ಸಂಪುಟ

ದೇಶದಲ್ಲಿ ವೈದ್ಯಕೀಯ ಉಪಕರಣಗಳ ದೇಶೀಯ ಉತ್ಪಾದನೆಯ ಉತ್ತೇಜನಕ್ಕೆ ಸಂಪುಟದ ಅನುಮೋದನೆ

Posted On: 21 MAR 2020 4:23PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಈ ಕೆಳಗಿನ ಯೋಜನೆಗಳಿಗೆ ಅನುಮೋದನೆ ನೀಡಿದೆ:

ನಾಲ್ಕು ವೈದ್ಯಕೀಯ ಉಪಕರಣ ತಯಾರಿಕಾ ಪಾರ್ಕ್ ಗಳಲ್ಲಿ ಸಾಮಾನ್ಯ ಮೂಲಸೌಕರ್ಯ ಸೌಲಭ್ಯಗಳಿಗೆ ಹಣಕಾಸು ಒದಗಿಸುವ ವೈದ್ಯಕೀಯ ಉಪಕರಣ ತಯಾರಿಕಾ ಪಾರ್ಕ್ ಉತ್ತೇಜಿಸುವ 400 ಕೋಟಿ ರೂ. ಯೋಜನೆ

3,420 ಕೋಟಿ ರೂ. ವೆಚ್ಚದ ವೈದ್ಯಕೀಯ ಉಪಕರಣಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವ ಉತ್ಪಾದನೆ ಆಧಾರಿತ ಪ್ರೋತ್ಸಾಹಕ (ಪಿಎಲ್ಐ) ಯೋಜನೆ.

ಈ ಮೇಲಿನ ಯೋಜನೆಗಳಿಗಾಗಿ ಮಾಡಬೇಕಾದ ಖರ್ಚು ಮುಂದಿನ ಐದು ವರ್ಷಗಳವರೆಗೆ ಅಂದರೆ 2020-21 ರಿಂದ 2024-25ರವರೆಗೆ ಸೇರಿರುತ್ತದೆ.

ವಿವರಗಳು:

ವೈದ್ಯಕೀಯ ಉಪಕರಣ ಪಾರ್ಕ್ಗಳಿಗೆ ಉತ್ತೇಜನ

ವೈದ್ಯಕೀಯ ಉಪಕರಣ ಕ್ಷೇತ್ರ ಬೆಳೆಯುತ್ತಿರುವ ವಲಯವಾಗಿದೆ ಮತ್ತು ಆರೋಗ್ಯ ಮಾರುಕಟ್ಟೆಯಲ್ಲಿನ ಎಲ್ಲಾ ಕ್ಷೇತ್ರಗಳಲ್ಲಿ ಅದರ ಬೆಳವಣಿಗೆಯ ಸಾಮರ್ಥ್ಯವು ಅತ್ಯಧಿಕವಾಗಿದೆ. ಇದರ ಮೌಲ್ಯ 2018-19ರಲ್ಲಿ 50,026 ಕೋಟಿ ರೂ. ಇತ್ತು. 2021-22ರ ವೇಳೆಗೆ ಇದರ ಮೌಲ್ಯ 86,840 ಕೋಟಿ ರೂ. ಆಗುವ ನಿರೀಕ್ಷೆಯಿದೆ. ಭಾರತವು ವೈದ್ಯಕೀಯ ಉಪಕರಣಗಳ ಒಟ್ಟು ದೇಶೀಯ ಬೇಡಿಕೆಯ ಶೇ.85 ರಷ್ಟು ಆಮದನ್ನು ಅವಲಂಬಿಸಿದೆ.

ಈ ಯೋಜನೆಯು ರಾಜ್ಯಗಳ ಸಹಭಾಗಿತ್ವದಲ್ಲಿ ದೇಶದಲ್ಲಿ ವೈದ್ಯಕೀಯ ಸಾಧನ ಪಾರ್ಕ್ ಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಪ್ರತಿ ಪಾರ್ಕ್ ಗೆ ಗರಿಷ್ಠ 100 ಕೋಟಿ ರೂ.ಗಳ ಅನುದಾನವನ್ನು ರಾಜ್ಯಗಳಿಗೆ ನೀಡಲಾಗುವುದು. ಉತ್ಪಾದನೆ ಆಧಾರಿತ ಪ್ರೋತ್ಸಾಹಕ ಯೋಜನೆ

ವೈದ್ಯಕೀಯ ಉಪಕರಣ ಕ್ಷೇತ್ರವು ಸುಮಾರು ಶೇ. 12 ರಿಂದ ಶೇ. 15 ರಷ್ಟು ಉತ್ಪಾದನೆಯ ಅಸಾಮರ್ಥ್ಯದಿಂದ ಬಳಲುತ್ತಿದೆ. ಸ್ಪರ್ಧಾತ್ಮಕ ಆರ್ಥಿಕತೆಯ ಜೊತೆಗೆ, ಮೂಲಸೌಕರ್ಯಗಳ ಕೊರತೆ, ದೇಶೀಯ ಪೂರೈಕೆ ಸರಪಳಿ ಮತ್ತು ಲಾಜಿಸ್ಟಿಕ್ಸ್, ಹೆಚ್ಚಿನ ಹಣಕಾಸು ವೆಚ್ಚ, ಗುಣಮಟ್ಟದ ವಿದ್ಯುತ್ ನ ಅಸಮರ್ಪಕ ಲಭ್ಯತೆ, ಸೀಮಿತ ವಿನ್ಯಾಸ ಸಾಮರ್ಥ್ಯಗಳು ಮತ್ತು ಆರ್ & ಡಿ ಮತ್ತು ಕೌಶಲ್ಯ ಅಭಿವೃದ್ಧಿಯ ಮೇಲೆ ಕಡಿಮೆ ಗಮನ ಇತ್ಯಾದಿಗಳಿಂದ ಈ ಅಸಾಮರ್ಥ್ಯತೆ ಕಾಣುತ್ತಿದೆ. ಆದ್ದರಿಂದ, ಉತ್ಪಾದನಾ ಅಸಾಮರ್ಥ್ಯತೆಯನ್ನು ಸರಿಪಡಿಸಲು ಒಂದು ವ್ಯವಸ್ಥೆಯ ಅವಶ್ಯಕತೆಯಿದೆ.

ವೈದ್ಯಕೀಯ ಉಪಕರಣ ಕ್ಷೇತ್ರದಲ್ಲಿ ದೊಡ್ಡ ಹೂಡಿಕೆಗಳನ್ನು ಆಕರ್ಷಿಸುವ ಮೂಲಕ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಯೋಜನೆಯಡಿಯಲ್ಲಿ, ಗುರುತಿಸಲಾದ ವೈದ್ಯಕೀಯ ಉಪಕರಣಗಳ ವಿಭಾಗಗಳಲ್ಲಿ 2019-20 ನ್ನು ಮೂಲ ವರ್ಷವಾಗಿಟ್ಟುಕೊಂಡು ಮಾರಾಟದ ಹೆಚ್ಚಳದ ಮೇಲೆ ಶೇ. 5ರಷ್ಟು ಪ್ರೋತ್ಸಾಹ ಧನ ನೀಡಲಾಗುವುದು.

ಅನುಷ್ಠಾನ:

ವೈದ್ಯಕೀಯ ಉಪಕರಣ ಪಾರ್ಕ್ ಗಳ ಪ್ರೋತ್ಸಾಹ ಯೋಜನೆಯನ್ನು ರಾಜ್ಯ ಅನುಷ್ಠಾನ ಸಂಸ್ಥೆ (ಎಸ್‌ಐಎ)ಯು ಜಾರಿಗೆ ತರಲಿದೆ. ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವ ಪಿಎಲ್ಐ ಯೋಜನೆಯನ್ನು ಫಾರ್ಮಾಸೂಟಿಕಲ್ಸ್ ಇಲಾಖೆ ನಾಮನಿರ್ದೇಶನ ಮಾಡುವ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಏಜೆನ್ಸಿಯು (ಪಿಎಂಎ) ಇದನ್ನು ಅನುಷ್ಠಾನ ಮಾಡಲಿದೆ. ನಾಲ್ಕು ವೈದ್ಯಕೀಯ ಉಪಕರಣ ಪಾರ್ಕ್ ಗಳಿಗೆ ಸಾಮಾನ್ಯ ಮೂಲಸೌಕರ್ಯ ಸೌಲಭ್ಯಗಳಿಗಾಗಿ ಹಣಕಾಸಿನ ನೆರವು ನೀಡುವುದು ಇದರ ಗುರಿಯಾಗಿದೆ. ಪಿಎಲ್ಐ ಯೋಜನೆಯ ಗುರಿಯು ಈ ಕೆಳಗಿನ ವರ್ಗದ ವೈದ್ಯಕೀಯ ಉಪಕರಣಗಳ ಅಡಿಯಲ್ಲಿ ಸುಮಾರು 25-30 ತಯಾರಕರಿಗೆ ನೆರವು ನೀಡುವುದಾಗಿದೆ. ಅವುಗಳೆಂದರೆ:

ಕ್ಯಾನ್ಸರ್ ಆರೈಕೆ / ರೇಡಿಯೊಥೆರಪಿ ವೈದ್ಯಕೀಯ ಸಾಧನಗಳು.

ವಿಕಿರಣಶಾಸ್ತ್ರ ಮತ್ತು ಇಮೇಜಿಂಗ್ ವೈದ್ಯಕೀಯ ಸಾಧನಗಳು (ಅಯಾನೀಕರಿಸುವ ಮತ್ತು ಅಯಾನೀಕರಿಸದ ವಿಕಿರಣ ಉತ್ಪನ್ನಗಳು) ಮತ್ತು ನ್ಯೂಕ್ಲಿಯರ್ ಇಮೇಜಿಂಗ್ ಸಾಧನಗಳು.

ಕಾರ್ಡಿಯೋ ಉಸಿರಾಟದ ವರ್ಗದ ಕ್ಯಾಥೆಟರ್ಸ್ ಮತ್ತು ಮೂತ್ರಪಿಂಡದ ಆರೈಕೆ ವೈದ್ಯಕೀಯ ಸಾಧನಗಳು ಸೇರಿದಂತೆ ಅರಿವಳಿಕೆ ಮತ್ತು ಕಾರ್ಡಿಯೋ-ಉಸಿರಾಟದ ವೈದ್ಯಕೀಯ ಸಾಧನಗಳು

ಕಾಕ್ಲಿಯರ್ ಇಂಪ್ಲಾಂಟ್ಸ್ ಮತ್ತು ಪೇಸ್‌ಮೇಕರ್‌ಗಳಂತಹ ಅಳವಡಿಸಬಹುದಾದ ಎಲೆಕ್ಟ್ರಾನಿಕ್ ಸಾಧನಗಳು ಸೇರಿದಂತೆ ಎಲ್ಲ ಇಂಪ್ಲಾಂಟ್‌ಗಳು.

ಪರಿಣಾಮ:

ವೈದ್ಯಕೀಯ ಉಪಕರಣ ಪಾರ್ಕ್ ಉತ್ತೇಜನದ ಉಪ ಯೋಜನೆಯಡಿ, 4 ವೈದ್ಯಕೀಯ ಉಪಕರಣ ಪಾರ್ಕ್ ಗಳಲ್ಲಿ ಸಾಮಾನ್ಯ ಮೂಲಸೌಕರ್ಯ ಸೌಲಭ್ಯಗಳನ್ನು ನಿರ್ಮಿಸಲಾಗುವುದು, ಇದು ದೇಶದಲ್ಲಿ ವೈದ್ಯಕೀಯ ಉಪಕರಣಗಳ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ.

ವೈದ್ಯಕೀಯ ಉಪಕರಣಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವ ಪಿಎಲ್ಐ ಯೋಜನೆಯು ದೇಶೀಯ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ವೈದ್ಯಕೀಯ ಉಪಕರಣ ಕ್ಷೇತ್ರದಲ್ಲಿ, ವಿಶೇಷವಾಗಿ ನಿರ್ದಿಷ್ಟ ವಿಭಾಗಗಳಲ್ಲಿ ದೊಡ್ಡ ಹೂಡಿಕೆಗಳನ್ನು ಆಕರ್ಷಿಸುತ್ತದೆ. ಇದು ಐದು ವರ್ಷಗಳ ಅವಧಿಯಲ್ಲಿ 68,437 ಕೋಟಿ ರೂ. ನಿರೀಕ್ಷಿತ ಹೆಚ್ಚಳಕ್ಕೆ ಕಾರವಾಗುತ್ತದೆ. ಈ ಯೋಜನೆಯು ಐದು ವರ್ಷಗಳ ಅವಧಿಯಲ್ಲಿ 33,750 ಹೆಚ್ಚುವರಿ ಉದ್ಯೋಗ ಸೃಷ್ಟಿಗೂ ಕಾರಣವಾಗುತ್ತದೆ.

ವೈದ್ಯಕೀಯ ಉಪಕರಣಗಳ ಆಮದು ಗಣನೀಯವಾಗಿ ಕಡಿಮೆಯಾಗಲು ಈ ಯೋಜನೆ ಕಾರಣವಾಗುತ್ತದೆ.

 



(Release ID: 1607706) Visitor Counter : 210