ಪ್ರಧಾನ ಮಂತ್ರಿಯವರ ಕಛೇರಿ

ಹಿಂದೂಸ್ತಾನ್ ಟೈಮ್ಸ್ ನಾಯಕತ್ವ ಶೃಂಗಸಭೆಯನ್ನುದ್ದೇಶಿಸಿ ಪ್ರಧಾನಿಯವರ ಭಾಷಣ

Posted On: 06 DEC 2019 12:13PM by PIB Bengaluru

ಹಿಂದೂಸ್ತಾನ್ ಟೈಮ್ಸ್ ನಾಯಕತ್ವ ಶೃಂಗಸಭೆಯನ್ನುದ್ದೇಶಿಸಿ ಪ್ರಧಾನಿಯವರ ಭಾಷಣ

 

ನವದೆಹಲಿಯಲ್ಲಿ ಇಂದು ನಡೆದ 17 ನೇ ಹಿಂದೂಸ್ತಾನ್ ಟೈಮ್ಸ್ ನಾಯಕತ್ವ ಶೃಂಗಸಭೆಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಉದ್ಘಾಟನಾ ಭಾಷಣ ಮಾಡಿದರು.

ಯಾವುದೇ ಸಮಾಜ ಅಥವಾ ದೇಶ ಪ್ರಗತಿ ಕಾಣಲು ಪರಸ್ಪರ ಮಾತುಕತೆ ಮುಖ್ಯ ಎಂದ ಪ್ರಧಾನಿಯವರು, ಮಾತುಕತೆಗಳು ಉತ್ತಮ ಭವಿಷ್ಯಕ್ಕಾಗಿ ಅಡಿಪಾಯವನ್ನು ಹಾಕುತ್ತವೆ ಎಂದು ಹೇಳಿದರು. "ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್" ಎಂಬ ಮಂತ್ರದೊಂದಿಗೆ ಪ್ರಸ್ತುತ ಸವಾಲುಗಳು ಮತ್ತು ಸಮಸ್ಯೆಗಳ ಬಗ್ಗೆ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಧಾನಿ ಪ್ರತಿಪಾದಿಸಿದರು.

 

 

ಸರ್ಕಾರ ಕೈಗೊಂಡ ಹಲವಾರು ನಿರ್ಧಾರಗಳನ್ನು ವಿವರಿಸಿದ ಪ್ರಧಾನಿಯವರು, 370 ನೇ ವಿಧಿಯ ರದ್ದತಿಯಿಂದ  ಜಮ್ಮು ಮತ್ತು ಕಾಶ್ಮೀರ ಹಾಗೂ  ಲಡಾಖ್ ಜನತೆ ಹೊಸ ಆಶಾಕಿರಣ ಕಂಡಿದೆ. ಮುಸ್ಲಿಂ ಮಹಿಳೆಯರು ಈಗ ತ್ರಿವಳಿ ತಲಾಖ್ ಪದ್ಧತಿಯಿಂದ ಮುಕ್ತರಾಗಿದ್ದಾರೆ ಎಂದು ಅವರು ಹೇಳಿದರು. ದೆಹಲಿಯ ಅನಧಿಕೃತ ಕಾಲೋನಿಗಳ ಬಗೆಗಿನ ನಿರ್ಧಾರವನ್ನು ಅವರು ಉಲ್ಲೇಖಿಸಿ, ಇದು 40 ಲಕ್ಷ ಜನರಿಗೆ ಪ್ರಯೋಜನವನ್ನು ನೀಡಿದೆ. ಉತ್ತಮ ಭಾರತಕ್ಕಾಗಿ, ನವ ಭಾರತಕ್ಕಾಗಿ ಇಂತಹ ಹಲವಾರು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಧಾನಿ ಹೇಳಿದರು.

ಆರೋಗ್ಯ, ನೈರ್ಮಲ್ಯ ಮತ್ತು ಮೂಲಸೌಕರ್ಯಗಳಂತಹ ಅನೇಕ ಅಭಿವೃದ್ಧಿ ಸೂಚಕಗಳಲ್ಲಿ ಹಿಂದುಳಿದಿರುವ ಜಿಲ್ಲೆಗಳ ಬಗ್ಗೆ ಸರ್ಕಾರ ಈಗ ಹೆಚ್ಚು ಗಮನ ಹರಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ಅಭಿವೃದ್ಧಿ ಮತ್ತು ಆಡಳಿತದ ಪ್ರತಿಯೊಂದು ನಿಯತಾಂಕಗಳನ್ನು ಕೇಂದ್ರೀಕರಿಸಿ 112 ಜಿಲ್ಲೆಗಳನ್ನು ಮಹತ್ವಾಕಾಂಕ್ಷೆಯ ಜಿಲ್ಲೆಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದೆ, ಈ ಜಿಲ್ಲೆಗಳಲ್ಲಿನ ಅಪೌಷ್ಟಿಕತೆ, ಬ್ಯಾಂಕಿಂಗ್ ಸೌಲಭ್ಯಗಳ ಲಭ್ಯತೆ, ವಿಮೆ, ವಿದ್ಯುತ್ ಮತ್ತಿತರ ಸೌಲಭ್ಯಗಳಂತಹ ವಿವಿಧ ನಿಯತಾಂಕಗಳ ಬಗ್ಗೆ ಸರ್ಕಾರವು ಉಸ್ತುವಾರಿ ನಡೆಸುತ್ತಿದೆ. ಈ 112 ಜಿಲ್ಲೆಗಳ ಉತ್ತಮ ಭವಿಷ್ಯವು ದೇಶಕ್ಕೂ ಉತ್ತಮ ಭವಿಷ್ಯವನ್ನು ಖಚಿತಪಡಿಸುತ್ತದೆ ಎಂದರು.

ಜಲ ಜೀವನ ಅಭಿಯಾನ ಕುರಿತು ಮಾತನಾಡಿದ ಪ್ರಧಾನಿಯವರು, ಸರ್ಕಾರವು 15 ಕೋಟಿ ಮನೆಗಳಿಗೆ ಕೊಳವೆ ನೀರು ಸರಬರಾಜು ಕಲ್ಪಿಸುತ್ತಿದೆ. ಭಾರತವನ್ನು  5 ಟ್ರಿಲಿಯನ್ ಆರ್ಥಿಕತೆಯನ್ನಾಗಿ ಮಾಡಲು ಸರ್ಕಾರ ಬದ್ಧವಾಗಿದೆ ಮತ್ತು ಈ ಗುರಿಯನ್ನು ಸಾಧಿಸಲು ಸರ್ಕಾರವು ಸಹಾಯಕ, ಫೆಸಿಲಿಟೇಟರ್ ಮತ್ತು ಪ್ರವರ್ತಕನಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಧಾನಿ ಹೇಳಿದರು.

ಐತಿಹಾಸಿಕ ಬ್ಯಾಂಕ್ ವಿಲೀನ, ಕಾರ್ಮಿಕ ಕಾನೂನುಗಳ ಕ್ರೋಢೀಕರಣ, ಬ್ಯಾಂಕುಗಳ ಮರು ಬಂಡವಾಳೀಕರಣ, ಕಾರ್ಪೊರೇಟ್ ತೆರಿಗೆ ಕಡಿತ ಮುಂತಾದ ಹಲವಾರು ಆರ್ಥಿಕ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಧಾನಿ ಹೇಳಿದರು. ಸುಲಲಿತ ವ್ಯವಹಾರ ಶ್ರೇಯಾಂಕವನ್ನು ಸುಧಾರಿಸಿಕೊಂಡಿರುವ ದೇಶಗಳಲ್ಲಿ ಭಾರತವು ಅಗ್ರಗಣ್ಯವಾಗಿರುವುದನ್ನು ಉಲ್ಲೇಖಿಸಿದ ಅವರು, ಕಳೆದ 5 ವರ್ಷಗಳಲ್ಲಿ ಭಾರತ 79 ಶ್ರೇಯಾಂಕಗಳನ್ನು ಸುಧಾರಿಸಿದೆ ಎಂದರು. ಸ್ಥಗಿತಗೊಂಡ ವಸತಿ ಯೋಜನೆಗಳ ಧನಸಹಾಯಕ್ಕಾಗಿ 25000 ಕೋಟಿ ರೂ. ನಿಧಿಯನ್ನು ರಚಿಸಲಾಗಿದೆ. 100 ಲಕ್ಷ ಕೋಟಿ ರೂ. ಮೌಲ್ಯದ ಮೂಲಸೌಕರ್ಯ ಯೋಜನೆಗಳನ್ನು ಸರ್ಕಾರ ಪ್ರಾರಂಭಿಸುತ್ತಿದೆ ಎಂದರು.

ಪ್ರವಾಸ ಮತ್ತು ಪ್ರವಾಸೋದ್ಯಮ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ ಭಾರತ 34 ನೇ ಸ್ಥಾನದಲ್ಲಿದೆ ಎಂದು ಉಲ್ಲೇಖಿಸಿದ ಪ್ರಧಾನಿಯವರು, ಪ್ರವಾಸೋದ್ಯಮ ಚಟುವಟಿಕೆಗಳಲ್ಲಿ ಆಗಿರುವ ಹೆಚ್ಚಳವು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ವಿಶೇಷವಾಗಿ ಬಡವರ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ. ಮಾನವ ಸಂಪನ್ಮೂಲವನ್ನು ಪರಿವರ್ತಿಸಲು ಕೈಗೊಳ್ಳುತ್ತಿರುವ ವಿವಿಧ ಉಪಕ್ರಮಗಳ ಕುರಿತು ಅವರು ಮಾತನಾಡಿದರು. ಸರ್ಕಾರವು ಫಲಿತಾಂಶ ಆಧಾರಿತ ವಿಧಾನದೊಂದಿಗೆ ಕೆಲಸ ಮಾಡುತ್ತಿದೆ ಮತ್ತು ಗಡುವಿನೊಳಗೆ ಕೆಲಸ ಮುಗಿಸುವ ಕಡೆಗೆ ಗಮನ ಕೇಂದ್ರೀಕರಿಸಿದೆ ಎಂದು ಅವರು ಹೇಳಿದರು. "130 ಕೋಟಿ ಭಾರತೀಯರ ಉತ್ತಮ ಭವಿಷ್ಯಕ್ಕಾಗಿ ಸರಿಯಾದ ಉದ್ದೇಶ, ಅತ್ಯುತ್ತಮ ತಂತ್ರಜ್ಞಾನ ಮತ್ತು ಪರಿಣಾಮಕಾರಿ ಅನುಷ್ಠಾನ" ಎಂಬುದು ಸರ್ಕಾರದ ಮಾರ್ಗಸೂಚಿಯಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.



(Release ID: 1595277) Visitor Counter : 112