ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿಯವರಿಂದ ಕೃಷಿ ಕರ್ಮಣ್ ಪ್ರಶಸ್ತಿಗಳ ವಿತರಣೆ

Posted On: 02 JAN 2020 5:23PM by PIB Bengaluru

ಪ್ರಧಾನಮಂತ್ರಿಯವರಿಂದ ಕೃಷಿ ಕರ್ಮಣ್ ಪ್ರಶಸ್ತಿಗಳ ವಿತರಣೆ

ಪ್ರಧಾನಮಂತ್ರಿ ಕಿಸಾನ್ ಅಡಿಯಲ್ಲಿ 6 ಕೋಟಿ ಫಲಾನುಭವಿಗಳಿಗೆ 2000 ರೂ.ಗಳ 3 ನೇ ಕಂತು ಬಿಡುಗಡೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕರ್ನಾಟಕದ ತುಮಕೂರಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಗತಿಪರ ರೈತರಿಗಾಗಿ ಕೃಷಿ ಸಚಿವರ ಕೃಷಿ ಕರ್ಮಣ್ ಪ್ರಶಸ್ತಿಗಳು ಮತ್ತು ರಾಜ್ಯಗಳಿಗೆ ಪ್ರಶಂಸಾ ಪ್ರಶಸ್ತಿಗಳನ್ನು ವಿತರಿಸಿದರು. ಅವರು ಪಿಎಂ ಕಿಸಾನ್ (ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ) ಡಿಸೆಂಬರ್ 2019 - ಮಾರ್ಚ್ 2020 ಅವಧಿಯ 3 ನೇ ಕಂತು ಬಿಡುಗಡೆ ಮಾಡಿದರು. ಇದು ಸುಮಾರು 6 ಕೋಟಿ ಫಲಾನುಭವಿಗಳಿಗೆ ಪ್ರಯೋಜನವನ್ನು ನೀಡುತ್ತದೆ. ಕರ್ನಾಟಕದ ಆಯ್ದ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ಗಳನ್ನು (ಕೆಸಿಸಿ) ವಿತರಿಸಿದರು. ಪ್ರಧಾನಿಯವರು 8 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಫಲಾನುಭವಿಗಳಿಗೆ ಪಿಎಂ ಕಿಸಾನ್ ಅಡಿಯಲ್ಲಿ ಪ್ರಮಾಣಪತ್ರಗಳನ್ನು ನೀಡಿದರು. ತಮಿಳುನಾಡಿನ ಆಯ್ದ ಮೀನುಗಾರಿಗೆ ಆಳ ಸಮುದ್ರದ ಮೀನುಗಾರಿಕಾ ಹಡಗುಗಳು ಮತ್ತು ಮೀನುಗಾರಿಕೆ ಹಡಗು ಟ್ರಾನ್ಸ್ಪಾಂಡರ್ಗಳ ಕೀಲಿಗಳನ್ನು ಪ್ರಧಾನಿಯವರು ಹಸ್ತಾಂತರಿಸಿದರು.

ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿಯವರು, ಹೊಸ ವರ್ಷದಲ್ಲಿ ಹೊಸ ದಶಕದ ಆರಂಭದಲ್ಲಿ ಅನ್ನದಾತರಾದ - ನಮ್ಮ ರೈತ ಸಹೋದರ ಸಹೋದರಿಯರನ್ನು ನೋಡುತ್ತಿರುವುದು ತಮ್ಮ ಪುಣ್ಯವಾಗಿದೆ ಎಂದು ಹೇಳಿದರು. ಅವರ ಶ್ರಮಕ್ಕಾಗಿ ದೇಶದ ರೈತರಿಗೆ 130 ಕೋಟಿ ಜನರ ಪರವಾಗಿ ಪ್ರಧಾನಮಂತ್ರಿಯವರು ಧನ್ಯವಾದ ಅರ್ಪಿಸಿದರು.

ಪಿಎಂ ಕಿಸಾನ್ ಯೋಜನೆಯಡಿ ಹಣವನ್ನು ದೇಶದ ಸುಮಾರು 6 ಕೋಟಿ ರೈತರ ವೈಯಕ್ತಿಕ ಖಾತೆಗಳಿಗೆ ನೇರವಾಗಿ ವಿತರಿಸಿದ ಐತಿಹಾಸಿಕ ಕ್ಷಣಕ್ಕೆ ಕರ್ನಾಟಕದ ನೆಲ ಕೂಡ ಸಾಕ್ಷಿಯಾಗಿದೆ ಎಂದು ಪ್ರಧಾನಿ ಹೇಳಿದರು. ಯೋಜನೆಯ 3 ನೇ ಹಂತದ ಅಡಿಯಲ್ಲಿ ಒಟ್ಟು 12 ಸಾವಿರ ಕೋಟಿ ರೂ.ಗಳನ್ನು ಇಡಲಾಗಿದೆ ಎಂದು ಅವರು ತಿಳಿಸಿದರು.

'ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ' ಯನ್ನು ಜಾರಿಗೊಳಿಸದ ರಾಜ್ಯಗಳು ಇದನ್ನು ಅನುಷ್ಠಾನಗೊಳಿಸಲಿವೆ ಮತ್ತು ರಾಜಕೀಯ ಪಕ್ಷಗಳು ತಮ್ಮ ರಾಜ್ಯಗಳಲ್ಲಿನ ರೈತರಿಗೆ ಸಹಾಯ ಮಾಡಲು ರಾಜಕೀಯದಿಂದಾಚೆ ಬರಲಿವೆ ಎಂದು ಅವರು ಆಶಿಸಿದರು.

ದೇಶದಲ್ಲಿ ಬಡವರಿಗೆ ಒಂದು ರೂಪಾಯಿ ಕಳುಹಿಸಿದರೆ, ಅದರಲ್ಲಿ ಕೇವಲ 15 ಪೈಸೆ ಮಾತ್ರ ಫಲಾನುಭವಿಗಳಿಗೆ ತಲುಪುತ್ತಿದ್ದ ಕಾಲವೊಂದಿತ್ತು ಎಂದು ನೆನಪಿಸಿಕೊಂಡ ಪ್ರಧಾನಿಯವರು, ಈಗ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ಬಡವರಿಗೆ ಹಣ ತಲುಪುತ್ತಿದೆ ಎಂದರು.

ಹಲವಾರು ದಶಕಗಳಿಂದ ಸ್ಥಗಿತಗೊಂಡಿದ್ದ ನೀರಾವರಿ ಯೋಜನೆಗಳನ್ನು ಈಗ ಜಾರಿಗೆ ತರಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಬೆಳೆ ವಿಮೆ, ಮಣ್ಣಿನ ಆರೋಗ್ಯ ಕಾರ್ಡ್‌ಗಳು ಮತ್ತು ಶೇ.100 ಬೇವು ಲೇಪಿತ ಯೂರಿಯಾ ಮುಂತಾದ ಯೋಜನೆಗಳೊಂದಿಗೆ ಕೇಂದ್ರವು ನಮ್ಮ ರೈತರ ಹಿತಾಸಕ್ತಿಗೆ ಯಾವಾಗಲೂ ಆದ್ಯತೆ ನೀಡಿದೆ ಎಂದು ಅವರು ಹೇಳಿದರು.

ಸರ್ಕಾರದ ಪ್ರಯತ್ನದಿಂದಾಗಿ, ಭಾರತದಲ್ಲಿ ಮಸಾಲೆ ಪದಾರ್ಥಗಳ ಉತ್ಪಾದನೆ ಮತ್ತು ರಫ್ತು ಎರಡೂ ಗಣನೀಯವಾಗಿ ಹೆಚ್ಚಾಗಿವೆ ಎಂದು ಪ್ರಧಾನಿ ಹೇಳಿದರು. "ಭಾರತದಲ್ಲಿ ಮಸಾಲೆ ಪದಾರ್ಥಗಳ ಉತ್ಪಾದನೆಯು 2.5 ದಶಲಕ್ಷ ಟನ್‌ಗಳಿಗಿಂತ ಹೆಚ್ಚಾಗಿದೆ, ಆದ್ದರಿಂದ ರಫ್ತು ಸುಮಾರು 15 ಸಾವಿರ ಕೋ.ರೂ.ಗಳಿಂದ 19 ಸಾವಿರ ಕೋ.ರೂ.ಗೆ ಏರಿದೆ" ಎಂದರು.

ತೋಟಗಾರಿಕೆಯನ್ನು ಹೊರತುಪಡಿಸಿ, ದ್ವಿದಳ ಧಾನ್ಯಗಳು, ತೈಲ ಮತ್ತು ಒರಟು ಧಾನ್ಯಗಳ ಉತ್ಪಾದನೆಯಲ್ಲಿ ದಕ್ಷಿಣ ಭಾರತಕ್ಕೂ ಹೆಚ್ಚಿನ ಪಾಲು ಇದೆ ಎಂದು ಅವರು ಹೇಳಿದರು.

"ಭಾರತದಲ್ಲಿ ದ್ವಿದಳ ಧಾನ್ಯಗಳ ಉತ್ಪಾದನೆಯನ್ನು ಉತ್ತೇಜಿಸಲು ಬೀಜ ಕೇಂದ್ರಗಳನ್ನು ನಿರ್ಮಿಸಲಾಗಿದೆ, ಅದರಲ್ಲಿ 30 ಕ್ಕೂ ಹೆಚ್ಚು ಕೇಂದ್ರಗಳು ಕರ್ನಾಟಕ, ಆಂಧ್ರ, ಕೇರಳ, ತಮಿಳುನಾಡು ಮತ್ತು ತೆಲಂಗಾಣದಲ್ಲಿಯೇ ಇವೆ" ಎಂದು ಪ್ರಧಾನಿ ಹೇಳಿದರು.

ಮೀನುಗಾರಿಕೆ ಕ್ಷೇತ್ರದ ಬಗ್ಗೆ ಸರ್ಕಾರದ ಪ್ರಯತ್ನಗಳನ್ನು ಉಲ್ಲೇಖಿಸಿದ ಪ್ರಧಾನಿಯವರು, ಈ ವಲಯವನ್ನು ಬಲಪಡಿಸಲು ಸರ್ಕಾರ ಮೂರು ಹಂತಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಮೊದಲನೆಯದು - ಮೀನುಗಾರರಿಗೆ ಆರ್ಥಿಕ ನೆರವು ನೀಡುವ ಮೂಲಕ ಗ್ರಾಮಗಳಲ್ಲಿ ಮೀನುಗಾರಿಕೆಯನ್ನು ಪ್ರೋತ್ಸಾಹಿಸುವುದು.

ಎರಡನೆಯದು- ನೀಲಿ ಕ್ರಾಂತಿ ಯೋಜನೆಯಡಿ ಮೀನುಗಾರಿಕೆ ದೋಣಿಗಳನ್ನು ಆಧುನೀಕರಿಸುವುದು.

ಮತ್ತು ಮೂರನೆಯದು - ಮೀನು ವ್ಯಾಪಾರ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಆಧುನಿಕ ಮೂಲಸೌಕರ್ಯಗಳನ್ನು ನಿರ್ಮಿಸುವುದು.

 “ಮೀನುಗಾರರನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯದೊಂದಿಗೆ ಜೋಡಿಸಲಾಗಿದೆ. ಮೀನಗಾರರ ಅನುಕೂಲಕ್ಕಾಗಿ ದೊಡ್ಡ ನದಿಗಳಲ್ಲಿ ಮತ್ತು ಸಮುದ್ರದಲ್ಲಿ ಹೊಸ ಮೀನುಗಾರಿಕೆ ಬಂದರುಗಳನ್ನು ನಿರ್ಮಿಸಲಾಗುತ್ತಿದೆ. ಆಧುನಿಕ ಮೂಲಸೌಕರ್ಯಕ್ಕಾಗಿ 7.50 ಸಾವಿರ ಕೋಟಿ ರೂ.ಗಳ ವಿಶೇಷ ನಿಧಿಯನ್ನು ಸಹ ರಚಿಸಲಾಗಿದೆ. ಆಳ ಸಮುದ್ರದ ಮೀನುಗಾರಿಕೆಗಾಗಿ ಮೀನುಗಾರರ ದೋಣಿಗಳನ್ನು ಆಧುನೀಕರಿಸಲಾಗುತ್ತಿದೆ ಮತ್ತು ಇಸ್ರೊ ಸಹಾಯದಿಂದ ಮೀನುಗಾರರ ರಕ್ಷಣೆಗಾಗಿ ದೋಣಿಗಳಲ್ಲಿ ಸಂಚರಣೆ (ನ್ಯಾವಿಗೇಷನ್) ಸಾಧನಗಳನ್ನು ಅಳವಡಿಸಲಾಗುತ್ತಿದೆ ” ಎಂದು ಪ್ರಧಾನಿ ಹೇಳಿದರು.

ದೇಶದ ಪೌಷ್ಠಿಕಾಂಶದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಕೃಷಿ ಕರ್ಮಣ್ ಪ್ರಶಸ್ತಿಯಲ್ಲಿ ಪೌಷ್ಠಿಕ ಧಾನ್ಯಗಳು, ತೋಟಗಾರಿಕೆ ಮತ್ತು ಸಾವಯವ ಕೃಷಿಗಾಗಿ ಹೊಸ ವರ್ಗವನ್ನು ರಚಿಸಲು ಪ್ರಧಾನಿಯವರು ವಿನಂತಿಸಿದರು. ಇದು ಈ ಕ್ಷೇತ್ರಗಳಲ್ಲಿ ಉತ್ತಮ ಕೆಲಸ ಮಾಡುವವರಿಗೆ ಮತ್ತು ರಾಜ್ಯಗಳಿಗೆ ಉತ್ತೇಜನ ನೀಡುತ್ತದೆ ಎಂದು ಹೇಳಿದರು.



(Release ID: 1598314) Visitor Counter : 173