ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ಡಾ. ಹರ್ಷವರ್ಧನ್ ಆಯ್ಕೆ
Posted On:
22 MAY 2020 5:39PM by PIB Bengaluru
ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ಡಾ. ಹರ್ಷವರ್ಧನ್ ಆಯ್ಕೆ
“ಆರ್ಥಿಕ ಸಾಧನೆ ಮತ್ತು ಮಾನವೀಯ ಸಾಮರ್ಥ್ಯಗಳ ವೃದ್ಧಿಗೆ ಆರೋಗ್ಯವೇ ಅತಿಮುಖ್ಯ”
ಸಾರ್ವಜನಿಕ ಆರೋಗ್ಯ ಬಾಧ್ಯತೆಗಳನ್ನು
ಪರಿಣಾಮಕಾರಿ, ದಕ್ಷತೆ ಹಾಗೂ ಸ್ಪಂದನಾತ್ಮಕವಾಗಿ ನಿರ್ವಹಿಸಲು ನಾನು ಬದ್ಧ: ಡಾ. ಹರ್ಷವರ್ಧನ್
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅವರು, 2020-21ನೇ ಸಾಲಿಗೆ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇಂದು ನಡೆದ ವರ್ಚುಯಲ್ ಆಡಳಿತ ಮಂಡಳಿಯ 147ನೇ ಅಧಿವೇಶನದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹರ್ಷವರ್ಧನ್ ಅವರು ಜಪಾನ್ ನ ಡಾ. ಹಿರೋಕಿ ನಾಕಟನಿ ಅವರ ಉತ್ತರಾಧಿಕಾರಿಯಾಗಿದ್ದಾರೆ.
ಕಾರ್ಯಕಾರಿ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಂಡ ಡಾ. ಹರ್ಷವರ್ಧನ್ ಅವರು, ಜಾಗತಿಕವಾಗಿ ಕೋವಿಡ್-19 ಸಾಂಕ್ರಾಮಿಕಕ್ಕೆ ಬಲಿಯಾದ ಲಕ್ಷಾಂತರ ಜನರಿಗೆ ಗೌರವ ನಮನ ಸಲ್ಲಿಸಿದರು. ಇದೇ ವೇಳೆ ಅವರು, ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಎಲ್ಲ ಆರೋಗ್ಯ ಕಾರ್ಯಕರ್ತರು ಹಾಗೂ ಇತರರಿಗೆ ಅವರ ಘನತೆ, ದೃಢತೆ ಮತ್ತು ಬದ್ಧತೆಗಾಗಿ ನೆರೆದಿರುವ ಎಲ್ಲ ಗಣ್ಯರು ಎದ್ದು ನಿಂತು ಗೌರವ ಸೂಚಿಸಬೇಕು ಎಂದು ಮನವಿ ಮಾಡಿದರು.
“ನಿಮ್ಮೆಲ್ಲರ ವಿಶ್ವಾಸ ಮತ್ತು ನಂಬಿಕೆಗೆ ನಾನು ತುಂಬಾ ಆಬಾರಿಯಾಗಿದ್ದೇನೆ. ಭಾರತ ಮತ್ತು ನನ್ನ ಎಲ್ಲ ದೇಶವಾಸಿಗಳೂ ಕೂಡ ನನ್ನ ಮೇಲೆ ಗೌರವವಿಟ್ಟು ವಹಿಸಿರುವ ಈ ಜವಾಬ್ದಾರಿಯಿಂದಾಗಿ ಹೆಮ್ಮೆಪಡುತ್ತಿದ್ದೇವೆ” ಎಂದು ಹೇಳಿದರು.
ಇದು ಅತಿದೊಡ್ಡ ಮಾನವ ದುರಂತ ಎಂದು ಬಣ್ಣಿಸಿದ ಅವರು, ಮುಂದಿನ ಎರಡು ದಶಕಗಳ ಕಾಲ ಹಲವು ಸವಾಲುಗಳನ್ನು ನಾವು ಎದುರಿಸಬೇಕಿದೆ ಎಂದು ಹೇಳಿದರು. “ಈ ಎಲ್ಲ ಸವಾಲುಗಳಿಗೆ ಉತ್ತರಿಸಲು ಸಮಾನ ಪ್ರತಿಕ್ರಿಯೆ ಅಗತ್ಯವಿದೆ ಹಾಗೂ ಅಪಾಯದ ಬಗ್ಗೆ ವಿಷಯ ಹಂಚಿಕೆ ಹೊಣೆಗಾರಿಕೆಯೂ ಸಮಾನವಾಗಿ ವಿನಿಮಯ ಮಾಡಿಕೊಳ್ಳಬೇಕಾಗಿದೆ” ಎಂದು ಹೇಳಿದರು. ಅಲ್ಲದೆ, “ಡಬ್ಲ್ಯೂಎಚ್ಒದ ಎಲ್ಲ ಮಿತ್ರ ರಾಷ್ಟ್ರಗಳ ಪ್ರಮುಖ ಸಿದ್ಧಾಂತವೂ ಇದೆ ಆಗಿದೆ. ಆದರೂ ರಾಷ್ಟ್ರಗಳ ನಡುವೆ ಇನ್ನೂ ಹೆಚ್ಚಿನ ಪ್ರಮಾಣದ ವಿನಿಮಯದ ಆದರ್ಶ ಅಗತ್ಯವಿದೆ” ಎಂದು ಹೇಳಿದರು. “ಈ ಸಾಂಕ್ರಾಮಿಕ ನಮ್ಮ ಆರೋಗ್ಯ ವ್ಯವಸ್ಥೆಯ ಸಿದ್ಧತೆಗಳನ್ನು ಮತ್ತು ಬಲವರ್ಧನೆ ಮಾಡುವುದನ್ನು ನಿರ್ಲಕ್ಷಿಸಿದರೆ ಮನುಕುಲದ ಮೇಲೆ ಯಾವ ರೀತಿ ಪರಿಣಾಮಗಳಾಗುತ್ತದೆ ಎಂಬುದನ್ನು ತೋರಿಸಿಕೊಟ್ಟಿದೆ. ಜಾಗತಿಕ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಅಪಾಯ ನಿರ್ವಹಣೆ ಮತ್ತು ನಿಯಂತ್ರಣಕ್ಕೆ ಜಾಗತಿಕ ಪಾಲುದಾರಿಕೆಯನ್ನು ಬಲವರ್ಧನೆಗೊಳಿಸುವ ಜೊತೆಗೆ ಜಾಗತಿಕ ಸಾರ್ವಜನಿಕ ಆರೋಗ್ಯದಲ್ಲಿ ಹೂಡಿಕೆ ಮತ್ತು ಆಸಕ್ತಿಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕಿದೆ” ಎಂದು ಹೇಳಿದರು.
ಡಾ. ಹರ್ಷವರ್ಧನ್ ಅವರು, ಕೋವಿಡ್-19 ಎದುರಿಸಲು ಭಾರತ ಕೈಗೊಂಡಿರುವ ಕ್ರಮಗಳ ಅನುಭವವನ್ನು ಹಂಚಿಕೊಂಡರು. ಅವರು “ನಮ್ಮಲ್ಲಿ ಸಾವಿನ ಪ್ರಮಾಣ ಶೇ.3ರಷ್ಟು ಮಾತ್ರವಿದೆ. 1.35 ಬಿಲಿಯನ್ ಜನರಿರುವ ದೇಶದಲ್ಲಿ ಕೇವಲ 0.1 ಮಿಲಿಯನ್ ಕೋವಿಡ್-19 ಪ್ರಕರಣಗಳಿವೆ. ಗುಣಮುಖರಾಗುತ್ತಿರುವವರ ಪ್ರಮಾಣ ಶೇ.40ಕ್ಕೂ ಅಧಿಕವಿದೆ ಮತ್ತು ದುಪ್ಪಟ್ಟಾಗುವ ಪ್ರಮಾಣ 13 ದಿನಗಳಾಗಿವೆ” ಎಂದು ಹೇಳಿದರು.
ಡಬ್ಲ್ಯೂಎಚ್ಒದ ಕಾರ್ಯಕಾರಿ ಮಂಡಳಿಯ ಹೊಸ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ಡಾ. ಹರ್ಷವರ್ಧನ್ ಅವರು, ಶತಮಾನಗಳ ಕಾಲ ಮನುಕುಲವನ್ನು ಕಾಡಿದ ರೋಗಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಬದ್ಧತೆ ತೋರುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಜಾಗತಿಕ ಸಂಪನ್ಮೂಲಗಳ ಬಳಕೆಗೆ ಪರಸ್ಪರ ಪೂರಕ ಸಹಭಾಗಿತ್ವ ಹೊಂದಬೇಕು. ರೋಗಗಳಿಂದಾಗುವ ಸಾವುಗಳನ್ನು ನಿಯಂತ್ರಿಸಲು ಆಕ್ರಮಣಕಾರಿ ನೀಲನಕ್ಷೆ ಹೊಂದಿರಬೇಕು. ಜಾಗತಿಕ ಮಟ್ಟದಲ್ಲಿನ ಔಷಧಗಳು ಮತ್ತು ಲಸಿಕೆಗಳ ಕೊರತೆ ಎದುರಿಸಲು ಹೊಸ ನೀಲನಕ್ಷೆ ರೂಪಿಸಬೇಕು ಮತ್ತು ಅಗತ್ಯ ಸುಧಾರಣೆಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
ಸದಸ್ಯ ರಾಷ್ಟ್ರಗಳು ಮತ್ತು ಇತರೆ ಸಂಬಂಧಿಸಿದವರೊಂದಿಗೆ ನಿರಂತರ ಸಮಾಲೋಚನೆ ಮೂಲಕ ಸುಧಾರಣೆಗಳನ್ನು ಜಾರಿಗೊಳಿಸಬಹುದಾಗಿದೆ ಎಂದು ನನಗೆ ವಿಶ್ವಾಸವಿದೆ ಹಾಗೂ ಜಾಗತಿಕ ಸುಸ್ಥಿರ ಗುರಿ ಹಾಗೂ ಸಾರ್ವತ್ರಿಕ ಆರೋಗ್ಯ ವ್ಯಾಪ್ತಿಯನ್ನು ಸಾಧಿಸುವ ನಿಟ್ಟಿನಲ್ಲಿ ಪ್ರಗತಿ ಹೊಂದಲು ನೆರವಾಗಲಿದೆ ಮತ್ತು ಅವುಗಳನ್ನು ಅತ್ಯಂತ ಉತ್ಪಾದಕ, ದಕ್ಷತೆ ಮತ್ತು ನಿಗದಿತ ಸಂಪನ್ಮೂಲಗಳ ಬಳಕೆ ಮಾಡಿಕೊಳ್ಳಬೇಕಿದೆ. ನಾನು ನಮ್ಮ ಸಂಸ್ಥೆಯ ಸಮಗ್ರ ದೂರದೃಷ್ಟಿಯನ್ನು ಅರ್ಥಮಾಡಿಕೊಂಡು ಕಾರ್ಯನಿರ್ವಹಿಸಲು ಪ್ರಯತ್ನಿಸುತ್ತೇನೆ. ನಾನು ನಮ್ಮ ಎಲ್ಲ ಸದಸ್ಯ ರಾಷ್ಟ್ರಗಳ ಸಾಮೂಹಿಕ ಸಾಮರ್ಥ್ಯವನ್ನು ಒಗ್ಗೂಡಿಸಿ, ಸಾಮೂಹಿಕ ನಾಯಕತ್ವವನ್ನು ರೂಪಿಸುತ್ತೇನೆ” ಎಂದು ಹೇಳಿದರು.
ಡಾ. ಹರ್ಷವರ್ಧನ್ ಅವರು, ಡಬ್ಲ್ಯೂಎಚ್ಒ, ಆರೋಗ್ಯಕ್ಕೆ ಸಂಬಂಧಿಸಿದಂತೆ ಅತ್ಯುನ್ನತ ಮಾನದಂಡವನ್ನು ಹೊಂದಿದೆ ಮತ್ತು ಯಾವುದೇ ಧರ್ಮ, ಜಾತಿ, ರಾಜಕೀಯ, ನಂಬಿಕೆ, ಆರ್ಥಿಕತೆ ಮತ್ತು ಸಾಮಾಜಿಕ ಸ್ಥಿತಿಗತಿಗಳ ತಾರತಮ್ಯ ಮಾಡದೆ, ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕು ಆರೋಗ್ಯ ಎಂದು ಪರಿಗಣಿಸಿದೆ ಎಂದರು. “ಆದ್ದರಿಂದ ನಾವು ಸದಸ್ಯ ರಾಷ್ಟ್ರಗಳೊಂದಿಗೆ ಬದ್ಧತೆಯೊಂದಿಗೆ ಕೆಲಸ ಮಾಡಬೇಕು, ಸಂಸ್ಥೆ ಮತ್ತು ಜಾಗತಿಕ ಪಾಲುದಾರರು ದಕ್ಷತೆ, ಪರಿಣಾಮಕಾರಿ ಮತ್ತು ಪ್ರತಿಸ್ಪಂದನಾತ್ಮಕವಾಗಿ ತಮ್ಮ ಸಾರ್ವಜನಿಕ ಆರೋಗ್ಯ ಹಕ್ಕು ಬಾಧ್ಯತೆಗಳನ್ನು ನಿರ್ವಹಿಸಬೇಕು” ಎಂದು ಹೇಳಿದರು.
ಡಾ. ಹರ್ಷವರ್ಧನ್ ಅವರು, ಕಾರ್ಯಕಾರಿ ಮಂಡಳಿಯ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವ ಸಂದರ್ಭದಲ್ಲಿ ಜಗತ್ತಿನ ಭವಿಷ್ಯದ ಆರೋಗ್ಯದ ಚಿತ್ರಣದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. “ಆರ್ಥಿಕ ಸಾಧನೆ ಮತ್ತು ಮಾನವ ಸಾಮರ್ಥ್ಯ ವೃದ್ಧಿಗೆ ಆರೋಗ್ಯ ಅತ್ಯಂತ ಮುಖ್ಯವಾದುದು ಎಂದು ನಾನು ನಂಬಿದ್ದೇನೆ. ಆದರೆ ಸಾರ್ವಜನಿಕ ಆರೋಗ್ಯ ನೀತಿ, ನಿಸರ್ಗವನ್ನು ಸರಿಯಾಗಿ ಅರ್ಥಮಾಡಿಕೊಂಡು ಅದನ್ನು ಆಧರಿಸಿ ರೂಪಿಸಿಬೇಕು. ಇದು ಸಮಗ್ರ ಆರೋಗ್ಯ ಮತ್ತು ಸೌಖ್ಯ ಆಧರಿಸಿದ ಭಾರತೀಯ ಸಾಂಪ್ರದಾಯಿಕ ವೈದ್ಯ ಪದ್ಧತಿಯ ಮೂಲ ತತ್ವವೂ ಆಗಿದೆ. ನಾವು ಅದರ ಜೊತೆ ಬದುಕಿದ್ದೇವೆ ಮತ್ತು ಅದನ್ನು ಅನುಭವಿಸಿದ್ದೇವೆ” ಎಂದು ಹೇಳಿದರು. ಅಲ್ಲದೆ ಅವರು ‘ಸರ್ವರಿಗೂ ಸಾರ್ವತ್ರಿಕ ಆರೋಗ್ಯ’ ನಿಟ್ಟಿನಲ್ಲಿ ಭಾರತದ ನೀತಿಯನ್ನು ಬಿಡಿಸಿಟ್ಟು, ರಾಷ್ಟ್ರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಆಯುಷ್ಮಾನ್ ಭಾರತ್ ಎರಡು ಆಧಾರಸ್ಥಂಬಗಳ ಮೇಲೆ ನಿಂತಿದೆ. ಅವುಗಳೆಂದರೆ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು(ಎಚ್ ಡಬ್ಲ್ಯೂಸಿ) ಮತ್ತು ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ(ಪಿಎಂಜೆಎವೈ) ಇವುಗಳನ್ನು ನಮ್ಮ ಡೈನಾಮಿಕ್ ಮತ್ತು ದೂರದೃಷ್ಟಿಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಡೆಸಲಾಗುತ್ತಿದೆ.
ಡಬ್ಲ್ಯೂಎಚ್ಒ ಜೊತೆಗಿನ ತಮ್ಮ ದೀರ್ಘಕಾಲದ ನೆನಪುಗಳನ್ನು ಸ್ಮರಿಸಿಕೊಂಡ ಅವರು, ಭಾರತಕ್ಕೆ ಪೋಲಿಯೋ ವಿರುದ್ಧ ಹೋರಾಡಲು ಡಬ್ಲ್ಯೂಎಚ್ಒ ನೀಡಿದ ದೃಢ ಬೆಂಬಲಕ್ಕಾಗಿ ಅವರು ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಹೇಳಿದರು. “ಡಬ್ಲ್ಯೂಎಚ್ಒ ದಲ್ಲಿನ ಗೆಳೆಯರ ನೈತಿಕ ಸ್ಥೈರ್ಯ ಮತ್ತು ಬೆಂಬಲ ಇಲ್ಲದಿದ್ದರೆ, ಇಂದು ಭಾರತದಿಂದ ಪೋಲಿಯೋಅನ್ನು ನಿರ್ಮೂಲನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಡಬ್ಲ್ಯೂಎಚ್ಒ ಉಪಸ್ಥಿತಿ ಇಲ್ಲದೆ ಅದು ಅಸಾಧ್ಯ ಎಂಬುದನ್ನು ನಾನು ಖಂಡಿತ ಒಪ್ಪುತ್ತೇನೆ” ಎಂದು ಅವರು ಹೇಳಿದರು.
ಡಾ. ಹರ್ಷವರ್ಧನ್ ಅವರು ಡಬ್ಲ್ಯೂಎಚ್ಒದ ಹಲವು ಪ್ರತಿಷ್ಠಿತ ಸಮಿತಿಗಳ ಸದಸ್ಯರಾಗಿದ್ದಾರೆ. ಅವುಗಳೆಂದರೆ ಪೋಲಿಯೋ ನಿರ್ಮೂಲನೆ ಕುರಿತ ಪರಿಣಿತರ ಕಾರ್ಯತಂತ್ರ ಸಲಹಾ ಸಮಿತಿ(ಎಸ್ಎಜಿಇ) ಮತ್ತು ಜಾಗತಿಕ ತಾಂತ್ರಿಕ ಸಲಹಾ ಸಮಿತಿ(ಟಿಸಿಜಿ). ಅಲ್ಲದೆ ಅವರು ಡಬ್ಲ್ಯೂಎಚ್ಒದ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಡಬ್ಲ್ಯೂಎಚ್ಒದ ಕಾರ್ಯಕಾರಿ ಸಮಿತಿ ತಾಂತ್ರಿಕವಾಗಿ ಅರ್ಹತೆ ಪಡೆದಿರುವ 34 ಸದಸ್ಯರನ್ನು ಒಳಗೊಂಡಿದ್ದು, ಅವರುಗಳು ಮೂರು ವರ್ಷದ ಅವಧಿಗೆ ಆಯ್ಕೆಯಾಗಿರುತ್ತಾರೆ. ಮಂಡಳಿಯ ಪ್ರಮುಖ ಕಾರ್ಯವೆಂದರೆ ಆರೋಗ್ಯ ಸಂಸ್ಥೆಯ ನೀತಿ ನಿರ್ಧಾರಗಳನ್ನು ಅನುಷ್ಠಾನಗೊಳಿಸುವುದು ಮತ್ತು ಅದರ ಕಾರ್ಯಕ್ಕೆ ನೆರವಾಗುವುದು ಮತ್ತು ಸಲಹೆಗಳನ್ನು ನೀಡುವುದು.
ಡಾ. ಹರ್ಷವರ್ಧನ್ ಅವರ ಧೀಮಂತ ವ್ಯಕ್ತಿತ್ವಕ್ಕೆ ಇದು ಮತ್ತೊಂದು ಗರಿಮೆಯಾಗಿದೆ. ಅವರು ಕಾನ್ಪುರದ ಜಿ.ಎಸ್.ವಿ.ಎಂ.ವೈದ್ಯಕೀಯ ಕಾಲೇಜಿನಲ್ಲಿ ಕ್ರಮವಾಗಿ 1979 ಮತ್ತು 1983ರಲ್ಲಿ ವೈದ್ಯಕೀಯ ವಿಭಾಗದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪೂರೈಸಿದರು. ಅವರು 1993ರಲ್ಲಿ ದೆಹಲಿ ವಿಧಾನಸಭೆಗೆ ಆಯ್ಕೆಯಾದಂದಿನಿಂದ ಸಾರ್ವಜನಿಕ ಸೇವೆಯಲ್ಲಿ ತೊಡಗಿದ್ದಾರೆ. ಅವರು ಮೇ 2014ರಲ್ಲಿ ಚಾಂದಿನಿ ಚೌಕ ಕ್ಷೇತ್ರದಿಂದ 16ನೇ ಲೋಕಸಭೆಗೆ ಆಯ್ಕೆಯಾಗುವವರೆಗೆ 5 ಬಾರಿ ಸತತವಾಗಿ ವಿಧಾನಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. 1993ರಿಂದ 1998ರ ವರೆಗೆ ಅವರು, ದೆಹಲಿಯ ಎನ್ ಸಿಟಿ ಸರ್ಕಾರದಲ್ಲಿ ಆರೋಗ್ಯ, ಶಿಕ್ಷಣ, ಕಾನೂನು ಮತ್ತು ನ್ಯಾಯ ಹಾಗೂ ಶಾಸಕಾಂಗ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದರು. 1994ರಲ್ಲಿ ಅವರು, ದೆಹಲಿ ಆರೋಗ್ಯ ಸಚಿವರಾಗಿ ದೆಹಲಿಯಲ್ಲಿ ಮೂರು ವರ್ಷದೊಳಗಿನ 1.2 ಮಿಲಿಯನ್ ಮಕ್ಕಳಿಗೆ ಸಾಮೂಹಿಕ ಲಸಿಕೆ ಹಾಕುವ ಪಲ್ಸ್ ಪೋಲಿಯೋ ಪ್ರಾಯೋಗಿಕ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೇಲುಸ್ತುವಾರಿ ವಹಿಸಿದ್ದರು. ಆ ಮೂಲಕ ಅವರು, 2014ರಲ್ಲಿ ಭಾರತ ಪೋಲಿಯೋ ಮುಕ್ತವಾಗಲು ಭದ್ರ ಅಡಿಪಾಯ ಹಾಕಿದರು. ಅವರು ದೆಹಲಿ ಧೂಮಪಾನ ನಿಷೇಧ ಮತ್ತು ಧೂಮಪಾನ ರಹಿತರ ಆರೋಗ್ಯ ರಕ್ಷಣಾ ಕಾಯ್ದೆ 1997ಅನ್ನು ಜಾರಿಗೊಳಿಸಿ, ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ಮುಂಚೂಣಿಯಲ್ಲಿದ್ದರು. ನಂತರ ಈ ಕಾಯಿದೆಯನ್ನು ದೇಶದ ಹಲವು ರಾಜ್ಯಗಳು ಅಳವಡಿಸಿಕೊಂಡವು.
2014ರಲ್ಲಿ ಡಾ. ಹರ್ಷವರ್ಧನ್ ಅವರು ಕೇಂದ್ರ ಆರೋಗ್ಯ ಸಚಿವರಾದರು. ಆನಂತರ ಅವರು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂವಿಜ್ಞಾನಗಳ ಸಚಿವ ಹೊಣೆಯನ್ನು ವಹಿಸಿಕೊಂಡರು. ಅವರು ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವರೂ ಆಗಿದ್ದರು. 17ನೇ ಲೋಕಸಭೆಗೆ ಪುನರಾಯ್ಕೆಯಾದ ಅವರು, 2019ರ ಮೇ 30ರಂದು ಕೇಂದ್ರ ಸಂಪುಟ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂವಿಜ್ಞಾನಗಳ ಖಾತೆಗಳನ್ನು ನೀಡಲಾಯಿತು.
***
(Release ID: 1626239)
Visitor Counter : 381