ಪ್ರಧಾನ ಮಂತ್ರಿಯವರ ಕಛೇರಿ
ಐಆರ್‍ಇಪಿ ಕೊಚ್ಚಿ ಉದ್ಘಾಟನೆ ಕೇರಳಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಹೆಮ್ಮೆಯ ಸಂಗತಿ: ಪ್ರಧಾನ ಮಂತ್ರಿ
Posted On:
27 JAN 2019 6:50PM by PIB Bengaluru
ಐಆರ್‍ಇಪಿ ಕೊಚ್ಚಿ ಉದ್ಘಾಟನೆ ಕೇರಳಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಹೆಮ್ಮೆಯ ಸಂಗತಿ: ಪ್ರಧಾನ ಮಂತ್ರಿ
ಪ್ರಧಾನ ಮಂತ್ರಿ ಅವರಿಂದ ಕೊಚ್ಚಿಯ ಎಲ್‍ಪಿಜಿ ಬಾಟ್ಲಿಂಗ್ ಘಟಕದಲ್ಲಿ ಸಮಗ್ರ ಸಂಸ್ಕರಣೆ ಸಂಕೀರ್ಣದ ವಿಸ್ತರಣೆ ಹಾಗೂ ಮೌಂಡೆಡ್ ಸ್ಟೋರೇಜ್ ವೆಹಿಕಲ್ ದೇಶಕ್ಕೆ ಸಮರ್ಪಣೆ
ಬಿಪಿಸಿಎಲ್ ಕೊಚ್ಚಿ ಸಂಸ್ಕರಣಾಗಾರದಲ್ಲಿ ಪೆಟ್ರೋಕೆಮಿಕಲ್ ಸಂಕೀರ್ಣಕ್ಕೆ ಶಿಲಾನ್ಯಾಸ
ಕೇರಳದ ಕೊಚ್ಚಿಗೆ ಇಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿ ನೀಡಿದ್ದರು ಮತ್ತು ರಾಜ್ಯದಲ್ಲಿ ನಾನಾ ಯೋಜನೆಗಳಿಗೆ ಶಿಲಾನ್ಯಾಸ ಮಾಡಿದರು ಹಾಗೂ ಹಲವು ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಿದರು.
ದೇಶಕ್ಕೆ ಸಮರ್ಪಿಸಿದ ಹಲವು ಯೋಜನೆಗಳಲ್ಲಿ ಒಂದು- ಕೊಚ್ಚಿಯಲ್ಲಿನ ಸಮಗ್ರ ಸಂಸ್ಕರಣೆ ವಿಸ್ತರಣೆ ಯೋಜನೆ(ಐಆರ್‍ಇಪಿ)ಯ ಸಂಕೀರ್ಣ. ಐಆರ್‍ಇಪಿ ಒಂದು ಆಧುನಿಕ ವಿಸ್ತರಣಾ ಸಂಕೀರ್ಣವಾಗಿದ್ದು, ಇದು ಕೊಚ್ಚಿಯನ್ನು ಭಾರತದ ಅತ್ಯಂತ ದೊಡ್ಡ ಮತ್ತು ಜಾಗತಿಕ ಗುಣಮಟ್ಟದ ಪಿಎಸ್‍ಯು ಸಂಸ್ಕರಣಾಗಾರವಾಗಿ ಸ್ಥಿತ್ಯಂತರಗೊಳಿಸಲಿದೆ. ದೇಶಕ್ಕೆ ಶುದ್ಧ ಇಂಧನಗಳನ್ನು ಉತ್ಪಾದಿಸುವುದಕ್ಕೆ ಈ ಘಟಕ ಸನ್ನದ್ಧವಾಗಿದೆ. ಎಲ್‍ಪಿಜಿ ಮತ್ತು ಡೀಸೆಲ್ ಉತ್ಪಾದನೆಯನ್ನು ದುಪ್ಪಟ್ಟುಗೊಳಿಸುತ್ತದೆ ಮತ್ತು ಈ ಘಟಕದಲ್ಲಿ ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತದೆ. ಐಆರ್‍ಇಪಿ ಸಂಕಿರ್ಣವನ್ನು ಉದ್ಘಾಟಿಸಿದ ಮಾನ್ಯ ಪ್ರಧಾನ ಮಂತ್ರಿ ಹೇಳಿದರು," ಕೇರಳದ ಅತಿ ದೊಡ್ಡ ಕೈಗಾರಿಕಾ ಘಟಕ ತನ್ನ ಮುಂದಿನ ಹಂತದ ಅಭಿವೃದ್ಧಿಯನ್ನು ಪ್ರವೇಶಿಸುತ್ತಿರುವ ಚಾರಿತ್ರಿಕ ದಿನವಿದು. ಇದು ದೇವರ ಸ್ವಂತ ರಾಜ್ಯಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಹೆಮ್ಮೆಯ ಕ್ಷಣ' ಎಂದರು. ಕಳೆದ 50 ವರ್ಷದಿಂದ ಕೇರಳ ಮಾತ್ರವಲ್ಲದೆ ಅಕ್ಕಪಕ್ಕದ ರಾಜ್ಯಗಳಲ್ಲಿ ಶುದ್ಧ ಇಂಧನಗಳನ್ನು ಜನಪ್ರಿಯಗೊಳಿಸುವಲ್ಲಿ ಗಮನಾರ್ಹ ಪಾತ್ರ ವಹಿಸಿದ ಕೊಚ್ಚಿಯ ಭಾರತ್ ಪೆಟ್ರೋಲಿಯಂ ಲಿಮಿಟೆಡ್(ಬಿಪಿಸಿಎಲ್)ನ್ನು ಅವರು ಶ್ಲಾಘಿಸಿದರು.
ಸರ್ಕಾರದ ಉಪಕ್ರಮಗಳ ಕುರಿತು ಮಾತನಾಡಿದ ಪ್ರಧಾನ ಮಂತ್ರಿ ಅವರು, ಉಜ್ವಲಾ ಯೋಜನೆಯು ಅಸಂಖ್ಯಾತ ಜನರ ಸಂತಸಕ್ಕೆ ಕಾರಣವಾಗಿದೆ. ಮೇ 2016ರಿಂದ ಅಂದಾಜು ಆರು ಕೋಟಿ ಕಡು ಬಡವ ಕುಟುಂಬಗಳಿಗೆ ಎಲ್‍ಪಿಜಿ ಸಂಪರ್ಕ ಕಲ್ಪಿಸಲಾಗಿದೆ. ಪಹಲ್ ಯೋಜನೆಯಡಿ 23 ಕೋಟಿ ಎಲ್‍ಪಿಜಿ ಗ್ರಾಹಕರು ಸೇರ್ಪಡೆಗೊಂಡಿದ್ದಾರೆ. ಈ ಯೋಜನೆಯಲ್ಲಿನ ಪಾರದರ್ಶಕತೆಯಿಂದ ನಕಲಿ ಖಾತೆಗಳು, ಒಂದಕ್ಕಿಂತ ಅಧಿಕ ಖಾತೆಗಳು ಹಾಗೂ ನಿಷ್ಕ್ರಿಯ ಖಾತೆಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ. "ಗಿವ್ ಇಟ್ ಅಪ್' ಉಪಕ್ರಮದಡಿ ಒಂದು ಕೋಟಿಗೂ ಅಧಿಕ ಮಂದಿ ಎಲ್‍ಪಿಜಿ ಸಬ್ಸಿಡಿ ಬಿಟ್ಟುಕೊಟ್ಟಿದ್ದಾರೆ ಎಂದು ಹೇಳಿದರು. ಕೊಚ್ಚಿ ಸಂಸ್ಕರಣೆ ಘಟಕದ ಪಾತ್ರವನ್ನು ಶ್ಲಾಘಿಸಿದ ಪ್ರಧಾನ ಮಂತ್ರಿ ಅವರು, "ಇತ್ತೀಚಿನ ವಿಸ್ತರಣೆಯಿಂದ ಎಲ್‍ಪಿಜಿ ಉತ್ಪಾದನೆಯನ್ನು ದುಪ್ಪಟ್ಟುಗೊಳಿಸುವ ಮೂಲಕ ಉಜ್ವಲ ಯೋಜನೆಗೆ ಘಟಕ ಭಾರಿ ನೆರವು ನೀಡಿದೆ,' ಎಂದರು.
ಸಿಎನ್‍ಜಿ ಒಂದು ಶುದ್ಧ ಇಂಧನವಾಗಿದ್ದು, ದೇಶದಲ್ಲಿ ನಗರ ಅನಿಲ ವಿತರಣೆ(ಸಿಜಿಡಿ) ಕಾರ್ಯಜಾಲವನ್ನು ವಿಸ್ತರಿಸುವ ಮೂಲಕ ಅದರ ಬಳಕೆಯನ್ನು ಉತ್ತೇಜಿಸಲಾಗುತ್ತಿದೆ. 10 ಸಿಜಿಡಿ ವೃತ್ತಗಳ ಹರಾಜು ಅಂತ್ಯಗೊಂಡ ಬಳಿಕ ದೇಶದ 400ಕ್ಕೂ ಅಧಿಕ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸಿ, ಕೊಳವೆ ಮೂಲಕ ಅನಿಲವನ್ನು ಪೂರೈಸಲಾಗುತ್ತದೆ. ಇಂಧನ ಆಯ್ಕೆಗಳಲ್ಲಿ ಅನಿಲದ ಪಾಲನ್ನು ಹೆಚ್ಚಿಸಲು ಹಾಗೂ ಅನಿಲ ಆಧರಿತ ಆರ್ಥಿಕತೆಯನ್ನು ಹೊಂದಲು ರಾಷ್ಟ್ರೀಯ ಅನಿಲ ಗ್ರಿಡ್ ಅಥವಾ ಪ್ರಧಾನ ಮಂತ್ರಿ ಉರ್ಜ ಗಂಗಾವನ್ನು ಸೃಷ್ಟಿಸಲಾಗಿದೆ ಎಂದು ಪ್ರಧಾನ ಮಂತ್ರಿ ಹೇಳಿದರು. ಸರ್ಕಾರ ಹೆಚ್ಚುವರಿ 15,000 ಕಿಮೀ ಉದ್ದದ ಅನಿಲ ಕೊಳವೆ ಕಾರ್ಯಜಾಲವನ್ನು ಅಭಿವೃದ್ಧಿ ಪಡಿಸಲು ಆಲೋಚಿಸಿದೆ. ಸರ್ಕಾರವು ತೈಲ ಆಮದನ್ನು ಶೇ.10 ರಷ್ಟು ಕಡಿಮೆಗೊಳಿಸಿದೆ ಮತ್ತು ಅಮೂಲ್ಯ ವಿದೇಶಿ ವಿನಿಮಯವನ್ನು ಉಳಿಸಿದೆ ಎಂದು ಪ್ರಧಾನ ಮಂತ್ರಿ ನುಡಿದರು.
ಭಾರತ ಏಷ್ಯಾದ ಎರಡನೇ ದೊಡ್ಡ ತೈಲ ಸಂಸ್ಕರಣೆ ದೇಶವಾಗಿದ್ದು, ಸಂಸ್ಕರಣೆ ಕೇಂದ್ರವಾಗಿ ಹೊಮ್ಮುತ್ತಿದೆ ಎಂದು ಪ್ರಧಾನ ಮಂತ್ರಿ ಹೇಳಿದರು. ಐಆರ್‍ಇಪಿಯನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿದ ಎಲ್ಲರಿಗೂ, ಅದರಲ್ಲೂ ಮುಖ್ಯವಾಗಿ ನಿರ್ಮಾಣದಲ್ಲಿ ಹಗಲು ರಾತ್ರಿಯೆನ್ನದೆ ತೊಡಗಿಸಿಕೊಂಡಿದ್ದ ಕಾರ್ಮಿಕರಿಗೆ ಪ್ರಧಾನ ಮಂತ್ರಿ ಧನ್ಯವಾದ ಹೇಳಿದರು. ಯೋಜನೆಯ ಪ್ರಮುಖ ಹಂತದಲ್ಲಿ 20,000ಕ್ಕೂ ಅಧಿಕ ಕಾರ್ಮಿಕರು ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಅವರೇ ನಿಜವಾದ ಹೀರೋಗಳು ಎಂದು ಪ್ರಧಾನ ಮಂತ್ರಿ ಹೇಳಿದರು.
ಈ ಯೋಜನೆ ಮೂಲಕ ಬಿಪಿಸಿಎಲ್ ಇಂಧನವಲ್ಲದ ಕ್ಷೇತ್ರಕ್ಕೆ ಕಾಲಿರಿಸಿದ್ದು, ಇದೊಂದು ಉತ್ತಮ ಕಾರ್ಯತಂತ್ರ ಎಂದು ಅವರು ಶ್ಲಾಘಿಸಿದರು. "ಸ್ನೇಹಿತರೇ, ಪೆಟ್ರೋರಾಸಾಯನಿಕಗಳ ಕುರಿತು ನಾವು ಹೆಚ್ಚು ಮಾತನ್ನಾಡುವುದಿಲ್ಲ. ಆದರೆ, ಅವು ನಮ್ಮ ಕಣ್ಣಿಗೆ ಕಾಣದಂತೆ ಅಸ್ತಿತ್ವದದಲ್ಲಿರುತ್ತವೆ ಹಾಗೂ ದಿನನಿತ್ಯದ ಹಲವು ಕ್ಷೇತ್ರಗಳನ್ನು ಸ್ಪರ್ಶಿಸುತ್ತವೆ. ಆದರೆ, ಇವುಗಳಲ್ಲಿ ಹೆಚ್ಚಿನ ರಸಾಯನಿಕಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಈ ರಾಸಾಯನಿಕ ಗಳನ್ನು ದೇಶದಲ್ಲೇ ಉತ್ಪಾದಿಸಬೇಕು ಎನ್ನುವುದು ನಮ್ಮ ಉದ್ದೇಶ" ಎಂದು ಹೇಳಿದರು.
ಐಆರ್‍ಇಪಿ ಕಾರ್ಯಾರಂಭಗೊಂಡ ಬಳಿಕ ಪ್ರೊಪಿಲೀನ್‍ನ್ನು ಕೊಚ್ಚಿ ಸಂಸ್ಕರಣಾಗಾರದಲ್ಲಿ ಉತ್ಪಾದಿಸುತ್ತಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು. ಇನ್ನಿತರ ಪೆಟ್ರೋರಾಸಾಯನಿಕಗಳು ಬಣ್ಣಗಳು, ಇಂಕ್, ಕೋಟಿಂಗ್, ಡಿಟರ್ಜೆಂಟ್ ಸೇರಿದಂತೆ ಹಲವು ಉತ್ಪನ್ನಗಳಲ್ಲಿ ಬಳಕೆಯಾಗುತ್ತವೆ. ಕೊಚ್ಚಿಯಲ್ಲಿ ಹಲವು ಉದ್ಯಮಗಳು ಆರಂಭಗೊಳ್ಳಲಿದ್ದು, ವ್ಯಾಪಾರ ಅವಕಾಶ ವಿಸ್ತರಿಸಲಿದೆ ಎಂದು ಆಶಾಭಾವ ವ್ಯಕ್ತಪಡಿಸಿದರು.
ಕೊಚ್ಚಿ ಸಂಸ್ಕರಣಾಗಾರದ ಕಾರ್ಯಕ್ಕೆ ದೇಶ ಹೆಮ್ಮೆ ಪಡುತ್ತದೆ ಎಂದು ಪ್ರಧಾನ ಮಂತ್ರಿ ಹೇಳಿದರು. ಕೇರಳ ಕಳೆದ ಆಗಸ್ಟ್‍ನಲ್ಲಿ ನೂರು ವರ್ಷದಲ್ಲಿ ಕಾಣದ ಪ್ರವಾಹದಿಂದ ತತ್ತರಿಸಿದ್ದಾಗ, ಬಿಪಿಸಿಎಲ್ ಹಲವು ಅಡೆತಡೆ ನಡುವೆಯೂ ನಿರಂತರವಾಗಿ ಪೆಟ್ರೋಲ್, ಡೀಸೆಲ್ ಹಾಗೂ ಎಲ್‍ಪಿಜಿಯನ್ನು ಉತ್ಪಾದಿಸಿತ್ತು ಎಂಬುದನ್ನು ಸ್ಮರಿಸಿದರು. ರಾಷ್ಟ್ರ ನಿರ್ಮಾಣದಲ್ಲಿ ಕೊಚ್ಚಿ ಸಂಸ್ಕರಣಾಗಾರದ ದೇಣಿಗೆಗೆ ನಾವು ಹೆಮ್ಮೆ ಪಡುತ್ತೇವೆ. ಆದರೆ, ಈಗ ನಮ್ಮ ನಿರೀಕ್ಷೆಗಳು ಹೆಚ್ಚಾಗಿವೆ ಎಂದು ಪ್ರಧಾನ ಮಂತ್ರಿ ಹೇಳಿದರು. ದಕ್ಷಿಣ ಭಾರತದಲ್ಲಿ ಪೆಟ್ರೋರಸಾಯನಿಕ ಕ್ರಾಂತಿಗೆ ಕೊಚ್ಚಿ ಸಂಸ್ಕರಣಾಗಾರ ನಾಯಕತ್ವ ವಹಿಸಲಿದೆ ಹಾಗೂ ನವ ಭಾರತದ ಹೆಚ್ಚುತ್ತಿರುವ ಅಗತ್ಯಗಳನ್ನು ಬೆಂಬಲಿಸಲಿದೆ ಎಂದು ಪ್ರಧಾನ ಮಂತ್ರಿ ಹಾರೈಸಿದರು.
ಎಟ್ಟುಮನೂರ್‍ನಲ್ಲಿ ಬಿಪಿಸಿಎಲ್‍ನ ಕೌಶಲಾಭಿವೃದ್ಧಿ ವಿದ್ಯಾಲಯದ ಎರಡನೇ ಕ್ಯಾಂಪಸ್‍ಗೆ ಪ್ರಧಾನ ಮಂತ್ರಿ ಅವರು ಶಿಲಾನ್ಯಾಸ ಮಾಡಿದರು. ಕೌಶಲಾಭಿವೃದ್ಧಿಗೆ ಇದು ನೆರವು ನೀಡಲಿದೆ ಹಾಗೂ ಯುವಜನರಿಗೆ ಉದ್ಯೋಗಾವಕಾಶ ಸೃಷ್ಟಿಸಲಿದೆ ಎಂದು ಪ್ರಧಾನ ಮಂತ್ರಿ ಹೇಳಿದರು.
ಇಂಡಿಯನ್ ಆಯಿಲ್‍ನ ಕೊಚ್ಚಿ ಎಲ್‍ಪಿಜಿ ಆಧರಿತ ಬಾಟ್ಲಿಂಗ್ ಘಟಕದ 50 ಕೋಟಿ ರೂ. ವೆಚ್ಚದ ಶೇಖರಣಾ ವ್ಯವಸ್ಥೆಯನ್ನು ಪ್ರಧಾನ ಮಂತ್ರಿ ಅವರು ದೇಶಕ್ಕೆ ಸಮರ್ಪಿಸಿದರು. ಇದು ಎಲ್‍ಪಿಜಿ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಮತ್ತು ಎಲ್‍ಪಿಜಿ ಟ್ಯಾಂಕರ್‍ಗಳ ಸಂಚಾರವನ್ನು ಕಡಿಮೆ ಮಾಡಲಿದೆ.
***
(Release ID: 1561746)