ಪ್ರಧಾನ ಮಂತ್ರಿಯವರ ಕಛೇರಿ
ಭಾರತ-ಚೀನಾ ಎರಡನೇ ಅನೌಪಚಾರಿಕ ಶೃಂಗಸಭೆ
Posted On:
12 OCT 2019 4:13PM by PIB Bengaluru
ಭಾರತ-ಚೀನಾ ಎರಡನೇ ಅನೌಪಚಾರಿಕ ಶೃಂಗಸಭೆ
1. ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಶ್ರೀ ಕ್ಸಿ ಜಿನ್‌ಪಿಂಗ್ ಅವರು ತಮ್ಮ ಎರಡನೇ ಅನೌಪಚಾರಿಕ ಶೃಂಗಸಭೆಯನ್ನು ಭಾರತದ ಚೆನ್ನೈನಲ್ಲಿ 11 ಅಕ್ಟೋಬರ್ 2019 ರಂದು ನಡೆಸಿದರು.
2. ಜಾಗತಿಕ ಮತ್ತು ಪ್ರಾದೇಶಿಕ ಪ್ರಾಮುಖ್ಯತೆಯ ದೀರ್ಘಕಾಲೀನ ಮತ್ತು ಕಾರ್ಯತಂತ್ರದ ವಿಷಯಗಳ ಬಗ್ಗೆ ಸ್ನೇಹಮಯ ವಾತಾವರಣದಲ್ಲಿ ಉಭಯ ನಾಯಕರು ಗಾಢವಾದ ಅಭಿಪ್ರಾಯ ವಿನಿಮಯ ಮಾಡಿಕೊಂಡರು.
3. ಅವರು ರಾಷ್ಟ್ರೀಯ ಅಭಿವೃದ್ಧಿಯ ಬಗ್ಗೆ ತಂತಮ್ಮ ವಿಧಾನಗಳನ್ನು ಹಂಚಿಕೊಂಡರು.
4. ಅವರು ದ್ವಿಪಕ್ಷೀಯ ಸಂಬಂಧಗಳ ದಿಕ್ಕನ್ನು ಸಕಾರಾತ್ಮಕವಾಗಿ ಮೌಲ್ಯಮಾಪನ ಮಾಡಿದರು ಮತ್ತು ಜಾಗತಿಕವಾಗಿ ಹೆಚ್ಚುತ್ತಿರುವ ಉಭಯ ದೇಶಗಳ ಪಾತ್ರವನ್ನು ಪ್ರತಿಬಿಂಬಿಸಲು ಭಾರತ-ಚೀನಾ ದ್ವಿಪಕ್ಷೀಯ ಪರಸ್ಪರ ಕ್ರಿಯೆಯನ್ನು ಹೇಗೆ ಗಾಢವಾಗಿಸಬಹುದು ಎಂಬುದನ್ನು ಚರ್ಚಿಸಿದರು.
5. ಅಂತರರಾಷ್ಟ್ರೀಯ ಪರಿಸ್ಥಿತಿಯು ಗಮನಾರ್ಹವಾದ ಮರು ಹೊಂದಾಣಿಕೆಗೆ ಸಾಕ್ಷಿಯಾಗಿದೆ ಎಂಬ ಅಭಿಪ್ರಾಯವನ್ನು ಉಭಯನಾಯಕರು ಹಂಚಿಕೊಂಡರು. ಭಾರತ ಮತ್ತು ಚೀನಾ ಶಾಂತಿಯುತ, ಸುರಕ್ಷಿತ ಮತ್ತು ಸಮೃದ್ಧ ಜಗತ್ತಿಗಾಗಿ ಕೆಲಸ ಮಾಡುವ ಸಾಮಾನ್ಯ ಉದ್ದೇಶವನ್ನು ಹೊಂದಿವೆ, ಇದರಲ್ಲಿ ಎಲ್ಲಾ ದೇಶಗಳು ತಮ್ಮ ಅಭಿವೃದ್ಧಿಯನ್ನು ನಿಯಮ ಆಧಾರಿತ ಅಂತರರಾಷ್ಟ್ರೀಯ ಕ್ರಮದಲ್ಲಿ ಮುಂದುವರಿಸಬಹುದು.
6. ಭಾರತ ಮತ್ತು ಚೀನಾಗಳು ಪ್ರಸ್ತುತ ಅಂತರರಾಷ್ಟ್ರೀಯ ಸನ್ನಿವೇಶದಲ್ಲಿ ಸ್ಥಿರತೆಗೆ ಕಾರಣವಾಗಿವೆ ಮತ್ತು ತಮ್ಮ ಭಿನ್ನಾಭಿಪ್ರಾಯಗಳನ್ನು ವಿವೇಕದಿಂದ ನಿರ್ವಹಿಸುತ್ತಾರೆ ಮತ್ತು ಯಾವುದೇ ವಿಷಯದ ಬಗ್ಗೆ ಭಿನ್ನಾಭಿಪ್ರಾಯಗಳು ವಿವಾದಗಳಾಗಲು ಅವಕಾಶ ನೀಡುವುದಿಲ್ಲ ಎಂದು ಏಪ್ರಿಲ್ 2018 ರಲ್ಲಿ ಚೀನಾದ ವುಹಾನ್‌ನಲ್ಲಿ ನಡೆದ ಮೊದಲ ಅನೌಪಚಾರಿಕ ಶೃಂಗಸಭೆಯಲ್ಲಿ ಮೂಡಿದ ಒಮ್ಮತದ ಬಗ್ಗೆ ಎರಡೂ ಕಡೆಯವರು ಪುನರುಚ್ಚರಿಸಿದರು.
7. 21 ನೇ ಶತಮಾನದ ವಾಸ್ತವಗಳನ್ನು ಪ್ರತಿಬಿಂಬಿಸುವ ಸುಧಾರಣೆಗಳ ಮೂಲಕವೂ ನಿಯಮಗಳ ಆಧಾರಿತ ಮತ್ತು ಅಂತರ್ಗತ ಅಂತರರಾಷ್ಟ್ರೀಯ ಕ್ರಮವನ್ನು ಸಂರಕ್ಷಿಸಲು ಮತ್ತು ಮುನ್ನಡೆಸಲು ಭಾರತ ಮತ್ತು ಚೀನಾಗಳಿಗೆ ಸಾಮಾನ್ಯ ಆಸಕ್ತಿ ಇದೆ ಎಂದು ನಾಯಕರು ಗುರುತಿಸಿದ್ದಾರೆ. ಜಾಗತಿಕವಾಗಿ ಒಪ್ಪಿದ ವ್ಯಾಪಾರ ಅಭ್ಯಾಸಗಳು ಮತ್ತು ರೂಢಿಗಳನ್ನು ಪ್ರಶ್ನಿಸಲಾಗುತ್ತಿರುವ ಸಮಯದಲ್ಲಿ ನಿಯಮ-ಆಧಾರಿತ ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯನ್ನು ಬೆಂಬಲಿಸುವುದು ಮತ್ತು ಬಲಪಡಿಸುವುದು ಮುಖ್ಯ ಎಂದು ಇಬ್ಬರೂ ಒಪ್ಪಿಕೊಂಡರು. ಭಾರತ ಮತ್ತು ಚೀನಾ ಎಲ್ಲಾ ದೇಶಗಳಿಗೆ ಅನುಕೂಲವಾಗುವಂತಹ ಮುಕ್ತ ಮತ್ತು ಅಂತರ್ಗತ ವ್ಯಾಪಾರ ವ್ಯವಸ್ಥೆಗಳಿಗಾಗಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸಲಿವೆ.
8. ಹವಾಮಾನ ಬದಲಾವಣೆ ಮತ್ತು ಸುಸ್ಥಿರ ಅಭಿವೃದ್ಧಿಯ ಗುರಿಗಳು ಸೇರಿದಂತೆ ಜಾಗತಿಕ ಅಭಿವೃದ್ಧಿಯ ಸವಾಲುಗಳನ್ನು ಎದುರಿಸಲು ಆಯಾ ದೇಶಗಳಲ್ಲಿ ನಡೆಯುತ್ತಿರುವ ಪ್ರಮುಖ ಪ್ರಯತ್ನಗಳನ್ನು ಉಭಯ ನಾಯಕರು ಒತ್ತಿಹೇಳಿದ್ದಾರೆ. ಈ ನಿಟ್ಟಿನಲ್ಲಿ ಅವರ ವೈಯಕ್ತಿಕ ಪ್ರಯತ್ನಗಳು ಅಂತರರಾಷ್ಟ್ರೀಯ ಸಮುದಾಯವು ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂದು ಅವರು ಒತ್ತಿ ಹೇಳಿದರು.
9. ಭಯೋತ್ಪಾದನೆಯು ಎಲ್ಲರಿಗೂ ಬೆದರಿಕೆಯನ್ನುಂಟುಮಾಡುತ್ತಿದೆ ಎಂದು ಇಬ್ಬರೂ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ. ವಿಶ್ವದಾದ್ಯಂತ ಭಯೋತ್ಪಾದಕ ಗುಂಪುಗಳಿಗೆ ತರಬೇತಿ, ಹಣಕಾಸು ಮತ್ತು ಬೆಂಬಲ ನೀಡುವ ವಿರುದ್ಧ ಮತ್ತು ತಾರತಮ್ಯರಹಿತ ಆಧಾರದ ಮೇಲೆ ಅಂತರರಾಷ್ಟ್ರೀಯ ಸಮುದಾಯವು ಚೌಕಟ್ಟನ್ನು ಬಲಪಡಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ದೊಡ್ಡ ಮತ್ತು ವೈವಿಧ್ಯತೆಯ ರಾಷ್ಟ್ರಗಳಾಗಿ ಜಂಟಿ ಪ್ರಯತ್ನಗಳನ್ನು ಮುಂದುವರೆಸುವ ಮಹತ್ವವನ್ನು ಅವರು ಗುರುತಿಸಿದರು.
10. ದೊಡ್ಡ ಪರಂಪರೆಗಳನ್ನು ಹೊಂದಿರುವ ಪ್ರಮುಖ ಸಮಕಾಲೀನ ನಾಗರೀಕತೆಗಳಾಗಿ, ಎರಡೂ ದೇಶಗಳ ಜನರ ನಡುವೆ ಸಾಂಸ್ಕೃತಿಕ ತಿಳುವಳಿಕೆಯನ್ನು ಬೆಳೆಸುವ ಸಲುವಾಗಿ ಮಾತುಕತೆಯನ್ನು ಹೆಚ್ಚಿಸುವುದು ಮುಖ್ಯವೆಂದು ಉಭಯ ನಾಯಕರು ಭಾವಿಸಿದರು. ಇತಿಹಾಸದ ಪ್ರಮುಖ ನಾಗರೀಕತೆಗಳಾಗಿ, ವಿಶ್ವದ ಇತರ ಭಾಗಗಳಲ್ಲಿನ ಸಂಸ್ಕೃತಿಗಳು ಮತ್ತು ನಾಗರಿಕತೆಗಳ ನಡುವೆ ಹೆಚ್ಚಿನ ಸಂವಾದ ಮತ್ತು ತಿಳುವಳಿಕೆಯನ್ನು ಹೆಚ್ಚಿಸಲು ಒಟ್ಟಾಗಿ ಕೆಲಸ ಮಾಡಬಹುದು ಎಂದು ಇಬ್ಬರೂ ನಾಯಕರು ಒಪ್ಪಿಕೊಂಡರು.
11. ಪ್ರಾದೇಶಿಕ ಸಮೃದ್ಧಿ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಈ ಪ್ರದೇಶದಲ್ಲಿ ಮುಕ್ತ, ಅಂತರ್ಗತ, ಸಮೃದ್ಧ ಮತ್ತು ಸ್ಥಿರ ವಾತಾವರಣ ಮುಖ್ಯ ಎಂಬ ಅಭಿಪ್ರಾಯವನ್ನು ಅವರು ಹಂಚಿಕೊಂಡರು. ಪರಸ್ಪರ ಲಾಭದಾಯಕ ಮತ್ತು ಸಮತೋಲಿತ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವಕ್ಕಾಗಿ ಮಾತುಕತೆಗಳ ಮಹತ್ವದ ಬಗ್ಗೆಯೂ ಅವರು ಸಮ್ಮತಿ ಸೂಚಿಸಿದರು.
12. ಕಳೆದ ಎರಡು ಸಹಸ್ರಮಾನಗಳಲ್ಲಿ ಮಹತ್ವದ ಸಮುದ್ರ ಸಂಪರ್ಕಗಳನ್ನು ಒಳಗೊಂಡಂತೆ ಭಾರತ ಮತ್ತು ಚೀನಾ ನಡುವಿನ ಬಹುಕಾಲದ ವಾಣಿಜ್ಯ ಸಂಪರ್ಕಗಳು ಮತ್ತು ಜನರು- ಜನರ ಸಂಪರ್ಕಗಳ ಬಗ್ಗೆ ಇಬ್ಬರೂ ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಈ ನಿಟ್ಟಿನಲ್ಲಿ ಉಭಯ ನಾಯಕರು ತಮಿಳುನಾಡು ಮತ್ತು ಫುಜಿಯಾನ್ ಪ್ರಾಂತ್ಯದ ನಡುವೆ ಸಹೋದರಿ-ರಾಜ್ಯ ಸಂಬಂಧಗಳನ್ನು ಸ್ಥಾಪಿಸಲು ಒಪ್ಪಿದರು. ಅಜಂತಾ ಮತ್ತು ಡನ್‌ಹುವಾಂಗ್ ನಡುವಿನ ಅನುಭವದ ಹಾದಿಯಲ್ಲಿ ಮಹಾಬಲಿಪುರಂ ಮತ್ತು ಫುಜಿಯಾನ್ ಪ್ರಾಂತ್ಯದ ನಡುವಿನ ಸಂಪರ್ಕವನ್ನು ಅಧ್ಯಯನ ಮಾಡಲು ಅಕಾಡೆಮಿ ಸ್ಥಾಪಿಸುವ ಸಾಧ್ಯತೆ ಮತ್ತು ಶತಮಾನಗಳಿಂದ ನಮ್ಮ ವ್ಯಾಪಕ ಸಂಪರ್ಕಗಳ ದೃಷ್ಟಿಯಿಂದ ಚೀನಾ ಮತ್ತು ಭಾರತದ ನಡುವಿನ ಕಡಲ ಸಂಪರ್ಕಗಳ ಕುರಿತು ಸಂಶೋಧನೆ ನಡೆಸುವ ಬಗ್ಗೆ ಚರ್ಚಿಸಿದರು.
13. ತಮ್ಮ ಆರ್ಥಿಕತೆಯ ಅಭಿವೃದ್ಧಿಯ ಗುರಿಗಳ ಬಗ್ಗೆ ಇಬ್ಬರೂ ನಾಯಕರು ಪರಸ್ಪರರ ದೃಷ್ಟಿಕೋನವನ್ನು ಹಂಚಿಕೊಂಡರು. ಭಾರತ ಮತ್ತು ಚೀನಾದ ಏಕಕಾಲಿಕ ಅಭಿವೃದ್ಧಿಯು ಪರಸ್ಪರ ಲಾಭದಾಯಕ ಅವಕಾಶಗಳನ್ನು ಒದಗಿಸುತ್ತದೆ ಎಂದು ಅವರು ಒಪ್ಪಿಕೊಂಡರು. ಎರಡೂ ಕಡೆಯವರು ಸಕಾರಾತ್ಮಕ, ಪ್ರಾಯೋಗಿಕ ಮತ್ತು ಮುಕ್ತ ಮನೋಭಾವವನ್ನು ಅಳವಡಿಸಿಕೊಳ್ಳುವುದನ್ನು ಮುಂದುವರೆಸುತ್ತಾರೆ ಮತ್ತು ಅವರ ಸ್ನೇಹ ಮತ್ತು ಸಹಕಾರದ ಸಾಮಾನ್ಯ ನಿರ್ದೇಶನಕ್ಕೆ ಅನುಗುಣವಾಗಿ ಪರಸ್ಪರರ ನೀತಿಗಳು ಮತ್ತು ಕಾರ್ಯಗಳ ಮೆಚ್ಚುಗೆಯನ್ನು ಹೆಚ್ಚಿಸುತ್ತಾರೆ. ಈ ನಿಟ್ಟಿನಲ್ಲಿ, ಪರಸ್ಪರ ಆಸಕ್ತಿಯ ಎಲ್ಲಾ ವಿಷಯಗಳ ಬಗ್ಗೆ ಕಾರ್ಯತಂತ್ರದ ಸಂವಹನವನ್ನು ಹೆಚ್ಚಿಸಲು ಮತ್ತು ಸಂವಾದ ಕಾರ್ಯವಿಧಾನಗಳನ್ನು ಪೂರ್ಣವಾಗಿ ಬಳಸಿಕೊಳ್ಳುವ ಮೂಲಕ ಉನ್ನತ ಮಟ್ಟದ ವಿನಿಮಯದ ಆವೇಗವನ್ನು ಮುಂದುವರಿಸಲು ಅವರು ಒಪ್ಪಿಕೊಂಡರು.
14. ಸಂಬಂಧಗಳ ಸಕಾರಾತ್ಮಕ ನಿರ್ದೇಶನವು ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುವ ಸಾಧ್ಯತೆಗಳನ್ನು ತೆರೆದಿಟ್ಟಿದೆ ಎಂಬುದು ನಾಯಕರ ಅಭಿಪ್ರಾಯವಾಗಿತ್ತು. ಈ ಪ್ರಯತ್ನಕ್ಕೆ ಎರಡೂ ದೇಶಗಳಲ್ಲಿ ಬಲವಾದ ಸಾರ್ವಜನಿಕ ಬೆಂಬಲ ಬೇಕು ಎಂದು ಅವರು ಒಪ್ಪಿಕೊಂಡರು. ಈ ಹಿನ್ನೆಲೆಯಲ್ಲಿ ಉಭಯ ನಾಯಕರು 2020 ಅನ್ನು ಭಾರತ-ಚೀನಾ ಸಾಂಸ್ಕೃತಿಕ ಮತ್ತು ಜನರ- ಜನರ ನಡುವಿನ ವಿನಿಮಯ ವರ್ಷ ಎಂದು ಹೆಸರಿಸಲು ನಿರ್ಧರಿಸಿದರು. 2020 ರಲ್ಲಿ ಭಾರತ-ಚೀನಾ ಸಂಬಂಧಗಳ ಸ್ಥಾಪನೆಯ 70 ನೇ ವಾರ್ಷಿಕೋತ್ಸವವನ್ನು ಒಳಗೊಂಡಂತೆ ಎಲ್ಲಾ ಹಂತಗಳಲ್ಲಿ ಆಯಾ ಶಾಸಕಾಂಗಗಳು, ರಾಜಕೀಯ ಪಕ್ಷಗಳು, ಸಾಂಸ್ಕೃತಿಕ ಮತ್ತು ಯುವ ಸಂಘಟನೆಗಳು ಮತ್ತು ಮಿಲಿಟರಿಗಳ ನಡುವೆ ವಿನಿಮಯವನ್ನು ಗಾಢವಾಗಿಸಲು ಸಂಪೂರ್ಣವಾಗಿ ಬಳಸಿಕೊಳ್ಳಲಾಗುವುದು ಎಂದು ಒಪ್ಪಿಕೊಂಡರು. ರಾಜತಾಂತ್ರಿಕ ಸಂಬಂಧಗಳ 70 ನೇ ವಾರ್ಷಿಕೋತ್ಸವವನ್ನು ಆಚರಿಸಲು ಉಭಯ ದೇಶಗಳು ಹಡಗು ಪ್ರಯಾಣದ ಸಮಾವೇಶ ಸೇರಿದಂತೆ 70 ಚಟುವಟಿಕೆಗಳನ್ನು ಆಯೋಜಿಸಲಿದ್ದು ಅದು ಎರಡು ನಾಗರಿಕತೆಗಳ ನಡುವಿನ ಐತಿಹಾಸಿಕ ಸಂಪರ್ಕವನ್ನು ಪತ್ತೆ ಮಾಡುತ್ತದೆ.
15. ಆರ್ಥಿಕ ಸಹಕಾರವನ್ನು ಇನ್ನಷ್ಟು ಗಾಢವಾಗಿಸಲು ಮತ್ತು ಅಭಿವೃದ್ಧಿ ಸಹಭಾಗಿತ್ವವನ್ನು ಹೆಚ್ಚಿಸುವ ಪ್ರಯತ್ನಗಳ ಅನ್ವೇಷಣೆಯಲ್ಲಿ ಮತ್ತು ವರ್ಧಿತ ವ್ಯಾಪಾರ ಮತ್ತು ವಾಣಿಜ್ಯ ಸಂಬಂಧಗಳನ್ನು ಸಾಧಿಸುವ ಉದ್ದೇಶದಿಂದ, ಉಭಯ ದೇಶಗಳ ನಡುವಿನ ವ್ಯಾಪಾರವನ್ನು ಉತ್ತಮವಾಗಿ ಸಮತೋಲನಗೊಳಿಸಲು ಉನ್ನತ ಮಟ್ಟದ ಆರ್ಥಿಕ ಮತ್ತು ವ್ಯಾಪಾರ ಮಾತುಕತೆ ಕಾರ್ಯವಿಧಾನವನ್ನು ಸ್ಥಾಪಿಸಲು ಉಭಯ ನಾಯಕರು ನಿರ್ಧರಿಸಿದರು ಉತ್ಪಾದನಾ ಸಹಭಾಗಿತ್ವದ ಅಭಿವೃದ್ಧಿಯ ಮೂಲಕ ಗುರುತಿಸಲ್ಪಟ್ಟ ಕ್ಷೇತ್ರಗಳಲ್ಲಿ ಪರಸ್ಪರ ಹೂಡಿಕೆಗಳನ್ನು ಉತ್ತೇಜಿಸಲು ಅವರು ಸಮ್ಮತಿಸಿದರು ಮತ್ತು ಉನ್ನತ ಮಟ್ಟದ ಆರ್ಥಿಕ ಮತ್ತು ವ್ಯಾಪಾರ ಮಾತುಕತೆಯ ಮೊದಲ ಸಭೆಯಲ್ಲಿ ಈ ಆಲೋಚನೆಯನ್ನು ಅಭಿವೃದ್ಧಿಪಡಿಸುವ ಹೊಣೆಗಾರಿಕೆಯನ್ನು ತಮ್ಮ ಅಧಿಕಾರಿಗಳಿಗೆ ವಹಿಸಿದರು.
16. ಗಡಿ ಪ್ರಶ್ನೆ ಸೇರಿದಂತೆ ಬಾಕಿಯಿರುವ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ಇಬ್ಬರೂ ನಾಯಕರು ವಿನಿಮಯ ಮಾಡಿಕೊಂಡರು. ವಿಶೇಷ ಪ್ರತಿನಿಧಿಗಳ ಕೆಲಸವನ್ನು ಅವರು ಸ್ವಾಗತಿಸಿದರು ಮತ್ತು 2005 ರಲ್ಲಿ ಉಭಯ ಕಡೆಯವರು ಒಪ್ಪಿದ ರಾಜಕೀಯ ನಿಯತಾಂಕಗಳು ಮತ್ತು ಮಾರ್ಗದರ್ಶಿ ಸೂತ್ರಗಳ ಆಧಾರದ ಮೇಲೆ ನ್ಯಾಯಯುತ, ಸಮಂಜಸವಾದ ಮತ್ತು ಪರಸ್ಪರ ಸ್ವೀಕಾರಾರ್ಹವಾದ ಇತ್ಯರ್ಥಕ್ಕಾಗಿ ಪರಸ್ಪರ ಒಪ್ಪಿತ ಚೌಕಟ್ಟನ್ನು ತಲುಪುವ ಪ್ರಯತ್ನವನ್ನು ಮುಂದುವರೆಸಬೇಕೆಂದು ಅವರು ಒತ್ತಾಯಿಸಿದರು. ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ಖಾತ್ರಿಪಡಿಸಿಕೊಳ್ಳಲು ಪ್ರಯತ್ನಗಳು ಮುಂದುವರಿಯಲಿವೆ ಮತ್ತು ಈ ಉದ್ದೇಶ ಸಾಧನೆಗಾಗಿ ಹೆಚ್ಚುವರಿ ವಿಶ್ವಾಸಾರ್ಹ ಕ್ರಮಗಳ ಬಗ್ಗೆ ಎರಡೂ ಕಡೆಯವರು ಮುಂದುವರಿಯಲಿದ್ದಾರೆ.
17. ಅನೌಪಚಾರಿಕ ಶೃಂಗಸಭೆಯ ಅಭ್ಯಾಸವನ್ನು ಸಕಾರಾತ್ಮಕ ದೃಷ್ಟಿಯಿಂದ ಮಾತುಕತೆಯನ್ನು ಗಾಢವಾಗಿಸಲು ಮತ್ತು ನಾಯಕರ ಮಟ್ಟದಲ್ಲಿ ಪರಸ್ಪರ ತಿಳುವಳಿಕೆಯನ್ನು ಉತ್ತೇಜಿಸಲು ವುಹಾನ್ ಸ್ಪಿರಿಟ್ ಮತ್ತು ಚೆನ್ನೈ ಕನೆಕ್ಟ್’ ಗೆ ಅನುಗುಣವಾಗಿ ಒಂದು ಪ್ರಮುಖ ಅವಕಾಶವನ್ನು ಒದಗಿಸಲಾಗಿದೆ ಎಂದು ಪ್ರಧಾನಮಂತ್ರಿ ಮೋದಿ ಮತ್ತು ಅಧ್ಯಕ್ಷ ಕ್ಸಿ ಅವರು ಅಭಿಪ್ರಾಯಪಟ್ಟರು. ಭವಿಷ್ಯದಲ್ಲಿ ಈ ಅಭ್ಯಾಸವನ್ನು ಮುಂದುವರಿಸಲು ಅವರು ಒಪ್ಪಿದರು. 3 ನೇ ಅನೌಪಚಾರಿಕ ಶೃಂಗಸಭೆಗೆ ಚೀನಾಗೆ ಭೇಟಿ ನೀಡುವಂತೆ ಅಧ್ಯಕ್ಷ ಕ್ಸಿ ಪ್ರಧಾನಿ ಮೋದಿಯವರನ್ನು ಆಹ್ವಾನಿಸಿದರು. ಪ್ರಧಾನಿ ಮೋದಿಯವರು ಈ ಆಹ್ವಾನವನ್ನು ಸ್ವೀಕರಿಸಿದರು.
(Release ID: 1588333)
Visitor Counter : 215