ಗೃಹ ವ್ಯವಹಾರಗಳ ಸಚಿವಾಲಯ

ಕೋವಿಡ್ -19 ಸಾಂಕ್ರಾಮಿಕ ಪಿಡುಗು ನಿಯಂತ್ರಣಕ್ಕೆ ಲಾಕ್ ಡೌನ್ ನಿಗದಿಪಡಿಸಿ ಭಾರತ ಸರ್ಕಾರದಿಂದ ಆದೇಶ

Posted On: 25 MAR 2020 7:56PM by PIB Bengaluru

ಕೋವಿಡ್ -19 ಸಾಂಕ್ರಾಮಿಕ ಪಿಡುಗು ನಿಯಂತ್ರಣಕ್ಕೆ ಲಾಕ್ ಡೌನ್ ನಿಗದಿಪಡಿಸಿ ಭಾರತ ಸರ್ಕಾರದಿಂದ ಆದೇಶ
ಕೋವಿಡ್-19 ಪಿಡುಗು ಹಲವು ದೇಶಗಳಲ್ಲಿ ವ್ಯಾಪಿಸಿದೆ ಮತ್ತು ಇದನ್ನು ವಿಶ್ವ ಆರೋಗ್ಯ ಸಂಸ್ಥೆ ‘ಸಾಂಕ್ರಾಮಿಕ’ ರೋಗ ಎಂದು ಘೋಷಿಸಿದೆ


 
ಭಾರತ ಸರ್ಕಾರ(ಜಿಒಐ) ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಮತ್ತು ಅಂತಾರಾಷ್ಟ್ರೀಯ ಪ್ರಯಾಣಗಳನ್ನು ನಿರ್ಬಂಧಿಸುವುದು ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಾರ್ವಜನಿಕರಿಗೆ ಅಗತ್ಯ ಮಾರ್ಗಸೂಚಿಗಳನ್ನು ನೀಡಲಾಗುತ್ತಿದೆ, ಕ್ವಾರಂಟೈನ್ ಸೌಲಭ್ಯಗಳನ್ನು ಸ್ಥಾಪನೆ ಮತ್ತು ವೈರಸ್ ನಿಂದ ಸೋಂಕಿತರಾದ ವ್ಯಕ್ತಿಗಳ ಗುರುತುಗಳನ್ನು ಪತ್ತೆಹಚ್ಚುತ್ತಿದೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಲವು ಕ್ರಮಗಳನ್ನು ಜಾರಿಗೊಳಿಸುತ್ತಿದೆ. ಕೊರೋನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು(ಯುಟಿ)ಗಳಿಗೆ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಅಲ್ಲದೆ ಸರ್ಕಾರ ಮೆಟ್ರೋ ಮತ್ತು ಇತರ ರೈಲು ಸೇವೆಗಳು ಹಾಗೂ ದೇಶೀಯ ವಿಮಾನ ಸಂಚಾರಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ.
ಭಾರತದ ಪ್ರಧಾನಮಂತ್ರಿಯವರ ಮಟ್ಟದಲ್ಲಿ ಪರಿಸ್ಥಿತಿಯ ಮೇಲೆ ನಿರಂತರ ಪರಾಮರ್ಶೆ ನಡೆಸಲಾಗುತ್ತಿದೆ, ಪ್ರಧಾನಮಂತ್ರಿಗಳು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ ಮತ್ತು ದೇಶದ ಎಲ್ಲ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಿದ್ದಾರೆ.
 ವಿಶ್ವದ ಇತರೆ ರಾಷ್ಟ್ರಗಳಲ್ಲಿ ಸಹಸ್ರಾರು ಮಂದಿ ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್-19 ಹರಡುವುದನ್ನು ಯಶಸ್ವಿಯಾಗಿ ನಿಯಂತ್ರಿಸಿರುವ ದೇಶಗಳ ಅನುಭವವನ್ನು ಮತ್ತು ತಜ್ಞರ ಅಭಿಪ್ರಾಯವನ್ನು ಆಧರಿಸಿ, ಈ ಸಾಂಕ್ರಾಮಿಕ ರೋಗ ಹರಡದಂತೆ ನಿಯಂತ್ರಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಪರಿಣಾಮಕಾರಿ ಕ್ರಮಗಳನ್ನು ಶಿಫಾರಸ್ಸು ಮಾಡಲಾಗಿದೆ.
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಸರಿಯಾದ ದಿಕ್ಕಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೆ, ಅಳವಡಿಸಿಕೊಂಡಿರುವ ಮುಂಜಾಗ್ರತಾ ಕ್ರಮಗಳಲ್ಲಿ ಏಕರೂಪತೆ ಇಲ್ಲದಿರುವುದು ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸದೇ ಇರುವುದರಿಂದ ಸೋಂಕು ಹರಡುವುದನ್ನು ನಿಯಂತ್ರಿಸುವ ಉದ್ದೇಶ ಈಡೇರುತ್ತಿಲ್ಲ. ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯ ರಾಷ್ಟ್ರೀಯ ವಿಪ್ಪತ್ತು ನಿರ್ವಹಣಾ ಪ್ರಾಧಿಕಾರ(ಎನ್ ಡಿ ಎಂ ಎ) ವಿಪತ್ತು ನಿರ್ವಹಣಾ ಕಾಯ್ದೆ 2005, ಸೆಕ್ಷನ್ 6(2)(i)ರ ಅನ್ವಯ ಲಭ್ಯವಿರುವ ಅಧಿಕಾರ ಬಳಸಿ, 2020ರ ಮಾರ್ಚ್ 24ನೇ ದಿನಾಂಕದಂದು ಆದೇಶ ಹೊರಡಿಸಿ, ದೇಶಾದ್ಯಂತ ಕೋವಿಡ್-19 ಹರಡುವುದನ್ನು ನಿಯಂತ್ರಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಭಾರತ ಸರ್ಕಾರದ ಎಲ್ಲ ಸಚಿವಾಲಯಗಳು/ಇಲಾಖೆಗಳು ಮತ್ತು ರಾಜ್ಯ ಹಾಗೂ ಕೇಂದ್ರಾಡಳಿತ ಸರ್ಕಾರಗಳ ಎಲ್ಲ ಇಲಾಖೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳಿಗೆ ನಿರ್ದೇಶಿಸಲಾಗಿದೆ.
ಎನ್ ಡಿ ಎಂ ಎ ಆದೇಶವನ್ನು ಪಾಲಿಸುವ ಸಲುವಾಗಿ ಗೃಹ ವ್ಯವಹಾರಗಳ ಸಚಿವಾಲಯ(ಎಂಎಚ್ಎ) ಕೂಡ ವಿಪತ್ತು ನಿರ್ವಹಣಾ ಕಾಯ್ದೆ ಸೆಕ್ಷನ್ 10(2)(1)ರ ಅಡಿಯಲ್ಲಿ 2020ರ ಮಾರ್ಚ್ 24ರಂದು ಆದೇಶವನ್ನು ಹೊರಡಿಸಿ, ದೇಶದಲ್ಲಿ ಕೋವಿಡ್-19 ಹರಡುವುದನ್ನು ನಿಯಂತ್ರಿಸಲು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಭಾರತ ಸರ್ಕಾರದ ಎಲ್ಲ ಸಚಿವಾಲಯಗಳು/ಇಲಾಖೆಗಳು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಹಾಗೂ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳಿಗೆ ನಿರ್ದೇಶನ ನೀಡಿದೆ. ಈ ಆದೇಶ 2020 ಮಾರ್ಚ್ 25ರಿಂದ 21 ದಿನಗಳ ಕಾಲ ದೇಶಾದ್ಯಂತ ಜಾರಿಯಲ್ಲಿರುತ್ತದೆ.
ಈ ಆದೇಶಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಭಾರತ ಸರ್ಕಾರದ ಎಲ್ಲ ಸಚಿವಾಲಯಗಳು/ಇಲಾಖೆಗಳು ಮತ್ತು ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳಿಗೆ ನಿರ್ದೇಶಿಸಲಾಗಿದೆ. ಈ ಕ್ರಮಗಳ ಅನುಷ್ಠಾನದ ಕುರಿತು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಮೇಲ್ವಿಚಾರಣೆ ಅಥವಾ ನಿಗಾವಹಿಸಲಿದೆ.


 
*****

 (Release ID: 1608267) Visitor Counter : 1407