ಪ್ರಧಾನ ಮಂತ್ರಿಯವರ ಕಛೇರಿ
ಭೂತಾನ್‌ಗೆ ಭಾರತದ ಪ್ರಧಾನಿ ಭೇಟಿ ನೀಡಿರುವ ಕುರಿತು ಜಂಟಿ ಹೇಳಿಕೆ
Posted On:
18 AUG 2019 7:30PM by PIB Bengaluru
ಭೂತಾನ್‌ಗೆ ಭಾರತದ ಪ್ರಧಾನಿ ಭೇಟಿ ನೀಡಿರುವ ಕುರಿತು ಜಂಟಿ ಹೇಳಿಕೆ
1. ಭಾರತದ ಪ್ರಧಾನಿ ಗೌರವಾನ್ವಿತ ಶ್ರೀ ನರೇಂದ್ರ ಮೋದಿ ಅವರು 2019ರ ಆಗಸ್ಟ್ 17 ಮತ್ತು 18ರಂದು ಭೂತಾನ್ ಪ್ರಧಾನಿ ಗೌರವಾನ್ವಿತ ಡಾ. ಲೊಟೆ ಶೇರಿಂಗ್ ಅವರ ಆಹ್ವಾನದ ಮೇರೆಗೆ ಅಲ್ಲಿಗೆ ಭೇಟಿ ನೀಡಿದರು. 2019ರ ಮೇ ನಲ್ಲಿ ಎರಡನೇ ಬಾರಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಭೂತಾನ್‌ಗೆ ಭೇಟಿ ನೀಡಿರುವುದು ಮೊದಲ ಬಾರಿಯಾಗಿದೆ.
2. ಪಾರೊ ವಿಮಾನನಿಲ್ದಾಣಕ್ಕೆ ಆಗಮಿಸಿದ ಬಳಿಕ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರನ್ನು ಭೂತಾನ್ ಪ್ರಧಾನಿ ಡಾ. ಟಿ. ಶೇರಿಂಗ್ ಅವರು ಸ್ವಾಗತಿಸಿದರು. ಸಚಿವ ಸಂಪುಟದ ಸದಸ್ಯರು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳು ಇದ್ದರು. ಪ್ರಧಾನಿ ಅವರಿಗೆ ಗೌರವ ವಂದನೆ ನೀಡಲಾಯಿತು.
3. ಗೌರವಾನ್ವಿತ ಪ್ರಧಾನಿ ಶ್ರೀ ಮೋದಿ ಅವರು ಭೂತಾನ್ ದೊರೆ ಗೌರವಾನ್ವಿತ ಶ್ರೀ ಜಿಗ್ಮೆ ಖೇಶರ್ ನಮ್‌ಗ್ಯೆಲ್ ವಾಂಗ್‌ಚುಕ್ ಜತೆ ಸಮಾಲೋಚನೆ ನಡೆಸಿದರು. ದೊರೆ ಮತ್ತು ರಾಣಿ ಅವರು ಈ ಸಂದರ್ಭದಲ್ಲಿ ವಿಶೇಷ ಔತಣಕೂಟ ಆಯೋಜಿಸಿದ್ದರು. ತಮಗೆ ಅನುಕೂಲವಾಗುವ ದಿನಾಂಕಗಳಂದು ಭಾರತಕ್ಕೆ ಭೇಟಿ ನೀಡುವಂತೆ ದೊರೆ ಮತ್ತು ರಾಣಿ ಅವರಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಆಹ್ವಾನ ನೀಡಿದರು.
4. ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ಪ್ರಧಾನಿ ಟಿ. ಶೇರಿಂಗ್ ಅವರು ಪರಸ್ಪರ ಸಮಾಲೋಚನೆ ನಡೆಸಿದರು. ಜತೆಗೆ, ನಿಯೋಗಮಟ್ಟದ ಮಾತುಕತೆಗಳು ನಡೆದವು. ಶ್ರೀ ನರೇಂದ್ರ ಮೋದಿ ಅವರ ಭೇಟಿಯ ಗೌರವಾರ್ಥ ಡಾ. ಟಿ. ಶೇರಿಂಗ್ ಅವರು ಸರ್ಕಾರದ ವತಿಯಿಂದ ಔತಣಕೂಟ ಆಯೋಜಿಸಿದ್ದರು.
5. ಭೂತಾನ್‌ನ ರಾಷ್ಟ್ರೀಯ ಅಸೆಂಬ್ಲಿಯ ವಿರೋಧ ಪಕ್ಷದ ನಾಯಕ ಡಾ. ಪೆಮಾ ಗ್ಯಾಮ್‌ಟ್ಶೊ ಅವರು ಸಹ ಪ್ರಧಾನಿ ಶ್ರೀ ನರೇಂದ್ರ ಮೋದಿ ಜತೆ ಸಮಾಲೋಚನೆ ನಡೆಸಿದರು.
6. 2019ರ ಮೇ 30ರಂದು ನಡೆದ ಪ್ರಮಾಣ ವಚನ ಸಮಾರಂಭಕ್ಕೆ ಆಗಮಿಸಿದ್ದಕ್ಕೆ ಡಾ. ಟಿ. ಶೇರಿಂಗ್ ಅವರಿಗೆ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಧನ್ಯವಾದಗಳನ್ನು ತಿಳಿಸಿದರು. ಆ ಸಂದರ್ಭದಲ್ಲಿ ನಡೆದ ಚರ್ಚೆಗಳನ್ನು ಮತ್ತೊಮ್ಮೆ ನೆನಪಿಸಿಕೊಂಡರು. ಭಾರತ ಮತ್ತು ಭೂತಾನ್ ನಡುವೆ ನಿಯಮಿತವಾಗಿ ನಡೆಯುತ್ತಿರುವ ಉನ್ನತ ಮಟ್ಟದ ಮಾತುಕತೆಗಳನ್ನು ಮುಂದುವರಿಸುವ ಕುರಿತು ಉಭಯ ನಾಯಕರು ಒಪ್ಪಿಕೊಂಡರು. ಉಭಯ ದೇಶಗಳ ಸಂಬಂಧವನ್ನು ಬಲಪಡಿಸಲು ಈ ರೀತಿಯ ಮಾತುಕತೆಗಳು ಮಹತ್ವ ಪಡೆದುಕೊಂಡಿವೆ.
7. ಮಾತುಕತೆ ಸಂದರ್ಭದಲ್ಲಿ ಉಭಯ ದೇಶಗಳ ಪ್ರಧಾನಿಗಳು, ಸಮಗ್ರವಾಗಿ ದ್ವಿಪಕ್ಷೀಯ ಸಂಬಂಧಗಳ ಕುರಿತು ಪರಾಮರ್ಶೆ ನಡೆಸಿದರು. ಜತೆಗೆ, ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಬೆಳವಣಿಗೆಗಳ ಕುರಿತು ಚರ್ಚಿಸಿದರು. ಉಭಯ ನಾಯಕರು ಅತ್ಯುತ್ತಮ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಪರಸ್ಪರ ವಿಶ್ವಾಸ ಮತ್ತು ಗೌರವದ ಮೇಲೆ ಸಂಬಂಧಗಳು ವೃದ್ಧಿಯಾಗಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಐತಿಹಾಸಿಕ, ಸಾಂಸ್ಕೃತಿಕ, ಆರ್ಥಿಕವಾಗಿ ಮತ್ತು ಜನರ ಜತೆಗೆ ಬೆಳೆದಿರುವ ಸಂಪರ್ಕದ ಬಗ್ಗೆ ಚರ್ಚಿಸಲಾಯಿತು. ಸಮೀಪದ ನೆರೆಯ ರಾಷ್ಟ್ರ ಭೂತಾನ್ ಜತೆಗೆ ಉತ್ತಮ ಸ್ನೇಹ ಸಂಬಂಧ ಬೆಳೆಯಲು ಭೂತಾನ್‌ನ ದೊರೆಗಳು ಮತ್ತು ಭಾರತದ ಇದುವರೆಗಿನ ಎಲ್ಲ ನಾಯಕರು ವಹಿಸಿದ ಪಾತ್ರ ಮಹತ್ವದ್ದಾಗಿದೆ ಎಂದು ಪ್ರಧಾನಿಗಳು ಶ್ಲಾಘಿಸಿದರು.
8. ಭದ್ರತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಮೇಲೆ ಪರಿಣಾಮ ಬೀರುವ ಸಮನ್ವಯ ಸಾಧಿಸುವ ಕುರಿತು ಬದ್ಧತೆ ವ್ಯಕ್ತಪಡಿಸಲು ಉಭಯ ದೇಶಗಳು ಒಪ್ಪಿಕೊಂಡವು.
9. ಭೂತಾನ್‌ನ ಆರ್ಥಿಕ ಮತ್ತು ಮೂಲಸೌಕರ್ಯ ಅಭಿವೃದ್ಧಿಪಡಿಸಲು ಸಹಕಾರ ನೀಡುವುದಾಗಿ ಪ್ರಧಾನಿ ಶ್ರೀ. ಮೋದಿ ಆಶ್ವಾಸನೆ ನೀಡಿದರು. ಮಧ್ಯಮ ಆದಾಯ ದೇಶದ ವರ್ಗಕ್ಕೆ ಸೇರಿದ್ದಕ್ಕಾಗಿ ಭೂತಾನ್ ಸರ್ಕಾರ ಮತ್ತು ಜನತೆಗೆ ಶ್ರೀ ನರೇಂದ್ರ ಮೋದಿ ಅಭಿನಂದನೆಗಳನ್ನು ಸಲ್ಲಿಸಿದರು. ಶ್ರೀಮಂತ ಸಂಸ್ಕೃತಿ ಮತ್ತು ಅತ್ಯಮೂಲ್ಯ ಪರಿಸರವನ್ನು ಕಾಪಾಡಿಕೊಂಡು, ‘ಒಟ್ಟು ರಾಷ್ಟ್ರೀಯ ಸಂತೋಷ’ ನಿಟ್ಟಿನಲ್ಲಿ ವಿಭಿನ್ನ ರೀತಿಯಲ್ಲಿ ಅಭಿವೃದ್ಧಿ ಸಾಧಿಸಿರುವುದು ವಿಶೇಷ ಎಂದು ಶ್ಲಾಘಿಸಿದರು.
10. 2018ರ ಡಿಸೆಂಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದನ್ನು ಪ್ರಧಾನಿ ಡಾ.ಟಿ. ಶೇರಿಂಗ್ ನೆನಪಿಸಿದರು. ಭೂತಾನ್‌ನ 12ನೇ ಪಂಚವಾರ್ಷಿಕ ಯೋಜನೆಯನ್ನು ಬೆಂಬಲಿಸಿದ್ದಕ್ಕೆ ಭಾರತಕ್ಕೆ ಧನ್ಯವಾದಗಳನ್ನು ಅವರು ಹೇಳಿದರು. ಕಳೆದ ಹಲವು ದಶಕಗಳಿಂದ ಭೂತಾನ್‌ನ ಅಭಿವೃದ್ಧಿಯಲ್ಲಿ ಭಾರತ ವಹಿಸಿದ ಪಾತ್ರಕ್ಕೂ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
11 . ಪರಸ್ಪರ ದ್ವಿಪಕ್ಷೀಯ ಸಹಕಾರಕ್ಕೆ ಜಲ ವಿದ್ಯುತ್ ಯೋಜನೆ ಅಭಿವೃದ್ಧಿಗೆ ಮಹತ್ವ ನೀಡಬೇಕಾಗಿದೆ ಎಂದು ಉಭಯ ದೇಶಗಳು ಒತ್ತು ನೀಡಿದವು. ಉಭಯ ದೇಶಗಳ ಪ್ರಧಾನಿಗಳು ಇತ್ತೀಚೆಗೆ ಪೂರ್ಣಗೊಂಡ 720 ಮೆಗಾವ್ಯಾಟ್ ಮಂಗದೆಚ್ಚು ಜಲವಿದ್ಯುತ್ ಘಟಕವನ್ನು ಉದ್ಘಾಟಿಸಿದರು. ಸಕಾಲಕ್ಕೆ ಈ ಯೋಜನೆಯನ್ನು ಪೂರ್ಣಗೊಳಿಸಿರುವುದು ಶ್ಲಾಘನೀಯ ಎಂದು ಉಭಯ ನಾಯಕರು ಹೇಳಿದರು. ಈ ಯೋಜನೆಯಿಂದ ಭೂತಾನ್‌ನಲ್ಲಿ 2000 ಮೆಗಾ ವ್ಯಾಟ್ ವಿದ್ಯುತ್ ಅನ್ನು ಜಂಟಿಯಾಗಿ ಉತ್ಪಾದಿಸಲಾಗಿದೆ ಎಂದು ತಿಳಿಸಿದರು. ಇದೇ ರೀತಿಯಲ್ಲಿ ಸದ್ಯ ಅನುಷ್ಠಾನದ ಹಂತದಲ್ಲಿರುವ ಪುನಾಟ್ಸಂಗಚ್ಚು–1, ಪುನಾಟ್ಸಂಗಚ್ಚು–2 ಮತ್ತು ಖೊಲೊಂಗ್‌ಚ್ಚು ಯೋಜನೆಗಳನ್ನು ಸಹ ಪೂರ್ಣಗೊಳಿಸಲು ಜಂಟಿಯಾಗಿ ಕಾರ್ಯನಿರ್ವಹಿಸುವುದಾಗಿ ಉಭಯ ನಾಯಕರು ತಿಳಿಸಿದರು. ಸಂಕೋಷ್ ಜಲಾಶಯ ವಿದ್ಯುತ್ ಯೋಜನೆಯ ಅನುಷ್ಠಾನದ ಕುರಿತು ಸಹ ಇದೇ ಸಂದರ್ಭದಲ್ಲಿ ಪರಾಮರ್ಶೆ ನಡೆಸಲಾಯಿತು. ಉಭಯ ದೇಶಗಳಿಗೆ ಈ ಯೋಜನೆಯಿಂದ ಹೆಚ್ಚಿನ ಪ್ರಯೋಜನವಾಗುವುದರಿಂದ ಅನುಷ್ಠಾನದ ಪ್ರಕ್ರಿಯೆಯಗಳನ್ನು ತ್ವರಿತಗತಿಯಲ್ಲಿ ಅಂತಿಮಗೊಳಿಸಲು ನಿರ್ಧರಿಸಲಾಯಿತು. ಐದು ದಶಕಗಳಿಂದ ಜಲ–ವಿದ್ಯುತ್ ವಲಯದಲ್ಲಿ ಭಾರತ–ಭೂತಾನ್ ಪರಸ್ಪರ ಸಾಧಿಸಿರುವ ಸಹಕಾರದ ಸ್ಮರಣೆಗಾಗಿ ಭೂತಾನ್ ಅಂಚೆ ಚೀಟಿಗಳನ್ನು ಉಭಯ ದೇಶಗಳ ಪ್ರಧಾನಿ ಬಿಡುಗಡೆ ಮಾಡಿದರು.
12. ಉಭಯ ದೇಶಗಳ ಪ್ರಧಾನಿಗಳು ಭಾರತದ ’ರುಪೇ’ ಕಾರ್ಡ್ ಅನ್ನು ಭೂತಾನ್‌ನಲ್ಲಿ ಬಳಸಲು ಚಾಲನೆ ನೀಡಿದರು. ಇದರಿಂದ ಭಾರತದ ಪ್ರವಾಸಿಗರಿಗೆ ಅನುಕೂಲವಾಗಲಿದೆ. ನಗದು ಹಣವನ್ನು ಕೊಂಡೊಯ್ಯುವುದು ಇದರಿಂದ ತಪ್ಪುತ್ತದೆ. ಜತೆಗೆ, ಭೂತಾನ್‌ನ ಆರ್ಥಿಕತೆಗೆ ಉತ್ತೇಜನ ನೀಡುವ ಜತೆಗೆ ಉಭಯ ದೇಶಗಳ ಆರ್ಥಿಕತೆಯನ್ನು ಸಮ್ಮಿಲನ ಮಾಡಿದಂತಾಗುತ್ತದೆ. ಭೂತಾನ್ ಬ್ಯಾಂಕ್‌ಗಳಿಂದಲೂ ’ರುಪೇ’ ಕಾರ್ಡ್ ವಿತರಿಸುವ ಕಾರ್ಯವನ್ನು ತ್ವರಿತಗೊಳಿಸಲು ಉಭಯ ದೇಶಗಳು ಈ ಸಂದರ್ಭದಲ್ಲಿ ಒಪ್ಪಿಕೊಂಡಿವೆ. ಇದರಿಂದ, ಭೂತಾನ್ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅನುಕೂಲವಾಗುತ್ತದೆ. ಜತೆಗೆ, ಉಭಯ ದೇಶಗಳಲ್ಲಿ ’ರುಪೇ ಕಾರ್ಡ್’ನ ವಿನಿಮಯ ಬಳಕೆಗೆ ಅನುಕೂಲವಾಗುತ್ತದೆ. ಉಭಯ ದೇಶಗಳ ನಡುವೆ ನಗದು ರಹಿತ ವಹಿವಾಟು ನಡೆಸಲು ಭಾರತದ ‘ಭೀಮ್’ ಆ್ಯಪ್ ಅನ್ನು ಸಹ ಭೂತಾನ್‌ನಲ್ಲಿ ಬಳಸುವ ಕುರಿತು ಕಾರ್ಯಸಾಧ್ಯತೆ ಅಧ್ಯಯನ ಕೈಗೊಳ್ಳಲು ಉಭಯ ದೇಶಗಳು ಒಪ್ಪಿಕೊಂಡವು.
13 . ಇಸ್ರೊ ನೆರವಿನೊಂದಿಗೆ ಥಿಂಪುನಲ್ಲಿ ನಿರ್ಮಿಸಲಾದ ದಕ್ಷಿಣ ಏಷ್ಯಾದ ಉಪಗ್ರಹ ಕೇಂದ್ರ ‘ಗ್ರೌಂಡ್ ಅರ್ಥ್ ಸ್ಟೇಷನ್’ ಅನ್ನು ಉಭಯ ದೇಶಗಳ ಪ್ರಧಾನಿಗಳು ಉದ್ಘಾಟಿಸಿದರು. 2017ರಲ್ಲಿ ದಕ್ಷಿಣ ಏಷ್ಯಾ ಉಪಗ್ರಹ (ಎಸ್‌ಎಎಸ್) ಕೇಂದ್ರಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು ಎಂದು ಡಾ. ಟಿ ಶೇರಿಂಗ್ ಸ್ಮರಿಸಿದರು. ಇದರಿಂದಾಗಿ,ಭೂತಾನ್‌ನಲ್ಲಿನ ಪ್ರಸಾರ ಸೇವೆ ಮತ್ತು ವಿಪತ್ತು ನಿರ್ವಹಣೆಗೆ ಅನುಕೂಲವಾಗಿದೆ ಎಂದು ತಿಳಿಸಿದರು.
14. ಭೂತಾನ್‌ನ ಸಾಮಾಜಿಕ–ಆರ್ಥಿಕ ಅಭಿವೃದ್ಧಿ ಮೇಲೆ ಎಸ್‌ಎಎಸ್ ಬೀರುವ ಸಕಾರಾತ್ಮಕ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಟ್ರಾನ್ಸ್ ಪಾಂಡರ್ ಮೇಲಿನ ಬ್ಯಾಂಡ್‌ವಿಡ್ತ್ ಅಧಿಕಗೊಳಿಸುವುದಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಘೋಷಿಸಿದರು. ಶ್ರೀ .ಮೋದಿ ಅವರ ಈ ಕೊಡುಗೆಯನ್ನು ಡಾ. ಟಿ.ಶೇರಿಂಗ್ ಸ್ವಾಗತಿಸಿದರು. ಇದು ಬಾಹ್ಯಾಕಾಶದ ಸಂಪನ್ಮೂಲ ಬಳಸಿಕೊಂಡು ನಾಗರಿಕರ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
15. ಭೂತಾನ್‌ಗೆ ಸಣ್ಣ ಉಪಗ್ರಹಗಳನ್ನು ಜಂಟಿಯಾಗಿ ಅಭಿವೃದ್ಧಿಪಡಿಸಲು ಉಭಯ ನಾಯಕರು ಒಪ್ಪಂದ ಮಾಡಿಕೊಂಡರು. ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಜಂಟಿ ಕಾರ್ಯನಿರ್ವಹಣೆ ತಂಡವನ್ನು ರಚಿಸಿವುದಾಗಿ ತಿಳಿಸಿದರು.
16. ದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಮಹತ್ವವನ್ನು ಅರಿತುಕೊಂಡು, ಡಿಜಿಟಲ್ ಮತ್ತು ಇತ್ತೀಚಿನ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಪರಸ್ಪರ ಸಹಕಾರ ಬಲಪಡಿಸಲು ಉಭಯ ದೇಶಗಳು ಒಪ್ಪಂದ ಮಾಡಿಕೊಂಡಿವೆ.
17. ಅಂತರ–ಸಂಪರ್ಕ ಕಲ್ಪಿಸುವ ಭಾರತದ ರಾಷ್ಟ್ರೀಯ ಜ್ಞಾನ ಸಂಪರ್ಕ ಮತ್ತು ಭೂತಾನ್‌ನ ಸಂಶೋಧನೆ ಮತ್ತು ಶಿಕ್ಷಣ ಜಾಲವನ್ನು ಉಭಯ ದೇಶಗಳ ಪ್ರಧಾನಿಗಳು ಈ ಸಂದರ್ಭದಲ್ಲಿ ಉದ್ಘಾಟಿಸಿದರು. ಈ ಸಂರ್ಪಕದಿಂದ ಮಾಹಿತಿ ಹೆದ್ದಾರಿ ಸೃಷ್ಟಿಯಾಗಲಿದೆ. ಎರಡೂ ದೇಶಗಳ ವಿಶ್ವವಿದ್ಯಾಲಯಗಳು ಮತ್ತು ವಿದ್ಯಾರ್ಥಿಗಳ ನಡುವೆ ಸಮಾಲೋಚನೆ ನಡೆಸಲು ಅನುಕೂಲವಾಗುತ್ತದೆ ಎಂದು ನಾಯಕರು ಅಭಿಪ್ರಾಯಪಟ್ಟರು.
18. ಭೂತಾನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಕೆಳಗಿನ ತಿಳಿವಳಿಕೆ ಒಪ್ಪಂದಗಳನ್ನು ಕೈಗೊಳ್ಳಲಾಯಿತು.
1). ದಕ್ಷಿಣ ಏಷ್ಯಾ ಉಪಗ್ರಹ ಬಳಕೆಗೆ ಸ್ಯಾಟ್‌ಕಾಮ್ ಜಾಲ ಸ್ಥಾಪನೆಗೆ ಭೂತಾನ್ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಡುವೆ ಒಪ್ಪಂದ ಮಾಡಿಕೊಳ್ಳಲಾಯಿತು.
2). ರಾಷ್ಟ್ರೀಯ ಜ್ಞಾನ ಜಾಲ (ಎನ್‌ಕೆಎನ್) ಮತ್ತು ಭೂತಾನ್‌ನ ಡ್ರಕ್ ಸಂಶೋಧನೆ ಮತ್ತು ಶಿಕ್ಷಣ ಜಾಲ (ಡ್ರಕ್‌ರೆನ್) ನಡುವೆ ಒಪ್ಪಂದ ತಿಳಿವಳಿಕೆ ಕೈಗೊಳ್ಳಲಾಯಿತು.
3). ಏರ್‌ಕ್ರಾಫ್ಟ್ ಅಪಘಾತ ಮತ್ತು ಘಟನೆಗಳ ತನಿಖೆಗಾಗಿ ಭಾರತದ ಏರ್‌ಕ್ರಾಫ್ಟ್ ಆ್ಯಕ್ಸಿಡೆಂಟ್ ಇನ್ವೆಸ್ಟಿಗೇಷನ್ ಬ್ಯೂರೊ (ಎಎಐಬಿ) ಮತ್ತು ಭೂತಾನ್‌ನ ಏರ್ ಆಕ್ಸಿಡೆಂಟ್ ಇನ್ವೆಸ್ಟಿಗೇಷನ್ ಯುನಿಟ್ (ಎಎಐಯು) ನಡುವೆ ಒಪ್ಪಂದ.
4ರಿಂದ 7). ಶೈಕ್ಷಣಿಕ ವಿನಿಮಯ ಮತ್ತು ’ಸ್ಟೆಮ್’ ಸಹಕಾರ ಉತ್ತೇಜಿಸಲು ಭೂತಾನ್‌ನ ರಾಯಲ್ ವಿಶ್ವವಿದ್ಯಾಲಯ ಮತ್ತು ಕಾನ್ಪುರ, ದೆಹಲಿ ಮತ್ತು ಮುಂಬೈನ ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿ) ಹಾಗೂ ಸಿಲ್ಚಾರ್‌ನ ಎನ್‌ಐಟಿ ಜತೆ ನಾಲ್ಕು ಒಪ್ಪಂದ.
8). ಕಾನೂನು ಶಿಕ್ಷಣ ಮತ್ತು ಸಂಶೋಧನೆ ಕೈಗೊಳ್ಳಲು ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ಮತ್ತು ಜಿಗ್ಮೆ ಸಿಂಗ್ಯೆ ವಾಂಗ್ಚುಕ್ ಸ್ಕೂಲ್ ಆಫ್ ಲಾ ನಡುವೆ ಒಪ್ಪಂದ.
9). ನ್ಯಾಯಾಂಗ ಶಿಕ್ಷಣ ಮತ್ತು ಪರಸ್ಪರ ಸಹಕಾರ ವಿನಿಮಯಕ್ಕೆ ಭೂತಾನ್ ರಾಷ್ಟ್ರೀಯ ಕಾನೂನು ಸಂಸ್ಥೆ ಮತ್ತು ಭೋಪಾಲ್ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿ ನಡುವೆ ಒಪ್ಪಂದ.
10). ಮಂಗದೇಚ್ಚು ಜಲ ವಿದ್ಯುತ್ ಯೋಜನೆ ಅನುಷ್ಠಾನಕ್ಕೆ ಪಿಟಿಸಿ ಇಂಡಿಯಾ ಲಿಮಿಟೆಡ್ ಮತ್ತು ಭೂತಾನ್‌ನ ಡ್ರಂಕ್ ಗ್ರೀನ್ ಪವರ್ ಕಾರ್ಪೋರೇಷನ್ ನಡುವೆ ವಿದ್ಯುತ್ ಖರೀದಿ ಒಪ್ಪಂದ
19. ಭೂತಾನ್‌ನ ರಾಯಲ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ಶ್ರೀ ಮೋದಿ ಯುವಕರನ್ನು ಉದ್ದೇಶಿಸಿ ಭಾಷಣ ಮಾಡಿದರು. ಉಭಯ ದೇಶಗಳ ನಡುವೆ ಬೌದ್ಧ ಧರ್ಮ ಮತ್ತು ಅಧ್ಯಾತ್ಮ ಸಂಪರ್ಕ ಮತ್ತು ಸಂಬಂಧ ಸೇತುವೆಯಾಗಿದೆ ಎಂದು ಹೇಳಿದರು. ಶಿಕ್ಷಣ ಮತ್ತು ಉನ್ನತ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಉಭಯ ದೇಶಗಳ ಯುವಕರು ಸಾಧನೆಕೈಗೊಳ್ಳಲು ಸಹಭಾಗಿತ್ವ ಕೈಗೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು. ಭೂತಾನ್‌ನಲ್ಲಿ ಅಭಿವೃದ್ಧಿ, ಪರಿಸರ ಮತ್ತು ಸಂಸ್ಕೃತಿ ಎಂದಿಗೂ ಸಂಘರ್ಷಕ್ಕೆ ಒಳಗಾಗಿಲ್ಲ. ಎಲ್ಲವೂ ಸಮ್ಮಿಲನ ಹೊಂದಿವೆ. ಈ ಸೌಹಾರ್ದತೆ ಮತ್ತು ಸಂತೃಪ್ತಿ, ಸಂತೋಷವೇ ಮಾನವ ಕುಲಕ್ಕೆ ಸಂದೇಶವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಬಾಹ್ಯಾಕಾಶ ಮತ್ತು ಡಿಜಿಟಲ್ ಮತ್ತು ಆಧುನಿಕ ತಂತ್ರಜ್ಞಾನದಲ್ಲಿ ಉಭಯ ದೇಶಗಳು ಹೊಸ ಅಧ್ಯಾಯ ಆರಂಭಿಸಿದ್ದು, ಯುವಕರು ಇವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಭೂತಾನ್ ಪ್ರಧಾನಿ ಡಾ.ಟಿ. ಶೆರಿಂಗ್ ಮತ್ತು ನ್ಯಾಷನಲ್ ಅಸೆಂಬ್ಲಿ ಮತ್ತು ನ್ಯಾಷನಲ್ ಕೌನ್ಸಿಲ್ ಆಫ್ ಭೂತಾನ್ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.
20. ಭೂತಾನ್ ಪ್ರಜೆಗಳಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಲಭ್ಯವಾಗಿಸುವಲ್ಲಿ ಅಲ್ಲಿನ ಪ್ರಧಾನಮಂತ್ರಿ ಡಾ. ಲೋಟೆ ಶೆರಿಂಗ್ ಅವರ ವಯುಕ್ತಿಕ ಬದ್ಧತೆಯನ್ನು ಪ್ರಧಾನಮಂತ್ರಿ ಶ್ರೀ. ಮೋದಿ ಶ್ಲಾಘಿಸಿದರು. ಈ ನಿಟ್ಟಿನಲ್ಲಿ, ಭೂತಾನ್ ನಲ್ಲಿ ನೂತನ ಬಹು-ಮಾದರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಯ ಯೋಜನೆಗೆ ತಾಂತ್ರಿಕ ಸಹಕಾರ ನೀಡಲು ಇತ್ತೀಚಿಗೆ ಭಾರತದಿಂದ ಪರಿಣತರ ಗುಂಪೊಂದು ಭೂತಾನ್ ಗೆ ಭೇಟಿ ನೀಡಿದುದನ್ನು ಉಭಯ ರಾಷ್ಟ್ರಗಳು ನೆನಪಿಸಿಕೊಂಡರು.
21. ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯನ್ನು ವಿಸ್ತರಿಸಲು ಉಭಯ ದೇಶಗಳು ಒಪ್ಪಿಕೊಂಡಿದೆ. ಭೂತಾನ್ ಪ್ರಧಾನಿ 2018ರ ಡಿಸೆಂಬರ್‌ನಲ್ಲಿ ಭೇಟಿ ನೀಡಿದ ಸಂದರ್ಭದಲ್ಲಿ ದ್ವಿಪಕ್ಷೀಯ ವ್ಯಾಪಾರ ಮತ್ತು ಆರ್ಥಿಕ ಸಂಪರ್ಕ ಕಲ್ಪಿಸಲು ನಾಲ್ಕು ಬಿಲಿಯನ್ ರೂಪಾಯಿ ನೆರವು ನೀಡಿದ ಭಾರತ ಸರ್ಕಾರದ ಕ್ರಮವನ್ನು ಈ ಸಂದರ್ಭದಲ್ಲಿ ಶ್ಲಾಘಿಸಲಾಯಿತು. ಭಾರತದ ನೀಡಿದ ವಾಗ್ದಾನದಂತೆ ಈಗಾಗಲೇ 800 ಮಿಲಿಯನ್ ರೂಪಾಯಿಗಳನ್ನು ಭಾರತ ಬಿಡುಗಡೆ ಮಾಡಿದೆ ಎಂದು ಧನ್ಯವಾದ ತಿಳಿಸಲಾಯಿತು. ಕರೆನ್ಸಿ ಅದಲು–ಬದಲು ಮಿತಿಯನ್ನು ಹೆಚ್ಚಿಸುವಂತೆ ಭೂತಾನ್ ಮಾಡಿದ ಮನವಿಯನ್ನು ಪರಿಗಣಿಸುವುದಾಗಿ ಪ್ರಧಾನಿ ಶ್ರೀ ಮೋದಿ ಹೇಳಿದರು. ಈ ನಿಟ್ಟಿನಲ್ಲಿ ಕೈಗೊಳ್ಳಲಾದ ಒಪ್ಪಂದದ ಅನ್ವಯ ಹೆಚ್ಚುವರಿಯಾಗಿ 100 ಮಿಲಿಯನ್ ಡಾಲರ್ ಕರೆನ್ಸಿಗೆ ಹೆಚ್ಚಿಸುವುದಾಗಿ ತಿಳಿಸಿದರು.
22. ಭೂತಾನ್ ಸರ್ಕಾರದ ಮನವಿ ಮೇರೆಗೆ, ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು, ಸಬ್ಸಿಡಿ ಎಲ್‌ಪಿಜಿ ಪ್ರಮಾಣವನ್ನು ಪ್ರತಿ ತಿಂಗಳು 700 ಮೆಟ್ರಿಕ್ ಟನ್‌ನಿಂದ 1000 ಮೆಟ್ರಿಕ್ ಟನ್‌ಗೆ ಹೆಚ್ಚಿಸುವುದಾಗಿ ಘೋಷಿಸಿದರು.
23. ಥಿಂಪುನಲ್ಲಿರುವ ಐತಿಹಾಸಿಕ ಸೆಮ್‌ಟೊಖಾಡಝೋಂಗ್‌ನಲ್ಲಿ ಪ್ರಧಾನಿ ಶ್ರೀ ಮೋದಿ ಪ್ರಾರ್ಥನೆ ಸಲ್ಲಿಸಿದರು. ಇಲ್ಲಿ ಭೂತಾನ್ ದೇಶದ ಸಂಸ್ಥಾಪಕ ಝಬ್‌ದ್ರಂಗ್ ನಗವಾಂಗ್‌ನಮ್‌ಗ್ಯಾಲ್ ಅವರ ಪ್ರತಿಮೆಯೂ ಇದೆ. ಇದೇ ಸಂದರ್ಭದಲ್ಲಿ ನಲಂದ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಕೈಗೊಳ್ಳುವ ಭೂತಾನ್ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನವನ್ನು 2ರಿಂದ 5ಕ್ಕೆ ಹೆಚ್ಚಿಸುವುದಾಗಿ ಪ್ರಧಾನಿ ಶ್ರೀ ಮೋದಿ ಘೋಷಿಸಿದರು.
24. ಉಭಯ ದೇಶಗಳು ಹೊಸ ಕ್ಷೇತ್ರಗಳಲ್ಲಿ ಸಹಕಾರ ಸಾಧಿಸಲು ಒಪ್ಪಿಕೊಂಡಿವೆ. ಅದರಲ್ಲೂ ವಿಶೇಷವಾಗಿ ಭಾರತ ಮತ್ತು ಭೂತಾನ್‌ನ ಯುವಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿಷಯಗಳನ್ನು ವಿನಿಮಯ ಮಾಡಿಕೊಳ್ಳಲು ಒಪ್ಪಿಕೊಳ್ಳಲಾಯಿತು.
25. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಭೂತಾನ್ ಭೇಟಿಯು ಸೌಹಾರ್ದಯುತ ಮತ್ತು ಆತ್ಮೀಯ ಸ್ನೇಹಮಯ ವಾತಾವರಣದಲ್ಲಿ ಕೈಗೊಳ್ಳಲಾಗಿತ್ತು. ಈ ಭೇಟಿಯು ಪರಸ್ಪರ ವಿಶ್ವಾಸ, ಸಹಕಾರ, ಗೌರವವನ್ನು ಬಿಂಬಿಸಿತ್ತು. ಈ ಮೂಲಕ ಭಾರತ ಮತ್ತು ಭೂತಾನ್ ನಡುವಣ ವಿಶೇಷ ಮತ್ತು ಅನನ್ಯ ಸ್ನೇಹವನ್ನು ಪ್ರದರ್ಶಿಸಿತು.
***
(Release ID: 1582508)
Visitor Counter : 126