ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಕೇಂದ್ರ ಎಚ್ ಆರ್ ಡಿ ಸಚಿವರಿಂದ ವೆಬಿನಾರ್ ಮೂಲಕ 45,000 ಉನ್ನತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಜೊತೆ ಸಮಾಲೋಚನೆ
Posted On:
28 MAY 2020 7:37PM by PIB Bengaluru
ಕೇಂದ್ರ ಎಚ್ ಆರ್ ಡಿ ಸಚಿವರಿಂದ ವೆಬಿನಾರ್ ಮೂಲಕ 45,000 ಉನ್ನತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಜೊತೆ ಸಮಾಲೋಚನೆ
ನ್ಯಾಕ್ ನ ಪ್ರಮಾಣೀಕರಣ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಶ್ರೀ ನಿಶಾಂಕ್ ಕರೆ
ಕೋವಿಡ್-19 ಹಿನ್ನೆಲೆಯಲ್ಲಿ ವಿಶೇಷ ಸನ್ನಿವೇಶ ಪರಿಗಣಿಸಿ ಎಲ್ಲ ವಿಶ್ವ ವಿದ್ಯಾಲಯಗಳು ವಿದ್ಯಾರ್ಥಿಗಳ ನಾನಾ ಸಮಸ್ಯೆ ಬಗೆಹರಿಸಲು ವಿಶೇಷ ಕೋಶಗಳನ್ನು ರಚಿಸಬೇಕು - ಶ್ರೀ ನಿಶಾಂಕ್
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ನಿನ್ನೆ ಬೆಂಗಳೂರಿನ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಪ್ರಮಾಣೀಕರಣ ಮಂಡಳಿ(ನ್ಯಾಕ್) ಆಯೋಜಿಸಿದ್ದ ವೆಬಿನಾರ್ ಮೂಲಕ ದೇಶಾದ್ಯಂತ ಸುಮಾರು 45,000 ಸಾವಿರಕ್ಕೂ ಅಧಿಕ ಉನ್ನತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿದರು. ಶೈಕ್ಷಣಿಕ ತಜ್ಞರು, ಉಪಕುಲಪತಿಗಳು/ರಿಜಿಸ್ಟ್ರಾರ್ ಗಳು/ಪ್ರೊಫೆಸರ್ ಗಳು/ಐಕ್ಯೂಎಸಿ ಮುಖ್ಯಸ್ಥರು/ ಪ್ರಾಂಶುಪಾಲರುಗಳು/ದೇಶಾದ್ಯಂತ ಬೋಧಕರೂ ಸೇರಿದಂತೆ ಅಪಾರ ಶಿಕ್ಷಣ ವರ್ಗದವರನ್ನುದ್ದೇಶಿಸಿ ಸಚಿವರು ಮಾತನಾಡಿದರು ಮತ್ತು ಸಮಾಲೋಚಿಸಿದರು.
ಇಂತಹ ಸಾಂಕ್ರಾಮಿಕದ ವೇಳೆ ನ್ಯಾಕ್ ಕೈಗೊಂಡಿರುವ ಉಪಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀ ಪೋಖ್ರಿಯಾಲ್, ದೇಶದಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳು ಈ ಪ್ರಸಕ್ತ ಸ್ಥಿತಿಯನ್ನು ಅವಕಾಶವನ್ನಾಗಿ ಪರಿಗಣಿಸಿ, ವ್ಯವಸ್ಥೆಯಲ್ಲಿನ ತಮ್ಮ ಇತಿಮಿತಿಗಳಿಂದ ಹೊರ ಬರಬೇಕು ಎಂದರು. ಅವರು ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು, ಪೋಷಕರು, ಆನ್ ಲೈನ್ ಪದ್ಧತಿಗೆ ಬದಲಾಗಬೇಕು ಮತ್ತು ಇದರಿಂದ ವಿದ್ಯಾರ್ಥಿಗಳ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಅವಧಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು. ಭಾರತದಲ್ಲಿ ಆನ್ ಲೈನ್ ವ್ಯವಸ್ಥೆ ಇನ್ನಷ್ಟು ಸುಧಾರಿಸುವ ತುರ್ತು ಅಗತ್ಯವಿದೆ ಎಂದು ಹೇಳಿದ ಅವರು, ಗ್ರಾಮೀಣ ಪ್ರದೇಶಗಳಿಗೂ ಸಹ ಆನ್ ಲೈನ್ ಶಿಕ್ಷಣ ತಲುಪುವಂತೆ ಮಾಡಲು ಶಿಕ್ಷಣ ತಜ್ಞರು ಕೊಡುಗೆ ನೀಡಬೇಕು ಎಂದು ಹೇಳಿದರು.
ಸುಮಾರು ಒಂದು ಗಂಟೆಗೂ ಅಧಿಕ ಕಾಲ ನಡೆದ ಸಂವಾದ ಮತ್ತು ಭಾಷಣದಲ್ಲಿ ಕೇಂದ್ರ ಸಚಿವರು, ಶೈಕ್ಷಣಿಕ ಕ್ಯಾಲೆಂಡರ್, ಆನ್ ಲೈನ್ ಶಿಕ್ಷಣ, ಪರೀಕ್ಷೆಗಳು, ಶುಲ್ಕ, ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ, ವಿದ್ಯಾರ್ಥಿಗಳ ಸಮಸ್ಯೆಗಳು, ಫೆಲೋಶಿಪ್ ಗಳು, ನೀಟ್ ಪ್ರವೇಶ ಪರೀಕ್ಷೆಗಳು ಇತ್ಯಾದಿ ಸೇರಿ ನಾನಾ ವಿಷಯಗಳ ಕುರಿತು ಬೆಳಕು ಚೆಲ್ಲಿದರು ಮತ್ತು ಆತಂಕಗಳನ್ನು ನಿವಾರಿಸಿದರು. ಸಾಂಕ್ರಾಮಿಕದ ಈ ಸಮಯದಲ್ಲಿ ಸರ್ಕಾರ ಕೈಗೊಂಡಿರುವ ಸ್ವಯಂಪ್ರಭಾ, ದೀಕ್ಷಾರಂಭ, ಪರಾಮರ್ಶ್ ಮತ್ತು ಇತರೆ ವಿಶೇಷ ಉಪಕ್ರಮಗಳ ಕುರಿತು ಅವರು ವಿವರಿಸಿದರು. ಅಲ್ಲದೆ ಅವರು ನ್ಯಾಕ್ ಕೈಗೊಂಡಿರುವ ಪ್ರಮಾಣೀಕರಣ ಪ್ರಕ್ರಿಯೆಲ್ಲಿ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳು ಭಾಗವಹಿಸುವಂತೆ ಕರೆ ನೀಡಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉನ್ನತ ಶಿಕ್ಷಣ ಸಂಸ್ಥೆಗಳ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ ಮತ್ತು ವಿದ್ಯಾರ್ಥಿ ಸಮುದಾಯಕ್ಕೆ ಶೈಕ್ಷಣಿಕ ಚಟುವಟಿಕೆಗಳನ್ನು ಹೆಚ್ಚಿಸಲು ಎಲ್ಲ ನೆರವು ನೀಡುವ ಭರವಸೆ ನೀಡಿದ್ದಾರೆ ಎಂದು ಪುನರುಚ್ಚರಿಸಿದರು.
ಕೋವಿಡ್-19ನಿಂದಾಗಿ ಉದ್ಭವಿಸಿರುವ ವಿಶೇಷ ಸನ್ನಿವೇಶದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಯಾಲೆಂಡರ್ ಮತ್ತು ಪರೀಕ್ಷೆಗಳ ಕುರಿತಂತೆ ಎದುರಾಗುವ ಸಮಸ್ಯೆಗಳ ನಿವಾರಣೆಗೆ ಮತ್ತು ಅವರನ್ನು ಸಬಲೀಕರಣಗೊಳಿಸಲು ವಿಶ್ವ ವಿದ್ಯಾಲಯಗಳು ವಿಶೇಷ ಕೋಶಗಳನ್ನು ರಚಿಸಬೇಕು ಎಂದು ಕೇಂದ್ರ ಸಚಿವರು ಕರೆ ನೀಡಿದರು. ವಿದ್ಯಾರ್ಥಿಗಳ ನಾನಾ ಸಮಸ್ಯೆಗಳನ್ನು ಬಗೆಹರಿಸಲು ಯುಜಿಸಿ ಮತ್ತು ಎನ್ ಸಿಇಆರ್ ಟಿ ಕಾರ್ಯಪಡೆಗಳನ್ನು ರಚಿಸಿವೆ ಎಂದು ಅವರು ಹೇಳಿದರು. ಇಂತಹ ಸಂಕಷ್ಟದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ನೆರವು ನೀಡಲು ಸಚಿವಾಲಯ ಬದ್ಧವಿದೆ ಎಂದು ಶ್ರೀ ನಿಶಾಂಕ್ ಭರವಸೆ ನೀಡಿದರು. ಸಂವಾದದ ವೇಳೆ ಕೇಂದ್ರ ಸಚಿವರು ಹೇಗೆ ಹೊಸ ಶೈಕ್ಷಣಿಕ ವರ್ಷ ಆರಂಭಿಸಬೇಕು ಎಂಬ ಪ್ರಕ್ರಿಯೆಯ ಕುರಿತು ಪ್ರಮುಖವಾಗಿ ಪ್ರಸ್ತಾಪಿಸಿ, ಅದೇ ವೇಳೆ ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ವಿಶೇಷವಾಗಿ ಒತ್ತಿ ಹೇಳಿದರು.
ಶ್ರೀ ನಿಶಾಂಕ್ ಅವರು, ಶೈಕ್ಷಣಿಕ ಸಮುದಾಯವನ್ನು ಕೊರೊನಾ ವಾರಿಯರ್ಸ್ ಎಂದು ಕರೆದು, ಇಂತಹ ಅಸಮಾನ್ಯ ಪರಿಸ್ಥಿತಿಯಲ್ಲಿ ಅವರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ದಿನವಿಡೀ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಯುಜಿಸಿ ಅಧ್ಯಕ್ಷ ಪ್ರೊಫೆಸರ್ ಡಿ.ಪಿ.ಸಿಂಗ್, ನ್ಯಾಕ್ ನ ಇಸಿ ಅಧ್ಯಕ್ಷ ಪ್ರೊಫೆಸರ್ ವೀರೇಂದರ್ ಎಸ್. ಚೌವ್ಹಾಣ್ ಉಪಸ್ಥಿತರಿದ್ದರು. ನ್ಯಾಕ್ ನ ನಿರ್ದೇಶಕ ಪ್ರೊ|| ಎಸ್.ಸಿ. ಶರ್ಮಾ ಮಾತನಾಡಿದರು ಮತ್ತು ಕಾರ್ಯಕ್ರಮದ ಸಂಯೋಜನೆ ನೋಡಿಕೊಂಡರು.
***
(Release ID: 1628017)
Visitor Counter : 288