ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಐಐಟಿ ದೆಹಲಿಯಿಂದ ವಿಶ್ವದಲ್ಲೇ ಕಡಿಮೆ ದರದ ಕೋವಿಡ್-19 ಡಯಾಗ್ನಾಸ್ಟಿಕ್ ಕಿಟ್ ಕೊರೊಸರ್ ಅಭಿವೃದ್ಧಿ

Posted On: 15 JUL 2020 5:08PM by PIB Bengaluru

ಐಐಟಿ ದೆಹಲಿಯಿಂದ ವಿಶ್ವದಲ್ಲೇ ಕಡಿಮೆ ದರದ ಕೋವಿಡ್-19 ಡಯಾಗ್ನಾಸ್ಟಿಕ್ ಕಿಟ್ ಕೊರೊಸರ್ ಅಭಿವೃದ್ಧಿ

 ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ಅವರಿಂದ ಬಿಡುಗಡೆ

ಆರೋಗ್ಯಪೂರ್ಣ ಮತ್ತು ಸ್ವಾವಲಂಬಿ ಭಾರತಕ್ಕಾಗಿ ಪ್ರಧಾನ ಮಂತ್ರಿಗಳ ಕನಸನ್ನು ಮತ್ತು ನೀತಿಸೂತ್ರಗಳಾದ ಆವಿಷ್ಕಾರಿ ಯುವಜನತೆ ನಿಟ್ಟಿನಲ್ಲಿ ಕೊರೊಸರ್ ಕಿಟ್ ಒಂದು ಹೆಜ್ಜೆ ಮುಂದಿರಿಸಿದಂತಾಗಿದೆ - ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್

 

ಐಐಟಿ ದೆಹಲಿಯಿಂದ ಅಭಿವೃದ್ಧಿಪಡಿಸಲಾದ ಮತ್ತು  ಐ ಸಿ ಎಂ ಆರ್ ಹಾಗೂ ಡಿ ಸಿ ಜಿ ಐ ಅನುಮೋದನೆ ಪಡೆದ ವಿಶ್ವದಲ್ಲೇ ಕಡಿಮೆ ದರದ ಆರ್ ಟಿ ಪಿ ಸಿ ಆರ್ ಮೂಲದ ಕೋವಿಡ್ – 19 ಡಯಾಗ್ನಾಸ್ಟಿಕ್ ಕಿಟ್ ಅನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ಅವರು ವಿಡಿಯೋ ಮೂಲಕ ಇಂದು ನವದೆಹಲಿಯಲ್ಲಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸಹಾಯಕ ಸಚಿವರಾದ ಶ್ರೀ ಸಂಜಯ್ ಧೋತ್ರೆ ಅವರು ಕೂಡ ಹಾಜರಿದ್ದರು. ಈ ಬಿಡುಗಡೆ ಸಮಾರಂಭದಲ್ಲಿ ಉನ್ನತ ಶಿಕ್ಷಣ ಕಾರ್ಯದರ್ಶಿ ಶ್ರೀ ಅಮಿತ್ ಖರೆ, ಮತ್ತು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.      

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಪೋಖ್ರಿಯಾಲ್ ಅವರು ದೆಹಲಿಯ ತಂತ್ರಜ್ಞಾನ ಸಂಸ್ಥೆ ಅಭಿವೃದ್ಧಿಪಡಿಸಿದ ೀ ಕೋವಿಡ್ – 19 ಡಯಾಗ್ನಾಸ್ಟಿಕ್ ಕಿಟ್ ಸ್ವಾವಲಂಬಿ ಭಾರತಕ್ಕಾಗಿ ಪ್ರಧಾನ ಮಂತ್ರಿಗಳ ಕನಸನ್ನು ಸಾಕಾರಗೊಳಿಸುವಲ್ಲಿ ಒಂದು ಹೆಜ್ಜೆ ಮುಂದಿರಿಸಿದಂತಾಗಿದೆ ಎಂದು ಹೇಳಿದರು. ಈ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸಹಾಯ ಮಾಡಲು ದೇಶಕ್ಕೆ ಒಂದು ಕಡಿಮೆ ದರದ ಮತ್ತು ನಂಬಿಕೆಯ ಪರೀಕ್ಷೆಯ ಅಗತ್ಯವಿದೆ ಎಂದು ಹೇಳಿದರು. ಕೊರೊಸರ್ ಕಿಟ್ ನ್ನು ಸ್ಥಳೀಯವಾಗಿ ಅಭವೃದ್ಧಿಪಡಿಸಲಾಗಿದೆ ಮತ್ತು ಇತರ ಕಿಟ್ ಗಳಿಗೆ ಹೋಲಿಸಿದಲ್ಲಿ ಕಡಿಮೆ ಬೆಲೆಯದ್ದಾಗಿದೆ. ನಮ್ಮ ಪ್ರಧಾನ ಮಂತ್ರಿಯವರು ದೇಶದ ಯುವಜನತೆ ಮುಂದೆ ಬರುವಂತೆ  ಮತ್ತು ಆರೋಗ್ಯ ಭಾರತ ನಿರ್ಮಾಣಕ್ಕೆ, ಅದರಲ್ಲೂ ವಿಶೇಷವಾಗಿ ಕೋವಿಡ್ – 19 ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮ ಆವಿಷ್ಕಾರಿ ಸಂಶೋಧನೆಗಳಿಗೆ ಎಂದಿಗೂ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ಹೇಳಿದರು. ಈ ಕಿಟ್ ಹೆಚ್ಚಿನ ಅಂಕಗಳೊಂದಿಗೆ ಐಸಿಎಂಆರ್ ಅನುಮೋದನೆ ಪಡೆದಿದೆ ಮತ್ತು ಡಿಸಿಜಿಐ ನಿಂದ ಹೆಚ್ಚಿನ ಸೂಕ್ಷ್ಮತೆ ಮತ್ತು ನಿರ್ದಿಷ್ಟತೆ ಹೊಂದಿರುವುದಾಗಿ ಅನುಮೋದನೆ ಪಡೆದಿದೆ.      

ಐಐಟಿ ದೆಹಲಿಯ ಸಂಶೋಧಕರು ಮಾಡಿದ ಕೆಲಸವನ್ನು ಶ್ರೀ ಪೋಖ್ರಿಯಾಲ್ ಶ್ಲಾಘಿಸಿದರು ಮತ್ತು ಈ ಕಿಟ್ ನ ಉತ್ಪಾದನೆ ಹಾಗೂ ಅಭಿವೃದ್ಧಿಯಲ್ಲಿ ತೊಡಗಿರುವ ಪ್ರತಿಯೊಬ್ಬರನ್ನು ಅಭಿನಂದಿಸಿದರು. ಕೋವಿಡ್ – 19 ಡಯಾಗ್ನಾಸ್ಟಿಕ್ ಕಿಟ್ ಅನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ಪ್ರೊ, ವಿವೇಕಾನಂದನ್ ಪೆರುಮಾಳ್ಳ ಮತ್ತು ಅವರ ಐಐಟಿ ದೆಹಲಿಯ ಸಂಶೋಧನಾ ತಂಡವನ್ನು ಸಚಿವರು ಪ್ರಶಂಸಿಸಿದರು. ಪ್ರಶಾಂತ್ ಪ್ರಧಾನ್ (ಪಿ ಹೆಚ್ ಡಿ ಸ್ಕಾಲರ್), ಅಶುತೋಷ್ ಪಾಂಡೆ (ಪಿ ಹೆಚ್ ಡಿ ಸ್ಕಾಲರ್), ಪ್ರವೀಣ್ ತ್ರಿಪಾಠಿ (ಪಿ ಹೆಚ್ ಡಿ ಸ್ಕಾಲರ್), ಡಾ.ಅಖಿಲೇಶ್ ಮಿಶ್ರಾ. ಡಾ. ಪಾರುಲ್ ಗುಪ್ತಾ, ಡಾ. ಸೋನಂ ಧಮೀಜಾ, ಪ್ರೊ. ಮನೋಜ್ ಬಿ ಮೆನನ್, ಪ್ರೊ. ಬಿಸ್ವಜಿತ್ ಕುಂದು ಮತ್ತು ಪ್ರೊ. ಜೇಮ್ಸ್ ಗೋಮ್ಸ್  ಅವರನ್ನು ಈ ತಂಡ ಒಳಗೊಂಡಿದೆ.

ಈ ಕಡಿಮೆ ದರದ ಡಯಾಗ್ನಾಸ್ಟಿಕ್ ಕಿಟ್ ಪ್ರಸ್ತುತ ಬಿಕ್ಕಟ್ಟಿನ ಸಮಯದಲ್ಲಿ ದೇಶಕ್ಕೆ ಸಹಾಯ ಮಾಡಲಿದೆ ಎಂದು ಅವರು ಹೇಳಿದರು. ಶೋಧ ಮುಕ್ತ ಡಯಾಗ್ನಾಸ್ಟಿಕ್ ಕಿಟ್ ಕೊರೊಸರ್ ಅನ್ನು ದೆಹಲಿ ಎನ್ ಸಿ ಆರ್ ಮೂಲದ ನ್ಯೂಟೆಕ್ ವೈದ್ಯಕೀಯ ಪರಿಕರಗಳ ಸಂಸ್ಥೆ ತಯಾರಿಸಿದೆ ಎಂದು ಶ್ರೀ ಪೋಖ್ರಿಯಾಲ್ ಮಾಹಿತಿ ನೀಡಿದರು.

ರಾಷ್ಟ್ರದ ಹಿತದೃಷ್ಟಿಯಿಂದ ಈ ಬಿಕ್ಕಟ್ಟಿನ ಸಮಯದಲ್ಲಿ ಎಂ ಹೆಚ್ ಆರ್ ಡಿ ಅಡಿಯಲ್ಲಿ ಒಂದು ಪ್ರಖ್ಯಾತ ಶಿಕ್ಷಣ ಸಂಸ್ಥೆ ಮತ್ತು ಖಾಸಗಿ ಕಂಪನಿ ಕೈಜೋಡಿಸಿರುವುದನ್ನು ಸಚಿವರು ಶ್ಲಾಘಿಸಿದರು. ಐಐಟಿ ದೆಹಲಿ ಅಭಿವೃಪಡಿಸಿದ ಡಯಾಗ್ನಾಸ್ಟಿಕ್ ಕಿಟ್ ಈ ಬಿಡುಗಡೆಯೊಂದಿಗೆ ಅಧಿಕೃತ ಪರೀಕ್ಷಾ ಪ್ರಯೋಗಾಲಯಗಳಲ್ಲಿ ಬಳಕೆಗೆ ಲಭ್ಯವಿರುತ್ತ ಹಾಗೂ ಇದು ಕೋವಿಡ್ – 19 ಆರ್ ಟಿ ಪಿ ಸಿ ಆರ್ ಪರೀಕ್ಷಾ ವೆಚ್ಚವನ್ನು ಗಣನೀಯವಾಗಿ ತಗ್ಗಿಸುತ್ತದೆ ಎಂದು ಶ್ರೀ ಪೋಖ್ರಿಯಾಲ್ ಮಾಹಿತಿ ನೀಡಿದರು. ಆರ್ ಟಿ ಪಿ ಸಿ ಆರ್ ಪರೀಕ್ಷೆಯ ಮೂಲ ಬೆಲೆ ರೂ 399. ಆರ್ ಎನ್ ಎ ಐಸೋಲೇಶನ್ ಮತ್ತು ಪ್ರಯೋಗಾಲಯಗಳ ಶುಲ್ಕವನ್ನು ಸೇರಿಸಿದ ನಂತರ ಮಾರುಕಟ್ಟೆಯಲ್ಲಿ ಪ್ರಸ್ತುತ ಲಭ್ಯವಿರುವ ಕಿಟ್ ಗಳಿಗೆ ಹೋಲಿಸಿದರೆ ಪ್ರತಿ ಪರೀಕ್ಷಾ ವೆಚ್ಚ ಗಣನೀಯವಾಗಿ ಕಡಿಮೆಯಾಗಲಿದೆ. ತನ್ನ ಸಂಶೋಧಕರು ಅಭಿವೃದ್ಧಿಪಡಿಸಿದ ಈ ತಂತ್ರಜ್ಞಾನವನ್ನು ಬಳಸಿಕೊಂಡು ಕೋವಿಡ್ – 19 ಡಯಾಗ್ನಾಸ್ಟಿಕ್ ಕಿಟ್ ತಯಾರಿಸಲು ಐಐಟಿ ದೆಹಲಿಯ 10 ಕಂಪನಿಗಳಿಗೆ ಪರವಾನಿಗೆ ನೀಡಿರುವುದಾಗಿಯೂ ಸಚಿವರು ಮಾಹಿತಿ ನೀಡಿದರು.  

ಕೊರೊನಾ ವೈರಾಣು ಬಿಕ್ಕಟ್ಟಿನ ಮಧ್ಯೆ ವ್ಯಾಪಕವಾದ ಪರೀಕ್ಷೆಯ ಅಗತ್ಯತೆ ಹೆಚ್ಚಿರುವ ಈ ಸಮಯದಲ್ಲಿ ಇಂಥ ಕಡಿಮೆ ದರದ ಡಯಾಗ್ನಾಸ್ಟಿಕ್ ಕಿಟ್ ನ್ನು ಅತಿ ಕಡಿಮೆ ಸಮಯದಲ್ಲಿ ಅಭಿವೃದ್ಧಿಪಡಿಸಿರುವುದು ಐಐಟಿ ದೆಹಲಿಯ ಬಹು ದೊಡ್ಡ ಸಾಧನೆಯಾಗಿದೆ ಎಂದು ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಧೋತ್ರೆ ಹೇಳಿದರು. ಆವಿಷ್ಕಾರ ಮತ್ತು ಉದ್ಯಮಶೀಲತೆ ಪರಸ್ಪರ ಪೂರಕ ಮತ್ತು ಸ್ವಾವಲಂಬಿ ಭಾರತಕ್ಕೆ ಬಹ ನಿರ್ಣಾಯಕವಾಗಿದೆ. ಐಐಟಿಗಳು ಈ ಎರಡೂ ವಿಷಯಗಳಲ್ಲಿ ತಮ್ಮ ವಿದ್ಯಾರ್ಥಿಗಳನ್ನು ಪರಿಣಿತರನ್ನಾಗಿಸಿವೆ ಹಾಗೆಯೇ ದೇಶಾದ್ಯಂತ ಹಲವಾರು ಶಾಲೆಗಳು ಆವಿಷ್ಜಾರ ಮತ್ತು ಹೊಸ ತಂತ್ರಜ್ಞಾನಗಳ ಸಂಶೋಧನೆಗಾಗಿ ಪೂರಕ ವಾತಾವರಣವನ್ನು ಸಕ್ರೀಯವಾಗಿ ಸೃಷ್ಟಿಸಿವೆ ಎಂದು ಕೂಡ ಅವರು ಹೇಳಿದರು.

ಐಐಟಿ ದೆಹಲಿಯ 40 ವರ್ಷಗಳ ಹಳೆಯದಾದ ಗ್ರಾಮೀಣಾಭಿವೃದ್ಧಿ ಮತ್ತು ತಂತ್ರಜ್ಞಾನ ಕೇಂದ್ರವು ಗ್ರಾಮೀಣ ಜೀವನ ಉನ್ನತಿಗಾಗಿ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ನಿರ್ಣಾಯಕ ಪಾತ್ರ ವಹಿಸುತ್ತಿದೆ. ಇದರಿಂದ ತಂತ್ರಜ್ಞಾನದ ಲಾಭ ಪ್ರತಿಯೊಬ್ಬರಿಗೂ ತಲುಪಲಿದೆ ಎಂದು ಕೂಡ ಶ್ರೀ ಧೋತ್ರೆ ಹೇಳಿದರು. ದೇಶದ ಯುವಜನತೆ ಆವಿಷ್ಜಾರ ಮತ್ತು ಉದ್ಯಮಶೀಲತೆಯತ್ತ ಹೆಚ್ಚು ಒಲವು ತೋರುತ್ತಿದ್ದಾರೆ ಎಂದು ಅವರು ಹೇಳಿದರು. ಅವರಿಗೆ ಸೂಕ್ತ ಪರಿಸರ, ಸಂಪನ್ಮೂಲಗಳು ಮತ್ತು ಪ್ರೋತ್ಸಾಹವನ್ನು ಮಾತ್ರ ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ಐಐಟಿಗಳು ಬಹಳ ಮಹತ್ವದ ಪಾತ್ರ ನಿರ್ವಹಿಸಿವೆ ಎಂದು ಅವರು ಹೇಳಿದರು.

ಐಐಟಿ ದೆಹಲಿ ರಿಯಲ್ ಟೈಂ ಪಿ ಸಿ ಆರ್ ಆಧಾರಿತ ಡಯಾಗ್ನಾಸ್ಟಿಕ್ ಗಾಗಿ ಐಸಿಎಆರ್ ನಿಂದ ಅನುಮೋದನೆ ಪಡೆದ ಮೊದಲ ಶೈಕ್ಷಣಿಕ ಸಂಸ್ಥೆಯಾಗಿದೆ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಖರೆ ಅವರು ಮಾಹಿತಿ ನೀಡಿದರು. ಅಲ್ಲದೆ ಕೋವಿಡ್ – 19 ಕ್ಕಾಗಿ ಐಸಿಎಆರ್ ನಿಂದ ಅನುಮೋದನೆ ಪಡೆದ ಪ್ರಥಮ ಶೋಧ ಮುಕ್ತ ಪರೀಕ್ಷೆಯೂ ಇದಾಗಿದೆ, ಸರ್ಕಾರದ ವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ಇದು 100% ಸೂಕ್ಷ್ಮತೆ ಮತ್ತು ನಿರ್ದಿಷ್ಟತೆ ಹೊಂದಿದೆ ಎಂದು ಮೌಲ್ಯಮಾಪನ ಮಾಡಲಾಗಿದೆ ಎಂದೂ ಅವರು ಹೇಳಿದರು. ಸಮಾಜ ಸುಧಾರಣೆಗಾಗಿ ಐಐಟಿ ದೆಹಲಿ ಮಾಡುತ್ತಿರುವ ಪ್ರಯತ್ನಗಳನ್ನು ಶ್ರೀ ಖರೆ ಶ್ಲಾಘಿಸಿದರು ಮತ್ತು ಅವರ ಭವಿಷ್ಯದ ಪ್ರಯತ್ನಗಳಲ್ಲಿ ಯಶಸ್ಸು ಲಭಿಸಲಿ ಎಂದು ಹಾರೈಸಿದರು.            

ಐಐಟಿ ದೆಹಲಿ ಕಡಿಮೆ ದರದ ಕಿಟ್ ನ ಅಭಿವೃದ್ಧಿ ಮತ್ತು ಉತ್ಪಾದನೆಗೆ ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಆರೋಗ್ಯ ಸಚಿವಾಲಯ ಹಾಗೂ ಐಸಿಎಂಆರ್ ನಿಂದ ದೊರೆತ ಸಹಕಾರಕ್ಕೆ ಐಐಟಿ ದೆಹಲಿಯ ನಿರ್ದೇಶಕರಾದ ಪ್ರೊ ವಿ ರಾಮಗೋಪಾಲ್ ರಾವ್ ಧನ್ಯವಾದಗಳನ್ನು ಸಲ್ಲಿಸಿದರು. ಕೊರೊನಾ ವೈರಾಣು ವಿರುದ್ಧದ ಹೋರಾಡಲು ನಮ್ಮ ದೇಶಕ್ಕೆ ಹಾಗೂ ವಿಶ್ವಕ್ಕೆ ಸಹಾಯವಾಗಲು ಕೋವಿಡ್ – 19 ಸಂಬಂಧಿತ ಸಂಶೋಧನೆ ಮತ್ತು ಅಭಿವೃದ್ಧಿಯತ್ತ ನಮ್ಮ ಸಂಶೋಧಕರು ಸತತ ಶ್ರಮಿಸುತ್ತಾರೆ ಎಂದು ಅವರು ಹೇಳಿದರು.

***



(Release ID: 1639514) Visitor Counter : 221