ಹಣಕಾಸು ಸಚಿವಾಲಯ
ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಬಡವರಿಗೆ ಸಹಾಯ ಮಾಡಲು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 1.70ಲಕ್ಷ ಕೋಟಿ ಪರಿಹಾರ ಪ್ಯಾಕೇಜ್ ಪ್ರಕಟಿಸಿದ ಕೇಂದ್ರ ಹಣಕಾಸು ಸಚಿವರು
Posted On:
26 MAR 2020 5:12PM by PIB Bengaluru
ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಬಡವರಿಗೆ ಸಹಾಯ ಮಾಡಲು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 1.70ಲಕ್ಷ ಕೋಟಿ ಪರಿಹಾರ ಪ್ಯಾಕೇಜ್ ಪ್ರಕಟಿಸಿದ ಕೇಂದ್ರ ಹಣಕಾಸು ಸಚಿವರು
ವಿಮಾ ಯೋಜನೆಯಡಿ ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ತಲಾ 50 ಲಕ್ಷ ರೂಪಾಯಿ ವರೆಗೆ ವಿಮಾ ಸೌಲಭ್ಯ
80 ಕೋಟಿ ಬಡ ಜನರಿಗೆ ಮುಂದಿನ ಮೂರು ತಿಂಗಳ ಕಾಲ ಪ್ರತಿ ತಿಂಗಳು ಉಚಿತವಾಗಿ 5 ಕೆಜಿ ಗೋಧಿ ಅಥವಾ ಅಕ್ಕಿ ಮತ್ತು ಒಂದು ಕೆಜಿ ಬೇಳೆ ವಿತರಣೆ
ಜನ್ ಧನ್ ಖಾತೆ ಹೊಂದಿರುವ 20 ಕೋಟಿ ಮಹಿಳೆಯರಿಗೆ ಮುಂದಿನ ಮೂರು ತಿಂಗಳು ತಲಾ 500 ರೂ. ಜಮೆ
ಮನ್ರೇಗಾ ದಿನಗೂಲಿ 182 ರೂ.ನಿಂದ 202 ರೂ.ಗೆ ಏರಿಕೆ, ಇದರಿಂದ 13.62 ಕೋಟಿ ಕುಟುಂಬಗಳಿಗೆ ಅನುಕೂಲ
3 ಕೋಟಿ ಹಿರಿಯ ನಾಗರಿಕರು ಬಡ ವಿಧವೆಯರು ಮತ್ತು ಬಡ ದಿವ್ಯಾಂಗರಿಗೆ ಒಂದು ಸಾವಿರ ರೂ. ಪರಿಹಾರ
ಹಾಲಿ ಇರುವ ಪ್ರಧಾನಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ ಏಪ್ರಿಲ್ ಮೊದಲ ವಾರದಲ್ಲಿ ಎಲ್ಲಾ ರೈತರ ಖಾತೆಗೆ 2,000 ರೂ. ಸರ್ಕಾರದಿಂದ ಜಮೆ, ಇದರಿಂದ 8.7 ಕೋಟಿ ರೈತರಿಗೆ ಅನುಕೂಲ
ಕಟ್ಟಡ ಕಾರ್ಮಿಕರಿಗೆ ಪರಿಹಾರವನ್ನು ಒದಗಿಸಲು ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸಗಾರರ ಕಲ್ಯಾಣ ನಿಧಿ ಬಳಕೆಗೆ ರಾಜ್ಯ ಸರ್ಕಾರಗಳಿಗೆ ಅನುಮತಿ ನೀಡಿದ ಕೇಂದ್ರ ಸರ್ಕಾರ
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಕೊರೋನಾ ಸೋಂಕು ವಿರುದ್ಧ ಹೋರಾಡುತ್ತಿರುವ ಬಡವರಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ 1.70 ಲಕ್ಷ ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ಅನ್ನು ಪ್ರಕಟಿಸಿದರು. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸೀತಾರಾಮನ್ ಅವರು, “ಇಂದಿನ ಈ ಕ್ರಮಗಳು ಬಡವರಲ್ಲಿ ಕಡುಬಡವರಾಗಿರುವವರಿಗೆ ಆಹಾರ ಮತ್ತು ಹಣಕಾಸಿನ ನೆರವು ನೀಡುವ ಮೂಲಕ ಅವರನ್ನು ತಲುಪಲಾಗುತ್ತಿದೆ, ಆ ಮೂಲಕ ಅವರು ಅಗತ್ಯ ವಸ್ತುಗಳನ್ನು ಖರೀದಿಸಲು ಕಷ್ಟ ಎದುರಿಸಬೇಕಾಗಿಲ್ಲ” ಎಂದರು.
ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆ ರಾಜ್ಯ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರೂ ಸಹ ಸುದ್ದಿಗೋಷ್ಠಿಯಲ್ಲಿದ್ದರು. ಅಲ್ಲದೆ ಆರ್ಥಿಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಶ್ರೀ ಅತನು ಚಕ್ರವರ್ತಿ, ಹಣಕಾಸು ಸೇವೆಗಳ ಇಲಾಖೆ ಕಾರ್ಯದರ್ಶಿ ದೆಬಶೀಶ್ ಪಾಂಡ ಅವರು ಉಪಸ್ಥಿತರಿದ್ದರು. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ ನ ಅಂಶಗಳು ಈ ಕೆಳಗಿನಂತಿವೆ: -
I. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್
ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ರಕ್ಷಣಾ ಕೇಂದ್ರಗಳಲ್ಲಿ ದುಡಿಯುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ವಿಮಾ ಯೋಜನೆ.
ಸಫಾಯಿ ಕರ್ಮಚಾರಿಗಳು, ವಾರ್ಡ್ ಬಾಯ್ ಗಳು, ನರ್ಸ್ ಗಳು, ಆಶಾ ಕಾರ್ಯಕರ್ತೆಯರು, ಅರೆ ವೈದ್ಯಕೀಯ ಸಿಬ್ಬಂದಿ, ತಂತ್ರಜ್ಞರು, ವೈದ್ಯರು ಮತ್ತು ವಿಶೇಷ ತಜ್ಞರು ಹಾಗೂ ಇತರೆ ಆರೋಗ್ಯ ಕಾರ್ಯಕರ್ತರನ್ನು ವಿಶೇಷ ವಿಮಾ ಯೋಜನೆ ವ್ಯಾಪ್ತಿಗೆ ಸೇರ್ಪಡೆ.
ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವುದು, ಅವರನ್ನು ಭೇಟಿ ಮಾಡುವುದು ಮತ್ತಿತರ ಕಾರ್ಯಗಳಲ್ಲಿ ತೊಡಗಿದ್ದ ಯಾವುದೇ ಆರೋಗ್ಯ ವೃತ್ತಿಪರರು ಅವಘಡದಲ್ಲಿ ಸಿಲುಕಿ ಆತ/ಆಕೆ ಸಾವನ್ನಪ್ಪಿದರೆ ಅವರಿಗೆ 50 ಲಕ್ಷ ರೂಪಾಯಿ ವರೆಗೆ ವಿಮಾ ಪರಿಹಾರ ನೀಡಲಾಗುವುದು.
ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಎಲ್ಲ ಸರ್ಕಾರಿ ಆರೋಗ್ಯ ಕೇಂದ್ರಗಳು, ಸೌಖ್ಯ ಕೇಂದ್ರಗಳು ಮತ್ತು ಕೇಂದ್ರ ಹಾಗೂ ರಾಜ್ಯಗಳ ಆಸ್ಪತ್ರೆಗಳು ಈ ವಿಮೆಯ ವ್ಯಾಪ್ತಿಗೆ ಒಳಪಡಲಿದ್ದು, ಅಂದಾಜು 22 ಲಕ್ಷ ಆರೋಗ್ಯ ಕಾರ್ಯಕರ್ತೆಯರಿಗೆ ಈ ವಿಮಾ ಸೌಕರ್ಯ ಒದಗಿಸಲಾಗುವುದು.
II. ಪ್ರಧಾನಮಂತ್ರಿ ಗರೀಬ್ ಅನ್ನ ಯೋಜನೆ
ಭಾರತ ಸರ್ಕಾರ ಯಾವುದೇ ವ್ಯಕ್ತಿ ಅಥವಾ ವಿಶೇಷವಾಗಿ ಬಡ ಕುಟುಂಬದವರು ಮುಂದಿನ ಮೂರು ತಿಂಗಳ ಕಾಲ ಯಾವುದೇ ಆಹಾರ ಧಾನ್ಯಗಳಿಲ್ಲದೆ ತೊಂದರೆ ಅನುಭವಿಸಲು ಅವಕಾಶ ನೀಡುವುದಿಲ್ಲ.
80 ಕೋಟಿ ಜನರು ಅಂದರೆ ಸರಿ ಸುಮಾರು ಭಾರತದ ಜನಸಂಖ್ಯೆಯ ಎರಡನೇ ಮೂರರಷ್ಟು ಈ ಯೋಜನೆಯ ವ್ಯಾಪ್ತಿಗೆ ಒಳಪಡಲಿದ್ದಾರೆ. ಪ್ರತಿಯೊಬ್ಬರಿಗೂ ಮುಂದಿನ ಮೂರು ತಿಂಗಳ ಕಾಲ ಅವರಿಗೆ ನಿಗದಿ ಪಡಿಸಿರುವುದಕ್ಕಿಂತ ಎರಡುಪಟ್ಟು ಹೆಚ್ಚು ಆಹಾರಧಾನ್ಯ ಪಡೆಯಲಿದ್ದಾರೆ. ಈ ಹೆಚ್ಚುವರಿ ಆಹಾರಧಾನ್ಯವನ್ನು ಉಚಿತವಾಗಿ ನೀಡಲಾಗುವುದು.
ಬೇಳೆಕಾಳು:
ಮೇಲೆ ಉಲ್ಲೇಖಿಸಿದ ಎಲ್ಲ ವ್ಯಕ್ತಿಗಳಿಗೆ ಅಗತ್ಯ ಪ್ರೋಟೀನ್ ಲಭ್ಯವಾಗುವಂತೆ ಮಾಡಲು ಮುಂದಿನ ಮೂರು ತಿಂಗಳ ಕಾಲ ಪ್ರಾದೇಶಿಕ ಆಯ್ಕೆಗೆ ಅನುಗುಣವಾಗಿ ಪ್ರತಿ ಕುಟುಂಬಕ್ಕೆ ಒಂದು ಕೆ.ಜಿ. ಬೇಳೆ ಒದಗಿಸಲಾಗುವುದು.
ಈ ಬೇಳೆಯನ್ನು ಭಾರತ ಸರ್ಕಾರ ಉಚಿತವಾಗಿ ನೀಡಲಿದೆ.
III. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ
ರೈತರಿಗೆ ಅನುಕೂಲ:
ಪ್ರಧಾನಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ ಏಪ್ರಿಲ್ 2020ಕ್ಕೆ 2020-21ನೇ ಸಾಲಿನ ಮೊದಲ ಕಂತಿನ 2,000 ರೂ. ಹಣ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುವುದು.
ಇದರಿಂದ 8.7 ಕೋಟಿ ರೈತರಿಗೆ ಅನುಕೂಲವಾಗಲಿದೆ.
IV. ಪಿಎಂ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ನಗದು ವರ್ಗಾವಣೆ
ಬಡವರಿಗೆ ನೆರವು
ಪ್ರಧಾನಮಂತ್ರಿ ಜನ್ ಧನ್ ಯೋಜನೆಯಡಿಯಲ್ಲಿ ಬ್ಯಾಂಕ್ ಖಾತೆ ಹೊಂದಿರುವ ಒಟ್ಟು 20.40
ಕೋಟಿ ಮಹಿಳೆಯರಿಗೆ ತಲಾ 500 ರೂಪಾಯಿ ಪರಿಹಾರ.
ಅಡುಗೆ ಅನಿಲ:
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿ ಮುಂದಿನ ಮೂರು ತಿಂಗಳ ಕಾಲ 8 ಕೋಟಿ ಬಡ ಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನಿಲ ಸಿಲಿಂಡರ್ ಗಳನ್ನು ಒದಗಿಸಲಾಗುವುದು.
ಸಂಘಟಿತ ವಲಯದಲ್ಲಿ ಕಡಿಮೆ ಕೂಲಿಗೆ ದುಡಿಯುವವರಿಗೆ ನೆರವು:
• ಪ್ರತಿ ತಿಂಗಳು 15ಸಾವಿರ ರೂ.ಗಳಿಗಿಂತ ಕಡಿಮೆ ಆದಾಯಗಳಿಸುವ ಮತ್ತು 100ಕ್ಕಿಂತ ಕಡಿಮೆ ಕೆಲಸಗಾರರು ಇರುವ ಕಡೆ ಉದ್ಯೋಗ ಕಳೆದು ಕೊಳ್ಳುವ ಅಪಾಯವಿದೆ.
• ಈ ಪ್ಯಾಕೇಜ್ ಅಡಿಯಲ್ಲಿ ಸರ್ಕಾರ ಮುಂದಿನ ಮೂರು ತಿಂಗಳ ಕಾಲ ಆ ಕಾರ್ಮಿಕರ ಶೇ.24ರಷ್ಟು ತಿಂಗಳ ವೇತನವನ್ನು ಅವರ ಪಿಎಫ್ ಖಾತೆಗಳಿಗೆ ಜಮಾ ಮಾಡಲು ಉದ್ದೇಶಿಸಿದೆ.
• ಇದು ಅವರು ಉದ್ಯೋಗದಿಂದ ತೊಂದರೆ ಅನುಭವಿಸುವುದು ತಪ್ಪಿಸುತ್ತದೆ.
ಹಿರಿಯ ನಾಗರಿಕರು(60 ವರ್ಷ ಮೇಲ್ಪಟ್ಟವರು) ವಿಧವೆಯರು ಮತ್ತು ದಿವ್ಯಾಂಗರಿಗೆ ನೆರವು
• ಸುಮಾರು 3 ಕೋಟಿ ವಯಸ್ಸಾದ ವಿಧವೆಯರು ಮತ್ತು ದಿವ್ಯಾಂಗ ಜನರು ಕೋವಿಡ್-19 ಕಾರಣದಿಂದಾಗಿ ಆರ್ಥಿಕವಾಗಿ ತೊಂದರೆಗೆ ಒಳಗಾಗಲಿದ್ದಾರೆ.
• ಸರ್ಕಾರ ಮುಂದಿನ ಮೂರು ತಿಂಗಳ ಕಾಲ ಅವರು ಸಂಕಷ್ಟದಿಂದ ಹೊರಬರಲು ತಲಾ 1,000 ರೂ. ನೀಡಲಿದೆ.
ಮನ್ರೇನಾ
• ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ 2020ರ ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಮನ್ರೇಗಾ ದಿನಗೂಲಿಯನ್ನು 20 ರೂ. ಹೆಚ್ಚಳ ಮಾಡಲಾಗಿದೆ. ಈ ದಿನಗೂಲಿ ಹೆಚ್ಚಳದಿಂದ ಮನ್ರೇಗಾದಲ್ಲಿ ಪ್ರತಿ ಕೂಲಿಕಾರರು ವಾರ್ಷಿಕ ಹೆಚ್ಚುವರಿಯಾಗಿ 2,000 ರೂ.ಗಳ ಅನುಕೂಲ ಪಡೆಯಲಿದ್ದಾರೆ.
• ಇದರಿಂದ ಸುಮಾರು 13.62 ಕೋಟಿ ಕುಟುಂಬಗಳಿಗೆ ಪ್ರಯೋಜನವಾಗಲಿದೆ.
IV. ಸ್ವಸಹಾಯ ಸಂಘಗಳು
• ಮಹಿಳೆಯರು ಸಂಘಟಿಸಿದ 63 ಲಕ್ಷ ಸ್ವಸಹಾಯ ಗುಂಪುಗಳು(ಎಸ್ಎಚ್ ಜಿಎಸ್)ಗಳು 6.85 ಕೋಟಿ ಕುಟುಂಬಗಳಿಗೆ ನೆರವು ನೀಡುತ್ತಿವೆ.
• ಖಾತ್ರಿ ಇಲ್ಲದೆ ನೀಡುತ್ತಿರುವ ಸಾಲದ ಮಿತಿಯನ್ನು 10 ಲಕ್ಷ ರೂ.ನಿಂದ 20 ಲಕ್ಷ ರೂ.ಗಳವರೆಗೆ ಹೆಚ್ಚಿಸಲಾಗಿದೆ.
VI. ಪಿಎಂ ಗರೀಬ್ ಕಲ್ಯಾಣ್ ಪ್ಯಾಕೇಜ್ ನ ಇತರೆ ಅಂಶಗಳು
ಸಂಘಟಿತ ವಲಯ
• ನೌಕರರ ಭವಿಷ್ಯ ನಿಧಿ ನಿಯಮಾವಳಿಗಳನ್ನು ತಿದ್ದುಪಡಿ ಮಾಡಿ, ಸಾಂಕ್ರಾಮಿಕವನ್ನು ಸೇರಿಸಿ, ಆ ಕಾರಣದಿಂದ ಶೇ.75ರಷ್ಟು ಮುಂಗಡವಾಗಿ ಹಣ ಸ್ವೀಕರಿಸಲು ಅವಕಾಶ ನೀಡಲಾಗುವುದು ಅಥವಾ ಮೂರು ತಿಂಗಳ ವೇತನ ಯಾವುದು ಕಡಿಮೆಯೋ ಅದನ್ನು ಅವರ ಖಾತೆಯಿಂದ ಪಡೆಯಲು ಅವಕಾಶ ನೀಡಲಾಗುವುದು.
• ಇದರಿಂದಾಗಿ ಇಪಿಎಫ್ ನಲ್ಲಿ ನೋಂದಣಿ ಮಾಡಿಕೊಂಡಿರುವ 4 ಕೋಟಿ ನೌಕರ ಕುಟುಂಬಗಳಿಗೆ ಅನುಕೂಲವಾಗಲಿದೆ.
ಕಟ್ಟಡ ಮತ್ತು ಇತರ ನಿರ್ಮಾಣ ಕೆಲಸಗಾರರ ಕಲ್ಯಾಣ ನಿಧಿ
• ಕೇಂದ್ರ ಸರ್ಕಾರದ ಕಾಯ್ದೆಅಡಿ ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸಗಾರರ ಕಲ್ಯಾಣ ನಿಧಿಯನ್ನು ಸ್ಥಾಪಿಸಲಾಗಿದೆ.
• ಸುಮಾರು 3.5 ಕೋಟಿ ನೋಂದಾಯಿತ ಕೆಲಸಗಾರರು ಈ ನಿಧಿ ವ್ಯಾಪ್ತಿಗೆ ಒಳಪಡಲಿದ್ದಾರೆ.
• ಕಟ್ಟಡ ಕಾರ್ಮಿಕರು ಆರ್ಥಿಕ ತೊಂದರೆಗೆ ಒಳಗಾಗುವುದನ್ನು ತಪ್ಪಿಸಲು ಹಾಗೂ ಅಂತಹ ಕಾರ್ಮಿಕರಿಗೆ ನೆರವಾಗಲು ಈ ನಿಧಿಯನ್ನು ಬಳಕೆ ಮಾಡಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ನಿರ್ದೇಶನಗಳನ್ನು ನೀಡಲಾಗಿದೆ.
ಜಿಲ್ಲಾ ಖನಿಜ ನಿಧಿ
• ಜಿಲ್ಲಾ ಖನಿಜ ನಿಧಿ(ಡಿಎಂಎಫ್) ಅಡಿಯಲ್ಲಿ ಲಭ್ಯವಿರುವ ನಿಧಿಯನ್ನು ಕೋವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಸಂಬಂಧ ಹಾಗೂ ಇತರೆ ವೈದ್ಯಕೀಯ ಪರೀಕ್ಷೆ, ತಪಾಸಣೆ ಮತ್ತಿತರ ಅಗತ್ಯ ಸೌಕರ್ಯಗಳವೃದ್ಧಿ ಮತ್ತು ಪೂರಕ ಕಾರ್ಯಗಳಿಗೆ ಹಾಗೂ ಸಾಂಕ್ರಾಮಿಕ ತಗುಲಿರುವ ರೋಗಿಗಳ ಚಿಕಿತ್ಸೆಗೆ ಬಳಕೆ ಮಾಡಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ.
****
(Release ID: 1608450)
Visitor Counter : 737
Read this release in:
English
,
Marathi
,
Hindi
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam