಿದೆ;

https://webcast.gov.in/mhrd

***(Release ID: 1651470) Visitor Counter : 211