ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ರಾಜ್ಯ ಸರಕಾರಗಳು ನೀಡಿದ ಪಡಿತರ ಕಾರ್ಡ್ ಹೊಂದಿರುವ ಎನ್.ಎಫ್.ಎಸ್.ಎ. ಯೇತರ ಫಲಾನುಭವಿಗಳಿಗೂ ಆಹಾರ ಧಾನ್ಯ

Posted On: 09 APR 2020 8:46PM by PIB Bengaluru

ರಾಜ್ಯ ಸರಕಾರಗಳು ನೀಡಿದ ಪಡಿತರ ಕಾರ್ಡ್ ಹೊಂದಿರುವ ಎನ್.ಎಫ್.ಎಸ್.ಎ. ಯೇತರ ಫಲಾನುಭವಿಗಳಿಗೂ ಆಹಾರ ಧಾನ್ಯ

ದೇಶಾದ್ಯಂತ 77 ರೇಕ್ ಗಳಲ್ಲಿ ಸುಮಾರು 2.16 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಸಾಗಾಟ ಮಾಡಿ ಎಫ್.ಸಿ.ಐ. ಹೊಸ ದಾಖಲೆ

 

ರಾಜ್ಯ ಸರಕಾರಗಳು ತಮ್ಮ ಯೋಜನೆಗಳಡಿಯಲ್ಲಿ ನೀಡಿರುವ ಪಡಿತರ ಕಾರ್ಡುದಾರರಿಗೆ ಅವರು ಎನ್.ಎಫ್.ಎಸ್.ಎ. ವ್ಯಾಪ್ತಿಯಲ್ಲಿ ಪರಿಗಣನೆಗೆ ಬಾರದಿದ್ದರೂ ಅವರಿಗೆ ದೇಶಾದ್ಯಂತ ಏಕ ರೂಪವಾಗಿ ಓರ್ವ ವ್ಯಕ್ತಿಗೆ ತಿಂಗಳಿಗೆ ತಲಾ 5 ಕಿಲೋದಂತೆ 3 ತಿಂಗಳ ಕಾಲ ಕಿಲೋ ಒಂದರ 21 ರೂಪಾಯಿ ದರದಲ್ಲಿ ಗೋಧಿ ಮತ್ತು ಕಿಲೋ ಒಂದರ 22 ರೂಪಾಯಿ ದರದಲ್ಲಿ ಅಕ್ಕಿಯನ್ನು ವಿತರಿಸುವಂತೆ ಭಾರತೀಯ ಆಹಾರ ನಿಗಮಕ್ಕೆ ಭಾರತ ಸರಕಾರ ನಿರ್ದೇಶನ ನೀಡಿದೆ. ರಾಜ್ಯ ಸರಕಾರಗಳಿಗೆ ಈ ದಾಸ್ತಾನನ್ನು ಒಂದೇ ಬಾರಿ ಎತ್ತುವಳಿ ಮಾಡಲು ಅಥವಾ ತಿಂಗಳ ಆಧಾರದಲ್ಲಿ ಜೂನ್ 2020 ರವರೆಗೆ 3 ತಿಂಗಳು ಎತ್ತುವಳಿ ಮಾಡಲು ಅವಕಾಶ ಒದಗಿಸಿದೆ.

ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವ ಸ್ವಯಂ ಸೇವಾ ಸಂಸ್ಥೆಗಳು/ ದತ್ತಿ ಸಂಘಟನೆಗಳಿಗೆ ನೆರವಾಗಲು ಕಿಲೋ ಒಂದರ 21 ರೂ. ದರದಲ್ಲಿ ಗೋಧಿ, ಮತ್ತು ಕಿಲೋ ಒಂದರ 22 ರೂ. ದರದಲ್ಲಿ ಅಕ್ಕಿಯನ್ನು ದೇಶಾದ್ಯಂತ ಏಕ ರೂಪದಲ್ಲಿ ಅಂತಹ ಎಲ್ಲಾ ಸಂಘಟನೆಗಳಿಗೂ ಪ್ರಮಾಣದ ಮೇಲೆ ಯಾವುದೇ ಗರಿಷ್ಟ ಮಿತಿ ಇಲ್ಲದಂತೆ ಒದಗಿಸಲು ಸರಕಾರವು ಎಫ್.ಸಿ.ಐ. ಗೆ ನಿರ್ದೇಶನಗಳನ್ನು ನೀಡಿದೆ. ಈ ನಿರ್ದೇಶನಗಳು ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ದೇಶದಲ್ಲಿ ಸಮಾಜದ ಪ್ರತಿಯೊಂದು ವರ್ಗಕ್ಕೂ ಸಾಕಷ್ಟು ಪ್ರಮಾಣದಲ್ಲಿ ಆಹಾರ ಧಾನ್ಯಗಳು ನ್ಯಾಯೋಚಿತ ದರದಲ್ಲಿ ದೊರೆಯಬೇಕು ಎಂಬ ನಿಟ್ಟಿನಲ್ಲಿ ಉಪಯುಕ್ತ ಪ್ರಯತ್ನಗಳಾಗಿವೆ ಮತ್ತು ಅದನ್ನು ಖಾತ್ರಿಪಡಿಸುವ ಮೂಲಕ ದೇಶದಲ್ಲಿ ಆಹಾರ ಧಾನ್ಯ ಪೂರೈಕೆ ಸ್ಥಿತಿಯನ್ನು ಉತ್ತಮ ಮಟ್ಟದಲ್ಲಿಡಲು ಸಹಕಾರಿಯಾಗಲಿವೆ.

5.3 ಲಕ್ಷ ಪಡಿತರ ಅಂಗಡಿಗಳ (ಎಫ್.ಪಿ.ಎಸ್.) ಮೂಲಕ 81 ಕೋಟಿಗೂ ಅಧಿಕ ಜನರನ್ನು ಒಳಗೊಂಡ ವಿಶ್ವದ ಅತ್ಯಂತ ದೊಡ್ಡ ಆಹಾರ ಭದ್ರತಾ ವ್ಯವಸ್ಥೆಯಾಗಿರುವ ದೇಶದಲ್ಲಿ ಎಫ್.ಸಿ.ಐ.ಯು ದೇಶಾದ್ಯಂತ ಆಹಾರ ಧಾನ್ಯಗಳನ್ನು ಸಾಗಾಟ ಮಾಡಲು ಕೈಗೆತ್ತಿಕೊಂಡಿರುವ ಬೃಹತ್ ಕಾರ್ಯದ ಅಂಗವಾಗಿ ದಿನಾಂಕ 09.04.20 ರಂದು ಈ ಏಜೆನ್ಸಿಯು 2.16 ಲಕ್ಷ ಮೆಟ್ರಿಕ್ ಟನ್ ಗಳನ್ನು 77 ರೇಕ್ ಗಳಲ್ಲಿ ಸಾಗಾಟ ಮಾಡುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇದರೊಂದಿಗೆ ಲಾಕ್ ಡೌನ್ ಬಳಿಕ ಎಫ್.ಸಿ.ಐ. ಸಾಗಾಟ ಮಾಡಿದ ಒಟ್ಟು ಆಹಾರ ಧಾನ್ಯಗಳ ಪ್ರಮಾಣ ಸುಮಾರು 2.5 ಮಿಲಿಯನ್ ಮೆಟ್ರಿಕ್ ಟನ್ನುಗಳಷ್ಟಾಗಿದೆ.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನಾ (ಪಿ.ಎಂ.ಜಿ.ಕೆ.ಎ.ವೈ.) ಅಡಿಯಲ್ಲಿ ಒಟ್ಟು 12.1 ಎಂ.ಎಂ.ಟಿ. ಯಷ್ಟು ಆಹಾರ ಧಾನ್ಯಗಳನ್ನು 81 ಕೋಟಿ ಜನರಿಗೆ 3 ತಿಂಗಳು ಕಾಲ ತಿಂಗಳಿಗೆ ಒಬ್ಬ ವ್ಯಕ್ತಿಗೆ ತಲಾ 5 ಕಿಲೋ ದಂತೆ ಪೂರೈಸಲಾಗುತ್ತದೆ. ಎಫ್.ಸಿ.ಐ.ಯು ಪ್ರತೀ ರಾಜ್ಯದಲ್ಲಿಯೂ ಅವುಗಳ ವಿತರಣಾ ಯೋಜನೆಯಂತೆ ವಿತರಿಸುವುದಕ್ಕಾಗಿ ದೊಡ್ಡ ಪ್ರಮಾಣದ ಧಾನ್ಯಗಳನ್ನು ಪೂರೈಸುವ ಸವಾಲನ್ನು ಎದುರಿಸಲು ತಯಾರಾಗಿದೆ. ಪಿ.ಎಂ.ಜಿ.ಕೆ.ಎ.ವೈ. ಅಡಿಯಲ್ಲಿ ಪಶ್ಚಿಮ ಬಂಗಾಲ ರಾಜ್ಯದ ಆವಶ್ಯಕತೆಯನ್ನು ಈಡೇರಿಸಲು 6 ಎಲ್.ಎಂ.ಟಿ. ಕುಚ್ಚಲು ಅಕ್ಕಿಯನ್ನು ಏಪ್ರಿಲ್ ತಿಂಗಳಾಂತ್ಯದೊಳಗೆ ಒದಗಿಸಲು ವಿಶೇಷ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಛತ್ತೀಸ್ ಗಢ, ತೆಲಂಗಾಣ ಮತ್ತು ಒಡಿಶಾಗಳು ರಾಷ್ಟ್ರೀಯ ಆಹಾರ ದಾಸ್ತಾನಿಗೆ ಗರಿಷ್ಟ ಪ್ರಮಾಣದಲ್ಲಿ ಕುಚ್ಚಲು ಅಕ್ಕಿಯನ್ನು ಒದಗಿಸುವ ರಾಜ್ಯಗಳಾಗಿರುವುದರಿಂದ ಅವುಗಳಿಂದ ಅಕ್ಕಿಯನ್ನು ಸಾಗಾಟ ಮಾಡಿ ಪೂರೈಸಲು ಯೋಜನೆಗಳು ತಯಾರಾಗುತ್ತಿವೆ. ಆದಾಗ್ಯೂ ರಾಜ್ಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ಕುಚ್ಚಲಕ್ಕಿಯನ್ನು ಪೂರೈಕೆ ಮಾಡುವಾಗ ಅದನ್ನು ದಾಸ್ತಾನು ಮಾಡಲು ಸಾಕಷ್ಟು ದಾಸ್ತಾನು ಅವಕಾಶವನ್ನು ರೂಪಿಸುವಂತೆ ಎಫ್.ಸಿ.ಐ.ಯು ಪಶ್ಚಿಮ ಬಂಗಾಲ ಸರಕಾರವನ್ನು ಈಗಾಗಲೇ ಕೋರಿದೆ ಮತ್ತು ಅದರ ದಾಸ್ತಾನುಗಾರಗಳಿಂದ ಲಭ್ಯ ಇರುವ ಗೋಧಿ ದಾಸ್ತಾನನ್ನು ಎತ್ತುವಳಿ ಮಾಡುವುದನ್ನು ತ್ವರಿತಗೊಳಿಸುವಂತೆಯೂ ಕೋರಿದೆ.

ದಾಸ್ತಾನನ್ನು ಅಭೂತಪೂರ್ವ ರೀತಿಯಲ್ಲಿ ಸಾಗಾಟ ಮಾಡುವ ಕಾರ್ಯವನ್ನು ಕೈಗೆತ್ತಿಕೊಂಡಿರುವುದರ ಜೊತೆಗೆ ಎಫ್.ಸಿ.ಐ. ಯು ಲಾಕ್ ಡೌನೋತ್ತರ ಅವಧಿಯಲ್ಲಿ ಆಂಧ್ರ ಪ್ರದೇಶ, ತೆಲಂಗಾಣ, ಒಡಿಶಾ, ಛತ್ತೀಸ್ ಘಡ ಮತ್ತಿತರ ರಾಜ್ಯಗಳಿಂದ ಅಕ್ಕಿಯನ್ನು ಖರೀದಿ ಮಾಡಲಿದೆ ಮಾತ್ರವಲ್ಲದೆ ಅದು ಚಳಿಗಾಲದ ಗೋಧಿ ಬೆಳೆಯನ್ನು ಪ್ರಮುಖ ಖರೀದಿ ರಾಜ್ಯಗಳಾದ ಪಂಜಾಬ್, ಹರ್ಯಾಣಾ, ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ತಾನ ಇತ್ಯಾದಿ ರಾಜ್ಯಗಳಿಂದ ಸಾಮಾಜಿಕ ಸುರಕ್ಷಾ ಶಿಷ್ಟಾಚಾರ ಅನ್ವಯ ಆಯಾ ರಾಜ್ಯಗಳು ರೂಪಿಸಿರುವ ಖರೀದಿ ಯೋಜನೆ ಯಂತೆ ಖರೀದಿ ಮಾಡಲು ಯೋಜಿಸಿ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ರಾಬಿ ಅವಧಿಯಲ್ಲಿ ಸುಮಾರು 40 ಎಂ.ಎಂ.ಟಿ. ಗೋಧಿ ಮತು 9 ಎಂ.ಎಂ.ಟಿ. ಅಕ್ಕಿಯನ್ನು ಖರೀದಿ ಮಾಡುವ ನಿರೀಕ್ಷೆ ಇದೆ, ಇದರಿಂದ ದೇಶದ ಆಹಾರ ಭದ್ರತೆಗೆ ಯಾವುದೇ ಅಪಾಯ ಬಾರದಂತೆ ಖಾತ್ರಿಪಡಿಸಲು ರಾಷ್ಟ್ರೀಯ ದಾಸ್ತಾನಿನಲ್ಲಿ ಆಹಾರ ಧಾನ್ಯಗಳ ದಾಸ್ತಾನು ಸಂಪೂರ್ಣ ಮರುಪೂರಣವಾಗಲಿದೆ.

ವಿವರಗಳಿಗಾಗಿ ಈ ಕೆಳಗಿನ ಕೊಂಡಿಯನ್ನು ತೆರೆಯಿರಿ

1. ಪಿ.ಎಂ.ಜಿ.ಕೆ.ಎ.ವೈ. ಅಡಿಯಲ್ಲಿ ಎಲ್ಲಾ ಫಲಾನುಭವಿಗಳಿಗೆ ಆಹಾರ ಧಾನ್ಯಗಳ ಹೆಚ್ಚುವರಿ ಮಂಜೂರಾತಿಯಡಿ ಎತ್ತುವಳಿ ಮಾಡಲಾದ ಆಹಾರ ಧಾನ್ಯಗಳ ರಾಜ್ಯವಾರು ವಿವರಗಳು

2. ಲಾಕ್ ಡೌನ್ ಅವಧಿಯಲ್ಲಿ ಸರಕು ಲೋಡ್ ಮಾಡಲಾದ ರೇಕ್ ಗಳ ರಾಜ್ಯವಾರು ವಿವರ

3. ಲಾಕ್ ಡೌನ್ ಅವಧಿಯಲ್ಲಿ ಸರಕು ಇಳಿಕೆ ಮಾಡಲಾದ ರೇಕ್ ಗಳ ರಾಜ್ಯವಾರು ವಿವರ

 

***



(Release ID: 1612843) Visitor Counter : 308