ಪ್ರಧಾನ ಮಂತ್ರಿಯವರ ಕಛೇರಿ

ವಿಶಾಖಪಟ್ಟಣಂ ಅನಿಲ ಸೋರಿಕೆ ಘಟನೆ ಪರಿಶೀಲಿಸಿದ ಪ್ರಧಾನಿ

Posted On: 07 MAY 2020 6:30PM by PIB Bengaluru

ವಿಶಾಖಪಟ್ಟಣಂ ಅನಿಲ ಸೋರಿಕೆ ಘಟನೆ ಪರಿಶೀಲಿಸಿದ ಪ್ರಧಾನಿ

ಘಟನಾ ಸ್ಥಳದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲ ರೀತಿಯ ಪ್ರಯತ್ನಗಳು

 

ವಿಶಾಖಪಟ್ಟಣಂ ಅನಿಲ ಸೋರಿಕೆ ಘಟನೆಗೆ ಸಂಬಂಧಿಸಿದಂತೆ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆಯಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ಉನ್ನತ ಮಟ್ಟದ ಸಭೆ ನಡೆಸಿದರು. ಸಂತ್ರಸ್ತರ ಸುರಕ್ಷತೆಗಾಗಿ ಮತ್ತು ವಿಪತ್ತಿನಿಂದ ಹಾನಿಗೊಳಗಾದ ಸ್ಥಳದ ಭದ್ರತೆಗಾಗಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಅವರು ದೀರ್ಘವಾಗಿ ಚರ್ಚಿಸಿದರು. ಸಭೆಯಲ್ಲಿ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್, ಗೃಹ ಸಚಿವ ಶ್ರೀ ಅಮಿತ್ ಶಾ, ಗೃಹ ಖಾತೆ ರಾಜ್ಯ ಸಚಿವರಾದ ಶ್ರೀ ನಿತ್ಯಾನಂದ ರೈ ಮತ್ತು ಶ್ರೀ ಜಿ. ಕಿಶನ್ ರೆಡ್ಡಿ  ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಇಂದು ಬೆಳಿಗ್ಗೆ ಘಟನೆಯ ಬಗ್ಗೆ ಮೊದಲ ಮಾಹಿತಿ ಪಡೆದ ಪ್ರಧಾನಿ ಮತ್ತು ಗೃಹ ಸಚಿವರು ಆಂಧ್ರಪ್ರದೇಶ ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸಿದರು ಮತ್ತು ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರದಿಂದ ಅಗತ್ಯವಿರುವ ಎಲ್ಲ ನೆರವು ಮತ್ತು ಸಹಾಯದ ಭರವಸೆ ನೀಡಿದರು. ಅವರು ಪರಿಸ್ಥಿತಿಯನ್ನು ನಿಕಟವಾಗಿ ಮತ್ತು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಸಭೆಯ ನಂತರ, ಸಂಪುಟ ಕಾರ್ಯದರ್ಶಿಯವರು  ಗೃಹ ವ್ಯವಹಾರ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ, ರಾಸಾಯನಿಕಗಳು ಮತ್ತು ಪೆಟ್ರೋಕೆಮಿಕಲ್ಸ್, ಫಾರ್ಮಾಸೂಟಿಕಲ್ಸ್, ಮಾಹಿತಿ ಮತ್ತು ಪ್ರಸಾರ ಸಚಿವಾಲಯಗಳ ಕಾರ್ಯದರ್ಶಿಗಳಳು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯರು (ಎನ್ಡಿಎಂಎ) ಮತ್ತು ಮಹಾನಿರ್ದೇಶಕರು (ಡಿಜಿ), ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ಡಿಆರ್ಎಫ್); ಆರೋಗ್ಯ ಸೇವೆಗಳ ಮಹಾನಿರ್ದೇಶಕರು (ಡಿಜಿಎಚ್ಎಸ್) ಮತ್ತು ಏಮ್ಸ್ ನಿರ್ದೇಶಕರು, ಮತ್ತು ಇತರ ವೈದ್ಯಕೀಯ ತಜ್ಞರೊಂದಿಗೆ ಪರಿಸ್ಥಿತಿಯ ನಿರ್ವಹಣೆಯನ್ನು ಬೆಂಬಲಿಸಲು ನಿರ್ದಿಷ್ಟ ಹಂತಗಳನ್ನು ಪಟ್ಟಿ ಮಾಡಲು ವಿವರವಾದ ಪರಿಶೀಲನಾ ಸಭೆ ನಡೆಸಿದರು.. ಸಭೆಯಲ್ಲಿ ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಉಪಸ್ಥಿತರಿದ್ದರು.

ಪುಣೆಯ ಎನ್ಡಿಆರ್ಎಫ್ ಸಿಬಿಆರ್ಎನ್ (ರಾಸಾಯನಿಕ, ಜೈವಿಕ, ವಿಕಿರಣ ಮತ್ತು ಪರಮಾಣು) ಘಟಕದ ತಂಡ ಮತ್ತು ನಾಗಪುರದ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯ (ಎನ್ಇಇಆರ್) ತಜ್ಞರ ತಂಡವನ್ನು ಬಿಕ್ಕಟ್ಟಿನ ನಿರ್ವಹಣೆ, ಸೋರಿಕೆಯ ಅಲ್ಪಾವಧಿ ಹಾಗೂ ದೀರ್ಘಕಾಲೀನ ವೈದ್ಯಕೀಯ ಪರಿಣಾಮದ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲು ರಾಜ್ಯ ಸರ್ಕಾರಕ್ಕೆ ಬೆಂಬಲ ನೀಡಲು ತಕ್ಷಣವೇ ವಿಶಾಖಪಟ್ಟಣಂಗೆ ಕಳುಹಿಸಲು ನಿರ್ಧರಿಸಲಾಯಿತು.

ವಿಶಾಖಪಟ್ಟಣಂ ಜಿಲ್ಲೆಯ ಗೋಪಾಲಪಟ್ಟಣಂ ಮಂಡಲದ ಆರ್.ಆರ್.ವೆಂಕಟಾಪುರಂ ಗ್ರಾಮದಲ್ಲಿ ಇಂದು ಮುಂಜಾನೆ 3 ಗಂಟೆಗೆ ರಾಸಾಯನಿಕ ಸ್ಥಾವರದಲ್ಲಿ ಸ್ಟೈರೀನ್ ಅನಿಲ ಸೋರಿಕೆ ಸಂಭವಿಸಿದೆ. ಇದು ಸುತ್ತಮುತ್ತಲಿನ ಗ್ರಾಮಗಳಾದ ವಾರವ, ಬಿ.ಸಿ.ಕಾಲೋನಿ, ಬಾಪೂಜಿ ನಗರ, ಕಂಪಾಲಪಾಲೆಂ ಮತ್ತು ಕೃಷ್ಣ ನಗರಗಳ ಮೇಲೆ ಪರಿಣಾಮ ಬೀರಿತು. ವಿಷಕಾರಿಯಾಗಿರುವ ಸ್ಟೈರೀನ್ ಅನಿಲವು ಚರ್ಮ, ಕಣ್ಣುಗಳಿಗೆ ಕಿರಿಕಿರಿಯನ್ನು ಉಂಟುಮಾಡಬಹುದು ಮತ್ತು ಉಸಿರಾಟದ ತೊಂದರೆಗಳು ಮತ್ತು ಇತರ ವೈದ್ಯಕೀಯ ಸ್ಥಿತಿಗಳಿಗೆ ಕಾರಣವಾಗಬಹುದು.

ವಿಶಾಖಪಟ್ಟಣಂನಲ್ಲಿ ಸಿಬಿಆರ್ಎನ್ ಸಿಬ್ಬಂದಿಯೊಂದಿಗೆ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ಡಿಆರ್ಎಫ್‌) ತಂಡವನ್ನು ರಾಜ್ಯ ಸರ್ಕಾರ ಮತ್ತು ಸ್ಥಳೀಯ ಆಡಳಿತವನ್ನು ಬೆಂಬಲಿಸಲು ತಕ್ಷಣ ನಿಯೋಜಿಸಲಾಯಿತು. ಎನ್ಡಿಆರ್ಎಫ್ತಂಡವು ಘಟನಾ ಸ್ಥಳದ ಸಮೀಪದಲ್ಲಿ ವಾಸಿಸುವ ಸಮುದಾಯಗಳನ್ನು ತಕ್ಷಣ ಸ್ಥಳಾಂತರಿಸಿತು. ಪುಣೆಯ ಎನ್ಡಿಆರ್ಎಫ್ ವಿಶೇಷ ಸಿಬಿಆರ್ಎನ್ ಘಟಕ ಮತ್ತು ನಾಗ್ಪುರದ ಎನ್ಇಇಆರ್ ತಜ್ಞರ ತಂಡವು ವಿಶಾಖಪಟ್ಟಣಂಗೆ ತೆರಳಿದೆ. ಅಲ್ಲದೆ, ಡಿಜಿಎಚ್ಎಸ್ ವೈದ್ಯರಿಗೆ ವಿಶೇಷ ವೈದ್ಯಕೀಯ ಸಲಹೆಯನ್ನು ನೀಡುತ್ತಿದೆ.

ಸೋರಿಕೆಯಾದ ಸಂಯುಕ್ತದ ಗುಣಲಕ್ಷಣಗಳು, ಅದರ ಪರಿಣಾಮ, ಅದಕ್ಕೆ ಬಹಿರಂಗಗೊಂಡವರಲ್ಲಿ ಸಾಮಾನ್ಯ ಲಕ್ಷಣಗಳು, ಪ್ರಥಮ ಚಿಕಿತ್ಸಾ ಕ್ರಮಗಳು, ಮುನ್ನೆಚ್ಚರಿಕೆಗಳು, ಮಾಡಬೇಕಾದ ಮತ್ತು ಮಾಡಬಾರದ ಕಾರ್ಯಗಳು ಮುಂತಾದವುಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. 

***



(Release ID: 1621979) Visitor Counter : 154