ಪ್ರಧಾನ ಮಂತ್ರಿಯವರ ಕಛೇರಿ

ಎಲೆಕ್ಟ್ರಾನಿಕ್ ಮಾಧ್ಯಮದ ಪ್ರಮುಖರೊಂದಿಗೆ ಪ್ರಧಾನಿ ಸಂವಾದ

Posted On: 23 MAR 2020 2:35PM by PIB Bengaluru

ಎಲೆಕ್ಟ್ರಾನಿಕ್ ಮಾಧ್ಯಮದ ಪ್ರಮುಖರೊಂದಿಗೆ ಪ್ರಧಾನಿ ಸಂವಾದ

 

COVID-19 ಜೀವಮಾನದ ಸವಾಲಾಗಿದ್ದು, ಹೊಸ ಮತ್ತು ನಾವೀನ್ಯ ಪರಿಹಾರಗಳ ಮೂಲಕ ನಿಯಂತ್ರಣ: ಪ್ರಧಾನಿ

ವರದಿಗಾರರು, ಕ್ಯಾಮೆರಾಮನ್ ಮತ್ತು ತಂತ್ರಜ್ಞರ ದಣಿವರಿಯದ ಪ್ರಯತ್ನಗಳು ರಾಷ್ಟ್ರಕ್ಕೆ ದೊಡ್ಡ ಸೇವೆಯಾಗಿವೆ: ಪ್ರಧಾನಿ

ಮಾಧ್ಯಮಗಳು ಸಕಾರಾತ್ಮಕ ಸಂವಹನದ ಮೂಲಕ ನಿರಾಶಾವಾದ ಮತ್ತು ಭೀತಿಯನ್ನು ಹತ್ತಿಕ್ಕಬೇಕು: ಪ್ರಧಾನಿ

COVID-19 ಹರಡುವಿಕೆಯು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಅದರ ಸವಾಲುಗಳನ್ನು ಚರ್ಚಿಸಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಎಲೆಕ್ಟ್ರಾನಿಕ್ ಮಾಧ್ಯಮಗಳ ಪ್ರಮುಖರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.

ಸಾಂಕ್ರಾಮಿಕ ರೋಗದ ಅಪಾಯದ ಆಳವನ್ನು ಮೊದಲ ದಿನದಿಂದಲೇ ಗ್ರಹಿಸಿ, ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಚಾನೆಲ್ಗಳ ಪಾತ್ರವನ್ನು ಪ್ರಧಾನಿಯವರು ಶ್ಲಾಘಿಸಿದರು ದೇಶಾದ್ಯಂತದ ನ್ಯೂಸ್ರೂಮ್ಗಳಲ್ಲಿ ಹಾಗೂ ಹೊರಗೆ ದಣಿವರಿಯದೆ ಕೆಲಸ ಮಾಡುತ್ತಿರುವ ವರದಿಗಾರರು, ಕ್ಯಾಮೆರಾಮನ್ ಮತ್ತು ತಂತ್ರಜ್ಞರ ಸಮರ್ಪಣೆ ಮತ್ತು ಬದ್ಧತೆಯನ್ನು ಶ್ಲಾಘಿಸಿದ ಅವರು, ಅವರ ಕೆಲಸವನ್ನು ದೇಶ ಸೇವೆಯೆಂದು ಕರೆದರು. ಕೆಲವು ಚಾನೆಲ್ಗಳ ಮನೆಯಿಂದಲೇ ನಿರೂಪಣೆ ವ್ಯವಸ್ಥೆಯಂತಹ ನವೀನ ವಿಚಾರಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

COVID-19 ಒಂದು ಜೀವಮಾನದ ಸವಾಲು ಎಂದ ಪ್ರಧಾನಿಯವರು, ಹೊಸ ಮತ್ತು ನಾವೀನ್ಯ ಪರಿಹಾರಗಳ ಮೂಲಕ ಅದನ್ನು ನಿಭಾಯಿಸಬೇಕಾಗಿದೆ ಎಂದು ಹೇಳಿದರು. ಸುದೀರ್ಘ ಯುದ್ಧವು ನಮ್ಮ ಮುಂದಿದೆ, ಸಾಮಾಜಿಕ ಅಂತರದ ಬಗ್ಗೆ ಜಾಗೃತಿ ಮೂಡಿಸಬೇಕು ಮತ್ತು ಇತ್ತೀಚಿನ ಬೆಳವಣಿಗೆಗಳು ಮತ್ತು ಪ್ರಮುಖ ನಿರ್ಧಾರಗಳ ಮಾಹಿತಿಯನ್ನು ಚಾನೆಲ್ಗಳು ಸರಳ ಭಾಷೆಯಲ್ಲಿ ತ್ವರಿತವಾಗಿ ಮತ್ತು ವೃತ್ತಿಪರವಾಗಿ ಪ್ರಸಾರ ಮಾಡಬೇಕು ಎಂದು ತಿಳಿಸಿದರು.

ಚಾನೆಲ್ಗಳು ಜನರು ತಮ್ಮ ಸುತ್ತಲಿನ ಭದ್ರತೆಯನ್ನು ಕಡಿಮೆ ಮಾಡಿಕೊಳ್ಳದಂತೆ ಮತ್ತು ನಿರ್ಲಕ್ಷ ತೋರದಂತೆ ನೋಡಿಕೊಳ್ಳಬೇಕು ಹಾಗೂ ಸಕಾರಾತ್ಮಕ ಸಂವಹನದ ಮೂಲಕ ಅವರಲ್ಲಿನ ನಿರಾಶಾವಾದ ಮತ್ತು ಭೀತಿಯನ್ನು ನಿವಾರಿಸಬೇಕು ಎಂದು ಅವರು ಹೇಳಿದರು. ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರನ್ನು ಪ್ರೇರೇಪಿಸುವುದೂ ಸಹ ಅವಶ್ಯಕವಾಗಿದೆ ಎಂದು ತಿಳಿಸಿದರು.

ಸುದ್ದಿ ವಾಹಿನಿಗಳು ಪ್ರತಿಕ್ರಿಯೆಗಳ ಪ್ರಮುಖ ಸಾಧನವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಪ್ರತಿಕ್ರಿಯೆಗಳನ್ನು ಕುರಿತು ಸರ್ಕಾರ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ಹೊರಗೆ ಕೆಲಸ ಮಾಡುವ ವರದಿಗಾರರಿಗೆ ಮೀಸಲಾದ ಬೂಮ್ ಮೈಕ್ಗಳನ್ನು ಒದಗಿಸುವಂತೆ ಅವರು ಚಾನೆಲ್ಗಳಿಗೆ ಸಲಹೆ ನೀಡಿದರು ಮತ್ತು ವರದಿಗಾರರು ಸಂದರ್ಶನಗಳನ್ನು ಮಾಡುವಾಗ ಕನಿಷ್ಠ ಒಂದು ಮೀಟರ್ ದೂರವನ್ನು ಕಾಯ್ದುಕೊಳ್ಳುವಂತಹ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದರು.

ವೈಜ್ಞಾನಿಕ ವರದಿಗಳನ್ನು ಪ್ರಸಾರ ಮಾಡುವಂತೆ, ತಿಳುವಳಿಕೆಯುಳ್ಳ ಜನರನ್ನು ಚರ್ಚೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮತ್ತು ತಪ್ಪು ಮಾಹಿತಿಯ ಹರಡುವಿಕೆಯನ್ನು ತಡೆಯುವಂತೆ ಅವರು ಚಾನೆಲ್ಗಳಿಗೆ ಸೂಚಿಸಿದರು. ವೈರಸ್ ಹರಡುವುದನ್ನು ತಡೆಯಲು ಜನರಲ್ಲಿ ಶಿಸ್ತು ಮತ್ತು ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವುದರ ಮಹತ್ವವನ್ನು ಅವರು ಒತ್ತಿಹೇಳಿದರು.

ಸವಾಲನ್ನು ಎದುರಿಸಲು ಶ್ರಮಿಸುತ್ತಿರುವುದಕ್ಕಾಗಿ ಪ್ರಧಾನಮಂತ್ರಿಯವರಿಗೆ ಮಾಧ್ಯಮ ಪ್ರತಿನಿಧಿಗಳು ಧನ್ಯವಾದ ತಿಳಿಸಿದರು. ಸಾಂಕ್ರಾಮಿಕ ರೋಗವನ್ನು ಎದುರಿಸಲು ಅವರೊಂದಿಗೆ ಸೇರಿ ಕೆಲಸ ಮಾಡುವುದಾಗಿ ಪ್ರಧಾನ ಮಂತ್ರಿಯವರಿಗೆ ಭರವಸೆ ನೀಡಿದರು.

ಜನರೊಂದಿಗಿನ ಪ್ರಧಾನಮಂತ್ರಿಯವರ ಭಾವನಾತ್ಮಕ ಸಂಬಂಧವನ್ನು ಉಲ್ಲೇಖಿಸಿದ ಮಾಧ್ಯಮ ಪ್ರತಿನಿಧಿಗಳು, ಪ್ರಧಾನಿಯವರು ರಾಷ್ಟ್ರವನ್ನು ಉದ್ದೇಶಿಸಿ ಹೆಚ್ಚಾಗಿ ಮಾತನಾಡಬೇಕು, ಸಕಾರಾತ್ಮಕ ಕಥೆಗಳನ್ನು, ವಿಶೇಷವಾಗಿ COVID-19 ರಿಂದ ಚೇತರಿಸಿಕೊಂಡವರ ಅನುಭವಗಳನ್ನು ಅವರ ಭಾಷಣದಲ್ಲಿ ಸೇರಿಸಿಕೊಳ್ಳಬೇಕು ಎಂದು ವಿನಂತಿಸಿದರು. ವರದಿಗಾರರನ್ನು ಪರೀಕ್ಷಿಸಲು ಮತ್ತು ವದಂತಿಗಳನ್ನು ಎದುರಿಸಲು ದಿನದ 24 ಗಂಟೆಯೂ ಲಭ್ಯವಿರುವ ವೈದ್ಯರನ್ನು ಹೊಂದಿರುವ ಪ್ರತ್ಯೇಕ ವಿಭಾಗವನ್ನು ಸ್ಥಾಪಿಸಬಹುದು. ಪ್ರಸಾರ ಭಾರತಿಯು ದಿನಕ್ಕೆ ಎರಡು ಬಾರಿ ಅಧಿಕೃತ ಮಾಹಿತಿಯನ್ನು ನೀಡಬಹುದು, ಅದನ್ನು ಇತರ ಟಿವಿ ಚಾನೆಲ್ಗಳು ಬಳಸಿಕೊಳ್ಳಬಹುದು ಎಂದೂ ಸಲಹೆ ನೀಡಿದರು.

ಸಲಹೆಗಳು ಮತ್ತು ಅಮೂಲ್ಯವಾದ ಒಳನೋಟಗಳಿಗಳಿಗಾಗಿ ಪ್ರಧಾನಿಯವರು ಅವರಿಗೆ ಧನ್ಯವಾದ ತಿಳಿಸಿದರು. ಕರೆನ್ಸಿ ನೋಟುಗಳ ಮೂಲಕ ವೈರಸ್ ಹರಡುವುದನ್ನು ತಪ್ಪಿಸಲು ಡಿಜಿಟಲ್ ಪಾವತಿ ಕಾರ್ಯವಿಧಾನಗಳ ಬಗ್ಗೆ ಜಾಗೃತಿ ಮೂಡಿಸುವಂತೆ ಅವರು ಚಾನೆಲ್ಗಳಿಗೆ ವಿನಂತಿಸಿದರು. ವೈಜ್ಞಾನಿಕ ವರದಿಗಾರಿಕೆಯ ಮೂಲಕ ಮೂಢನಂಬಿಕೆಗಳ ಹರಡುವಿಕೆಯನ್ನು ತಡೆಯುವಂತೆಯೂ ಅವರು ಚಾನೆಲ್ಗಳಿಗೆ ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿಯವರು, ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ಆರೋಗ್ಯ ಸಚಿವಾಲಯದ ಬೀಟ್ ಪತ್ರಕರ್ತರಿಗೆ ಧನ್ಯವಾದ ತಿಳಿಸಿದರು. COVID-19 ಹರಡುವುದನ್ನು ತಡೆಯಲು ಸರ್ಕಾರದ ಶ್ರೇಣೀಕೃತ ಪ್ರತಿಕ್ರಿಯೆ ವ್ಯವಸ್ಥೆಯ ಅವಲೋಕನ ಮತ್ತು ಸವಾಲುಗಳನ್ನು ಎದುರಿಸಲು ಸಾಮರ್ಥ್ಯವನ್ನು ಹೆಚ್ಚಿಸುವ ನಿರಂತರ ಪ್ರಯತ್ನಗಳ ಬಗ್ಗೆ ಅವರು ತಿಳಿಸಿದರು.

ಪರೀಕ್ಷಾ ಕಾರ್ಯತಂತ್ರವು ಶ್ರೇಣೀಕೃತ ಪ್ರತಿಕ್ರಿಯೆಯನ್ನು ಅನುಸರಿಸಿರುತ್ತದೆ ಮತ್ತು ಪರೀಕ್ಷಾ ಕಿಟ್ಗಳಿಗೆ ಅನುಮೋದನೆಯನ್ನು ತ್ವರಿತಗೊಳಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾನಿರ್ದೇಶಕರು ತಿಳಿಸಿದರು.

 

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವರು; ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ ಸಂಸ್ಥೆಗಳ ಹಿರಿಯ ಪ್ರತಿನಿಧಿಗಳು ಮತ್ತು ಸಂಪಾದಕರು ಸಂವಾದದಲ್ಲಿ ಭಾಗವಹಿಸಿದರು.



(Release ID: 1607749) Visitor Counter : 203