ಸಂಪುಟ

ನೂತನ ಸಂಪುಟ ಕಾರ್ಯದರ್ಶಿಯಾಗಿ  ಶ್ರೀ ರಾಜೀವ್ ಗೌಬಾ ಅಧಿಕಾರ ಸ್ವೀಕಾರ

Posted On: 30 AUG 2019 4:15PM by PIB Bengaluru

ನೂತನ ಸಂಪುಟ ಕಾರ್ಯದರ್ಶಿಯಾಗಿ  ಶ್ರೀ ರಾಜೀವ್ ಗೌಬಾ ಅಧಿಕಾರ ಸ್ವೀಕಾರ

 

ಶ್ರೀ ಪಿ.ಕೆ ಸಿನ್ಹಾ ಅವರ ಸೇವಾ ನಿವೃತ್ತಿಯ ಬಳಿಕ ಶ್ರೀ ರಾಜೀವ್ ಗೌಬಾ ಅವರು ಇಂದು ಭಾರತ ಸರಕಾರದ ಸಂಪುಟ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದರು. ಜಾರ್ಖಂಡ ಕೆಡರಿನ (1982 ರ ತಂಡ) ಐ.ಎ.ಎಸ್. ಅಧಿಕಾರಿಯಾಗಿರುವ ಅವರು  ಕೇಂದ್ರ ಗೃಹ ಕಾರ್ಯದರ್ಶಿ, ಭಾರತ ಸರಕಾರದ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮತ್ತು ಜಾರ್ಖಂಡದ ಮುಖ್ಯ ಕಾರ್ಯದರ್ಶಿಯಾಗಿ  ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಅವರು ಭಾರತದ ಪ್ರತಿನಿಧಿಯಾಗಿದ್ದರು.

ಭದ್ರತೆ, ಆಡಳಿತ ಮತ್ತು ಕೇಂದ್ರ , ರಾಜ್ಯ ಸರಕಾರಗಳಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಸಂಘಟನೆಗಳಲ್ಲಿ ಗಳಿಸಿದ ಹಣಕಾಸು ಪರಿಣತಿಯನ್ನು ಒಳಗೊಂಡಂತೆ ವಿಸ್ತಾರ ವ್ಯಾಪ್ತಿಯ ಅನುಭವದೊಂದಿಗೆ ಶ್ರೀ ಗೌಬಾ ಅವರು ಹೊಸ ಜವಾಬ್ದಾರಿಯ ಹೊಣೆ ಹೊತ್ತುಕೊಂಡಿದ್ದಾರೆ.

ವಿಧಿ 370 ನ್ನು ತೆಗೆದು ಹಾಕುವ ಹಾಗೂ ಜಮ್ಮು ಮತ್ತು ಕಾಶ್ಮೀರವನ್ನು ಪುನರ್ ಸಂಘಟನೆ ಮಾಡುವ  ಕೇಂದ್ರ ಸರಕಾರದ ನಿರ್ಧಾರವನ್ನು ಅನುಷ್ಟಾನಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದವರಲ್ಲಿ ಇವರು ಒಬ್ಬರು. ಮತ್ತು ಅವರು ಯಾವುದೇ ಲೋಪ, ಅಡೆತಡೆಗಳಿಲ್ಲದೆ ಸುಸೂತ್ರವಾಗಿ ಈ ನಿರ್ಧಾರವನ್ನು ಅನುಷ್ಟಾನಿಸಿದ್ದರು. ಎಂ.ಎಚ್. ಎ. ಯಲ್ಲಿ ಈ  ಉಪಕ್ರಮಗಳನ್ನು ರೂಪಿಸುವಲ್ಲಿ,  ವಿವರಗಳನ್ನು ತಯಾರಿಸುವಲ್ಲಿ  ಮತ್ತು ಅನುಷ್ಟಾನಕ್ಕೆ ತರುವಲ್ಲಿ ಅವರು ಮುಂಚೂಣಿ ಪಾತ್ರವನ್ನು ವಹಿಸಿದ್ದರು.  ಸಣ್ಣ ತಂಡದೊಂದಿಗೆ ಅವರು ಆಡಳಿತಾತ್ಮಕ ಮತ್ತು ಭದ್ರತಾ ವ್ಯವಸ್ಥೆಗಳನ್ನು ರೂಪಿಸುವಾಗ  ಕಾನೂನು ಮತ್ತು ಸಾಂವಿಧಾನಿಕ ಅಂಶಗಳಿಗೆ ಅಂತಿಮ ರೂಪವನ್ನು ಕೊಟ್ಟಿದ್ದರು.

ಇದಕ್ಕೆ ಮೊದಲು ಎಂ.ಎಚ್.ಎ. ಯಲ್ಲಿ ಅವರು ಹೆಚ್ಚುವರಿ ಕಾರ್ಯದರ್ಶಿಯಾಗಿ ಅಧಿಕಾರದಲ್ಲಿದ್ದಾಗ 2015 ರಲ್ಲಿ ಎಲ್.ಡಬ್ಲ್ಯು.ಇ. ನಿಭಾಯಿಸಲು ಬಹು ಆಯಾಮದ ಧೀರ್ಘಕಾಲೀನ ಯೋಜನೆಗಳನ್ನು ರೂಪಿಸಿದ್ದರಲ್ಲದೆ ಅದರ ಅನುಷ್ಟಾನದ ನೇತೃತ್ವವನ್ನು ವಹಿಸಿದ್ದರು. ಇದರ ಪರಿಣಾಮವಾಗಿ ಮಾವೋವಾದಿಗಳ ಪ್ರಭಾವ ವಲಯ ವಿಸ್ತರಣೆ ಕುಂಠಿತವಾಗುತ್ತಾ ಬಂದಿತು.

ಎಂ.ಎಚ್.ಎ. ಯಲ್ಲದೆ ಶ್ರೀ ಗೌಬಾ ಅವರು ಕೇಂದ್ರ ಸರಕಾರದ ನಗರಾಭಿವೃದ್ದಿ, ರಕ್ಷಣೆ, ಪರಿಸರ, ಮತ್ತು ಅರಣ್ಯ ಹಾಗು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಗಳಲ್ಲಿ ಕೆಲಸ ಮಾಡಿದ್ದಾರೆ.

ಜಾರ್ಖಂಡದ ಮುಖ್ಯ ಕಾರ್ಯದರ್ಶಿಯಾಗಿ ಶ್ರೀ ಗೌಬಾ ಅವರು ಪ್ರಮುಖ ಆಡಳಿತ ಮತ್ತು ಆರ್ಥಿಕ ಸುಧಾರಣೆಗಳನ್ನು ಆರಂಭಿಸಿದರು.  ವೃತ್ತಿಪರರು ಪಾರ್ಶ್ವ (ಲ್ಯಾಟರಲ್ ಎಂಟ್ರಿ ) ಪ್ರವೇಶದ ಮೂಲಕ ಸರಕಾರಕ್ಕೆ ಬರುವಂತೆ ಮಾಡುವಲ್ಲಿ ,  ಪುನಾರಚನೆ ಮತ್ತು ಸಚಿವಾಲಯಗಳ ಸಿಬ್ಬಂದಿ ಸಂಖ್ಯೆಯನ್ನು ಕಡಿತಗೊಳಿಸುವಲ್ಲಿ ಹಾಗು ಕಾರ್ಮಿಕ ಸುಧಾರಣೆಗಳನ್ನು ಆರಂಭಿಸುವಲ್ಲಿ ಅವರು ಶ್ರಮಿಸಿದ್ದರು. ಇದರ ಪರಿಣಾಮವಾಗಿ ಜಾರ್ಖಂಡವು ಅವರ ಅವಧಿಯಲ್ಲಿ ವ್ಯಾಪಾರೋದ್ಯಮಕ್ಕೆ ಅನುಕೂಲಕರ ತಾಣ ಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಮೂರನೆಯ ಸ್ಥಾನಕ್ಕೆ ನೆಗೆಯಿತು.

ಶ್ರೀ ಗೌಬಾ ಅವರು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಐ.ಎಂ.ಎಫ್ ಮಂಡಳಿಯಲ್ಲಿ ನಾಲ್ಕು ವರ್ಷ ಕಾಲ ಭಾರತವನ್ನು ಪ್ರತಿನಿಧಿಸಿದ್ದರು.

 



(Release ID: 1583751) Visitor Counter : 582