ಪ್ರಧಾನ ಮಂತ್ರಿಯವರ ಕಛೇರಿ

ಬೆಹರಿನ್ ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

Posted On: 24 AUG 2019 11:42PM by PIB Bengaluru

ಬೆಹರಿನ್ ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಬೆಹರಿನ್ ನಲ್ಲಿಯ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು.

“ಬೆಹರಿನ್ ಗೆ ನನ್ನ ಭೇಟಿ ಸರಕಾರದ ಮುಖ್ಯಸ್ಥನಾಗಿ, ಪ್ರಧಾನ ಮಂತ್ರಿಯಾಗಿ ಇರಬಹುದು, ಆದರೆ ನನ್ನ ಉದ್ದೇಶ ಇಲ್ಲಿ ನೆಲೆ ನಿಂತಿರುವ ಭಾರತೀಯರನ್ನು ಭೇಟಿಯಾಗಿ, ಮಿಲಿಯಾಂತರ ಬೆಹರಿನ್ ಸ್ನೇಹಿತರ ಜೊತೆ ಸಂವಹನ ನಡೆಸುವುದಾಗಿದೆ.ಇಂದು ಪವಿತ್ರ ಹಬ್ಬ ಜನ್ಮಾಷ್ಟಮಿ ಆಚರಣೆಯಾಗುತ್ತಿದೆ.ಕೊಲ್ಲಿ ವಲಯದಲ್ಲಿ ಜನ್ಮಾಷ್ಟಮಿಯಂದು ಕೃಷ್ಣ ಕಥೆಯನ್ನು ಹೇಳುವ ಪರಂಪರೆ ಈಗಲೂ ಇದೆ ಎಂಬುದಾಗಿ ನನಗೆ ತಿಳಿಸಲಾಗಿದೆ.ನಾಳೆ ನಾನು ಶ್ರೀನಾಥಜೀ ದೇವಾಲಯಕ್ಕೆ ಭೇಟಿ ನೀಡಿ ನಿಮ್ಮೆಲ್ಲರಿಗೆ ಮತ್ತು ನಿಮ್ಮ ಅತಿಥೇಯ ರಾಷ್ಟ್ರಕ್ಕೆ ಸಮೃದ್ಧಿ ಮತ್ತು ಶಾಂತಿಗಾಗಿ ಪ್ರಾರ್ಥಿಸುತ್ತೇನೆ” ಎಂದು ಪ್ರಧಾನ ಮಂತ್ರಿ ಹೇಳಿದ್ದಾರೆ.

“ಪೂಜ್ಯ ಭಾವನೆಯಿಂದ ಮತ್ತು ಸಾಂಪ್ರದಾಯಿಕ ಸಂಭ್ರಮದಿಂದ ಈ ಸಂದರ್ಭವನ್ನು ಭಾರತದಿಂದ ಬಂದ ಭಕ್ತರು ಮತ್ತು ನೀವು ಹೇಗೆ ಆಚರಿಸುತ್ತೀರಿ ಎಂಬುದು ನನಗೆ ತಿಳಿದಿದೆ. ನಾಳೆ ಈ ದೇವಾಲಯದ ಮರು ಅಭಿವೃದ್ದಿ ಕಾರ್ಯವೂ ಔಪಚಾರಿಕವಾಗಿ ಆರಂಭಗೊಳ್ಳಲಿದೆ ಎಂಬುದು ಸಂತೋಷದ ಸಂಗತಿ” ಎಂದೂ ಪ್ರಧಾನ ಮಂತ್ರಿ ಹೇಳಿದರು.

ಬೆಹರಿನ್ ನಲ್ಲಿ ಭಾರತೀಯರ ಬಗ್ಗೆ ಅವರ ಪ್ರಾಮಾಣಿಕತೆ, ನಿಷ್ಟೆ, ಸಾಮರ್ಥ್ಯ ಮತ್ತು ಬೆಹರಿನ್ ನ ಸಮಾಜೋ ಆರ್ಥಿಕ ಜೀವನಕ್ಕೆ ಕೊಟ್ಟಿರುವ ಕೊಡುಗೆಯ ಬಗ್ಗೆ ಭಾರೀ ಸದಭಿಪ್ರಾಯವಿದೆ ಎಂದೂ ಪ್ರಧಾನ ಮಂತ್ರಿ ಅವರು ಹೇಳಿದರು. “ನೀವು ನಿಮ್ಮ ಕಠಿಣ ದುಡಿಮೆಯ ಕಾರಣದಿಂದಾಗಿ ನಿಮಗಾಗಿ ಇಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದೀರಿ. ನಾವು ಈ ಸದಭಿಪ್ರಾಯವನ್ನು ಇನ್ನಷ್ಟು ಬಲಪಡಿಸಬೇಕಿದೆ. ಇಲ್ಲಿಯ ಸರಕಾರದ ಸಹೋದ್ಯೋಗಿಗಳಿಂದ ಭಾರತೀಯ ಸಹೋದ್ಯೋಗಿಗಳ ಬಗ್ಗೆ ಮೆಚ್ಚುಗೆಯ ಮಾತು ಕೇಳಿದಾಗೆಲ್ಲ , ಇಲ್ಲಿಯ ವ್ಯಾಪಾರೋದ್ಯಮಿಗಳು, ಇಲ್ಲಿ ನೆಲೆ ನಿಂತಿರುವ ಜನರು, ಇಲ್ಲಿ ಕೆಲಸ ಮಾಡುತ್ತಿರುವ ಸಹೋದ್ಯೋಗಿಗಳು ಮೆಚ್ಚುಗೆ ಸೂಚಿಸಿದಾಗೆಲ್ಲ  ನನ್ನ ಹೃದಯ ಸಂತೋಷದಿಂದ ಉಬ್ಬುತ್ತದೆ” ಎಂದೂ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು.

ಇಂದು ಭಾರತದಲ್ಲಿರುವ ಬಹುತೇಕ ಪ್ರತೀ ಕುಟುಂಬವೂ ಬ್ಯಾಂಕಿಂಗ್ ಸೇವೆಗೆ ಜೋಡಿಸಲ್ಪಟ್ಟಿದೆ. ಮೊಬೈಲ್ ಫೋನುಗಳು, ಅಂತರ್ಜಾಲ ಸೌಲಭ್ಯ ಭಾರತದ ಸಾಮಾನ್ಯ ಕುಟುಂಬಕ್ಕೂ ಲಭ್ಯವಾಗಿದೆ.ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ ದರದ ದತ್ತಾಂಶ ಲಭ್ಯತೆ ಇರುವುದು ಭಾರತದಲ್ಲಿ. ಭಾರತದಲ್ಲಿ ಬಹಳಷ್ಟು ಸೇವೆಗಳನ್ನು ಡಿಜಿಟಲ್ ವ್ಯವಸ್ಥೆಯ ಮೂಲಕ ಒದಗಿಸಲು ಪ್ರಯತ್ನಗಳು ನಡೆದಿವೆ.

“ಭಾರತದ ಕನಸುಗಳು , ಭರವಸೆಗಳು, ಆಶೋತ್ತರಗಳು ಈಡೇರಬಲ್ಲವು ಎಂಬ ನಂಬಿಕೆಯನ್ನು ಈಗ ಪ್ರತಿಯೊಬ್ಬ ಭಾರತೀಯರೂ ಹೊಂದತೊಡಗಿದ್ದಾರೆ. “ನಮ್ಮ ಗುರಿಗಳು ಬಹಳ ಎತ್ತರದಲ್ಲಿವೆ, ಆದರೆ ನಿಮಗೆ 130 ಕೋಟಿ ಜನರ ಸಹಕಾರವಿದ್ದರೆ , ನೀವು ಅದರಿಂದ ಉತ್ತೇಜನ ಪಡೆಯುತ್ತೀರಿ.ಭಾರತವಿಂದು ಮುನ್ನಡೆಯುತ್ತಿದೆ, ಇದಕ್ಕೆ ಸರಕಾರದ ಸಹಭಾಗಿತ್ವ ಮಾತ್ರ ಕಾರಣವಲ್ಲ, ಕೋಟ್ಯಾಂತರ ಭಾರತೀಯರ ಸಹಕಾರವೂ ಕಾರಣ. ಸರಕಾರ ಚಾಲಕ ಶಕ್ತಿಯಾಗಿದೆ, ಇದರ ವೇಗವರ್ಧನೆಯನ್ನು ಮಾಡುತ್ತಿರುವವರು ದೇಶದ ಜನತೆ” ಎಂದೂ ಪ್ರಧಾನ ಮಂತ್ರಿ ಅವರು ಹೇಳಿದರು.

“ಭೀಮ್” ಆಪ್, ಯು.ಪಿ.ಐ. ಮತ್ತು ಜನ್ ಧನ್ ಖಾತೆಗಳು ಭಾರತದಲ್ಲಿ ಬ್ಯಾಂಕಿಂಗ್ ಸವಲತ್ತನ್ನು ಸಾಮಾನ್ಯ ನಾಗರಿಕನಿಗೆ ತಲುಪಿಸಿವೆ. ನಮ್ಮ ರುಪೇ ಕಾರ್ಡುಗಳು ವಿಶ್ವದಾದ್ಯಂತ ಹಣಕಾಸು ವ್ಯವಹಾರದ ಆದ್ಯತೆಯ ಮಾಧ್ಯಮಗಳಾಗಿ ಬಳಕೆಯಾಗುತ್ತಿವೆ.ಈಗ ನಮ್ಮ ರುಪೇ ಕಾರ್ಡುಗಳನ್ನು ಜಗತ್ತಿನಾದ್ಯಂತ ಬ್ಯಾಂಕುಗಳು ಮತ್ತು ಮಾರಾಟಗಾರರು ಅಂಗೀಕರಿಸುತ್ತಿದ್ದಾರೆ” ಎಂದು ಪ್ರಧಾನ ಮಂತ್ರಿ ಅವರು ಹೇಳಿದರು.

ಬೆಹರಿನ್ ನಲ್ಲಿ ನೀವು ಶೀಘ್ರದಲ್ಲಿಯೇ ರುಪೇ ಕಾರ್ಡು ಮೂಲಕ ವ್ಯವಹಾರ ನಡೆಸಬಹುದು ಎಂಬ ಸಂಗತಿ ನನಗೆ ಹರ್ಷ ತಂದಿದೆ. ಇಂದು ರುಪೇ ಕಾರ್ಡು ಬಳಕೆಗೆ ಸಂಬಂಧಿಸಿ ತಿಳುವಳಿಕಾ ಒಡಂಬಡಿಕೆಗೆ ಅಂಕಿತ ಹಾಕಲಾಗಿದೆ. ರುಪೇ ಕಾರ್ಡುಗಳ ಮೂಲಕ ಭಾರತದಲ್ಲಿರುವ ನಿಮ್ಮ ಕುಟುಂಬಕ್ಕೆ ಹಣಕಾಸು ಕಳುಹಿಸುವ ಸೌಲಭ್ಯ ಒದಗಿಸುವುದು ನಮ್ಮ ಉದ್ದೇಶವಾಗಿದೆ. ಈಗ ನೀವು ಹೇಳಬಹುದು “ಬೆಹರಿನ್ನಲ್ಲಿದ್ದರೆ ರುಪೇಯೊಂದಿಗೆ ಪಾವತಿ ಮಾಡಿ” ಎಂದು.

ಕಳೆದ ಐದು ವರ್ಷಗಳಲ್ಲಿ ವಿದೇಶದಲ್ಲಿ ವಾಸಿಸುತ್ತಿರುವ ಕೋಟ್ಯಾಂತರ ಭಾರತೀಯರು ಮತ್ತು 130 ಕೋಟಿ ದೇಶವಾಸಿಗಳ ಘನತೆ ಎತ್ತರಿಸಿ ತಲೆ ಎತ್ತಿ ನಡೆಯುವಂತಹ ಸ್ಥಿತಿ ನಿರ್ಮಾಣ ಮಾಡುವುದು ನಮ್ಮ ಇಚ್ಚೆಯಾಗಿತ್ತು. ಇಂದು ವಿಶ್ವವು ಭಾರತವನ್ನು ಗೌರವದಿಂದ ಕಾಣುತ್ತಿದ್ದರೆ , ಅದರ ಹಿಂದಿರುವ ದೊಡ್ಡ ಕಾರಣ ನಿಮ್ಮಂತಹ ಲಕ್ಷಾಂತರ ಸಹಚರರು.

ಭಾರತದಲ್ಲಿಯ ಬೆಳವಣಿಗೆಗಳನ್ನು ಪ್ರಸ್ತಾಪಿಸಿದ ಅವರು, ಭಾರತವೀಗ “ ಏಕ ರಾಷ್ಟ್ರ, ಏಕ ಕಾರ್ಡ್” ನತ್ತ ಹೆಜ್ಜೆ ಹಾಕುತ್ತಿದೆ. ಇದರಿಂದ ಮಿತಿಯಿಲ್ಲದ ಚಲನೆ ಸಾಧ್ಯವಾಗಲಿದೆ. ಇಡೀಯ ದೇಶ ಜಿ.ಎಸ್.ಟಿ. ರೂಪದಲ್ಲಿ ’ಏಕ ರಾಷ್ಟ್ರ, ಏಕ ಜಾಲ (ಗ್ರಿಡ್) “  ಮತ್ತು “ಏಕ ರಾಷ್ಟ್ರ ಏಕ ತೆರಿಗೆ” ವ್ಯವಸ್ಥೆಗೆ ಜೋಡಿಸಲ್ಪಟ್ಟಿದೆ. ಜೀವಿಸಲು ಉತ್ತಮ ವಾತಾವರಣ ಮತ್ತು ವ್ಯಾಪಾರೋದ್ಯಮಕ್ಕೆ ಅನುಕೂಲಕರ ವಾತಾವರಣ ನಿರ್ಮಾಣಕ್ಕೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲಾ ಪರಿಹಾರಗಳನ್ನು ಭಾರತದ ಯುವಕರು ಭಾರತಕ್ಕಾಗಿ ರೂಪಿಸಿದ್ದಾರೆ. “ಜಾಗತಿಕವಾಗಿ ಅನ್ವಯಿಸಬಹುದಾದ ಸ್ಥಳೀಯ ಪರಿಹಾರ” ಗಳನ್ನು ಹುಡುಕುವ ನಿಟ್ಟಿನಲ್ಲಿ ಭಾರತದ ಯುವಕರು ಅತ್ಯಂತ ಶ್ರದ್ಧೆಯಿಂದ ಕಾರ್ಯನಿರತರಾಗಿದ್ದಾರೆ. ಭಾರತದ ಪ್ರತಿಭೆ ಜಾಗತಿಕವಾಗಿ ಪರಿಗಣಿಸಲ್ಪಡುತ್ತಿದೆ. ಜಾಗತಿಕ ಯೋಜನೆಗಳಲ್ಲಿ ಮತ್ತು ಸಂಸ್ಥೆಗಳಲ್ಲಿ ಅದೊಂದು ಅದ್ಭುತದಂತೆ ಕೆಲಸ ಮಾಡುತ್ತಿದೆ. ಚಂದ್ರಯಾನದಂತಹ ಸಾಧನೆಗಳನ್ನು ಕಡಿಮೆ ಖರ್ಚಿನಲ್ಲಿ ಮಾಡುತ್ತಿರುವುದಕ್ಕೆ ಭಾರತದ ವಿಜ್ಞಾನಿಗಳು ಶ್ಲ್ಯಾಘಿಸಲ್ಪಡುತ್ತಿದ್ದಾರೆ. ಇದು ನಾವು ನಮ ಗುರಿಗಳನ್ನು ತಲುಪಲು ಬಜೆಟ್ ಗಾತ್ರದತ್ತ ಗಮನ ಹರಿಸುವುದಕ್ಕಿಂತ ಹೆಚ್ಚು  ಇಚ್ಚಾ ಶಕ್ತಿಯತ್ತ ಆದ್ಯಗಮನ ನೀಡಿ ಈ ಗುಣಮಟ್ಟ ಮತ್ತು ಸಾಧನೆಯನ್ನು ಮಾಡುತ್ತೇವೆ ಎಂಬುದನ್ನು ಹೇಳುತ್ತದೆ ಎಂದು ಪ್ರಧಾನ ಮಂತ್ರಿ ಅವರು ನುಡಿದರು.

2022 ರಲ್ಲಿ ಭಾರತವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸುತ್ತದೆ. ನಿಮ್ಮ ಮಟ್ಟದಲ್ಲಿ ಕೆಲವು ಹೊಸ ನಿರ್ಧಾರಗಳನ್ನು ಕೈಗೊಳ್ಳಿರೆಂದು ನಾನು ನಿಮಗೆ ಮನವಿ ಮಾಡುತ್ತೇನೆ. ನೀವು ಪ್ರತಿಯೊಬ್ಬರೂ, ಪ್ರತೀ ವರ್ಷವೂ ಕೆಲವು ಮಂದಿ ಬೆಹರಿನ್ ಮಿತ್ರರಿಗೆ ಭಾರತಕ್ಕೆ ಪ್ರವಾಸ ಕೈಗೊಳ್ಳುವಂತೆ ಪ್ರೇರೇಪಿಸಿ ,ಭಾರತದ ಸುಂದರ  ಗಿರಿ ಧಾಮಗಳು, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ವೀಕ್ಷಿಸಲು ಪ್ರೇರೇಪಣೆ ನೀಡಿ. 2022 ರೊಳಗೆ ಒಂದು ಬಾರಿ ಬಳಸಿ ಎಸೆಯುವ  ಪ್ಲಾಸ್ಟಿಕ್ ನಿಷೇಧಿಸುವ ಬಗ್ಗೆ ನಾವು ನಿರ್ಧಾರ ಕೈಗೊಂಡಿದ್ದೇವೆ. ಎಂದೂ ಪ್ರಧಾನ ಮಂತ್ರಿ ಅವರು ಹೇಳಿದರು.

“ ಭಾರತ ಮತ್ತು ಬೆಹರಿನ್ ನಮ್ಮ ನಡುವೆ  ಹಂಚಿಕೊಂಡಿರುವ ಮೌಲ್ಯಗಳು ಮತ್ತು ಹಿತಾಸಕ್ತಿಗಳಿಗಾಗಿ ಒಗ್ಗೂಡಿ ಕೆಲಸ ಮಾಡುವಂತಾಗಲಿ. ಭಾರತ ಮತ್ತು ಬೆಹರಿನ್ ಗಳು ಪ್ರಾಚೀನ ನಾಗರಿಕತೆಯನ್ನು ಒಳಗೊಂಡ ಆಧುನಿಕ ದೇಶಗಳು. ಎರಡೂ ಆಗಾಧ ಸಾಮರ್ಥ್ಯವನ್ನು ಹೊಂದಿರುವಂತಹವು.ಬೆಹರಿನ್ ನಲ್ಲಿರುವ  ನನ್ನ ಸಹಚರ ಭಾರತೀಯರು ಈ ಬಾಂಧವ್ಯದ ಬಂಧವನ್ನು ಇನ್ನಷ್ಟು ಬಲಿಷ್ಟಗೊಳಿಸುತ್ತಾರೆ ಮತ್ತು ಭಾರತ-ಬೆಹರಿನ್ ಬಾಂಧವ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಸಾಧ್ಯತೆಗಳನ್ನು ಬಲಪಡಿಸುತ್ತಾರೆ ಎಂಬ ಬಗ್ಗೆ ನನಗೆ ಪೂರ್ಣ ವಿಶ್ವಾಸವಿದೆ ಎಂದೂ ಪ್ರಧಾನ ಮಂತ್ರಿ ಅವರು ನುಡಿದರು.

 



(Release ID: 1583104) Visitor Counter : 83