ಪ್ರಧಾನ ಮಂತ್ರಿಯವರ ಕಛೇರಿ

ಭಾರತವನ್ನು ರಕ್ಷಿಸುವವರಿಗಾಗಿ ಪ್ರಧಾನಿ ಶ್ರೀ. ನರೇಂದ್ರ ಮೋದಿಯವರಿಂದ ಮೊದಲ ತೀರ್ಮಾನ   

Posted On: 31 MAY 2019 5:49PM by PIB Bengaluru

ಭಾರತವನ್ನು ರಕ್ಷಿಸುವವರಿಗಾಗಿ ಪ್ರಧಾನಿ ಶ್ರೀ. ನರೇಂದ್ರ ಮೋದಿಯವರಿಂದ ಮೊದಲ ತೀರ್ಮಾನ   

ರಾಷ್ಟ್ರೀಯ ರಕ್ಷಣಾ ನಿಧಿಯಡಿಯ ‘ಪ್ರಧಾನಮಂತ್ರಿ ವಿದ್ಯಾರ್ಥಿ ವೇತನ ಯೋಜನೆ’ ಯಲ್ಲಿ ಮಹತ್ವದ ಬದಲಾವಣೆಗಳಿಗೆ ಒಪ್ಪಿಗೆ   

 ವಿದ್ಯಾರ್ಥಿವೇತನಗಳ ಮೌಲ್ಯ ಹೆಚ್ಚಳ ಮತ್ತು ಯೋಜನೆಯಲ್ಲಿ ರಾಜ್ಯ ಪೋಲೀಸ್ ಸಿಬ್ಬಂದಿ ಸೇರ್ಪಡೆ   
 

ಭಾರತದ ರಕ್ಷಣೆ, ಭದ್ರತೆ ಮತ್ತು ದೇಶವನ್ನು ರಕ್ಷಿಸುವವರ ಕಲ್ಯಾಣಕ್ಕಾಗಿನ ಪ್ರಧಾನಮಂತ್ರಿಯವರ ದೂರದೃಷ್ಟಿಯ ಅಂಗವಾಗಿ ರಾಷ್ಟ್ರೀಯ ರಕ್ಷಣಾ ನಿಧಿಯಡಿ ಬರುವ ‘ಪ್ರಧಾನಮಂತ್ರಿ ವಿದ್ಯಾರ್ಥಿವೇತನ ಯೋಜನೆ’ಗೆ ಮಹತ್ವದ ಬದಲಾವಣೆಗಳಿಗೆ ಒಪ್ಪಿಗೆ ನೀಡುವ ಮೂಲಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮೊದಲ ತೀರ್ಮಾನ ಕೈಗೊಂಡಿದ್ದು  ತಮ್ಮ ಕಚೇರಿಯ ಕೆಲಸವನ್ನು ಪ್ರಾರಂಭಿಸಿದ್ದಾರೆ.

 

ಪ್ರಧಾನಮಂತ್ರಿಯವರು ಕೆಳಕಂಡ ಬದಲಾವಣೆಗಳಿಗೆ ಒಪ್ಪಿಗೆ ನೀಡಿದ್ದಾರೆ.

 

1)     ವಿದ್ಯಾರ್ಥಿ ವೇತನದ ಮೌಲ್ಯವನ್ನು ಹುಡುಗರಿಗೆ ಪ್ರತೀ ತಿಂಗಳಿಗೆ 2000 ರೂ.ಗಳಿಂದ 2500 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ಹುಡುಗಿಯರಿಗೆ ಪ್ರತೀ ತಿಂಗಳಿಗೆ 2250 ರೂ.ಗಳಿಂದ 3000 ರೂ.ಗಳಿಗೆ ಏರಿಕೆ ಮಾಡಲಾಗಿದೆ.

 

2)    ವಿದ್ಯಾರ್ಥಿ ವೇತನದ ವ್ಯಾಪ್ತಿಯನ್ನು ಭಯೋತ್ಪಾದನೆ/ ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ರಾಜ್ಯ ಪೋಲೀಸ್ ಸಿಬ್ಬಂದಿಯ ಮಕ್ಕಳಿಗೂ ವಿಸ್ತರಿಸಲಾಗಿದೆ. ರಾಜ್ಯ ಪೋಲೀಸ್ ಸಿಬ್ಬಂದಿಯ ಮಕ್ಕಳ ವಿದ್ಯಾರ್ಥಿ ವೇತನ ಕೋಟಾ ವರ್ಷಕ್ಕೆ 500 ಆಗಿರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆಯು ನೋಡಲ್ ಸಚಿವಾಲಯವಾಗಿರುತ್ತದೆ.

 

ಹಿನ್ನೆಲೆ:

 

ರಾಷ್ಟ್ರೀಯ ರಕ್ಷಣಾ ಪ್ರಯತ್ನವನ್ನು ಉತ್ತೇಜಿಸಲು ನಗದು ರೂಪದ  ಸ್ವಯಂಪ್ರೇರಿತ ದೇಣಿಗೆಗಳನ್ನು ಸ್ವೀಕರಿಸಲು ಮತ್ತು ಅದರ ಬಳಕೆಯನ್ನು ನಿರ್ಧರಿಸುವ ಸಲುವಾಗಿ ರಾಷ್ಟ್ರೀಯ ರಕ್ಷಣಾ ನಿಧಿ (NDF) ಯನ್ನು 1962 ರಲ್ಲಿ ಸ್ಥಾಪಿಸಲಾಯಿತು

 

ಪ್ರಸ್ತುತ ನಿಧಿಯನ್ನು ಸಶಸ್ತ್ರ ಪಡೆಗಳ ಸದಸ್ಯರು, ಪ್ಯಾರಾ ಮಿಲಿಟರಿ ಪಡೆಗಳು ಮತ್ತು ರೈಲ್ವೆ ರಕ್ಷಣಾ ಪಡೆ ಮತ್ತು ಅವರ ಅವಲಂಬಿತರ ಕಲ್ಯಾಣಕ್ಕಾಗಿ ಬಳಸಲಾಗುತ್ತಿದೆ. ಈ ನಿಧಿಯನ್ನು ಪ್ರಧಾನಮಂತ್ರಿ ಯವರು ಅಧ್ಯಕ್ಷರಾಗಿರುವ ಹಾಗೂ ರಕ್ಷಣಾ, ಹಣಕಾಸು ಮತ್ತು ಗೃಹ ಸಚಿವರು ಸದಸ್ಯರಾಗಿರುವ ಕಾರ್ಯಕಾರಿ ಸಮಿತಿಯು ನಿರ್ವಹಿಸುತ್ತಿದೆ.

 

ಸಶಸ್ತ್ರ ಪಡೆಗಳು ಮತ್ತು ಪ್ಯಾರಾ ಮಿಲಿಟರಿ ಪಡೆಗಳು ಮತ್ತು ರೈಲ್ವೆ ರಕ್ಷಣಾ ಪಡೆಯ ಮೃತ / ಮಾಜಿ ಸೇವಾ ಸಿಬ್ಬಂದಿಗಳ ವಿಧವೆಯರು ಮತ್ತು ಮಕ್ಕಳಿಗೆ  ತಾಂತ್ರಿಕ ಮತ್ತು ಸ್ನಾತಕೋತ್ತರ ಶಿಕ್ಷಣವನ್ನು ಉತ್ತೇಜಿಸಲು 'ಪ್ರಧಾನ ಮಂತ್ರಿ ವಿದ್ಯಾರ್ಥಿವೇತನ ಯೋಜನೆ (PMSS)' ನ್ನು ರಾಷ್ಟ್ರೀಯ ರಕ್ಷಣಾ ನಿಧಿಯ ಪ್ರಮುಖ ಯೋಜನೆಯಡಿಯಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ.  ತಾಂತ್ರಿಕ ಸಂಸ್ಥೆಗಳಲ್ಲಿ (ವೈದ್ಯಕೀಯ, ದಂತ, ಪಶುವೈದ್ಯ, ಎಂಜಿನಿಯರಿಂಗ್, MBA, MCA ಮತ್ತು ಸೂಕ್ತವಾದ AICTE / UGC ಅನುಮೋದನೆಯೊಂದಿಗೆ ಇತರ ಸಮಾನ ತಾಂತ್ರಿಕ ವೃತ್ತಿಗಳು) ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನಗಳು ಲಭ್ಯವಿವೆ.

 

PMSS ಅಡಿಯಲ್ಲಿ, ಪ್ರತಿವರ್ಷ ಹೊಸ ವಿದ್ಯಾರ್ಥಿವೇತನವನ್ನು ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ ಸಶಸ್ತ್ರ ಪಡೆಗಳ 5500 ಮಕ್ಕಳಿಗೆ, ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ ಅರೆಸೈನಿಕ ಪಡೆಗಳ  2000 ಮಕ್ಕಳಿಗೆ  ಮತ್ತು ರೈಲ್ವೆಯ ಸಚಿವಾಲಯದ ಅಡಿಯಲ್ಲಿ ಬರುವ ರಕ್ಷಣಾ ಪಡೆಗಳ 150 ಮಕ್ಕಳಿಗೆ ನೀಡಲಾಗುತ್ತಿದೆ.

 

ರಾಷ್ಟ್ರೀಯ ರಕ್ಷಣಾ ನಿಧಿಯು ಸ್ವಯಂಪ್ರೇರಿತ ದೇಣಿಗೆಗಳನ್ನು ತನ್ನ ವೆಬ್ ಸೈಟ್  ndf.gov.in ಮೂಲಕ ಆನ್ ಲೈನ್ ನಲ್ಲಿ ಸ್ವೀಕರಿಸುತ್ತದೆ.

 

ನಮ್ಮ ಸಮಾಜವನ್ನು ಹೆಚ್ಚು ಸುರಕ್ಷಿತಗೊಳಿಸುವವರಿಗೆ  ಬೆಂಬಲ:

 

 

 

ನಮ್ಮ ಪೊಲೀಸ್ ಸಿಬ್ಬಂದಿಯ ಶ್ಲಾಘನೀಯ ಕೊಡುಗೆಯ ಬಗ್ಗೆ ಪ್ರಧಾನ ಮಂತ್ರಿಯವರು  ಸವಿವರವಾಗಿ ಮಾತನಾಡಿದ್ದಾರೆ. ಕಠಿಣವಾದ ಬೇಸಿಗೆಯಾಗಲೀ, ತೀವ್ರವಾದ ಚಳಿಗಾಲವಾಗಲೀ ಅಥವಾ ಭಾರೀ ಮಳೆಗಾಲವಾಗಲೀ ನಮ್ಮ ಪೊಲೀಸ್ ಸಿಬ್ಬಂದಿಯು  ತಮ್ಮ ಕರ್ತವ್ಯಗಳನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸುತ್ತಿದ್ದಾರೆ. ಇಡೀ ದೇಶ ಪ್ರಮುಖ ಹಬ್ಬಗಳನ್ನು ಆಚರಿಸುವಾಗ ನಮ್ಮ ಪೋಲೀಸ್ ಸಿಬ್ಬಂದಿ ಕರ್ತವ್ಯದಲ್ಲಿರುತ್ತಾರೆ.

 

ಒಂದು ದೇಶವಾಗಿ, ಪೋಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬಳಿಗೆ ಕೃತಜ್ಞತೆ ಸಲ್ಲಿಸುವುದು ಹಾಗೂ ಅವರ ಕಲ್ಯಾಣವನ್ನು ಸುಧಾರಿಸುವುದು ನಮ್ಮ ಕರ್ತವ್ಯವಾಗಿದೆ. ಇದರ ಸಂಬಂಧವಾಗಿ ಪ್ರಧಾನಮಂತ್ರಿಯವರು ಈ ತೀರ್ಮಾನ ಕೈಗೊಂಡಿದ್ದಾರೆ. ವಿದ್ಯಾರ್ಥಿ ವೇತನದ ಲಭ್ಯತೆಯಿಂದಾಗಿ ಪೋಲೀಸ್ ಸಿಬ್ಬಂದಿಯ ಕುಟುಂಬಗಳ ಹೆಚ್ಚು ಯುವಕರು ವಿವಿಧ ಕ್ಷೇತ್ರಗಳಲ್ಲಿ ಅಧ್ಯಯನ ಮಾಡಿ ಸಾಧನೆ ಮಾಡಲು ನೆರವಾಗುತ್ತದೆ.

 

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮೊದಲ ಅವಧಿಯಲ್ಲಿ ರಾಷ್ಟ್ರೀಯ ಪೋಲೀಸ್ ಸ್ಮಾರಕವನ್ನು ನಿರ್ಮಿಸಿ ರಾಷ್ಟ್ರಕ್ಕೆ ಸಮರ್ಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ನಮ್ಮ ಪೋಲೀಸರ ಧೈರ್ಯ ಮತ್ತು ತ್ಯಾಗಕ್ಕೆ ಈ ಸ್ಮಾರಕವು ಸಾಕ್ಷಿಯಾಗಿ ನಿಲ್ಲುತ್ತದೆ ಮತ್ತು ಕೋಟಿಗಟ್ಟಲೆ ಭಾರತೀಯರಿಗೆ ಸ್ಫೂರ್ತಿ ನೀಡುತ್ತದೆ.



(Release ID: 1573213) Visitor Counter : 159