ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ
ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದ 2019ರ ವರ್ಷಾಂತ್ಯದ ವರದಿ
Posted On:
15 DEC 2019 11:21AM by PIB Bengaluru
ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದ 2019ರ ವರ್ಷಾಂತ್ಯದ ವರದಿ
ಕಾನೂನು ಪಾಲಿಸುವ ಸಂಸ್ಥೆಗಳಿಗೆ ವ್ಯಾಪಾರೋದ್ಯಮಕ್ಕೆ ಅನುಕೂಲಕರ ವಾತಾವರಣವನ್ನು ನಿರ್ಮಾಣ ಮಾಡಲು ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾಲ ಬಾಕಿ ಮತ್ತು ದಿವಾಳಿ ಚೌಕಟ್ಟಿನಡಿ ಬಲಿಷ್ಟ ಸಾಂಸ್ಥಿಕ ವ್ಯವಸ್ಥೆಯನ್ನು ರೂಪಿಸಲಾಗಿದೆ
ಎಲ್ಲಾ ಭಾಗೀದಾರರಿಗೆ ’ವ್ಯಾಪಾರೋದ್ಯಮಕ್ಕೆ ಅನುಕೂಲಕರ ವಾತಾವರಣವನ್ನು” ನಿರ್ಮಾಣ ಮಾಡುವ ಉದ್ದೇಶದೊಂದಿಗೆ ಸಾಂಸ್ಥಿಕ ರಚನೆಯಲ್ಲಿ ವ್ಯಾಪಕವಾದ ಪಾರದರ್ಶಕತೆಯನ್ನು ತರುವುದಕ್ಕಾಗಿ ಮತ್ತು 2013 ರ ಕಂಪೆನಿಗಳ ಕಾಯ್ದೆಯಡಿಯಲ್ಲಿ ಪ್ರಕ್ರಿಯಾ ದಕ್ಷತೆಯನ್ನು ಹೆಚ್ಚಿಸಿ ಉತ್ತಮ ಸಾಂಸ್ಥಿಕ ಅನುಷ್ಟಾನಕ್ಕಾಗಿ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯವು (ಎಂ.ಸಿ.ಎ.) ಹಲವು ಪ್ರಮುಖ ಉಪಕ್ರಮಗಳನ್ನು/ ನಿರ್ಧಾರಗಳನ್ನು ಕಳೆದೊಂದು ವರ್ಷದಲ್ಲಿ (2019 ರ ಜನವರಿಯಿಂದ ನವೆಂಬರ್ ತಿಂಗಳವರೆಗೆ) ಕೈಗೊಂಡಿದೆ.
ವಿಶ್ವ ಬ್ಯಾಂಕಿನ “ವ್ಯಾಪಾರೋದ್ಯಮಕ್ಕೆ ಅನುಕೂಲಕರ ತಾಣಗಳ 2020 ರ ವರದಿಯಲ್ಲಿ ಭಾರತದ ಸ್ಥಾನ ಮಾನ ಹೆಚ್ಚಳವಾಗಿದೆ. ವರದಿಯ ಪ್ರಕಾರ ಭಾರತವು 2018 ರಲ್ಲಿ 77 ನೇ ಸ್ಥಾನದಲ್ಲಿದ್ದು, 14 ಸ್ಥಾನಗಳ ಜಿಗಿತ ಸಾಧಿಸಿ 63 ನೇ ಸ್ಥಾನದಲ್ಲಿದೆ. ವ್ಯಾಪಾರೋದ್ಯಮಕ್ಕೆ ಅನುಕೂಲಕರ ತಾಣ ಶ್ರೇಯಾಂಕದಲ್ಲಿ ಭಾರತದ 14 ಸ್ಥಾನಗಳ ಮುನ್ನಡೆಯ ಧಾಪುಗಾಲಿನ ಸಾಧನೆಯು, 2015 ರಿಂದ ನಿರಂತರ ಸುಧಾರಣೆಯ ಫಲವಾಗಿರುವುದರಿಂದ ಬಹಳ ಪ್ರಮುಖವಾದುದಾಗಿದೆ. ಮತ್ತು ಭಾರತವು ಸತತ ಮೂರನೆ ವರ್ಷ ಅತ್ಯುನ್ನತ ಸಾಧನೆಯ ಹತ್ತು ರಾಷ್ಟ್ರಗಳಲ್ಲಿ ಒಂದಾಗಿದೆ. ಸಾಂಸ್ಥಿಕ ವ್ಯವಹಾರಗಳ ಸಚಿವಾಲಯವು ಸಾಲ ಬಾಕಿ ಪರಿಹಾರ ಗೊತ್ತುವಳಿಯನ್ನು ರೂಪಿಸುವಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಸಾಲ ಬಾಕಿ ತೀರ್ಮಾನ/ ಪರಿಹಾರ ಸೂಚ್ಯಂಕಕ್ಕೆ ಸಂಬಂಧಿಸಿದ ಇತ್ತೀಚಿನ ವರದಿಯ ಪ್ರಕಾರ ಭಾರತದ ಸ್ಥಾನ ಮಾನ 56 ಸ್ಥಾನಗಳ ಜಿಗಿತ ಸಾಧಿಸಿದೆ. 2018 ರಲ್ಲಿ 108 ನೇ ಸ್ಥಾನದಲ್ಲಿದ್ದ ಭಾರತ 2019 ರಲ್ಲಿ 52 ನೇ ಸ್ಥಾನಕ್ಕೆ ಜಿಗಿದಿದೆ. ವಸೂಲಾತಿ ದರ 2018 ರಲ್ಲಿ ಶೇಕಡ 26.5 ಇದ್ದಿತು, 2019 ರಲ್ಲಿ ಅದು ಶೇಕಡ 71.6 ಆಗಿದೆ ಮತ್ತು ವಸೂಲಾತಿಗೆ ತಗಲುವ ಸಮಯ 2018 ರಲ್ಲಿ 4.3 ವರ್ಷಗಳಷ್ಟಿತ್ತು, ಅದು 2019 ರಲ್ಲಿ 1.6 ವರ್ಷಕ್ಕೆ ಸುಧಾರಣೆಯಾಗಿದೆ.
ಕಾನೂನು ಪಾಲಿಸುವ ಕಾರ್ಪೊರೇಟ್ ಸಂಸ್ಥೆಗಳಿಗೆ ವ್ಯಾಪಾರೋದ್ಯಮಕ್ಕೆ ಅನುಕೂಲಕರ ವಾತಾವರಣವನ್ನು ನಿರ್ಮಾಣ ಮಾಡಲು ಸಚಿವಾಲಯವು ಇತ್ತೀಚಿನ ದಿನಗಳಲ್ಲಿ ಹಲವಾರು ಕ್ರಮಗಳನ್ನು ಜಾರಿಗೆ ತಂದಿದೆ, ಅವುಗಳು ಇಂತಿವೆ:
- ಸಮಗ್ರ ಸಂಯೋಜನೆ ಅರ್ಜಿಯ ಮಾದರಿ- ಕಂಪೆನಿಗಳ ವಿದ್ಯುನ್ಮಾನ ಸಂಯೋಜನೆಗಾಗಿ ಸರಳ ಮಾದರಿಯನ್ನು (ಎಸ್.ಪಿ.ಐ.ಸಿ.ಇ.) ಅಳವಡಿಸಲಾಗಿದ್ದು, ಇದರಡಿ ಒಂದೇ ಅರ್ಜಿ ಮಾದರಿಯ ಮೂಲಕ ಮೂರು ಸಚಿವಾಲಯಗಳ 8 ಸೇವೆಗಳು ( ಸಿ.ಐ.ಎನ್., ಪಾನ್, ಟಿನ್, ಡಿನ್, ಹೆಸರು, ಇ.ಪಿ.ಎಫ್.ಒ., ಇ.ಎಸ್.ಐ.ಸಿ. ಮತ್ತು ಜಿ.ಎಸ್.ಟಿ.ಎನ್.) ಲಭಿಸುವಂತೆ ಮಾಡಲಾಗಿದೆ.
- ಕಂಪೆನಿ ಕಾಯ್ದೆಯಡಿ ತಾಂತ್ರಿಕ ಮತ್ತು ಪ್ರಕ್ರಿಯಾತ್ಮಕ ಉಲ್ಲಂಘನೆಗಳನ್ನು ಕ್ರಿಮಿನಲ್ ವ್ಯಾಪ್ತಿಯಿಂದ ಹೊರಗಿಡುವುದು ಮತ್ತು 2019 ರ ಜುಲೈ 31 ರಂದು ಅಧಿಸೂಚಿಸಲಾದ ಕಂಪೆನಿಗಳ (ತಿದ್ದುಪಡಿ) ವಿಧೇಯಕ , 2019 ರ ಅನ್ವಯ 16 ಅಪರಾಧಗಳ ವಿಭಾಗವನ್ನು ಹಣಕಾಸು ದಂಡ ವಿಧಿಸುವ ಆಡಳಿತಕ್ಕೆ ವರ್ಗಾಯಿಸುವ ಮೂಲಕ ಕ್ರಿಮಿನಲ್ ನ್ಯಾಯಾಲಯಗಳು ಮತ್ತು ಎನ್.ಸಿ.ಎಲ್.ಟಿ.ಗಳ ಮೇಲಣ ಹೊರೆಯನ್ನು ಕಡಿಮೆ ಮಾಡಲಾಗಿದೆ.
- “ರನ್- ವಿಶಿಷ್ಟ ಹೆಸರು ಕಾಯ್ದಿರಿಸುವಿಕೆ ” ಜಾಲ ತಾಣ ಸೇವೆಯನ್ನು ಆರಂಬಿಸುವ ಮೂಲಕ ಸರಕಾರವು ಕಂಪೆನಿಗಳ ಹೆಸರು ಕಾಯ್ದಿರಿಸುವಿಕೆ ಮತ್ತು ಎಲ್.ಎಲ್.ಪಿ.ಗಳ , ನಿರ್ದೇಶಕ ಗುರುತಿನ ಸಂಖ್ಯೆಯನ್ನು ನೀಡುವ ಪ್ರಕ್ರಿಯೆಯನ್ನು ರೀ ಎಂಜಿನಿಯರಿಂಗ್ (ಡಿ.ಐ.ಎನ್.) ಗೆ ಒಳಪಡಿಸಿದೆ. ,15 ಲಕ್ಷ ರೂಪಾಯಿಗಳವರೆಗೆ ಅಧಿಕೃತ ಬಂಡವಾಳ ಹೊಂದಿರುವ ಕಂಪೆನಿಗಳ ಸಂಯೋಜನೆಗೆ ಶೂನ್ಯ ಎಂ.ಸಿ.ಎ, ಶುಲ್ಕ , ವಿಳಂಬ ಮನ್ನಾ ಯೋಜನೆ (ಸಿ.ಒ.ಡಿ.ಎಸ್.) 2017ನ್ನು ಅದು ಜಾರಿಗೊಳಿಸಿದೆ.
- ಸ್ಪರ್ಧಾ ಕಾಯ್ದೆ 2002ರಡಿಯಲ್ಲಿ ದೇಶದೊಳಗಿನ ಕಂಪೆನಿಗಳ ವಿಲಯನ ಮತ್ತು ಸ್ವಾಧೀನ ಪ್ರಕ್ರಿಯೆ ತ್ವರಿತಕ್ಕೆ ಕನಿಷ್ಟ ಕಾಲಾವಧಿ ವಿನಾಯತಿಯ ಪರಿಷ್ಕರಣೆ.
- ಹಸಿರು ಚಾನೆಲ್ (ತ್ವರಿತಗತಿ) ಅಡಿಯಲ್ಲಿ ಸಂಯೋಜನೆಗಳ ಅನುಮೋದನೆಗಾಗಿ ಸಿ.ಸಿ.ಐ.ಯಿಂದ ಸ್ವಯಂಚಾಲಿತ ವ್ಯವಸ್ಥೆಯ ಅಳವಡಿಕೆ. ಈ ಪ್ರಕ್ರಿಯೆಯಲ್ಲಿ ನಿಗದಿತ ಅರ್ಜಿ ಮಾದರಿಯಲ್ಲಿ ನೊಟೀಸು ಸಲ್ಲಿಸಲ್ಪಟ್ಟಾಗ ಸಂಯೋಜನೆಗಳು ಅನುಮೋದನೆಯಾಗಿವೆ ಎಂದು ಪರಿಗಣಿಸಲ್ಪಡುತ್ತವೆ. ಈ ವ್ಯವಸ್ಥೆಯು ಪ್ರಮುಖವಾಗಿ ವರ್ಗಾವಣೆಗಳ ವೆಚ್ಚ ಮತ್ತು ಕಾಲಾವಧಿಯನ್ನು ತಗ್ಗಿಸುತ್ತದೆ.
- ಖಾಸಗಿ ಕಂಪೆನಿಗಳಿಗೆ , ಸರಕಾರಿ ಕಂಪೆನಿಗಳಿಗೆ, ದತ್ತಿ ಸಂಸ್ಥೆಗಳಿಗೆ, ನಿಧಿಗಳಿಗೆ ಮತ್ತು ಐ.ಎಫ್.ಎಸ್.ಸಿ. (ಗಿಫ್ಟ್ ನಗರ) ಕಂಪೆನಿಗಳಿಗೆ ಕಂಪೆನಿ ಕಾಯ್ದೆಯ ವಿವಿಧ ಪ್ರಸ್ತಾವನೆಗಳಿಂದ ವಿನಾಯತಿ.
- ಸಂದರ್ಭಾನುಸಾರ ಮತದಾನ ಹಕ್ಕುಗಳೊಂದಿಗೆ ಶೇರುಗಳ ನೀಡಿಕೆಗೆ ಸಂಬಂಧಿಸಿದ ಪ್ರಸ್ತಾವನೆಗಳ (ಡಿ.ವಿ.ಆರ್.ಎಸ್.) ಪರಿಷ್ಕರಣೆ, ಭಾರತೀಯ ಕಂಪೆನಿಗಳ ಪ್ರವರ್ತಕರಿಗೆ ಬೆಳವಣಿಗೆ ಪ್ರಯತ್ನ ಮತ್ತು ಶೇರುದಾರರಿಗೆ ಧೀರ್ಘಕಾಲೀನ ಮೌಲ್ಯ ರೂಪಿಸಿಕೊಳ್ಳಲು ಆಸ್ತಿ ಸೃಷ್ಟಿಗಾಗಿ ಜಾಗತಿಕ ಹೂಡಿಕೆದಾರರಿಂದ ಈಕ್ವಿಟಿ ಬಂಡವಾಳ ಹೆಚ್ಚಿಸಿಕೊಂಡಿದ್ದರೂ ಸಹ ತಮ್ಮ ಕಂಪೆನಿಗಳ ಮೇಲಣ ನಿಯಂತ್ರಣವನ್ನು ಉಳಿಸಿಕೊಳ್ಳಲು ಅನುಕೂಲವಾಗುವಂತೆ ಇದನ್ನು ರೂಪಿಸಲಾಗಿದೆ.
- ಕಂಪೆನಿ ಕಾಯ್ದೆ 2013 ರಲ್ಲಿ ಮಧ್ಯಸ್ಥಿಕೆ ಮತ್ತು ರಾಜಿಗೆ ಸಂಬಂಧಿಸಿದಂತಹ ಪ್ರಸ್ತಾವನೆಗಳನ್ನು ಅಳವಡಿಸಿ ಜಾರಿಗೆ ತರಲಾಗಿದೆ.
- ಸೆಬಿ ಜೊತೆಗಿನ ಮಾನದಂಡ, ನಿಯಮಾವಳಿಗಳನ್ನು ಸರಳಗೊಳಿಸಲಾಗಿದೆ. ಸಾರ್ವಜನಿಕರಿಗೆ ಹೂಡಿಕೆ ಆಹ್ವಾನ ಕಾಲಾವಧಿಯನ್ನು ಇಳಿಕೆ ಮಾಡಿ ಮಾಡಲಾಗಿದೆ .ಹೂಡಿಕೆದಾರರು ಅರ್ಜಿ ಸಲ್ಲಿಸಿದರೆ ಸೆಕ್ಯುರಿಟಿಗಳನ್ನು ಪಡೆಯಲು ಈ ಹಿಂದೆ ಆರು ದಿನಗಳ ಕಾಲಾವಕಾಶವಿತ್ತು, ಅದನ್ನೀಗ ಮೂರು ದಿನಗಳಿಗೆ ಇಳಿಕೆ ಮಾಡಲಾಗಿದೆ.
- ಕಾಯ್ದೆಯ ಸೆಕ್ಷನ್ 232 (6) ನ್ನು ಹೆಚ್ಚು ನಿಖರಗೊಳಿಸಲಾಗಿದ್ದು, ಇದು ವಿಲೀನ /ಕಂಪೆನಿಗಳ ಸ್ವಾಧೀನಕ್ಕೆ ಸಂಬಂಧಿಸಿದ “ನಿಗದಿತ ದಿನಾಂಕ” ವನ್ನು ಖಚಿತಪಡಿಸಿಕೊಳ್ಳಲು ಇರುವ ವಿಧಾನವನ್ನು ಹೆಚ್ಚು ಸುಲಭಗೊಳಿಸುತ್ತದೆ. ಮತ್ತು ಲೆಕ್ಕಾಚಾರಕ್ಕೆ ಸಂಬಂಧಿಸಿ ನಿಖರತೆಯನ್ನು ಒದಗಿಸುತ್ತದೆ, ಆ ಮೂಲಕ ಭಾಗೀದಾರರಿಗೆ ವಿಲಯನ/ಸ್ವಾಧೀನಕ್ಕೆ ಸಂಬಂಧಿಸಿ ಅವುಗಳ ವ್ಯಾಪಾರೋದ್ಯಮ ಪರಿಗಣನೆಗೆ ಅನುಗುಣವಾಗಿ ಅಥವಾ ಕಾನೂನು ಆವಶ್ಯಕತೆಗಳಿಗೆ ಅನ್ವಯಿಸುವಂತೆ “ನಿಗದಿತ ದಿನಾಂಕ” ದ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಇದು ವ್ಯಾಪಾರೋದ್ಯಮಕ್ಕೆ ಅನುಕೂಲಕರ ವ್ಯವಸ್ಥೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
- ಸಾಲಪತ್ರ ಬಿಡುಗಡೆ (ಹಿಂದೆ ಮಾರಾಟ ಮಾಡಿದ್ದರೆ ಅದರ ಮರು ಖರೀದಿ) ಗಾಗಿ ಸಾಲಪತ್ರ ಬಿಡುಗಡೆ ಮೀಸಲು (ಡಿ.ಆರ್.ಆರ್.) ರೂಪಿಸುವುದಕ್ಕೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಬಂಡವಾಳದ ವೆಚ್ಚ ತಗ್ಗಿಸುವುದಕ್ಕಾಗಿ ಮತ್ತು ಬಾಂಡ್ ಮಾರುಕಟ್ಟೆಯನ್ನು ಇನ್ನಷ್ಟು ವ್ಯಾಪಕಗೊಳಿಸುವ ಉದ್ದೇಶದಿಂದ ಪರಿಷ್ಕರಿಸಲಾಗಿದೆ. :
- ನೊಂದಾಯಿತ (ಲಿಸ್ಟೆಡ್ ) ಕಂಪೆನಿಗಳಿಗೆ ಸಂಬಂಧಿಸಿದ ಬಾಕಿ ಇರುವ ಸಾಲಪತ್ರಗಳ ಮೌಲ್ಯದ 25 % ನಷ್ಟು ಡಿ.ಆರ್.ಆರ್. ಇರಬೇಕೆಂಬ ಷರತ್ತನ್ನು ತೆಗೆದು ಹಾಕಲಾಗಿದೆ. ಆರ್.ಬಿ.ಐ.ಯಲ್ಲಿ ನೊಂದಾಯಿಸಲ್ಪಟ್ಟ ಎನ್.ಬಿ.ಎಫ್.ಸಿ.ಗಳು ಮತ್ತು ರಾಷ್ಟ್ರೀಯ ವಸತಿ ಬ್ಯಾಂಕ್ ( ಎನ್.ಎಚ್.ಬಿ.) ನಲ್ಲಿ ನೊಂದಾಯಿಸಲ್ಪಟ್ಟ ಹೌಸಿಂಗ್ ಹಣಕಾಸು ಕಂಪೆನಿಗಳಿಗೆ ಪಬ್ಲಿಕ್ ಇಶ್ಯು ಮತ್ತು ಖಾಸಗಿ ನೇಮಕಗಳಿಗೆ ಇದನ್ನು ಸಡಿಲಿಕೆ ಮಾಡಲಾಗಿದೆ.
- ನೊಂದಾಯಿಸಲ್ಪಟ್ಟಿರದ (ಅನ್ ಲಿಸ್ಟೆಡ್ )ಕಂಪೆನಿಗಳ ಡಿ.ಆರ್.ಆರ್. ಪ್ರಮಾಣವನ್ನು ಬಾಕಿ ಇರುವ ಸಾಲ ಪತ್ರಗಳ ಈಗಿರುವ 25 % ನಿಂದ 10% ಇಳಿಕೆ.
- ಸ್ವತಂತ್ರ ನಿರ್ದೇಶಕರ ದತ್ತಾಂಶ ಬ್ಯಾಂಕ್ ಆರಂಭ, ಇದು ಈಗಿರುವ ಸ್ವತಂತ್ರ ನಿರ್ದೇಶಕರ ನೋಂದಣಿಗೆ ವೇದಿಕೆಯೊದಗಿಸಲಿದೆ ಮತ್ತು ಅವರ ಸಂಪರ್ಕವನ್ನು ಸುಲಭ ಸಾಧ್ಯವಾಗಿಸಲಿದೆ ಮತ್ತು ಸ್ವತಂತ್ರ ನಿರ್ದೇಶಕರಾಗುವ ಆಶಯ ಹೊದಿರುವ ವ್ಯಕ್ತಿಗಳಿಗೆ ಇದು ಅನುಕೂಲ ಮಾಡಿಕೊಡಲಿದೆ.
- ಹೆಸರು ಕಾಯ್ದಿರಿಸುವಿಕೆ ಮತ್ತು ಕಂಪೆನಿಗಳ ಸಂಯೋಜನೆಗಾಗಿ ಹಾಗು ಎಲ್.ಎಲ್.ಪಿ.ಗಳಿಗಾಗಿ ಸರಾಸರಿ ಕನಿಷ್ಟ 15 ದಿನಗಳಿಗೆ ಬದಲಾಗಿ 1-2 ದಿನಗಳಲ್ಲಿ ಕಾರ್ಯ ಸಾಧ್ಯವಾಗುವಂತೆ ಮಾಡಲು ಕೇಂದ್ರೀಯ ನೋಂದಣೆ ಕೇಂದ್ರ ಸ್ಥಾಪನೆ.
- ದೇಶದಲ್ಲಿ ಕಳೆದ ಮೂರು ವರ್ಷಗಳಲ್ಲಿ ಈ ಮಾದರಿಯಲ್ಲಿ ವರ್ಷಕ್ಕೆ 1,25,000 ಕ್ಕೂ ಹೆಚ್ಚು ಕಂಪೆನಿಗಳು ಸಂಯೋಜನೆಗೊಂಡಿವೆ, ಇದಕ್ಕೆ ಮೊದಲು ಪ್ರತಿ ವರ್ಷ 50-60 ಸಾವಿರ ಕಂಪೆನಿಗಳು ಸಂಯೋಜನೆಗೊಳ್ಳುತ್ತಿದ್ದವು.
- ಪಟ್ಟಿಯಲ್ಲಿಲ್ಲದ ಸಾರ್ವಜನಿಕ ಕಂಪೆನಿಗಳ ಸೆಕ್ಯುರಿಟಿಗಳ ಅಮಾನ್ಯೀಕರಣ
- ಕಂಪೆನಿಗಳ (ನೊಂದಾಯಿತ ಮೌಲ್ಯಮಾಪಕರು ಮತ್ತು ಮೌಲ್ಯಮಾಪನ) ನಿಯಮಗಳು
- ಕಂಪೆನಿಗಳ (ದಂಡಗಳ ನ್ಯಾಯ ನಿರ್ಣಯ ) ನಿಯಮಗಳನ್ನು ತಿದ್ದುಪಡಿ ಮಾಡಿ, ಪ್ರಕ್ರಿಯೆಯನ್ನು ಪಾರದರ್ಶಕ ಮಾಡಲಾಗಿದೆ ಮತ್ತು ವಿವೇಚನಾಧಿಕಾರದಿಂದ ಮುಕ್ತಗೊಳಿಸಲಾಗಿದೆ.
- ಜವಾಬ್ದಾರಿಯುತ ವ್ಯಾಪಾರೋದ್ಯಮಕ್ಕಾಗಿ ರಾಷ್ಟ್ರೀಯ ಮಾರ್ಗದರ್ಶಿಗಳು.
- ಕಂಪೆನಿಗಳ ಕಾಯ್ದೆ , 2013 ರಡಿಯಲ್ಲಿ 14,000 ಕ್ಕೂ ಅಧಿಕ ಫಿರ್ಯಾದಿಗಳ ಹಿಂತೆಗೆತ.
- ಸಂಬಂಧಿತ ವ್ಯಕ್ತಿಯ/ಸಂಸ್ಥೆಯ ಹಣಕಾಸು ವ್ಯವಹಾರ ಸಂಬಂಧಿ ಪ್ರಸ್ತಾವನೆಗಳನ್ನು ವ್ಯವಸ್ಥಿತಗೊಳಿಸಲಾಗಿದೆ.
- ಕಂಪೆನಿಗಳ ಕಾಯ್ದೆ , 2013 ರ ಅಡಿಯಲ್ಲಿ ದಂಡನಾ ಪ್ರಸ್ತಾವನೆಗಳನ್ನು ಕ್ರಿಮಿನಲ್ ಮುಕ್ತ ಮಾಡುವ ಹಂತ 2 ರ ಆರಂಭ.
- ಮೊದಲ ಸಿ.ಎಸ್.ಆರ್. ಪ್ರಶಸ್ತಿಗಳನ್ನು ವಿತರಿಸಲಾಗಿದೆ.
ಸಾಲ ಬಾಕಿ ಮತ್ತು ದಿವಾಳಿ ಚೌಕಟ್ಟಿನಡಿ ಬಲಿಷ್ಟ ಸಂಸ್ಥೆಯನ್ನು ನಿರ್ಮಾಣ ಮಾಡಲು ಕೈಗೊಂಡ ಕ್ರಮಗಳು ಈ ಕೆಳಗಿನಂತಿವೆ: .
- ಸಾಲ ಬಾಕಿ ಮತ್ತು ದಿವಾಳಿ ಸಂಹಿತೆ (ದ್ವಿತೀಯ ತಿದ್ದುಪಡಿ ) ವಿಧೇಯಕ 2019 ನ್ನು 2019 ರ ದಶಂಬರ 12 ರಂದು ಲೋಕ ಸಭೆಯಲ್ಲಿ ಮಂಡಿಸಲಾಗಿದೆ. ವಿಧೇಯಕದ ಉದ್ದೇಶಗಳು ಮತ್ತು ಕಾರಣಗಳನ್ನು ಉಲ್ಲೇಖಿಸಿರುವ ಹೇಳಿಕೆಯು ಸಾಂಸ್ಥಿಕ ಸಾಲಗಾರರು ದಿವಾಳಿಯಾಗದಂತೆ ತಡೆಯಲು ಕೊನೆಯ ಹಂತದ ನಿಧಿಯ ಮರುಪಾವತಿಗೆ ಗರಿಷ್ಟ ಆದ್ಯತೆಯನ್ನು ನೀಡಬೇಕಾಗಿದೆ ಎಂದು ಹೇಳುತ್ತದೆ. ಕಂಪೆನಿಯು ಸಾಂಸ್ಥಿಕ ಸಾಲ ಬಾಕಿ ಪರಿಹಾರ ಪ್ರಕ್ರಿಯೆ ಅಥವಾ ಕಂಪೆನಿ ಋಣ ಪರಿಹಾರ ಪ್ರಕ್ರಿಯೆಯನ್ನು ಎದುರಿಸುತ್ತಿರುವಾಗ ಕೆಲವು ನಿರ್ದಿಷ್ಟ ಹಣಕಾಸು ಮುಂಗಡ ನೀಡಿದ ಸಂಸ್ಥೆಗಳು ಯಾ ವ್ಯಕ್ತಿಗಳು ಸಂಹಿತೆಯ ದುರುಪಯೋಗವನ್ನು ತಡೆಯುವುದಕ್ಕಾಗಿ ಮತ್ತು ಸಾಂಸ್ಥಿಕ ಸಾಲಗಾರರ ವಿರುದ್ದ ಮೊಕದ್ದಮೆ ಹೂಡಿದ ಸಂದರ್ಭದಲ್ಲಿ ಅವರಿಗೆ ರಕ್ಷಣೆ ನೀಡುವುದಕ್ಕಾಗಿ ಮತ್ತು ಸಾಂಸ್ಥಿಕ ಸಾಲಗಾರರ ಆಸ್ತಿಯ ವಿರುದ್ದ ಕ್ರಮ ಕೈಗೊಳ್ಳುವುದಕ್ಕಾಗಿ ಮತ್ತು ಕೆಲವು ನಿರ್ದಿಷ್ಟ ಶರತ್ತುಗಳನ್ನು ಈಡೇರಿಸಿದಲ್ಲಿ ಅರ್ಜಿದಾರರ ಸಮಸ್ಯೆಗೆ ಯಶಸ್ವೀ ಪರಿಹಾರ ಒದಗಿಸಲು ಇದರ ಅಗತ್ಯವನ್ನು ಮನಗಾಣಲಾಗಿದೆ ಎಂದು ಅದು ಹೇಳುತ್ತದೆ.
- ಸಾಲ ಬಾಕಿ ಮತ್ತು ದಿವಾಳಿ ಸಂಹಿತೆ (ತಿದ್ದುಪಡಿ) ವಿಧೇಯಕ , 2019 ನ್ನು ಸಂಸತ್ತು ಅಂಗೀಕರಿಸಿದ್ದು ಅದು 16.08.2019 ರಿಂದ ಅನ್ವಯವಾಗುವಂತೆ ಜಾರಿಗೆ ಬಂದಿದೆ. ಈ ತಿದ್ದುಪಡಿ ವಿಧೇಯಕ ಪ್ರಕರಣಗಳನ್ನು ಕಾಲಮಿತಿಯಲ್ಲಿ ಪರಿಹರಿಸುವಿಕೆ, ಆಸ್ತಿಗಳ ಗರಿಷ್ಟ ಮೌಲ್ಯಗಳನ್ನು ಪರಿಗಣಿಸಿ ಸಾಂಸ್ಥಿಕ ಪುನಾರಚನೆಗೆ ಅವಕಾಶ, ಸಾಲ ಒದಗಿಸಿದವರ ಪ್ರಾಮುಖ್ಯತೆಯ ರಕ್ಷಣೆ ಮತ್ತು ಮನೆ ಖರೀದಿಸುವವರ ಬಿಕ್ಕಟ್ಟನ್ನು ನಿವಾರಿಸುವಿಕೆ ಇತ್ಯಾದಿಗಳನ್ನು ನಿಭಾಯಿಸುತ್ತದೆ.
- ಸಾಲ ಬಾಕಿ ಮತ್ತು ದಿವಾಳಿ (ಸಾಲ ಬಾಕಿ ಮತ್ತು ಹಣಕಾಸು ಸೇವಾದಾರರ ಋಣ ವಿಮೋಚನೆ ಪ್ರಕ್ರಿಯೆ ಮತ್ತು ನ್ಯಾಯ ತೀರ್ಮಾನ ಪ್ರಾಧಿಕಾರದೆದುರು ಅರ್ಜಿ) ನಿಯಮಗಳು, 2019 ನ್ನು 2019 ರ ನವೆಂಬರ್ 15 ರಂದು ಪ್ರಕಟಿಸಲಾಗಿದೆ. ಇದು ಬ್ಯಾಂಕುಗಳಿಗೆ ಹೊರತಾದ ಹಣಕಾಸು ಸೇವಾ ಒದಗಣೆದಾರರಿಗೆ (ಎಫ್.ಎಸ್.ಪಿ. ಗಳು) ಸಾಲ ಬಾಕಿ ಮತ್ತು ಋಣ ವಿಮೋಚನಾ ಪ್ರಕ್ರಿಯೆಗೆ ಸಾಮಾನ್ಯ ಚೌಕಟ್ಟನ್ನು ಒದಗಿಸಿಕೊಡುತ್ತದೆ. ನಿಯಮಗಳು ಇಂತಹ ಎಫ್.ಎಸ್.ಪಿ.ಗಳು ಅಥವಾ ಎಫ್.ಎಸ್.ಪಿ. ವರ್ಗಗಳಿಗೆ ಅನ್ವಯವಾಗುತ್ತವೆ ಮತ್ತು ಅವುಗಳ ಸಾಲ ಬಾಕಿ ಹಾಗು ಋಣ ವಿಮೋಚನಾ ಪ್ರಕ್ರಿಯೆಗಳ ಉದ್ದೇಶ ಈಡೇರಿಕೆಗಾಗಿ , ಕೇಂದ್ರ ಸರಕಾರವು ಸೂಕ್ತ ನಿಯಂತ್ರಣ ಪ್ರಾಧಿಕಾರಗಳ ಜೊತೆ ಸಮಾಲೋಚನೆ ನಡೆಸಿ ಕಾಲ ಕಾಲಕ್ಕೆ ಸೆಕ್ಷನ್ 227 ರಡಿಯಲ್ಲಿ ನಿಯಮಗಳನ್ನು ಅಧಿಸೂಚಿಸುತ್ತದೆ. ಈ ನಿಯಮಗಳು ಪೂರ್ಣ ಪ್ರಮಾಣದ ಮಂಡನೆ (ಎಫ್.ಆರ್.ಡಿ.ಐ. ವಿಧೇಯಕ) ಬಾಕಿ ಇರುವಾಗ ತುರ್ತಿನ ಸಂದರ್ಭಗಳಲ್ಲಿ ಮಧ್ಯಂತರ ವ್ಯವಸ್ಥೆಯಾಗಿ ಬ್ಯಾಂಕು ಮತ್ತು ಇತರ ಪ್ರಮುಖ ಹಣಕಾಸು ಸೇವಾ ಪೂರೈಕೆದಾರರ ಹಣಕಾಸು ಪರಿಹಾರ ತೀರ್ಮಾನಗಳಿಗೆ ಒದಗಿ ಬರುತ್ತವೆ.
- ಐ.ಬಿ.ಸಿ.ಯ ಸೆಕ್ಷನ್ 2 ರ ನಿಬಂಧನೆ (e) ಯ ಅಧಿಸೂಚನೆಯನ್ನು 2019 ರ ನವೇಂಬರ್ 15 ರಂದು ಹೊರಡಿಸಲಾಗಿದೆ ಮತ್ತು 2019 ರ ಡಿಸೆಂಬರ್ 1 ರಿಂದ ಜಾರಿಗೆ ತರಲಾಗಿದೆ. ಐ.ಬಿ.ಸಿ. ಅಡಿಯಲ್ಲಿ ಸಾಂಸ್ಥಿಕ ಸಾಲಗಾರರ ವೈಯಕ್ತಿಕ ಜಾಮೀನುದಾರರ ದಿವಾಳಿ ಮತ್ತು ಪರಿಹಾರ ತೀರ್ಮಾನದ ವ್ಯಾಪ್ತಿ ಇದರಿಂದ ವಿಸ್ತರಿಸಲ್ಪಟ್ಟಿದೆ. ಸಾಲ ಬಾಕಿ ಪರಿಹಾರ ತೀರ್ಮಾನ ಮತ್ತು ವೈಯಕ್ತಿಕ ಜಾಮೀನುದಾರರ ದಿವಾಳಿ ಐ.ಬಿ.ಸಿ.ಅಡಿಯಲ್ಲಿ ಸಾಂಸ್ಥಿಕ ಸಾಲಗಾರರ ಸಾಲ ಬಾಕಿ ಪರಿಹಾರ ತೀರ್ಮಾನಕ್ಕೆ ಪೂರಕವಾಗಿರುತ್ತದೆ ಮತ್ತು ವೈಯಕ್ತಿಕ ಜಾಮೀನುದಾರ ಹಾಗು ಸಾಂಸ್ಥಿಕ ಜಾಮೀನುದಾರರನ್ನು ಒಂದೇ ನೆಲೆಯಲ್ಲಿ ನಿಲ್ಲಿಸುತ್ತದೆ. ಇದು ಬಹಳ ಅವಶ್ಯವಾದ ಸಾಲ ಶಿಸ್ತನ್ನು ತರುವುದು ಮಾತ್ರವಲ್ಲ, ಬ್ಯಾಂಕಿಂಗ್ ಸಂಬಂಧಗಳಲ್ಲಿ ಸಾಂಸ್ಕೃತಿಕ ಬದಲಾವಣೆಯನ್ನು ಉದ್ದೀಪಿಸಲಿದೆ.
- ಸಾಲ ಬಾಕಿ ಮತ್ತು ದಿವಾಳಿ ( ಸಾಂಸ್ಥಿಕ ಸಾಲಗಾರರಿಗೆ ವೈಯಕ್ತಿಕ ಜಾಮೀನುದಾರರಾಗಿರುವವರ ಸಾಲ ಬಾಕಿ ಪರಿಹಾರ ತೀರ್ಮಾನ ಪ್ರಕ್ರಿಯೆಗಾಗಿ ನ್ಯಾಯ ತೀರ್ಮಾನ ಪ್ರಾಧಿಕಾರದೆದುದುರು ಅರ್ಜಿ) ನಿಯಮಗಳು 2019 ಮತ್ತು ಸಾಲ ಬಾಕಿ ಹಾಗು ದಿವಾಳಿ (ಸಾಂಸ್ಥಿಕ ಸಾಲಗಾರರಿಗೆ ವೈಯಕ್ತಿಕ ಜಾಮೀನುದಾರರಾಗಿರುವವರ ದಿವಾಳಿ ಪ್ರಕ್ರಿಯೆಗಾಗಿ ನ್ಯಾಯ ತೀರ್ಮಾನ ಪ್ರಾಧಿಕಾರದೆದುರು ಅರ್ಜಿ ) ನಿಯಮಗಳು 2019-ಇವುಗಳನ್ನು 2019 ರ ನವೆಂಬರ್ 15 ರಂದು ಪ್ರಕಟಿಸಲಾಗಿದೆ. ಮತ್ತು ಇವುಗಳು 2019 ರ ದಶಂಬರ್ 1 ರಿಂದ ಜಾರಿಗೆ ಬಂದಿವೆ. ಈ ನಿಯಮಗಳು ಸಾಲ ಬಾಕಿ ಮತ್ತು ದಿವಾಳಿ ಸಂಹಿತೆ (ಐ.ಬಿ.ಸಿ.) ಅಡಿಯಲ್ಲಿ ವ್ಯಕ್ತಿಗಳಿಗೆ ಪರಿಹಾರವನ್ನು ಒದಗಿಸುತ್ತವೆ. ಇದನ್ನು ಹಂತ ಹಂತವಾಗಿ ಅನುಷ್ಟಾನಿಸಲಾಗುತ್ತಿದೆ. ಐ.ಬಿ.ಸಿ.ಯು ಸಾಂಸ್ಥಿಕ ವ್ಯಕ್ತಿಗಳ , ಪಾಲುದಾರಿಕೆ ಸಂಸ್ಥೆಗಳ ಮತ್ತು ವ್ಯಕ್ತಿಗಳ ಪುನರ್ವ್ಯವಸ್ಥಾಪನೆ ಮತ್ತು ಸಾಲ ಬಾಕಿ ತೀರ್ಮಾನಕ್ಕೆ ಅನುವು ಮಾಡಿಕೊಡುತ್ತದೆ. ಇದು ಕಾಲಮಿತಿಯ ಆಧಾರದಲ್ಲಿ ಅಂತಹ ವ್ಯಕ್ತಿಗಳ ಆಸ್ತಿಯ ಮೌಲ್ಯದ ಗರಿಷ್ಟ ವರ್ಧನೆಗೆ , ಉದ್ಯಮಶೀಲತ್ವದ ಉತ್ತೇಜನಕ್ಕೆ , ಸಾಲ ಲಭ್ಯತೆಗೆ ಮತ್ತು ಎಲ್ಲಾ ಭಾಗೀದಾರರ ಹಿತಾಸಕ್ತಿಯನ್ನು ಸಮತೋಲನಗೊಳಿಸಲು ಅನುವು ಮಾಡಿಕೊಡುತ್ತದೆ. ಸಾಂಸ್ಥಿಕ ಪ್ರಕ್ರಿಯೆಗಳಿಗೆ ಸಂಬಂಧಿಸಿದ ( ಸಾಲ ಬಾಕಿ ಪರಿಹಾರ ತೀರ್ಮಾನ, ತ್ವರಿತಗತಿಯಲ್ಲಿ ಪರಿಹರಿಸಲ್ಪಡುವಿಕೆ, ಋಣ ವಿಮೋಚನೆ, ಮತ್ತು ಸ್ವಯಂ ಋಣ ವಿಮೋಚನೆ ) ಐ.ಬಿ.ಸಿ. ಪ್ರಸ್ತಾವನೆಗಳು ಜಾರಿಯಲ್ಲಿವೆಯಾದುದರಿಂದ . ಈ ನಿಯಮಗಳು ಸಾಲ ಬಾಕಿ ಪರಿಹಾರ ತೀರ್ಮಾನ, ಸಿ.ಡಿ.ಗಳ ವೈಯಕ್ತಿಕ ಜಾಮೀನುದಾರರ ವಿರುದ್ದ ದಿವಾಳಿ ಪ್ರಕ್ರಿಯೆ ಆರಂಭಿಸಲು ಅರ್ಜಿಗಳನ್ನು ಸಲ್ಲಿಸುವುದಕ್ಕೆ ಅವಕಾಶ ಮಾಡಿಕೊಡುತ್ತವೆ. ಹಾಗು ಇಂತಹ ಅರ್ಜಿಗಳ ಹಿಂಪಡೆಯುವಿಕೆ, ಮುಂಗಡ ನೀಡಿದವರಿಂದ ಕ್ಲೇಮುಗಳನ್ನು ಆಹ್ವಾನಿಸಿ ಸಾರ್ವಜನಿಕ ಸೂಚನೆ ನೀಡುವ ಮಾದರಿ ಅರ್ಜಿಗಳನ್ನು ಮತ್ತು ಇತ್ಯಾದಿ ವಿಷಯಗಳನ್ನು ಈ ನಿಯಮಗಳು ಒದಗಿಸುತ್ತವೆ.
- ಸಾಲ ಬಾಕಿ ಮತ್ತು ದಿವಾಳಿ ಸಂಹಿತೆ, 2016 ನ್ನು 2018 ರಲ್ಲಿ ಎರಡು ಬಾರಿ ತಿದ್ದುಪಡಿ ಮಾಡಲಾಗಿದೆ. ಅನಪೇಕ್ಷಿತ ವ್ಯಕ್ತಿಗಳು ಪರಿಹಾರ ಪ್ರಕ್ರಿಯೆಯಲ್ಲಿರುವ ಕಂಪೆನಿಗಳ ನಿಯಂತ್ರಣ ಹೊಂದುವುದನ್ನು ಅನರ್ಹಗೊಳಿಸಲು ಮತ್ತು ವಿವಿಧ ಭಾಗೀದಾರರ ಹಿತಾಸಕ್ತಿಗಳನ್ನು ಸಮತೋಲನ ಮಾಡಲು , ಅದರಲ್ಲೂ ವಿಶೇಷವಾಗಿ ವಸತಿ ಖರೀದಿದಾರರ ಹಿತಾಸಕ್ತಿಗಳು, ಕಿರು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಹಿತಾಸಕ್ತಿಗಳನ್ನು ರಕ್ಷಿಸಲು , ಕಾರ್ಪೊರೇಟ್ ಸಾಲಗಾರರ ದಿವಾಳಿಯನ್ನು ತೀರ್ಮಾನಿಸಲು ಸಾಲ ನೀಡಿದ ಸಮಿತಿಯ ಮತದಾನ ಮಿತಿಯನ್ನು ಇಳಿಸಲು ಮತ್ತು ಅರ್ಜಿದಾರರ ಅರ್ಹತೆಯನ್ನು ತೀರ್ಮಾನಿಸುವುದಕ್ಕೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಸಮರ್ಪಕಗೊಳಿಸಲು ಈ ತಿದ್ದುಪಡಿಗಳನ್ನು ಮಾಡಲಾಗಿದೆ.
ಸಾಲ ಬಾಕಿ ಮತ್ತು ದಿವಾಳಿ ಸಂಹಿತೆ, 2019 (ಐ.ಬಿ.ಸಿ.) ರ ಇದುವರೆಗಿನ ಸಾಧನೆಗಳು:
ಸಲ್ಲಿಕೆಯಾದ 21,136 ಅರ್ಜಿಗಳ ಪೈಕಿ:-
ಸುಮಾರು ರೂಪಾಯಿ 3,74,931.30 ಕೋ.ರೂ. ಒಟ್ಟು ಮೊತ್ತವನ್ನು ಒಳಗೊಂಡ 9,653 ಪ್ರಕರಣಗಳನ್ನು ಐ.ಬಿ.ಸಿ.ಯಲ್ಲಿ ಅಂಗೀಕಾರ ಪೂರ್ವ ಹಂತದಲ್ಲಿಯೇ ತೀರ್ಮಾನಿಸಲಾಗಿದೆ.
- ಸಾಂಸ್ಥಿಕ ಸಾಲ ಬಾಕಿ ಪರಿಹಾರ ಪ್ರಕ್ರಿಯೆ (ಸಿ.ಐ.ಆರ್.ಪಿ.) ಯಲ್ಲಿ ಅಂಗೀಕಾರವಾದ 2828 ಪ್ರಕರಣಗಳ ಪೈಕಿ 306 ಪ್ರಕರಣಗಳನ್ನು ಮೇಲ್ಮನವಿ/ ಮರುಪರಿಶೀಲನೆ/ ಹಿಂತೆಗೆಯುವಿಕೆ ಮೂಲಕ ಮುಕ್ತಾಯಗೊಳಿಸಲಾಗಿದೆ.
- ಪರಿಹರಿಸಲ್ಪಟ್ಟ 161 ಪ್ರಕರಣಗಳಲ್ಲಿ ಸಾಧ್ಯವಾದ ಮೊತ್ತ ರೂಪಾಯಿ 1,56,814 ಕೋಟಿ.
- ವಿಶ್ವ ಬ್ಯಾಂಕಿನ ವ್ಯಾಪಾರೋದ್ಯಮಕ್ಕೆ ಅನುಕೂಲಕರ ತಾಣ ವರದಿ 2020- ಸಾಲ ಬಾಕಿ ತೀರ್ಮಾನ ಸೂಚ್ಯಂಕ : -
- ಭಾರತದ ಶ್ರೇಯಾಂಕ 2008 ರಲ್ಲಿ 108 ಆಗಿದ್ದು, 2019 ರಲ್ಲಿ 56 ಸ್ಥಾನಗಳ ಜಿಗಿತ ಸಾಧಿಸಿ 52 ಕ್ಕೇರಿದೆ.
- ವಸೂಲಾತಿ ದರ 2018 ರಲ್ಲಿ 26.5 % ಇದ್ದು, 2019 ರಲ್ಲಿ 71.6 % ಗೇರಿದೆ.
- ವಸೂಲಾತಿಗಾಗಿ ತಗಲುವ ಕಾಲಾವಧಿ 2018 ರಲ್ಲಿ 4.3 ವರ್ಷಗಳಾಗಿದ್ದಿತು, 2019 ರಲ್ಲಿ ಇದು 1.6 ವರ್ಷಕ್ಕೆ ಸುಧಾರಣೆಯಾಗಿದೆ.
(Release ID: 1597317)
Visitor Counter : 268