ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ಅವರನ್ನು ಭೇಟಿ ಮಾಡಿದ 2018ನೇ ಸಾಲಿನ ಐಪಿಎಸ್ ಪ್ರೊಬೇಷನರಿ ಅಧಿಕಾರಿಗಳು

Posted On: 09 OCT 2019 6:36PM by PIB Bengaluru

ಪ್ರಧಾನಿ ಅವರನ್ನು ಭೇಟಿ ಮಾಡಿದ 2018ನೇ ಸಾಲಿನ ಐಪಿಎಸ್ ಪ್ರೊಬೇಷನರಿ ಅಧಿಕಾರಿಗಳು

 

2018ನೇ ಸಾಲಿನ 126 ಐಪಿಎಸ್ ಪ್ರೊಬೇಷನರಿ ಅಧಿಕಾರಿಗಳು ನವದೆಹಲಿಯಲ್ಲಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ಪ್ರೊಬೇಷನರಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಪ್ರಧಾನಿ, ನಮ್ಮ ದೇಶದ ಅಭಿವೃದ್ಧಿಗೆ ಅಹರ್ನಿಶಿ ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಯುವ ಅಧಿಕಾರಿಗಳನ್ನು ಉತ್ತೇಜಿಸಿದರು.

ಅಧಿಕಾರಿಗಳು ಬದ್ದತೆಯಿಂದ ಮತ್ತು ಸೇವಾ ಮನೋಭಾವದೊಂದಿಗೆ ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಪ್ರಧಾನಿ ಹೇಳಿದರು. ಸಾಮಾನ್ಯ ನಾಗರಿಕರ ಜೊತೆ ಸಂಪರ್ಕ ಹೊಂದಿರುವ ಪೊಲೀಸ್ ಪಡೆ ವರ್ತನೆ ಬಗ್ಗೆ ಅವರು ಒತ್ತಿ ಹೇಳಿದರು. ಪ್ರತಿಯೊಬ್ಬ ಅಧಿಕಾರಿಯೂ ಪೊಲೀಸ್ ಪಡೆ ಬಗೆಗಿನ ನಾಗರಿಕರ ಮನೋಭಾವವನ್ನು ಅರ್ಥೈಸಿಕೊಳ್ಳಬೇಕು ಮತ್ತು ಪೊಲೀಸ್ ಪಡೆ ನಾಗರಿಕ ಸ್ನೇಹಿ ಮತ್ತು ಸುಲಭವಾಗಿ ಅವರ ಮೊರೆ ಹೋಗಬಹುದು ಎಂಬ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ಕರೆ ನೀಡಿದರು.

ಪ್ರೊಬೇಷನರಿ ಐಪಿಎಸ್  ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ, ಪೊಲೀಸರ ಪಾತ್ರ ಸದಾ ಅಪರಾಧಗಳನ್ನು ತಡೆಗಟ್ಟುವತ್ತ ಇರಬೇಕು ಎಂದರು. ಅವರು, ಆಧುನಿಕ ಪೊಲೀಸ್ ಪಡೆ ಸೃಷ್ಟಿಯಲ್ಲಿ ತಂತ್ರಜ್ಞಾನದ ಪ್ರಾಮುಖ್ಯತೆಯನ್ನು ಅವರು ಬಲವಾಗಿ ಪ್ರತಿಪಾದಿಸಿದರು. ಅಶೋತ್ತರ ಜಿಲ್ಲೆಗಳನ್ನು ಪರಿವರ್ತಿಸುವುದು ಮತ್ತು ಆ ಮೂಲಕ ಅವುಗಳನ್ನು ಸಾಮಾಜಿಕ ಬದಲಾವಣೆಯ ಅಸ್ತ್ರಗಳನ್ನಾಗಿ ಮಾಡಿಕೊಳ್ಳುವುಲ್ಲಿ ಪೊಲೀಸರ ಪಾತ್ರದ ಬಗ್ಗೆ ಪ್ರಧಾನಮಂತ್ರಿ ಅವರು ಚರ್ಚೆ ನಡೆಸಿದರು. 2018ನೇ ಬ್ಯಾಚ್ ನಲ್ಲಿ ಹೆಚ್ಚಿನ ಮಹಿಳಾ ಪ್ರೊಬೇಷನರಿಗಳು ಇರುವುದನ್ನು ಅವರು ಶ್ಲಾಘಿಸಿದರು. ಅತಿ ಹೆಚ್ಚಿನ ಸಂಖ್ಯೆಯ ಮಹಿಳಾ ಪೊಲೀಸ್ ಇರುವುದು ಪೊಲೀಸ್ ವ್ಯವಸ್ಥೆ ಮತ್ತು ರಾಷ್ಟ್ರ ನಿರ್ಮಾಣದ ಮೇಲೆ ಭಾರಿ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಪ್ರಧಾನಿ ಹೇಳಿದರು.

ಅಧಿಕಾರಿಗಳ ಭವಿಷ್ಯ ಉಜ್ವಲವಾಗಿರಲಿ ಎಂದು ಆಶಿಸಿದ ಪ್ರಧಾನಮಂತ್ರಿ, ಅಧಿಕಾರಿಗಳು ಮೊದಲು ತಮ್ಮ ಮೇಲೆ ತಾವು ನಂಬಿಕೆ ಹೊಂದಿರಬೇಕು ಎಂದರು. ಆತ್ಮ ವಿಶ್ವಾಸ ಮತ್ತು ಸಹಜ ಬಲದಿಂದ ಹಾಗೂ ಅಧಿಕೃತ ತರಬೇತಿ ಮೂಲಕ ಅಧಿಕಾರಿಗಳು ದೈನಂದಿನ ಸವಾಲುಗಳನ್ನು ಎದುರಿಸಲು ಸಜ್ಜಾಗಿರುತ್ತಾರೆ ಎಂದು ಪ್ರಧಾನಿ ಹೇಳಿದರು.

 

***


(Release ID: 1588015) Visitor Counter : 111