ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಕೈಗೆಟಕುವ ಬೆಲೆಯಲ್ಲಿ ಅಗತ್ಯ ಔಷಧಗಳು, ಚಿಕಿತ್ಸೆಗಳು ಮತ್ತು ಲಸಿಕೆಗಳ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳುವಂತೆ ಭಾರತ ಜಿ-20 ರಾಷ್ಟ್ರಗಳಿಗೆ ಕರೆ

Posted On: 14 MAY 2020 8:23PM by PIB Bengaluru

ಕೈಗೆಟಕುವ ಬೆಲೆಯಲ್ಲಿ ಅಗತ್ಯ ಔಷಧಗಳು, ಚಿಕಿತ್ಸೆಗಳು ಮತ್ತು ಲಸಿಕೆಗಳ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳುವಂತೆ ಭಾರತ ಜಿ-20 ರಾಷ್ಟ್ರಗಳಿಗೆ ಕರೆ

ವಸುದೈವ ಕುಟುಂಬಕಂನಮ್ಮ ನೈಜ ಪರಂಪರೆಯಾಗಿದೆ, ರೋಗವನ್ನು ನಿಯಂತ್ರಿಸಲು ಭಾರತ ಸುಮಾರು 120 ರಾಷ್ಟ್ರಗಳಿಗೆ ಬೇಷರತ್ ವೈದ್ಯಕೀಯ ನೆರವನ್ನು ನೀಡಿದೆ- ಜಿ-20 ರಾಷ್ಟ್ರಗಳ ವಾಣಿಜ್ಯ ಸಚಿವರ ಸಭೆಯಲ್ಲಿ ಶ್ರೀ ಪಿಯೂಷ್ ಗೋಯಲ್ ಹೇಳಿಕೆ

ಪ್ರಧಾನಮಂತ್ರಿ ಅವರು ಪ್ರಕಟಿಸಿರುವ ವಿಶೇಷ ಆರ್ಥಿಕ ಪ್ಯಾಕೇಜ್ ಅನುಷ್ಠಾನದ ನಂತರ ಭಾರತ ಇನ್ನಷ್ಟು ಬಲಿಷ್ಠವಾಗಿ ಹೊರಹೊಮ್ಮಲಿದೆ ಸಚಿವರ ಹೇಳಿಕೆ

ನಿಯಮ ಆಧಾರಿತ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮತ್ತು ಪಾರದರ್ಶಕ ವ್ಯಾಪಾರ ಪದ್ಧತಿಗಳನ್ನು ಹಾಗೂ ಒಟ್ಟಾರೆ ಮಾನವೀಯ ಕಾಳಜಿ ಕುರಿತಂತೆ ಸಮಾನ ಮನಸ್ಕ ರಾಷ್ಟ್ರಗಳು ಸಹಭಾಗಿತ್ವ ಸಾಧಿಸಲು ಇಡೀ ವಿಶ್ವ ಒಗ್ಗೂಡುತ್ತಿದೆ

 

ಕೈಗೆಟಕುವ ದರದಲ್ಲಿ ಅಗತ್ಯ ಔಷಧಗಳು, ಚಿಕಿತ್ಸೆಗಳು ಮತ್ತು ಲಸಿಕೆಗಳ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳುವಂತೆ ಭಾರತ, ಜಿ-20 ರಾಷ್ಟ್ರಗಳಿಗೆ ಕರೆ ನೀಡಿದೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ಎರಡನೇ ಜಿ-20 ರಾಷ್ಟ್ರಗಳ ವರ್ಚ್ಯುಯಲ್ ವಾಣಿಜ್ಯ ಮತ್ತು ಬಂಡವಾಳ ಹೂಡಿಕೆ ಸಚಿವರ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಶ್ ಗೋಯಲ್ ಅವರು, ಕೋವಿಡ್-19 ಸಾಂಕ್ರಾಮಿಕದಿಂದಾಗಿ ಇಡೀ ವಿಶ್ವದ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಕಷ್ಟಗಳನ್ನು ದೂರಮಾಡಲು ಸಮಗ್ರ ಮತ್ತು ತಕ್ಷಣದ ಕ್ರಮಗಳಿಗೆ ಜಿ-20 ರಾಷ್ಟ್ರಗಳು ಮೊದಲ ಆದ್ಯತೆ ನೀಡಬೇಕು ಎಂದರು. ಅನಿರೀಕ್ಷಿತ ಸಂದರ್ಭಗಳು ನಮ್ಮನ್ನು ಒಟ್ಟುಗೂಡಿಸಿವೆ ಮತ್ತು ಸಂದರ್ಭ ಎದುರಿಸಲು ಸಮತೋಲಿತ ಮತ್ತು ಎಲ್ಲರನ್ನೊಳಗೊಂಡ ಕ್ರಮ ಅಗತ್ಯವಿದೆ ಎಂದು ಹೇಳಿದರು. ಸಂದರ್ಭದಲ್ಲಿ ಎಲ್ಲ ದೇಶಗಳ ಆದ್ಯತೆ ಅಮೂಲ್ಯ ಜೀವಗಳನ್ನು ಉಳಿಸುವುದಾಗಿದೆ. ಕೈಗೆಟಕುವ ದರದಲ್ಲಿ ಔಷಧಿಗಳು, ಚಿಕಿತ್ಸೆ ಮತ್ತು ಲಸಿಕೆ ಲಭ್ಯವಾಗುವುದನ್ನು ಖಾತ್ರಿಪಡಿಸಲು ಟಿಆರ್ ಐಪಿಎಸ್(ಟ್ರಿಪ್ಸ್) ಫ್ಲೆಕ್ಸಿಬಲಿಟೀಸ್ ಬಳಕೆ ಮಾಡಿಕೊಳ್ಳಬೇಕು ಎಂದರು. ಅಲ್ಲದೆ ಅವರು, ಡಯಾಗ್ನೋಸ್ಟಿಕ್ ಮತ್ತು ವೈಯಕ್ತಿಕ ರಕ್ಷಣಾ ಉಪಕರಣಗಳನ್ನು ಹಾಗೂ ಆರೋಗ್ಯ ವೃತ್ತಿಪರರ ಸೇವೆಯನ್ನು ಗಡಿಯಾಚೆ ಅಗತ್ಯವಿರುವ ರಾಷ್ಟ್ರಗಳಿಗೆ ಜಿ-20 ರಾಷ್ಟ್ರಗಳು ಒದಗಿಸುವುದು ಅತ್ಯಗತ್ಯ ಎಂದು ಹೇಳಿದರು.

ಶ್ರೀ ಗೋಯಲ್ ಅವರು, ರಫ್ತು ನಿರ್ಬಂಧ ನೀತಿ ರಾಮಬಾಣವಲ್ಲ, ಅವುಗಳಿಂದ ಹೊರತಾಗಿ ವೈದ್ಯಕೀಯ ಉಪಕರಣಗಳು ಮತ್ತು ಆಹಾರದ ಲಭ್ಯತೆಯನ್ನು ಖಾತ್ರಿಪಡಿಸಬೇಕಾಗಿದೆ. ಅಂತಹ ಕ್ರಮಗಳು ಗಂಭೀರ ಉಪಕರಣಗಳಿಗಾಗಿ ಹೋರಾಟ ನಡೆಸಬೇಕಾದ ಸಾಧ್ಯತೆಗಳನ್ನು ಸೃಷ್ಟಿಸುತ್ತದೆ ಮತ್ತು ಸಂಪನ್ಮೂಲ ಕೊರತೆ ಇರುವ ರಾಷ್ಟ್ರಗಳಿಗೆ ಅದು ಅಲಭ್ಯವಾಗುತ್ತದೆ. ಎಲ್ಲ ದುರ್ಬಲ ವರ್ಗಗಳಿಗೆ ಆಹಾರ ಭದ್ರತೆಯನ್ನು ಖಾತ್ರಿಪಡಿಸಲು ಅತ್ಯಂತ ಪರಿಣಾಮಕಾರಿ ಹಾಗೂ ಸಮರ್ಪಕ ಮಾರ್ಗವೆಂದರೆ, ಕೃಷಿ ಒಪ್ಪಂದದಲ್ಲಿ ಆಗಿರುವ ಐತಿಹಾಸಿಕ ಅಸಮರೂಪತೆಗಳನ್ನು ತೊಡೆದುಹಾಕುವುದು ಮತ್ತು ಡಬ್ಲ್ಯೂಟಿಒನ 12ನೇ ಸಚಿವರ ಶೃಂಗಸಭೆಯಲ್ಲಿ ಪ್ರಸ್ತಾಪಿಸಿದ್ದಂತೆ ಆಹಾರ ಭದ್ರತೆಯನ್ನು ಒದಗಿಸಲು ಸಾರ್ವಜನಿಕ ದಾಸ್ತಾನು ಹೊಂದಲು ಶಾಶ್ವತ, ಸಮರ್ಪಕ ಮತ್ತು ಲಭ್ಯತೆಯ ವಿಭಾಗಗಳಲ್ಲಿ ಬಹುದಿನಗಳಿಂದ ಬಾಕಿ ಇರುವ ಸಚಿವರ ಬೇಡಿಕೆಯನ್ನು ಪೂರೈಸಬೇಕಾಗಿದೆ ಎಂದರು.

ಶ್ರೀ ಗೋಯಲ್ ಅವರು, ಇಂತಹ ಗಂಭೀರ ಸಂಕಷ್ಟದ ಅನುಭವದಿಂದ ಪಾಠ ಕಲಿತು, ನಿಯಮ ಆಧಾರಿತ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮತ್ತು ಪಾರದರ್ಶಕ ವ್ಯಾಪಾರ ಪದ್ದತಿಗಳನ್ನು ಮತ್ತು ಒಟ್ಟಾರೆ ಮಾನವೀಯ ಕಳಕಳಿಯನ್ನು ಹಂಚಿಕೊಂಡು ಸಹಭಾಗಿತ್ವ ಸಾಧಿಸಲು ವಿಶ್ವದ ಎಲ್ಲ ಸಮಾನ ಮನಸ್ಕ ರಾಷ್ಟ್ರಗಳು ಒಂದುಗೂಡುತ್ತಿವೆ ಎಂದರು. ಜಾಗತಿಕ ಪ್ರಯತ್ನಗಳಿಗೆ ಭಾರತ ತನ್ನ ಕೊಡುಗೆ ನೀಡಲು ಬಯಸುತ್ತದೆ ಎಂದರು. ಕಳೆದ ಕೆಲವು ತಿಂಗಳುಗಳಿಂದೀಚೆಗೆ ನಮ್ಮ ದೇಶವನ್ನು ಪರಿವರ್ತಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮಹತ್ವಾಕಾಂಕ್ಷೆಯ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಮ್ಮ ಭವಿಷ್ಯ ಐದು ಆಧಾರ ಸ್ಥಂಭಗಳ ಮೇಲೆ ಅವಲಂಬಿಸಿದೆ, ಅವುಗಳೆಂದರೆ- ಬಲಿಷ್ಠ ಮತ್ತು ಕ್ರಿಯಾಶೀಲ ಆರ್ಥಿಕತೆ, ಬೃಹತ್ ಮೂಲಸೌಕರ್ಯ ಅಭಿವೃದ್ಧಿ, ಸ್ಥಿರ ಹಾಗೂ ಸಂಭಾವ್ಯ ನಿಯಂತ್ರಣ ಪದ್ದತಿಗಳನ್ನು ಒಳಗೊಂಡ ಆಧುನಿಕ ವ್ಯವಸ್ಥೆ ಅಭಿವೃದ್ಧಿ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾರಿ ಜನಸಂಖ್ಯೆ ಮತ್ತು 130 ಕೋಟಿ ಭಾರತೀಯರ ಹೆಚ್ಚುತ್ತಿರುವ ಸರಕು ಮತ್ತು ಸೇವೆಗಳ ಬೇಡಿಕೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಮ್ಮ ಜಿಡಿಪಿಯ ಶೇ.10ರಷ್ಟು ಮೊತ್ತದ ವಿಶೇಷ ಆರ್ಥಿಕ ಪ್ಯಾಕೇಜ್ ಅನ್ನು ಘೋಷಿಸಿದ್ದು, ಅದು ಅನುಷ್ಠಾನದ ನಂತರ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಲಿದೆ’’ಎಂದರು.

ಭಾರತದ ಸಾಮರ್ಥ್ಯ ಮತ್ತು ಬದ್ಧತೆಗಳ ಸಣ್ಣ ಉದಾಹರಣೆಯನ್ನು ಹಂಚಿಕೊಂಡ ಶ್ರೀ ಗೋಯಲ್ ಅವರು, “ಸಾಂಕ್ರಾಮಿಕ ರೋಗ ಕಾಣಿಸಿಕೊಂಡಾಗ ಭಾರತದಲ್ಲಿ ಕನಿಷ್ಠ ಕೆಲವೇ ಕೆಲವು ಸಾವಿರ ವೈಯಕ್ತಿಕ ರಕ್ಷಣಾ ಕಿಟ್ (ಪಿಪಿಇ)ಗಳಿದ್ದವು. ಇದಕ್ಕೂ ಮುನ್ನ ನಮಗೆ ಭಾರಿ ಸಂಖ್ಯೆಯ ಪಿಪಿಇಗಳ ಅವಶ್ಯಕತೆ ಕಂಡು ಬಂದಿರಲಿಲ್ಲ. ನಮ್ಮ ಅಗತ್ಯತೆಗಳಿಗೆ ಇತರೆ ದೇಶಗಳು ಪೂರೈಕೆ ಮಾಡುವುದಿಲ್ಲ ಎಂಬುದು ನಮಗೆ ಮನವರಿಕೆಯಾದ ಹಿನ್ನೆಲೆಯಲ್ಲಿ ನಮ್ಮ ದೇಶದಲ್ಲಿಯೇ ಉತ್ಪಾದನೆ ಆರಂಭವಾಯಿತು ಮತ್ತು ನಮ್ಮ ಸಾಮರ್ಥ್ಯ ವೃದ್ಧಿಯಾಯಿತು. ಹೀಗಾಗಿ ಸದ್ಯ ನಾವು ಪ್ರತಿ ದಿನ 300,000 ಪಿಪಿಇಗಳನ್ನು ಉತ್ಪಾದಿಸುತ್ತಿದ್ದೇವೆ’’ಎಂದರು.

ಇಡೀ ಜಗತ್ತೇ ಈಗ ಫಾರ್ಮಸಿಆಗಿದೆ ಎಂದು ಹೇಳಿದ ಸಚಿವರು, ರೋಗಕ್ಕೆ ಪರಿಣಾಮಕಾರಿ ಚಿಕಿತ್ಸೆ ಹಾಗೂ ಲಸಿಕೆಯನ್ನು ಅಭಿವೃದ್ಧಿಪಡಿಸುವ ಜಾಗತಿಕ ಪ್ರಯತ್ನಗಳಿಗೆ ಭಾರತವೂ ಕ್ರಿಯಾಶೀಲ ಸಹಭಾಗಿತ್ವ ನೀಡುತ್ತಿದೆ ಎಂದರು. ಕಾರಣಕ್ಕೆ ಎಲ್ಲ ಜಾಗತಿಕ ಪ್ರಯತ್ನಗಳಿಗೆ ನಾವು ಸಂಪೂರ್ಣ ಬೆಂಬಲ ನೀಡಲಾಗುವುದು. ನಮ್ಮ ಪರಂಪರೆಗೆ ತಕ್ಕಂತೆ ನಾವುವಸುದೈವ ಕುಟುಂಬಕಂಅಂದರೆ ಇಡೀ ವಿಶ್ವವೇ ಒಂದು ಕುಟುಂಬ ಎಂಬಂತೆ ನಡೆದುಕೊಳ್ಳುತ್ತಿದ್ದೇವೆ. ಭಾರತ ಬೇಷರತ್ ಆಗಿ ಸುಮಾರು 120 ರಾಷ್ಟ್ರಗಳಿಗೆ ವೈದ್ಯಕೀಯ ನೆರವನ್ನು ನೀಡಿದೆ, ಅವುಗಳಲ್ಲಿ 43 ರಾಷ್ಟ್ರಗಳು ನೆರವನ್ನು ಅನುದಾನದ ರೂಪದಲ್ಲಿ ಸ್ವೀಕರಿಸಿವೆ. ಅಲ್ಲದೆ, ಹೆಚ್ಚುವರಿಯಾಗಿ ಸುಮಾರು 10 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಕೋವಿಡ್-19 ತುರ್ತು ನಿಧಿಯನ್ನು ಸ್ತಾಪಿಸಲಾಗಿದ್ದು, ಅದನ್ನು ನಮ್ಮ ನೆರೆಹೊರೆಯ ರಾಷ್ಟ್ರಗಳಿಗೆ ತುರ್ತು ವೈದ್ಯಕೀಯ ಸಾಮಗ್ರಿ ಪೂರೈಕೆ, ಉಪಕರಣ ಮತ್ತು ಮಾನವೀಯ ನೆಲೆಯ ನೆರವು ನೀಡಲು ಬಳಸಲಾಗುತ್ತಿದೆ. ಅಲ್ಲದೆ, ನಾವು ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ನೈಪುಣ್ಯತೆಯನ್ನು ಮತ್ತು ಸಾಮರ್ಥ್ಯವನ್ನು ಡಿಜಿಟಲ್ ತಂತ್ರಜ್ಞಾನವನ್ನು ಬಳಸಿ ಹಂಚಿಕೊಳ್ಳುತ್ತಿದ್ದೇವೆ’’ಎಂದರು.

ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ನಡುವಿನ ಭಾರಿ ಡಿಜಿಟಲ್ ಅಂತರ ಇರುವುದನ್ನು ಪ್ರಸ್ತಾಪಿಸಿದ ಸಚಿವರು, ಅಭಿವೃದ್ಧಿ ಹೊಂದುತ್ತಿರುವ ಮತ್ತು ಕಡಿಮೆ ಅಭಿವೃದ್ಧಿ ಹೊಂದಿರುವ (ಎಲ್ ಡಿಸಿ) ರಾಷ್ಟ್ರಗಳಲ್ಲಿ ಡಿಜಿಟಲ್ ಕೌಶಲ್ಯ ಮತ್ತು ಸಾಮರ್ಥ್ಯವನ್ನು ವೃದ್ಧಿಗೆ ತುರ್ತು ಗಮನ ಹರಿಸಬೇಕಾಗಿದೆ ಎಂದು ಬಲವಾಗಿ ಪ್ರತಿಪಾದಿಸಿದರು. ಅಲ್ಲದೆ, ರಾಷ್ಟ್ರಗಳಿಗೆ ಡಿಜಿಟಲ್ ವ್ಯಾಪಾರ ಮತ್ತು -ಕಾಮರ್ಸ್ ನಿಯಮಗಳನ್ನು ಪಾಲನೆ ಮಾಡಿ ಎಂದು ಒತ್ತಡ ಹೇರಬಾರದು, ಹಾಗೆ ಮಾಡಿದರೆ ಅವರ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡಿದಂತಾಗುತ್ತದೆ ಮತ್ತು ವಲಯಗಳಲ್ಲಿನ ವಿಪುಲ ಅವಕಾಶಗಳ ಪ್ರಯೋಜನ ಪಡೆಯುವುದರಿಂದ ಅವುಗಳನ್ನು ವಂಚಿಸಿದಂತಾಗುತ್ತದೆ. ಸಾಂಕ್ರಾಮಿಕ ರೋಗದ ಪರಿಣಾಮದಿಂದಾಗಿ, ವಿದೇಶಗಳಲ್ಲಿನ ಭಾರಿ ಸಂಖ್ಯೆಯ ವೃತ್ತಿಪರರ, ಕಾರ್ಮಿಕರು ಮತ್ತು ವಿದ್ಯಾರ್ಥಿಗಳ ವೀಸಾ ಸ್ಥಿತಿಗತಿ ನಿರ್ವಹಣೆ ಮೇಲೆ ಪರಿಣಾಮಗಳಾಗಲಿವೆ ಎಂದು ಅವರು ಹೇಳಿದರು. ಅಂತಹವರಿಗೆ ಪ್ರಯೋಜನಗಳನ್ನು ವಿಸ್ತರಿಸಲು ಭಾರತ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಅವರು, ನಾವು ಅವರ ವೀಸಾ ಸ್ಥಾನಮಾನಕ್ಕೆ ಹೊಂದುವಂತೆ ಅಗತ್ಯ ಅವಕಾಶ ದೊರಕಿಸಿಕೊಡಬೇಕು ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಶ್ರೀ ಗೋಯಲ್ ಅವರು, ಎರಡನೇ ಜಿ-20 ವ್ಯಾಪಾರ ಮತ್ತು ಬಂಡವಾಳ ಹೂಡಿಕೆದಾರರ ವರ್ಚುಯಲ್ ಸಭೆಯನ್ನು ಆಯೋಜಿಸಿದ್ದಕ್ಕೆ ಸೌದಿ ಪ್ರೆಸಿಡೆನ್ಸಿಗೆ ಧನ್ಯವಾದಗಳನ್ನು ಸಲ್ಲಿಸಿದರು.

***


(Release ID: 1624010) Visitor Counter : 193