ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ

ಭಾರತದಲ್ಲಿ ಅಗರಬತ್ತಿ ಮತ್ತು ಬಿದಿರಿನ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಬಿದಿರಿನ ಕಡ್ಡಿಗಳ ಮೇಲಣ ಆಮದು ಕರ ಹೆಚ್ಚಳ

Posted On: 11 JUN 2020 6:40PM by PIB Bengaluru

ಭಾರತದಲ್ಲಿ ಅಗರಬತ್ತಿ ಮತ್ತು ಬಿದಿರಿನ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಬಿದಿರಿನ ಕಡ್ಡಿಗಳ ಮೇಲಣ ಆಮದು ಕರ ಹೆಚ್ಚಳ

 

ಕೇಂದ್ರ ಸರಕಾರವು ಬಿದಿರಿನ ಕಡ್ಡಿಗಳ ಆಮದಿನ ಮೇಲಣ ತೆರಿಗೆಯನ್ನು 10 % ನಿಂದ 25 % ಗೆ ಏರಿಕೆ ಮಾಡಿರುವುದರಿಂದ ದೇಶದಲ್ಲಿ ಸ್ವಯಂ-ಉದ್ಯೋಗಗಳಿಗೆ ಹೊಸ ಅವಕಾಶಗಳು ಲಭಿಸಲಿವೆ . ನಿರ್ಧಾರವನ್ನು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು (ಕೆ.ವಿ..ಸಿ.) ಸ್ವಾಗತಿಸಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಮುಂದಿನ 8-10 ತಿಂಗಳುಗಳಲ್ಲಿ ಅಗರಬತ್ತಿ ಕ್ಷೇತ್ರದಲ್ಲಿ ಕನಿಷ್ಟ 1 ಲಕ್ಷ ಹೊಸ ಉದ್ಯೋಗಗಳು ನಿರ್ಮಾಣವಾಗಲಿವೆ, ಅಗರಬತ್ತಿ ಉದ್ಯಮ ಭಾರತದ ಗ್ರಾಮೋದ್ಯೋಗ ವಲಯದಲ್ಲಿ ಪ್ರಮುಖ ಚಟುವಟಿಕೆಯಾಗಿದೆ ಎಂದು ಉದ್ಯಮ ವಲಯದ ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ ಎಂದು ಹೇಳಿದೆ.

ಎಂ.ಎಸ್.ಎಂ.. ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರ ಪ್ರಯತ್ನದ ಫಲವಾಗಿ ಹಣಕಾಸು ಸಚಿವಾಲಯವು ನಿರ್ಧಾರವನ್ನು ಕೈಗೊಂಡಿದೆ. ಶ್ರೀ ನಿತಿನ್ ಗಡ್ಕರಿ ಅವರು ಭಾರೀ ಪ್ರಮಾಣದ ಆಮದನ್ನು ಪ್ರೋತ್ಸಾಹಿಸದಿರಲು ಬಿದಿರಿನ ಕಡ್ಡಿಗಳ ಮೇಲೆ ಆಮದು ತೆರಿಗೆಯನ್ನು ಹೆಚ್ಚಿಸುವಂತೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಕೋರಿದ್ದರು. ಚೀನಾ ಮತ್ತು ವಿಯೆಟ್ನಾಂಗಳಿಂದ ಬಿದಿರಿನ ಕಡ್ಡಿಗಳ ಭಾರೀ ಅಮದಿನಿಂದಾಗಿ ಭಾರತದಲ್ಲಿ ಭಾರೀ ಪ್ರಮಾಣದ ಉದ್ಯೋಗ ನಷ್ಟ ಉಂಟಾಗುತ್ತಿತ್ತು. ನಿರ್ಧಾರದಿಂದ ಭಾರತದಲ್ಲಿ ಹೊಸ ಅಗರಬತ್ತಿ ಕಡ್ಡಿಗಳ ತಯಾರಿಕಾ ಘಟಕಗಳ ಸ್ಥಾಪನೆಗೆ ಹಾದಿ ಸುಗಮವಾಗಲಿದೆ ಎಂದು ಕೆ.ವಿ..ಸಿ. ಹೇಳಿದೆ.

ಈಗ ಭಾರತದಲ್ಲಿ ಅಗರಬತ್ತಿಗಳ ಬಳಕೆ ದಿನಕ್ಕೆ 1490 ಟನ್ನುಗಳಷ್ಟಿದೆ ಆದರೆ 760 ಟನ್ನಿನಷ್ಟು ಮಾತ್ರ ಸ್ಥಳೀಯವಾಗಿ ಉತ್ಪಾದನೆಯಾಗುತ್ತಿದೆ. ಇದರಿಂದಾಗಿ ಬೇಡಿಕೆ ಮತ್ತು ಪೂರೈಕೆ ನಡುವಣ ಭಾರೀ ಅಂತರವಿದೆ, ಇದರಿಂದಾಗಿ ಕಚ್ಚಾ ಅಗರಬತ್ತಿಗಳನ್ನು ಬೃಹತ್ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗುತ್ತಿದೆ. ಎಂದು ಕೆ.ವಿ..ಸಿ.ಹೇಳಿದೆ. 2009 ರಲ್ಲಿ ಕಚ್ಚಾ ಅಗರಬತ್ತಿ ಆಮದು ಪ್ರಮಾಣ 2 % ಇತ್ತು, 2019 ರಲ್ಲಿ ಇದು 80 % ಗೇರಿದೆ.ಹಣಕಾಸು ವಿಷಯವನ್ನು ಗಣನೆಗೆ ತೆಗೆದುಕೊಂಡಾಗ 2009ರಲ್ಲಿ ಕಚ್ಚಾ ಅಗರಬತ್ತಿ ಆಮದು 31 ಕೋ. ರೂ.ಗಳಷ್ಟಿತ್ತು. 2011 ರಲ್ಲಿ ಆಮದು ಸುಂಕ 30% ನಿಂದ 10% ಗೆ ಇಳಿಕೆಯಾದುದರಿಂದ 2019 ವೇಳೆಗೆ ಆಮದು 546 ಕೋ.ರೂ.ಗಳಿಗೆ ಏರಿತು ಎಂದೂ ಅದು ಹೇಳಿದೆ. ಇದು ಭಾರತೀಯ ಅಗರಬತ್ತಿ ಉತ್ಪಾದಕರನ್ನು ಬಾಧಿಸಿತು ಮತ್ತು ಸುಮಾರು 25 % ಘಟಕಗಳು ಮುಚ್ಚುವಂತಾಯಿತುಎಂದೂ ಕೆ.ವಿ..ಸಿ. ಹೇಳಿದೆ.

ಆದುದರಿಂದ , ಖಾದಿ ಮತ್ತು ಗ್ರಾಮೋದ್ಯೋಗ ಕೈಗಾರಿಕಾ ಆಯೋಗದ (ಕೆ.ವಿ..ಸಿ.) ಕೋರಿಕೆಯೊಂದಿಗೆ, ವಾಣಿಜ್ಯ ಸಚಿವಾಲಯ 2019 ಆಗಸ್ಟ್ 31 ರಂದು ಕಚ್ಚಾ ಅಗರಬತ್ತಿಯ ಆಮದನ್ನು ನಿರ್ಬಂಧಿತ ವರ್ಗದಲ್ಲಿರಿಸಿತ್ತು. ಆಮದು ನಿರ್ಬಂಧಗಳು ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್ ಮತ್ತು ಹಲವು ಈಶಾನ್ಯ ರಾಜ್ಯಗಳ ಅಗರಬತ್ತಿ ಘಟಕಗಳಿಗೆ ಪುನಃಶ್ಚೇತನ ನೀಡಿದವು. ಇದರಿಂದ ಸ್ಥಳೀಯ ವ್ಯಾಪಾರಿಗಳು ಉರುಟು ಆಕಾರದ ಬಿದಿರಿನ ಕಡ್ಡಿಗಳನ್ನು ಕಚ್ಚಾ ಅಗರಬತ್ತಿ ಉತ್ಪಾದನೆಗೆ ಆಮದು ಮಾಡಿಕೊಳ್ಳತೊಡಗಿದವು. ಇದರಿಂದ 2018-19ರಲ್ಲಿ 210 ಕೋ.ರೂ.ಗಳಷ್ಟಿದ್ದ ಬಿದಿರಿನ ಕಡ್ಡಿಗಳ ಆಮದು 2019-20 ರಲ್ಲಿ 370 ಕೋ.ರೂ.ಗಳಿಗೇರಿತು.

ಕೆ. ವಿ..ಸಿ.ಅಧ್ಯಕ್ಷ ಶ್ರೀ ವಿನಯ ಕುಮಾರ್ ಸಕ್ಸೇನಾ ಅವರು ಒಂದು ನಿರ್ಧಾರವು ಭಾರತದಲ್ಲಿ ಅಗರ ಬತ್ತಿ ಮತ್ತು ಬಿದಿರು ಕೈಗಾರಿಕೆಯನ್ನು ಬಲಪಡಿಸಲಿದೆ ಎಂದಿದ್ದಾರೆ. ಭಾರತವು ವಿಶ್ವದಲ್ಲಿ ಬಿದಿರು ಉತ್ಪಾದನೆಯಲ್ಲಿ ಎರಡನೆ ಸ್ಥಾನದಲ್ಲಿದೆ, ದುರ್ದೈವವೆಂದರೆ ಅದು ಬಿದಿರಿನ ಎರಡನೇ ದೊಡ್ದ ಆಮದುಗಾರ ಕೂಡಾ, ಬಿದಿರಿನ ಕಡ್ಡಿಗಳ ಭಾರೀ ಆಮದು ತಡೆಗೆ ಆಮದು ಸುಂಕವನ್ನು 10 % ನಿಂದ 25 % ಗೇರಿಸಿರುವುದರಿಂದ ಚೀನಾದಿಂದ ಆಮದು ಕಡಿಮೆಯಾಗಿ ಸ್ಥಳೀಯವಾಗಿ ಅಗರಬತ್ತಿ ಉತ್ಪಾದನೆ ಮತ್ತು ಬಿದಿರಿನ ಕೈಗಾರಿಕೆಗಳಿಗೆ ಉತ್ತೇಜನ ದೊರಕಲಿದೆ. ನಾವು ಅಗರಬತ್ತಿ ಉತ್ಪಾದನೆಯಲ್ಲಿ ಶೀಘ್ರವೇ ಆತ್ಮನಿರ್ಭರವಾಗಿ ಸಾವಿರಾರು ಹೊಸ ಉದ್ಯೋಗಗಳನ್ನು ನಿರ್ಮಾಣ ಮಾಡುವ ನಿರೀಕ್ಷೆಯನ್ನು ನಾವು ಹೊಂದಿದ್ದೇವೆ ಎಂದೂ ಸಕ್ಸೇನಾ ಹೇಳಿದ್ದಾರೆ.

ಅಗರಬತ್ತಿ ತಯಾರಿಕೆ ಗ್ರಾಮೋದ್ಯೋಗದ ಭಾಗವಾಗಿದ್ದು, ಇದಕ್ಕೆ ಬರೇ ಸಣ್ಣ ಬಂಡವಾಳ ಸಾಕಾಗುತ್ತದೆ. ಮತ್ತು ತಾಂತ್ರಿಕ ಪರಿಣತಿಯೂ ಬಹಳವೇನೂ ಬೇಕಾಗಿಲ್ಲ. ಕೈಗಾರಿಕೆಯು ಬಹುತೇಕ ಮಹಿಳಾ ಕಾರ್ಮಿಕರನ್ನು ಒಳಗೊಂಡಿರುತ್ತದೆ.ಕೋವಿಡೋತ್ತರ ಕಾಲದಲ್ಲಿ ಕೈಗಾರಿಕೋದ್ಯಮವು ವಲಸೆ ಕಾರ್ಮಿಕರಿಗೆ ವರವಾಗಿ ಒದಗಿ ಬರಲಿದೆ. ಅಗರಬತ್ತಿ ಉದ್ಯಮವು ಪ್ರಧಾನ ಮಂತ್ರಿ ಅವರ ಆತ್ಮನಿರ್ಭರ ಭಾರತಕನಸನ್ನು ಸಾಕಾರಗೊಳಿಸಲಿದೆ ಎಂದು ಸಕ್ಸೇನಾ ಹೇಳಿದ್ದಾರೆ.

ಭಾರತವು ಪ್ರತೀ ವರ್ಷ 14.6 ಮಿಲಿಯನ್ ಟನ್ ಬಿದಿರನ್ನು ಉತ್ಪಾದಿಸುತ್ತದೆ. ಸುಮಾರು 70,000 ರೈತರು ಬಿದಿರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಭಾರತದಲ್ಲಿ 136 ವಿವಿಧ ಜಾತಿಯ ಬಿದಿರುಗಳು ಕಂಡು ಬಂದರೂ ಅಗರ ಬತ್ತಿ ಕಡ್ಡಿಗಳಿಗೆ ಬಳಕೆಯಾಗುವುದು ಬ್ಯಾಂಬೂಸಾ ತುಲ್ಡಾ ಜಾತಿಯ ಬಿದಿರು. ಇದು ಈಶಾನ್ಯ ವಲಯದಲ್ಲಿ ಯಥೇಚ್ಚವಾಗಿ ಲಭ್ಯವಿದೆ. ಮುಂದಿನ 3-4 ವರ್ಷಗಳಲ್ಲಿ ಹೆಚ್ಚುತ್ತಿರುವ ಬಿದಿರಿನ ಬೇಡಿಕೆಯನ್ನು ಈಡೇರಿಸಲು ಮತ್ತು ಭಾರತವನ್ನು ಸ್ವಾವಲಂಬಿಯಾಗಿಸಲು ಬಿದಿರು ಪ್ಲಾಂಟೇಶನ್ ಆಂದೋಲನವನ್ನು ಕೆ.ವಿ..ಸಿ. ಯು ಆರಂಭಿಸಿದೆ.
 

***


(Release ID: 1631619) Visitor Counter : 359