ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಲಾಕ್ ಡೌನ್ ಸಂದರ್ಭದಲ್ಲಿ ಆಹಾರ ಧಾನ್ಯಗಳ ಸರಬರಾಜು ನಿರ್ವಹಿಸಲು ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳಿಗೆ 2 ಹಡಗುಗಳನ್ನು ಮತ್ತು ಲಕ್ಷದ್ವೀಪಕ್ಕೆ 7 ಸಣ್ಣ ಹಡಗುಗಳನ್ನು ಕಳುಹಿಸಿದ ಎಫ್ ಸಿ ಐ
Posted On:
21 APR 2020 4:14PM by PIB Bengaluru
ಲಾಕ್ ಡೌನ್ ಸಂದರ್ಭದಲ್ಲಿ ಆಹಾರ ಧಾನ್ಯಗಳ ಸರಬರಾಜು ನಿರ್ವಹಿಸಲು ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳಿಗೆ 2 ಹಡಗುಗಳನ್ನು ಮತ್ತು ಲಕ್ಷದ್ವೀಪಕ್ಕೆ 7 ಸಣ್ಣ ಹಡಗುಗಳನ್ನು ಕಳುಹಿಸಿದ ಎಫ್ ಸಿ ಐ
ಕಳೆದ 27 ದಿನಗಳಲ್ಲಿ ಮಾಸಿಕ ಸರಾಸರಿಗಿಂತ ದುಪ್ಪಟ್ಟು, ಸುಮಾರು 6500 ಮೆಟ್ರಿಕ್ ಟನ್ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳಿಗೆ ಮತ್ತು ಲಕ್ಷದ್ವೀಪಕ್ಕೆ 1750 ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಸಾಗಾಣೆ ಮಾಡಲಾಯಿತು
ಈ ಸಂಕಷ್ಟದ ಸಮಯದಲ್ಲಿ ಅವಶ್ಯಕ ವಸ್ತುಗಳ ಸರಬರಾಜು ದೊಡ್ಡ ಸವಾಲಾಗಿ ಪರಿಣಮಿಸಿದಾಗ, ತಮ್ಮಲ್ಲಿ ಲಭ್ಯವಿರುವ ಎಲ್ಲ ಸಂಪನ್ಮೂಲಗಳು ಮತ್ತು ಸಾರಿಗೆ ವಿಧಾನಗಳನ್ನು ಬಳಸಿ ದೇಶದ ದೂರ ದ್ವೀಪ ಪ್ರದೇಶಗಳಲ್ಲೂ ಸಹ ಸಾಕಷ್ಟು ಆಹಾರ ಧಾನ್ಯಗಳು ಲಭ್ಯವಾಗುವಂತೆ ಎಫ್ ಸಿ ಐ ಖಚಿತಪಡಿಸುತ್ತಿದೆ.
ಕಳೆದ 27 ದಿನಗಳಿಂದ ಲಾಕ್ ಡೌನ್ ಅವಧಿ ಪ್ರಾರಂಭವಾದಾಗಿನಿಂದ ಭಾರತೀಯ ಆಹಾರ ನಿಗಮ (ಎಫ್ ಸಿ ಐ ) ಪೂರ್ಣ ಉತ್ಸಾಹದಿಂದ ಅಂಡಮಾನ್ , ನಿಕೋಬಾರ್ ಮತ್ತು ಲಕ್ಷದ್ವೀಪಗಳಿಗೆ ನಿರಂತರವಾಗಿ ಆಹಾರ ಧಾನ್ಯ ಪೂರೈಕೆಯಲ್ಲಿ ತೊಡಗಿದೆ. ಏರುಪೇರಿನ ಭೂ ನಕ್ಷೆ ಮತ್ತು ಸೀಮಿತ ಸಾರಿಗೆಯಿಂದಾಗಿ ಈ ದ್ವೀಪಗಳಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿ ಧಾನ್ಯಗಳನ್ನು ಯಾವುದೇ ಅಡಚಣೆಯಿಲ್ಲದೆ ಆಹಾರಧಾನ್ಯಗಳನ್ನು ರವಾನಿಸುವ ಕಾರ್ಯ ನಿರ್ವಹಣೆಗೆ ಹರಸಾಹಸ ಪಡಬೇಕಿದೆ. ಈ ದ್ವೀಪಗಳು ಪಿಡಿಎಸ್ ಮೇಲೆ ಸಂಪೂರ್ಣ ಅವಲಂಬಿತವಾಗಿರುವುದರಿಂದ ಸೂಕ್ತ ಸಮಯಕ್ಕೆ ಎಲ್ಲ ದ್ವೀಪ ಪ್ರದೇಶಗಳಿಗೆ ಆಹಾರಧಾನ್ಯಗಳು ತಲುಪುವಂತೆ ಖಚಿತಪಡಿಸುವುದು ಅತ್ಯಂತ ಮಹತ್ವದ್ದಾಗಿದೆ.
ಕಳೆದ 27 ದಿನಗಳ ದೇಶಾದ್ಯಂತದ ಲಾಕ್ ಡೌನ್ ಅವಧಿಯಲ್ಲಿ ಎಫ್ ಸಿ ಐ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳಿಗೆ 2 ನೌಕೆಗಳನ್ನು ಮತ್ತು ಲಕ್ಷದ್ವೀಪಕ್ಕೆ 7 ಚಿಕ್ಕ ನೌಕೆಗಳನ್ನು ಕಳುಹಿಸಿದೆ. ಇದು ಈ ದ್ವೀಪಗಳಿಗೆ ಕಳುಹಿಸುವ ಮಾಸಿಕ ಸರಾಸರಿಗಿಂತ ದುಪ್ಪಟ್ಟಾಗಿದೆ.
ಅಂಡಮಾನ್ ಮತ್ತು ನಿಕೊಬಾರ್ ಹಾಗೂ ಲಕ್ಷದ್ವೀಪಗಳು ಪ್ರಮುಖ ಭೂ ಪ್ರದೇಶದಿಂದ ರಸ್ತೆ/ರೈಲು ಮಾರ್ಗದ ಸಂಪರ್ಕ ಹೊಂದಿಲ್ಲವಾದ್ದರಿಂದ ವಿಶಿಷ್ಟ ರೂಪದ ಸಾರಿಗೆ ಸವಾಲುಗಳನ್ನು ಹೊಂದಿವೆ ಮತ್ತು ಆಹಾರ ಧಾನ್ಯ ಸರಬರಾಜಿಗೆ ಸಮುದ್ರ ಮಾರ್ಗವೊಂದೇ ಆಯ್ಕೆಯಾಗಿದೆ. ಅಂಡಮಾನ್ ಮತ್ತು ನಿಕೊಬಾರ್ ಹಾಗೂ ಲಕ್ಷದ್ವೀಪಗಳಲ್ಲಿ ಎಫ್ ಸಿ ಐ ಒಂದೊಂದು ಡಿಪೊ ಹೊಂದಿದೆ. ಪೋರ್ಟ್ ಬ್ಲೇರ್ ನಲ್ಲಿ 7080 ಮೆಟ್ರಿಕ್ ಟನ್ ಸಾಮರ್ಥ್ಯದ ಮತ್ತು ಆಂಡ್ರಾಥ್ ನಲ್ಲಿ 2500 ಮೆಟ್ರಿಕ್ ಟನ್ ಸಾಮರ್ಥ್ಯದ ಡಿಪೊಗಳಿವೆ. ಇದರ ಜೊತೆಗೆ ಪೋರ್ಟ್ ಬ್ಲೇರ್ ನಲ್ಲಿರುವ ಪ್ರಮುಖ ಡಿಪೊಗೆ ಸರಕು ಸಾಗಣೆ ಜೊತೆಗೆ ಕಾಕಿನಾಡಾ ಬಂದರು (ಆಂದ್ರಪ್ರದೇಶದಿಂದ) ಹಡಗಿನ ಮೂಲಕ ಆಹಾರ ಧಾನ್ಯಗಳನ್ನು ನೇರವಾಗಿ 12 ಪ್ರಧಾನ ವಿತರಣಾ ಕೇಂದ್ರಗಳಿಗೆ ನೇರವಾಗಿ ಸಾಗಿಸುವ ಮೂಲಕ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳ ಎಲ್ಲೆಡೆ ಪಿಡಿಎಸ್ ಮೂಲಕ ಆಹಾರ ಧಾನ್ಯಗಳ ಸರಬರಾಜನ್ನು ಎಫ್ ಸಿ ಐ ಖಚಿತಪಡಿಸುತ್ತದೆ. ಆಂಡ್ರಾಥ್ ನಲ್ಲಿರುವ 2500 ಮೆಟ್ರಿಕ್ ಟನ್ ನ ಎಫ್ ಸಿ ಐ ಗೋದಾಮಿನಿಂದ ಲಕ್ಷದ್ವೀಪಗಳ ಪಿಡಿಎಸ್ ಅವಶ್ಯಕತೆಯನ್ನು ಪೂರೈಸಲಾಗುತ್ತಿದೆ. ಆಂಡ್ರಾಥ್ ಎಫ್ ಸಿ ಐ ಗೆ ಮಂಗಳೂರು ಬಂದರು (ಕರ್ನಾಟಕದ) ಮೂಲಕ ಆಹಾರ ಧಾನ್ಯಗಳನ್ನು ಸರಬರಾಜು ಮಾಡಲಾಗುತ್ತಿದೆ ಮತ್ತು ಆಂಡ್ರಾಥ್ ನಿಂದ ಪುಟ್ಟ ದ್ವೀಪಗಳಿಗೆ ಸಾಗಿಸುವ ಕೆಲಸವನ್ನು ಕೇಂದ್ರಾಡಳಿತ ಪ್ರದೇಶದ ಆಡಳಿತ ವಹಿಸಿಕೊಳ್ಳುತ್ತದೆ.
27 ದಿನಗಳ ಲಾಕ್ ಡೌನ್ ಅವಧಿಯಲ್ಲಿ ಮಂಗಳೂರು ಬಂದರಿನಿಂದ ಸುಮಾರು 1750 ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಲಕ್ಷ ದ್ವೀಪಗಳಿಗೆ ಸಾಗಿಸಲಾಗಿದೆ. ಇದು ಸಾಮಾನ್ಯ ಮಾಸಿಕ ಸರಾಸರಿ 600 ಮೆಟ್ರಿಕ್ ಟನ್ ಗಿಂತ 3 ಪಟ್ಟು ಹೆಚ್ಚಾಗಿದೆ. ಇದೇ ರೀತಿ, ಕಾಕಿನಾಡಾ ಬಂದರಿನಿಂದ ಪೋರ್ಟ್ ಬ್ಲೇರ್ ಗೆ ಮತ್ತು ಅಂಡಮಾನ್ ಮತ್ತು ನಿಕೊಬಾರ್ ನ ವಿವಿಧ ದ್ವೀಪಗಳಲ್ಲಿರುವ ವಿವಿಧ ಪಿಡಿಸಿಗಳಿಗೆ ಸುಮಾರು 6500 ಮೆಟ್ರಿಕ್ ಟನ್ ಧಾನ್ಯವನ್ನು ರವಾನಿಸಲಾಗಿದೆ. ಇದು ಸಾಮಾನ್ಯ ಮಾಸಿಕ ಸರಾಸರಿ 3000 ಮೆಟ್ರಿಕ್ ಟನ್ ಗಿಂತ ದುಪ್ಪಟ್ಟಾಗಿದೆ.
ದೇಶಾದ್ಯಂತದ ಲಾಕ್ ಡೌನ್ ನಿಂದ ಉಂಟಾದ ಅಡಚಣೆಗಳ ನಡುವೆ ಈ ದ್ವೀಪಗಳಿಗೆ ಆಹಾರ ಧಾನ್ಯಗಳ ನಿರಂತರ ಸರಬರಾಜು ಖಚಿತಪಡಿಸಲಾಗಿದೆ ಮತ್ತು ಲಾಕ್ ಡೌನ್ ಆದ 27 ದಿನಗಳಲ್ಲಿ 1100 ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಲಕ್ಷದ್ವೀಪಗಳಲ್ಲಿ ಮತ್ತು 5500 ಮೆಟ್ರಿಕ್ ಟನ್ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳಲ್ಲಿ ವಿತರಿಸಲಾಗಿದೆ. ಇದರಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ (ಪಿಎಂಜಿಕೆಎವಾಯ್) ಹೆಚ್ಚುವರಿ ಹಂಚಿಕೆಯೂ ಒಳಗೊಂಡಿದೆ. ಈಗಾಗಲೇ 3 ತಿಂಗಳ ಹಂಚಿಕೆಯನ್ನು ಲಕ್ಷದ್ವೀಪ ಪಡೆದುಕೊಂಡಿದೆ. ಇದೇ ಯೋಜನೆಯಡಿ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು 2 ತಿಂಗಳಿಗಿಂತ ಹೆಚ್ಚಿನ ಕೋಟಾವನ್ನು ಪಡೆದುಕೊಂಡಿದೆ.
***
(Release ID: 1616878)
Visitor Counter : 188