ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಹ್ಯಾಂಡ್ ಸ್ಯಾನಿಟೈಸರ್ ಗಳನ್ನು  ಗರಿಷ್ಟ ಪ್ರಮಾಣದಲ್ಲಿ ಉತ್ಪಾದಿಸುವಂತೆ ಡಿಸ್ಟಿಲರಿ ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಸರಕಾರ ಸೂಚನೆ

Posted On: 26 MAR 2020 3:42PM by PIB Bengaluru

ಹ್ಯಾಂಡ್ ಸ್ಯಾನಿಟೈಸರ್ ಗಳನ್ನು  ಗರಿಷ್ಟ ಪ್ರಮಾಣದಲ್ಲಿ ಉತ್ಪಾದಿಸುವಂತೆ ಡಿಸ್ಟಿಲರಿ ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಸರಕಾರ ಸೂಚನೆ
100 ಡಿಸ್ಟಿಲರಿಗಳು ಮತ್ತು 500 ಕ್ಕೂ ಅಧಿಕ ಉತ್ಪಾದಕರಿಗೆ ಹ್ಯಾಂಡ್ ಸ್ಯಾನಿಟೈಸರ್  ತಯಾರಿಸಲು ಅನುಮತಿ

 

ಲಾಕ್ ಡೌನ್ ಅವಧಿಯಲ್ಲಿ ನೊವೆಲ್ ಕೊರೋನಾ ವೈರಸ್ ವಿರುದ್ದ ಹೋರಾಡಲು ಅವಶ್ಯಕ ಸಾಮಗ್ರಿಗಳ ಪೂರೈಕೆಯನ್ನು ಖಾತ್ರಿಗೊಳಿಸುವುದಕ್ಕಾಗಿ ಕೇಂದ್ರ ಹಾಗು ರಾಜ್ಯ ಸರಕಾರಗಳು ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿವೆ. ಕೊರೊನಾ ವೈರಸ್ ಪ್ರಸಾರ ತಡೆಗಟ್ಟಲು ಸಾರ್ವಜನಿಕರು ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಬಳಸುತ್ತಿದ್ದಾರೆ. ಆರೋಗ್ಯ ಕಾರ್ಯಕರ್ತರು, ಆಸ್ಪತ್ರೆಗಳೂ ಇವುಗಳನ್ನು ಬಳಸುತ್ತಿವೆ. ದಿನದಿಂದ ದಿನಕ್ಕೆ ಸ್ಯಾನಿಟೈಸರ್ ಗಳ ಬೇಡಿಕೆ ಹೆಚ್ಚುತ್ತಿದೆ. ಮತ್ತು ಬೇಡಿಕೆ ಹಾಗು  ಪೂರೈಕೆ ಸಮತೋಲನವನ್ನು ಕಾಪಾಡಲು ರಾಜ್ಯ ಸರಕಾರಗಳ ಅಧಿಕಾರಿಗಳು , ಅಬಕಾರಿ ಆಯುಕ್ತರು, ಕಬ್ಬು ಆಯುಕ್ತರು, ಔಷಧ ನಿಯಂತ್ರಕರು ಮತ್ತು ಜಿಲ್ಲಾಧಿಕಾರಿಗಳು ಒಳಗೊಂಡಂತೆ ಎಥೆನಾಲ್/ ಇ.ಎನ್.ಎ.ಯನ್ನು ಹ್ಯಾಂಡ್ ಸ್ಯಾನಿಟೈಸರ್ ಉತ್ಪಾದಕರಿಗೆ ಪೂರೈಸಲು ಇರುವ ಅಡ್ಡಿಗಳನ್ನು ನಿವಾರಿಸುವಂತೆ ಹಾಗು ಡಿಸ್ಟಿಲ್ಲರಿ ಸಹಿತ ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಉತ್ಪಾದಿಸಲು ಇಚ್ಚಿಸುವವರಿಗೆ ಅನುಮತಿ/ಪರವಾನಗಿಗಳನ್ನು ಕೊಡುವಂತೆ ಸಲಹೆ ಮಾಡಲಾಗಿದೆ. ಡಿಸ್ಟಿಲ್ಲರಿ / ಸಕ್ಕರೆ ಕಾರ್ಖಾನೆಗಳು ಬೃಹತ್ ಪ್ರಮಾಣದಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಉತ್ಪಾದಿಸಲು ಪ್ರೇರಣೆ ನೀಡುವಂತೆಯೂ ತಿಳಿಸಲಾಗಿದೆ. ಈ ಉತ್ಪಾದಕರಿಗೆ ಉತ್ಪಾದನೆಯನ್ನು ಗರಿಷ್ಟ ಪ್ರಮಾಣದಲ್ಲಿ ಮಾಡಲು ಮೂರು ಪಾಳಿಯಲ್ಲಿ ಕೆಲಸ ಮಾಡುವಂತೆಯೂ ತಿಳಿಸಲಾಗಿದೆ.
ಸುಮಾರು 45 ಡಿಸ್ಟಿಲ್ಲರಿಗಳು ಮತ್ತು 564 ಇತರ ಉತ್ಪಾದಕರಿಗೆ ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಉತ್ಪಾದಿಸಲು ಅನುಮತಿ ನೀಡಲಾಗಿದೆ. ಇನ್ನು ಒಂದೆರಡು ದಿನಗಳಲ್ಲಿ 55 ಕ್ಕೂ ಅಧಿಕ ಡಿಸ್ಟಿಲ್ಲರಿಗಳಿಗೆ ಅನುಮತಿ ನೀಡುವ ನಿರೀಕ್ಷೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಇನ್ನಷ್ಟು ಸಂಸ್ಥೆಗಳಿಗೆ ಹ್ಯಾಂಡ್ ಸ್ಯಾನಿಟೈಸರ್ ಉತ್ಪಾದನೆಗೆ ಪ್ರೇರಣೆ ನೀಡಲಾಗುತ್ತದೆ. ಇವರಲ್ಲಿ ಕೆಲವು ಸಂಸ್ಥೆಗಳು ಈಗಾಗಲೇ ಉತ್ಪಾದನೆ ಆರಂಭಿಸಿವೆ ಮತ್ತು ಇನ್ನು ಕೆಲವು ಸಂಸ್ಥೆಗಳು ಇನ್ನೊಂದು ವಾರದಲ್ಲಿ ಉತ್ಪಾದನೆ ಆರಂಭಿಸಲಿವೆ. ಇದರಿಂದ ಬಳಕೆದಾರರಿಗೆ ಮತ್ತು ಆಸ್ಪತ್ರೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಗಳ ಪೂರೈಕೆಯಾಗಲಿದೆ.
ಸಾರ್ವಜನಿಕರಿಗೆ ಮತ್ತು ಆಸ್ಪತ್ರೆಗಳಿಗೆ ನ್ಯಾಯೋಚಿತ ಬೆಲೆಯಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಗಳು ಲಭ್ಯವಾಗುವುದನ್ನು ಖಾತ್ರಿಪಡಿಸಲು ಸರಕಾರವು ಸ್ಯಾನಿಟೈಸರ್ ಗಳಿಗೆ ಗರಿಷ್ಟ ಚಿಲ್ಲರೆ ಮಾರಾಟ ಬೆಲೆಯನ್ನು ನಿಗದಿ ಮಾಡಿದೆ. 200 ಮಿಲಿ.ಲೀ. ಸ್ಯಾನಿಟೈಸರಿಗೆ ಗರಿಷ್ಟ ಚಿಲ್ಲರೆ ಮಾರಾಟ ಬೆಲೆ ರೂಪಾಯಿ 100 ದಾಟಬಾರದು. ಇತರ ಗಾತ್ರದ ಹ್ಯಾಂಡ್ ಸ್ಯಾನಿಟೈಸರುಗಳ ದರವನ್ನು ಆಯಾ ಪ್ರಮಾಣಕ್ಕೆ ಅನುಗುಣವಾಗಿ ನಿಗದಿ ಮಾಡತಕ್ಕದ್ದು.



(Release ID: 1608449) Visitor Counter : 127