ಪ್ರಧಾನ ಮಂತ್ರಿಯವರ ಕಛೇರಿ

ಕೃಷಿ ಮೂಲಸೌಕರ್ಯ ನಿಧಿಯಡಿ ಆರ್ಥಿಕ ಸೌಲಭ್ಯ ಒದಗಿಸುವುದಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ ವೇಳೆ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಪಠ್ಯ

Posted On: 09 AUG 2020 1:11PM by PIB Bengaluru

ಶ್ರಾವಣ ಶ್ರಷ್ಠಿ, ದೇವ ಬಲರಾಮನ ಜನ್ಮವಾರ್ಷಿಕೋತ್ಸವ. ಎಲ್ಲ ದೇಶವಾಸಿಗಳಿಗೆ ವಿಶೇಷವಾಗಿ ರೈತ ಮಿತ್ರರಿಗೆ   ಶ್ರಾವಣ ಶ್ರಷ್ಠಿಯ ಶುಭಾಶಯಗಳು.
ಈ ಪವಿತ್ರ ಸಂದರ್ಭದಲ್ಲಿ ದೇಶದಲ್ಲಿ ಕೃಷಿ ಮೂಲಸೌಕರ್ಯ ಅಭಿವೃದ್ಧಿಗೆ ಒಂದು ಲಕ್ಷ ಕೋಟಿ ರೂಪಾಯಿಗಳ ವಿಶೇಷ ನಿಧಿಯನ್ನು ಆರಂಭಿಸಲಾಗುತ್ತಿದೆ. ಇದು ಉತ್ತಮ ದಾಸ್ತಾನು ಸೌಲಭ್ಯ, ಆಧುನಿಕ ಶೈತ್ಯಾಗಾರಗಳ ಸರಣಿಯನ್ನು ಗ್ರಾಮಗಳಲ್ಲಿ ಸೃಷ್ಟಿಸಲು ಇದು ನೆರವಾಗಲಿದೆ. ಅಲ್ಲದೆ ಗ್ರಾಮಗಳಲ್ಲಿ ಇನ್ನೂ ಹಲವು ಬಗೆಯ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

ಅಲ್ಲದೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿ 8.5 ಕೋಟಿ ರೈತ ಕುಟುಂಬಗಳ ಖಾತೆಗಳಿಗೆ 17 ಸಾವಿರ ಕೋಟಿ ರೂಪಾಯಿಗಳನ್ನು ವರ್ಗಾವಣೆ ಮಾಡಲು ನನಗೆ ಆನಂದವಾಗುತ್ತಿದೆ. ಈ ಯೋಜನೆಯ ಗುರಿ ಸಾಧನೆಯಾಗುತ್ತಿರುವುದು ನನಗೆ ತೃಪ್ತಿ ತಂದಿದೆ.

ಈ ಯೋಜನೆ ಪ್ರತಿಯೊಂದು ರೈತ ಕುಟುಂಬಕ್ಕೂ ಸಕಾಲದಲ್ಲಿ ನೇರ ಸಹಾಯ ಒದಗಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ಒಂದೂವರೆ ವರ್ಷದಲ್ಲಿ ಈ ಯೋಜನೆ ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ 75 ಸಾವಿರ ಕೋಟಿ ರೂಪಾಯಿಗಳನ್ನು ವರ್ಗಾಯಿಸಲಾಗಿದೆ. ಅದರಲ್ಲಿ 22 ಸಾವಿರ ಕೋಟಿ ರೂಪಾಯಿಗಳನ್ನು ಕೊರೊನಾ ಸಂದರ್ಭದಲ್ಲಿ ಘೋಷಿಸಲಾದ ಲಾಕ್ ಡೌನ್ ಸಮಯದಲ್ಲೇ ರೈತರಿಗೆ ವರ್ಗಾಯಿಸಿರುವುದು ವಿಶೇಷವಾಗಿದೆ.

ಮಿತ್ರರೇ,

ಹಲವು ದಶಕಗಳಿಂದ ಗ್ರಾಮಗಳಲ್ಲಿ ಏಕೆ ಕೈಗಾರಿಕೆಗಳಿಲ್ಲ ಎಂಬ ಬಗ್ಗೆ ಬೇಡಿಕೆ ಮತ್ತು ಚರ್ಚೆಗಳು ನಡೆಯುತ್ತಿವೆ. ಕೈಗಾರಿಕೆಗಳಿಗೆ ತಮ್ಮ ಉತ್ಪನ್ನಗಳ ಬೆಲೆಯನ್ನು ತಾವೇ ನಿರ್ಧರಿಸಲು ಹಾಗೂ ದೇಶದ ಯಾವುದೇ ಭಾಗದಲ್ಲಿ ಬೇಕಾದರೂ ಮಾರಾಟ ಮಾಡಲು ಸ್ವಾತಂತ್ರ್ಯವಿರುವಂತೆಯೇ, ರೈತರಿಗೂ ಸಹ ಏಕೆ ಅಂತಹ ಸೌಕರ್ಯವಿಲ್ಲ ಎಂಬ ಪ್ರಶ್ನೆ ಉದ್ಭವವಾಗುತ್ತದೆ.

ನಗರದಲ್ಲಿ ಸಾಬೂನು ಉದ್ಯಮವನ್ನು ಸ್ಥಾಪಿಸಿದರೆ ಆ ಸಾಬೂನುಗಳನ್ನು ಕೇವಲ ನಗರದಲ್ಲಿ ಮಾತ್ರ ಮಾರಾಟ ಮಾಡಲು ಸಾಧ್ಯವಿಲ್ಲ. ಆದರೆ ಇಲ್ಲಿಯವರೆಗೆ ಕೃಷಿ ವಲಯದಲ್ಲಿ ಅದೇ ಪದ್ಧತಿ ಚಾಲ್ತಿಯಲ್ಲಿತ್ತು, ರೈತರು ತಮ್ಮ ಉತ್ಪನ್ನಗಳನ್ನು ಸ್ಥಳೀಯ ಮಂಡಿಗಳಲ್ಲಿ ಹಾಗೂ ತಾವು ಬೆಳೆಯುವ ಪ್ರದೇಶದಲ್ಲಿಯೇ ಉತ್ಪನ್ನಗಳನ್ನು ಮಾರಾಟ ಮಾಡುವ ಪದ್ಧತಿ ಇತ್ತು. ಅದೇ ರೀತಿ ಬೇರೆ ಉದ್ಯಮಗಳಂತೆ, ಕೃಷಿಯಲ್ಲೂ ಸಹ ಮಧ್ಯವರ್ತಿಗಳಿರಬಾರದು ಎಂಬ ಬೇಡಿಕೆ ಇತ್ತು. ಕೃಷಿ ಉದ್ಯಮಕ್ಕೆ ಮಧ್ಯವರ್ತಿಗಳು ಏಕೆ ಬೇಕೆ ಎಂಬ ಪ್ರಶ್ನೆಯೂ ಇತ್ತು. ಕೈಗಾರಿಕೆಗಳ ಅಭಿವೃದ್ಧಿಗೆ ಆಧುನಿಕ ಮೂಲಸೌಕರ್ಯ ಸಿದ್ಧವಾಗಿ ಲಭ್ಯವಿದ್ದರೆ, ಅದೇ ರೀತಿ ಕೃಷಿಗೂ ಕೂಡ ಆಧುನಿಕ ಮೂಲಸೌಕರ್ಯ ಲಭ್ಯವಿರಬೇಕು ಅಲ್ಲವೇ?

 
ಮಿತ್ರರೇ,

ಆತ್ಮನಿರ್ಭರ ಭಾರತ ಅಭಿಯಾನದಡಿ, ಇದೀಗ ರೈತರು ಮತ್ತು ಕೃಷಿಗೆ ಸಂಬಂಧಿಸಿದ ಹಲವು ವಿಚಾರಗಳಲ್ಲಿ ಪರಿಹಾರಗಳನ್ನು ಕಂಡುಕೊಳ್ಳಲಾಗುತ್ತಿದೆ. ಕಳೆದ 7 ವರ್ಷಗಳಿಂದ ಚಾಲ್ತಿಯಲ್ಲಿರುವ  ‘ಒಂದು ರಾಷ್ಟ್ರ- ಒಂದು ಮಾರುಕಟ್ಟೆ’ ಯೋಜನೆ ಇದೀಗ ಪೂರ್ಣಗೊಳ್ಳುತ್ತಿದೆ. ಮೊದಲಿಗೆ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯನ್ನು ಇ-ನ್ಯಾಮ್ ಮೂಲಕ ರೂಪಿಸಲಾಗಿದೆ. ಇದೀಗ ಕಾನೂನುಗಳನ್ನು ರೂಪಿಸುವ ಮೂಲಕ ರೈತರನ್ನು ಮಾರುಕಟ್ಟೆ ಮತ್ತು ಮಾರುಕಟ್ಟೆ ತೆರಿಗೆ ವ್ಯಾಪ್ತಿಯಿಂದ ಮುಕ್ತಗೊಳಿಸಲಾಗಿದೆ. ಇದೀಗ ರೈತರಿಗೆ ಹಲವು ಆಯ್ಕೆಗಳು ಲಭ್ಯವಾಗಲಿದ್ದು, ರೈತರು ಬಯಸಿದರೆ ತಮ್ಮ ತೋಟದಲ್ಲಿಯೇ ಉತ್ಪನ್ನಗಳನ್ನು ಮಾರಾಟ ಮಾಡುವ ಒಪ್ಪಂದ ಮಾಡಿಕೊಳ್ಳಬಹುದು ಅಥವಾ ರೈತ ಗೋದಾಮಿನಿಂದಲೇ ನೇರವಾಗಿ ತನ್ನ ಉತ್ಪನ್ನಗಳನ್ನು ಇ-ನ್ಯಾಮ್ ನೊಂದಿಗೆ ಕೈಜೋಡಿಸಿರುವ ವರ್ತಕರು ಅಥವಾ ಸಂಸ್ಥೆಗಳಿಗೆ ಮಾರಾಟ ಮಾಡಬಹುದು. ಅದು ಯಾರು ಉತ್ತಮ ಬೆಲೆ ನೀಡುತ್ತಾರೋ ಅವರನ್ನು ಅವಲಂಬಿಸಿರುತ್ತದೆ.

ಅದೇ ರೀತಿ ಮತ್ತೊಂದು ಹೊಸ ಕಾನೂನನ್ನು ರೂಪಿಸಲಾಗಿದೆ. ಅದರಡಿ ರೈತರು ಇದೀಗ ಉದ್ದಿಮೆಗಳ ಜೊತೆ ನೇರ ಸಹಭಾಗಿತ್ವ ಮಾಡಿಕೊಳ್ಳಬಹುದು. ಉದಾಹರಣೆಗೆ ರೈತರು ಇದೀಗ ಚಿಪ್ಸ್ ಮತ್ತು ಜ್ಯೂಸ್, ಮುರಬ್ಬ ಮತ್ತು ಚಟ್ನಿ ಉದ್ದಿಮೆಗಳ ಉತ್ಪಾದಕರ ಜೊತೆ ನೇರ ಸಹಭಾಗಿತ್ವ ಸಾಧಿಸಬಹುದು. ಇದರಿಂದ ರೈತರಿಗೆ ತಾವು ಬೆಳೆದ ಬೆಳೆಗೆ ನಿರ್ದಿಷ್ಟ ಬೆಲೆ ಲಭ್ಯವಾಗುತ್ತದೆ ಮತ್ತು ಅವರಿಗೆ ಬೆಲೆ ಇಳಿಕೆಯಾಗುವುದರಿಂದ ಪರಿಹಾರ ದೊರಕುತ್ತದೆ.

ಮಿತ್ರರೇ,

ನಮ್ಮ ತೋಟಗಳಲ್ಲಿ ಉತ್ಪಾದನೆ ಅಥವಾ ಇಳುವರಿಯ ಸಮಸ್ಯೆ ಇಲ್ಲ. ಆದರೆ ಉತ್ಪಾದನೆ ನಂತರ ಇಳುವರಿ ಹಾನಿಯಾಗುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ. ಇದು ರೈತರಿಗೆ ಮತ್ತು ದೇಶಕ್ಕೆ ಪ್ರತಿಕೂಲ ಪರಿಣಾಮ ಉಂಟುಮಾಡುತ್ತಿದೆ. ಈ ಸಮಸ್ಯೆಯಿಂದ ಹೊರಬರಲು ಒಂದೆಡೆ ಕಾನೂನಿನ ಅಡೆತಡೆಗಳನ್ನು ತೆಗೆದು ಹಾಕಲಾಗಿದೆ. ಮತ್ತೊಂದೆಡೆ ರೈತರಿಗೆ ನೇರ ಸಹಾಯಧನದ ಮೂಲಕ ಬೆಂಬಲ ನೀಡಲಾಗುತ್ತದೆ. ದೇಶದಲ್ಲಿ ಭಾರೀ ಪ್ರಮಾಣದ ಆಹಾರ ಕೊರತೆ ಎದುರಾದ ದಿನಗಳಲ್ಲಿ ನಾವು ಅಗತ್ಯ ವಸ್ತುಗಳ ಕಾಯ್ದೆಯನ್ನು ರೂಪಿಸಿದ್ದೆವು. ಆದರೆ ನಾವು ಜಗತ್ತಿನ ಎರಡನೇ ಅತಿ ದೊಡ್ಡ ಆಹಾರ ಉತ್ಪಾದನಾ ರಾಷ್ಟ್ರವಾಗಿರುವ ಸಮಯದಲ್ಲೂ ಸಹ ಅದೇ ಕಾನೂನು ಇಂದಿಗೂ ಚಾಲ್ತಿಯಲ್ಲಿದೆ..!

ಈ ಹಳೆಯ ಕಾನೂನು ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಗೋದಾಮುಗಳು ನಿರ್ಮಾಣವಾಗದಿರುವುದಕ್ಕೆ ಮತ್ತು ಕೃಷಿ ಆಧರಿತ ಉದ್ಯಮಗಳಿಗೆ ಉತ್ತೇಜನ ನೀಡದಿರುವುದಕ್ಕೆ ಪ್ರಮುಖ ಕಾರಣವಾಗಿದೆ. ಈ ಕಾನೂನನ್ನು ಪದೇ ಪದೇ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಇದನ್ನು ಹೆಚ್ಚಾಗಿ ದೇಶದಲ್ಲಿ ವರ್ತಕರು ಮತ್ತು ಹೂಡಿಕೆದಾರರ ಸ್ನೇಹಕ್ಕೆ ಬಳಸಲಾಗಿದೆ. ಇದೀಗ ಕೃಷಿ ವ್ಯಾಪಾರವನ್ನು ಈ ಭಯದ ಕಾರ್ಯತಂತ್ರದಿಂದ ಮುಕ್ತಗೊಳಿಸಲಾಗಿದೆ. ಇದೀಗ ವರ್ತಕರು ಮತ್ತು ಉದ್ದಿಮೆದಾರರು ಗ್ರಾಮೀಣ ಪ್ರದೇಶಗಳಲ್ಲಿ ಗೋದಾಮುಗಳನ್ನು ಹಾಗೂ ಇನ್ನಿತರ ಸೌಕರ್ಯಗಳನ್ನು ನಿರ್ಮಾಣ ಮಾಡಲು ಮುಂದೆ ಬರುವಂತೆ ಪ್ರೋತ್ಸಾಹಿಸುತ್ತಿದೆ.

ಮಿತ್ರರೇ,

ಇಂದು ಚಾಲನೆ ನೀಡಲಾಗಿರುವ ಕೃಷಿ ಮೂಲಸೌಕರ್ಯ ನಿಧಿಯಡಿ ರೈತರಿಗೆ ತಮ್ಮ ಗ್ರಾಮಗಳಲ್ಲಿ ಕೃಷಿ ಉತ್ಪನ್ನಗಳ ದಾಸ್ತಾನಿಗೆ ಆಧುನಿಕ ಮೂಲಸೌಕರ್ಯಗಳನ್ನು ಹೊಂದಲು ನೆರವು ನೀಡಲಾಗುವುದು. ಈ ಯೋಜನೆ ಅಡಿ ಗ್ರಾಮಗಳಲ್ಲಿನ ರೈತ ಗುಂಪುಗಳು, ರೈತ ಸಮಿತಿಗಳು, ಎಫ್ ಪಿ ಒಗಳಿಗೆ ಗೋದಾಮು, ಶೈತ್ಯಾಗಾರ ಮತ್ತು ಆಹಾರ ಸಂಸ್ಕರಣಾ ಉದ್ಯಮಗಳ ಸ್ಥಾಪನೆಗೆ ಒಂದು ಲಕ್ಷ ಕೋಟಿ ರೂಪಾಯಿಗಳ ನೆರವು ನೀಡಲಾಗುವುದು. ರೈತರಿಗೆ ಉದ್ಯಮಿಗಳಾಗಲು ನೆರವು ನೀಡಲಾಗುತ್ತಿರುವ ಈ ಯೋಜನೆ ಅಡಿ ನೀಡುವ ಆರ್ಥಿಕ ನೆರವಿಗೆ ಶೇಕಡ 3ರಷ್ಟು ಬಡ್ಡಿ ವಿನಾಯಿತಿ ಸಿಗಲಿದೆ. ನಾನು ಸ್ವಲ್ಪ ಹೊತ್ತಿನ ಮುಂಚೆ ಕೆಲವು ರೈತ ಸಂಘಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿದೆ. ಈ ನಿಧಿ ದೇಶಾದ್ಯಂತ ಹಲವು ವರ್ಷಗಳಿಂದ ರೈತರಿಗೆ ನೆರವಾಗುತ್ತಿರುವ ರೈತ ಸಂಸ್ಥೆಗಳಿಗೆ ಭಾರೀ ಪ್ರಮಾಣದಲ್ಲಿ ಸಹಕಾರಿಯಾಗಲಿದೆ.

ಮಿತ್ರರೇ,

ಈ ಆಧುನಿಕ ಮೂಲಸೌಕರ್ಯವೃದ್ಧಿ ಕೃಷಿ ಆಧರಿತ ಉದ್ಯಮಗಳ ಸ್ಥಾಪನೆಗೆ ಭಾರೀ ಪ್ರಮಾಣದಲ್ಲಿ ನೆರವಾಗಲಿದೆ. ‘ಆತ್ಮನಿರ್ಭರ ಭಾರತ ಅಭಿಯಾನ’ದ ಅಡಿ ಪ್ರತಿಯೊಂದು ಜಿಲ್ಲೆಯ ಜನಪ್ರಿಯ ಉತ್ಪನ್ನಗಳನ್ನು ರಾಷ್ಟ್ರೀಯ ಹಾಗೂ ಜಾಗತಿಕ ಮಾರುಕಟ್ಟೆಗಳನ್ನು ತಲುಪುವಂತೆ ಮಾಡಲು ಪ್ರಮುಖ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಅದರಡಿ ದೇಶದ ನಾನಾ ಜಿಲ್ಲೆಗಳಲ್ಲಿ, ಗ್ರಾಮಗಳ ಸನಿಹದಲ್ಲಿ ಕೃಷಿ ಉದ್ಯಮಗಳ ಕ್ಲಸ್ಟರ್ ಗಳನ್ನು ಅಭಿವೃದ್ಧಿಪಡಿಸಲಾಗುವುದು.

ಮಿತ್ರರೇ,

ನಾವು ಇದೀಗ ಗ್ರಾಮಗಳಲ್ಲಿನ ಕೃಷಿ ಉದ್ಯಮಗಳಿಂದ ಆಹಾರ ಆಧರಿತ ಉತ್ಪನ್ನಗಳನ್ನು ಉತ್ಪಾದಿಸಿ ಅವುಗಳನ್ನು ನಗರಗಳಿಗೆ ತಲುಪಿಸಲು ಮತ್ತು ನಗರಗಳಲ್ಲಿನ ಕೈಗಾರಿಕಾ ಉತ್ಪನ್ನಗಳನ್ನು ಗ್ರಾಮಗಳಿಗೆ ತಲುಪಿಸಲು ಪ್ರಯತ್ನಿಸುತ್ತಿದ್ದೇವೆ. ನಾವು ಆತ್ಮನಿರ್ಭರ ಅಭಿಯಾನದಡಿ ಯಾವ ರೀತಿಯ ಕೆಲಸ ಮಾಡಬೇಕು ಎಂಬುದರ ಸಂಕಲ್ಪ ಮಾಡಬೇಕಿದೆ. ಇದೀಗ ಎದುರಾಗುವ ಪ್ರಶ್ನೆ ಎಂದರೆ ಯಾರು ಕೃಷಿ ಆಧರಿತ ಉದ್ಯಮವನ್ನು ನಡೆಸುತ್ತಾರೆ ಎಂಬುದು ? ಇದರಲ್ಲಿಯೂ ಸಹ ಬಹುತೇಕ ಪಾಲು ಸಣ್ಣ ರೈತರ ದೊಡ್ಡ ಗುಂಪುಗಳಿಗೆ ಹೋಗುತ್ತದೆ, ಅವುಗಳನ್ನು ಎಫ್ ಪಿಒ ಅಥವಾ ರೈತ ಉತ್ಪನ್ನ ಸಂಸ್ಥೆಗಳು ಎಂದು ಕರೆಯಲಾಗುತ್ತದೆ.

ಆದ್ದರಿಂದ ಕಳೆದ 7 ವರ್ಷಗಳಿಂದೀಚೆಗೆ ಎಫ್ ಪಿಒ ಅಥವಾ ರೈತ ಉತ್ಪನ್ನ ಸಂಸ್ಥೆಗಳ ಬೃಹತ್ ಜಾಲ ಅಭಿವೃದ್ಧಿಗೆ ವ್ಯಾಪಕ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ. ದೇಶಾದ್ಯಂತ ಮುಂಬರುವ ವರ್ಷಗಳಲ್ಲಿ ಅಂತಹ 10,000 ಎಫ್ ಪಿಒಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯ ಪ್ರಗತಿಯಲ್ಲಿದೆ.

ಮಿತ್ರರೇ,

ಒಂದೆಡೆ ಎಫ್ ಪಿಒಗಳ ಜಾಲ ವಿಸ್ತರಣೆ ಕಾರ್ಯ ಪ್ರಗತಿಯಲ್ಲಿದೆ, ಮತ್ತೊಂದೆಡೆ ಕೃಷಿಗೆ ಸಂಬಂಧಿಸಿದ ನವೋದ್ಯಮಗಳನ್ನು ಉತ್ತೇಜಿಸಲಾಗುತ್ತಿದೆ. ಬಹುತೇಕ 350 ನವೋದ್ಯಮಗಳಿಗೆ ಆರ್ಥಿಕ ಬೆಂಬಲ ವಿಸ್ತರಿಸಲಾಗಿದೆ. ಈ ನವೋದ್ಯಮಗಳು ಆಹಾರ ಸಂಸ್ಕರಣೆ, ಕೃತಕ ಬುದ್ಧಿಮತ್ತೆ, ಅಂತರ್ಜಾಲದ ವಿಷಯಗಳು, ಸ್ಮಾರ್ಟ್ ಕೃಷಿ ಸಾಧನಗಳ ಉತ್ಪಾದನೆ ಮತ್ತು ನವೀಕರಿಸಬಹುದಾದ ಇಂಧನಕ್ಕೆ ಸಂಬಂಧಿಸಿದ್ದವುಗಳಾಗಿವೆ.

ಮಿತ್ರರೇ,

ಈ ಎಲ್ಲ ಯೋಜನೆಗಳು ಮತ್ತು ಸುಧಾರಣೆಗಳು ಪ್ರಮುಖವಾಗಿ ಸಣ್ಣ ರೈತರನ್ನು ಗುರಿಯಾಗಿಟ್ಟುಕೊಂಡು ಮಾಡಿರುವುದಾಗಿದೆ. ಸಣ್ಣ ರೈತರು ಅತಿ ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಅಂತಹುದೇ ಸಣ್ಣ ರೈತರು ಸಂಪೂರ್ಣವಾಗಿ ಸರ್ಕಾರದ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿಲ್ಲ. ಕಳೆದ ಆರು-ಏಳು ವರ್ಷಗಳಿಂದೀಚೆಗೆ ಸಣ್ಣ ರೈತರ ಸ್ಥಿತಿಗತಿ ಸುಧಾರಣೆ ನಿಟ್ಟಿನಲ್ಲಿ ವ್ಯಾಪಕ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ. ಸಣ್ಣ ರೈತರನ್ನು ದೇಶದಲ್ಲಿ ಕೃಷಿ ಅಭಿವೃದ್ಧಿ ಜೊತೆ ಸಂಯೋಜಿಸಲಾಗುತ್ತಿದೆ ಮತ್ತು ಅವರನ್ನು ಸಬಲೀಕರಣಗೊಳಿಸಲಾಗುತ್ತಿದೆ.

ಮಿತ್ರರೇ,

ಎರಡು ದಿನಗಳ ಹಿಂದೆ ದೇಶದ ಸಣ್ಣ ರೈತರನ್ನು ಒಳಗೊಂಡಂತಹ ಪ್ರಮುಖ ಯೋಜನೆಯೊಂದಕ್ಕೆ ಚಾಲನೆ ನೀಡಲಾಯಿತು. ಆ ಯೋಜನೆಯಿಂದ ಮುಂದಿನ ದಿನಗಳಲ್ಲಿ ಇಡೀ ದೇಶಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಮಹಾರಾಷ್ಟ್ರ ಮತ್ತು ಬಿಹಾರದ ನಡುವೆ ದೇಶದ ಮೊದಲ ಕಿಸಾನ್ ರೈಲಿಗೆ ಹಸಿರು ನಿಶಾನೆ ತೋರಲಾಗಿದೆ.

ಇದೀಗ ಆ ರೈಲು ಮಹಾರಾಷ್ಟ್ರದಿಂದ ಹೊರಟು, ಕಿತ್ತಳೆ, ದ್ರಾಕ್ಷಿ, ಈರುಳ್ಳಿ ಮತ್ತಿತರ ತರಕಾರಿ ಹಾಗೂ ಹಣ್ಣುಗಳನ್ನು ಬಿಹಾರಕ್ಕೆ ಕೊಂಡೊಯ್ಯಲಿದೆ ಮತ್ತು ಬಿಹಾರದಿಂದ ಬೆಣ್ಣೆ, ಲಿಚಿ, ಪಾನ್ ಮತ್ತು ತಾಜಾ ತರಕಾರಿ ಮೀನು ಇತ್ಯಾದಿ ಉತ್ಪನ್ನಗಳನ್ನು ಬಿಹಾರದಿಂದ ಕೊಂಡೊಯ್ಯಲಿದೆ. ಬಿಹಾರದ ಸಣ್ಣ ರೈತರು ಮುಂಬೈ ಮತ್ತು ಪುಣೆ ನಗರಗಳ ದೊಡ್ಡ ಮಾರುಕಟ್ಟೆಗಳ ಜೊತೆ ನೇರ ಸಂಪರ್ಕ ಹೊಂದಲಿದ್ದಾರೆ. ಈ ಮೊದಲ ರೈಲು, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಹಾಗೂ ಅದು ಸಂಚರಿಸುವ ಸ್ಥಳಗಳಲ್ಲಿನ ರೈತರಿಗೆ ಪ್ರಯೋಜನ ಕಲ್ಪಿಸಲಿದೆ. ಈ ರೈಲಿನ ವಿಶೇಷತೆ ಎಂದರೆ ಅದು ಸಂಪೂರ್ಣ ಹವಾನಿಯಂತ್ರಿತವಾಗಿರುವುದು. ಹಾಗಾಗಿಯೇ ಹಳಿಗಳ ಮೇಲೆ ಚಲಿಸುವ ಈ ಶೀಥಲೀಕರಣ ವ್ಯವಸ್ಥೆ ಇದ್ದು, ಇದು ಹಾಲು, ಹಣ್ಣು, ತರಕಾರಿ, ಮೀನು ಮತ್ತಿತರ ಪದಾರ್ಥಗಳನ್ನು ಉತ್ಪಾದಿಸುವ ಎಲ್ಲಾ ವರ್ಗದ ರೈತರಿಗೆ ಹಾಗೂ ಅದನ್ನು ಬಳಕೆ ಮಾಡುವಂತಹ ಗ್ರಾಹಕರಿಗೆ ನೆರವಾಗಲಿದೆ.

ಇದರಿಂದ ರೈತರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಏಕೆಂದರೆ ಅವರಿಗೆ ಸ್ಥಳೀಯ ಮಾರುಕಟ್ಟೆಗಳಲ್ಲಿ ಅಥವಾ ಮಂಡಿಗಳಲ್ಲಿ ತನ್ನ ಬೆಳೆಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಬೇಕೆಂಬ ಒತ್ತಡವಿರುವುದಿಲ್ಲ. ಅಲ್ಲದೆ ರೈತರಿಗೆ ತಮ್ಮ ಉತ್ಪನ್ನಗಳಲ್ಲಿ ಆಗುತ್ತಿದ್ದ ಹಾನಿಯ ಸಮಸ್ಯೆಯೂ ನಿವಾರಣೆಯಾಗಲಿದೆ. ಏಕೆಂದರೆ ಉತ್ಪನ್ನಗಳನ್ನು ಹಳಿಗಳ ಮೇಲೆ ತ್ವರಿತವಾಗಿ ಸಾಗಿಸಲಾಗುವುದು. ಆ ಸಾಗಾಣೆ ವೆಚ್ಚ ಟ್ರಕ್ ಗಳಿಗೆ ಹೋಲಿಸಿದರೆ ಹಲವು ಪಟ್ಟು ಕಡಿಮೆ ಆಗಿರುತ್ತದೆ. ನಗರಗಳಲ್ಲಿ ವಾಸಿಸುವವರಿಗೂ ಸಹ ಇದರ ಅನುಕೂಲವಾಗಲಿದೆ. ಏಕೆಂದರೆ ತಾಜಾ ಹಣ್ಣುಗಳು ಮತ್ತು ತರಕಾರಿಗಳ ಕೊರತೆ ಇರುವುದಿಲ್ಲ. ಹವಾಗುಣವನ್ನು ಆಧರಿಸಿ ನಾನಾ ಬಗೆಯ ತರಕಾರಿಗಳನ್ನು ಬೆಳೆಯುವುದರಿಂದ ಅವುಗಳ ಬೆಲೆಯೂ ಕಡಿಮೆ ಇರುತ್ತದೆ.

ಅಲ್ಲದೆ ಇದರಿಂದ ಗ್ರಾಮಗಳಲ್ಲಿನ ಸಣ್ಣ ರೈತರ ಸ್ಥಿತಿಗತಿ ಸುಧಾರಿಸಲಿದೆ. ಇದೀಗ ಸಣ್ಣ ರೈತರು ದೇಶದ ದೊಡ್ಡ ಮಾರುಕಟ್ಟೆಗಳನ್ನು ತಲುಪಬಹುದಾಗಿದೆ. ಅವರು ತಾಜಾ ತರಕಾರಿಗಳನ್ನು ಬೆಳೆಯುವುದಷ್ಟೇ ಅಲ್ಲದೆ, ಪಶುಸಂಗೋಪನೆ ಮತ್ತು ಮೀನುಗಾರಿಕೆಯಲ್ಲಿ ತೊಡಗುವುದಕ್ಕೂ ಸಹ ಪ್ರೋತ್ಸಾಹ ನೀಡಲಾಗುವುದು. ಇದರಿಂದಾಗಿ ಕಡಿಮೆ ಭೂಮಿಯಲ್ಲಿ ಹೆಚ್ಚಿನ ಆದಾಯವನ್ನು ಪಡೆಯಲು ಮಾರ್ಗ ಒದಗಿಸಿ ಕೊಡಲಿದೆ ಮತ್ತು ಉದ್ಯೋಗ ಹಾಗೂ ಸ್ವಯಂ ಉದ್ಯೋಗದ ಹಲವು ಅವಕಾಶಗಳು ತೆರೆದುಕೊಳ್ಳಲಿವೆ.

ಮಿತ್ರರೇ,

ಈ ಎಲ್ಲ ಕ್ರಮಗಳು 21ನೇ ಶತಮಾನದಲ್ಲಿ ದೇಶದ ಗ್ರಾಮೀಣ ಆರ್ಥಿಕತೆಯ ಚಿತ್ರಣವನ್ನಷ್ಟೇ ಬದಲಾಯಿಸುವುದಲ್ಲದೆ, ನಮ್ಮ ಕೃಷಿಕರ ಆದಾಯ ಹಲವು ಪಟ್ಟು ಹೆಚ್ಚಾಗಲಿದೆ. ಇತ್ತೀಚಿನ ಹಲವು ನಿರ್ಧಾರಗಳಿಂದಾಗಿ ಮುಂದಿನ ದಿನಗಳಲ್ಲಿ ಗ್ರಾಮಗಳಲ್ಲಿ ಮತ್ತು ಅದರ ಸುತ್ತಮುತ್ತ ವ್ಯಾಪಕ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

ಕಳೆದ ಆರು ತಿಂಗಳಿಂದೀಚೆಗೆ ಸಂಕಷ್ಟದ ಸಮಯದಲ್ಲೂ ಸಹ ಹೇಗೆ ಗ್ರಾಮಗಳು ಮತ್ತು ರೈತರು ದೇಶಕ್ಕೆ ಬೆಂಬಲ ನೀಡಬಲ್ಲರು ಎಂಬುದನ್ನು ನಾವು ಗಮನಿಸಿದ್ದೇವೆ. ಲಾಕ್ ಡೌನ್ ಸಂದರ್ಭದಲ್ಲೂ ಸಹ ನಮ್ಮ ರೈತರು ದೇಶದಲ್ಲಿ ಯಾವುದೇ ರೀತಿಯ ಆಹಾರ ಕೊರತೆ ಉಂಟಾಗದಂತೆ ನೋಡಿಕೊಂಡರು. ಇಡೀ ದೇಶ ಲಾಕ್ ಡೌನ್ ನಲ್ಲಿ ಇದ್ದಾಗ ನಮ್ಮ ರೈತರು ಹೊಲದಲ್ಲಿ ಬಿತ್ತನೆಯಲ್ಲಿ ತೊಡಗಿದ್ದರು ಮತ್ತು ಬಿತ್ತನೆಯಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದರು. ಲಾಕ್ ಡೌನ್ ಮೊದಲ ದಿನದಿಂದ ದೀಪಾವಳಿವರೆಗೆ 8 ತಿಂಗಳ ಕಾಲ 80 ಕೋಟಿಗೂ ಅಧಿಕ ದೇಶವಾಸಿಗಳಿಗೆ ಉಚಿತ ಆಹಾರಧಾನ್ಯಗಳನ್ನು ಒದಗಿಸಲಾಗುತ್ತಿದೆ. ಇದು ಸಾಧ್ಯವಾಗಿರುವುದು ಕೇವಲ ರೈತರಿಂದ ಮಾತ್ರ.

ಮಿತ್ರರೇ,

ರೈತರ ಉತ್ಪನ್ನಗಳ ಖರೀದಿಯಲ್ಲೂ ಸಹ ದಾಖಲೆಯಾಗಿರುವುದನ್ನು ಸರ್ಕಾರ ಖಾತ್ರಿಪಡಿಸಿದೆ. ಇದರಿಂದಾಗಿ ಕಳೆದ ಬಾರಿಗೆ ಹೋಲಿಸಿದರೆ ಸುಮಾರು 27 ಸಾವಿರ ಕೋಟಿ ರೂಪಾಯಿಗಳು ರೈತರನ್ನು ತಲುಪಿವೆ. ಅದು ಬೀಜಗಳು ಅಥವಾ ರಸಗೊಬ್ಬರಗಳ ರೂಪದಲ್ಲಿರಬಹುದು. ಈ ಬಾರಿ ಸಂಕಷ್ಟದ ಸಮಯದಲ್ಲೂ ಸಹ ದಾಖಲೆಯ ಉತ್ಪಾದನೆಯಾಗಿದ್ದು, ಬೇಡಿಕೆಯನ್ನು ಆಧರಿಸಿ ಪೂರೈಸಲಾಗುತ್ತಿದೆ. ಇದೇ ಕಾರಣಕ್ಕೆ ಸಂಕಷ್ಟದ ಸಮಯದಲ್ಲೂ ಸಹ ನಮ್ಮ ಗ್ರಾಮೀಣ ಆರ್ಥಿಕತೆ ಬಲಿಷ್ಠವಾಗಿದೆ ಮತ್ತು ಗ್ರಾಮಗಳಲ್ಲಿನ ತೊಂದರೆಗಳು ತಗ್ಗಿವೆ.

ನಮ್ಮ ಗ್ರಾಮಗಳಲ್ಲಿನ ಶಕ್ತಿ ದೇಶದ ಅಭಿವೃದ್ಧಿಗೆ ವೇಗ ನೀಡುವಲ್ಲಿ ಮಹತ್ವದ ಪಾತ್ರವಹಿಸಲಿ, ಈ ನಂಬಿಕೆಯೊಂದಿಗೆ ನನ್ನೆಲ್ಲಾ ರೈತ ಮಿತ್ರರಿಗೆ ಅಭಿನಂದನೆಗಳು.

ನೀವು ಗ್ರಾಮಗಳಿಂದ ಕೊರೊನಾವನ್ನು ದೂರವಿಟ್ಟಿದ್ದು, ಅಂತಹ ಶ್ಲಾಘನೀಯ ಕಾರ್ಯ, ಅದನ್ನು ಮುಂದುವರಿಸಿ.

ನೀವು ಎರಡು ಅಡಿ ದೂರ ಅಥವಾ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಧರಿಸುವ ಮಂತ್ರಗಳನ್ನು ಸದಾ ಪಾಲಿಸಿ.

ಸದಾ ಎಚ್ಚರಿಕೆಯಿಂದಿರಿ ಮತ್ತು ಸುರಕ್ಷಿತವಾಗಿರಿ

ತುಂಬಾ ಧನ್ಯವಾದಗಳು.

***



(Release ID: 1648223) Visitor Counter : 468