ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ಎ ಪಿ ಐ ಮತ್ತು ಮಧ್ಯವರ್ತಿ ಔಷಧಗಳ ಅವಲಂಬನೆ ಕಡಿಮೆ ಮಾಡಲು ಸಿ ಎಸ್ ಐ ಆರ್ - ಐ ಐ ಸಿ ಟಿ ನೂತನ ಉಪಕ್ರಮಗಳು
Posted On:
25 APR 2020 3:41PM by PIB Bengaluru
ಎ ಪಿ ಐ ಮತ್ತು ಮಧ್ಯವರ್ತಿ ಔಷಧಗಳ ಅವಲಂಬನೆ ಕಡಿಮೆ ಮಾಡಲು ಸಿ ಎಸ್ ಐ ಆರ್ - ಐ ಐ ಸಿ ಟಿ ನೂತನ ಉಪಕ್ರಮಗಳು
ಯಾವುದೇ ಔಷಧಿಗಳಲ್ಲಿ ಉದ್ದೇಶಿತ ಪರಿಣಾಮಗಳನ್ನು ಉಂಟುಮಾಡುವ ಪ್ರಮುಖ ಅಂಶಗಳೆಂದರೆ, ಸಕ್ರಿಯ ಔಷಧೀಯ ಪದಾರ್ಥಗಳು (ಎ.ಪಿ.ಐ.ಗಳು) ಮತ್ತು ಮಧ್ಯವರ್ತಿ ಔಷಧ ಅಂಶಗಳಾಗಿವೆ. ಆದರೆ ಭಾರತವು ವಿಶೇಷವಾಗಿ ಎ.ಪಿ.ಐ.ಗಳು ಮತ್ತು ಮಧ್ಯವರ್ತಿ ಔಷಧ ಅಂಶಗಳ ಪೂರೈಕೆಗಾಗಿ ಚೀನಾವನ್ನು ಅವಲಂಬಿಸಿದೆ. ಈಗ ಹೈದರಾಬಾದ್ ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ (ಐ.ಐ.ಸಿ.ಟಿ.) ಸಂಸ್ಥೆಯು ಸಕ್ರಿಯ ಔಷಧೀಯ ಪದಾರ್ಥಗಳು (ಎ.ಪಿ.ಐ.ಗಳು) ಮತ್ತು ಮಧ್ಯವರ್ತಿ ಔಷಧ ಅಂಶಗಳನ್ನು ಅಭಿವೃದ್ಧಿಪಡಿಸಲು ಮತ್ತು ತಯಾರಿಸಲು ಹೈದರಾಬಾದ್ ಮೂಲದ ಮತ್ತೊಂದು ಏಕೀಕೃತ ಔಷಧ ಕಂಪನಿ “ಲ್ಯಾಕ್ಸಾಯಿ ಲೈಫ್ ಸೈನ್ಸಸ್”ನೊಂದಿಗೆ ಸಹಕರಿಸುತ್ತಿದೆ. ಚೀನಾದಿಂದ ಈ ಅಗತ್ಯ ಪದಾರ್ಥಗಳ ಆಮದಿನ ಮೇಲೆ, ಭಾರತೀಯ ಔಷಧೀಯ ವಲಯದ ಅವಲಂಬನೆಯಿದೆ. ಈ ಉಪಕ್ರಮವು ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿ.ಎಸ್.ಐ.ಆರ್.) ಅಡಿಯಲ್ಲಿರುವ ಐ.ಐ.ಸಿ.ಟಿ ಸಂಸ್ಥೆಯು, ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಬಳಸಲಾಗುವ ಔಷಧಿಗಳ ಸಂಶ್ಲೇಷಣೆಗಾಗಿ ಲ್ಯಾಕ್ಸಾಯ್ ಜೊತೆ ಸೇರಿ ಕೆಲಸ ಮಾಡುತ್ತಿದೆ. ಈ ಸಹಯೋಗವು ಪ್ರಾಥಮಿಕವಾಗಿ ಉಮಿಫೆನೊವಿರ್, ರೆಮ್ಡೆಸಿವಿರ್ ಮತ್ತು ಪ್ರಮುಖ ಮಧ್ಯಂತರವಾದ ಹೈಡ್ರಾಕ್ಸಿ ಕ್ಲೋರೊಕ್ವಿನ್ (ಎಚ್.ಸಿ.ಕ್ಯು.)ಗಳನ್ನು ಕೇಂದ್ರೀಕರಿಸುತ್ತದೆ.
ಭಾರತವು ಮಲೇರಿಯಾ-ನಿಗ್ರಹ ಔಷಧ ಎಚ್.ಸಿ.ಕ್ಯೂ. ವನ್ನು ಅತಿಹೆಚ್ಚು ಉತ್ಪಾದಿಸುವ ದೇಶವಾಗಿದ್ದು, ಇತ್ತೀಚಿನ ವಾರಗಳಲ್ಲಿ ಬಹಳಷ್ಟು ಬೇಡಿಕೆಯ ಹೆಚ್ಚಳವನ್ನು ಕಂಡಿದೆ. ಕಳೆದ ಕೆಲವು ದಿನಗಳಿಂದ ಭಾರತವು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ 50 ಕ್ಕೂ ಹೆಚ್ಚು ಇತರೆ ದೇಶಗಳಿಗೆ ಎಚ್.ಸಿ.ಕ್ಯು.ವನ್ನು ರಫ್ತು ಮಾಡಿದೆ. ಈ ಸಹಯೋಗವು ಪ್ರಮುಖ ಕಚ್ಚಾ ಸಾಮಗ್ರಿಗಳ ವೆಚ್ಚ ಕಡಿತ ಮತ್ತು ಚೀನಾದ ಮೇಲೆ ಅವಲಂಬನೆ ಕಡಿಮೆಯಾಗಲೂ ಕಾರಣವಾಗುತ್ತದೆ. ಇದಲ್ಲದೆ, ಈ ಹಿಂದೆ ಎಬೋಲಾ ವೈರಸ್ ರೋಗಿಗಳಿಗೆ ನೀಡಲಾಗಿದ್ದ ರೆಮ್ಡೆಸಿವಿರ್ ಔಷಧವು ಪ್ರಸ್ತುತ ಕೊವಿಡ್ -19 ವಿರುದ್ಧ ಹೋರಾಟದಲ್ಲಿ ಬಳಸಲು, ಅದರ ಪರಿಣಾಮಕಾರಿತ್ವ ಮತ್ತು ಸುರಕ್ಷತೆಯ ಮೌಲ್ಯಮಾಪನದ ಕ್ಲಿನಿಕಲ್ ಪರೀಕ್ಷೆಗಳು ನಡೆಯುತ್ತಿವೆ.
ಸಾರ್ವಜನಿಕ ಆರೋಗ್ಯಕ್ಕೆ ನಿರ್ಣಾಯಕವಾಗಿರುವ ಔಷಧ ಸುರಕ್ಷತೆ ಮತ್ತು ಅಗತ್ಯ ಔಷಧಿಗಳ ಅಡೆತಡೆಯಿಲ್ಲದ ಪೂರೈಕೆಯ ಅಗತ್ಯತೆ ಮನಗಂಡು, ಭಾರತದಲ್ಲಿ ಬೃಹತ್ ಪ್ರಮಾಣದಲ್ಲಿ ಔಷಧ ಉತ್ಪಾದನೆಯನ್ನು ಪ್ರೋತ್ಸಾಹಿಸಲು, ಹಾಗೂ ಚೀನಾದ ಮೇಲಿನ ನಮ್ಮ ಅವಲಂಬನೆಯನ್ನು ಕಡಿಮೆ ಮಾಡಲು, ಪ್ರಧಾನಮಂತ್ರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಕೇಂದ್ರ ಸಚಿವ ಸಂಪುಟ ಸಭೆಯು ವಿಶೇಷ ಪ್ಯಾಕೇಜ್ ಅನ್ನು ಅನುಮೋದಿಸಿತು..
ಜಾಗತಿಕ ಔಷಧೀಯ ಕಂಪನಿಗಳ ರಸಾಯನಶಾಸ್ತ್ರದ ಆವಿಷ್ಕಾರಗಳ ಅಭಿಯಾನವನ್ನು ತೀವ್ರಗೊಳಿಸುವ ದೃಷ್ಟಿಯಿಂದ ಲಕ್ಸಾಯ್ ಲೈಫ್ ಸೈನ್ಸಸ್ ಪ್ರೈ. ಲಿಮಿಟೆಡ್ ಸಂಸ್ಥೆಯನ್ನು 2007ರಲ್ಲಿ ಸ್ಥಾಪಿಸಲಾಯಿತು. ಎ.ಪಿ.ಐ ಸೂತ್ರೀಕರಣ ಅಭಿವೃದ್ಧಿ ಮತ್ತು ಎ.ಪಿ.ಐ ತಯಾರಿಕೆಯಲ್ಲಿ ತೊಡಗಿಕೊಳ್ಳು ಮೂಲಕ ಇಂದು ಲಕ್ಸಾಯ್ ಸಂಸ್ಥೆ ಒಂದು ಸಮಗ್ರ ಔಷಧೀಯ ಸಂಸ್ಥೆಯಾಗಿ ಬೆಳೆದಿದೆ.
ಈ ಸಹಯೋಗವು ಔಷಧಗಳ ವಾಣಿಜ್ಯ ಉತ್ಪಾದನೆಗಾಗಿ ಬೇಕಾದ ಅಗತ್ಯ ಪೂರಕ ಜ್ಞಾನವನ್ನು ಒದಗಿಸುತ್ತದೆ. ಈ ಉತ್ಪನ್ನಗಳನ್ನು ವ್ಯಾಪಾರೀಕರಿಸಿದ ಮೊದಲ ಕೆಲವು ಸಂಸ್ಥೆಗಳಲ್ಲಿ ಲ್ಯಾಕ್ಸಾಯಿ ಲೈಫ್ ಸೈನ್ಸಸ್ ಕೂಡ ಒಂದು. ಈ ಎ.ಪಿ.ಐ.ಗಳು ಮತ್ತು ಮಧ್ಯವರ್ತಿ ಔಷಧೀಯ ಅಂಶಗಳ ಉತ್ಪಾದನೆಯನ್ನು ಲಾಕ್ಸಾಯಿ ತನ್ನ ಅಂಗಸಂಸ್ಥೆಯಾದ ಥೆರಪಿವಾ ಪ್ರೈವೇಟ್ ಲಿಮಿಟೆಡ್ ಮೂಲಕ ಮಾಡುತ್ತಿದ್ದು, ಯು.ಎಸ್. ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಯು.ಎಸ್.ಎಫ್.ಡಿ.ಎ.) / ಉತ್ತಮ ಉತ್ಪಾದನಾ ಅಭ್ಯಾಸ (ಜಿ.ಎಂ.ಪಿ) ಮುಂತಾದ ಮಾನದಂಡ ನೀಡುವ ಸಂಸ್ಥೆಗಳು ಇದನ್ನು ಅನುಮೋದಿಸಿವೆ.
ಹೆಚ್ಚಿನ ವಿವರಗಳಿಗಾಗಿ: ಡಾ. ಎಂ. ಚಂದ್ರಶೇಖರಂ, ಸಿ.ಎಸ್.ಐ.ಆರ್-ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ, ಹೈದರಾಬಾದ್ -500 007, ಭಾರತ
ಇಮೇಲ್ : headkim@iict.res.in]
***
(Release ID: 1618567)
Visitor Counter : 206