ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಕೇಂದ್ರ ಗೃಹ ಸಚಿವಾಲಯದಿಂದ ಪರಿಷ್ಕೃತ ಸಮಗ್ರ ಮಾರ್ಗಸೂಚಿ ಪ್ರಕಟ

Posted On: 15 APR 2020 10:56AM by PIB Bengaluru

ಕೇಂದ್ರ ಗೃಹ ಸಚಿವಾಲಯದಿಂದ ಪರಿಷ್ಕೃತ ಸಮಗ್ರ ಮಾರ್ಗಸೂಚಿ ಪ್ರಕಟ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2020ರ ಏಪ್ರಿಲ್ 14ರಂದು ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುತ್ತಾ, ದೇಶದಲ್ಲಿ ಕೋವಿಡ್ -19 ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಘೋಷಿಸಿರುವ ಲಾಕ್ ಡೌನ್ 2020ರ ಮೇ.3 ವರೆಗೆ ವಿಸ್ತರಣೆ ಮಾಡಲಾಗುವುದು ಎಂದು ಘೋಷಿಸಿದರು. ಅಲ್ಲದೆ, ಪ್ರಧಾನಮಂತ್ರಿ ಅವರು, ದೇಶದಲ್ಲಿ ಆಯ್ದ ಕೆಲವು ವಲಯಗಳಲ್ಲಿ 2020ರ ಏಪ್ರಿಲ್ 20ರಿಂದ ಕೆಲವು ಆಯ್ದ ಅಗತ್ಯ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಪ್ರಕಟಿಸಿದರು.

ಪ್ರಧಾನಮಂತ್ರಿಗಳು ಪ್ರಕಟಣೆ ಬೆನ್ನಲ್ಲೆ, ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ(ಎಂಎಚ್ಎ) 2020ರ ಮೇ.3ರವರೆಗೆ ಭಾರತದಲ್ಲಿ ಲಾಕ್ ಡೌನ್ ವಿಸ್ತರಣೆ ಮಾಡಿ 2020ರ ಏಪ್ರಿಲ್ 14ರಂದು ಆದೇಶ ಹೊರಡಿಸಿದೆ. ಮತ್ತೆ, ಎಂಎಚ್ಎ, 2020ರ ಏಪ್ರಿಲ್ 15ರಂದು ಮತ್ತೊಂದು ಆದೇಶ ಹೊರಡಿಸಿ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು/ಜಿಲ್ಲಾಡಳಿತಗಳಲ್ಲಿ ಸೊಂಕಿತ ವಲಯಗಳೆಂದು ಗುರುತಿಸದೇ ಇರುವ ಪ್ರದೇಶಗಳಲ್ಲಿ ಆಯ್ದ ಹೆಚ್ಚುವರಿ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ.

2020ರ ಏಪ್ರಿಲ್ 15ರ ಆದೇಶದ ಜೊತೆಗೆ ಸಮಗ್ರ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಅದರಲ್ಲಿ ದೇಶಾದ್ಯಂತ ನಿರ್ಬಂಧಿತ ಚಟುವಟಿಕೆಗಳನ್ನು ಹೊರಗಿಟ್ಟು ಮಾಡಲಾಗಿದೆ. ಸೋಂಕಿತ ವಲಯಗಳಲ್ಲಿ ಅವಕಾಶ ನೀಡಲಾಗಿರುವ ಚಟುವಟಿಕೆಗಳು ಮತ್ತು ದೇಶದ ಇತರೆಡೆ 2020ರ ಏಪ್ರಿಲ್ 20ರ ನಂತರ ಅವಕಾಶ ನೀಡಲಿರುವ ಆಯ್ದ ಅನುಮತಿ ನೀಡಲಾಗುವ ಚಟುವಟಿಕೆಗಳ ಕುರಿತು ಪ್ರಸ್ತಾಪಿಸಲಾಗಿದೆ.

ಪರಿಷ್ಕೃತ ಮಾರ್ಗಸೂಚಿಗಳ ಉದ್ದೇಶವೆಂದರೆ ಮೊದಲ ಹಂತದ ಲಾಕ್ ಡೌನ್ ವೇಳೆ ಪಡೆದಿರುವ ಲಾಭವನ್ನು ಗುರುತಿಸುವುದು ಮತ್ತು ಕೋವಿಡ್-19 ಹರಡುವ ಪ್ರಮಾಣವನ್ನು ಗಣನೀಯವಾಗಿ ಕ್ರಮೇಣ ತಗ್ಗಿಸುವುದು ಹಾಗೂ ರೈತರು, ಕೂಲಿ ಕಾರ್ಮಿಕರು ಮತ್ತು ದಿನಗೂಲಿ ನೌಕರರಿಗೆ ಕೆಲವು ಪರಿಹಾರಗಳನ್ನು ಒದಗಿಸಿಕೊಡುವುದಾಗಿದೆ.

ದೇಶಾದ್ಯಂತ ನಿರ್ಬಂಧಿಸಲಾಗಿರುವ ಚಟುವಟಿಕೆಗಳೆಂದರೆ, ವಿಮಾನ ರೈಲು ಮತ್ತು ರಸ್ತೆ ಪ್ರಯಾಣ, ಶೈಕ್ಷಣಿಕ ಸಂಸ್ಥೆಗಳು ಮತ್ತು ತರಬೇತಿ ಸಂಸ್ಥೆಗಳ ಕಾರ್ಯಾಚರಣೆ, ವಾಣಿಜ್ಯ ಮತ್ತು ಕೈಗಾರಿಕಾ ಚಟುವಟಿಕೆಗಳು ಆತಿಥ್ಯ ಸೇವೆಗಳು, ಎಲ್ಲ ಸಿನಿಮಾ ಮಂದಿರಗಳು, ಶಾಪಿಂಗ್ ಕಾಂಪ್ಲೆಕ್ಸ್ ಗಳು, ಥಿಯೇಟರ್ ಗಳು ಇತ್ಯಾದಿ. ಎಲ್ಲಾ ಸಾಮಾಜಿಕ, ರಾಜಕೀಯ ಮತ್ತು ಇತರ ಕಾರ್ಯಕ್ರಮಗಳು, ಧಾರ್ಮಿಕ ಸಭೆಗಳೂ ಸೇರಿದಂತೆ ಸಾರ್ವಜನಿಕರಿಗೆ ಧಾರ್ಮಿಕ ಸ್ಥಳಗಳು/ಪೂಜಾ ಸ್ಥಳಗಳು ತೆರೆಯುವುದರ ವಿರುದ್ಧ ನಿರ್ಬಂಧ ಮುಂದುವರಿಯಲಿದೆ.

ಇನ್ನೂ ಕೆಲವು ರಾಷ್ಟ್ರೀಯ ಮಾರ್ಗಸೂಚಿಗಳನ್ನು ಸೂಚಿಸಲಾಗಿದೆ. ಅವುಗಳೆಂದರೆ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ದುಡಿಯುವ ಜಾಗಗಳಲ್ಲಿ ಮನೆಯಲ್ಲೇ ತಯಾರಿಸಲಾದ ಮುಖ ರಕ್ಷಾಕವಚಗಳನ್ನು ಧರಿಸುವುದು, ಸ್ಯಾನಿಟೈಸರ್ ಮತ್ತಿತರ ಆರೋಗ್ಯ ರಕ್ಷಣಾ ಕ್ರಮಗಳನ್ನು ಕೈಗೊಳ್ಳುವುದು ಹಾಗೂ ಕಠಿಣ ಶುಚಿತ್ವ ನಿಯಮಗಳನ್ನು ಪಾಲಿಸುವುದು, ಥರ್ಮಲ್ ಸ್ಕ್ರೀನಿಂಗ್ ಮತ್ತು ಉಗುಳುವವರಿಗೆ ದಂಡ ವಿಧಿಸುವುದು ಇತ್ಯಾದಿ. ನಿಯಮ ಉಲ್ಲಂಘನೆಗಳಿಗೆ ದಂಡ ವಿಧಿಸಲಾಗುವುದು.

2020ರ ಏಪ್ರಿಲ್ 20ರಿಂದ ಜಾರಿಗೆ ಬರಲಿರುವ ಪರಿಷ್ಕೃತ ಮಾರ್ಗಸೂಚಿಯಲ್ಲಿ ಅನುಮತಿ ನೀಡಲಾಗಿರುವ ಚಟುವಟಿಕೆಗಳಿಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ(ಎಂಒಎಚ್ಎಫ್&ಡಬ್ಲ್ಯೂ) ಹೊರಡಿಸಿರುವ ಮಾರ್ಗಸೂಚಿಯಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು/ಜಿಲ್ಲಾಡಳಿತ ಸೋಂಕಿತ ಪ್ರದೇಶ ಎಂದು ಗುರುತಿಸಿರುವ ಜಾಗಗಳಲ್ಲಿ ಅಂತಹ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ. ಈ ವಲಯಗಳಲ್ಲಿ ಅತ್ಯವಶ್ಯಕ ಸೇವೆಗಳನ್ನು ಹೊರತುಪಡಿಸಿ ಅಂದರೆ ವೈದ್ಯಕೀಯ ತುರ್ತು ಅಗತ್ಯತೆಗಳು ಮತ್ತು ಕಾನೂನು ಹಾಗೂ ಸುವ್ಯವಸ್ಥೆ ಕರ್ತವ್ಯ ಮತ್ತು ಸರ್ಕಾರಿ ಕಾರ್ಯಕಲಾಪ ಮುಂದುವರಿಕೆ ಸೇವೆಗಳ ಬಿಟ್ಟು ಯಾವುದೇ ಬಗೆಯ ಜನರ ಸಂಚಾರಕ್ಕೆ, ಒಳಹೋಗುವುದು, ಹೊರ ಬರುವುದಕ್ಕೆ ಅವಕಾಶವಿಲ್ಲ,

ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಅಥವಾ ತ್ವರಿತವಾಗಿ ಪ್ರಕರಣಗಳು ಹೆಚ್ಚಾಗುತ್ತಿರುವ ಹಾಟ್ ಸ್ಪಾಟ್ ಜಿಲ್ಲೆಗಳಲ್ಲಿ ಕಠಿಣ ರೀತಿಯಲ್ಲಿ ನಿಯಂತ್ರಣ ಕ್ರಮಗಳನ್ನು ಅನುಷ್ಠಾನಗೊಳಿಸಬೇಕು. ಸೋಂಕಿತ ವಲಯಗಳನ್ನು ಹೊರಗಿಡುವ ಅಥವಾ ಪ್ರತ್ಯೇಕಿಸುವ ಕುರಿತಂತೆ ವಿವರವಾದ ಮಾರ್ಗಸೂಚಿಯನ್ನು ಮತ್ತು ಸೋಂಕು ನಿಯಂತ್ರಣ ಕ್ರಮಗಳ ಕುರಿತು ತಿಳಿಸಲಾಗಿದೆ. ಈ ವಲಯಗಳಲ್ಲಿ ಕೇವಲ ಅತ್ಯಗತ್ಯ ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗುವುದು ಮತ್ತು ನಿಯಂತ್ರಣ ಹಾಗೂ ಸಂಚಾರವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುವುದು.

2020ರ ಏಪ್ರಿಲ್ 20ರಿಂದ ಅನುಮತಿ ನೀಡಲಾಗಿರುವ ಚಟುವಟಿಕೆಗಳ ಉದ್ದೇಶವೆಂದರೆ ಕೃಷಿ ಹಾಗೂ ಅದರ ಸಂಬಂಧಿ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ನಡೆಯುವಂತಾಗಬೇಕು, ಗ್ರಾಮೀಣ ಆರ್ಥಿಕತೆ ಸಂಪೂರ್ಣ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು, ದಿನಗೂಲಿ ನೌಕರರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಬೇಕು ಮತ್ತು ಆಯ್ದ ಕೈಗಾರಿಕಾ ಚಟುವಟಿಕೆಗಳಿಗೆ ತಮ್ಮ ಕಾರ್ಯಾಚರಣೆ ಪುನರಾರಂಭಕ್ಕೆ ಅವಕಾಶ ನೀಡುವ ಮೂಲಕ ಇತರೆ ಕಾರ್ಮಿಕ ವರ್ಗದ ಸದಸ್ಯರಿಗೆ ಉದ್ಯೋಗಾವಕಾಶ ನೀಡುವುದು. ಆ ವೇಳೆ ಅಗತ್ಯ ಸುರಕ್ಷತಾ ಮತ್ತು ಕಡ್ಡಾಯ ನಿರ್ದಿಷ್ಟ ಕಾರ್ಯತಂತ್ರ ಶಿಷ್ಟಾಚಾರ(ಎಸ್ಒಪಿ) ಪಾಲನೆ ಮತ್ತು ಡಿಜಿಟಲ್ ಆರ್ಥಿಕತೆ ಉತ್ತೇಜಿಸುವುದಾಗಿದೆ. ಇದೇ ವೇಳೆ ದೇಶದಲ್ಲಿ ಕೋವಿಡ್-19 ಹರಡುವುದನ್ನು ನಿಯಂತ್ರಿಸುವ ಕುರಿತಂತೆ ಅತ್ಯಗತ್ಯವಾದ ಕೋವಿಡ್-19 ನಿರ್ವಹಣೆ ಕುರಿತ ರಾಷ್ಟ್ರೀಯ ನಿರ್ದೇಶನಗಳನ್ನು ಹೊರಡಿಸಲಾಗಿದೆ. ಅವುಗಳನ್ನು ವಿಪತ್ತು ನಿರ್ವಹಣಾ ಕಾಯ್ದೆ – 2005ರ ಅಡಿ ನಿಗದಿಪಡಿಸಿರುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳು ದಂಡ ಮತ್ತು ಶಿಕ್ಷಾ ಕ್ರಮಗಳ ಮೂಲಕ ಜಾರಿಗೊಳಿಸಬೇಕಾಗಿದೆ.

ಅವಶ್ಯಕ ಅಥವಾ ಅವಶ್ಯಕವಲ್ಲದ ವಸ್ತುಗಳು ಸೇರಿದಂತೆ ಎಲ್ಲ ಬಗೆಯ ಸರಕುಗಳ ಸಾಗಾಣೆಗೆ ಅವಕಾಶ ನೀಡುವುದು; ಕೃಷಿ ಉತ್ಪನ್ನಗಳ ಖರೀದಿ, ವಿಕೇಂದ್ರೀಕೃತ ಮತ್ತು ನೇರ ಹಾಗೂ ಮಂಡಿಗಳಲ್ಲಿ ಕೃಷಿ ಮಾರುಕಟ್ಟೆ ಚಟುವಟಿಕೆಗಳನ್ನು ಕೈಗೊಳ್ಳುವುದು ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಅವಕಾಶ ನೀಡುವುದು, ಜೊತೆಗೆ ರಸಗೊಬ್ಬರ, ಕೀಟನಾಶಕ ಮತ್ತು ಬೀಜಗಳ ಉತ್ಪಾದನೆ ವಿತರಣೆ ಮತ್ತು ಮಾರಾಟ; ಮೀನುಗಾರಿಕೆ ಮತ್ತು ಒಳನಾಡು ಮೀನುಗಾರಿಕಾ ಚಟುವಟಿಕೆಗಳು; ಪಶುಸಂಗೋಪನಾ ಚಟುವಟಿಕೆಗಳು ಅದರಲ್ಲಿ ಹಾಲು, ಹಾಲಿನ ಉತ್ಪನ್ನ, ಕುಕ್ಕುಟ ಮತ್ತು ಜಾನುವಾರು ಸಾಕಾಣೆ ಸೇರಿದೆ. ಅಲ್ಲದೆ ಚಹಾ, ಕಾಫಿ ಮತ್ತು ರಬ್ಬರ್ ಪ್ಲಾಂಟೇಶನ್ ಗಳ ಕಾರ್ಯನಿರ್ವಹಣೆಗೆ ಅವಕಾಶ ಮಾಡಿಕೊಡಲಾಗುವುದು.

ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುವ ಸಲುವಾಗಿ ಆಹಾರ ಸಂಸ್ಕರಣಾ ಕೈಗಾರಿಕಗಳು, ರಸ್ತೆಗಳ ನಿರ್ಮಾಣ, ನೀರಾವರಿ ಯೋಜನೆಗಳು, ಗ್ರಾಮೀಣ ಪ್ರದೇಶದಲ್ಲಿ ಕಟ್ಟಡ ಮತ್ತು ಕೈಗಾರಿಕಾ ಯೋಜನೆಗಳು, ಮನ್ರೇಗಾ ಕಾಮಗಾರಿಗಳು ಅದರಲ್ಲಿ ವಿಶೇಷವಾಗಿ ನೀರಾವರಿ ಮತ್ತು ಜಲಸಂರಕ್ಷಣೆ ಕಾರ್ಯಗಳು ಮತ್ತು ಗ್ರಾಮೀಣ ಸಮುದಾಯ ಸೇವಾ ಕೇಂದ್ರಗಳು(ಸಿಎಸ್ ಸಿಎಸ್) ಗಳಿಗೆ ಅವಕಾಶ ನೀಡುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಈ ಚಟುವಟಿಕೆಗಳು ಕಾರ್ಯಾರಂಭ ಮಾಡಲು ಅವಕಾಶ ನೀಡಲಾಗುವುದು. ಈ ಎಲ್ಲ ಚಟುವಟಿಕೆಗಳು ಗ್ರಾಮೀಣ ಕಾರ್ಮಿಕರಿಗೆ ಮತ್ತು ವಲಸೆ ಕಾರ್ಮಿಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ.

ವಿಶೇಷ ವಿತ್ತ ವಲಯ (ಎಸ್ಇಝೆಡ್), ಇಒಯು, ಕೈಗಾರಿಕಾ ಎಸ್ಟೇಟ್ ಮತ್ತು ಕೌಗಾರಿಕಾ ಟೌನ್ ಶಿಪ್ ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಎಸ್ಒಪಿ ಅನುಷ್ಠಾನದ ನಂತರ ಉತ್ಪಾದನಾ ಮತ್ತು ಕೈಗಾರಿಕಾ ಚಟುವಟಿಕೆಗಳನ್ನು ಕೈಗೊಳ್ಳಲು ಅವಕಾಶ ನೀಡಲಾಗುವುದು. ಐಟಿ ಹಾರ್ಡ್ ವೇರ್ ಉತ್ಪಾದನೆ ಮತ್ತು ಅವಶ್ಯಕ ಸರಕುಗಳು ಮತ್ತು ಪ್ಯಾಕೇಜಿಂಗ್ ಉತ್ಪಾದನೆಗೆ ಅವಕಾಶ ನೀಡಲಾಗುವುದು. ಕಲ್ಲಿದ್ದಲು, ಗಣಿ ಮತ್ತು ತೈಲ ಉತ್ಪಾದನೆ ಚಟುವಟಿಕೆಗಳಿಗೆ ಅನುಮತಿ ನೀಡಲಾಗುವುದು. ಈ ಕ್ರಮಗಳಿಂದಾಗಿ ಕೈಗಾರಿಕಾ ಮತ್ತು ಉತ್ಪಾದನಾ ವಲಯಗಳು ಪುನಶ್ಚೇತನಗೊಂಡು, ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ ಮತ್ತು ಇವುಗಳು ಸಾಮಾಜಿಕ ಅಂತರ ಹಾಗೂ ಸುರಕ್ಷತಾ ಮಾನದಂಡಗಳನ್ನು ಕಾಯ್ದುಕೊಳ್ಳುವ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಇದೇ ವೇಳೆ ಹಣಕಾಸು ವಿಭಾಗದ ಪ್ರಮುಖ ಸಂಸ್ಥೆಗಳಾದ ಉದಾಹರಣೆಗೆ ಆರ್ ಬಿಐ, ಬ್ಯಾಂಕುಗಳು, ಎಟಿಎಂಗಳು, ಸೆಬಿ ಅಧಿಸೂಚನೆ ಹೊರಡಿಸಿರುವಂತೆ ಷೇರು ಮಾರುಕಟ್ಟೆ ಮತ್ತು ವಿಮಾ ಕಂಪನಿಗಳು ಕೂಡ ಕಾರ್ಯನಿರ್ವಹಣೆ ಮಾಡಲಿವೆ. ಇವುಗಳು ಕೈಗಾರಿಕಾ ವಲಯಕ್ಕೆ ಅಗತ್ಯ ನಗದು ಮತ್ತು ಸಾಲದ ಬೆಂಬಲವನ್ನು ಒದಗಿಸಲಿದೆ.

ಸೇವಾ ವಲಯಕ್ಕೆ ಡಿಜಿಟಲ್ ಆರ್ಥಿಕತೆ ಅತ್ಯಂತ ಪ್ರಮುಖವಾಗಿದೆ ಮತ್ತು ಅದು ರಾಷ್ಟ್ರದ ಪ್ರಗತಿಗೆ ಅತ್ಯಗತ್ಯವಾಗಿದೆ. ಅದರಂತೆ ಇ-ವಾಣಿಜ್ಯ ಕಾರ್ಯಾಚರಣೆಗಳು ಐಟಿ ಮತ್ತು ಐಟಿ ಸಂಬಂಧಿತ ಸೇವಾ ಚಟುವಟಿಕೆಗಳು, ಸರ್ಕಾರದ ಚಟುವಟಿಕೆಗಳಿಗೆ ಡಾಟಾ ಮತ್ತು ಕಾಲ್ ಸೆಂಟರ್ ಗಳು ಮತ್ತು ಆನ್ ಲೈನ್ ಬೋಧನೆ ಮತ್ತು ದೂರ ಶಿಕ್ಷಣ ಚಟುವಟಿಕೆಗಳಿಗೂ ಸಹ ಅವಕಾಶ ನೀಡಲಾಗುವುದು.

ಪರಿಷ್ಕೃತ ಮಾರ್ಗಸೂಚಿಯಲ್ಲಿ ಆರೋಗ್ಯ ಸೇವೆಗಳು ಮತ್ತು ಸಾಮಾಜಿಕ ವಲಯಗಳು ಎಂದಿನಂತೆ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ; ಸಾರ್ವಜನಿಕ ಸೇವೆಗಳು ಯಾವುದೇ ಅಡೆತಡೆ ಇಲ್ಲದೆ ಮುಂದುವರಿಯುತ್ತವೆ; ಅತ್ಯವಶ್ಯಕ ವಸ್ತುಗಳ ಪೂರೈಕೆ ಸರಣಿ ಯಾವುದೇ ಅಡೆತಡೆ ಇಲ್ಲದೆ ಮುಂದುವರಿಯುತ್ತದೆ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳ ಪ್ರಮುಖ ಕಚೇರಿಗಳು ಅಗತ್ಯ ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಲಿವೆ.

ಒಟ್ಟಾರೆ ಪರಿಷ್ಕೃತ ಸಮಗ್ರ ಮಾರ್ಗಸೂಚಿಯನ್ನು ಆರ್ಥಿಕ ವಲಯದ ಕಾರ್ಯನಿರ್ವಹಣೆ ದೃಷ್ಟಿಯಿಂದ ರೂಪಿಸಲಾಗಿದ್ದು, ಇವು ಗ್ರಾಮೀಣ ಮತ್ತು ಕೃಷಿ ಅಭಿವೃದ್ಧಿ ದೃಷ್ಟಿಯಲ್ಲಿ ಅತ್ಯಂತ ಪ್ರಮುಖವಾದವು. ಇವು ಉದ್ಯೋಗಾವಕಾಶವನ್ನು ಸೃಷ್ಟಿಸುತ್ತವೆ. ದೇಶದಲ್ಲಿ ಕೋವಿಡ್-19 ಹರಡುವುದನ್ನು ನಿಯಂತ್ರಿಸಲು ಸುರಕ್ಷತೆ ಮತ್ತು ಶಿಷ್ಟಾಚಾರಗಳ ಕಡ್ಡಾಯ ಪಾಲನೆ ಮಾಡುವುದು ಅತ್ಯಗತ್ಯ.

ಕೇಂದ್ರ ಸಂಪುಟ ಕಾರ್ಯದರ್ಶಿ, ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಮತ್ತು ಡಿಜಿಪಿಗಳೊಂದಿಗೆ ಸಭೆ ನಡೆಸಿ, ಇಂದು ಹೊರಡಿಸಲಾಗಿರುವ ಸಮಗ್ರ ಪರಿಷ್ಕೃತ ಮಾರ್ಗಸೂಚಿಯನ್ನು ಸುಗಮ ಮತ್ತು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕುರಿತು ಸಮಾಲೋಚಿಸಿದರು. ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ, ಗೃಹ ಸಚಿವಾಲಯದ ಕಾರ್ಯದರ್ಶಿ ಮತ್ತು ಕೇಂದ್ರ ಆರೋಗ್ಯ ಕಾರ್ಯದರ್ಶಿ ಸಭೆಯಲ್ಲಿದ್ದರು.

ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಪಾಲಿಕೆಗಳ ಆಯುಕ್ತರು ಹಾಗೂ ಸಿವಿಲ್ ಸರ್ಜನ್ ಗಳು ಈ ಸಮಾವೇಶದಲ್ಲಿ ಭಾಗವಹಿಸಿದ್ದರು.

***

 


(Release ID: 1614704) Visitor Counter : 391