ಸಂಪುಟ

ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್  ಪುನರುಜ್ಜೀವನ ಯೋಜನೆ ಮತ್ತು ವಿಲೀನಕ್ಕೆ ಕೇಂದ್ರ ಸಂಪುಟದ ಅನುಮೋದನೆ

Posted On: 23 OCT 2019 4:58PM by PIB Bengaluru

ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್  ಪುನರುಜ್ಜೀವನ ಯೋಜನೆ ಮತ್ತು ವಿಲೀನಕ್ಕೆ ಕೇಂದ್ರ ಸಂಪುಟದ ಅನುಮೋದನೆ

ದೂರಸಂಪರ್ಕದ ಸಾರ್ವಜನಿಕ ಉದ್ಯಮಗಳಿಗೆ 4 ಜಿ ಸ್ಪೆಕ್ಟ್ರಮ್ ಹಂಚಿಕೆ. 20 ಸಾವಿರ ಕೋ. ರೂ.ಗಳಿಗೂ ಹೆಚ್ಚು ಬಂಡವಾಳ ಪುನರ್ಧನ. 15 ಸಾವಿರ ಕೋ.ರೂ.ಗಳ ದೀರ್ಘಾವಧಿ ಬಾಂಡ್ ಗಳಿಗೆ ಖಾತರಿ. ಆಕರ್ಷಕ ವಿಆರ್ಎಸ್ ವೆಚ್ಚವನ್ನು ಭರಿಸಲಿರುವ ಕೇಂದ್ರ ಸರ್ಕಾರ

 

4 ಜಿ ಸೇವೆಗಳ ಸ್ಪೆಕ್ಟ್ರಮ್ ಅನ್ನು ಆಡಳಿತಾತ್ಮಕವಾಗಿ ಹಂಚಿಕೆ ಮಾಡುವುದು, ಖಾತರಿಯೊಂದಿಗೆ ಬಾಂಡ್ಗಳನ್ನು ಮೂಲಕ ಸಾಲ ಪುನರ್ರಚನೆ, ನೌಕರರ ವೆಚ್ಚವನ್ನು ಕಡಿಮೆ ಮಾಡುವುದು, ಆಸ್ತಿಗಳ ಹಣಗಳಿಕೆ ಮತ್ತು ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ವಿಲೀನಕ್ಕೆ ತಾತ್ವಿಕ ಒಪ್ಪಿಗೆ ನೀಡುವ ಮೂಲಕ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಪುನರುಜ್ಜೀವನಗೊಳಿಸುವ ಪ್ರಸ್ತಾಪವನ್ನು ಕೇಂದ್ರ ಸಚಿವ ಸಂಪುಟ ಇಂದು ಅಂಗೀಕರಿಸಿದೆ. 

ಸಂಪುಟ ಅಂಗೀಕರಿಸಿರುವ ಅಂಶಗಳು: 

1.ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ಗೆ 4 ಜಿ ಸೇವೆಗಳಿಗಾಗಿ ಸ್ಪೆಕ್ಟ್ರಮ್ನ ಆಡಳಿತಾತ್ಮಕ ಹಂಚಿಕೆ. ಇದರಿಂದಾಗಿ ಈ ಸಾರ್ವಜನಿಕ ಉದ್ಯಮಗಳು ಬ್ರಾಡ್ಬ್ಯಾಂಡ್ ಮತ್ತು ಇತರ ಡೇಟಾ ಸೇವೆಗಳನ್ನು ಒದಗಿಸಲು ಅನುವು ಮಾಡಿಕೊಡುತ್ತದೆ. ಸಾರ್ವಜನಿಕ ಉದ್ಯಮಗಳ ಈ ಸ್ಪೆಕ್ಟ್ರಮ್ ಗೆ ಕೇಂದ್ರ ಸರ್ಕಾರವು ಬಂಡವಾಳ ಪುನರ್ಧನದ ಮೂಲಕ 20,140 ಕೋ.ರೂ. ಹಣವನ್ನು ನೀಡಲಿದೆ; ಈ ಸ್ಪೆಕ್ಟ್ರಮ್ ಮೌಲ್ಯಕ್ಕೆ 3,674 ಕೋ.ರೂ.ಗಳ ಜಿಎಸ್ಟಿ ಮೊತ್ತವನ್ನು ಕೇಂದ್ರ ಸರ್ಕಾರವು ಬಜೆಟ್ ಸಂಪನ್ಮೂಲಗಳ ಮೂಲಕ ಭರಿಸಲಿದೆ. ಈ ಸ್ಪೆಕ್ಟ್ರಮ್ ಹಂಚಿಕೆಯನ್ನು ಬಳಸುವ ಮೂಲಕ, ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ 4 ಜಿ ಸೇವೆಗಳನ್ನು ತಲುಪಿಸಲು, ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಮತ್ತು ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಂತೆ ತಮ್ಮ ವಿಶಾಲ ಜಾಲವನ್ನು ಬಳಸಿಕೊಂಡು ಹೆಚ್ಚಿನ ವೇಗದ ಡೇಟಾವನ್ನು ಒದಗಿಸಲು ಸಾಧ್ಯವಾಗುತ್ತದೆ.

2.ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಸಹ 15,000 ಕೋ.ರೂ. ದೀರ್ಘಾವಧಿಯ ಬಾಂಡ್ ಗಳನ್ನು ಸಂಗ್ರಹಿಸಲಿದ್ದು, ಇದಕ್ಕಾಗಿ ಸಾರ್ವಭೌಮ ಖಾತರಿಯನ್ನು ಭಾರತ ಸರ್ಕಾರ ಒದಗಿಸುತ್ತದೆ. ಈ ಸಂಪನ್ಮೂಲಗಳೊಂದಿಗೆ, ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ತಮ್ಮ ಅಸ್ತಿತ್ವದಲ್ಲಿರುವ ಸಾಲವನ್ನು ಪುನರ್ರಚಿಸುತ್ತವೆ ಮತ್ತು ಕ್ಯಾಪೆಕ್ಸ್, ಒಪೆಕ್ಸ್ ಮತ್ತು ಇತರ ಅವಶ್ಯಕತೆಗಳನ್ನು ಭಾಗಶಃ ಪೂರೈಸಿಕೊಳ್ಳುತ್ತವೆ.

 3. ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ತಮ್ಮ 50 ವರ್ಷ ಮತ್ತು ಮೇಲ್ಪಟ್ಟ ಉದ್ಯೋಗಿಗಳಿಗೆ ಆಕರ್ಷಕ ಸ್ವಯಂಪ್ರೇರಿತ ನಿವೃತ್ತಿ ಯೋಜನೆ (ವಿ ಆರ್ ಎಸ್) ಮೂಲಕ ಸ್ವಯಂಪ್ರೇರಿತ ನಿವೃತ್ತಿಯನ್ನು ಸಹ ನೀಡಲಿದ್ದು, ಇದರ ವೆಚ್ಚವನ್ನು ಬಜೆಟ್ ಬೆಂಬಲದ ಮೂಲಕ ಕೇಂದ್ರ ಸರ್ಕಾರ ಭರಿಸಲಿದೆ. ವಿಆರ್ಎಸ್ನ ಎಕ್ಸ್-ಗ್ರೇಷಿಯಾ ಘಟಕಕ್ಕೆ ರೂ. 17,169 ಕೋ.ರೂ. ಬೇಕಾಗಲಿದೆ. ಪಿಂಚಣಿ, ಗ್ರಾಚ್ಯುಟಿ ಮತ್ತು ಕಮ್ಯುಟೇಶನ್ ವೆಚ್ಚವನ್ನು ಕೇಂದ್ರ ಸರ್ಕಾರ ನೀಡಲಿದೆ. ಯೋಜನೆಯ ವಿವರಗಳನ್ನು ಬಿಎಸ್ಎನ್ಎಲ್ / ಎಂಟಿಎನ್ಎಲ್ ಅಂತಿಮಗೊಳಿಸುತ್ತವೆ.

4.ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ತಮ್ಮ ಆಸ್ತಿಗಳನ್ನು ವಿತ್ತೀಯಗೊಳಿಸುವುದರಿಂದ ಸಾಲ ನಿವೃತ್ತಿ, ಬಾಂಡ್ಗಳ ಸೇವೆ, ನೆಟ್ವರ್ಕ್ ನವೀಕರಣ, ವಿಸ್ತರಣೆ ಮತ್ತು ಕಾರ್ಯಾಚರಣಾ ನಿಧಿಯ ಅವಶ್ಯಕತೆಗಳಿಗೆ ಬೇಕಾಗುವ ಸಂಪನ್ಮೂಲಗಳನ್ನು ಸಂಗ್ರಹಿಸುತ್ತವೆ.

 5. ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ನ ತಾತ್ವಿಕ ವಿಲೀನ

ಈ ಪುನರುಜ್ಜೀವನ ಯೋಜನೆಯ ಅನುಷ್ಠಾನದೊಂದಿಗೆ, ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಗ್ರಾಮೀಣ ಮತ್ತು ದೂರ ಪ್ರದೇಶಗಳನ್ನು ಒಳಗೊಂಡಂತೆ ದೇಶಾದ್ಯಂತ ತನ್ನ ದೃಢವಾದ ದೂರಸಂಪರ್ಕ ಜಾಲದ ಮೂಲಕ ವಿಶ್ವಾಸಾರ್ಹ ಮತ್ತು ಗುಣಮಟ್ಟದ ಸೇವೆಗಳನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

 (Release ID: 1588997) Visitor Counter : 16