ಪ್ರಧಾನ ಮಂತ್ರಿಯವರ ಕಛೇರಿ
ರಕ್ಷಣಾ ಉತ್ಪಾದನೆಯಲ್ಲಿ ಆತ್ಮನಿರ್ಭರ ಭಾರತ ಕುರಿತ ವಿಚಾರಗೋಷ್ಠಿಯಲ್ಲಿ ಪ್ರಧಾನಿ ಮೋದಿ ಭಾಷಣ
ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆಗೆ ಪ್ರಧಾನಿ ಒತ್ತು; ರಕ್ಷಣೆಯಲ್ಲಿ ಆತ್ಮನಿರ್ಭರತೆ ಸಾಧಿಸುವ ದಿಕ್ಕಿನಲ್ಲಿ ಕೈಗೊಂಡ ಹಲವಾರು ಕ್ರಮಗಳು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭದ್ರತೆಯ ಪೂರೈಕೆದಾರನಾಗಿ ಭಾರತದ ಪಾತ್ರವನ್ನು ಹೆಚ್ಚಿಸುತ್ತವೆ: ಪ್ರಧಾನಿ
Posted On:
27 AUG 2020 7:57PM by PIB Bengaluru
ರಕ್ಷಣಾ ತಯಾರಿಕೆಯಲ್ಲಿ “ಆತ್ಮನಿರ್ಭರ ಭಾರತ” ಕುರಿತ ವಿಚಾರ ಸಂಕಿರಣದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ರಕ್ಷಣಾ ಉತ್ಪಾದನೆಯಲ್ಲಿ ಆತ್ಮನಿರ್ಭರವಾಗುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಿಯವರು, ರಕ್ಷಣಾ ಉತ್ಪಾದನೆಯನ್ನು ಹೆಚ್ಚಿಸುವುದು, ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು ಮತ್ತು ರಕ್ಷಣಾ ಕ್ಷೇತ್ರದಲ್ಲಿ ಖಾಸಗಿಯವರಿಗೆ ಮಹತ್ವದ ಪಾತ್ರಗಳನ್ನು ನೀಡುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ಅಭಿಯಾನ ಮಾದರಿಯಲ್ಲಿ ಕೆಲಸ ಮಾಡಿ, ಪಟ್ಟುಬಿಡದೆ ಪ್ರಯತ್ನಗಳನ್ನು ಕೈಗೊಂಡಿದ್ದಕ್ಕಾಗಿ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಮತ್ತು ಅವರ ಇಡೀ ತಂಡವನ್ನು ಅಭಿನಂದಿಸಿದ ಪ್ರಧಾನಿಯವರು, ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಉದ್ದೇಶವು ಇಂದಿನ ವಿಚಾರಸಂಕಿರಣದಿಂದ ಖಂಡಿತವಾಗಿಯೂ ವೇಗವನ್ನು ಪಡೆಯುತ್ತದೆ ಎಂದು ಹೇಳಿದರು.
ಭಾರತವು ಸ್ವತಂತ್ರವಾದಾಗಿನಿಂದಲೂ ರಕ್ಷಣಾ ಉತ್ಪಾದನೆಗೆ ಹೆಚ್ಚಿನ ಸಾಮರ್ಥ್ಯ ಮತ್ತು ವ್ಯವಸ್ಥೆಯನ್ನು ಹೊಂದಿತ್ತು. ಆದರೆ ದಶಕಗಳಿಂದ ಯಾವುದೇ ಗಂಭೀರ ಪ್ರಯತ್ನಗಳು ನಡೆಯಲಿಲ್ಲ ಎಂದು ಪ್ರಧಾನಿ ಹೇಳಿದರು. ಈಗ ಪರಿಸ್ಥಿತಿ ಬದಲಾಗುತ್ತಿದೆ, ರಕ್ಷಣಾ ಕ್ಷೇತ್ರದಲ್ಲಿ ಸುಧಾರಣೆಗಳನ್ನು ತರಲು ನಿರಂತರ ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ಪರವಾನಗಿ ಪ್ರಕ್ರಿಯೆಯಲ್ಲಿ ಸುಧಾರಣೆ, ಸೂಕ್ತ ವಾತಾವರಣ ನಿರ್ಮಾಣ, ರಫ್ತು ಪ್ರಕ್ರಿಯೆಯ ಸರಳೀಕರಣ ಮುಂತಾದ ಕ್ರಮಗಳ ಬಗ್ಗೆ ಅವರು ವಿವರಿಸಿದರು.
ಆಧುನಿಕ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸಲು ರಕ್ಷಣಾ ಕ್ಷೇತ್ರದಲ್ಲಿ ನಂಬಿಕೆ ಅತ್ಯಗತ್ಯ ಎಂದು ಪ್ರಧಾನಿ ಹೇಳಿದರು. ದಶಕಗಳಿಂದ ಬಾಕಿಯಿದ್ದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ ನೇಮಕಾತಿಯಂತಹ ನಿರ್ಧಾರಗಳನ್ನು ಈಗ ತೆಗೆದುಕೊಳ್ಳಲಾಗಿದೆ, ಇದು ನವ ಭಾರತದ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ ನೇಮಕವು ಮೂರೂ ಪಡೆಗಳ ನಡುವೆ ಉತ್ತಮ ಹೊಂದಾಣಿಕೆ ಮತ್ತು ಸಮನ್ವಯಕ್ಕೆ ಕಾರಣವಾಗಿದೆ ಮತ್ತು ರಕ್ಷಣಾ ಖರೀದಿಯನ್ನು ಹೆಚ್ಚಿಸಲು ಸಹಾಯ ಮಾಡಿದೆ. ಅಂತೆಯೇ, ಸ್ವಯಂಚಾಲಿತ ಮಾರ್ಗದ ಮೂಲಕ ಶೇ. 74 ರಷ್ಟು ವಿದೇಶಿ ನೇರ ಹೂಡಿಕೆಗೆ ಅನುಮತಿ ನೀಡುವ ಮೂಲಕ ರಕ್ಷಣಾ ಕ್ಷೇತ್ರವನ್ನು ಮುಕ್ತಗೊಳಿಸಿರುವುದು ನವ ಭಾರತದ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಹೇಳಿದರು.
ದೇಶೀಯ ಖರೀದಿಗಾಗಿ ಬಂಡವಾಳ ಬಜೆಟ್ನ ಒಂದು ಭಾಗವನ್ನು ನಿಗದಿಪಡಿಸುವುದು, 101 ವಸ್ತುಗಳನ್ನು ದೇಶೀಯ ಖರೀದಿಗಾಗಿ ಗುರುತಿಸಿದ್ದು ಇದು ದೇಶೀಯ ರಕ್ಷಣಾ ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ ಎಂದು ಪ್ರಧಾನಿ ಹೇಳಿದರು. ಖರೀದಿ ಪ್ರಕ್ರಿಯೆಯನ್ನು ವೇಗಗೊಳಿಸಲು, ಪರೀಕ್ಷಾ ವ್ಯವಸ್ಥೆಯನ್ನು ಸುಗಮಗೊಳಿಸಲು ಸರ್ಕಾರವು ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು. ಯುದ್ಧೋಪಕರಣಗಳ ಕಾರ್ಖಾನೆಗಳ ಸಾಂಸ್ಥೀಕರಣದ ಬಗ್ಗೆ ಮಾತನಾಡಿದ ಪ್ರಧಾನಿ, ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಾರ್ಮಿಕರು ಮತ್ತು ರಕ್ಷಣಾ ಕ್ಷೇತ್ರ ಎರಡನ್ನೂ ಬಲಪಡಿಸುತ್ತದೆ ಎಂದು ಹೇಳಿದರು.
ಆಧುನಿಕ ಉಪಕರಣಗಳಲ್ಲಿ ಸ್ವಾವಲಂಬನೆಗಾಗಿ ತಂತ್ರಜ್ಞಾನದ ಉನ್ನತೀಕರಣಕ್ಕೆ ಒತ್ತು ನೀಡಬೇಕು ಎಂದ ಪ್ರಧಾನಿ, ಡಿಆರ್ಡಿಒ ಜೊತೆಗೆ, ಖಾಸಗಿ ವಲಯದಲ್ಲಿ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲೂ ಸಂಶೋಧನೆ ಮತ್ತು ನಾವೀನ್ಯತೆಯನ್ನು ಸರ್ಕಾರ ಪ್ರೋತ್ಸಾಹಿಸುತ್ತಿದೆ ಎಂದು ಹೇಳಿದರು. ವಿದೇಶಿ ಪಾಲುದಾರರೊಂದಿಗಿನ ಜಂಟಿ ಉದ್ಯಮಗಳ ಮೂಲಕ ಸಹ-ಉತ್ಪಾದನೆಗೆ ಒತ್ತು ನೀಡಲಾಗಿದೆ ಎಂದು ಪ್ರಧಾನಿ ತಿಳಿಸಿದರು.
ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆಯ ಮಂತ್ರದ ಮೇಲೆ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದ ಪ್ರಧಾನಿಯವರು, ಬೌದ್ಧಿಕ ಆಸ್ತಿ, ತೆರಿಗೆ, ದಿವಾಳಿ ಮತ್ತು ದಿವಾಳಿತನ, ಬಾಹ್ಯಾಕಾಶ ಮತ್ತು ಪರಮಾಣು ಇಂಧನ ಕ್ಷೇತ್ರಗಳಲ್ಲಿ ಪ್ರಮುಖ ಸುಧಾರಣೆಗಳು ನಡೆಯುತ್ತಿವೆ ಎಂದರು.
ಮೂಲಸೌಕರ್ಯ ಉಪಕ್ರಮಗಳ ಕುರಿತು ಮಾತನಾಡಿದ ಪ್ರಧಾನಿಯವರು, ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ನಡೆಯುತ್ತಿರುವ ಎರಡು ರಕ್ಷಣಾ ಕಾರಿಡಾರ್ಗಳನ್ನು ಪ್ರಸ್ತಾಪಿಸಿದರು. ಉತ್ತರ ಪ್ರದೇಶ ಮತ್ತು ತಮಿಳುನಾಡು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಅತ್ಯಾಧುನಿಕ ಮೂಲಸೌಕರ್ಯಗಳನ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಮುಂದಿನ 5 ವರ್ಷಗಳಲ್ಲಿ 20 ಸಾವಿರ ಕೋಟಿ ರೂ. ಹೂಡಿಕೆಯ ಗುರಿಯನ್ನು ನಿಗದಿಪಡಿಸಲಾಗಿದೆ ಎಂದರು.
ಉದ್ಯಮಿಗಳನ್ನು ವಿಶೇಷವಾಗಿ ಎಂಎಸ್ಎಂಇ ಮತ್ತು ಸ್ಟಾರ್ಟ್ ಅಪ್ಗಳಿಗೆ ಸಂಬಂಧಿಸಿದವರನ್ನು ಪ್ರೋತ್ಸಾಹಿಸಲು ಪ್ರಾರಂಭಿಸಲಾದ ಐಡೆಕ್ಸ್ ಉಪಕ್ರಮವು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತಿದೆ. ಈ ವೇದಿಕೆಯ ಮೂಲಕ, 50 ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗಳು ಮಿಲಿಟರಿ ಬಳಕೆಗಾಗಿ ತಂತ್ರಜ್ಞಾನ ಮತ್ತು ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿವೆ ಎಂದು ಎಂದು ಪ್ರಧಾನಿ ಹೇಳಿದರು.
ಜಾಗತಿಕ ಆರ್ಥಿಕತೆಯನ್ನು ಹೆಚ್ಚು ಸ್ಥಿತಿಸ್ಥಾಪಕಗೊಳಿಸಲು, ಹೆಚ್ಚು ಸ್ಥಿರವಾಗಿಸಲು ಮತ್ತು ಜಗತ್ತಿನಲ್ಲಿ ಶಾಂತಿ ನೆಲೆಸಲು ಸಮರ್ಥ ಭಾರತವನ್ನು ನಿರ್ಮಿಸುವುದು ಗುರಿಯಾಗಿದೆ ಎಂದು ಪ್ರಧಾನಿ ಹೇಳಿದರು. ಭಾರತವು ತನ್ನ ಮಿತ್ರ ರಾಷ್ಟ್ರಗಳಿಗೆ ರಕ್ಷಣಾ ಸಾಧನಗಳ ವಿಶ್ವಾಸಾರ್ಹ ಪೂರೈಕೆದಾರನಾಗುವ ಸಾಮರ್ಥ್ಯವನ್ನು ಹೊಂದುವುದು ರಕ್ಷಣಾ ತಯಾರಿಕೆಯಲ್ಲಿ ಆತ್ಮನಿರ್ಭರತೆಯ ಹಿಂದಿನ ಆಲೋಚನೆಯಾಗಿದೆ. ಇದು ಭಾರತದ ಕಾರ್ಯತಂತ್ರದ ಸಹಭಾಗಿತ್ವವನ್ನು ಬಲಪಡಿಸುತ್ತದೆ ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ "ಭದ್ರತಾ ಪೂರೈಕೆದಾರ" ನಾಗಿ ಭಾರತದ ಪಾತ್ರವನ್ನು ಬಲಪಡಿಸುತ್ತದೆ ಎಂದು ಪ್ರಧಾನಿ ಹೇಳಿದರು.
ರಕ್ಷಣಾ ಉತ್ಪಾದನೆ ಮತ್ತು ರಫ್ತು ಉತ್ತೇಜನ ನೀತಿ ಕರಡು ಕುರಿತು ಪ್ರತಿಕ್ರಿಯೆ ಮತ್ತು ಸಲಹೆಗಳು ಈ ನೀತಿಯನ್ನು ಶೀಘ್ರವಾಗಿ ಕಾರ್ಯಗತಗೊಳಿಸಲು ಸಹಾಯ ಮಾಡುತ್ತವೆ ಎಂದು ಅವರು ಹೇಳಿದರು.
ಸ್ವಾವಲಂಬಿಗಳಾಗುವ ಸಂಕಲ್ಪದ ನಮ್ಮ ಸಾಮೂಹಿಕ ಪ್ರಯತ್ನಗಳು ಭಾರತ ಆತ್ಮನಿರ್ಭರವಾಗಲು ಸಹಾಯ ಮಾಡುತ್ತವೆ ಎಂದು ಪ್ರಧಾನಿ ಹೇಳಿದರು.
***
(Release ID: 1649152)
Visitor Counter : 237
Read this release in:
English
,
Urdu
,
Hindi
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam