ಪ್ರಧಾನ ಮಂತ್ರಿಯವರ ಕಛೇರಿ

ಸಹಾಯಕ ಕಾರ್ಯದರ್ಶಿಗಳ ಉದ್ಘಾಟನಾ ಅಧಿವೇಶನದಲ್ಲಿ ಪ್ರಧಾನ ಮಂತ್ರಿ ಭಾಷಣ

Posted On: 02 JUL 2019 6:58PM by PIB Bengaluru

ಸಹಾಯಕ ಕಾರ್ಯದರ್ಶಿಗಳ ಉದ್ಘಾಟನಾ ಅಧಿವೇಶನದಲ್ಲಿ ಪ್ರಧಾನ ಮಂತ್ರಿ ಭಾಷಣ

(2017 ರ ತಂಡದ ಐ.ಎ.ಎಸ್. ಅಧಿಕಾರಿಗಳು)

 

ಸಹಾಯಕ ಕಾರ್ಯದರ್ಶಿಗಳಾಗಿ ಅಧಿಕಾರದ ಅವಧಿಯಲ್ಲಿ ಸಮಸ್ಯೆಗಳ ನಿಭಾವಣೆಗೆ ಹೊಸ ದೃಷ್ಟಿ ಕೋನ , ಹೊಸ ಚಿಂತನೆ ಮತ್ತು ಹೊಸ  ಧೋರಣೆ ಅನುಸರಿಸಲು  ಯುವ ಅಧಿಕಾರಿಗಳಿಗೆ ಪ್ರಧಾನ ಮಂತ್ರಿ  ಕರೆ.

ಪ್ರಧಾನ ಮಂತ್ರಿ ಶ್ರಿ ನರೇಂದ್ರ ಮೋದಿ ಅವರು ಇಂದು ಭಾರತ ಸರಕಾರದಲ್ಲಿ ಇತ್ತೀಚೆಗೆ ಸಹಾಯಕ ಕಾರ್ಯದರ್ಶಿಗಳಾಗಿ ನೇಮಕಗೊಂಡ  2017 ರ ತಂಡದ ಸುಮಾರು 160 ಯುವ ಐ.ಎ.ಎಸ್. ಅಧಿಕಾರಿಗಳ ಜೊತೆ ಸಂವಾದ ನಡೆಸಿದರು.

ಪ್ರಧಾನ ಮಂತ್ರಿ ಅವರು ಈ ಗುಂಪನ್ನು  ಮುಸ್ಸೋರಿಯಲ್ಲಿ ತರಬೇತಿ ಪಡೆಯುತ್ತಿದ್ದಾಗ ಭೇಟಿಯಾದುದನ್ನು ಸ್ಮರಿಸಿಕೊಂಡರು.

 

ಸಂವಾದದ ಸಂದರ್ಭ , ಅಧಿಕಾರಿಗಳು ಕ್ಷೇತ್ರ ತರಬೇತಿಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಅವರು ಈ ಅನುಭವಗಳನ್ನು ಮುಸ್ಸೋರಿಯಲ್ಲಿ ತಾವು ಪಡೆದ ತರಬೇತಿಯ ಜೊತೆ ತುಲನೆ ಮಾಡಿದರು. ಆಶೋತ್ತರಗಳ ಜಿಲ್ಲೆಗಳಲ್ಲಿ ಕೆಲಸ ಮಾಡಿದ ಅಧಿಕಾರಿಗಳು , ಈ ಜಿಲ್ಲೆಗಳಲ್ಲಿ ಇತ್ತೀಚೆಗೆ ಆರಂಭಿಸಲಾದ ಹೊಸ ಉಪಕ್ರಮಗಳು ಹೇಗೆ ತಳ ಮಟ್ಟದಲ್ಲಿ ಅನುಷ್ಟಾನಗೊಂಡಿವೆ ಎಂಬುದನ್ನು ತುಲನೆ ಮಾಡಿದರು.

ಮುಂದಿನ ಮೂರು ತಿಂಗಳ ಕಾಲ ಅಧಿಕಾರಿಗಳು ಭಾರತ ಸರಕಾರದ ಅಧಿಕಾರಿಗಳಾಗಿ ಕೆಲಸ ಮಾಡಲಿರುವುದು ಅತ್ಯಂತ ಪ್ರಮುಖ ಅಂಶ ಮತ್ತು ಅದು ಬಹಳ ಚಿಂತನೆಯ ಬಳಿಕ ರೂಪಿಸಿದ ಪ್ರಕ್ರಿಯೆಯ ಭಾಗ ಎಂದು ಪ್ರಧಾನ ಮಂತ್ರಿ ಅವರು ವಿವರಿಸಿದರು. ಪ್ರತಿಯೊಬ್ಬ ಅಧಿಕಾರಿಗೂ ನೀತಿ ನಿರೂಪಣೆಯಲ್ಲಿ ಪ್ರಭಾವ ಬೀರುವ ಅವಕಾಶ ಈ ಅವಧಿಯಲ್ಲಿ ಲಭ್ಯವಾಗುತ್ತದೆ ಎಂದರು.

ಪ್ರಧಾನ ಮಂತ್ರಿ ಅವರು ಸಮಸ್ಯೆ ಪರಿಹಾರಕ್ಕಾಗಿ ಹೊಸ ದೃಷ್ಟಿಕೋನ , ಹೊಸ ಚಿಂತನೆ ಮತ್ತು ಹೊಸ ಧೋರಣೆಗಳನ್ನು ಅಳವಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಉತ್ತೇಜನ ನೀಡಿದರು.

ಈ ಕಾರ್ಯಕ್ರಮದ ಉದ್ದೇಶ ಸರಕಾರದ ಕಾರ್ಯಚಟುವಟಿಕೆಗಳಲ್ಲಿ ಹೊಸತನ ಮತ್ತು ತಾಜಾತನವನ್ನು ತರುವುದಾಗಿದೆ ಎಂದು ಹೇಳಿದ ಪ್ರಧಾನ ಮಂತ್ರಿ ಅವರು ಅನುಭವ ಮತ್ತು ತಾಜಾತನದ ಸಂಗಮ ವ್ಯವಸ್ಥೆಗೆ ಲಾಭ ತರಬಲ್ಲದು ಎಂದರು.

ಅವರಿಗೆ ನೀಡಿರುವ ಕೆಲಸವನ್ನು ಅವರು ಹೊಸ ಮತ್ತು “ನಾಗರಿಕ ಕೇಂದ್ರಿತ ದೃಷ್ಟಿಕೋನ” ದ ಧೋರಣೆಯೊಂದಿಗೆ ಕೈಗೊಳ್ಳಬೇಕು ಎಂದೂ ಪ್ರಧಾನ ಮಂತ್ರಿ ಹೇಳಿದರು.

ಅಧಿಕಾರಿಗಳು ಅವರಿಗೆ ನೀಡಿರುವ ಸಮಸ್ಯೆಗಳನ್ನು ನಿಭಾಯಿಸಲು ಸಮಗ್ರವಾದ ಪರಿಹಾರಗಳನ್ನು ರೂಪಿಸಲು ಪ್ರಯತ್ನಿಸಬೇಕು ಎಂದೂ ಪ್ರಧಾನ ಮಂತ್ರಿ ಅವರು ಒತ್ತಿ ಹೇಳಿದರು.

ಅಧಿಕಾರಿಗಳು ದಿಲ್ಲಿಯಲ್ಲಿರುವಾಗ ಮಾಡುವ ಕೆಲಸವನ್ನು ಅವರು ಇತ್ತೀಚೆಗೆ  ಕ್ಷೇತ್ರದಲ್ಲಿ ತಮಗಾದ  ಅನುಭವಗಳ ಜೊತೆ ತುಲನೆ ಮಾಡಿಕೊಳ್ಳಬೇಕು ಎಂದೂ  ಪ್ರಧಾನ ಮಂತ್ರಿ ಅವರು ಹೇಳಿದರು. ಪ್ರಧಾನ ಮಂತ್ರಿ ಅವರ ಕಚೇರಿಯ (ಪಿ.ಎಂ.ಒ.) ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ಮತ್ತು ಪ್ರಧಾನ ಮಂತ್ರಿ ಅವರ ಕಾರ್ಯಾಲಯದ ಅಧಿಕಾರಿಗಳು, ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.

ಈ ಸಂದರ್ಭ ಮಾತನಾಡಿದ ಎಂ.ಒ.ಎಸ್.  (ಪಿ.ಪಿ.) ಡಾ, ಜಿತೇಂದ್ರ ಸಿಂಗ್ ಈ ಪದ್ದತಿಯನ್ನು 5 ವರ್ಷಗಳ ಹಿಂದೆ ಪ್ರಧಾನ ಮಂತ್ರಿ ಅವರ ನಿರ್ದೇಶನದ ಮೇರೆಗೆ ಆರಂಭಿಸಲಾಯಿತು, ಈ ವರ್ಷ 2017 ರ ತಂಡದ  169 ಐ.ಎ.ಎಸ್. ಅಧಿಕಾರಿಗಳನ್ನು ವಿವಿಧ ಸಚಿವಾಲಯಗಳಿಗೆ ನಿಯೋಜಿಸಲಾಗಿದೆ. ಈ ಅಧಿಕಾರಿಗಳಲ್ಲಿ 27 % ಮಹಿಳೆಯರಿದ್ದು, ಸರಾಸರಿ ವಯಸ್ಸು 28-29 ವರ್ಷಗಳಾಗಿವೆ ಎಂದರು. ಈ ಅಧಿಕಾರಿಗಳಲ್ಲಿ 111 ಅಧಿಕಾರಿಗಳು ಇಂಜಿನಿಯರಿಂಗ್ ಹಿನ್ನೆಲೆಯವರು ಮತ್ತು 20 ಅಧಿಕಾರಿಗಳು ವೈದ್ಯಕೀಯ ಹಿನ್ನೆಲೆಯವರು. ಇದು ಸರಕಾರದ ಕಾರ್ಯಕ್ರಮಗಳಾದ ಡಿಜಿಟಲ್ ಇಂಡಿಯಾ ಮತ್ತು ಆಯುಷ್ಮಾನ್ ಭಾರತ್ ಇತ್ಯಾದಿ  ಯೋಜನೆಗಳನ್ನು ಹೆಚ್ಚು ಉತ್ತಮವಾಗಿ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಸಚಿವರು ಹೇಳಿದರು.

ಭಾರತದ ನಾಗರಿಕ ಸೇವೆಗಳ ಶಿಲ್ಪಿಯೆಂದು ಪರಿಗಣಿಸಲ್ಪಟ್ಟ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಜೀವನ ಮತ್ತು  ಸಾಧನೆಗಳನ್ನು ಬಿಂಬಿಸುವ ದೃಶ್ಯ-ಶ್ರಾವ್ಯ ಚಲನಚಿತ್ರವನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.

ಸಂಪುಟ ಕಾರ್ಯದರ್ಶಿ ಶ್ರೀ ಪಿ.ಕೆ.ಸಿನ್ಹಾ, ಕಾರ್ಯದರ್ಶಿ (ಡಿ.ಒ.ಪಿ.ಟಿ.) ಡಾ. ಚಂದ್ರಮೌಳಿ ಮತ್ತು ಇತರ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.



(Release ID: 1576813) Visitor Counter : 51