ರಾಷ್ಟ್ರಪತಿಗಳ ಕಾರ್ಯಾಲಯ

ಭಾರತದ 74 ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನ ರಾಷ್ಟ್ರವನ್ನುದ್ದೇಶಿಸಿ ಗೌರವಾನ್ವಿತ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರ ಭಾಷಣ

Posted On: 14 AUG 2020 7:30PM by PIB Bengaluru

ನನ್ನ ಪ್ರೀತಿಯ ದೇಶವಾಸಿಗಳೇ

ನಮಸ್ಕಾರ.

1.         74ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನವಾದ ಇಂದು, ದೇಶ-ವಿದೇಶಗಳಲ್ಲಿ ನೆಲೆಸಿರುವ ಎಲ್ಲ ಭಾರತೀಯರಿಗೆ ಅನಂತಾನಂತ ಶುಭಾಶಯಗಳು. ಆಗಸ್ಟ್ 15ರಂದು ತ್ರಿವರ್ಣ ಧ್ವಜ ಹಾರಿಸಲು, ಸ್ವಾತಂತ್ರ್ಯೋತ್ಸವಗಳಲ್ಲಿ ಪಾಲ್ಗೊಳ್ಳಲು ಮತ್ತು ದೇಶಭಕ್ತಿ ಗೀತೆಗಳನ್ನು ಆಲಿಸಲು ಉತ್ಸಾಹ ಭರಿತರಾಗಿರುತ್ತೇವೆ. ದಿನ ಭಾರತದ ಯುವಜನತೆ ತಾವು ಸ್ವತಂತ್ರ್ಯ ದೇಶವೊಂದರ ಪ್ರಜೆಗಳು ಎಂಬ ವಿಶೇಷ ಅಭಿಮಾನ ಪಡುವ ದಿನವಾಗಿದೆ. ನಾವು ಸ್ವತಂತ್ರ್ಯ ದೇಶದಲ್ಲಿ ಬದುಕುವಂತಾಗಲು ತಮ್ಮ ತ್ಯಾಗ-ಬಲಿದಾನದ ಮೂಲಕ ಅನುವು ಮಾಡಿಕೊಟ್ಟ ನಮ್ಮ ಸ್ವಾತಂತ್ರ್ಯ ಸೇನಾನಿಗಳು-ಹುತಾತ್ಮರನ್ನು ಸಂದರ್ಭದಲ್ಲಿ ನಾವು ಕೃತಜ್ಞತಾ ಪೂರ್ವಕವಾಗಿ ಸ್ಮರಿಸೋಣ.

2.         ನಮ್ಮ ಸ್ವಾತಂತ್ರ್ಯ ಸಂಗ್ರಾಮದ ತತ್ವಾದರ್ಶಗಳು ಆಧುನಿಕ ಭಾರತದ ನಿರ್ಮಾಣಕ್ಕೆ ಬುನಾದಿಯನ್ನು ಹಾಕಿಕೊಟ್ಟಿವೆ. ದೂರ ದೃಷ್ಟಿಯ ನಮ್ಮ ನೇತಾರರು ವಿಭಿನ್ನವಾದ ಜಾಗತಿಕ ದೃಷ್ಟಿ ಕೋನಗಳನ್ನು ಒಂದೆಡೆ ಬೆಸೆದು, ಒಂದು ಸಮಾನ ರಾಷ್ಟ್ರೀಯ ಸೂತ್ರವನ್ನು ನಿರೂಪಿಸಿದ್ದಾರೆ. ವಿದೇಶೀ ಆಳ್ವಿಕೆಯ ದಬ್ಬಾಳಿಕೆಯಿಂದ ಭಾರತ ಮಾತೆಯನ್ನು ವಿಮುಕ್ತಿಗೊಳಿಸುವುದಕ್ಕೆ ಹಾಗೂ ಆಕೆಯ ಮಕ್ಕಳ ಭವಿಷ್ಯದ ಸುರಕ್ಷತೆಗೆ ಅವರು ಕಟಿಬದ್ಧರಾಗಿದ್ದರು. ಅವರ ಚಿಂತನೆ-ಕ್ರಿಯೆಗಳು ಭಾರತವನ್ನು ಒಂದು ಆಧುನಿಕ ದೇಶವಾಗಿ ಗುರುತಿಸಿಕೊಳ್ಳುವಂತೆ ಮಾಡಿವೆ.

3.         ಮಹಾತ್ಮ ಗಾಂಧೀಜಿಯವರು ನಮ್ಮ ಸ್ವಾತಂತ್ರ್ಯ ಆಂಧೋಲನದ ಮಾರ್ಗದರ್ಶಿ ಬೆಳೆಕಾಗಿ ಮೂಡಿ ಬಂದದ್ದು ನಮ್ಮ ಸೌಭಾಗ್ಯವೇ ಸರಿ. ಅವರ ವ್ಯಕ್ತಿತ್ವದಲ್ಲಿ ಒಬ್ಬ ಸಂತ ಹಾಗೆಯೇ ಒಬ್ಬ ರಾಜಕೀಯ. ನೇತಾರ ಮೇಳೈಸಿದ್ದಾರೆ. ಇದು ಭಾರತದಲ್ಲಿ ಮಾತ್ರ ಸಂಭವಿಸುವಂತ ಚಮತ್ಕಾರ. ಸಾಮಾಜಿಕ ಸಂಘರ್ಷ, ಆರ್ಥಿಕ ಸಮಸ್ಯೆಗಳು ಹಾಗೂ ಹವಾಮಾನ ಬದಲಾವಣೆಯ ತತ್ತರಿಸಿರುವ ಜಗತ್ತು, ಎಲ್ಲವಕ್ಕೂ ಗಾಂಧೀಜಿಯರ ತತ್ವ ಬೋಧನೆಗಳಲ್ಲಿ ಪರಿಹಾರವನ್ನು ಅರಸುತ್ತಿವೆ. ಸಮಾನತೆ ಮತ್ತು ನ್ಯಾಯಕ್ಕಾಗಿನ ಅವರ ಶೋಧನೆ, ನಮ್ಮ ಗಣತಂತ್ರದ ಮಂತ್ರವಾಗಿದೆ. ಗಾಂಧೀಜಿಯವರ ಬಗ್ಗೆ ಯುವ ಪೀಳಿಗೆಗಳು ಮರು ಅನ್ವೇಷಣೆ ನಡೆಸುತ್ತಿರುವುದು ನನಗೆ ಸಂತಸ ಉಂಟು ಮಾಡಿದೆ.

ಪ್ರಿಯ ದೇಶ ಬಾಂಧವರೇ,

4.         ಸ್ವಾತಂತ್ರ್ಯ ದಿನಾಚರಣೆ ವರ್ಷ ಒಂದು ರೀತಿಯಲ್ಲಿ ನಿರ್ಬಂಧಕ್ಕೆ ಒಳಪಟ್ಟಿದೆ. ಕಾರಣ ಏನು ಎಂಬುದು ಸುಸ್ಪಷ್ಟ. ಜನಜೀವನ ಕ್ರಮದ ಎಲ್ಲ ಚಟುವಟಿಕೆಗಳನ್ನು ಏರುಪೇರು ಮಾಡಿ, ದೊಡ್ಡ ಆಘಾತವನ್ನೇ ಉಂಟು ಮಾಡಿರುವ ಮಾರಕ ವೈರಾಣು ವಿರುದ್ಧ ಇಡೀ ಜಗತ್ತು ಸಮರ ಸಾರಿದೆ. ನಾವು ಬದುಕಿದ ಸಾಂಕ್ರಾಮಿಕ ಪೂರ್ವದ ಜಗತ್ತಿನ ರೀತಿ ರಿವಾಜುಗಳನ್ನೇ ಇದು ಅಲುಗಾಡಿಸಿ ಬಿಟ್ಟಿದೆ.

5.         ಬೃಹತ್ ಸವಾಲನ್ನು ಮನಗಂಡ ಕೇಂದ್ರ ಸರ್ಕಾರ ಸಕಾಲದಲ್ಲಿ ಪರಿಣಾಮಕಾರಿಯಾಗಿ ಸ್ಪಂದಿಸಿರುವುದು ಬಹಳಷ್ಟು ಭರವಸೆ ಮೂಡಿಸುವವ ಅಂಶ. ಇಷ್ಟೊಂದು ವಿಶಾಲವಾದ, ವೈವಿಧ್ಯತೆಯಿಂದ ಕೂಡಿದ ಅಧಿಕ ಜನ ಸಾಂದ್ರತೆಯ ದೇಶ, ಇಂತಹ ಸವಾಲುಗಳನ್ನು ಎದುರಿಸಲು ಅತಿಮಾನುಷ ಪ್ರಯತ್ನಗಳನ್ನೇ ನಡೆಸಬೇಕಾಗುತ್ತದೆ. ಎಲ್ಲ ರಾಜ್ಯ ಸರ್ಕಾರಗಳು ಅಲ್ಲಲ್ಲಿನ ಪರಿಸ್ತಿತಿ-ಸನ್ನಿವೇಶಗಳಿಗೆ ಅನುಸಾರ ಕ್ರಮಗಳನ್ನು ಕೈಗೊಂಡಿವೆ. ಜನರೂ ಸಹ ಹೃತ್ಫೂರ್ವಕ ಬೆಂಬಲ ತೋರಿದ್ದಾರೆ. ಬದ್ಧತೆಯಿಂದ ಕೂಡಿದ ನಮ್ಮ ಪ್ರಯತ್ನಗಳಿಂದಾಗಿ ಸಾಂಕ್ರಾಮಿಕದ ತೀವ್ರತೆಯನ್ನು ಹತ್ತಿಕ್ಕುವಲ್ಲಿ ಮತ್ತು ಅಸಂಖ್ಯ ಜೀವಗಳನ್ನು ಉಳಿಸುವಲ್ಲಿ ನಾವು ಸಫಲರಾಗಿದ್ದೇವೆ. ಇದು ಇಡೀ ವಿಶ್ವವೇ ಅನುಕರಿಸುವಂತಾದ್ದು.

6.         ವೈರಾಣು ವಿರುದ್ಧದ ನಮ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು, ಅವಿರತ ಶ್ರಮಿಸುತ್ತಿರುವ ವೈದ್ಯರು, ನರ್ಸ್ಗಳು ಮತ್ತು ಇತರ ಆರೋಗ್ಯ ಕಾರ್ಯಕರ್ತರಿಗೆ ದೇಶ ಆಭಾರಿಯಾಗಿದೆ. ಸಾಂಕ್ರಾಮಿಕ ವಿರುದ್ಧದ ಸಂಘರ್ಷದಲ್ಲಿ ಇವರಲ್ಲಿ ಹಲವರು ಬಲಿದಾನವಾಗಿರುವುದು ದುರದೃಷ್ಟಕರ ಸಂಗತಿ. ಇವರೆಲ್ಲ ನಮ್ಮ ರಾಷ್ಟ್ರೀಯ ಹೀರೋಗಳು, ಆದರ್ಶಪ್ರಾಯರು, ಎಲ್ಲ ಕೊರೋನಾ ಯೋಧರು ಪ್ರಶಂಸಾರ್ಹರು. ಜೀವಗಳನ್ನು ಉಳಿಸುವಲ್ಲಿ, ಅಗತ್ಯ ಸೇವೆಗಳನ್ನು ಸಲ್ಲಿಸುವಲ್ಲಿ ಇವೆ. ಅಪಾರ ಕರ್ತವ್ಯ ಪ್ರಜ್ಞೆ ಮೆರೆದವರು. ವೈದ್ಯರು, ಆರೋಗ್ಯ ಕಾರ್ಯಕರ್ತರು, ವಿಪತ್ತು ನಿರ್ವಹಣಾ ತಂಡದ ಸದಸ್ಯರು, ಪೊಲೀಸ್ ಸಿಬ್ಬಂದಿ ನೈರ್ಮಲ್ಯ ಕಾರ್ಯಕರ್ತರು, ಸಾಮಗ್ರಿ ಪೂರೈಕೆ ಸಿಬ್ಬಂದಿ, ಸಾರಿಗೆ ರೈಲು ಮತ್ತು ವಾಯುಯಾನ ಸಿಬ್ಬಂದಿ, ವಿವಿಧ ಸೇವೆಗಳನ್ನು ಒದಗಿಸುವವರು, ಸರ್ಕಾರ ಉದ್ಯೋಗಿಗಳು, ಸಾಮಾಜಿಕ ಸೇವಾ ಸಂಘಟನೆಗಳು ಹಾಗೂ ಉದಾರ ಮನೋಭಾವದ ನಾಗರಿಕರು ಧೈರ್ಯ ಮತ್ತು ನಿಸ್ವಾರ್ಥ ಸೇವೆಯ ಸ್ಪೂರ್ತಿದಾಯಕ ಕಥೆಗಳನ್ನೇ ನಿರೂಪಿಸಿದ್ದಾರೆ. ನಗರ-ಪಟ್ಟಣಗಳು ಸ್ಥಬ್ದವಾದಾಗ, ರಸ್ತೆಗಳು ಬಿಕೋ ಎನ್ನುತ್ತಿರುವಾಗ, ಆರೋಗ್ಯ ರಕ್ಷಣೆ ಮತ್ತು ಪರಿಹಾರ, ನೀರು ಮತ್ತು ವಿದ್ಯುತ್, ಸಾರಿಗೆ ಮತ್ತು ಸಂಪರ್ಕ ಸೌಲಭ್ಯ, ಹಾಲು, ತರಕಾರಿ, ಆಹಾರ, ದಿನಸಿ, ಔಷಧ ಮತ್ತಿತರ ಅಗತ್ಯತೆಗಳಿಂದ ಜನರು ವಂಚಿತರಾಗದಂತೆ ನೋಡಿಕೊಳ್ಳಲು ಇವರೆಲ್ಲ ಅವಿರತ ಶ್ರಮಿಸಿದ್ದಾರೆ. ನಮ್ಮ ಜೀವ ಮತ್ತು ಜೀವನೋಪಾಯಗಳನ್ನು ಉಳಿಸಲು ತಮ್ಮ ಜೀವಗಳನ್ನೇ ಇವರು ಪಣಕ್ಕೊಡಿದವರು.

7.         ಇಂತಹ ಸಂಕಟದ ಸನ್ನಿವೇಶದಲ್ಲೇ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಆರಿಫಾನ್ ಚಂಡಮಾರುತ ಅಪ್ಪಳಿಸಿತು. ಸಂದರ್ಭದಲ್ಲಿ ವಿಪತ್ತು ನಿರ್ವಹಣಾ ತಂಡಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಸ್ಥೆಗಳು ಮತ್ತು ಜಾಗೃತ ನಾಗರಿಕರು ತೋರಿದ ಸಂಘಟಿತ ಸ್ಪಂದನೆ, ಹೆಚ್ಚಿನ ಜೀವಹಾನಿಯಾಗದಂತೆ ತಡೆಯಲು ನೆರವಾಯಿತು. ಈಶಾನ್ಯ ಮತ್ತು ಪೂರ್ವದ ರಾಜ್ಯಗಳಲ್ಲಿ ತಲೆದೋರಿರುವ ಪ್ರವಾಹಗಳು ನಮ್ಮ ಜನರ ಬದುಕನ್ನೇ ಸಂಕಷ್ಟಕ್ಕೀಡು ಮಾಡುತ್ತಿವೆ. ಇಂತಹ ಪ್ರಕೋಪಗಳ ಮಧ್ಯೆ, ಪರಿತಪಿಸುತ್ತಿರುವವರಿಗೆ ಸಹಾಯ ಹಸ್ತ ಚಾಚಲು ಸಮಾಜದ ಎಲ್ಲಾ ವರ್ಗಗಳು ಒಗ್ಗೂಡಿ ಮುಂದೆ ಬರುವುದನ್ನು ನೋಡಿದಾಗ ಧನ್ಯತೆಯ ಭಾವ ಮೂಡುತ್ತದೆ.

ಆತ್ಮೀಯ ದೇಶ ವಾಸಿಗಳೇ,

8.         ಸಾಂಕ್ರಾಮಿಕದಿಂದ ತೀವ್ರವಾಗಿ ಬಾಧಿತರಾದವರೆಂದರೆ ಬಡವರು ಮತ್ತು ದಿನಗೂಲಿ ಕಾರ್ಮಿಕರು. ಇಂತಹ ಸಂಕಷ್ಟದ ಸಮಯದಲ್ಲಿ ಇವರಿಗೆ ನೆರವಾಗುವ ಕ್ರಮವಾಗಿ, ವೈರಾಣು ನಿಯಂತ್ರಣ ಪ್ರಯತ್ನಗಳಿಗೆ ಪೂರಕವಾಗಿ ಕಲ್ಯಾಣ ಕಾರ್ಯಕ್ರಮಗಳನ್ನೂ ಕೈಗೊಳ್ಳಲಾಯಿತು. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಕೋಟ್ಯಂತರ ಜನರು ತಮ್ಮ ಜೀವನೋಪಾಯಗಳನ್ನು ಕಂಡುಕೊಳ್ಳಲು, ಸಾಂಕ್ರಾಮಿಕದಿಂದ ಉದ್ಯೋಗ ನಷ್ಟ, ಸ್ಥಳಾಂತರದ ಅವ್ಯವಸ್ಥೆಗಳನ್ನು ನಿಭಾಯಿಸಲು ಸರ್ಕಾರ ಅನುವು ಮಾಡಿಕೊಟ್ಟಿತು. ಕಾರ್ಪೊರೆಟ್ ವಲಯ, ನಾಗರಿಕ ಸಮಾಜ ಮತ್ತು ನಾಗರಿಕರ ತುಂಬು ಹೃದಯದ ಬೆಂಬಲದಿಂದ ಕೂಡಿದ ಹಲವಾರು ಕ್ರಮಗಳನ್ನು ರೂಪಿಸುವ ಮೂಲಕ ಸರ್ಕಾರ, ನೆರವಿನ ಸಹಾಯ ಹಸ್ತ ವಿಸ್ತರಿಸುವುದನ್ನು ಮುಂದುವರೆಸಿದೆ.

9.         ಯಾವುದೇ ಕುಟುಂಬ ಹಸಿವಿನಿಂದ ಬಳಲದಂತೆ ನೋಡಿಕೊಳ್ಳಲು, ಅಗತ್ಯವಿರುವವರಿಗೆ ಉಚಿತವಾಗಿ ಆಹಾರ ಧಾನ್ಯಗಳನ್ನು ಪೂರೈಸಲಾಗುತ್ತಿದೆ. ಜಗತ್ತಿನಲ್ಲೇ ಅತ್ಯಂತ ಬೃಹತ್ ಎನ್ನುಬಹುದಾದ ಉಚಿತ ಆಹಾರ ಪೂರೈಕೆ ಕಾರ್ಯಕ್ರಮವನ್ನು ವರ್ಷದ ನವೆಂಬರ್ ಅಂತ್ಯದವರೆಗೆ ವಿಸ್ತರಿಸಿದ್ದು, ಇದರಿಂದ ಪ್ರತಿ ತಿಂಗಳೂ ಸುಮಾರು 80 ಕೋಟಿ ಜನರಿಗೆ ಅನುಕೂಲವಾಗಿದೆ. ವಲಸೆ ಪಡಿತರ ಚೀಟಿದಾರರು, ದೇಶದ ಎಲ್ಲಿಯೋ ಆಗಿರಲಿ ಪಡಿತರ ಪಡೆಯಲು ಅನುವಾಗುವಂತೆ ಎಲ್ಲ ರಾಜ್ಯಗಳನ್ನು ಒಂದು ದೇಶ-ಒಂದು ಪಡಿತರ ಚೀಟಿಯೋಜನೆ ವ್ಯಾಪ್ತಿಗೆ ತರಲಾಗಿದೆ.

10.       ಜಗತ್ತಿನ ಯಾವುದೇ ಭಾಗದಲ್ಲಿ ಸಿಲುಕಿಕೊಂಡಿರುವ ನಮ್ಮ ಜನರ ರಕ್ಷಣೆಗೆ ಬದ್ಧತೆ ತೋರಿರುವ ಸರ್ಕಾರ, ವಂದೇ ಭಾರತ್ ಮಿಷನ್ನಡಿ, 10 ಲಕ್ಷಕ್ಕೂ ಹೆಚ್ಚು ಜನರನ್ನು ತಾಯ್ನಾಡಿಗೆ ವಾಪಸ್ ಕರೆತಂದಿದೆ. ಇಂತಹ ಸವಾಲಿನ ಸಂದರ್ಭಗಳಲ್ಲಿ ಜನರು ಮತ್ತು ಸರಕು ಸಾಮಗ್ರಿಗಳ ಸಾರಿಗೆಗೆ ಅನುವು ಮಾಡಿಕೊಡಲು ಭಾರತೀಯ ರೈಲ್ವೆ, ರೈಲು ಸೇವೆಗಳನ್ನು ನಿರ್ವಹಿಸುತ್ತಿದೆ.

11.       ನಮ್ಮ ಸಾಮಥ್ರ್ಯದ ಬಗ್ಗೆ ನಂಬಿಕೆ ಹೊಂದಿರುವ ನಾವು, ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಇತರ ದೇಶಗಳಿಗೂ ನೆರವಾಗಿದ್ದೇವೆ. ಔಷಧ ಪೂರೈಸುವಂತೆ ಬೇಡಿಕೆ ಇಟ್ಟ ರಾಷ್ಟ್ರಗಳಿಗೆ ಸ್ಪಂದಿಸುವ ಮೂಲಕ ಸಂಕಟದ ಸಮಯದಲ್ಲಿ ವಿಶ್ವ ಸಮುದಾಯದ ಜೊತೆ ನಾವಿದ್ದೇವೆ ಎಂಬುದನ್ನು ಭಾರತ ಮತ್ತೊಮ್ಮೆ ತೋರಿಸಿಕೊಟ್ಟಿದೆ. ಸಾಂಕ್ರಾಮಿಕದ ವಿರುದ್ಧ ಪರಿಣಾಮಕಾರಿ ಹೋರಾಟದಲ್ಲಿ ಪ್ರಾದೇಶಿಕ ಮತ್ತು ಜಾಗತಿಕ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ. ವಿಶ್ವ ಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಖಾಯಂಯೇತರ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಭಾರತಕ್ಕೆ ದೊರೆತ ಪ್ರಚಂಡ ಬೆಂಬಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಬಗ್ಗೆ ಇರುವ ಸದ್ಬಾವನೆಗೆ ಒಂದು ನಿದರ್ಶನವಾಗಿದೆ.

12.       ನಾವು ನಮಗಾಗಿಯಷ್ಟೇ ಬದುಕುವುದಿಲ್ಲ ಬದಲಿಗೆ ಇಡೀ ಜಗತ್ತಿನ ಒಳಿತಿಗೆ ಶ್ರಮಿಸುವುದು ನಮ್ಮ ಪರಂಪರೆ. ಭಾರತದ ಸ್ವಾವಲಂಬನೆ ಎಂದರೆ ತನ್ನಷ್ಟಕ್ಕೆ ತಾನಿರದೇ ಅಥವಾ ಜಗತ್ತಿನಿಂದ ಅಂತರ ಕಾಯ್ದುಕೊಳ್ಳದೇ ಸ್ವಯಂ ಪೂರ್ಣವಾಗಿರುವುದು ಎಂದರ್ಥ. ತನ್ನ ಅಸ್ತಿತ್ವವನ್ನು ಕಾಯ್ದುಕೊಳ್ಳುವುದರ ಜೊತೆ ಜೊತೆಗೇ ವಿಶ್ವ ಅರ್ಥವ್ಯವಸ್ಥೆಯಲ್ಲಿ ಭಾರತ ತನ್ನ ಪಾತ್ರವನ್ನು ಮುಂದುವರಿಸುವುದು ಎಂಬುದು ಇದರ ಅರ್ಥ.

ಪ್ರಿಯ ದೇಶವಾಸಿಗಳೇ,

13.       ಬಹಳ ಹಿಂದೆಯೇ ನಮ್ಮ ಋಷಿ ಮುನಿಗಳು ಏನು ಹೇಳಿದ್ದರು ಎಂಬುದನ್ನು ಜಗತ್ತು ಈಗ ಅರ್ಥ ಮಾಡಿಕೊಳ್ಳುತ್ತಿದೆ. ಅದೆಂದರೆ ವಿಶ್ವ ಸಮುದಾಯ ಎಂದರೆ ಒಂದು ಕುಟುಂಬ ವಸುಧೈವ ಕುಟುಂಬಕಂ. ಆದರೆ ಮನುಕುಲದ ಮುಂದಿರುವ ಬಹುದೊಡ್ಡ ಸವಾಲಿನ ವಿರುದ್ಧ ವಿಶ್ವ ಸಮುದಾಯ ಒಗ್ಗೂಡಿ ಸೆಣೆಸುವ ಅಗತ್ಯವಿರುವಾಗ, ನಮ್ಮ ನೆರೆ ಹೊರೆಯ ಕೆಲ ದೇಶಗಳು ವಿಸ್ತಾರವಾದದ ದುಸ್ಸಾಹಸಕ್ಕೆ ಯತ್ನಿಸುತ್ತಿವೆ. ನಮ್ಮ ಧೀರ ಯೋಧರು, ನಮ್ಮ ಗಡಿಗಳ ರಕ್ಷಣೆಗಾಗಿ ಪ್ರಾಣ ತೆತ್ತಿದ್ದಾರೆ. ಭಾರತ ಮಾತೆಯ ಸುಪುತ್ರರು ರಾಷ್ಟ್ರದ ಘನತೆ-ಗೌರವಕ್ಕಾಗಿ ಬದುಕಿದವರು-ಮಡಿದವರು. ಗಲ್ವಾನ್ ಕಣಿವೆಯ ಹುತಾತ್ಮರಿಗೆ ಇಡೀ ದೇಶ ನಮನಗಳನ್ನು ಸಲ್ಲಿಸುತ್ತದೆ. ಇವರ ಕುಟುಂಬ ಸದಸ್ಯರ ಬಗ್ಗೆ ಪ್ರತಿಯೊಬ್ಬ ಭಾರತೀಯನಲ್ಲಿ ಕೃತಜ್ಞತಾ ಭಾವವಿದೆ. ನಾವು ಶಾಂತಿಯನ್ನು ನಂಬುತ್ತೇವೆ. ಆದರೆ ಅತಿಕ್ರಮಣದ ಯಾವುದೇ ಯತ್ನಕ್ಕೆ ತಕ್ಕ ಶಾಸ್ತಿ ಮಾಡಲೂ ನಾವು ಸಮರ್ಥರಿದ್ದೇವೆ ಎಂಬುದನ್ನು ಕೆಚ್ಚೆದೆಯ ಕಾದಾಟ ಪ್ರದರ್ಶಿಸಿದೆ. ನಮ್ಮ ಗಡಿಗಳನ್ನು ಸಂರಕ್ಷಿಸುವ ಮತ್ತು ಆಂತರಿಕ ಭದ್ರತೆಯನ್ನು ಖಾತರಿಪಡಿಸುವ ನಮ್ಮ ಸಶಸ್ತ್ರ ಪಡೆಗಳು, ಅರೆಸೇನಾ ಪಡೆಗಳು, ಮತ್ತು ಪೊಲೀಸ್ ಸಿಬ್ಬಂದಿಯ ಬಗ್ಗೆ ನಮಗೆ ಅಭಿಮಾನವಿದೆ.

14.       ಕೋವಿಡ್-19 ವಿರುದ್ಧದ ಹೋರಾಟದ ಸಂದರ್ಭದಲ್ಲಿ, ಜೀವ ಮತ್ತು ಜೀವನೋಪಾಯ ಎರಡೂ ಅತ್ಯಗತ್ಯ ಎಂದು ನಾನು ಭಾವಿಸುತ್ತೇನೆ. ಸದ್ಯದ ಬಿಕ್ಕಟ್ಟು ಎಲ್ಲರಿಗೂ ಅದರಲ್ಲೂ ವಿಶೇಷವಾಗಿ ರೈತರು ಮತ್ತು ಸಣ್ಣ ಉದ್ದಿಮೆದಾರರಿಗೆ ಅನುಕೂಲವಾಗುವಂತೆ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವ ಸುಧಾರಣೆಗಳನ್ನು ಕೈಗೊಳ್ಳಲು ಸಿಕ್ಕಿರುವ ಒಂದು ಸದವಕಾಶವಾಗಿ ಕಾಣುತ್ತಿದ್ದೇವೆ. ಕೃಷಿ ಕ್ಷೇತ್ರದಲ್ಲಿ ಮಹತ್ತರವಾದ ಸುಧಾರಣೆಗಳನ್ನು ಜಾರಿಗೊಳಿಸಲಾಗಿದೆ. ರೈತರು ಈಗ ದೇಶದ ಯಾವುದೇ ಕಡೆ ಯಾವುದೇ ನಿರ್ಬಂಧವಿಲ್ಲದೇ ಮುಕ್ತ ವಹಿವಾಟು ನಡೆಸಲು, ತಮ್ಮ ಉತ್ಪನ್ನಗಳಿಗೆ ಅತ್ಯುತ್ತಮ ಬೆಲೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ರೈತರ ಮೇಲಿನ ಒಂದಷ್ಟು ನಿರ್ಬಂಧಗಳನ್ನು ತೆಗೆದು ಹಾಕು, ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇದು ರೈತರ ವರಮಾನ ವೃದ್ಧಿಗೆ ನೆರವಾಗುವುದು.

ಪ್ರಿಯ ದೇಶ ಬಾಂಧವರೇ,

15.       2020ನೇ ಇಸವಿಯಲ್ಲಿ ನಾವು ಒಂದಷ್ಟು ಕಠಿಣ ಪಾಠಗಳನ್ನು ಕಲಿತಿದ್ದೇವೆ. ಮನುಷ್ಯ, ಪ್ರಕೃತಿಯ ಯಜಮಾನ ಎಂಬ ಭ್ರಮೆಯನ್ನು, ಕಣ್ಣಿಗೆ ಕಾಣದ ವೈರಾಣು ಧ್ವಂಸ ಮಾಡಿಬಿಟ್ಟಿದೆ. ಮಾನವ ಕುಲ ತನ್ನ ಧೋರಣೆಯನ್ನು ಸರಿಪಡಿಸಿಕೊಂಡು ಪ್ರಕೃತಿಯೊಂದಿಗೆ ಸಹಬಾಳ್ವೆ ನಡಸುವುದಕ್ಕೆ ಈಗಲೂ ಕಾಲ ಮಿಂಚಿಲ್ಲ ಎಂಬುದು ನನ್ನ ಭಾವನೆ. ಹವಾಮಾನ ಬದಲಾವಣೆಯಂತೆಯೇ ಸಾಂಕ್ರಾಮಿಕ. ನಾವು ಜೊತೆಯಾಗಿ ಸಾಗಬೇಕೆಂಬ ಬಗ್ಗೆ ಜಾಗತಿಕ ಸಮುದಾಯದಲ್ಲಿ ಅರಿವು ಮೂಡಿಸಿದೆ. ನನ್ನ ದೃಷ್ಟಿಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಮಾನವ ಕೇಂದ್ರಿತ ಸಹಯೋಗ, ಆರ್ಥಿಕ-ಕೇಂದ್ರಿತ ಒಳಗೊಳ್ಳುವಿಕೆಗಿಂತಲೂ ಹೆಚ್ಚು ಮುಖ್ಯವಾದದ್ದು. ಇಲ್ಲಿ ಎಷ್ಟು ಹೆಚ್ಚಿನ ಪರಿವರ್ತನೆಯಾಗುತ್ತದೆಯೋ, ಅಷ್ಟು ಮನುಕುಲಕ್ಕೆ ಒಳಿತಾಗುತ್ತದೆ. 21ನೇ ಶತಮಾನ ಮಾನವತೆ, ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಭೂಗ್ರಹದ ಸಂರಕ್ಷಣೆಗೆ ಸಹಯೋಗದಲ್ಲಿ ಸಾಗಿದ ಶತಮಾನವಾಗಿ ಸ್ಮರಿಸುವಂತಿರಬೇಕು.

16.       ಇನ್ನು ಎರಡನೆಯ ಪಾಠ ಏನೆಂದರೆ, ಪ್ರಕೃತಿ ಮಾತೆಯ ಮುಂದೆ ನಾವೆಲ್ಲರೂ ಸಮಾನ, ಉಳಿವು-ಉನ್ನತಿಗೆ ನಾವು ಮೊದಲಿಗೆ ನಮ್ಮ ಸಹ ನಿವಾಸಿಗಳ ಮೇಲೆ ಅವಲಂಬಿತರಾಗಿರುತ್ತೇವೆ ಎಂಬುದು. ಮಾನವ ಸಮಾಜ ನಿರ್ಮಿಸಿರುವ ಯಾವುದೇ ಕೃತಕ ವಿಂಗಡಣೆಗಳನ್ನು ಕೊರೋನಾ ವೈರಾಣು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಮನುಷ್ಯ ಸೃಷ್ಟಿಯ ಭೇದಭಾವಗಳು, ಪೂರ್ವಗ್ರಹ ಮತ್ತು ಅಡೆತಡೆಗಳನ್ನು ಮೀರಿ ನಾವು ನಡೆದುಕೊಳ್ಳಬೇಕಾದ ಅಗತ್ಯವಿದೆ. ಎಂಬ ತತ್ವವನ್ನು ಇದು ಪುಷ್ಟೀಕರಿಸುವುದು. ಕರುಣೆ ಮತ್ತು ಪರಸ್ಪರ ನೆರವಾಗುವುದನ್ನು ಮೂಲ ಮೌಲ್ಯಗಳಾಗಿ ಭಾರತದ ಜನರು ಅಳವಡಿಸಿಕೊಂಡಿದ್ದಾರೆ. ನಮ್ಮ ನಡವಳಿಕೆಯಲ್ಲಿ ತತ್ವವನನ್ನು ಮತ್ತಷ್ಟು ಬಲಗೊಳಿಸಬೇಕಿದೆ. ಆಗಷ್ಟೇ ನಮ್ಮೆಲ್ಲರಿಗೂ ನಾವು ಉತ್ತಮ ಭವಿಷ್ಯವನ್ನು ನಿರ್ಮಾಣ ಮಾಡಬಹುದಾಗಿದೆ.

17.       ಮೂರನೆಯ ಪಾಠ ಆರೋಗ್ಯ ಮೂಲ ಸೌಕರ್ಯವನ್ನು ವೃದ್ಧಿಸುವುದು. ಕೋವಿಡ್-19 ವಿರುದ್ಧದ ಸಂಘರ್ಷದಲ್ಲಿ ಸಾರ್ವಜನಿಕ ಆಸ್ಪತ್ರೆ ಮತ್ತು ಪ್ರಯೋಗಾಲಯಗಳು ಮುಂಚೂಣಿಯಲ್ಲಿವೆ. ಸಾಂಕ್ರಾಮಿಕ ವಿರುದ್ಧ ಸೆಣೆಸಲು, ಸಾರ್ವಜನಿಕ ಆರೋಗ್ಯ ಸೇವೆಗಳು ಬಡವರಿಗೆ ಅನುವು ಮಾಡಿಕೊಟ್ಟಿವೆ. ದೃಷ್ಟಿಯಲ್ಲಿ ಸಾರ್ವಜನಿಕ ಆರೋಗ್ಯ ಮೂಲ ಸೌಕರ್ಯವನ್ನು ವಿಸ್ತರಿಸಿ, ಸದೃಢಗೊಳಿಸಬೇಕಾದ ಅಗತ್ಯವಿದೆ.

18.       ನಾಲ್ಕನೆಯ ಪಾಠ, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಭಿವೃದ್ಧಿ ಚಟುವಟಿಕೆಗಳನ್ನು ತ್ವರಿತಗೊಳಿಸಬೇಕಾದ ಅಗತ್ಯವನ್ನು ಸಾಂಕ್ರಾಮಿಕ ಪ್ರತಿಪಾದಿಸಿದೆ. ಲಾಕ್ಡೌನ್ ಹಾಗೂ ನಂತರದ ಅನ್ಲಾಕ್ ಸಮಯದಲ್ಲಿ ಆಡಳಿತ, ಶಿಕ್ಷಣ, ವ್ಯಾಪಾರ, ಕಚೇರಿ ಕೆಲಸ ಕಾರ್ಯಗಳು ಮತ್ತು ಸಾಮಾಜಿಕ ಸಂಪರ್ಕಕ್ಕೆ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ ಒಂದು ಪರಿಣಾಮಕಾರಿ ಸಾಧನವಾಗಿ ಹೊರಹೊಮ್ಮಿದೆ. ಜೀವಗಳನ್ನು ಉಳಿಸುವ ಹಾಗೂ ಕಾರ್ಯ ಚಟುವಟಿಕೆಗಳನ್ನು ಪುನಾರಂಭಿಸುವ ಎರಡೂ ಉದ್ದೇಶಗಳ ಈಡೇರಿಕೆಗೆ ಇದು ನೆರವಾಗಿದೆ.

19.       ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಕಚೇರಿಗಳು ತಮ್ಮ ಕಾರ್ಯ ನಿರ್ವಹಣೆಗೆ ವಿಡಿಯೋ ಸಂವಾದವನ್ನು ವ್ಯಾಪಕವಾಗಿ ಬಳಸುತ್ತಿವೆ. ನ್ಯಾಯಾಂಗ, ನ್ಯಾಯದಾನಕ್ಕೆ ನ್ಯಾಯಾಲಯ ಕಲಾಪಗಳನ್ನು ವಿಡಿಯೋ ಮೂಲಕ ನಿರ್ವಹಿಸುತ್ತಿದೆ. ರಾಷ್ಟ್ರಪತಿ ಭವನದಲ್ಲೂ ಸಹ, ವಿಡಿಯೋ ಸಂವಾದದ ಮೂಲಕ ಅನೇಕ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸಲು ನಾವು ತಂತ್ರಜ್ಞಾನವನ್ನು ಬಳಸಿದ್ದೇವೆ. ವಿದ್ಯುನ್ಮಾನ ಕಲಿಕೆ ಹಾಗೂ ದೂರ ಶಿಕ್ಷಣವನ್ನು ಐಟಿ ಮತ್ತು ಸಂಪರ್ಕ ಸಾಧನಗಳು ಉತ್ತೇಜಿಸಿವೆ. ಅನೇಕ ವಲಯಗಳಲ್ಲಿ ತಿoಡಿಞ ಜಿಡಿom home  ಒಂದು ವ್ಯವಸ್ಥೆಯಾಗಿದೆ. ಆರ್ಥಿಕತೆಯ ಚಕ್ರ ಸದಾ ಮುಂದೆ ಸಾಗುತ್ತಿರುವಂತೆ ಮಾಡಲು, ಅವಧಿ ಮೀರಿ ಕೆಲಸ ನಿರ್ವಹಿಸಲು ಸರ್ಕಾರಿ ಮತ್ತು ಖಾಸಗಿ ವಲಯದ ಒಂದಷ್ಟು ಸಂಸ್ಥೆಗಳಿಗೆ, ತಂತ್ರಜ್ಞಾನ ಅನುವು ಮಾಡಿಕೊಟ್ಟಿದೆ. ಅಂತೆಯೇ ಪ್ರಕೃತಿಯೊಂದಿಗಿನ ಸಹಬಾಳ್ವೆ ಜೊತೆಯಲ್ಲೇ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ನಮ್ಮ ಉಳಿವು ಮತ್ತು ಬೆಳವಣಿಗೆಯನ್ನು ಕಾಯ್ದುಕೊಳ್ಳಲು ನೆರವಾಗುವುದು ಎಂಬ ಪಾಠವನ್ನು ನಾವು ಕಲಿತಿದ್ದೇವೆ.

20.       ಪಾಠಗಳು ಮನುಕುಲಕ್ಕೆ ಉಪಯುಕ್ತ ಎಂಬುದು ಸಾಬೀತಾಗುತ್ತದೆ. ಯುವ ಪೀಳಿಗೆ ಪಾಠಗಳನ್ನು ಚೆನ್ನಾಗಿ ಕಲಿತಿದೆ ಹಾಗೂ ಅವರ ಕೈಗಳಲ್ಲಿ ಭಾರತದ ಭವಿಷ್ಯ ಸುರಕ್ಷಿತವಾಗಿರುತ್ತದೆ ಎಂಬುದು ನನ್ನ ವಿಶ್ವಾಸ. ನಮ್ಮೆಲ್ಲರಿಗೆ ಅದರಲ್ಲೂ ಮುಖ್ಯವಾಗಿ ನಮ್ಮ ಯುವ ಸಮುದಾಯಕ್ಕೆ ಇವು ಕಠಿಣ ಸಂದರ್ಭಗಳು. ಶಿಕ್ಷಣ ಸಂಸ್ಥೆಗಳನ್ನು ಮುಚ್ಚಿರುವುದು ನಮ್ಮ ಬಾಲಕಿಯರು, ಬಾಲಕರಲ್ಲಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ, ಸದ್ಯದ ಮಟ್ಟಿಗೆ ಅವರ ಕನಸುಗಳು ಆಶೋತ್ತರಗಳ ಮೇಲೆ ಕರಿಛಾಯೆ ಆವರಿಸಿದೆ. ಆದರೆ ಕಠಿಣ ಸಮಯಗಳ ಶಾಶ್ವತವಲ್ಲ. ತಮ್ಮ ಕನಸುಗಳ ಸಾಕಾರಕ್ಕೆ ಶ್ರಮಿಸುವುದರಿಂದ ಯುವ ಜನತೆ ವಿಮುಖರಾಗಬಾರದು ಎಂಬುದನ್ನು ಅವರಿಗೆ ನೆನಪಿಸಲು ಬಯಸುತ್ತೇನೆ. ಇಂತಹ ವಿನಾಶಗಳ ಬಳಿಕ ಚಕಿತಗೊಳಿಸುವ ರೀತಿ ಸಮಾಜಗಳು, ಆರ್ಥಿಕತೆಗಳು ಮತ್ತು ದೇಶಗಳ ಮರು ನಿರ್ಮಾಣವಾದಂತಹ ಸ್ಫೂರ್ತಿದಾಯಕ ನಿದರ್ಶನಗಳ ಗತಿಸಿದ ದಿನಗಳಲ್ಲಿ ಹೇರಳವಾಗಿ ಕಾಣಸಿಗುತ್ತವೆ. ನಮ್ಮ ದೇಶ ಮತ್ತು ಯುವ ಜನತೆಗೆ ಉಜ್ವಲ ಭವಿಷ್ಯವಿದೆ ಎಂಬುದು ನನ್ನ ವಿಶ್ವಾಸ.

21.       ನಮ್ಮ ಮಕ್ಕಳು ಮತ್ತು ಯುವ ಜನರಿಗೆ ಭವಿಷ್ಯದ ಶಿಕ್ಷಣ ಕಲ್ಪಿಸುವ ದೃಷ್ಟಿಯಿಂದ, ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ನಿರ್ಧರಿಸಿದೆ. ನೀತಿಯ ಅನುಷ್ಠಾನದೊಂದಿಗೆ, ಒಂದು ಹೊಸ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದಂತಾಗುವುದು ಹಾಗೂ ಇದು, ಮುಂದೆ ಎದುರಾಗಬಹುದಾದ ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಿ, ನವ ಭಾರತ ನಿರ್ಮಾಣಕ್ಕೆ ಹಾದಿ ಮಾಡಿಕೊಡುತ್ತದೆ ಎಂಬ ಭರವಸೆ ನನಗಿದೆ. ನಮ್ಮ ಯುವ ಜನರು ಅವರ ಆಸಕ್ತಿ-ಪ್ರತಿಭೆಗಳಿಗೆ ಅನುಸಾರ ತಮ್ಮ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ಮುಕ್ತ ಅವಕಾಶ ಹೊಂದಿರುತ್ತಾರೆ. ತಮ್ಮ ಸಾಮಥ್ರ್ಯವನ್ನು ಅರಿತುಕೊಳ್ಳಲೂ ಅವರಿಗೆ ಅವಕಾಶವಾಗುತ್ತದೆ. ಇಂತಹ ಸಾಮಥ್ರ್ಯಗಳ ಆಧಾರದಲ್ಲಿ ಭವಿಷ್ಯದ ಪೀಳಿಗೆಗಳು ಉದ್ಯೋಗ ಪಡೆಯುವುದಷ್ಟೇ ಅಲ್ಲದೇ, ಇತರರಿಗೆ ಉದ್ಯೋಗಾವಕಾಶಗಳನ್ನು ಸಹ ಸೃಷ್ಟಿಸಬಹುದಾಗಿದೆ.

22.       ರಾಷ್ಟ್ರೀಯ ಶಿಕ್ಷಣ ನೀತಿ, ದೀರ್ಘಾವಧಿಯ ಮುನ್ನೋಟ ಮತ್ತು ದೂರಗಾಮಿ ಪರಿಣಾಮವನ್ನು ಬಿಂಬಿಸುತ್ತದೆ. ಇದು ಶಿಕ್ಷಣ ರಂಗದಲ್ಲಿ ಒಳಗೊಳ್ಳುವಿಕೆ, ಆವಿಷ್ಕಾರ ಮತ್ತು ಸಾಂಸ್ಥಿಕ ಸಂಸ್ಕøತಿಯನ್ನು ಬಲಿಷ್ಠಗೊಳಿಸುವುದು. ಯುವ ಮನಸುಗಳು ಸಹಜವಾಗಿಯೇ ವಿಕಾಸಗೊಳ್ಳಲು ನೆರವಾಗುವ ರೀತಿ, ಮಾತೃ ಭಾಷೆಯಲ್ಲಿ ಶಿಕ್ಷಣ ಬೋಧನೆಗೆ ಒತ್ತು ನೀಡಲಾಗಿದೆ. ಇದರಿಂದ ಭಾರತೀಯ ಭಾಷೆಗಳಿಗೆ ಶಕ್ತಿ ತುಂಬಿದಂತಾಗುವುದು ಹಾಗೂ ದೇಶದ ಐಕ್ಯತೆಯನ್ನು ಸದೃಢಗೊಳಿಸದಂತಾಗುವುದು. ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಯುವ ಸಬಲೀಕರಣ ಅತ್ಯಂತ ಅವಶ್ಯಕವಾಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ, ಸರಿಯಾದ ದಿಕ್ಕಿನಲ್ಲಿ ಇಟ್ಟ ಸರಿಯಾದ ಹೆಜ್ಜೆಯಾಗಿದೆ.

ಪ್ರಿಯ ದೇಶ ವಾಸಿಗಳೇ,

23.       ಕೇವಲ ಹತ್ತು ದಿನಗಳ ಹಿಂದಷ್ಟೇ, ಅಯೋಧ್ಯೆಯ ಶ್ರೀ ರಾಮಜನ್ಮ ಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ಚಾಲನೆ ದೊರೆತಿದೆ. ಇದು ನಿಜವಾಗಿಯೂ ಪ್ರತಿಯೊಬ್ಬರಿಗೂ ಅಭಿಮಾನದ ಸಂಗತಿ. ದೇಶದ ಜನತೆ ಸುದೀರ್ಘ ಕಾಲದಿಂದ ಸಂಯಮ-ಶಾಂತಿಯನ್ನು ಕಾಪಾಡಿಕೊಂಡು ಬಂದಿದ್ದರು. ಅಲ್ಲದೇ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಚಲ ವಿಶ್ವಾಸವನ್ನು ಹೊಂದಿದ್ದರು. ರಾಮ ಜನ್ಮಭೂಮಿ ವಿವಾದವನ್ನು ನ್ಯಾಯಾಂಗ ಪ್ರಕ್ರಿಯೆ ಮೂಲಕ ಬಗೆಹರಿಸಲಾಗಿದೆ. ಸಂಬಂಧಿಸಿದ ಎಲ್ಲರೂ ಹಾಗೂ ಜನತೆ ಸುಪ್ರೀಂಕೋರ್ಟ್ ತೀರ್ಪನ್ನು ಗೌರವಯುತವಾಗಿ ಸ್ವೀಕರಿಸಿದ್ದಾರೆ ಹಾಗೂ ಶಾಂತಿ, ಅಹಿಂಸೆ, ಪ್ರೀತಿ ಮತ್ತು ಸಹಬಾಳ್ವೆಯ ಭಾರತೀಯ ತತ್ವಾದರ್ಶಗಳನ್ನು ಜಗತ್ತಿನ ಮುಂದೆ ಸಾದರಪಡಿಸಿದೆ. ಇಂತಹ ಶ್ಲಾಘನೀಯ ನಡವಳಿಕೆಗಾಗಿ, ದೇಶ ಬಾಂಧವರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

 

ನೆಚ್ಚಿನ ದೇಶವಾಸಿಗಳೇ,

24.       ಭಾರತ ಸ್ವಾತಂತ್ರ್ಯಗಳಿಸಿದಾಗ ಬಹಳಷ್ಟು ಜನ ಭಾವಿಸಿದ್ದರು - ಪ್ರಜಾತಂತ್ರದ ನಮ್ಮ ಪ್ರಯೋಗ ಬಹಳ ಕಾಲ ಉಳಿಯದ ಎಂದು. ನಮ್ಮ ರಾಜನೀತಿಯನ್ನು ಪ್ರಜಾತಂತ್ರದ ಪರಿಧಿಗೆ ತರಲು ನಮ್ಮ ಪ್ರಾಚೀನ ಆಚಾರ-ವಿಚಾರಗಳು, ಶ್ರೀಮಂತ ವೈವಿಧ್ಯತೆ ಅಡ್ಡಿಯಾಗುತ್ತದೆ ಎಂದು ಅವರು ಎಣಿಸಿದ್ದರು. ಆದರೆ ನಾವು ಇದೇ ಅಂಶಗಳನ್ನು ಪೋಷಿಸಿ, ನಮ್ಮ ಶಕ್ತಿಯನ್ನಾಗಿಸಿಕೊಂಡು ಜಗತ್ತಿನ ಬೃಹತ್ ಪ್ರಜಾಸತ್ತೆಯನ್ನು ಬಹಳಷ್ಟು ಸ್ಪಂದನಾತ್ಮಕಗೊಳಿಸಿದ್ದೇನೆ. ಮನುಕುಲದ ಒಳಿತಿಗೆ ಭಾರತ ಎಂದಿಗೂ ತನ್ನ ಮುಂಚೂಣಿ ಪಾತ್ರದಲ್ಲಿ ಸಾಗುವುದು.

25.       ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ನೀವೆಲ್ಲರೂ ತೋರಿರುವ ಸಹನೆ-ಜಾಣ್ಮೆಗಳನ್ನು ಜಗತ್ತಿನೆಲ್ಲೆಡೆ ಪ್ರಶಂಸಿಸಲಾಗುತ್ತಿದೆ. ನೀವು ಸದಾ ಎಚ್ಚರಿಕೆ ವಹಿಸಿ, ಹೊಣೆಗಾರಿಕೆಯಿಂದ ನಡೆದುಕೊಳ್ಳುವಿರಿ ಎಂಬ ಬಗ್ಗೆ ನನಗೆ ವಿಶ್ವಾಸವಿದೆ.

26.       ವಿಶ್ವ ಸಮುದಾಯಕ್ಕೆ, ವಿಶೇಷವಾಗಿ ಬೌದ್ಧಿಕ ಮತ್ತು ಆಧ್ಯಾತ್ಮಿಕ ಸಮೃದ್ಧಿಗೆ, ವಿಶ್ವ ಶಾಂತಿಯನ್ನು ಉತ್ತೇಜಿಸುವುದಕ್ಕೆ ನಾವು ಬಹಳಷ್ಟನ್ನು ಸಮರ್ಪಿಸಬಹುದಾಗಿದೆ. ಇಂತಹ ಸದ್ಭಾವನೆಯೊಂದಿಗೆ ಸಮಸ್ತರ ಕಲ್ಯಾಣಕ್ಕೆ ನಾನು ಪ್ರಾರ್ಥಿಸುತ್ತೇನೆ.

ಸರ್ವೇಭವಂತು ಸುಖಿನಾಃ

ಸರ್ವೇ ಸಂತು ನಿರಾಮಯಃ

ಸರ್ವೇ ಭದ್ರಾಣಿ ಪಶ್ಯಂತು

ಮಾ ಕಶ್ಚಿತ್ ದುಃಖ್ ಭಾಗ್ ಭವೇತ್

ಅಂದರೆಸರ್ವರೂ ಸಂತೋಷವಾಗಿರಲಿ

ಸರ್ವರೂ ವ್ಯಾಧಿ ಮುಕ್ತರಾಗಿರಲಿ

ಸರ್ವರೂ ಒಳಿತನ್ನು ಕಾಣಲಿ

ಯಾರೊಬ್ಬರೂ ದುಃಖಿತರಾಗದಿರಲಿ

ವಿಶ್ವ ಕಲ್ಯಾಣಕ್ಕಾಗಿನ ಪ್ರಾರ್ಥನೆಯ ಸಂದೇಶ, ಮನುಕುಲಕ್ಕೆ ಭಾರತದ ವೈಶಿಷ್ಟ್ಯ ಪೂರ್ಣ ಕೊಡುಗೆಯಾಗಿದೆ.

27.       74ನೇ ಸ್ವಾತಂತ್ರ್ಯೋತ್ಸವದ ಮುನ್ನಾ ದಿನ. ನಿಮ್ಮೆಲ್ಲರಿಗೂ ಮತ್ತೊಮ್ಮೆ ನನ್ನ ಅಭಿನಂದನೆಗಳು. ನಿಮಗೆ ಒಳ್ಳೆಯ ಆರೋಗ್ಯ-ಉಜ್ವಲ ಭವಿಷ್ಯವನ್ನು ಹಾರೈಸುತ್ತೇನೆ.

***

 



(Release ID: 1646133) Visitor Counter : 1029