ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
ಕಚೇರಿ ಹಾಜರಿಗೆ ಗರ್ಭಿಣಿ ಮಹಿಳೆಯರು ಮತ್ತು ಇತರೆ ಸಿಬ್ಬಂದಿಗೆ ವಿನಾಯಿತಿ ನೀಡಿದ ಡಿಒಪಿಟಿ
Posted On:
20 MAY 2020 8:16PM by PIB Bengaluru
ಕಚೇರಿ ಹಾಜರಿಗೆ ಗರ್ಭಿಣಿ ಮಹಿಳೆಯರು ಮತ್ತು ಇತರೆ ಸಿಬ್ಬಂದಿಗೆ ವಿನಾಯಿತಿ ನೀಡಿದ ಡಿಒಪಿಟಿ
ಅಂತೆಯೇ ದಿವ್ಯಾಂಗರಿಗೂ ಕಚೇರಿ ಹಾಜರಿಗೆ ವಿನಾಯಿತಿ ಪ್ರಕಟ
ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ(ಡಿಒಪಿಟಿ), ಕಚೇರಿ ಹಾಜರಿಗೆ ಗರ್ಭಿಣಿ ಮಹಿಳೆಯರು ಮತ್ತು ಇತರೆ ಸಿಬ್ಬಂದಿಗೆ ವಿನಾಯಿತಿ ನೀಡಿದೆ. ಈ ವಿಷಯವನ್ನು ಕೇಂದ್ರ ಈಶಾನ್ಯ ರಾಜ್ಯಗಳ(ಡಿಒಎನ್ಇಆರ್) ಸಚಿವ(ಸ್ವತಂತ್ರ ಖಾತೆ) ಪ್ರಧಾನಮಂತ್ರಿಗಳ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ, ಅಣು ಇಂಧನ ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದರು. ಅವರು ಈ ಸಂಬಂಧ ಸುತ್ತೋಲೆಯನ್ನು ಹೊರಡಿಸಲಾಗಿದೆ ಮತ್ತು ಅದನ್ನು ನಾನಾ ಸಚಿವಾಲಯಗಳು/ಇಲಾಖೆಗಳು ಮತ್ತು ರಾಜ್ಯ ಹಾಗೂ ಕೇಂದ್ರಾಡಳಿತ ಸರ್ಕಾರಗಳು ಪಾಲನೆ ಮಾಡಬೇಕೆಂದು ನಿರೀಕ್ಷಿಸಲಾಗಿದೆ ಎಂದರು.
ಹೆರಿಗೆ ರಜೆ ಪಡೆಯದ ಗರ್ಭಿಣಿ ಮಹಿಳಾ ಸಿಬ್ಬಂದಿಗೂ ಕಚೇರಿ ಹಾಜರಿಗೆ ವಿನಾಯಿತಿ ನೀಡಲಾಗಿದೆ, ಅಂತೆಯೇ ದಿವ್ಯಾಂಗ ವ್ಯಕ್ತಿಗಳಿಗೂ ಸಹ ಕಚೇರಿ ಹಾಜರಿಗೆ ವಿನಾಯಿತಿ ನೀಡಲಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು.
ಡಿಒಪಿಟಿ ಹೊರಡಿಸಿರುವ ಇತ್ತೀಚಿನ ಸುತ್ತೋಲೆಯಂತೆ ಲಾಕ್ ಡೌನ್ ಗಿಂತ ಮುಂಚಿತವಾಗಿ ಅನಾರೋಗ್ಯಕ್ಕೆ ಒಳಗಾಗಿರುವವರು ಮತ್ತು ಚಿಕಿತ್ಸೆ ಪಡೆಯುತ್ತಿರುವ ಎಲ್ಲ ಸರ್ಕಾರಿ ಉದ್ಯೋಗಿಗಳು, ಸಿಜಿಎಚ್ಎಸ್/ಸಿಎಸ್(ಎಂಎ) ನಿಯಮದಂತೆ ವೈದ್ಯಕೀಯ ಪ್ರಮಾಣಪತ್ರವನ್ನು ಸಲ್ಲಿಸುವುದಕ್ಕೆ ವಿನಾಯಿತಿ ನೀಡಲಾಗಿದೆ.
ಅಲ್ಲದೆ, ಅಧಿಕಾರಿ ಮತ್ತು ಸಿಬ್ಬಂದಿಗಳ ಆಗಮನ ಮತ್ತು ನಿರ್ಗಮನದ ಸಮಯದಲ್ಲಿ ಕಡ್ಡಾಯವಾಗಿ ಪಾಳಿ ಪದ್ಧತಿಯನ್ನು ಅನುಸರಿಸಬೇಕು. ಅನಗತ್ಯವಾಗಿ ಜನ ದಟ್ಟಣೆಯಾಗುವುದನ್ನು ತಪ್ಪಿಸಲು ಎಲ್ಲಾ ಇಲಾಖಾ ಮುಖ್ಯಸ್ಥರಿಗೆ ಮೂರು ಅವಧಿಯ ಸಮಯಗಳನ್ನು ಪಾಲನೆ ಮಾಡುವಂತೆ ಸಲಹೆ ನೀಡಲಾಗಿದೆ. ಅವುಗಳೆಂದರೆ ಬೆಳಗ್ಗೆ 9 ಗಂಟೆಯಿಂದ ಸಂಜೆ 5ರವರೆಗೆ, ಬೆಳಗ್ಗೆ 9.30ರಿಂದ ಸಂಜೆ 6 ಗಂಟೆವರೆಗೆ ಮತ್ತು ಬೆಳಗ್ಗೆ 10 ಗಂಟೆಯಿಂದ ಸಂಜೆ 6.30ರ ವರೆಗೆ ಇರಲಿದೆ.
ಅಧೀನ ಕಾರ್ಯದರ್ಶಿ ಸರಣಿಯ ಮತ್ತು ಅದಕ್ಕಿಂತ ಮೇಲಿನ ಎಲ್ಲ ಅಧಿಕಾರಿಗಳು, ಎಲ್ಲ ಕಾರ್ಯನಿರ್ವಹಣೆ ದಿನದಂದು ಹಾಜರಿರಬೇಕೆಂದು ನಿರೀಕ್ಷಿಸಲಾಗುತ್ತಿದೆ. ಅಧೀನ ಕಾರ್ಯದರ್ಶಿಗಳಿಗಿಂತ ಕೆಳಗಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಪರ್ಯಾಯವಾಗಿ ಪ್ರತಿ ದಿನ ಶೇ.50ರಷ್ಟು ಸಿಬ್ಬಂದಿ ಕಚೇರಿಗಳಿಗೆ ಆಗಮಿಸಿ ಕಾರ್ಯ ನಿರ್ವಹಿಸಬೇಕು. ಉಳಿದ ಸಿಬ್ಬಂದಿ ಮನೆಯಿಂದ ಅಥವಾ ದೂರವಾಣಿ ಮತ್ತು ವಿದ್ಯುನ್ಮಾನ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡಬೇಕು.
ಇಡೀ ಲಾಕ್ ಡೌನ್ ಅವಧಿಯಲ್ಲಿ ಸಚಿವಾಲಯದ ಸಿಬ್ಬಂದಿ ಸಂಪೂರ್ಣ ಬದ್ಧತೆಯಿಂದ ನಿರಂತರವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಡಾ. ಜಿತೇಂದ್ರ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ, ಕೆಲವು ಅಧಿಕಾರಿಗಳು ಕಚೇರಿಗಳನ್ನು ಮುಚ್ಚಿದ್ದ ಸಮಯದಲ್ಲಿ ವಾರಾಂತ್ಯಗಳಲ್ಲಿ ಮನೆಯಿಂದಲೂ ಕಾರ್ಯ ನಿರ್ವಹಿಸಿದ್ದಾರೆ ಎಂದು ಅವರು ಹೇಳಿದರು.
ಕಚೇರಿ ನಿರಂತರವಾಗಿ ಕಾರ್ಯ ನಿರ್ವಹಿಸುವಂತೆ ಕ್ರಮಗಳನ್ನು ಕೈಗೊಳ್ಳಲಾಯಿತು ಮತ್ತು ಅದೇ ವೇಳೆ ಸಿಬ್ಬಂದಿಗಳ ಕಲ್ಯಾಣ ಮತ್ತು ಸುರಕ್ಷತೆಯನ್ನು ನಿರ್ಲಕ್ಷಿಸಿಲ್ಲ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು.
***
(Release ID: 1625672)
Visitor Counter : 259