ಪ್ರಧಾನ ಮಂತ್ರಿಯವರ ಕಛೇರಿ

ಫಿಲಿಪ್ಪೀನ್ಸ್ ಅಧ್ಯಕ್ಷರು ಮತ್ತು ಪ್ರಧಾನಿ ನಡುವೆ ದೂರವಾಣಿ ಸಂಭಾಷಣೆ

Posted On: 09 JUN 2020 7:32PM by PIB Bengaluru

ಫಿಲಿಪ್ಪೀನ್ಸ್ ಅಧ್ಯಕ್ಷರು ಮತ್ತು ಪ್ರಧಾನಿ ನಡುವೆ ದೂರವಾಣಿ ಸಂಭಾಷಣೆ

 

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಫಿಲಿಪ್ಪೀನ್ಸ್ ಅಧ್ಯಕ್ಷ ಘನತೆವೆತ್ತ ರೋಡ್ರಿಗೋ ದುತೇರ್ಟೆ ಅವರೊಂದಿಗೆಇಂದು ದೂರವಾಣಿ ಸಂಭಾಷಣೆ ನಡೆಸಿ, ಕೋವಿಡ್ -19 ಸಾಂಕ್ರಾಮಿಕದಿಂದ ತಲೆದೋರಿರುವ ಸವಾಲುಗಳನ್ನು ಎದುರಿಸಲು ಎರಡೂ ಸರ್ಕಾರಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಿದರು.

ಆರೋಗ್ಯದ ಬಿಕ್ಕಟ್ಟಿನ ಸಂದರ್ಭದಲ್ಲಿ ಪರಸ್ಪರರ ಭೂಭಾಗದಲ್ಲಿದ್ದ ತಮ್ಮ ನಾಗರಿಕರ ಕಲ್ಯಾಣವನ್ನು ಖಾತ್ರಿಪಡಿಸಲು ಮತ್ತು ಅವರು ಮನೆಗೆ ಮರಳಲು ಸಹಕಾರ ನೀಡಿದ್ದಕ್ಕಾಗಿ ಇಬ್ಬರೂ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದರು. ಫಿಲಿಪ್ಪೀನ್ಸ್ ಗೆ ಅಗತ್ಯವಾದ ಔಷಧ ಉತ್ಪನ್ನಗಳ ಪೂರೈಕೆಯನ್ನು ನಿರ್ವಹಿಸಲು ಭಾರತ ಕೈಗೊಂಡ ಕ್ರಮಗಳನ್ನು ಫಿಲಿಪ್ಪೀನ್ಸ್ ಅಧ್ಯಕ್ಷರು ಶ್ಲಾಘಿಸಿದರು.

ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಫಿಲಿಪ್ಪೀನ್ಸ್ ಅನ್ನು ಬೆಂಬಲಿಸುವ ಭಾರತದ ಬದ್ಧತೆಯನ್ನು ಪ್ರಧಾನಿಯವರು ಅಧ್ಯಕ್ಷ ದುತೇರ್ಟೆ ಅವರಿಗೆ ಭರವಸೆ ನೀಡಿದರು ಮತ್ತು ಸಂಪೂರ್ಣ ಮಾನವ ಕುಲದ ಲಾಭಕ್ಕಾಗಿ ಕೈಗೆಟುಕುವ ದರದಲ್ಲಿ ಔಷಧ ಉತ್ಪನ್ನಗಳನ್ನು ಮತ್ತು ಲಸಿಕೆ ದೊರೆತ ನಂತರ ಅದನ್ನೂ ತಯಾರಿಸಲು ಭಾರತದ ಸುಸ್ಥಾಪಿತ ಸಾಮರ್ಥ್ಯದೊಂದಿಗೆ ನಿಯೋಜಿಸಲಾಗುವುದು ಎಂದು ಒತ್ತಿ ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ ರಕ್ಷಣಾ ಸಹಕಾರ ಸೇರಿದಂತೆ ಎಲ್ಲ ವಿಚಾರಗಳಲ್ಲೂ ಕಾಣುತ್ತಿರುವ ದ್ವಿಪಕ್ಷೀಯ ಬಾಂಧವ್ಯದ ಪ್ರಗತಿಯ ಬಗ್ಗೆ ನಾಯಕರು ತೃಪ್ತಿ ವ್ಯಕ್ತಪಡಿಸಿದರುಭಾರತವು ಫಿಲಿಪ್ಪೀನ್ಸ್ ಅನ್ನು ಭಾರತ-ಫೆಸಿಫಿಕ್ ವಲಯದಲ್ಲಿ ಪ್ರಮುಖ ಸಹಯೋಗಿ ಎಂದು ಕಾಣುವುದಾಗಿ ಪ್ರಧಾನಿ ಪ್ರತಿಪಾದಿಸಿದರು.

ಪ್ರಧಾನಿ ಅವರು ಘನತೆವೆತ್ತ ಅಧ್ಯಕ್ಷ ದುತೇರ್ಟೆ ಅವರಿಗೆ ಮತ್ತು ಫಿಲಿಪ್ಪೀನ್ಸ್ ಜನರಿಗೆ ಮುಂಬರುವ ಫಿಲಿಪ್ಪೀನ್ಸ್ ರಾಷ್ಟ್ರೀಯ ದಿನದ ಶುಭ ಕೋರಿದರು.

***


(Release ID: 1630582) Visitor Counter : 235