ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ

2019 ರ ಜೂನ್ 29 ರಂದು “ಸಂಖ್ಯಾಶಾಸ್ತ್ರ ದಿನಾಚರಣೆ”

Posted On: 27 JUN 2019 12:34PM by PIB Bengaluru

2019 ರ ಜೂನ್ 29 ರಂದು “ಸಂಖ್ಯಾಶಾಸ್ತ್ರ ದಿನಾಚರಣೆ”

ಯೋಜನೆ ಮತ್ತು ನೀತಿ ನಿರೂಪಣೆಯಲ್ಲಿ ಸಂಖ್ಯಾಶಾಸ್ತ್ರದ ಪಾತ್ರ ಕುರಿತು ಜನಜಾಗೃತಿ ಹೆಚ್ಚಳಕ್ಕಾಗಿ

ವಿಷಯ: ಸುಸ್ಥಿರ  ಅಭಿವೃದ್ದಿ ಗುರಿಗಳು (ಎಸ್.ಡಿ.ಜಿ.ಗಳು)

ಎಸ್ .ಡಿ.ಜಿ.ಗಳ ಬಗ್ಗೆ ಮೂಲಾಧಾರ  ವರದಿ ಮತ್ತು ರಾಷ್ಟ್ರೀಯ ಸೂಚಕ ಚೌಕಟ್ಟಿನ (ಎನ್. ಐ.ಎಫ್.) ಕೈಪಿಡಿಯ ಬಿಡುಗಡೆ ಕಾರ್ಯಕ್ರಮ

 ದೈನಂದಿನ ಜೀವನದಲ್ಲಿ ಸಂಖ್ಯಾಶಾಸ್ತ್ರದ ಮಹತ್ವವನ್ನು ಮತ್ತು ಬಳಕೆಯನ್ನು ಜನಪ್ರಿಯಗೊಳಿಸಲು ಮತ್ತು ನೀತಿ ನಿರೂಪಣೆಯಲ್ಲಿ ಅದು ಹೇಗೆ ಸಹಾಯ ಮಾಡುತ್ತದೆ ಎಂಬ ಬಗ್ಗೆ ಜನರಲ್ಲಿ ಸೂಕ್ಷ್ಮತ್ವವನ್ನು ಮೂಡಿಸಲು ಸರಕಾರವು ಸಂಖ್ಯಾಶಾಸ್ತ್ರ ದಿನವನ್ನು ಆಚರಿಸುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ  ಆಚರಿಸಲ್ಪಡುವ ವಿಶೇಷ ದಿನಗಳಲ್ಲಿ ಇದು ಒಂದಾಗಿದ್ದು, ಇದನ್ನು  ರಾಷ್ಟ್ರೀಯ ಸಂಖ್ಯಾಶಾಸ್ತ್ರ ವ್ಯವಸ್ಥೆಯನ್ನು ಸ್ಥಾಪಿಸಿದ ಪ್ರೊ. ಮಹಾಲನೋಬಿಸ್ ಅವರ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ ಅವರ ಜನ್ಮದಿನವನ್ನಾಗಿಯೂ  ಜೂನ್ 29  ರಂದು ಆಚರಿಸಲಾಗುತ್ತದೆ.

ಈ ಸಂದರ್ಭದಲ್ಲಿ ದೇಶಾದ್ಯಂತ ಹಲವು ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರಧಾನ ಕಾರ್ಯಕ್ರಮ 2019 ರ ಜೂನ್ 29 ರಂದು ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆಯಲಿದೆ. ಸಂಖ್ಯಾಶಾಸ್ತ್ರ ಮತ್ತು ಕಾರ್ಯಕ್ರಮ ಅನುಷ್ಟಾನ ಸಚಿವಾಲಯ ಮತ್ತು ಯೋಜನಾ ಸಚಿವಾಲಯದ ಸ್ವತಂತ್ರ ಸಹಾಯಕ ಸಚಿವರಾದ (ಸ್ವತಂತ್ರ ನಿರ್ವಹಣೆ) ರಾವ್ ಇಂದರ್ಜಿತ್ ಸಿಂಗ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಸಂಖ್ಯಾಶಾಸ್ತ್ರ ಮತ್ತು ಕಾರ್ಯಕ್ರಮ ಅನುಷ್ಟಾನ ಸಚಿವಾಲಯ (ಎಂ.ಒ.ಎಸ್.ಪಿ.ಐ.) ಮತ್ತು ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಗಳು ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿವೆ. ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಮತ್ತು ಭಾರತೀಯ ಸಂಖ್ಯಾ ಶಾಸ್ತ್ರ ಸಂಸ್ಥಾ ಮಂಡಳಿಯ ಅಧ್ಯಕ್ಷರಾದ ಶ್ರೀ ಬಿಬೇಕ್ ದೆಬ್ ರಾಯ್ , ಭಾರತದ ಮುಖ್ಯ ಸಂಖ್ಯಾಶಾಸ್ತ್ರಜ್ಞ ಹಾಗು ಸಂಖ್ಯಾ ಶಾಸ್ತ್ರ ಮತ್ತು ಕಾರ್ಯಕ್ರಮ ಅನುಷ್ಟಾನ ಸಚಿವಾಲಯದ ಕಾರ್ಯದರ್ಶಿ ಶ್ರೀ ಪ್ರವೀಣ್ ಶ್ರೀವಾಸ್ತವ ಮತ್ತು ಕೇಂದ್ರ ಹಾಗು ರಾಜ್ಯ ಸರಕಾರಗಳ ಹಿರಿಯ ಅಧಿಕಾರಿಗಳು ಹಾಗು ಇತರ ಸಹಭಾಗಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸಂಖ್ಯಾಶಾಸ್ತ್ರದಲ್ಲಿ ಗಣನೀಯ ಕೊಡುಗೆ ನೀಡಿದ್ದಕ್ಕಾಗಿ ಪ್ರೊ.ಸಿ.ಆರ್.ರಾವ್ ಪ್ರಶಸ್ತಿ 2019ಕ್ಕೆ ಆಯ್ಕೆಯಾಗಿರುವವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು. ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಸಂಖ್ಯಾಸಾಸ್ತ್ರ ಸಂಬಂಧಿ ವಿಷಯದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಆಯೋಜಿಸಿದ  ‘ಸ್ಥಳದಲ್ಲಿಯೇ ಪ್ರಬಂಧ ಬರೆಯುವ ಸ್ಪರ್ಧೆ’ಯ ವಿಜೇತರನ್ನು ಈ ಸಂದರ್ಭ ಸನ್ಮಾನಿಸಲಾಗುವುದು.

ಪ್ರತೀ ವರ್ಷ , ಸಂಖ್ಯಾಶಾಸ್ತ್ರ ದಿನವನ್ನು ಪ್ರಸ್ತುತ ರಾಷ್ಟ್ರೀಯ ಮಹತ್ವದ ವಿಷಯದೊಂದಿಗೆ ಆಚರಿಸಲಾಗುವುದು. ಇಡೀ ವರ್ಷ ಆಯ್ದ ಕ್ಷೇತ್ರದಲ್ಲಿ ಸುಧಾರಣೆಗಳನ್ನು ತರುವ ಉದ್ದೇಶದ ಹಲವಾರು ಕಾರ್ಯಾಗಾರಗಳು ಮತ್ತು ವಿಚಾರ ಸಂಕಿರಣಗಳನ್ನು ಏರ್ಪಡಿಸುವ ಮೂಲಕ ಸಂಖ್ಯಾಶಾಸ್ತ್ರ ದಿನವನ್ನು ಆಚರಿಸಲಾಗುತ್ತದೆ. 2019 ರ ಸಂಖ್ಯಾಶಾಸ್ತ್ರ ದಿನದ ವಿಷಯ “ಸುಸ್ಥಿರ ಅಬಿವೃದ್ದಿ ಗುರಿಗಳು (ಎಸ್.ಡಿ.ಜಿ.) “ ಆಗಿದ್ದು, ಈ ವಿಷಯದಲ್ಲಿ ದತ್ತಾಂಶ ಅಂತರ ನಿವಾರಣೆ ಹಾಗು ಎಸ್.ಡಿ.ಜಿ.ಗಳ ಕಾಲಾನುಸಾರ ಮತ್ತು ಗುಣಮಟ್ಟ ಸುಧಾರಣೆಗಾಗಿ  ತೀವ್ರವಾದ ಮತ್ತು ಕೇಂದ್ರಿತವಾದ ಚರ್ಚೆಗಳು ನಡೆಯಲಿವೆ.

ಎಸ್ ಡಿ.ಜಿ.ಗಳ ಪ್ರಗತಿಯನ್ನು ಅಳೆಯಲು ರಾಷ್ಟ್ರೀಯ ಸೂಚಕ ಚೌಕಟ್ಟಿನ (ಎನ್.ಐ.ಎಫ್.) ಅಭಿವೃದ್ದಿಗೆ ಮತ್ತು ರಾಷ್ಟ್ರ ಮಟ್ಟದಲ್ಲಿ  ಆ ಸಂಬಂಧಿ ಗುರಿಗಳ ಸಾಧನೆಗೆ ಎಂ.ಒ.ಎಸ್.ಪಿ.ಐ.ಹೊಣೆಗಾರನಾಗಿದೆ. ಎನ್.ಐ.ಎಫ್. ಯು ನೀತಿ ರೂಪಕರಿಗೆ ಮತ್ತು ವಿವಿಧ ಯೋಜನೆಗಳು ಹಾಗು ಕಾರ್ಯಕ್ರಮಗಳ ಅನುಷ್ಟಾನ ಹೊಣೆ ಹೊತ್ತಿರುವವರಿಗೆ ಸೂಕ್ತ ನಿರ್ದೇಶನಗಳನ್ನು ನೀಡುತ್ತದೆ.

ಎಸ್.ಡಿ.ಜಿ.ಗಳ ಸಾಧನೆಯ ಹಾದಿಯಲ್ಲಿ ಎದುರಾಗುವ ಸವಾಲುಗಳ ಬಗ್ಗೆ ಚರ್ಚೆ, ಪ್ರಸ್ತುತಿಗಳನ್ನು ಎಂ.ಒ.ಎಸ್.ಪಿ.ಐ.ಯು ಆಯೋಜಿಸುತ್ತದೆ. ಎಸ್.ಡಿ,ಜಿ.ಗಳಿಗೆ ಸಂಬಂಧಿಸಿದ ಮೂಲಾಧಾರ ವರದಿ ಮತ್ತು ರಾಷ್ಟ್ರೀಯ ಸೂಚಕ ಚೌಕಟ್ಟು (ಎನ್.ಐ.ಎಫ್.) ಯನ್ನು ಬಿಡುಗಡೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ , ಸಚಿವಾಲಯದ ಇತರ ಕೆಲವು ಪ್ರಕಟಣೆಗಳನ್ನು ಬಿಡುಗಡೆ ಮಾಡಲಾಗುವುದು. 

ರಾಷ್ಟ್ರೀಯ ಸಂಖ್ಯಾಶಾಸ್ತ್ರ ಕಚೇರಿಗಳ ಕ್ಷೇತ್ರ ಕಚೇರಿಗಳು, ರಾಜ್ಯ ಸರಕಾರಗಳು ಮತ್ತು ವಿಶ್ವವಿದ್ಯಾಲಯಗಳು/ಇಲಾಖೆಗಳು ವಿಚಾರ ಸಂಕಿರಣ, ಸಮ್ಮೇಳನ, ಚರ್ಚಾಕೂಟಗಳು, ರಸ ಪ್ರಶ್ನೆ ಕಾರ್ಯಕ್ರಮಗಳು, ಉಪನ್ಯಾಸಗಳು, ಪ್ರಬಂಧ ಸ್ಪರ್ಧೆಗಳು ಇತ್ಯಾದಿಗಳನ್ನು ಸಂಖ್ಯಾಸಾಸ್ತ್ರ ದಿನ 2019 ರ ಅಂಗವಾಗಿ ಆಯೋಜಿಸಲಿವೆ.

ಭಾರತದ ಮುಖ್ಯ ಸಂಖ್ಯಾಶಾಸ್ತ್ರಜ್ಞ ಮತ್ತು ಸಂಖ್ಯಾಶಾಸ್ತ್ರ ಮತ್ತು ಕಾರ್ಯಕ್ರಮ ಅನುಷ್ಟಾನ ಸಚಿವಾಲಯದ ಕಾರ್ಯದರ್ಶಿ ಪ್ರವೀಣ್ ಶ್ರೀವಾಸ್ತವ ತಮ್ಮ ಹೇಳಿಕೆಯಲ್ಲಿ ಪ್ರೊ. ಮಹಾಲನೋಬಿಸ್ ಅವರ ಕೊಡುಗೆಗಳನ್ನು ಸ್ಮರಿಸಿಕೊಂಡಿದ್ದಾರೆ. “ಪ್ರೊ. ಮಹಾಲನೋಬಿಸ್ ಅವರನ್ನು ದೇಶದ ಸಂಖ್ಯಾಶಾಸ್ತ್ರ ವ್ಯ್ವಸ್ಥೆಯ ಪಿತಾಮಹ ಎಂದು ಜನಪ್ರಿಯವಾಗಿ ಸ್ಮರಿಸಿಕೊಳ್ಳಲಾಗುತ್ತದೆ. ಅವರು ಕೋಲ್ಕೊತ್ತಾದಲ್ಲಿ 1931 ರಲ್ಲಿ ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಯನ್ನು ಸಂಖ್ಯಾಶಾಸ್ತ್ರದಲ್ಲಿ ಸಂಶೋಧನೆ ಮತ್ತು ತರಬೇತಿಗಾಗಿ ಸ್ಥಾಪಿಸಿದರು. ಅಧಿಕೃತ ಸಂಖ್ಯಾಶಾಸ್ತ್ರದ ಆಧಾರಸ್ತಂಭಗಳಾಗಿರುವ ಕೇಂದ್ರೀಯ ಸಂಖ್ಯಾಶಾಸ್ತ್ರ ಸಂಘಟನೆ ( ಸಿ.ಎಸ್.ಒ.) ಮತ್ತು ರಾಷ್ಟ್ರೀಯ ಸ್ಯಾಂಪಲ್ ಸರ್ವೇ ಸಂಘಟನೆ ( ಎನ್.ಎಸ್.ಎಸ್.ಒ.)ಗಳು ಅವರ ಚಿಂತನೆ ಮತ್ತು ದೂರದೃಷ್ಟಿಗೆ ಸಾಕ್ಷಿಯಾಗಿವೆ. ಸಂಖ್ಯಾಶಾಸ್ತ್ರ ದಿನಾಚರಣೆಯನ್ನು ಅವರ ಸ್ಮರಣಾರ್ಥ ಆಚರಿಸುತ್ತಿರುವುದು ವರ್ತಮಾನ ಕಾಲದ ಸಂಖ್ಯಾಶಾಸ್ತ್ರಜ್ಞರಿಗೆ ಪ್ರೇರಣೆ, ಸ್ಫೂರ್ತಿಯ ಮೂಲ” ಎಂದು ಹೇಳಿದ್ದಾರೆ.

ಈ ಕಾರ್ಯಕ್ರಮಗಳು ಸಮಾಜೋ –ಆರ್ಥಿಕ ಯೋಜನೆ ಮತ್ತು ನೀತಿ ರೂಪಣೆಯಲ್ಲಿ ಸಂಖ್ಯಾಶಾಸ್ತ್ರದ ಪಾತ್ರದ ಬಗ್ಗೆ  ವಿಶೇಷವಾಗಿ ಯುವ ತಲೆಮಾರು ಒಳಗೊಂಡಂತೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗಿದೆ.



(Release ID: 1576112) Visitor Counter : 587