ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
COVID-19 ವಿರುದ್ಧ ತಮ್ಮ ಹೋರಾಟ ತೀವ್ರಗೊಳಿಸಿದ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳು
Posted On:
06 APR 2020 1:05PM by PIB Bengaluru
COVID-19 ವಿರುದ್ಧ ತಮ್ಮ ಹೋರಾಟ ತೀವ್ರಗೊಳಿಸಿದ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳು
ಕೊರೊನಾವೈರಸ್ ಎಂದೂ ಕರೆಯಲ್ಪಡುವ COVID-19, ಪ್ರಪಂಚದಾದ್ಯಂತದ ಜನರನ್ನು ಹೈರಾಣ ಮಾಡುತ್ತಿದೆ. ‘worldometer’ ಪ್ರಕಾರ, ಈಗಾಗಲೇ ಒಂದು ದಶಲಕ್ಷಕ್ಕೂ ಹೆಚ್ಚು ಜನರು ಈ ವೈರಸ್ಗೆ ಸೋಂಕಿತರಾಗಿದ್ದಾರೆ ಮತ್ತು ಈ ಸಂಖ್ಯೆ ವೇಗವಾಗಿ ಹೆಚ್ಚುತ್ತಲೇ ಇವೆ. 59,000 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಭಾರತದಲ್ಲಿ, ಇದು 3000 ಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ ಮತ್ತು ಇದುವರೆಗೆ ಸುಮಾರು 60 ಸಾವುಗಳಾಗಿವೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಜ್ಯೋತಿ ಶರ್ಮಾ ಮತ್ತು ಅಂತರರಾಷ್ಟ್ರೀಯ ದ್ವಿಪಕ್ಷೀಯ ಸಹಕಾರ ವಿಭಾಗದ ಮುಖ್ಯಸ್ಥ ಎಸ್.ಕೆ. ವರ್ಷ್ಣಿ, COVID-19 ವಿರುದ್ಧದ ಹೋರಾಟದಲ್ಲಿ ಭಾರತೀಯ ವಿಜ್ಞಾನಿಗಳು ಮತ್ತು ಸಂಸ್ಥೆಗಳು ಮಾಡುತ್ತಿರುವ ಪ್ರಯತ್ನಗಳನ್ನು ಇಲ್ಲಿ ದಾಖಲಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಯು ಸಂಭಾವ್ಯ ಲಸಿಕೆಗಾಗಿ ವಿಶ್ವದಾದ್ಯಂತದ ಸಂಪನ್ಮೂಲಗಳು ಮತ್ತು ವಿಜ್ಞಾನಿಗಳನ್ನು ಕಲೆಹಾಕಿದೆ. ಡಬ್ಲ್ಯುಎಚ್ಒದ ಈ ಕೆಲಸದಲ್ಲಿ ಭಾರತ ಕೂಡ ದೊಡ್ಡ ಪಾತ್ರ ವಹಿಸುತ್ತಿದೆ. ಇದಲ್ಲದೆ, COVID-19 ವಿರುದ್ಧ ಹೋರಾಡಲು ಕ್ರೌಡ್ಫೈಟ್ COVID-19 ನಂತಹ ಅಂತರರಾಷ್ಟ್ರೀಯ ವೇದಿಕೆಗಳ ಮೂಲಕ ವಿಶ್ವದಾದ್ಯಂತದ ಸಾವಿರಾರು ಸಂಶೋಧಕರು ತಮ್ಮ ಪರಿಣತಿ, ಸಮಯ ಮತ್ತು ಸಹಾಯವನ್ನು ನೀಡುತ್ತಿದ್ದಾರೆ. ಸಂಶೋಧಕರು ತಮ್ಮ ಸೇವೆಗಳನ್ನು ಸ್ವಯಂಪ್ರೇರಣೆಯಿಂದ ಒದಗಿಸಲು ಸಾಮಾಜಿಕ ಮಾಧ್ಯಮಗಳಾದ ಟ್ವಿಟರ್, ಫೇಸ್ಬುಕ್ ಮತ್ತು ಲಿಂಕ್ಡ್ಇನ್ ಮೂಲಕ ಸಂಪರ್ಕ ಸಾಧಿಸುತ್ತಿದ್ದಾರೆ.
ಕನಿಷ್ಠ 12-18 ತಿಂಗಳುಗಳವರೆಗೆ ಯಾವುದೇ ಲಸಿಕೆ ಲಭ್ಯವಾಗದಿರುವುದರಿಂದ, ಈ ಮಾರಕ ವೈರಸ್ನಿಂದ ಮಾನವಕುಲವನ್ನು ರಕ್ಷಿಸುವ ಹೋರಾಟವು ಇದೀಗ ಆರಂಭವಾಗಿದೆ ಎಂದು ತೋರುತ್ತಿದೆ. ಪ್ರತಿಕ್ರಿಯೆ ಕಾರ್ಯವಿಧಾನದ ಬಗ್ಗೆ ನಿಜವಾದ ಜಾಗತಿಕ ಒಮ್ಮತವಿಲ್ಲದೆ, ಪ್ರತಿ ರಾಷ್ಟ್ರವೂ ತನ್ನ ನಾಗರಿಕರನ್ನು ತಾನಾಗಿಯೇ ರಕ್ಷಿಸಿಕೊಳ್ಳಬೇಕಾಗಿದೆ.
ಭಾರತದ ತ್ವರಿತ ಪ್ರತಿಕ್ರಿಯೆ
130 ಕೋಟಿಗೂ ಹೆಚ್ಚು ಜನರನ್ನು ತನ್ನ ಮಡಿಲಲ್ಲಿ ಹೊಂದಿರುವ ಭಾರತದಲ್ಲಿ ಹರಡುತ್ತಿರುವ ಕೊರೊನಾವೈರಸ್ ಮತ್ತು ಅದಕ್ಕೆ ಭಾರತದ ಪ್ರತಿಕ್ರಿಯೆಯ ಕಾರ್ಯವಿಧಾನಗಳನ್ನು ಜಗತ್ತಿನ ಇತರ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತವು ಈ ವೈರಸ್ ವಿರುದ್ಧ ತನ್ನೆಲ್ಲಾ ಶಕ್ತಿಯೊಂದಿಗೆ ಹೋರಾಡುತ್ತಿದೆ. 2015 ರ ವಿಪತ್ತು ನಿರ್ವಹಣಾ ಕಾಯ್ದೆಯನ್ನು ಜಾರಿಮಾಡಿದ ಭಾರತವು ಮಾರ್ಚ್ 25 ರಂದು 21 ದಿನಗಳ ಅವಧಿಗೆ ಸಂಪೂರ್ಣ ಲಾಕ್ಡೌನ್ ಘೋಷಿಸಿತು. ಸೋಂಕಿತರ ಸಂಖ್ಯೆ 400 ಕ್ಕಿಂತ ಕಡಿಮೆಯಿದ್ದಾಗಲೇ ಲಾಕ್ಡೌನ್ ಪ್ರಕಟಿಸಿದ್ದು WHO ಮೆಚ್ಚುಗೆಗೆ ಪಾತ್ರವಾಯಿತು. COVID-19 ಕಾರ್ಯಪಡೆ ಸ್ಥಾಪನೆ ಮತ್ತು ‘ಸಾಮಾಜಿಕ ಅಂತರ’ ಕುರಿತು ಘೋಷಣೆಗಳ ಸರಣಿ ಮತ್ತು ಇತರ ಗಂಭೀರ ಕ್ರಮಗಳನ್ನು ಅನುಸರಿಸಲಾಯಿತು. ಅಂತಹ ಕೆಲವು ಪ್ರಮುಖ ಕ್ರಮಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
- COVID- ಸೋಂಕಿತರೊಂದಿಗಿನ ಸಂಪರ್ಕಗಳನ್ನು ಪತ್ತೆಹಚ್ಚಲು ಪ್ರಾರಂಭಿಸಲಾಯಿತು.
- ಅಸ್ತಿತ್ವದಲ್ಲಿರುವ ಎಲ್ಲಾ ವೀಸಾಗಳನ್ನು ರದ್ದುಪಡಿಸಲಾಯಿತು. (ರಾಜತಾಂತ್ರಿಕ, ಅಧಿಕೃತ, ವಿಶ್ವಸಂಸ್ಥೆ/ಅಂತರರಾಷ್ಟ್ರೀಯ ಸಂಸ್ಥೆಗಳು, ಉದ್ಯೋಗ, ಪ್ರಾಜೆಕ್ಟ್ ವೀಸಾಗಳನ್ನು ಹೊರತುಪಡಿಸಿ).
- ಏಪ್ರಿಲ್ 15 ರವರೆಗೆ ಎಲ್ಲಾ ಅಂತರರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳು, ರೈಲುಗಳು ಮತ್ತು ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
- ಈ ಅವಧಿಯಲ್ಲಿ ಯಾರೂ ಹಸಿವಿನಿಂದ ಬಳಲದಂತೆ ಬಡವರನ್ನು ಗುರಿಯಾಗಿಸಿಕೊಂಡು ಆರ್ಥಿಕ ಕ್ರಮಗಳನ್ನು ಪ್ರಾರಂಭಿಸಲಾಗಿದೆ.
- ಭಾರತೀಯ ರೈಲ್ವೆಯ ಬೋಗಿಗಳನ್ನು ಐಸೋಲೇಷನ್ ವಾರ್ಡ್ಗಳಾಗಿ ಪರಿವರ್ತಿಸಲಾಗಿದೆ.
ಸವಾಲು ಕೈಗೆತ್ತಿಕೊಂಡ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಸಂಸ್ಥೆಗಳು
COVID-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಭಾರತದ ಸಕ್ರಿಯ ಮತ್ತು 'ಇಡೀ ಸರ್ಕಾರ' ದ ವಿಧಾನವು ಒಂದೆಡೆಯಾದರೆ, ಭಾರತ ಮತ್ತು ವಿಶ್ವದ ಇತರ ಭಾಗಗಳ ನಡುವಿನ ವ್ಯಾಪಾರದ ಕುಸಿತ ಮತ್ತೊಂದೆಡೆಯಾಗಿದೆ. ವ್ಯಾಪಾರದಲ್ಲಿನ ಈ ಮಂದಗತಿಯು ಹೋರಾಟಕ್ಕೆ ಅಗತ್ಯವಾದ ಅನೇಕ ಅಗತ್ಯ ವಸ್ತುಗಳ ಪೂರೈಕೆಗೆ ಅಡ್ಡಿಪಡಿಸುತ್ತಿದೆ. ಅಂತಹ ಅಗತ್ಯ ವಸ್ತುಗಳ ಪಟ್ಟಿಯಲ್ಲಿ COVID-19 ಪರೀಕ್ಷಾ ಕಿಟ್ಗಳು, ಮುಖಗವಸುಗಳು, ಆಲ್ಕೋಹಾಲ್ ಆಧಾರಿತ ಸ್ಯಾನಿಟೈಜರ್ಗಳು, ವೈಯಕ್ತಿಕ ರಕ್ಷಣಾ ಸಾಧನಗಳು (ಪಿಪಿಇಗಳು), ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಉಡುಗೆಗಳು, ರೋಗಿಗಳಿಗೆ ವೆಂಟಿಲೇಟರ್ಗಳು (ಉಸಿರಾಟದ ಸಾಧನಗಳು) ಇತ್ಯಾದಿಗಳು ಸೇರಿವೆ.
ಈ ಅಗತ್ಯ ವಸ್ತುಗಳನ್ನು ಸಾಧ್ಯವಾದಷ್ಟು ಬೇಗ ಮತ್ತು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸುವುದು ಸವಾಲಾಗಿದೆ. ಈ ಪರಿಸ್ಥಿತಿಯು ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮವನ್ನು ತೀವ್ರವಾಗಿ ಸಕ್ರಿಯಗೊಳಿಸಲು ಮತ್ತು ದೇಶದ ವಿವಿಧ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಸಂಸ್ಥೆಗಳನ್ನು ಒಳಗೊಳ್ಳಲು ಭಾರತ ಸರ್ಕಾರವನ್ನು ಪ್ರೇರೇಪಿಸಿದೆ.
ಆರೋಗ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಭೂ ವಿಜ್ಞಾನ ಸಚಿವ ಡಾ.ಹರ್ಷವರ್ಧನ್ ಅವರ ನೇತೃತ್ವದಲ್ಲಿ ದೇಶದ ವೈಜ್ಞಾನಿಕ ಸಮುದಾಯವನ್ನು ಸಕ್ರಿಯಗೊಳಿಸಲು ಸುಸಂಘಟಿತ ವಿಧಾನವನ್ನು ಅಳವಡಿಸಲಾಗಿದೆ. ಈ ವಿಧಾನವು ಉತ್ತಮ ಅಭ್ಯಾಸಗಳ ಹಂಚಿಕೆ, ಕೆಲಸದಲ್ಲಿ ಸಹಯೋಗ, ಅಗತ್ಯ-ಆಧಾರಿತ ಆವಿಷ್ಕಾರಗಳ ಅಭಿವೃದ್ಧಿ ಮತ್ತು ಸಂಶೋಧನಾ ಕಾರ್ಯಗಳನ್ನು ನಕಲು ಮಾಡುವುದನ್ನು ತಪ್ಪಿಸಲು ಸಾಮಾನ್ಯ ವೇದಿಕೆಯನ್ನು ಒದಗಿಸಲು ಸಹಾಯ ಮಾಡಿದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಇಷ್ಟು ಕಡಿಮೆ ಅವಧಿಯಲ್ಲಿ, ಹೊಸ ಪರೀಕ್ಷಾ ಕಿಟ್ಗಳು, ರಕ್ಷಣಾ ಸಾಧನಗಳು, ಉಸಿರಾಟದ ಸಾಧನಗಳು ಇತ್ಯಾದಿಗಳನ್ನು ಅಭಿವೃದ್ಧಿಪಡಿಸಲು ದೇಶದ ಸಾವಿರಾರು ಸಂಶೋಧಕರನ್ನು ದಿನದ 24 ಗಂಟೆಯೂ ಕೆಲಸ ಮಾಡುವಂತೆ ಮಾಡಲು ಭಾರತಕ್ಕೆ ಸಾಧ್ಯವಾಯಿತು.
ಭಾರತದ ಅತ್ಯುನ್ನತ ಎಸ್ & ಟಿ ಸಂಸ್ಥೆ ಮತ್ತು ಅದರ ಪ್ರಯತ್ನಗಳು
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್ಟಿ) ಭಾರತದ ಅತ್ಯುನ್ನತ ವಿಜ್ಞಾನ ಮತ್ತು ತಂತ್ರಜ್ಞಾನ (ಎಸ್ & ಟಿ) ಸಂಸ್ಥೆಯಾಗಿದೆ. ಡಿಎಸ್ಟಿ ಮತ್ತು ಅದರ ಸಹೋದರ ಸಚಿವಾಲಯಗಳ ಅಡಿಯಲ್ಲಿರುವ ಸಂಸ್ಥೆಗಳ ಸಹಾಯದಿಂದ, COVID-19 ಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಭಾರತದಲ್ಲಿ ಸೂಕ್ತ ತಂತ್ರಜ್ಞಾನಗಳನ್ನು ಗುರುತಿಸುವ ಮತ್ತು ಉನ್ನತೀಕರಿಸುವ ಪ್ರಯತ್ನವನ್ನು ಡಿಎಸ್ಟಿ ಮಾಡುತ್ತಿದೆ. ಇದು ದೇಶಕ್ಕೆ ಹೆಚ್ಚು ಪ್ರಸ್ತುತವಾದ ಪರಿಹಾರಗಳಿಗಾಗಿ ಅನ್ವೇಷಣೆ ಮಾಡುತ್ತದೆ ಮತ್ತು COVID-19 ಸಾಂಕ್ರಾಮಿಕ ರೋಗದಿಂದ ಉಂಟಾಗುವ ಅನಿವಾರ್ಯತೆಗಳಿಗಾಗಿ ದೇಶವನ್ನು ಸನ್ನದ್ಧಗೊಳಿಸಲು ಸಹಾಯ ಮಾಡುತ್ತದೆ.
ಡಿಎಸ್ಟಿ ತನ್ನ ಸ್ವಾಯತ್ತ ಸಂಸ್ಥೆಗಳು ಮತ್ತು ಅಂಗ ಸಂಸ್ಥೆಗಳ ಮೂಲಕ COVID-19 ವಿರುದ್ಧ ಹೋರಾಡಲು ಮೂರು ಮಾರ್ಗಗಳನ್ನು ರೂಪಿಸಿದೆ:
ಎ. ಆರ್ & ಡಿ ಬೆಂಬಲದ ಅಗತ್ಯವಿರುವ ಪರಿಹಾರಗಳ ವ್ಯಾಪಕ ಮ್ಯಾಪಿಂಗ್, ನೆರವು ಮತ್ತು ಉತ್ಪಾದನಾ ಬೆಂಬಲ ಅಗತ್ಯವಿರುವ ಕಾರ್ಯಸಾಧ್ಯವಾದ ಉತ್ಪನ್ನಗಳ ಸ್ಟಾರ್ಟ್ ಅಪ್ ಗಳು.
ಬಿ. ಬೆಂಬಲ ಅಗತ್ಯವಿರುವ ಮಾರುಕಟ್ಟೆಗೆ ನಿಯೋಜಿಸಬಹುದಾದ ಉತ್ಪನ್ನಗಳ ಗುರುತಿಸುವಿಕೆ
ಸಿ. ಈಗಾಗಲೇ ಮಾರುಕಟ್ಟೆಯಲ್ಲಿರುವ ಪರಿಹಾರಗಳಿಗೆ ಬೆಂಬಲ. ಆದರೆ ಅವುಗಳ ಉತ್ಪಾದನಾ ಮೂಲಸೌಕರ್ಯ ಮತ್ತು ಸಾಮರ್ಥ್ಯಗಳನ್ನು ಹೆಚ್ಚಿಸಲು ಗಣನೀಯ ಪ್ರಮಾಣದ ಅಗತ್ಯವಿರುತ್ತದೆ.
ಹೆಚ್ಚಿನ ಆದ್ಯತೆಯ ಕ್ಷೇತ್ರದಲ್ಲಿ ಸಂಶೋಧನೆಯ ತೀವ್ರತೆ (ಐಆರ್ಪಿಹೆಚ್ಎ)
ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಶೋಧನಾ ಮಂಡಳಿ (ಎಸ್ಇಆರ್ಬಿ) ಡಿಎಸ್ಟಿ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿದೆ. ಹೈ ಪ್ರಿಯಾರಿಟಿ ಏರಿಯಾ (ಐಆರ್ಪಿಎಚ್ಎ) ಯೋಜನೆಯಡಿಯಲ್ಲಿ, ಎಸ್ಇಆರ್ಬಿ ರಾಷ್ಟ್ರೀಯ ಆರ್ & ಡಿ ಪ್ರಯತ್ನಗಳನ್ನು ಹೆಚ್ಚಿಸಲು ಸಾಂಕ್ರಾಮಿಕ ರೋಗಶಾಸ್ತ್ರೀಯ ಅಧ್ಯಯನಗಳು, ಉಸಿರಾಟದ ವೈರಲ್ ಸೋಂಕುಗಳು, ಹೊಸ ಆಂಟಿ-ವೈರಲ್ಗಳು, ಲಸಿಕೆಗಳು ಮತ್ತು COVID-19 ಮತ್ತು ಸಂಬಂಧಿತ ಉಸಿರಾಟದ ವೈರಲ್ ಸೋಂಕುಗಳ ವಿರುದ್ಧ ಕೈಗೆಟುಕುವ ರೋಗನಿರ್ಣಯದ ಸಮಯದಲ್ಲಿ ರೋಗನಿರೋಧಕ ಪ್ರತಿಕ್ರಿಯೆ ಮತ್ತು ಪ್ರತಿರಕ್ಷೆಯ ಕುರಿತ ಅಧ್ಯಯನಗಳಿಗಾಗಿ ಬಲವಾದ ಅಂತರಶಿಸ್ತೀಯ ಘಟಕವನ್ನು ಹೊಂದಿರುವ ಸ್ಪರ್ಧಾತ್ಮಕ ಪ್ರಸ್ತಾಪಗಳನ್ನು ಆಹ್ವಾನಿಸಿತ್ತು. ಇದಲ್ಲದೆ, ಆರೋಗ್ಯ ಕಾರ್ಯಕರ್ತರ ಪ್ರಸ್ತುತ ಅಗತ್ಯತೆಗಳನ್ನು ಪೂರೈಸಲು ಉದಾಹರಣೆಗೆ (ಎ) ಕಡಿಮೆ ಬೆಲೆಯ ಮತ್ತು ಪೋರ್ಟಬಲ್ ಕ್ಷಿಪ್ರ ರೋಗನಿರ್ಣಯ ಕಿಟ್ಗಳು ಅಥವಾ ಉಪಕರಣಗಳು, (ಬಿ) COVID-19 ಆಣ್ವಿಕ ಗುರಿಗಳ ಕಂಪ್ಯೂಟೇಶನಲ್ ಗುರುತಿಸುವಿಕೆ ಮತ್ತು ಮೌಲ್ಯಮಾಪನ (ಸಿ) ಪ್ರಮುಖ COVID-19 ಗುರಿಗಳ ವಿರುದ್ಧ ಪುನರಾವರ್ತಿಸುವ ಔಷಧ ಮತ್ತು ಪೌಷ್ಠಿಕಾಂಶದ ಇನ್-ವಿಟ್ರೊ / ಕ್ಲಿನಿಕಲ್ ಡೋಸ್ ಪರೀಕ್ಷೆಗಳಿಗಾಗಿ ಎಸ್ಇಆರ್ಬಿ ಅಲ್ಪಾವಧಿಯ ‘Core Research Grant Special Call on COVID-19’ ಅನ್ನು ಆಹ್ವಾನಿಸಿತ್ತು.
ಐದು ಯೋಜನೆಗಳ ಮೊದಲ ಗುಂಪನ್ನು ಎಸ್ಇಆರ್ಬಿ ಆಯ್ಕೆ ಮಾಡಿದೆ, ಇದು ಕಾರ್ಯಗತಗೊಳಿಸಬಹುದಾದ ತಂತ್ರಜ್ಞಾನಗಳಾಗಿ ಮತ್ತಷ್ಟು ಅಭಿವೃದ್ಧಿಗೆ ಸಹಕರಿಸುತ್ತದೆ. ಇವುಗಳಲ್ಲಿ ಮೂರು ಯೋಜನೆಗಳು ವೈಯಕ್ತಿಕ ಸಂರಕ್ಷಣಾ ಸಾಧನಗಳಂತಹ (ಪಿಪಿಇ) ನಿರ್ಜೀವ ಮೇಲ್ಮೈಗಳ ಆಂಟಿವೈರಲ್ ಮತ್ತು ವೈರಸ್ಟಾಟಿಕ್ ಮೇಲ್ಮೈ ಲೇಪನದ ಪ್ರಮುಖ ವಿಷಯವಾಗಿದೆ. ನಾಲ್ಕನೆಯದು COVID-19 ಸೋಂಕಿತ ರೋಗಿಗಳಲ್ಲಿ ಮೆಟಾಬೊಲೈಟ್ ಬಯೋಮಾರ್ಕರ್ಗಳನ್ನು ಗುರುತಿಸುವುದರೊಂದಿಗೆ ಚಿಕಿತ್ಸಕ ಗುರಿ ಗುರುತಿಸುವಿಕೆಯನ್ನು ಶಕ್ತಗೊಳಿಸುತ್ತದೆ ಮತ್ತು ಕೊನೆಯದು ಕೊರೊನಾ ವೈರಸ್ ನ ಸ್ಪೈಕ್ ಗ್ಲೈಕೊಪ್ರೊಟೀನ್ನ ಡೊಮೇನ್ನ ವಿರುದ್ಧ ಆ್ಯಂಟಿಬಾಡಿ ಅಭಿವೃದ್ಧಿಗೆ ಸಂಬಂಧಿಸಿದೆ.
ಡೇಟಾ-ಚಾಲಿತ ವಿಧಾನದ ಮೂಲಕ ವೈರಸ್ ಅನ್ನು ಪತ್ತೆಹಚ್ಚುವುದು ಮತ್ತು ಹಿಂಬಾಲಿಸುವುದು ಅದರ ನಿಗ್ರಹದ ಒಂದು ಪ್ರಮುಖ ಹಂತವಾಗಿದೆ. ಈ ದಿಕ್ಕಿನಲ್ಲಿ, ಎಸ್ಇಆರ್ಬಿ COVID-19 ಹರಡುವಿಕೆಯ ಗಣಿತದ ಮಾಡೆಲಿಂಗ್ ಕುರಿತು ಅಲ್ಪಾವಧಿಯ ಯೋಜನೆಯನ್ನು ಘೋಷಿಸಿದೆ; ಸಾಂಕ್ರಾಮಿಕ ದತ್ತಾಂಶ ಕಲಿಕೆ, ಮುನ್ಸೂಚನೆ ಮತ್ತು ಸಾಂಕ್ರಾಮಿಕ ದತ್ತಾಂಶಗಳು; ಸಾಂಕ್ರಾಮಿಕ ರೋಗ ಮಾದರಿ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರೀಯ ಮಾದರಿಗಳಿಗಾಗಿ ಪರಿಮಾಣಾತ್ಮಕ ಸಾಮಾಜಿಕ ವಿಜ್ಞಾನ ವಿಧಾನಗಳಿಗಾಗಿ ಕೇಂದ್ರೀಕೃತ ಕ್ರಮಾವಳಿಗಳು, ತಡೆಗಟ್ಟುವ ಮತ್ತು ಗುಣಪಡಿಸಬಹುದಾದ ಕ್ರಮಗಳ ಅಲಭ್ಯತೆಯಲ್ಲಿ, ಹೊಸ ಪ್ರದೇಶಗಳಲ್ಲಿ ನಿರಂತರ ಪ್ರಸರಣ ಸಂಭವಿಸುವ ಸಾಮರ್ಥ್ಯವನ್ನು ನಿರ್ಣಯಿಸಲು ಈ ಗಣಿತದ ಮಾದರಿಗಳು ಸಹಾಯ ಮಾಡಬಹುದು.
ಸಂಶೋಧನಾ ಪ್ರಸ್ತಾಪಗಳಿಗೆ ಟಿಡಿಬಿ ಆಹ್ವಾನ
ಡಿಎಸ್ಟಿಯ ಅಂಗ ಸಂಸ್ಥೆಯಾದ ಟೆಕ್ನಾಲಜಿ ಡೆವಲಪ್ಮೆಂಟ್ ಬೋರ್ಡ್ (ಟಿಡಿಬಿ) COVID- 19 ರೋಗಿಗಳಿಗೆ ರಕ್ಷಣೆ ಮತ್ತು ಗೃಹಾಧಾರಿತ ಉಸಿರಾಟದ ಮಧ್ಯಸ್ಥಿಕೆಗಳನ್ನು ಒದಗಿಸಲು ಭಾರತೀಯ ಕಂಪನಿಗಳು ಮತ್ತು ಉದ್ಯಮಗಳಿಂದ ಪ್ರಸ್ತಾಪಗಳನ್ನು ಆಹ್ವಾನಿಸಿದೆ. ಅಗತ್ಯ-ಆಧಾರಿತ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಅಥವಾ ಆಮದು ಮಾಡಿದ ತಾಂತ್ರಿಕವಾಗಿ ಉತ್ತಮವಾದ ಮತ್ತು ಕಡಿಮೆ-ವೆಚ್ಚದ ಮುಖಗವಸುಗಳು, ದುಬಾರಿಯಲ್ಲದ ಉಷ್ಣ ಸ್ಕ್ಯಾನಿಂಗ್ ಸಾಧನಗಳು, ದೊಡ್ಡ ಪ್ರದೇಶಗಳು ಮತ್ತು ಸಂಪರ್ಕವಿಲ್ಲದೆ ಪ್ರವೇಶ ಮಾಡುವ ನೈರ್ಮಲ್ಯೀಕರಣ ತಂತ್ರಜ್ಞಾನಗಳು, ಕ್ಷಿಪ್ರ ರೋಗನಿರ್ಣಯ ಕಿಟ್ಗಳು ಮತ್ತು ಆಮ್ಲಜನಕಗಳು ಮತ್ತು ವೆಂಟಿಲೇಟರ್ಗಳಲ್ಲಿ ಉದ್ಯಮಗಳು ಈ ಸಂಕಷ್ಟ ಕಾಲದಲ್ಲಿ ನೆರವಾಗಬಹುದು.
ಕೃತಕ ಮ್ಯಾನುವಲ್ ಉಸಿರಾಟದ ಘಟಕ (AMBU)
ತಿರುವನಂತಪುರದ ಶ್ರೀ ಚಿತ್ರ ತಿರುಣಾಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ಟೆಕ್ನಾಲಜಿ (ಎಸ್ಸಿಟಿಐಎಂಎಸ್ಟಿ) ಕೃತಕ ಮ್ಯಾನುವಲ್ ಉಸಿರಾಟದ ಘಟಕ (ಎಎಂಬಿಯು) ಆಧರಿಸಿ ವೆಂಟಿಲೇಟರ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಕ್ಲಿನಿಕಲ್ ಸಿಬ್ಬಂದಿಯ ನೆರವಿನೊಂದಿಗೆ ಸಂಸ್ಥೆಯ ಸ್ವಯಂಚಾಲಿತ AMBU ವೆಂಟಿಲೇಟರ್ ಐಸಿಯು ವೆಂಟಿಲೇಟರ್ಗಳಿಗೆ ಪ್ರವೇಶವಿಲ್ಲದ ನಿರ್ಣಾಯಕ ರೋಗಿಗಳ ಉಸಿರಾಟಕ್ಕೆ ಸಹಾಯ ಮಾಡುತ್ತದೆ. ಈ ತಂತ್ರಜ್ಞಾನವು ಬೆಂಗಳೂರಿನ ವಿಪ್ರೊ 3 ಡಿ ಮೂಲಕ ಕ್ಲಿನಿಕಲ್ ಪ್ರಯೋಗಗಳು ಮತ್ತು ಉತ್ಪಾದನೆಗೆ ತ್ವರಿತವಾಗಿ ಸಾಗಿದೆ. ಈ ತುರ್ತು ವೆಂಟಿಲೇಟರ್ನ ಹೊರತಾಗಿ, COVID-19 ರೋಗಿಗಳನ್ನು ತಪಾಸಣೆ ಮಾಡಲು ಕಡಿಮೆ-ವೆಚ್ಚದ ಕೃತಕ ಬುದ್ಧಿಮತ್ತೆ ಹೊಂದಿರುವ ಡಿಜಿಟಲ್ ಎಕ್ಸ್ ರೇ ಡಿಟೆಕ್ಟರ್ಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಂಸ್ಥೆ ಪ್ರಯತ್ನಿಸುತ್ತಿದೆ.
ಆ್ಯಂಟಿ-ಮೈಕ್ರೋಬಿಯಲ್ ಲೇಪನ
ಡಿಎಸ್ಟಿ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾದ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ (ಜೆಎನ್ಸಿಎಎಸ್ಆರ್) ಒಂದು ಹಂತದ ಗುಣಪಡಿಸಬಹುದಾದ ಆಂಟಿ-ಮೈಕ್ರೋಬಿಯಲ್ ಲೇಪನವನ್ನು ಕಂಡು ಹಿಡಿದಿದೆ. ಈ ಲೇಪನವು ಮೆಥಿಸಿಲಿನ್-ನಿರೋಧಕ ಸ್ಟ್ಯಾಫಿಲೋಕೊಕಸ್ ಔರೆಸ್, ಫ್ಲುಕೋನಜೋಲ್-ನಿರೋಧಕ ಸಿ. ಅಲ್ಬಿಕಾನ್ಸ್ ಎಸ್ಪಿಪಿ. ಮತ್ತು Severe Acute Respiratory Syndrome Coronavirus 2 (SARS-COV-19) ಗಳೂ ಸೇರಿದಂತೆ ಇನ್ಫ್ಲುಯೆನ್ಜಾ ವೈರಸ್ ಮತ್ತು ನಿರೋಧಕ ರೋಗಕಾರಕ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳನ್ನು ಸಂಪೂರ್ಣವಾಗಿ ಕೊಲ್ಲುವ ಸಾಮರ್ಥ್ಯವನ್ನು ಹೊಂದಿದೆ, ಈ ಲೇಪನವು ಸೂಕ್ಷ್ಮಜೀವಿಗಳನ್ನು ಲೇಪಿತ ಮೇಲ್ಮೈಗಳಲ್ಲಿ ಸಕ್ರಿಯವಾಗಿರಲು ಬಿಡುವುದಿಲ್ಲ ಎಂದು ಹೇಳಲಾಗಿದೆ. COVID-19 ಸಾಂಕ್ರಾಮಿಕದ ಸಮಯದಲ್ಲಿ, ಆರೋಗ್ಯ ಕಾರ್ಯಕರ್ತರ ವೈಯಕ್ತಿಕ ರಕ್ಷಣಾ ಸಾಧನಗಳು, ಬಟ್ಟೆ ಮತ್ತು ಸಾಧನಗಳನ್ನು ರಕ್ಷಿಸಲು ಈ ಲೇಪನವನ್ನು ಬಳಸಬಹುದು.
ತಳಮಟ್ಟದ ಆವಿಷ್ಕಾರಗಳು
ಡಿಎಸ್ಟಿಯ ಮತ್ತೊಂದು ಸ್ವಾಯತ್ತ ಸಂಸ್ಥೆಯಾದ ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್ (ಎನ್ಎಸ್ಎಫ್) ಯಾವುದೇ ತಾಂತ್ರಿಕ ಕ್ಷೇತ್ರದಲ್ಲಿ ವ್ಯಕ್ತಿಗಳು ಮತ್ತು ಸ್ಥಳೀಯ ಸಮುದಾಯಗಳು ಅಭಿವೃದ್ಧಿಪಡಿಸಿದ ತಳಮಟ್ಟದ ಆವಿಷ್ಕಾರಗಳನ್ನು ಪ್ರೋತ್ಸಾಹಿಸುತ್ತದೆ ಮತ್ತು ಬೆಂಬಲಿಸುತ್ತದೆ. ಈ ಕೆಳಗಿನ ಸಮಸ್ಯೆಗಳನ್ನು ನಿಭಾಯಿಸಲು ಎನ್ಎಸ್ಎಫ್ ತನ್ನ ‘ಚಾಲೆಂಜ್ ಕೋವಿಡ್ -19 ಸ್ಪರ್ಧೆ (ಸಿ 3) ಮೂಲಕ ಸೃಜನಶೀಲ ಮತ್ತು ನೂತನ ಆಲೋಚನೆಗಳನ್ನು ಹಂಚಿಕೊಳ್ಳಲು ನಾಗರಿಕರನ್ನು ಆಹ್ವಾನಿಸಿದೆ: (ಎ) ಪೋಷಣೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಆರೋಗ್ಯಕರ ಆಹಾರ (ಬಿ) ಕೊರೊನಾವೈರಸ್ ಹರಡುವಿಕೆಯನ್ನು ಕಡಿಮೆ ಮಾಡುವುದು (ಸಿ) ವ್ಯಕ್ತಿಯೊಬ್ಬರ ಕೈ, ದೇಹ, ಮನೆಯ ವಸ್ತುಗಳು ಮತ್ತು ಮನೆ, ಸಾರ್ವಜನಿಕ ಸ್ಥಳಗಳಲ್ಲಿ ಅಗತ್ಯವಿರುವ ಕಡೆಗಳಲ್ಲಿ ಸ್ವಚ್ಛಗೊಳಿಸುವುದು; (ಡಿ) ಜನರಿಗೆ ವಿಶೇಷವಾಗಿ ವಯಸ್ಸಾದವರು ಒಂಟಿಯಾಗಿ ವಾಸಿಸು ಕಡೆಗಳಲ್ಲಿ ಅಗತ್ಯ ವಸ್ತುಗಳ ಸರಬರಾಜು ಮತ್ತು ವಿತರಣೆ, (ಇ) ಜನರನ್ನು ಮನೆಯಲ್ಲಿ ಲಾಭದಾಯಕವಾಗಿಸುವುದು (ಎಫ್) ಪಿಪಿಇಗಳು ಮತ್ತು ಆರೋಗ್ಯ ರಕ್ಷಣೆಯ ಸಾಮರ್ಥ್ಯವನ್ನು ಹೆಚ್ಚಿಸಲು ತ್ವರಿತ ರೋಗನಿರ್ಣಯ ಪರೀಕ್ಷಾ ಸೌಲಭ್ಯಗಳು (ಜಿ) COVID-19 ರ ಅವಧಿಯಲ್ಲಿ ಕೊರೊನಾ ನಂತರದ ಅನುಷ್ಠಾನ ಅಗತ್ಯತೆಗಳು ಮತ್ತು ಜನಸಂಖ್ಯೆಯ ವಿವಿಧ ವಿಭಾಗದ ವಿವಿಧ ಅಗತ್ಯಗಳಿಗಾಗಿ "ಸಂಪರ್ಕವಿಲ್ಲದ" ಸಾಧನಗಳನ್ನು ಪುನರ್ವಿಮರ್ಶಿಸುವುದು. ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಧರ್ಮವನ್ನು ಬೆಳೆಸುವುದರ ಜೊತೆಗೆ, ಸಾಂಕ್ರಾಮಿಕ ರೋಗದ ವಿರುದ್ಧ ಸರ್ಕಾರದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಈ ಉಪಕ್ರಮವು ಪ್ರೋತ್ಸಾಹಿಸುತ್ತದೆ.
ಎಸ್ & ಟಿ ಪ್ರಯತ್ನಗಳಿಗೆ ಸಹಕರಿಸುವುದು
ಮೊದಲೇ ಹೇಳಿದಂತೆ, ಸ್ಟಾರ್ಟ್ ಅಪ್ಗಳು, ಅಕಾಡೆಮಿ, ರಿಸರ್ಚ್ ಮತ್ತು ಡೆವಲಪ್ಮೆಂಟ್ ಲ್ಯಾಬ್ಗಳು ಮತ್ತು ಉದ್ಯಮಗಳಲ್ಲಿ COVID-19 ಸಂಬಂಧಿತ ತಂತ್ರಜ್ಞಾನ ಸಾಮರ್ಥ್ಯಗಳನ್ನು ಮ್ಯಾಪಿಂಗ್ ಮಾಡಲು ಭಾರತ ಸರ್ಕಾರವು ‘COVID-19 ಟಾಸ್ಕ್ ಫೋರ್ಸ್’ ಅನ್ನು ಸ್ಥಾಪಿಸಿದೆ. ಡಿಎಸ್ಟಿ, ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ), ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್), ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿ), ಕೌನ್ಸಿಲ್ ಫಾರ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್), ಅಟಲ್ ಇನ್ನೋವೇಶನ್ ಮಿಷನ್ ( ಎಐಎಂ), ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ (ಎಂಎಸ್ಎಂಇ), ಸ್ಟಾರ್ಟ್ಅಪ್ ಇಂಡಿಯಾ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಈ ಮ್ಯಾಪಿಂಗ್ ಗುಂಪಿನಲ್ಲಿವೆ.
ರೋಗನಿರ್ಣಯ, ಔಷಧಗಳು, ವೆಂಟಿಲೇಟರ್ಗಳು, ರಕ್ಷಣಾ ಸಾಧನ, ಸೋಂಕುನಿವಾರಕ ವ್ಯವಸ್ಥೆಗಳು ಮುಂತಾದ ಕ್ಷೇತ್ರಗಳಲ್ಲಿ ಈ ಕಾರ್ಯಪಡೆಯು 500 ಕ್ಕೂ ಹೆಚ್ಚು ಘಟಕಗಳನ್ನು ಗುರುತಿಸಿದೆ. ಮುಖಗವಸುಗಳು ಮತ್ತು ಇತರ ರಕ್ಷಣಾತ್ಮಕ ಸಾಧನಗಳು, ಸ್ಯಾನಿಟೈಜರ್ಗಳು, ಸ್ಕ್ರೀನಿಂಗ್ಗೆ ಕೈಗೆಟುಕುವಬೆಲೆಯ ಕಿಟ್ಗಳು, ವೆಂಟಿಲೇಟರ್ಗಳು ಮತ್ತು ಆಮ್ಲಜನಕಗಳು, ಡೇಟಾ ವಿಶ್ಲೇಷಣೆ ಎಐ ಮತ್ತು ಐಒಟಿ ಆಧಾರಿತ ಪರಿಹಾರಗಳ ಮೂಲಕ ಸಾಂಕ್ರಾಮಿಕ ಹರಡುವುದನ್ನು ಪತ್ತೆಹಚ್ಚುವುದು, ಮೇಲ್ವಿಚಾರಣೆ ಮತ್ತು ನಿಯಂತ್ರಣ ಗುರುತಿಸಲಾದ ಪರಿಹಾರಗಳಲ್ಲಿ ಕೆಲವು.
ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ) ಮತ್ತು ಡಿಎಸ್ಟಿಯ ಸಹೋದರ ವಿಭಾಗವಾದ ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್ (ಬಿಐಆರ್ಎಸಿ) ಸಹ ಕೋವಿಡ್ -19 ರಿಸರ್ಚ್ ಕನ್ಸೋರ್ಟಿಯಂ ಕಾರ್ಯಕ್ರಮವನ್ನು ಘೋಷಿಸಿವೆ ಮತ್ತು ಕಡಿಮೆ ವೆಚ್ಚದ ರೋಗನಿರ್ಣಯ, ಲಸಿಕೆಗಳು, ಹೊಸ ಚಿಕಿತ್ಸೆಗಳು, ಔಷಧಿಗಳ ಮರುಹಂಚಿಕೆ ಅಥವಾ COVID-19 ರ ನಿಯಂತ್ರಣಕ್ಕಾಗಿ ಯಾವುದೇ ಹಸ್ತಕ್ಷೇಪಕ್ಕಾಗಿ ಉದ್ಯಮ, ಅಕಾಡೆಮಿ, ಇಂಡಸ್ಟ್ರಿ-ಅಕಾಡೆಮಿ ಸಹಭಾಗಿತ್ವದಿಂದ ಪ್ರಸ್ತಾಪಗಳನ್ನು ಆಹ್ವಾನಿಸಿವೆ.
ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ತನ್ನ ನ್ಯೂ ಮಿಲೇನಿಯಮ್ ಇಂಡಿಯನ್ ಟೆಕ್ನಾಲಜಿ ಲೀಡರ್ಶಿಪ್ ಇನಿಶಿಯೇಟಿವ್ (ಎನ್ಎಂಐಟಿಎಲ್ಐ) ಅಡಿಯಲ್ಲಿ, ಪರಿಣಾಮಕಾರಿಯಾದ ನಿಗ್ರಹ ಕ್ರಮಗಳು, ಕೈಗೆಟುಕುವ ಬೆಲೆಯ ವೆಂಟಿಲೇಟರ್ಗಳು, ಹೊಸ ರೋಗನಿರ್ಣಯಗಳು (ಕ್ಷಿಪ್ರ, ಕೈಗೆಟುಕುವ, ಅತ್ಯಾಧುನಿಕ) ), ಹೊಸ ಔಷಧಗಳು ಅಥವಾ ಪುನರಾವರ್ತಿತ ಔಷಧಗಳು, ಹೊಸ ಲಸಿಕೆಗಳು ಅಥವಾ ಮರುಬಳಕೆಯ ಲಸಿಕೆ ಮತ್ತು ಟ್ರ್ಯಾಕ್-ಅಂಡ್-ಟ್ರೇಸ್ ತಂತ್ರಜ್ಞಾನಗಳ ಬಗ್ಗೆ ಉದ್ಯಮಗಳಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಿದೆ.
ಇತರ ಸಂಸ್ಥೆಗಳಿಂದ ನವೀನ, ತ್ವರಿತ ಮತ್ತು ಆರ್ಥಿಕ ಪರಿಹಾರಗಳು ಸಹ ಬರುತ್ತಿವೆ. ಉದಾಹರಣೆಗೆ, ಸಿಎಸ್ಐಆರ್-ಇನ್ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಅಂಡ್ ಇಂಟಿಗ್ರೇಟಿವ್ ಬಯಾಲಜಿ (ಐಜಿಐಬಿ) ಕಾಗದದ ಪಟ್ಟಿ ಆಧಾರಿತ ಪರೀಕ್ಷಾ ಮೌಲ್ಯಮಾಪನವನ್ನು ಅಭಿವೃದ್ಧಿಪಡಿಸಿದೆ. ಈ ಪರೀಕ್ಷಾ ವಿಶ್ಲೇಷಣೆಯು ಕೊರೊನಾವೈರಸ್ SARS-Cov-2 ನೊವೆಲ್ ವೈರಲ್ ಆರ್ ಎನ್ ಎ ಯನ್ನು ಒಂದು ಗಂಟೆಯೊಳಗೆ ಪತ್ತೆ ಮಾಡುತ್ತದೆ.
ವೈರಸ್ ಮಾರ್ಫೋಜೆನೆಸಿಸ್ ಮತ್ತು ಅಭಿವೃದ್ಧಿ, ವೈರಸ್-ಹೋಸ್ಟ್ ಸಂವಹನ, ವೈರಲೆನ್ಸ್, ವಿಕಸನ ಮತ್ತು ಪ್ರಸರಣ ಮಾದರಿಯೊಂದಿಗೆ ಸಂಬಂಧಿಸಿರುವ ಆನುವಂಶಿಕ ರೂಪಾಂತರಗಳು, ರೋಗಕಾರಕ ಅಧ್ಯಯನಗಳು ಮತ್ತು ಸಾಂಕ್ರಾಮಿಕ ರೋಗಗಳ ಸಂಗ್ರಹದಂತಹ ಅನೇಕ ಸಾಂಕ್ರಾಮಿಕ ರೋಗಗಳ ಮೂಲ ವಿಜ್ಞಾನ ಮತ್ತು ಇತರ ಸಾಮಾಜಿಕ ಅಂಶಗಳ ಮೇಲೆ ಅನೇಕ ಸಂಶೋಧನಾ ಗುಂಪುಗಳು ಗಮನ ಹರಿಸುತ್ತಿವೆ. COVID-19 ವಿರುದ್ಧದ ಲಸಿಕೆಗಳು ಮತ್ತು ಚಿಕಿತ್ಸಕ ಔಷಧಿಗಳ ಅಭಿವೃದ್ಧಿಗೆ ಈ ಅಧ್ಯಯನಗಳು ತುಂಬಾ ಅವಶ್ಯಕವಾಗಿವೆ.
ಖಾಸಗಿ ಪ್ರಯೋಗಾಲಯಗಳಲ್ಲಿ ಎಸ್ & ಟಿ
ರೋಗನಿರ್ಣಯ, ಲಸಿಕೆಗಳು ಮತ್ತು ನೂತನ ಚಿಕಿತ್ಸಕಗಳ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಖಾಸಗಿ ವಲಯದ ಪ್ರಯತ್ನಗಳು ಮತ್ತು ಕೊಡುಗೆಗಳು ವೇಗಗೊಂಡಿವೆ. ಪುಣೆ ಮೂಲದ ಆಣ್ವಿಕ ರೋಗನಿರ್ಣಯ ಸಂಸ್ಥೆ ಮೈಲಾಬ್ ಡಿಸ್ಕವರಿ ಸೊಲ್ಯೂಷನ್ಸ್, ಭಾರತದಲ್ಲಿ ಮೊದಲ COVID-19 ಕ್ಷಿಪ್ರ ಪರೀಕ್ಷಾ ಕಿಟ್ ಅನ್ನು ಅಭಿವೃದ್ಧಿಪಡಿಸಿದೆ. ಈ ಪರೀಕ್ಷಾ ಕಿಟ್ ಅನ್ನು ಭಾರತೀಯ ಆಹಾರ ಮತ್ತು ಔಷಧ ಆಡಳಿತ, ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್ಕೊ) ಮತ್ತು ಐಸಿಎಂಆರ್ ಅನುಮೋದಿಸಿವೆ. ಈ ಕಿಟ್ ಎರಡೂವರೆ ಗಂಟೆಗಳ ಒಳಗೆ ಪರೀಕ್ಷಾ ಫಲಿತಾಂಶಗಳನ್ನು ನೀಡುತ್ತದೆ. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಎಪಿ ಗ್ಲೋಬಲೆ ಜೊತೆ ಕೈಜೋಡಿಸಿದ ನಂತರ, ಮೈಲಾಬ್ನ ಪರೀಕ್ಷಾ ಸಾಮರ್ಥ್ಯವು ವಾರಕ್ಕೆ 1.5 ಲಕ್ಷ ಪರೀಕ್ಷೆಗಳಿಂದ ವಾರಕ್ಕೆ 20 ಲಕ್ಷ (2 ಮಿಲಿಯನ್) ಪರೀಕ್ಷೆಗಳಿಗೆ ಹೆಚ್ಚಾಗಿದೆ.
ಪುಣೆ ಮೂಲದ ವಿಜ್ಞಾನ ಮತ್ತು ತಂತ್ರಜ್ಞಾನ ಪಾರ್ಕ್ ನ ಇನ್ಕ್ಯುಬೇಟ್ ಕಂಪನಿಯು ಡಿಎಸ್ಟಿಯ ‘ನಿಧಿ ಪ್ರಯಾಸ್’ ಕಾರ್ಯಕ್ರಮದಡಿ ‘ಸೈಟೆಕ್ ಏರಾನ್’ ಎಂಬ ಉತ್ಪನ್ನದ ಮೂಲಕ ನೂತನ COVID-19 ಪರಿಹಾರವನ್ನು ತಂದಿದೆ. ಅಯಾನೈಸರ್ ಯಂತ್ರವು ಋಣಾತ್ಮಕ ಆವೇಶದ ಅಯಾನುಗಳನ್ನು 8 ಸೆಕೆಂಡಿಗೆ ಸುಮಾರು ನೂರು ಮಿಲಿಯನ್ (ಸೆಕೆಂಡಿಗೆ 10 ಅಯಾನುಗಳು) ಉತ್ಪಾದಿಸುತ್ತದೆ ಎಂದು ಈ ಸ್ಟಾರ್ಟ್ ಅಪ್ ಹೇಳಿದೆ. ಈ ಯಂತ್ರವು ಕೋಣೆಯೊಳಗಿನ ವೈರಲ್ ಲೋಡ್ ಅನ್ನು ಶೇಕಡಾ 99.7 ರಷ್ಟು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ (ಕೋಣೆಯ ಗಾತ್ರವನ್ನು ಆಧರಿಸಿ). ಕ್ವಾರಂಟೈನ್ ಸೌಲಭ್ಯಗಳು ಮತ್ತು ಆಸ್ಪತ್ರೆಗಳನ್ನು ಸ್ವಚ್ಛಗೊಳಿಸಲು ಇದು ಉತ್ತಮ ಸಹಾಯ ಮಾಡುತ್ತದೆ.
ತಾಂತ್ರಿಕ ಮತ್ತು ವೈದ್ಯಕೀಯ ಪರಿಹಾರಗಳ ಜೊತೆಗೆ, ವಿಜ್ಞಾನ ಆಧಾರಿತ ಐಇಸಿ (ಮಾಹಿತಿ, ಶಿಕ್ಷಣ ಮತ್ತು ಸಂವಹನ) ಸಾಮಗ್ರಿಗಳನ್ನು ತಯಾರಿಸುವುದು ಮತ್ತು ಅದನ್ನು ಅಪಾರ ಸಂಖ್ಯೆಯ ಸಾರ್ವಜನಿಕರಿಗೆ ಪ್ರಸಾರ ಮಾಡುವುದು ಸಹ ಒಂದು ಪ್ರಮುಖ ಕಾರ್ಯವಾಗಿದೆ. ಅಂತಹ ಐಇಸಿ ವಸ್ತುಗಳು ಸಾರ್ವಜನಿಕರು ಎದುರಿಸುತ್ತಿರುವ ಮಿಥ್ಯೆ, ಭೀತಿ ಮತ್ತು ಮಾನಸಿಕ ಒತ್ತಡವನ್ನು ಹೋಗಲಾಡಿಸಬಹುದು. ಅಂತಹ ಒಂದು ಸರ್ಕಾರಿ ನೇತೃತ್ವದ ಎಐ ಆಧಾರಿತ ಆ್ಯಪ್ ‘ಕೊರೊನಾ ಕಾ ವಾಚ್’ ಅನ್ನು ಈ ದಿಕ್ಕಿನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಕೊರೊನಾವೈರಸ್ ಪಾಸಿಟಿವ್ ದೃಢಪಟ್ಟ ವ್ಯಕ್ತಿಯ ಸಾಮೀಪ್ಯದಲ್ಲಿ ಬಂದಾಗ ಬಳಕೆದಾರರನ್ನು ಎಚ್ಚರಿಸುವ ಹಾಗೂ ಇನ್ನಿತರ ಟ್ರ್ಯಾಕಿಂಗ್ ಅಪ್ಲಿಕೇಶನ್ಗಳು ಲಭ್ಯವಿವೆ. ಆದಾಗ್ಯೂ, ಈ ಅಪ್ಲಿಕೇಶನ್ಗಳು ಇಲ್ಲಿಯವರೆಗೆ ಸಾರ್ವಜನಿಕರಲ್ಲಿ ಸಾಕಷ್ಟು ಆಕರ್ಷಣೆಯನ್ನು ಗಳಿಸಿಲ್ಲ.
ಯುದ್ಧೋಪಾದಿಯಲ್ಲಿ ಸಮಗ್ರ ಪ್ರಯತ್ನಗಳು
COVID-19 ವಿರುದ್ಧದ ಹೋರಾಟದಲ್ಲಿ ಭಾರತೀಯ ಆರೋಗ್ಯ ಮತ್ತು ವೈಜ್ಞಾನಿಕ ಸಮುದಾಯಕ್ಕೆ ಭಾರತ ಸರ್ಕಾರ ಸಂಪೂರ್ಣ ಬೆಂಬಲವಾಗಿ ನಿಂತಿದೆ. ಸಮುದಾಯ, ಸಂಶೋಧಕರು, ಖಾಸಗಿ ಮತ್ತು ಸಾರ್ವಜನಿಕ ಸಂಶೋಧನಾ ಪ್ರಯೋಗಾಲಯಗಳು, ಸ್ಟಾರ್ಟ್ ಅಪ್ ಗಳು, ಇನ್ಕ್ಯುಬೇಟರ್ಗಳು, ಉದ್ಯಮಿಗಳು ಮತ್ತು ಕೈಗಾರಿಕೆಗಳಿಗೆ ಸಂಪೂರ್ಣ ಬೆಂಬಲ ನೀಡುವ ಸಲುವಾಗಿ ಸರ್ಕಾರಿ ವೈಜ್ಞಾನಿಕ ಸಂಸ್ಥೆಗಳು ಯಾವುದೇ ಅವಕಾಶಗಳನ್ನೂ ಬಿಟ್ಟುಕೊಡುತ್ತಿಲ್ಲ.. ರಾಷ್ಟ್ರಗಳ ನಡುವೆ ಪರಿಣತಿಯನ್ನು ಹಂಚಿಕೊಳ್ಳಲು, ನಕಲು ಮಾಡುವುದನ್ನು ತಪ್ಪಿಸಲು ಮತ್ತು ಅಗತ್ಯವಿದ್ದಾಗ ಮತ್ತು ಸಂಪೂರ್ಣ ಪ್ರಕ್ರಿಯೆಯನ್ನು ವೇಗಗೊಳಿಸಲು ರಾಷ್ಟ್ರೀಯ ಯೋಜನೆಗಳನ್ನು ಜಾಗತಿಕ ಯೋಜನೆಗಳೊಂದಿಗೆ ಜೋಡಿಸುವ ಪ್ರಯತ್ನವನ್ನು ಧನಸಹಾಯ ಸಂಸ್ಥೆಗಳು ಮಾಡುತ್ತಿವೆ.
ಮಾರ್ಚ್ 21 ರಂದು, COVID-19 ಸೋಂಕಿತ ಜನರಿಂದ ರಕ್ತ, ಮೂಗು ಮತ್ತು ಗಂಟಲಿನ ಮಾದರಿಗಳನ್ನು ಸಂಗ್ರಹಿಸಲು ಭಾರತೀಯ ವಿಜ್ಞಾನಿಗಳಿಗೆ ಅವಕಾಶವನ್ನು ನೀಡಲಾಯಿತು. ಇದು ಸ್ಥಳೀಯವಾಗಿ COVID-19 ಕುರಿತ ಹಲವಾರು ಸಂಶೋಧನಾ ಯೋಜನೆಗಳಿಗೆ ನೆರವಾಯಿತು. ರೋಗನಿರ್ಣಯ ಕಿಟ್ಗಳ ಅಭಿವೃದ್ಧಿ, ಲಸಿಕೆ ಮುಂತಾದ ಹಲವಾರು ಸಂಶೋಧನಾ ಯೋಜನೆಗಳಿಗೆ ಇದು ಉತ್ತೇಜನ ನೀಡಿದೆ. ಇದಲ್ಲದೆ, ಸಿಎಸ್ಐಆರ್, ಡಿಬಿಟಿ, ಡಿಎಸ್ಟಿ ಮತ್ತು ಪರಮಾಣು ಶಕ್ತಿ ಇಲಾಖೆ (ಡಿಎಇ) ಸೇರಿದಂತೆ ಎಲ್ಲಾ ರಾಷ್ಟ್ರೀಯ ಸಂಶೋಧನಾ ಪ್ರಯೋಗಾಲಯಗಳಿಗೆ COVID-19 ಪರೀಕ್ಷೆಯನ್ನು ನಡೆಸಲು ಸರ್ಕಾರ ಅನುಮತಿ ನೀಡಿದೆ. ಸ್ಕ್ರೀನಿಂಗ್ ಪ್ರಕ್ರಿಯೆಯನ್ನು ವೇಗಗೊಳಿಸಲು ಮತ್ತು ಸಂಪರ್ಕಗಳನ್ನು ಪತ್ತೆಹಚ್ಚಲು ಇದು ಸಹಾಯ ಮಾಡುತ್ತದೆ.
COVID-19 ಸವಾಲುಗಳನ್ನು ಎದುರಿಸುವ 50 ಆವಿಷ್ಕಾರಗಳು ಮತ್ತು ಸ್ಟಾರ್ಟ್ ಅಪ್ಗಳನ್ನು ಮೌಲ್ಯಮಾಪನ ಮಾಡಲು ಮತ್ತು ಬೆಂಬಲಿಸಲು ಏಪ್ರಿಲ್ 3 ರಂದು ಡಿಎಸ್ಟಿ ಒಟ್ಟು 56 ಕೋ.ರೂ. ವೆಚ್ಚದಲ್ಲಿ 'ಸೆಂಟರ್ ಫಾರ್ ಆಗ್ಮೆಂಟಿಂಗ್ ವಾರ್ ವಿತ್ ಕೋವಿಡ್ -19 ಹೆಲ್ತ್ ಕ್ರೈಸಿಸ್' (CAWACH) ಅನ್ನು ಸ್ಥಾಪಿಸಿದೆ. ಐಐಟಿ ಬಾಂಬೆಯಲ್ಲಿ ತಂತ್ರಜ್ಞಾನ ವ್ಯವಹಾರ ಇನ್ಕ್ಯುಬೇಟರ್ ಸೊಸೈಟಿ ಫಾರ್ ಇನ್ನೋವೇಶನ್ ಅಂಡ್ ಎಂಟರ್ಪ್ರೆನ್ಯೂರ್ಶಿಪ್ (ಸಿನ್) ನಲ್ಲಿ CAWACH ಅನ್ನು ಸ್ಥಾಪಿಸಲಾಗಿದೆ. ಭವಿಷ್ಯದಲ್ಲಿ ಸಾಂಕ್ರಾಮಿಕ ರೋಗದಿಂದ ಹೊರಬರಲು ಈ ಆರ್ & ಡಿ ಉಪಕ್ರಮಗಳು ಖಂಡಿತವಾಗಿಯೂ ದೇಶಕ್ಕೆ ನೆರವಾಗುತ್ತವೆ ಎಂದು ಭಾರತ ಸರ್ಕಾರ ದೃಢವಾಗಿ ನಂಬಿದೆ.
***
(Release ID: 1611723)
Visitor Counter : 2689