ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೇಂದ್ರ ಸಂಪುಟ ಕಾರ್ಯದರ್ಶಿಯವರಿಂದ  ಕೋವಿಡ್-19 ಪ್ರಕರಣಗಳು ಹೆಚ್ಚಿರುವ 9 ರಾಜ್ಯಗಳ ಸಾಂಕ್ರಾಮಿಕ ನಿರ್ವಹಣೆಯ ಪರಿಶೀಲನೆ

Posted On: 24 JUL 2020 8:21PM by PIB Bengaluru

ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳು ತುರ್ತಾಗಿ ಪರೀಕ್ಷೆಗಳನ್ನು ಹೆಚ್ಚಿಸಲು, ನಿಯಂತ್ರಣ ಯೋಜನೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು, ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಮತ್ತು ಪರಿಣಾಮಕಾರಿ ಕ್ಲಿನಿಕಲ್ ನಿರ್ವಹಣೆ ಖಚಿತಪಡಿಸಿಕೊಳ್ಳುವಂತೆ ಕೇಂದ್ರ ಸರ್ಕಾರದ ಸಲಹೆ

 

ಕೇಂದ್ರ ಸರ್ಕಾರ ಮತ್ತು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ನಡುವಿನ ಕೋವಿಡ್-19 ಸಾಂಕ್ರಾಮಿಕ ರೋಗದ ನಿರ್ವಹಣೆಯ ಶ್ರೇಣೀಕೃತ, ಸಕ್ರಿಯ, ಮುಂದುವರೆದ ಮತ್ತು ಸುಸಂಘಟಿತ ಕಾರ್ಯತಂತ್ರವು ದೇಶದಲ್ಲಿ ನಿರಂತರವಾಗಿ ಕೋವಿಡ್-19 ರೋಗಿಗಳ ಚೇತರಿಕೆ ಹೆಚ್ಚಲು ಕಾರಣವಾಗಿದ್ದು, ಮರಣ ಪ್ರಮಾಣ ಕಡಿಮೆಯಾಗುತ್ತಿದೆ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ಕೆಲವು ರಾಜ್ಯಗಳು ಸಕ್ರಿಯ ಪ್ರಕರಣಗಳ ದೈನಂದಿನ ಸಂಖ್ಯೆಯಲ್ಲಿ ಹೆಚ್ಚಿನ ಏರಿಕೆಯನ್ನು ಕಂಡಿವೆ ಮತ್ತು ಕೋವಿಡ್ ನಿರ್ವಹಣಾ ದೃಷ್ಟಿಕೋನದಿಂದ ಇವು ಕಾಳಜಿಯ ಪ್ರದೇಶಗಳಾಗಿವೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಪರಿಣಾಮಕಾರಿ ನಿಯಂತ್ರಣ ಮತ್ತು ನಿರ್ವಹಣೆಗಾಗಿ ಕೇಂದ್ರ-ರಾಜ್ಯಗಳ ಸಂಘಟಿತ ಕಾರ್ಯತಂತ್ರದ ಭಾಗವಾಗಿ ದೇಶದಲ್ಲಿ ಸಕ್ರಿಯ ಪ್ರಕರಣಗಳು ಹೆಚ್ಚುತ್ತಿರುವ ಒಂಬತ್ತು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಆರೋಗ್ಯ ಕಾರ್ಯದರ್ಶಿಗಳೊಂದಿಗೆ  ಉನ್ನತ ಮಟ್ಟದ ವರ್ಚುವಲ್ ಪರಿಶೀಲನಾ ಸಭೆಯನ್ನು ಕೇಂದ್ರ ಸಂಪುಟ ಕಾರ್ಯದರ್ಶಿಯವರು ಇಂದು ನಡೆಸಿದರು. ಆಂಧ್ರಪ್ರದೇಶ, ಬಿಹಾರ, ತೆಲಂಗಾಣ, ಒಡಿಶಾ, ಪಶ್ಚಿಮ ಬಂಗಾಳ, ಅಸ್ಸಾಂ, ಕರ್ನಾಟಕ, ಜಾರ್ಖಂಡ್ ಮತ್ತು ಉತ್ತರ ಪ್ರದೇಶ ರಾಜ್ಯಗಳು ಸಭೆಯಲ್ಲಿ ಭಾಗವಹಿಸಿದ್ದವು.

ರಾಜ್ಯಗಳ ನಿರ್ದಿಷ್ಟ ಕೋವಿಡ್ ಪ್ರತಿಕ್ರಿಯೆ ತಂತ್ರದ ಬಗ್ಗೆ ಮತ್ತು ಇತ್ತೀಚಿನ ದಿನಗಳಲ್ಲಿ ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿರುವ ಅಂಶಗಳ ಬಗ್ಗೆ ರಾಜ್ಯಗಳ ಆರೋಗ್ಯ ಕಾರ್ಯದರ್ಶಿಗಳು ಮತ್ತು ಇತರ ಅಧಿಕಾರಿಗಳೊಂದಿಗೆ ಸಂಪುಟ ಕಾರ್ಯದರ್ಶಿ ವಿವರವಾದ ಪರಿಶೀಲನೆ ನಡೆಸಿದರು. “ಟೆಸ್ಟ್ ಟ್ರ್ಯಾಕ್ ಟ್ರೀಟ್ಪರೀಕ್ಷೆ, ಪತ್ತೆ, ಚಿಕಿತ್ಸೆ ಕಾರ್ಯತಂತ್ರಕ್ಕೆ ಅನುಗುಣವಾಗಿ, ಕಂಟೈನ್ಮೆಂಟ್ ವಲಯಗಳ ಮೇಲೆ ವಿಶೇಷ ಗಮನಹರಿಸಿ ಪರೀಕ್ಷೆಗಳನ್ನು ಹೆಚ್ಚಿಸುವಂತೆ ರಾಜ್ಯಗಳಿಗೆ ಸೂಚಿಸಲಾಯಿತು. ಕೆಲವು ರಾಜ್ಯಗಳಲ್ಲಿ ನಡೆಯುತ್ತಿರುವ ಕಡಿಮೆ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಕಾಳಜಿ ವ್ಯಕ್ತಪಡಿಸಲಾಯಿತು. ಪ್ರಕರಣಗಳ ಆರಂಭಿಕ ಗುರುತಿಸುವಿಕೆ ಮತ್ತು ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ನಿರಂತರ ಮತ್ತು ಆಕ್ರಮಣಕಾರಿ ಪರೀಕ್ಷೆಯು ನಿರ್ಣಾಯಕವಾಗಿದೆ ಎಂದು ಪುನರುಚ್ಚರಿಸಲಾಯಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಕಂಟೈನ್ಮೆಂಟ್ ವಲಯಗಳನ್ನು ತ್ವರಿತವಾಗಿ ಮತ್ತು ಸೂಕ್ತವಾಗಿ ವಿವರಿಸುವ ಅಗತ್ಯವನ್ನು ಸಂಪುಟ ಕಾರ್ಯದರ್ಶಿ ಒತ್ತಿ ಹೇಳಿದರು. ಪ್ರಸರಣ ಸರಪಳಿಯನ್ನು ಪರಿಣಾಮಕಾರಿಯಾಗಿ ಮುರಿಯಲು ಕಂಟೈನ್ಮೆಂಟ್ ವಲಯಗಳಲ್ಲಿ ತೀವ್ರವಾದ ಸಂಪರ್ಕ ಪತ್ತೆಹಚ್ಚುವಿಕೆ ಮತ್ತು ಮನೆ-ಮನೆಯಲ್ಲಿ ಸಕ್ರಿಯ ಪ್ರಕರಣ ಹುಡುಕಾಟ, ಕಂಟೇನ್ಮೆಂಟ್ ವಲಯಗಳ ಹೊರಗೆ ಗುರುತಿಸಬೇಕಾದ ಬಫರ್ ವಲಯಗಳು ಮತ್ತು ಉಸಿರಾಟದ ತೊಂದರೆ/ಶೀತ ಜ್ವರ ಪ್ರಕರಣಗಳ ಬಗ್ಗೆ ನಿರಂತರ ಕಣ್ಗಾವಲು ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು.

ನಿಗದಿತ ಗುಣಮಟ್ಟದ ಆರೈಕೆ ಮತ್ತು ರೋಗಿಗಳ ತಡೆರಹಿತ ನಿರ್ವಹಣೆಯನ್ನು ಖಾತ್ರಿಪಡಿಸುವ ಕ್ಲಿನಿಕಲ್ ಶಿಷ್ಟಾಚಾರಗಳ ಅನುಷ್ಠಾನದೊಂದಿಗೆ ರಾಜ್ಯದಾದ್ಯಂತ ಅಗತ್ಯ ಸಂಖ್ಯೆಯ ಹಾಸಿಗೆಗಳು, ಆಮ್ಲಜನಕ ಮತ್ತು ವೆಂಟಿಲೇಟರ್ಗಳು ಸೇರಿದಂತೆ ಆರೋಗ್ಯ ಮೂಲಸೌಕರ್ಯ ಲಭ್ಯತೆಯ ಬಗ್ಗೆ ರಾಜ್ಯಗಳು ಸ್ಪಷ್ಟ ಗಮನ ನೀಡುವಂತೆ ಸೂಚಿಸಲಾಯಿತು. ಯಾವುದೇ ನಿರಾಕರಣೆ ಇಲ್ಲದೇ ಪರಿಣಾಮಕಾರಿ ಆಂಬ್ಯುಲೆನ್ಸ್ ನಿರ್ವಹಣೆಯನ್ನು ಮಾಡಬೇಕೆಂದು ಸಹ ಸೂಚಿಸಲಾಯಿತು. ಮರಣ ಪ್ರಮಾಣವನ್ನು ಕಡಿಮೆ ಮಾಡುವ ಅನಿವಾರ್ಯತೆಯ ಬಗ್ಗೆ ಸಂಪುಟ ಕಾರ್ಯದರ್ಶಿ ಒತ್ತಿ ಹೇಳಿದರು. ಇದಕ್ಕಾಗಿ, ಹೆಚ್ಚಿನ ಅಪಾಯದಲ್ಲಿರುವವರ ವಿಶೇಷವಾಗಿ ವಯಸ್ಸಾದವರು ಮತ್ತು ಸಹ-ಅಸ್ವಸ್ಥತೆಗಳನ್ನು ಹೊಂದಿರುವವರ ಗುರುತಿಸುವಿಕೆ ನಡೆಯಬೇಕು ಎಂದು ಅವರು ಹೇಳಿದರು.

ಕೋವಿಡ್-19 ಹರಡುವಿಕೆಯ ನಿಯಂತ್ರಣಕ್ಕೆ ಆರಂಭಿಕ ಪತ್ತೆ ಮತ್ತು ಸಮಯೋಚಿತ ಕ್ಲಿನಿಕಲ್ ನಿರ್ವಹಣೆ ಪ್ರಮುಖವಾದುದು ಎಂಬ ಅಂಶಗಳ ಬಗ್ಗೆ ರಾಜ್ಯಗಳ ಗಮನ ಸೆಳೆಯಲಾಯಿತು.

ಕೋವಿಡ್-19 ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಇತ್ತೀಚಿನ ಮಾಹಿತಿಗಾಗಿ https://www.mohfw.gov.in/ ಮತ್ತು MoHFW_INDIA ವೆಬ್ ಸೈಟ್ ಗಳಿಗೆ ಭೇಟಿ ನೀಡಿ:

ಕೋವಿಡ್-19ಕ್ಕೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technicalquery.covid19[at]gov[dot]in ಮತ್ತು ಇತರ ಪ್ರಶ್ನೆಗಳಿಗೆ ncov2019[at]gov[dot]in ಮತ್ತು @CovidIndiaSeva ಗೆ ಕಳುಹಿಸಬಹುದು.

ಕೋವಿಡ್-19 ಕುರಿತು ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಾಯವಾಣಿ ಸಂಖ್ಯೆ: + 91-11-23978046 ಅಥವಾ 1075 (ಟೋಲ್-ಫ್ರೀ) ಸಂಖ್ಯೆಗೆ ಕರೆ ಮಾಡಿ. ಕೋವಿಡ್-19ಕ್ಕೆ ಸಂಬಂಧಿಸಿದಂತೆ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಸಹಾಯವಾಣಿಗಳ ಪಟ್ಟಿಯು https://www.mohfw.gov.in/pdf/coronvavirushelplinenumber.pdf ನಲ್ಲಿ ಲಭ್ಯವಿದೆ.

***



(Release ID: 1641108) Visitor Counter : 201