ಪ್ರಧಾನ ಮಂತ್ರಿಯವರ ಕಛೇರಿ
ಸ್ಥಳೀಯ ಆಟಿಕೆಗಳಿಗೆ ಆದ್ಯತೆಯ ಸಮಯ: ಪ್ರಧಾನಿ
Posted On:
30 AUG 2020 3:00PM by PIB Bengaluru
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಇತ್ತೀಚಿನ ಮನ್ ಕಿ ಬಾತ್ ನಲ್ಲಿ, ಗಾಂಧಿನಗರ ಮಕ್ಕಳ ವಿಶ್ವವಿದ್ಯಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಶಿಕ್ಷಣ ಸಚಿವಾಲಯ ಮತ್ತು ಸೂಕ್ಷ್ಮ-ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯಗಳೊಂದಿಗೆ ಆಟಿಕೆಗಳ ಬಗ್ಗೆ ನಡೆದ ಸಮಾಲೋಚನೆಗಳ ಕುರಿತು ಮಾತನಾಡಿದರು. ಮಕ್ಕಳಿಗೆ ಹೊಸ ಆಟಿಕೆಗಳ ಲಭ್ಯತೆ ಮತ್ತು ಭಾರತವನ್ನು ಆಟಿಕೆ ಉತ್ಪಾದನೆಯ ದೊಡ್ಡ ಕೇಂದ್ರವನ್ನಾಗಿಸುವ ಕುರಿತು ಸಮಾಲೋಚನೆಗಳನ್ನು ನಡೆಸಲಾಯಿತು ಎಂದು ಅವರು ಹೇಳಿದರು. ಆಟಿಕೆಗಳು ಚಟುವಟಿಕೆಯನ್ನು ವೃದ್ಧಿಸುವುದಲ್ಲದೆ, ಅವು ನಮ್ಮ ಆಕಾಂಕ್ಷೆಗಳಿಗೆ ರೆಕ್ಕೆ ನೀಡುತ್ತವೆ ಎಂದು ಪ್ರಧಾನಿ ಹೇಳಿದರು. ಆಟಿಕೆಗಳು, ಮನರಂಜನೆಗೆ ಮಾತ್ರವಲ್ಲ, ಅವು ಬುದ್ಧಿಯನ್ನು ಬೆಳೆಸುತ್ತವೆ ಮತ್ತು ಉದ್ದೇಶವನ್ನು ಸಾಧಿಸುತ್ತವೆ ಎಂದು ಅವರು ಹೇಳಿದರು.
ಗುರುದೇವ ರವೀಂದ್ರನಾಥ ಟ್ಯಾಗೋರ್ ಅವರ ಆಟಿಕೆಗಳ ಕುರಿತಾದ ಉಪಾಖ್ಯಾನವನ್ನು ಪ್ರಧಾನಿ ನೆನಪಿಸಿಕೊಂಡರು. ಗೊಂಬೆಗಳ ಬಗ್ಗೆ ಟ್ಯಾಗೋರ್ ಹೇಳಿದ್ದನ್ನು ಅವರು ಒತ್ತಿ ಹೇಳಿದರು - ಅತ್ಯುತ್ತಮ ಆಟಿಕೆಯೆಂದರೆ ಅಪೂರ್ಣವಾದದ್ದು, ಆಟವಾಡುವಾಗ ಮಕ್ಕಳು ಅದನ್ನು ಪೂರ್ಣಗೊಳಿಸಬೇಕು. ಆಟಿಕೆಗಳು ಮಗುವಿನ ಬಾಲ್ಯವನ್ನು ಮತ್ತು ಸೃಜನಶೀಲತೆಯನ್ನು ಹೊರತರುವಂತಹ ಆಟಗಳಾಗಿರಬೇಕು ಎಂದು ಗುರುದೇವ್ ಹೇಳುತ್ತಿದ್ದರು ಎಂದು ಪ್ರಧಾನಿ ಸ್ಮರಿಸಿಕೊಂಡರು.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ, ಮಕ್ಕಳ ಜೀವನದ ವಿವಿಧ ಆಯಾಮಗಳ ಮೇಲೆ ಆಟಿಕೆಗಳ ಪ್ರಭಾವದ ಬಗ್ಗೆ ಹೆಚ್ಚಿನ ಗಮನ ನೀಡಲಾಗಿದೆ ಎಂದು ಪ್ರಧಾನಿ ಹೇಳಿದರು. ಉತ್ತಮ ಆಟಿಕೆಗಳನ್ನು ತಯಾರಿಸುವಲ್ಲಿ ಪರಿಣತಿಯನ್ನು ಹೊಂದಿರುವ ಹಲವಾರು ನುರಿತ ಕುಶಲಕರ್ಮಿಗಳು ಇದ್ದಾರೆ. ಕರ್ನಾಟಕದಲ್ಲಿ ರಾಮನಗರದ ಚನ್ನಪಟ್ಟಣ, ಆಂಧ್ರಪ್ರದೇಶದ ಕೃಷ್ಣಾದ ಕೊಂಡಪಲ್ಲಿ, ತಮಿಳುನಾಡಿನ ತಂಜಾವೂರು, ಅಸ್ಸಾಂನ ಧುಬಾರಿ, ಉತ್ತರಪ್ರದೇಶದ ವಾರಣಾಸಿ ಮುಂತಾದ ಕೆಲವು ಭಾಗಗಳು ಆಟಿಕೆ ಕೇಂದ್ರಗಳಾಗಿ ಅಭಿವೃದ್ಧಿ ಹೊಂದುತ್ತಿವೆ ಎಂದು ಅವರು ಹೇಳಿದರು. ಜಾಗತಿಕ ಆಟಿಕೆ ಉದ್ಯಮದ ಮೌಲ್ಯ 7 ಲಕ್ಷ ಕೋಟಿ ರೂಪಾಯಿಗಳಾಗಿದೆ. ಆದರೆ ಪ್ರಸ್ತುತ ಭಾರತ ಇದರಲ್ಲಿ ಕಡಿಮೆ ಪಾಲನ್ನು ಹೊಂದಿದೆ ಎಂದು ಅವರು ಹೇಳಿದರು.
ವಿಶಾಖಪಟ್ಟಣದ ಶ್ರೀ ಸಿ ವಿ ರಾಜು ಅವರ ಕೆಲಸಕ್ಕೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ಉತ್ತಮ ಗುಣಮಟ್ಟದ ಎತಿ-ಕೊಪ್ಪಕಾ ಆಟಿಕೆಗಳನ್ನು ತಯಾರಿಸುವ ಮೂಲಕ ಈ ಸ್ಥಳೀಯ ಆಟಿಕೆಗಳ ಗತವೈಭವವನ್ನು ಮರಳಿ ತಂದಿದ್ದಾರೆ ಎಂದರು. ಸ್ಥಳೀಯ ಆಟಿಕೆಗಳಿಗೆ ಆದ್ಯತೆ ನೀಡುವ ಸಮಯ ಇದಾಗಿದೆ ಎಂದು ಅವರು ಹೇಳಿದರು.
ಕಂಪ್ಯೂಟರ್ ಆಟಗಳ ಪ್ರವೃತ್ತಿಯ ಬಗ್ಗೆ ಮಾತನಾಡಿದ ಪ್ರಧಾನಿ, ನಮ್ಮ ಇತಿಹಾಸದ ಆಲೋಚನೆಗಳು ಮತ್ತು ಪರಿಕಲ್ಪನೆಗಳ ಆಧಾರದ ಮೇಲೆ ಆಟಗಳನ್ನು ರೂಪಿಸುವಂತೆ ಸಲಹೆ ನೀಡಿದರು.
***
(Release ID: 1649872)
Visitor Counter : 260
Read this release in:
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam