ಜಲ ಶಕ್ತಿ ಸಚಿವಾಲಯ

ರಾಜ್ಯದಲ್ಲಿ ಜಲ ಜೀವನ್ ಮಿಷನ್ ಅನುಷ್ಠಾನಕ್ಕೆ ಕರ್ನಾಟಕ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಕೇಂದ್ರ ಸಚಿವ ಶ್ರೀ ಶೆಖಾವತ್

Posted On: 15 JUN 2020 6:15PM by PIB Bengaluru

ರಾಜ್ಯದಲ್ಲಿ ಜಲ ಜೀವನ್ ಮಿಷನ್ ಅನುಷ್ಠಾನಕ್ಕೆ ಕರ್ನಾಟಕ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಕೇಂದ್ರ ಸಚಿವ ಶ್ರೀ ಶೆಖಾವತ್

 

ಕೇಂದ್ರ ಜಲಶಕ್ತಿ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರು, ಕೋವಿಡ್-19 ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಿರುವುದಕ್ಕೆ ಕರ್ನಾಟಕದ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅವರು ರಾಜ್ಯದಲ್ಲಿ ಜಲ ಜೀವನ್ ಮಿಷನ್(ಜೆಜೆಎಂ) ಅನುಷ್ಠಾನ ಸಂಬಂಧ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. 2024 ವೇಳೆಗೆ ದೇಶಾದ್ಯಂತ ಪ್ರತಿಯೊಂದು ಕುಟುಂಬದ ಪ್ರತಿಯೊಬ್ಬ ವ್ಯಕ್ತಿಗೂ ಪ್ರತಿ ದಿನ ತಲಾ 55 ಲೀಟರ್ ಶುದ್ಧ ನೀರು ಒದಗಿಸುವ ಗುರಿ ಹೊಂದಿರುವ ಪ್ರಧಾನಮಂತ್ರಿಗಳ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಜಲ ಜೀವನ್ ಮಿಷನ್ಅನುಷ್ಠಾನಕ್ಕೆ ಜಲಶಕ್ತಿ ಸಚಿವಾಲಯ, ರಾಜ್ಯಗಳ ಜೊತೆಗೂಡಿ ನೀಲನಕ್ಷೆಯನ್ನು ಸಿದ್ಧಪಡಿಸುತ್ತಿದೆ. ಜೆಜೆಎಂ ಅಡಿಯಲ್ಲಿ ಗ್ರಾಮೀಣ ಜನರ ಜೀವನಮಟ್ಟ ಸುಧಾರಿಸುವ ಜೊತೆಗೆ ವಿಶೇಷವಾಗಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಪರಿಶ್ರಮವನ್ನು ತಗ್ಗಿಸುವ ಗುರಿ ಹೊಂದಲಾಗಿದೆ.

ಕರ್ನಾಟಕ 2022-23 ವೇಳೆಗೆ ಶೇ.100ರಷ್ಟು ಕುಟುಂಬಗಳನ್ನು ತಲುಪುವ ಗುರಿ ಹೊಂದಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು ಕರ್ನಾಟಕದ ಮುಖ್ಯಮಂತ್ರಿಗಳನ್ನು ಅಭಿನಂದಿಸಿದ್ದಾರೆ ಮತ್ತು ರಾಜ್ಯದಲ್ಲಿ ಗ್ರಾಮೀಣ ಪ್ರದೇಶದ ಪ್ರತಿಯೊಂದು ಕುಟುಂಬಕ್ಕೂ ನಲ್ಲಿ (ಕೊಳಾಯಿ) ನೀರು ಸಂಪರ್ಕ ಒದಗಿಸಲು ತ್ವರಿತವಾಗಿ ಜೆಜೆಎಂ ಅನುಷ್ಠಾನಗೊಳಿಸುವಂತೆ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಒಟ್ಟು 89.61 ಲಕ್ಷ ಗ್ರಾಮೀಣ ಕುಟುಂಬಗಳಿದ್ದು, ಪೈಕಿ ಈಗಾಗಲೇ 24.41 ಲಕ್ಷ ಕುಟುಂಬಗಳಿಗೆ ನಲ್ಲಿ ನೀರು ಸಂಪರ್ಕ(ಎಫ್ಎಚ್ ಟಿಸಿಎಸ್) ಒದಗಿಸಲಾಗಿದೆ. 2019-20ನೇ ಸಾಲಿನಲ್ಲಿ ಕೇವಲ 22,133 ನಲ್ಲಿ ನೀರಿನ ಸಂಪರ್ಕಗಳನ್ನು ಕಲ್ಪಿಸಲಾಗಿದೆ. 2020-21ನೇ ಸಾಲಿನಲ್ಲಿ ರಾಜ್ಯ, 23.57 ಲಕ್ಷ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕ ಒದಗಿಸುವ ಗುರಿ ಹೊಂದಿದೆ. ವರ್ಷ ಜೋಡಣೆ (ರೆಟ್ರೋಫಿಟಿಂಗ್) ಮತ್ತು ಆಗ್ಯುಮೆಂಟೇಶನ್ (ಅಭಿವೃದ್ಧಿ) ಕಾಮಗಾರಿಗಳಡಿ ಹಾಲಿ ಇರುವ 3,139 ನೀರಿನ ಕೊಳವೆ ಪೂರೈಕೆ ವ್ಯವಸ್ಥೆಯನ್ನು ಉನ್ನತೀಕರಿಸಲು ಮೂಲಕ 23.57 ಲಕ್ಷ ಕುಟುಂಬಗಳಿಗೆ ನೀರಿನ ಸಂಪರ್ಕ ಒದಗಿಸಲು ಉದ್ದೇಶಿಸಲಾಗಿದ್ದು, ಅದಕ್ಕೆ ಒತ್ತು ನೀಡುವಂತೆ ಕೇಂದ್ರ ಸಚಿವರು ಹೇಳಿದ್ದಾರೆ. ಅದಕ್ಕಾಗಿ ಸಮರೋಪಾದಿಯಲ್ಲಿ ಅಭಿಯಾನಕೈಗೊಳ್ಳುವಂತೆ ಕೇಂದ್ರ ಸಚಿವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ಮೂಲಕ ಬಡವರು ಮತ್ತು ದುರ್ಬಲ ವರ್ಗದ ಜನರಿಗೆ ನಲ್ಲಿ ನೀರು ಸಂಪರ್ಕ ಕಲ್ಪಿಸುವ ಉದ್ದೇಶ ಈಡೇರಲಿದೆ.

ಕೇಂದ್ರ ಸರ್ಕಾರ 2020-21ನೇ ಸಾಲಿನಲ್ಲಿ ಕರ್ನಾಟಕದಲ್ಲಿ ಜಲ ಜೀವನ್ ಮಿಷನ್ ಅನುಷ್ಠಾನಕ್ಕೆ 1,189.40 ಕೋಟಿ ರೂ. ನಿಧಿ ಹಂಚಿಕೆ ಮಾಡಿದೆ. 2019-20ನೇ ಸಾಲಿನಲ್ಲಿ 546.06 ಕೋಟಿ ರೂ. ನೀಡಲಾಗಿತ್ತು. ಮೊತ್ತಕ್ಕೆ ಹೋಲಿಸಿದರೆ ವರ್ಷ ಗಣನೀಯವಾಗಿ ನಿಧಿ ಹೆಚ್ಚಳ ಮಾಡಲಾಗಿದೆ. ಆರಂಭದಲ್ಲಿ ರಾಜ್ಯದಲ್ಲಿ ಯೋಜನೆಯಡಿ 80.44 ಕೋಟಿ ರೂ. ಹಣ ಬಾಕಿ ಇತ್ತು ಮತ್ತು ಅದರೊಂದಿಗೆ ವರ್ಷದ ಹಂಚಿಕೆ 1,189.40 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಇದಕ್ಕೆ ಸಮನಾದ ರಾಜ್ಯದ ಪಾಲು ಒಟ್ಟು 2,734.03 ಕೋಟಿ ರೂ. ಲಭ್ಯವಿದ್ದು, ಕರ್ನಾಟಕದಲ್ಲಿ ಜಲ ಜೀವನ್ ಮಿಷನ್ ಅನುಷ್ಠಾನಕ್ಕೆ ಹಣ ಬಳಕೆ ಮಾಡಲಾಗುವುದು. ಭೌತಿಕ ಫಲಿತಾಂಶಗಳು ಅಂದರೆ ನೀರಿನ ಸಂಪರ್ಕಗಳನ್ನು ಒದಗಿಸುವುದು ಮತ್ತು ಅದಕ್ಕೆ ಅನುರೂಪವಾದ ಆರ್ಥಿಕ ಪ್ರಗತಿ ಸೇರಿ ಒಟ್ಟಾರೆ ತ್ವರಿತ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ರಾಜ್ಯಕ್ಕೆ ಮನವಿ ಮಾಡಲಾಗಿದೆ. ಮೂಲಕ ರಾಜ್ಯ ತನ್ನ ಸಾಧನೆ ಆಧರಿಸಿ, ಹೆಚ್ಚುವರಿ ನಿಧಿಗಳನ್ನು ಪಡೆದುಕೊಳ್ಳಲು ಅವಕಾಶವಿದೆ. ನಿಧಿಯ ನಿಗಾ ವಹಿಸಲು ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ(ಪಿಎಫ್ಎಂಎಸ್) ಕಡ್ಡಾಯವಾಗಿ ಅಳವಡಿಸಿಕೊಳ್ಳುವುದನ್ನು ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ.

ನೀರಿನ ಗುಣಮಟ್ಟದ ತೊಂದರೆ ಇರುವ ಪ್ರದೇಶಗಳಿಗೆ ಕೊಳವೆ ಮಾರ್ಗದ ಮೂಲಕ ನೀರನ್ನು ಒದಗಿಸುವ ಪ್ರಾಮುಖ್ಯತೆಯನ್ನು ಪ್ರಸ್ತಾಪಿಸಿರುವ ಸಚಿವರು ಆರ್ಸೆನಿಕ್ ಮತ್ತು ಫ್ಲೋರೈಡ್ ನಿಂದ ಬಾಧಿತವಾಗಿರುವ 685 ಜನವಸತಿಗಳಲ್ಲಿರುವ 3.60 ಲಕ್ಷ ಜನಸಂಖ್ಯೆಗೆ ಶುದ್ಧ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದಾರೆ. ಯೋಜನೆ ಅಡಿ ನೀರಿನ ಕೊರತೆ ಇರುವ ಪ್ರದೇಶಗಳು, ಆಶೋತ್ತರ ಜಿಲ್ಲೆಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳು ಮತ್ತು ಸಂಸದರ ಆದರ್ಶ ಗ್ರಾಮ ಯೋಜನೆ (ಎಸ್ಎಜಿವೈ) ಅಡಿಯಲ್ಲಿ ಬರುವ ಗ್ರಾಮಗಳಿಗೆ ಹೆಚ್ಚಿನ ಒತ್ತು ನೀಡಬೇಕೆಂದು ಸೂಚಿಸಿದ್ದಾರೆ.

ಕೇಂದ್ರ ಸಚಿವರು, ಪಂಚಾಯತ್ ರಾಜ್ ಸಂಸ್ಥೆಗಳಿಗೆ 15ನೇ ಹಣಕಾಸು ಆಯೋಗದ ಅನುದಾನದಡಿ ನೀಡಲಾಗಿರುವ ನಿಧಿಯನ್ನು ನ್ಯಾಯಯುತವಾಗಿ ಬಳಸಿಕೊಳ್ಳಬೇಕೆಂದು ಪ್ರತಿಪಾದಿಸಿರುವ ಕೇಂದ್ರ ಸಚಿವರು, ಹಣದಲ್ಲಿ ಶೇ.50ರಷ್ಟನ್ನು ನೀರು ಮತ್ತು ನೈರ್ಮಲೀಕರಣಕ್ಕೆ ವಿನಿಯೋಗಿಸಬೇಕೆಂದು ಹೇಳಿದ್ದಾರೆ. ರಾಜ್ಯ 2020-21ನೇ ಸಾಲಿನಲ್ಲಿ ಹಣಕಾಸು ಆಯೋಗದ ಅನುದಾನದಡಿ 3,217 ಕೋಟಿ ರೂ.ಗಳನ್ನು ಸ್ವೀಕರಿಸಲಿದೆ. ಮನ್ರೇಗಾ, ಎಸ್ ಬಿಎಂ(ಜಿ), ಪಂಚಾಯತ್ ರಾಜ್ ಸಂಸ್ಥೆಗಳಿಗೆ 15ನೇ ಹಣಕಾಸು ಆಯೋಗದ ಜಿಲ್ಲಾ ಖನಿಜ ಅಭಿವೃದ್ಧಿ ನಿಧಿ, ಸಿಎಎಂಪಿಎ, ಸಿಎಸ್ಆರ್ ನಿಧಿ, ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಇತ್ಯಾದಿಗಳನ್ನು ಗ್ರಾಮ ಮಟ್ಟದಲ್ಲಿ ಮತ್ತು ಗ್ರಾಮೀಣ ಕ್ರಿಯಾ ಯೋಜನೆ(ವಿಎಪಿ)ಯನ್ನು ಪ್ರತಿ ಗ್ರಾಮದಲ್ಲಿ ಸಿದ್ಧಪಡಿಸಬೇಕು ಮತ್ತು ಎಲ್ಲ ನಿಧಿಗಳನ್ನು ಒಗ್ಗೂಡಿಸಿಕೊಂಡು ಜಲಸಂರಕ್ಷಣೆ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಮೂಲಕ ಜಲ ಮೂಲ ಬಲವರ್ಧನೆ ಮತ್ತು ಕುಡಿಯುವ ನೀರಿನ ಭದ್ರತೆ ಖಾತ್ರಿಪಡಿಸಬೇಕು ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

ಅಲ್ಲದೆ, ಕೇಂದ್ರ ಸಚಿವರು, ಸ್ಥಳೀಯ ಗ್ರಾಮಗಳ ಸಮುದಾಯಗಳು/ಗ್ರಾಮ ಪಂಚಾಯಿತಿ ಅಥವಾ ಯೋಜನೆ ಅನುಷ್ಠಾನ ನಿರ್ವಹಣೆ, ಕಾರ್ಯಾಚರಣೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ನೀರಿನ ಪೂರೈಕೆ ವ್ಯವಸ್ಥೆಯಲ್ಲಿ ಸುದೀರ್ಘ ಸುಸ್ಥಿರತೆಯನ್ನು ಖಾತ್ರಿಪಡಿಸಬೇಕೆಂದು ಪ್ರತಿಪಾದಿಸಿದ್ದಾರೆ. ಎಲ್ಲ ಗ್ರಾಮಗಳಲ್ಲೂ ಐಇಸಿ ಅಭಿಯಾನಗಳ ಮೂಲಕ ಸಮುದಾಯವನ್ನು ಒಗ್ಗೂಡಿಸಿ ನಿಜವಾದ ಅರ್ಥದಲ್ಲಿ ಜಲ ಜೀವನ್ ಮಿಷನ್ ಅನ್ನು ಜನಾಂದೋಲನವನ್ನಾಗಿ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಗ್ರಾಮಗಳಲ್ಲಿ ನೀರಿನ ಪೂರೈಕೆ ಮೂಲಸೌಕರ್ಯ ವೃದ್ಧಿ ಮತ್ತು ಅವುಗಳ ಕಾರ್ಯಾಚರಣೆ ಹಾಗೂ ನಿರ್ವಹಣೆಗೆ ಮಹಿಳಾ ಸ್ವಸಹಾಯ ಗುಂಪುಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳನ್ನು ಬಳಸಿಕೊಳ್ಳಲು ಉದ್ದೇಶಿಸಿದೆ.

ಪ್ರಸಕ್ತ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು, ಮುಖ್ಯಮಂತ್ರಿಗಳಿಗೆ ತಕ್ಷಣವೇ ನೀರಿನ ಪೂರೈಕೆ ಮತ್ತು ನೀರಿನ ಸಂರಕ್ಷಣೆ ಕಾರ್ಯವನ್ನು ಗ್ರಾಮ ಮಟ್ಟದಲ್ಲಿ ಕೈಗೆತ್ತಿಕೊಳ್ಳುವಂತೆ ಸೂಚಿಸಿದ್ದಾರೆ. ಮೂಲಕ ಕೌಶಲ್ಯ ಹೊಂದಿದ/ಅಲ್ಪ ಕೌಶಲ್ಯದ ವಲಸೆ ಕಾರ್ಮಿಕರಿಗೆ ಜೀವನೋಪಾಯ ಅವಕಾಶ ಕಲ್ಪಿಸುವುದಲ್ಲದೆ, ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕು ಮತ್ತು ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸಬೇಕು ಎಂದು ಮನವಿ ಮಾಡಿದ್ದಾರೆ.

ಕರ್ನಾಟಕವನ್ನು ಶೇ. 100ರಷ್ಟು ಎಫ್ಎಚ್ ಟಿಸಿ ರಾಜ್ಯವನ್ನಾಗಿ ಮಾಡಲು ಕರ್ನಾಟಕದಲ್ಲಿ ಜಲ ಜೀವನ್ ಮಿಷನ್ ಅನುಷ್ಠಾನಕ್ಕೆ ಮುಖ್ಯಮಂತ್ರಿಗಳಿಗೆ ಬೇಷರತ್ ಬೆಂಬಲದ ಭರವಸೆಯನ್ನು ಸಚಿವರು ನೀಡಿದ್ದಾರೆ. ಗ್ರಾಮೀಣ ಪ್ರದೇಶದ ಪ್ರತಿಯೊಂದು ಕುಟುಂಬಕ್ಕೂ ಅಗತ್ಯ ಪ್ರಮಾಣದ ಶುದ್ಧ ಕುಡಿಯುವ ನೀರು ಒದಗಿಸುವುದು ಮತ್ತು ನಿಗದಿತ ಗುಣಮಟ್ಟದ ಮತ್ತು ನಿರಂತರವಾಗಿ ಹಾಗೂ ದೀರ್ಘಕಾಲ ನೀರು ಪೂರೈಸುವ ಮಿಷನ್ ಉದ್ದೇಶವನ್ನು ಈಡೇರಿಸಲು ತ್ವರಿತವಾಗಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ಕೇಂದ್ರ ಜಲಶಕ್ತಿ ಸಚಿವರು ಮನವಿ ಮಾಡಿದ್ದಾರೆ.

***



(Release ID: 1631851) Visitor Counter : 248