ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ (PM-SYM) ಉದ್ಘಾಟಿಸಿದ ಪ್ರಧಾನ ಮಂತ್ರಿ ಮೋದಿ 

Posted On: 05 MAR 2019 3:19PM by PIB Bengaluru

ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ (PM-SYM) ಉದ್ಘಾಟಿಸಿದ ಪ್ರಧಾನ ಮಂತ್ರಿ ಮೋದಿ 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಗುಜರಾತ್ ನ ವಸ್ತ್ರಾಲ್ ನಲ್ಲಿ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ(PM-SYM)ಯನ್ನು ಉದ್ಘಾಟಿಸಿದರು. 
 

ಆಯ್ದ ಫಲಾನುಭವಿಗಳಿಗೆ PM-SYM ಪಿಂಚಣಿ ಕಾರ್ಡ್ ಗಳನ್ನು ಕೂಡಾ ವಿತರಿಸಿದರು. ದೇಶಾದ್ಯಂತದ ಸುಮಾರು 3 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳ 2 ಕೋಟಿಗೂ ಹೆಚ್ಚು ಕಾರ್ಮಿಕರು ವಿಡಿಯೋ ಕಾನ್ಫೆರೆನ್ಸ್ ಮೂಲಕ ಈ ಕಾರ್ಯಕ್ರಮ ವೀಕ್ಷಿಸಿದರು. 

ಈ ದಿನವನ್ನು ಐತಿಹಾಸಿಕ ದಿನವೆಂದು ಉದ್ಘರಿಸಿದ ಪ್ರಧಾನಮಂತ್ರಿಗಳು, ದೇಶದಲ್ಲಿರುವ 42 ಕೋಟಿ ಅಸಂಘಟಿತ ವಲಯದ ಕಾರ್ಮಿಕರಿಗೆ PM-SYM ಯೋಜನೆಯನ್ನು ಸಮರ್ಪಿಸಿದರು. ನೋಂದಾವಣೆ ಮಾಡಿಕೊಂಡ ಅಸಂಘಟಿತ ವಲಯದ ಕಾರ್ಮಿಕರಿಗೆ ಅವರ ವೃದ್ಧಾಪ್ಯದಲ್ಲಿ ಮಾಸಿಕ ರೂ 3000 ಪಿಂಚಣಿಯನ್ನು ಈ ಯೋಜನೆ ಖಾತರಿಪಡಿಸುತ್ತದೆ ಎಂದು ಅವರು ಹೇಳಿದರು. ಸ್ವಾತಂತ್ರ್ಯಾ ನಂತರ ಪ್ರಥಮ ಬಾರಿಗೆ ಇಂಥ ಒಂದು ಯೋಜನೆಯನ್ನು ಅನೌಪಚಾರಿಕ ವಲಯದಲ್ಲಿ ಕಾರ್ಯ ನಿರ್ವಹಿಸುವ ಕೋಟ್ಯಾಂತರ ಕೆಲಸಗಾರರಿಗೋಸ್ಕರ ರೂಪಿಸಲಾಗಿದೆ ಎಂದು ಕೂಡಾ ಪ್ರಧಾನಮಂತ್ರಿಗಳು ತಿಳಿಸಿದರು.

PM-SYM ನಿಂದಾಗುವ ಲಾಭಗಳ ಕುರಿತು ವಿಸ್ತ್ರತವಾಗಿ ಪ್ರಧಾನಮಂತ್ರಿಗಳು ವಿವರಿಸಿದರು. ಫಲಾನುಭವಿಗಳು ಹೂಡುವ ಮೊತ್ತದ ಸಮಾನ ಮೊತ್ತವನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂದು ಪ್ರಧಾನಮಂತ್ರಿಗಳು ತಿಳಿಸಿದರು. ತಿಂಗಳಿಗೆ ರೂ.15000 ಕ್ಕಿಂತ ಕಡಿಮೆ ಆದಾಯ ಹೊಂದಿದ ಅಸಂಘಟಿತ ವಲಯದ ಕಾರ್ಮಿಕರು ಹತ್ತಿರದ ಸಾಮಾನ್ಯ ಸೇವಾ ಕೇಂದ್ರದಲ್ಲಿ ಫಲಾನುಭವಿಗಳಾಗಿ ನೋಂದಾವಣೆ ಮಾಡಿಕೊಳ್ಳಬೇಕೆಂದು ಆಗ್ರಹಿಸಿದರು. 

ನೋಂದಾವಣೆ ಪ್ರಕ್ರಿಯೆಯಲ್ಲಿ ಯಾವುದೇ ಗೊಂದಲವಿರುವುದಿಲ್ಲ ಎಂದು ಭರವಸೆ ನೀಡಿದ ಮೋದಿಯವರು ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ವಿವರಗಳ ಜೊತೆಗೆ ಒಂದು ಫಾರ್ಮ್ ತುಂಬಬೇಕಾಗುತ್ತದೆ ಎಂದು ತಿಳಿಸಿದರು. ಫಲಾನುಭವಿಗಳ ನೋಂದಾವಣೆಗೆ ಸಾಮಾನ್ಯ ಸೇವಾ ಕೇಂದ್ರ ವ್ಯಯಿಸುವ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದೆ. ಇದೇ ಡಿಜಿಟಲ್ ಇಂಡಿಯಾದ ಪವಾಡ ಎಂದು ಪ್ರಧಾನಮಂತ್ರಿಗಳು ಹೇಳಿದರು. 

ತಮ್ಮ ಕುಟುಂಬವರೇ ಆಗಿರಲಿ ಅಥವಾ ನೆರೆಹೊರೆಯವರೇ ಆಗಿರಲಿ ಅಸಂಘಟಿತ ವಲಯದ ಕಾರ್ಮಿಕರು PM-SYM ನಲ್ಲಿ ನೋಂದಾವಣೆ ಮಾಡಿಸಿಕೊಳ್ಳಲು ನಾಗರಿಕರು ಸಹಾಯ ಮಾಡುವಂತೆ ಪ್ರಧಾನ ಮಂತ್ರಿಗಳು ಮನವಿ ಮಾಡಿದರು. ಉನ್ನತ ವರ್ಗದವರು ಕೈಗೊಳ್ಳುವ ಇಂಥ ಒಂದು ಕೆಲಸ ಬಡವರಿಗೆ ಬಹಳ ಲಾಭದಾಯಕವಾಗಲಿದೆ ಎಂದು ಅವರು ಹೇಳಿದರು. ಕಾರ್ಮಿಕರ ಘನತೆಯನ್ನು ಕಾಪಾಡುವುದರಿಂದ ರಾಷ್ಟ್ರ ಅಭಿವೃದ್ಧಿ ಸಾಧಿಸಲಿದೆ ಎಂದು ಕೂಡಾ ಅವರು ನುಡಿದರು. 

ಕೇಂದ್ರ ಸರ್ಕಾರ ಆರಂಭಿಸಿರುವ ಆಯುಷ್ಮಾನ್ ಭಾರತ ಯೋಜನೆ, ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ, ಅವಾಸ್ ಯೋಜನೆ, ಉಜ್ವಲಾ ಯೋಜನೆ, ಸೌಭಾಗ್ಯ ಯೋಜನೆ ಮತ್ತು ಸ್ವಚ್ಛ ಭಾರತ ಮುಂತಾದವು ವಿಶೇಷವಾಗಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರನ್ನೇ ಕೇಂದ್ರೀಕರಿಸಿವೆ ಎಂದು ಪ್ರಧಾನಮಂತ್ರಿ ಹೇಳಿದರು. ದೇಶದಲ್ಲಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಸರ್ಕಾರ ತೆಗೆದುಕೊಂಡ ಉಪಕ್ರಮಗಳ ಬಗ್ಗೆಯೂ ಮೋದಿಯವರು ಪ್ರಸ್ತಾಪಿಸಿದರು. 

ಆಯುಷ್ಮಾನ್ ಭಾರತದ ಅಡಿ ಆರೋಗ್ಯ ರಕ್ಷಣೆ ಮತ್ತು ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಡಿ ಹಾಗೂ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಅಡಿ ಜೀವನ ಮತ್ತು ಅಂಗವೈಕಲ್ಯ ವಿಮೆ, ಕೂಡಾ ಒದಗಿಸುವ PM-SYM ಅಸಂಘಟಿತ ವಲಯದ ಕಾರ್ಮಿಕರಿಗೆ ಅವರ ವೃದ್ಧಾಪ್ಯದಲ್ಲಿ ಸಮಗ್ರ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತದೆ. 

ಭೃಷ್ಟಾಚಾರದ ವಿರುದ್ಧ ಅವರ ಬಲವಾದ ನಿಲುವನ್ನು ಪುನರುಚ್ಛರಿಸಿದ ಪ್ರಧಾನ ಮಂತ್ರಿಗಳು ತಮ್ಮ ಸರ್ಕಾರ ಮಧ್ಯವರ್ತಿಗಳು ಮತ್ತು ಭೃಷ್ಟಾಚಾರ ನಿರ್ಮೂಲನೆಯ ಪಣ ತೊಟ್ಟಿದೆ ಎಂದು ಹೇಳಿದರು. ಪ್ರಧಾನ ಮಂತ್ರಿಗಳು ಸದಾ ಜಾಗರೂಕರಾಗಿರುತ್ತಾರೆ ಎಂದು ಅವರು ಹೇಳಿದರು. 



(Release ID: 1567718) Visitor Counter : 169