ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

2018 ರ ವರ್ಷಾಂತ್ಯದ ವರದಿ- ಕ್ರೀಡಾ ಇಲಾಖೆ ( ಯುವ ಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ)

Posted On: 10 DEC 2018 11:20AM by PIB Bengaluru

2018 ರ ವರ್ಷಾಂತ್ಯದ ವರದಿ- ಕ್ರೀಡಾ ಇಲಾಖೆ ( ಯುವ ಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ.)

ಕ್ರೀಡಾ ಕ್ಷೇತ್ರದ ಸಾಧನೆಗಳನ್ನು ಪರಿಗಣಿಸಿದರೆ 2018 ವರ್ಷ ಭಾರತಕ್ಕೆ ಪ್ರಮುಖ ಸಾಧನೆಯ ವರ್ಷ. ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿ ಸರಕಾರದ ಎರಡು ಪ್ರಮುಖ ಧೋರಣೆಗಳಾದ ಉನ್ನತ ಕ್ರೀಡಾ ಪ್ರತಿಭೆಗಳನ್ನು ಬೆಳೆಸುವುದು ಮತ್ತು ತಳ ಮಟ್ಟದಲ್ಲಿ ಬೆಳಕಿಗೆ ಬಾರದ ಕ್ರೀಡಾ ತಾರೆಗಳನ್ನು ಗುರುತಿಸುವುದು-ಧನಾತ್ಮಕ ಫಲಿತಾಂಶಗಳನ್ನು ಒದಗಿಸಿದೆ. ಗೋಲ್ಡ್ ಕೋಸ್ಟ್ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ 66 ಪದಕಗಳೊಂದಿಗೆ , ಜಕಾರ್ತಾ ಏಶ್ಯನ್ ಗೇಮ್ಸ್ ನಲ್ಲಿ 69 ಪದಕಗಳೊಂದಿಗೆ ಮತ್ತು ಪಾರಾ ಏಶ್ಯನ್ ಗೇಮ್ಸ್ ನಲ್ಲಿ 72 ಪದಕಗಳೊಂದಿಗೆ ಭಾರತವು ಈ ವರ್ಷ ತನ್ನ ಅತ್ಯುತ್ತಮ ಸಾಧನೆಯನ್ನು ತೋರಿದೆ. 2018 ರ ಅವಧಿಯಲ್ಲಿ ಕ್ರೀಡಾ ಇಲಾಖೆಯ ಸಾಧನೆಗಳು ಈ ಕೆಳಗಿನಂತಿವೆ:-

1. ಖೇಲೋ ಇಂಡಿಯಾ ಶಾಲಾ ಕ್ರೀಡಾ ಕೂಟಗಳು (ಕೆ.ಐ.ಎಸ್.ಜಿ.) , 2018:

ಮೊದಲ ಖೇಲೋ ಇಂಡಿಯಾ ಶಾಲಾ ಕ್ರೀಡಾ ಕೂಟಗಳು , 2018  ನ್ನು 2018 ರ ಜನವರಿ 31 ರಿಂದ ಫೆಬ್ರವರಿ 8 ರವರೆಗೆ ನಡೆಸಲಾಯಿತು.

* 29  ರಾಜ್ಯಗಳು ಮತ್ತು 7 ಕೇಂದ್ರಾಡಳಿತ ಪ್ರದೇಶಗಳಿಂದ 3507 ಆಟಗಾರರು ಭಾಗವಹಿಸಿದ್ದರು.

* ಪದಕ ಪಟ್ಟಿ-199 ಚಿನ್ನ + 199 ಬೆಳ್ಳಿ+ 275 ಕಂಚಿನ ಪದಕಗಳು.

* ರಾಜ್ಯಗಳ ದೊಡ್ಡ ತಂಡಗಳು:  

1. ಮಹಾರಾಷ್ಟ್ರ -331 ಆಟಗಾರರು

2. ಹರ್ಯಾಣ-388 ಆಟಗಾರರು

3. ದೆಹಲಿ- 359 ಆಟಗಾರರು.

·  ಕೆ.ಐ.ಎಸ್.ಜಿ.ಯಲ್ಲಿ ಪೂರಕ ಸಿಬ್ಬಂದಿಗಳು: 875 ಕೋಚ್ ಗಳು, 578 ಮ್ಯಾನೇಜರ್ ಗಳು.

·  ತಾಂತ್ರಿಕ ಮಾರ್ಗದರ್ಶನ ತಂಡ 578 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಮಾಣೀಕೃತ ತಾಂತ್ರಿಕ ಅಧಿಕಾರಿಗಳನ್ನು ಒಳಗೊಂಡಿದೆ.

·   ಮೆ. ಥಾಮಸ್ ಕುಕ್  ಇಂಟರ್ನ್ಯಾಶನಲ್  ಮೂಲಕ ವಿವಿಧ ಹೊಟೇಲುಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ.

·  ಪಾಲ್ಗೊಂಡ ಸ್ವಯಂ ಸೇವಕರ ಸಂಖ್ಯೆ 868

·  ಪ್ರತಿಭಾ ಶೋಧ ಪ್ರಕ್ರಿಯೆ ಮೂಲಕ ಸುಮಾರು 550 ಪ್ರತಿಭೆಗಳ ಗುರುತಿಸುವಿಕೆ.

·  ಸಮಗ್ರ ಚಾಂಪಿಯನ್ ಶಿಪ್ ಫಲಿತಾಂಶಗಳು:

1. ಹರ್ಯಾಣ-38 ಚಿನ್ನ, 26 ಬೆಳ್ಳಿ, 38 ಕಂಚು: ಒಟ್ಟು :102 ಪದಕಗಳು

2. ಮಹಾರಾಷ್ಟ್ರ -38 ಚಿನ್ನ, 26 ಬೆಳ್ಳಿ, 38 ಕಂಚು: ಒಟ್ಟು: 111 ಪದಕಗಳು.

3. ದಿಲ್ಲಿ -38 ಚಿನ್ನ, 26 ಬೆಳ್ಳಿ, 38 ಕಂಚು ಒಟ್ಟು: 94 ಪದಕಗಳು

2. ಖೇಲೋ ಇಂಡಿಯಾ ಶಾಲಾ ಕ್ರೀಡಾಕೂಟಗಳಲ್ಲಿ  2018 ರ ಸಾಲಿನ ಪ್ರಮುಖ ಸಾಧನೆಗಳು:

 

·         1178 ಕ್ರೀಡಾ ಪ್ರತಿಭೆಗಳನ್ನು ಗುರುತಿಸಲಾಗಿದೆ ಮತ್ತು ಅವರಿಗೆ ವಾರ್ಷಿಕ ತಲಾ 5 ಲಕ್ಷ ರೂ. ವೆಚ್ಚದಲ್ಲಿ ಮುಂದಿನ 8 ವರ್ಷ  ತರಬೇತಿ ನೀಡಲಾಗುತ್ತದೆ.

·         ಈಜಿನಲ್ಲಿ ಕರ್ನಾಟಕದ ಶ್ರೀಹರಿ ನಟರಾಜ ಅವರು 6 ಚಿನ್ನದ ಪದಕ ಮತ್ತು 1 ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಅವರು ಹಿರಿಯರ ವಿಭಾಗದಲ್ಲಿ 100 ಮೀಟರ್ ಬ್ಯಾಕ್ ಸ್ಟ್ರೋಕ್ ದಾಖಲೆಯನ್ನು 2018 ರ ಕೆ.ಐ.ಎಸ್.ಜಿ.ಯಲ್ಲಿ ಮುರಿದಿದ್ದಾರೆ. ಅವರ ಈ ಹಿಂದಿನ ಅವಧಿ 57.20 ಸೆಕೆಂಡ್ ಆಗಿತ್ತು, ಕೆ.ಐ.ಎಸ್.ಜಿ.ಯಲ್ಲಿ ಅವರು 56.90 ಸೆಕೆಂಡ್ ಸಮಯ ಪಡೆದುಕೊಂಡರು. ಅವರು ಏಶ್ಯನ್ ವಯೋ ಮಿತಿಯಲ್ಲಿ ಮತ್ತು ಯುವ ಒಲಿಂಪಿಕ್ಸ್ ಕ್ರೀಡಾ ಕೂಟಕ್ಕೆ ಅರ್ಹತೆ ಪಡೆದರು.

·         ಶೂಟಿಂಗ್ ನಲ್ಲಿ ಹರ್ಯಾಣಾದ ಮನು ಭಕೇರ್ 387 ಅಂಕಗಳೊಂದಿಗೆ ಹೊಸ ರಾಷ್ಟ್ರೀಯ ದಾಖಲೆಯನ್ನು ಮಹಿಳಾ ಏರ್ ಪಿಸ್ತೂಲ್ ಅರ್ಹತಾ ಸುತ್ತಿನಲ್ಲಿ ನಿರ್ಮಿಸಿದರು.  ಅಂತಿಮ ಸುತ್ತಿನಲ್ಲಿಯು ಕೂಡಾ ಮನು ಭಕೇರ್ 241.1 ಅಂಕಗಳೊಂದಿಗೆ 2017 ರಲ್ಲಿ ಕೇರಳದಲ್ಲಿ ಸಾಧಿಸಿದ ತಮ್ಮದೇ ಹಿಂದಿನ ರಾಷ್ಟ್ರೀಯ ದಾಖಲೆಯನ್ನು ಮುರಿದರು. ಅವರು ಕೂಡಾ 2018 ರ ಯುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕೋಟಾ ವಿಜೇತರು. 

·         ಅಥ್ಲೆಟಿಕ್ಸ್ ನಲ್ಲಿ ಉತ್ತರ ಪ್ರದೇಶದ ಅಭಿಷೇಕ ಸಿಂಗ್ ಶಾಟ್ ಪುಟ್ ನಲ್ಲಿ 18.73 ಮೀ. ಎಸೆತದೊಂದಿಗೆ ಚಿನ್ನ ಗೆದ್ದರು. ,ಮತ್ತು ಅತ್ಯುತ್ತಮ ಬಾಲ ಅಥ್ಲೀಟ್ ಆಗಿ ಘೋಷಿಸಲ್ಪಟ್ಟರು. 100 ಮೀ . ಹರ್ಡಲ್ಸ್ ನಲ್ಲಿ ಕೇರಳದ ಅಪರ್ಣಾ ರಾಯ್ 14.02 ಸೆಕೆಂಡಿನಲ್ಲಿ ಚಿನ್ನ ಗೆದ್ದರು. ಮತ್ತು ಅತ್ಯುತ್ತಮ ಬಾಲಕಿ ಅಥ್ಲೀಟ್ ಆಗಿ ಘೋಷಿಸಲ್ಪಟ್ಟರು.

3. ಪ್ರಜಾಪ್ರಭುತ್ವ ಪರೇಡ್ ನಲ್ಲಿ ಪಾಲ್ಗೊಂಡ ಸಚಿವಾಲಯದ ಸ್ತಬ್ದ ಚಿತ್ರ ಎಲ್ಲಾ ಸಚಿವಾಲಯಗಳಲ್ಲಿ ಅತ್ಯುತ್ತಮ ಎಂದು ನಿರ್ಣಯಿಸಲ್ಪಟ್ಟಿತು.

ಯುವ ಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ 2018 ರ ಪ್ರಜಾಪ್ರಭುತ್ವದಂದು ಪ್ರಸ್ತುತಪಡಿಸಿದ ಸ್ತಬ್ದ ಚಿತ್ರವು ಭಾರತ ಸರಕಾರದ ವಿವಿಧ ಸಚಿವಾಲಯಗಳು / ವಿಭಾಗಗಳು ಸಾದರಪಡಿಸಿದ ಸ್ತಬ್ದ ಚಿತ್ರಗಳಲ್ಲೆಲ್ಲ ಉತ್ತಮ ಎಂಬ ಮನ್ನಣೆಯನ್ನು ಗಳಿಸಿತು. ಜನವರಿ 28 ರಂದು ಹೊಸದಿಲ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ರೀಡಾ ಇಲಾಖೆಯ ಕಾರ್ಯದರ್ಶಿಗಳು ಗೌರವಾನ್ವಿತ ರಕ್ಷಾ ಮಂತ್ರಿಗಳಿಂದ ಉತ್ತಮ ಸ್ತಬ್ದ ಚಿತ್ರಕ್ಕಾಗಿ ಟ್ರೋಫಿ ಮತ್ತು ಪ್ರಮಾಣಪತ್ರ ಸ್ವೀಕರಿಸಿದರು. ಖೇಲೋ ಭಾರತ ಎನ್ನುವುದು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಈ ಸ್ತಬ್ದ ಚಿತ್ರದ ಮುಖ್ಯ ವಿಷಯವಾಗಿತ್ತು. 

 

4. ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿಗೆ (ಎನ್.ಎಸ್.ಡಿ.ಎಫ್.) ಗೆ 10 ಕೋ.ರೂ. ದೇಣಿಗೆ;

ಭಾರತ ಮೂಲಸೌಕರ್ಯ ಹಣಕಾಸು ಕಂಪೆನಿ ಲಿಮಿಟೆಡ್ ಸಂಸ್ಥೆಯು (ಐ.ಐ.ಎಫ್.ಸಿ.ಎಲ್.)  ಎನ್.ಎಸ್.ಡಿ.ಎಫ್. ಗೆ 10 ಕೋ.ರೂ.ಗಳ ದೇಣಿಗೆ ನೀಡಿದೆ. ಐ.ಐ.ಎಫ್.ಸಿ.ಎಲ್. ಒಟ್ಟು 30 ಕೋ.ರೂ.ಗಳ ದೇಣಿಗೆ ನೀಡಿದ್ದು, ಇದು ಮೂರನೇ ಕಂತಿನ ಹಣವಾಗಿದೆ. ಐ.ಐ.ಎಫ್.ಸಿ.ಎಲ್. ದೇಣಿಗೆಯನ್ನು ಬ್ಯಾಡ್ಮಿಂಟನ್, ಬಿಲ್ಲುಗಾರಿಕೆ ಮತ್ತು ಪಾರಾ ಕ್ರೀಡೆಗಳಂತಹ ಕ್ರೀಡೆಗಳ ಉತ್ತೇಜನಕ್ಕೆ ಬಳಸಲಾಗುವುದು. ಈ ಕ್ರೀಡಾ ಶಿಸ್ತುಗಳ ಕ್ರೀಡಾಳುಗಳಿಗೆ ಅವರ ತರಬೇತಿ ಮತ್ತು ಇತರ ಸೇವೆಗಳಿಗೆ ಮತ್ತು ಈ ಶಿಸ್ತಿನಲ್ಲಿರುವ ಆಕಾಡೆಮಿಗಳ ಸ್ಥಾಪನೆ / ಅಕಾಡೆಮಿಗಳಿಗೆ ಬೆಂಬಲ ನೀಡಲು ಈ ಹಣ ವಿನಿಯೋಗವಾಗಲಿದೆ.

ಒಲಿಂಪಿಕ್ಸ್ ಮತ್ತು ಇತರ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪದಕ ಗೆಲ್ಲುವ ಸಾಮರ್ಥ್ಯ ಇರುವ ಉನ್ನತ ಮಟ್ಟದ ಕ್ರೀಡಾಳುಗಳನ್ನು ಬೆಂಬಲಿಸುವ ಮೂಲಕ ಪ್ರಾವಿಣ್ಯತೆಯನ್ನು ಉತ್ತೇಜಿಸುವ ಉದ್ದೇಶದಿಂದ ಮತ್ತು ಆದ್ಯತಾ ಕ್ಷೇತ್ರಗಳಲ್ಲಿ ಕ್ರೀಡಾ ಮೂಲ ಸೌಕರ್ಯವನ್ನು ರೂಪಿಸಲು  ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿಯನ್ನು (ಎನ್.ಎಸ್.ಡಿ.ಎಫ್.) ಸ್ಥಾಪಿಸಲಾಗಿದೆ. ಈ ನಿಧಿಯು ಖಾಸಗಿ/ ಸಾರ್ವಜನಿಕ ಕಾರ್ಪೋರೇಟ್ ಸಂಸ್ಥೆಗಳಿಂದ ಮತ್ತು ಇತರ ಕಾನೂನು ಬದ್ಧ ಸಂಸ್ಥೆಗಳಾದ ಟ್ರಸ್ಟ್ / ಸೊಸೈಟಿಗಳು, ವ್ಯಕ್ತಿಗಳಿಂದ ದೇಣಿಗೆಯನ್ನು ಸ್ವೀಕರಿಸುತ್ತದೆ.

5. 2018ರ  ಕಾಮನ್ ವೆಲ್ತ್ ಕ್ರೀಡೆಗಳಲ್ಲಿ ಸಾಧನೆ:

2018 ರ ಏಪ್ರಿಲ್ ತಿಂಗಳ 4 ರಿಂದ 15 ರವರೆಗೆ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆದ 2018 ನೇ ಸಾಲಿನ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತವು ಸ್ಪರ್ಧಿಸಿತ್ತು. ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಪಾಲ್ಗೊಳ್ಳುತ್ತಿರಿವುದು 18 ನೇ ಬಾರಿ. 26 ಚಿನ್ನದ ಪದಕಗಳೊಂದಿಗೆ ಒಟ್ಟು 66 ಪದಕ (26 ಚಿನ್ನ, 20 ಬೆಳ್ಳಿ, ಮತ್ತು 20 ಕಂಚು ) ಗಳೊಂದಿಗೆ ಭಾರತವು ಪಂದ್ಯಾವಳಿಯಲ್ಲಿ ಮೂರನೆ ಸ್ಥಾನ ಪಡೆಯಿತು. 2010 ರ ಕಾಮನ್ ವೆಲ್ತ್ ಕ್ರೀಡಾಕೂಟದ ಬಳಿಕ ಭಾರತದ ಉತ್ತಮ ಸ್ಥಾನ ಮಾನ ಇದಾಗಿದೆ.

6. ಎಲ್.ಎನ್.ಐ.ಪಿ.ಇ. ಶ್ರೇಣೀಕರಣವನ್ನು ಯು.ಜಿ.ಸಿ.ಯಿಂದ ದರ್ಜೆ -1 ಡೀಮ್ಡ್ ಟು ಬಿ ಯುನಿವರ್ಸಿಟಿ ಎಂದು ಪರಿಗಣನೆ.

ವಿಶ್ವವಿದ್ಯಾಲಯ ಧನ ಸಹಾಯ ಆಯೋಗವು ಇತ್ತೀಚೆಗೆ ಗ್ವಾಲಿಯರಿನ ಲಕ್ಷ್ಮೀಬಾಯಿ ರಾಷ್ಟ್ರೀಯ ದೈಹಿಕ ಶಿಕ್ಷಣ ಸಂಸ್ಥೆಯನ್ನು ಉನ್ನತ ದರ್ಜೆಗೆ ಅಂದರೆ ದರ್ಜೆ-1, ಡೀಮ್ಡ್ ಟು ಬಿ ಯುನಿವರ್ಸಿಟಿ ಎಂದು ಯು.ಜಿ.ಸಿ. ( ಶ್ರೇಣೀಕೃತ ಸ್ವಾಯತ್ತೆ ನೀಡುವುದಕ್ಕಾಗಿ ವಿಶ್ವವಿದ್ಯಾಲಯಗಳ (ಮಾತ್ರ) ವರ್ಗೀಕರಣ ) ನಿಯಮಾವಳಿಗಳು ,2018 ರನ್ವಯ 19-06-2018 ರ ಪತ್ರದಲ್ಲಿ ಘೋಷಿಸಿದೆ. ಇದಕ್ಕೆ ಮೊದಲು ಈ ಸಂಸ್ಥೆ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿ (ಎನ್.ಎ.ಎ.ಸಿ.) ಯಿಂದ A++ ಎಂದು ಮಾನ್ಯತೆ ಪಡೆದಿತ್ತು ಮತ್ತು 11 ನೇ ರಾಷ್ಟ್ರೀಯ ಶಿಕ್ಷಣ  ಸಮಾವೇಶ 2017 ರಲ್ಲಿ “ ಭಾರತದಲ್ಲಿ ದೈಹಿಕ ಶಿಕ್ಷಣಕ್ಕಾಗಿರುವ ಅತ್ಯುತ್ತಮ ಸಂಸ್ಥೆ “ ಎಂದು ಪ್ರಶಸ್ತಿ ಪಡೆದಿತ್ತು. ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆದ ಕೌಶಲ್ಯ ಅಭಿವೃದ್ಧಿಗಾಗಿನ ಎರಡನೇ  ರಾಷ್ಟ್ರೀಯ ಉನ್ನತ ಶಿಕ್ಷಣ ಸಮಾವೇಶದಲ್ಲಿಯೂ ಮನ್ನಣೆಗೆ ಪಾತ್ರವಾಗಿತ್ತು.

7. ಮೌಲಾನಾ ಅಬುಲ್ ಕಲಾಂ ಅಜಾದ್ (ಎಂ.ಎ.ಕೆ.ಎ.) ಟ್ರೋಫಿಗಾಗಿರುವ ಮಾರ್ಗದರ್ಶಿಗಳ ಪರಿಷ್ಕರಣೆ:

ಕ್ರೀಡಾ ಕ್ಷೇತ್ರದ ಮೌಲಾನಾ ಅಬುಲ್ ಕಲಾಂ ಅಜಾದ್ (ಎಂ.ಎ.ಕೆ.ಎ.) ಟ್ರೋಫಿಗಾಗಿ ಉನ್ನತ ಸಾಧಕ ವಿಶ್ವವಿದ್ಯಾಲಯಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಗಳನ್ನು ಪರಿಷ್ಕರಿಸಿ ,ಸರಳಗೊಳಿಸಲು ಎಂ.ಎ.ಕೆ.ಎ. ಟ್ರೋಫಿಗಾಗಿರುವ ಪರ್ರಿಷ್ಕೃತ ಮಾರ್ಗದರ್ಶಿಗಳಿಗೆ ಕೇಂದ್ರ ಕ್ರೀಡಾ ಸಚಿವರು  8-6-2018 ರಂದು ಅನುಮೋದನೆ ನೀಡಿದ್ದಾರೆ. ಇದುವರೆಗೆ ಭಾರತೀಯ ವಿಶ್ವವಿದ್ಯಾಲಯಗಳ ಸಂಘಟನೆ  (ಎ.ಐ.ಯು.) ಅರ್ಜಿಗಳನ್ನು ಆಹ್ವಾನಿಸಿ ವಿಶ್ವವಿದ್ಯಾಲಯಗಳಿಂದ ಬರುತ್ತಿದ್ದ ಅರ್ಜಿಗಳನ್ನು ಪರಿಶೀಲಿಸುತ್ತಿತ್ತು. ಪರಿಷ್ಕೃತ ಮಾರ್ಗದರ್ಶಿಗಳ  ಪ್ರಕಾರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ/ ಭಾರತದ ಕ್ರೀಡಾ ಪ್ರಾಧಿಕಾರ ಅರ್ಜಿಗಳನ್ನು ಆಹ್ವಾನಿಸುತ್ತದೆ ಮತ್ತು ಅರ್ಜಿಗಳ ಪರಿಶೀಲನೆಯನ್ನು ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ/ ಭಾರತದ ಕ್ರೀಡಾ ಪ್ರಾಧಿಕಾರ ಗಳೇ ಪರಿಶೀಲನೆ ಮಾಡುತ್ತವೆ. ಎಂ.ಎ.ಕೆ.ಎ. ಟ್ರೋಫಿಗೆ ವಿಶ್ವವಿದ್ಯಾಲಯಗಳನ್ನು ಆಯ್ಕೆ ಮಾಡುವುದಕ್ಕೆ ಸಂಬಂಧಿಸಿದ  ಅಂಕಗಳನ್ನು ಲೆಕ್ಕ ಹಾಕುವ ಮಾದರಿಯನ್ನೂ ಬದಲಿಸಲಾಗಿದೆ. ವರ್ಷದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ನಡೆಯುವ ಟೂರ್ನಮೆಂಟ್ ಗಳನ್ನು ಅಂಕಗಳನ್ನು ಲೆಕ್ಕ ಹಾಕುವ ಸಂಧರ್ಭದಲ್ಲಿ ಪರಿಗಣಿಸಲಾಗುವುದಿಲ್ಲ. ವಿಶ್ವವಿದ್ಯಾಲಯಗಳಲ್ಲಿ  ಅತ್ಯುತ್ತಮ ಸಾಧಕ ವಿಶ್ವವಿದ್ಯಾಲಯಕ್ಕೆ ನೀಡಲಾಗುತ್ತಿದ್ದ ಪ್ರಶಸ್ತಿಯ ಮೊತ್ತವನ್ನು 10 ಲಕ್ಷ ರೂ. ಗಳಿಂದ 15 ಲಕ್ಷ ರೂ.ಗಳಿಗೆ ಏರಿಸಲಾಗಿದೆ. ಮೊದಲ ರನ್ನರ್ ಅಪ್ ಮತ್ತು 2 ನೇ ರನ್ನರ್ ಅಪ್ ವಿಶ್ವವಿದ್ಯಾಲಯಗಳಿಗೆ ಪ್ರಶಸ್ತಿ ಮೊತ್ತವನ್ನು ಅನುಕ್ರಮವಾಗಿ 5 ಲಕ್ಷ ರೂ.ಗಳಿಂದ 7.5 ಲಕ್ಷ ರೂ.ಗಳಿಗೆ ಮತ್ತು  3 ಲಕ್ಷ ರೂ.ಗಳಿಂದ 4.5 ಲಕ್ಷ ರೂ.ಗಳಿಗೆ ಏರಿಸಲಾಗಿದೆ.

8. ಪ್ರತಿಭಾವಂತ ಕ್ರೀಡಾಳುಗಳಿಗೆ ನಿವೃತ್ತಿವೇತನ ಪರಿಷ್ಕರಣೆ:

ಕ್ರೀಡಾಳುಗಳ ಕಲ್ಯಾಣ ಕ್ರಮದ ಪ್ರಮುಖ ಹೆಜ್ಜೆಯಾಗಿ , ಕೇಂದ್ರ ಕ್ರೀಡಾ ಸಚಿವರು ಪ್ರತಿಭಾವಂತ ಕ್ರೀಡಾಳುಗಳ ನಿವೃತ್ತಿ ವೇತನವನ್ನು ಮೇಲ್ಮುಖವಾಗಿ ಪರಿಷ್ಕರಣೆ ಮಾಡುವುದಕ್ಕೆ  7-6-2018  ರಂದು ಅನುಮೋದನೆ ನೀಡಿದ್ದಾರೆ. ಪರಿಷ್ಕರಣೆಯಿಂದಾಗಿ ಅಂತಾರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಗೆದ್ದ ಪದಕಗಳ ಮೇಲಿನ ನಿವೃತ್ತಿ ವೇತನದ ದರ ಹಾಲಿ ಇರುವ ದರಕ್ಕಿಂತ ದುಪ್ಪಟ್ಟಾಗಿದೆ. ಹೊಸ ನಿವೃತ್ತಿ ವೇತನದ ದರಗಳು ಮಾಸಿಕ ಕನಿಷ್ಟ ಮೊತ್ತವಾದ 12,000 ರೂ.ಗಳಿಂದ ಹಿಡಿದು 20,000 ರೂ.ಗಳವರೆಗೆ ಇವೆ. ಪಾರಾ ಒಲಿಂಪಿಕ್ಸ್ ಕ್ರೀಡಾ ಕೂಟ ಮತ್ತು ಪಾರಾ ಏಶ್ಯನ್ ಕ್ರೀಡಾಕೂಟಗಳಲ್ಲಿ ಪದಕ ಗೆದ್ದವರ ನಿವೃತ್ತಿ ವೇತನದ ದರವನ್ನು ಅನುಕ್ರಮವಾಗಿ ಒಲಿಂಪಿಕ್ ಕ್ರೀಡಾಕೂಟ ಮತ್ತು ಏಶ್ಯನ್ ಕ್ರೀಡಾಕೂಟಗಳಲ್ಲಿ ಪದಕ ಗೆದ್ದವರಿಗೆ ಸಮನಾಗಿಸಲಾಗಿದೆ. ನಿವೃತ್ತಿ ವೇತನದ ಪರಿಷ್ಕರಣೆ 2018 ರ ಏಪ್ರಿಲ್ 1 ರಿಂದ ಜಾರಿಯಲ್ಲಿದೆ.

9 ಖೇಲೋ ಇಂಡಿಯಾ ಅಡಿಯಲ್ಲಿ ವಿದ್ಯಾರ್ಥಿ ವೇತನ:

ಖೇಲೋ ಇಂಡಿಯಾ ಕ್ರೀಡಾಕೂಟವನ್ನು  ಯಶಸ್ವಿಯಾಗಿ ಸಂಘಟಿಸಿದ ಬಳಿಕ , ಕ್ರೀಡೆಯನ್ನು ಅಭಿವೃದ್ದಿಪಡಿಸುವ  ಉದ್ದೇಶದಿಂದ ಕ್ರೀಡಾ ಇಲಾಖೆಯು 22-7-2018 ರಂದು ಇನ್ನೊಂದು ಮಹತ್ವದ ಹೆಜ್ಜೆಯನ್ನಿಟ್ಟು ಖೇಲೋ ಭಾರತ ಪ್ರತಿಭಾ ಶೋಧ ಅಭಿವೃದ್ದಿ ಯೋಜನೆ ಅಡಿಯಲ್ಲಿ 1178 ಆಟಗಾರರಿಗೆ ವಿದ್ಯಾರ್ಥಿ ವೇತನಗಳನ್ನು ಮಂಜೂರು ಮಾಡಿತು. ಈ ವಿದ್ಯಾರ್ಥಿ ವೇತನ ಯೋಜನೆ ಅವರ ತರಬೇತಿ, ಅಭಿವೃದ್ದಿ, ಅಹಾರ ಮತ್ತು ವಾಸ್ತವ್ಯ ಹಾಗು ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳುವ ಅವಕಾಶ ಸಹಿತ ಅವರ ಇತರ ಕಿಸೆ ಖರ್ಚುಗಳನ್ನು ಒಳಗೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಈ ಕಾರ್ಯಕ್ರಮದಡಿಯಲ್ಲಿ ವಾರ್ಷಿಕ ಸ್ಟೈಪಂಡ್ ಆಗಿ 1.2 ಲಕ್ಷ ರೂ.ಗಳನ್ನು ಆಟಗಾರರಿಗೆ ಮೂರು ತಿಂಗಳಿಗೊಮ್ಮೆ ಅವರ ಖರ್ಚು ವೆಚ್ಚಗಳ ನಿಭಾವಣೆಗಾಗಿ ಕೊಡ ಮಾಡಲಾಗುತ್ತದೆ. ಗಾಯಗಳ ಚಿಕಿತ್ಸಾ ವೆಚ್ಚ, ಸಣ್ಣ ಮೊತ್ತವಾದರೂ ಬಹಳ ಪ್ರಮುಖವಾಗಿ ಅವರ, ಅವರ ಪೋಷಕರ/ ಅವರ ಕುಟುಂಬದ ಸದಸ್ಯರ  ಸ್ಥಳಿಯ ಪ್ರಯಾಣದ ಮೊತ್ತವನ್ನು ಇದರಲ್ಲಿ ಭರಿಸಲಾಗುತ್ತದೆ.

10 . ರಾಷ್ಟ್ರೀಯ ಆಂಟಿ ಡೋಪಿಂಗ್ ಏಜೆನ್ಸಿ (ಎನ್.ಎ.ಡಿ.ಎ.) :

1.       ವರ್ಷಾರಂಭದಲ್ಲಿ ಎನ್.ಎ.ಡಿ.ಎ. ಯು ದಿಲ್ಲಿಯಲ್ಲಿ ಮೊದಲ ಖೇಲೋ ಇಂಡಿಯಾ ಶಾಲಾ ಕ್ರೀಡಾಕೂಟದಲ್ಲಿ ತನ್ನ ಪ್ರಯತ್ನಗಳನ್ನು ಪ್ರಾರಂಭಿಸಿತು. ಇದರಿಂದ ಕ್ರೀಡಾ ಸಮಗ್ರತೆಯನ್ನು ಸಾಧಿಸಲಾಯಿತು ಮತ್ತು ಭಾಗವಹಿಸಿದ ಪ್ರತೀ ಕ್ರೀಡಾಳಿಗೂ ಕ್ರೀಡಾ ಸಮಗ್ರತೆಗಾಗಿರುವ ಅಂತಾರಾಷ್ಟ್ರೀಯ ಮಾನದಂಡಗಳ ಬಗ್ಗೆ ಜಾಗೃತಿ ಲಭಿಸಿತು. ಶಾಲಾ ಕ್ರೀಡಾ ಕೂಟಗಳು ಯಾವುದೇ ಮಾದಕ ವಸ್ತು ಮುಕ್ತವಾಗಿರುವಂತೆ ಮಾಡಲು ಒಟ್ಟು 377 ಡೋಪ್ ಪರೀಕ್ಷೆಗಳನ್ನು ಎನ್.ಎ.ಡಿ.ಎ. ವತಿಯಿಂದ ನಡೆಸಲಾಯಿತು . ಕಾಮನ್ ವೆಲ್ತ್ ಕ್ರೀಡಾಕೂಟ ಮತ್ತು ಏಶ್ಯನ್ ಕ್ರೀಡಾ ಕೂಟಗಳು 2018 ರ ಮಧ್ಯಭಾಗದಲ್ಲಿ ನಡೆಯುವ ಸಂಧರ್ಭದಲ್ಲಿ ಎನ್.ಎ.ಡಿ.ಎ. ಯು ಏಶ್ಯನ್ ಕ್ರೀಡಾ ಕೂಟಕ್ಕೆ ಮೊದಲು 498  ಭಾರತೀಯ ಅಥ್ಲೀಟ್ ಗಳನ್ನು ಪರೀಕ್ಷೆಗೆ ಒಳಪಡಿಸಿತು. ಇದು ಯಾವುದೇ ಅಂತಾರಾಷ್ಟ್ರೀಯ ಕ್ರೀಡಾ ಕೂಟಕ್ಕೆ ಮೊದಲು ಎನ್.ಎ.ಡಿ.ಎ. ಆಯೋಜಿಸಿದ ಅತ್ಯಂತ ದೊಡ್ಡ ಪರೀಕ್ಷಾ ವ್ಯವಸ್ಥೆಯಾಗಿತ್ತು. ಇದರಲ್ಲಿ 54 ಮಂದಿ ಭಾರತೀಯ ಅಥ್ಲೀಟ್ ಗಳು ಏಶ್ಯನ್ ಕ್ರೀಡಾ ಕೂಟಕ್ಕಾಗಿ ವಿದೇಶಗಳಲ್ಲಿ ತರಬೇತಿ ಪಡೆಯುತ್ತಿದ್ದವರನ್ನೂ ಎನ್.ಎ.ಡಿ.ಎ. ಪರೀಕ್ಷೆಗೆ ಒಳಪಡಿಸಿತು.  ಜೆಕ್ ಗಣರಾಜ್ಯ , ನೆದರ್ಲ್ಯಾಂಡ್, ಫಿನ್ಲ್ಯಾಂಡ್, ಜರ್ಮನಿ, ಥೈಲ್ಯಾಂಡ್ ಮತ್ತು ಭೂತಾನ್ ಗಳಲ್ಲಿ ತರಬೇತಿ ಪಡೆಯುತ್ತಿದ್ದವರನ್ನೂ ಈ ಪರೀಕ್ಷೆಗೆ ಒಳಪಡಿಸಲಾಯಿತು. ನೀತಿ ಸಂಹಿತೆ ಬದ್ದತೆಯನ್ನು ಮೇಲುಸ್ತುವಾರಿ ಮಾಡಲು ವಿಶ್ವ ಆಂಟಿ ಡೋಪಿಂಗ್ ಏಜೆನ್ಸಿ (ಡಬ್ಲ್ಯು.ಎ.ಡಿ.ಎ.) ಆಡಿಟ್ ತಂಡ ಎನ್.ಎ.ಡಿ.ಎ. ಯ ಆಂಟಿ ಡೋಪಿಂಗ್ ಕಾರ್ಯಕ್ರಮವನ್ನು ಕಳೆದ ವರ್ಷ ಅಡಿಟ್ ಮಾಡಿತು. ಡಬ್ಲ್ಯು.ಎ.ಡಿ.ಎ. ಯ ಅಡಿಟ್ ತಂಡ ಶಿಫಾರಸು ಮಾಡಿದ ಕ್ರಮಬದ್ಧವಾದ ಕ್ರಿಯಾ ವರದಿಯನ್ನು ಅನುಸರಿಸಿ ಎನ್.ಎ.ಡಿ.ಎ., ಭಾರತವು  ವಿವಿಧ ಕ್ಷೇತ್ರಗಳಲ್ಲಿ ಕ್ರಮಬದ್ಧವಾದ ಕ್ರಿಯಾ ಮಾದರಿಯನ್ನು ಅನುಷ್ಟಾನಕ್ಕೆ ತಂದಿತು ಮತ್ತು ಅದರ ನೀತಿ ಸಂಹಿತೆಗೆ ಬದ್ಧತೆಯನ್ನು ಸಾಧಿಸಿತು. ವಿಶ್ವ ಆಂಟಿ ಡೋಪಿಂಗ್ ಏಜೆನ್ಸಿಯು (ಡಬ್ಲ್ಯು. ಎ.ಡಿ.ಎ. )  ಪ್ರಕಟಿಸಿದ ವಾರ್ಷಿಕ ಅಂಕಿ ಅಂಶ ವರದಿಯ ಪ್ರಕಾರ ಭಾರತದಲ್ಲಿ ಆಂಟಿ ಡೋಪಿಂಗ್ ನಿಯಮಗಳ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಈ ಸಂಖ್ಯಾ ಕಡಿತದಿಂದಾಗಿ  ಡೋಪಿಂಗ್ ಪ್ರಕರಣಗಳ ಸಂಖ್ಯೆಯಲ್ಲಿ ಜಾಗತಿಕ ಮಟ್ಟದಲ್ಲಿ 3 ನೇ ಸ್ಥಾನ ಹೊಂದಿದ್ದ ಭಾರತ ಈಗ 6 ನೇ ಸ್ಥಾನಕ್ಕೆ ಬಂದಿದೆ.

11. ಮಣಿಪುರದ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯ:

ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯ ವಿಧೇಯಕ , 2018  ನ್ನು ಕ್ರೀಡಾ ಕ್ಷೇತ್ರದಲ್ಲಿ  ದೇಶದ  ಸ್ಥಾನ ಮಾನವನ್ನು ಎತ್ತರಿಸುವ ಚಿಂತನೆಯ ಭಾಗವಾಗಿ  ಮಣಿಪುರದಲ್ಲಿ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪಿಸುವುದಕ್ಕಾಗಿ 10-8-2017 ರಂದು ಲೋಕಸಭೆಯಲ್ಲಿ ಮಂಡಿಸಲಾಯಿತು. ಇದನ್ನು 2018 ರ ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿನ ಉಭಯ ಸದನಗಳೂ ಅಂಗೀಕರಿಸಿದವು. ರಾಷ್ಟ್ರಪತಿಗಳ ಒಪ್ಪಿಗೆ ದೊರೆತ ಬಳಿಕ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯ ಕಾಯ್ದೆ, 2018  ನ್ನು ಭಾರತದ ಗೆಜೆಟ್ಟಿನಲ್ಲಿ 2018 ರ ಆಗಸ್ಟ್ 17 ರಂದು ಪ್ರಕಟಿಸಲಾಯಿತು.

ಮಣಿಪುರದ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯವು ಕ್ರೀಡಾ ವಿಜ್ಞಾನ, ಕ್ರೀಡಾ ತಂತ್ರಜ್ಞಾನ, ಕ್ರೀಡಾ ಆಡಳಿತ, ಮತ್ತು ಕ್ರೀಡಾ ಕೋಚಿಂಗ್ ಕ್ಷೇತ್ರಗಳನ್ನು ಒಳಗೊಂಡಂತೆ  ಕ್ರೀಡಾ ಶಿಕ್ಷಣವನ್ನು ಉತ್ತೇಜಿಸುವ ಹಾಗು ಆಯ್ದ ಕ್ರೀಡಾ ಶಿಸ್ತುಗಳಿಗೆ ಸಂಬಂಧಿಸಿ ಅತ್ಯುತ್ತಮ ಅಂತಾರಾಷ್ಟ್ರೀಯ ಪದ್ದತಿಗಳನ್ನು ಅಳವಡಿಸಿಕೊಂಡು ತರಬೇತಿ ನೀಡುವ ರಾಷ್ಟ್ರೀಯ ತರಬೇತಿ ಕೇಂದ್ರವಾಗಿಯೂ ಕಾರ್ಯನಿರ್ವಹಿಸುವ ಮೊದಲ ಸಂಸ್ಥೆಯಾಗಿರುತ್ತದೆ.

ವಿಶ್ವವಿದ್ಯಾಲಯವು ಕ್ರೀಡೆಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಕಾರ್ಯಕ್ರಮಗಳನ್ನು ಕೋಚಿಂಗ್, ಕ್ರೀಡಾ ವಿಜ್ಞಾನಗಳು ಮತ್ತು ದೈಹಿಕ ಶಿಕ್ಷಣದ ವಿವಿಧ ಶಿಸ್ತುಗಳಲ್ಲಿ ಒದಗಿಸುತ್ತದೆ. ಭವಿಷ್ಯದಲ್ಲಿ ವಿವಿಧ ಕ್ರೀಡಾ ಶಿಕ್ಷಣ ಮತ್ತು ಕೋಚಿಂಗ್ ಶಿಸ್ತುಗಳನ್ನು ಒಳಗೊಂಡ ವಿಶೇಷ ಪದವಿ ಕಾರ್ಯಕ್ರಮಗಳು ಜಾರಿಗೆ ಬರಲಿವೆ.

ಗೌರವಾನ್ವಿತ ಪ್ರಧಾನ ಮಂತ್ರಿ ಅವರು 16-3-2018 ರಂದು ಇಂಫಾಲಾದಲ್ಲಿ ರಾಷ್ಟ್ರೀಯ ಕ್ರೀಡಾ ವಿಶ್ವ ವಿದ್ಯಾಲಯಕ್ಕೆ ಶಿಲಾನ್ಯಾಸ ನೆರವೇರಿಸಿದರು.

ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯವು ಇಂಫಾಲಾದ ಖುಮಾನ್ ಲಂಪಾಕ್ ಕ್ರೀಡಾ ಸಂಕೀರ್ಣದ ತಾತ್ಕಾಲಿಕ ಕ್ಯಾಂಪಸ್ಸಿನಿಂದ ಕಾರ್ಯನಿರ್ವಹಣೆ ಆರಂಭಿಸಿದೆ. ಮೊದಲ ಶೈಕ್ಷಣಿಕ ವರ್ಷದಲ್ಲಿ  ದೈಹಿಕ ಶಿಕ್ಷಣ ಮತ್ತು ಕ್ರೀಡೆಯಲ್ಲಿ ಪದವಿ (ಬಿ.ಪಿ.ಇ.ಎಸ್.) ಮತ್ತು ಬಿ.ಎಸ್ಸಿ. (ಕ್ರೀಡಾ ಕೋಚಿಂಗ್ ) ಪದವಿ ತರಗತಿಗಳನ್ನು 15-01-2018  ರಿಂದ ಆರಂಭಿಸಿದೆ.

2018-19 ರ ಅವಧಿಯ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿ ಸೇರ್ಪಡೆ ಪೂರ್ಣಗೊಂಡಿದೆ. ಬಿ.ಪಿ.ಎ.ಎಸ್. ಮತ್ತು ಬಿ.ಎಸ್ಸಿ (ಕ್ರೀಡಾ ಕೋಚಿಂಗ್ ) ಗಳಲ್ಲದೆ ಒಂದು ಹೊಸ ಸ್ನಾತಕೋತ್ತರ ಕೋರ್ಸ್ –ಎಂ.ಎ. (ಕ್ರೀಡಾ ಮನೋವಿಜ್ಞಾನ ) ವನ್ನು ಅಳವಡಿಸಿಕೊಳ್ಳಲಾಗಿದೆ.

12. ರಾಷ್ಟ್ರೀಯ ಕ್ರೀಡೆಗಳು ಮತ್ತು ಸಾಹಸ ಪ್ರಶಸ್ತಿಗಳು 2018:

ಭಾರತದ ರಾಷ್ಟ್ರಪತಿ ಶ್ರೀ ರಾಂ ನಾಥ್ ಕೋವಿಂದ್  ಅವರು 2018 ರ ಸೆಪ್ಟೆಂಬರ್ 25 ರಂದು 2018 ರ ಸಾಲಿನ ರಾಷ್ಟ್ರೀಯ ಕ್ರೀಡಾ ಮತ್ತು ಸಾಹಸ ಪ್ರಶಸ್ತಿಗಳನ್ನು ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನಿಸಿದರು.

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳ ವಿಭಾಗದಲ್ಲಿ ,ಪ್ರತಿಷ್ಟಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಎಸ್. ಮೀರಾಬಾಯಿ ಚಾನು (ಭಾರ ಎತ್ತುವಿಕೆ ) ಮತ್ತು ವಿರಾಟ್ ಕೋಹ್ಲಿ (ಕ್ರಿಕೆಟ್ ) ಅವರಿಗೆ ಪ್ರದಾನಿಸಲಾಯಿತು. ದ್ರೋಣಾಚಾರ್ಯ ಪ್ರಶಸ್ತಿ, ಅರ್ಜುನ ಪ್ರಶಸ್ತಿ ಮತ್ತು ಧ್ಯಾನ ಚಂದ ಪ್ರಶಸ್ತಿಗಳನ್ನು ವಿವಿಧ ಕ್ರೀಡಾ ಕ್ಷೇತ್ರದ 32 ಕ್ರೀಡಾಳುಗಳಿಗೆ /ಕೋಚ್ ಗಳಿಗೆ ಪ್ರದಾನಿಸಲಾಯಿತು.

ತೇನ್ ಸಿಂಗ್ ನೋರ್ಗೇ ರಾಷ್ಟ್ರೀಯ ಸಾಹಸ ಪ್ರಶಸ್ತಿಗಳ ವಿಭಾಗದಲ್ಲಿ  ಭೂ ಸಾಹಸ, ಜಲ ಸಾಹಸ ಕ್ರೀಡೆಗಳ ಕ್ಷೇತ್ರದ 10 ಮಂದಿಗೆ ಮತ್ತು ಜೀವಮಾನದ ಸಾಧನೆ ವಿಭಾಗದಲ್ಲಿ ಒಂದು ಪ್ರಶಸ್ತಿಯನ್ನು ನೀಡಲಾಯಿತು. ಮೌಲಾನಾ ಅಬುಲ್ ಕಲಾಂ ಟ್ರೋಫಿಯನ್ನು ಅಮೃತ್ ಸರದ ಗುರು ನಾನಕ್ ದೇವ್  ವಿಶ್ವವಿದ್ಯಾಲಯಕ್ಕೆ ಪ್ರದಾನಿಸಲಾಯಿತು.

ರಾಷ್ಟ್ರೀಯ ಖೇಲ್ ಪ್ರೋತ್ಸಾಹನ ಪುರಸ್ಕಾರವನ್ನು ಮೂರು ವಿಭಾಗಗಳಲ್ಲಿ ರಾಷ್ಟ್ರೀಯ ಇಸ್ಪಾಟ್ ನಿಗಮ ಲಿಮಿಟೆಡ್ ಗೆ ಬೆಳೆಯುತ್ತಿರುವ ಮತ್ತು ಯುವ ಪ್ರತಿಭೆಗಳನ್ನು ಗುರುತಿಸಿ ಪೋಷಿಸಿದ್ದಕ್ಕಾಗಿ, ಜೆ.ಎಸ್.ಡಬ್ಲ್ಯು. ಸ್ಟೀಲ್ ಗೆ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ಕ್ರೀಡೆಗಳನ್ನು ಪ್ರೋತ್ಸಾಹಿಸಿದ್ದಕ್ಕಾಗಿ ಮತ್ತು ಇಶಾ ಪ್ರತಿಷ್ಟಾನಕ್ಕೆ ಕ್ರೀಡಾ ಅಭಿವೃದ್ಧಿಗಾಗಿ ಪ್ರದಾನಿಸಲಾಯಿತು.

13. ಅಂತಾರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ ಭಾರತೀಯ ಖೋ ಖೋ ತಂಡಕ್ಕೆ ಹಣಕಾಸು ಬೆಂಬಲ:

2018 ರ ಸೆಪ್ಟೆಂಬರ್ 1 ರಿಂದ 4 ರವರೆಗೆ ಇಂಗ್ಲೆಂಡಿನಲ್ಲಿ ನಡೆದ ಮೊದಲ ಅಂತಾರಾಷ್ಟ್ರೀಯ ಖೋ ಖೋ ಚಾಂಪಿಯನ್ ಶಿಪ್ ನಲ್ಲಿ ಭಾರತದ ತಂಡದ ಭಾಗವಹಿಸುವಿಕೆಗೆ ಕೇಂದ್ರ ಕ್ರೀಡಾ ಸಚಿವರು ಅನುಮೋದನೆ ನೀಡಿದ್ದು, ತಂಡಕ್ಕೆ ಭಾರತ ಸರಕಾರ ಹಣಕಾಸು ನೆರವು ನೀಡಿತ್ತು. ಸಚಿವಾಲಯದ ಮಾರ್ಗದರ್ಶಿಗಳನ್ನು ಸಡಿಲಿಸಿ ಇದೇ ಮೊದಲ ಬಾರಿಗೆ ಅನುಮೋದನೆ ನೀಡಲಾಗಿತ್ತು ಖೋ ಖೋ ದಂತಹ ಕ್ರೀಡೆಗಳನ್ನು ’ಇತರ” ಎಂದು ವರ್ಗೀಕರಿಸಿದ್ದರಿಂದ ಇದರಡಿ ಬರುವ ಕ್ರೀಡೆಗಳ ಕ್ರೀಡಾಳುಗಳಿಗೆ ಅಂತಾರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಲು ಈ ಹಿಂದೆ ಹಣಕಾಸು ಬೆಂಬಲ ದೊರೆಯುತ್ತಿರಲಿಲ್ಲ.

14 . 2018 ರ ಏಶ್ಯನ್ ಕ್ರೀಡಾಕೂಟ ಮತ್ತು 2018 ರ ಪಾರಾ ಏಶ್ಯನ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಳುಗಳ ಶ್ಲ್ಯಾಘನಾರ್ಹ ಸಾಧನೆ:

ಇಂಡೋನೇಶಿಯಾದ ಜಕಾರ್ತಾ ಮತ್ತು ಪಾಲೇಂಬಾಂಗ್ ನಲ್ಲಿ 2018 ರ ಆಗಸ್ಟ್ 18 ರಿಂದ ಸೆಪ್ಟೆಂಬರ್  2 ರವರೆಗೆ ನಡೆದ ಏಶ್ಯನ್ ಕ್ರೀಡಾಕೂಟ 2018 ರಲ್ಲಿ ಭಾರತೀಯ ಕ್ರೀಡಾಳುಗಳು ಮತ್ತು ತಂಡಗಳು ಶ್ಲ್ಯಾಘನಾರ್ಹ ಸಾಧನೆ ಮೆರೆದವು. ಭಾರತವು 69 ಪದಕಗಳನ್ನು (15 ಚಿನ್ನ, 24 ಬೆಳ್ಳಿ, ಮತ್ತು 30 ಕಂಚು ) ಪಡೆದು ಪದಕ ಪಟ್ಟಿಯಲ್ಲಿ 8 ನೇ ಸ್ಥಾನ ಪಡೆಯಿತು.

ಗೌರವಾನ್ವಿತ ಪ್ರಧಾನ ಮಂತ್ರಿ ಅವರು ಏಶ್ಯನ್ ಕ್ರೀಡಾ ಕೂಟ 2018 ರ ಪದಕ ವಿಜೇತರನ್ನು 2018 ರ ಸೆಪ್ಟೆಂಬರ್ 5 ರಂದು ಸನ್ಮಾನಿಸಿದರು.

ಏಶ್ಯನ್ ಕ್ರೀಡಾಕೂಟ 2018 ರಲ್ಲಿ ಪದಕ ಗಳಿಸಿದವರನ್ನು ಸನ್ಮಾನಿಸಲು ಸಚಿವಾಲಯವು 2018 ರ ಸೆಪ್ಟೆಂಬರ್ 4 ರಂದು ಆಯೋಜಿಸಿದ್ದ ಪ್ರತ್ಯೇಕ ಸಮಾರಂಭದಲ್ಲಿ ಗೆದ್ದ ಕ್ರೀಡಾಪಟುಗಳಿಗೆ ನಗದು ಪಾರಿತೋಷಕಗಳನ್ನು ನೀಡಲಾಯಿತು. ಚಿನ್ನದ ಪದಕ ವಿಜೇತರಿಗೆ ರೂ. 30 ಲಕ್ಷ, ಬೆಳ್ಳಿ ಗೆದ್ದವರಿಗೆ ರೂ. 20 ಲಕ್ಷ, ಮತ್ತು ಕಂಚು ಗೆದ್ದವರಿಗೆ 10 ಲಕ್ಷ ರೂ.ಗಳನ್ನು ನೀಡಿ ಪುರಸ್ಕರಿಸಲಾಯಿತು.  

ಪದಕ ಪಟ್ಟಿಯಲ್ಲಿ ಭಾರತವು ಒಟ್ಟು 72 ಪದಕಗಳನ್ನು (15 ಚಿನ್ನ, 24 ಬೆಳ್ಳಿ, ಮತ್ತು 33 ಕಂಚಿನ ಪದಕಗಳು.) ಗೆದ್ದು 9 ನೇ ಸ್ಥಾನ ಪಡೆಯಿತು. ಏಶ್ಯನ್ ಪಾರಾ ಕ್ರೀಡಾಕೂಟದಲ್ಲಿ ( ಎ.ಪಿ.ಜಿ.) ಭಾರತ ಈ ಹಿಂದಿನ ಎಲ್ಲಾ ಸಾಧನೆಗಳನ್ನು ಹಿಂದಿಕ್ಕಿ ಭಾರೀ ಅಂತರದೊಂದಿಗೆ  ಅತ್ಯುತ್ತಮ ಸಾಧನೆ ಮೆರೆಯಿತು.

15. ಯುವ ಒಲಿಂಪಿಕ್ ಕ್ರೀಡಾಕೂಟ:

ಅರ್ಜೆಂಟೀನಾದ ಬ್ಯೂನೋಸ್ ಐರೆಸ್ ನಲ್ಲಿ ನಡೆದ ಯುವ ಒಲಿಂಪಿಕ್ ಕ್ರೀಡಾಕೂಟದಲ್ಲಿ (ವೈ.ಒ.ಜಿ.) ಭಾರತವು ಹಿಂದೆಂದೂ ಗಳಿಸಿರದ ಗರಿಷ್ಟ 13 ಪದಕಗಳನ್ನು ( 3 ಚಿನ್ನ, 9 ಬೆಳ್ಳಿ ಮತ್ತು 1 ಕಂಚಿನ ಪದಕ) ಗಳಿಸಿ ಉತ್ತಮ ಸಾಧನೆ ತೋರಿ, ಪದಕ ಪಟ್ಟಿಯಲ್ಲಿ 14 ನೇ ಸ್ಥಾನ ಪಡೆಯಿತು.

17. ಕ್ರೀಡಾಳುಗಳಿಗೆ ಹಣಕಾಸು ನೆರವು:

 

ಈ ಹಿಂದೆ ಗಮನಾರ್ಹ ಸಾಧನೆ ಮಾಡಿದ , ಕ್ರೀಡಾ ಕ್ಷೇತ್ರದಲ್ಲಿ ದೇಶಕ್ಕೆ ಕೀರ್ತಿ ತಂದ ,ಆರ್ಥಿಕವಾಗಿ ದುಃಸ್ಥಿತಿಯಲ್ಲಿರುವ ಕ್ರೀಡಾಳುಗಳ ನೆರವಿಗಾಗಿ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಪಂಡಿತ್ ದೀನದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕಲ್ಯಾಣ ನಿಧಿಯನ್ನು ಕ್ರೀಡಾಳುಗಳಿಗಾಗಿ (ಪಿ.ಡಿ.ಯು.ಎನ್.ಡಬ್ಲ್ಯು.ಎಫ್.ಎಸ್.) ರೂಪಿಸಿ, ನಿರ್ವಹಿಸುತ್ತಿದೆ.

2018-19  ರ ಅವಧಿಯಲ್ಲಿ ಪಿ.ಡಿ.ಯು.ಎನ್.ಡಬ್ಲ್ಯು. ಎಫ್.ಎಸ್. ನಿಂದ ಈ ಕೆಳಗಿನವರಿಗೆ ಹಣಕಾಸು ನೆರವನ್ನು ನೀಡಲಾಗಿದೆ.

·         ಶ್ರೀ ಎನ್.ಬ್ರಿಜ್ ಕಿಶೋರ್, ಜಿಮ್ನ್ಯಾಸ್ಟ್ ಕೋಚ್, ರೂ. 6 ಲಕ್ಷ ರೂ. ,  ವೈದ್ಯಕೀಯ ಚಿಕಿತ್ಸೆಗಾಗಿ

·         ಶ್ರೀ ಸುಮಿತ್ ರಭಾ ಅವರ ಕುಟುಂಬಕ್ಕೆ , ಮಾಜಿ ಫುಟ್ ಬಾಲ್ ಆಟಗಾರ,  5 ಲಕ್ಷ ರೂ. ವೈದ್ಯಕೀಯ ಚಿಕಿತ್ಸೆಗಾಗಿ

·         ಖೈದೆಮ್ ಕಲಾಂಬಿಯಾ ಚಾನು, ಕತ್ತಿ ವರಸೆ , 5 ಲಕ್ಷ ರೂ. , ವೈದ್ಯಕೀಯ ಚಿಕಿತ್ಸೆಗಾಗಿ

·  ಶ್ರೀ ಲಕ್ಸ್ಮೀ ಕಾಂತ ದಾಸ್ , 2 ಲಕ್ಷ ರೂ. ವೈದ್ಯಕೀಯ ಚಿಕಿತ್ಸೆಗಾಗಿ

·  ಶ್ರೀ ಲಿಂಬಾ ರಾಂ , ಬಿಲ್ಲುಗಾರಿಕೆ, 5 ಲಕ್ಷ ರೂ., ವೈದ್ಯಕೀಯ ಚಿಕಿತ್ಸೆಗಾಗಿ

·  ಗೊಹೆಲಾ ಬೋರೋ, ಬಿಲ್ಲುಗಾರಿಕೆ, 5 ಲಕ್ಷ ರೂ. ವೈದ್ಯಕೀಯ ಚಿಕಿತ್ಸೆಗಾಗಿ.

·  ಶ್ರೀ ಅಶೋಕ್ ಸೊರೇನ್ , ಬಿಲ್ಲುಗಾರಿಕೆ, 5 ಲಕ್ಷ ರೂ. ವೈದ್ಯಕೀಯ ಚಿಕಿತ್ಸೆಗೆ.

·  ಗರಿಮಾ ಜೋಷಿ, ಅಥ್ಲೀಟ್ , 5 ಲಕ್ಷ ರೂ. ವೈದ್ಯಕೀಯ ಚಿಕಿತ್ಸೆಗಾಗಿ.

·  ಶ್ರೀ ಪ್ರೇಮ್ ಲಾಲ್, ಮಾಜಿ ಕುಸ್ತಿ ಪಟು, 5 ಲಕ್ಷ ರೂ. , ವೈದ್ಯಕೀಯ ಚಿಕಿತ್ಸೆಗಾಗಿ

·  ಶ್ರೀ ಹಕಾಂ ಸಿಂಗ್ , ಮಾಜಿ ಅಥ್ಲೀಟ್, 10 ಲಕ್ಷ ರೂ. , ವೈದ್ಯಕೀಯ ಚಿಕಿತ್ಸೆಗಾಗಿ

·  ವಂದನಾ ಸೂರ್ಯವಂಶಿ, ಮಾಜಿ ಜುಡೋ ಆಟಗಾರರು, 2 ಲಕ್ಷ ರೂ. ಹಣಕಾಸು ಸ್ಥಿತಿಯನ್ನು ಉತ್ತಮಪಡಿಸುವುದಕ್ಕಾಗಿ.

·  ಶ್ರೀ. ಜಿ.ಲಕ್ಷ್ಮಣನ್ , ಅಥ್ಲೀಟ್, 10 ಲಕ್ಷ ರೂ. , ಹಣಕಾಸು ಸ್ಥಿತಿಯನ್ನು ಉತ್ತಮಪಡಿಸುವುದಕ್ಕಾಗಿ

17. 2018 ರ ಎ.ಐ.ಬಿ.ಎ.  ವನಿತೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ಗಳು

2018 ರ ಎ,.ಐ.ಬಿ.ಎ. ವನಿತೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ಗಳು ಭಾರತದ ಹೊಸದಿಲ್ಲಿಯಲ್ಲಿ 2018 ರ ನವೆಂಬರ್ 15-24 ರವರೆಗೆ ಕೆ.ಡಿ. ಜಾಧವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದವು. ಲೈಟ್ ಫ್ಲಯ್ ವೈಟ್ ವರ್ಗದ ಅಂತಿಮ ಹಣಾಹಣಿಯಲ್ಲಿ ಭಾರತದ ಮೇರಿ ಕೋಂ ಅವರು ಉಕ್ರೇನಿನ ಬಾಕ್ಸರ್ ಹನಾ ಒಕೋತಾ ಅವರನ್ನು ಮಣಿಸಿ ಚಿನ್ನ ಗೆದ್ದರು, ಅವರು ಎ.ಐ.ಬಿ.ಎ.ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ 6 ಚಿನ್ನ ಗೆದ್ದ ಮೊದಲ ಮಹಿಳಾ ಬಾಕ್ಸರ್ ಎಂದು ಇತಿಹಾಸ ನಿರ್ಮಿಸಿದರು. ಪದಕ ಪಟ್ಟಿಯಲ್ಲಿ ಭಾರತ ಒಂದು ಚಿನ್ನ , ಒಂದು ಬೆಳ್ಳಿ ಮತ್ತು ಎರಡು ಕಂಚು ಗೆದ್ದು ಮೂರನೇ ಸ್ಥಾನ ಪಡೆದುಕೊಂಡಿತು.

 

18ಕ್ರೀಡೆಯಲ್ಲಿ ಉದ್ಯಮಾಡಳಿತ ಸ್ನಾತಕೋತ್ತರ ಡಿಪ್ಲೊಮಾ: 

ದೇಶದಲ್ಲಿಯ ಒಟ್ಟು ಕ್ರೀಡಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ವಿವಿಧ ವಲಯಗಳಲ್ಲಿ ತಜ್ಞತೆಯನ್ನು ಅಭಿವೃದ್ಧಿ ಮಾಡಲು ಈ ಸಚಿವಾಲಯವು ರೋಹ್ಟಕ್ ನ ಭಾರತೀಯ ಉದ್ಯಮಾಡಳಿತ ಸಂಸ್ಥೆ (ಐ.ಐ.ಎಂ.) ಗೆ 2 ವರ್ಷಗಳ ವಾಣಿಜ್ಯ ಕೋರ್ಸ್ ಆರಂಭಿಸುವುದಕ್ಕೆ ಹಣಕಾಸು ಮತ್ತು ಮಾರ್ಗದರ್ಶನವನ್ನು ಒದಗಿಸಿದೆ. ಸಂಸ್ಥೆಯು ಈಗಾಗಲೇ ಆರಂಭಿಸಿರುವ ಇತರ ಉದ್ಯಮಾಡಳಿತ ಕೋರ್ಸುಗಳಂತೆಯೇ ಈ ಕ್ರೀಡಾ ಉದ್ಯಮಾಡಳಿತದ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸು 2018-19 ರ ಶೈಕ್ಷಣಿಕ ವರ್ಷದಿಂದ ಆರಂಭಗೊಂಡು  ಇತರ ಉದ್ಯಮಾಡಳಿತ ಕೋರ್ಸುಗಳಿಗೆ ಸಮನಾಗಿ ಮುನ್ನಡೆಯುತ್ತಿದೆ.

19    .ಎನ್.ಸಿ.ಎಸ್.ಎಸ್.ಆರ್. ಯೋಜನೆ ಅಡಿಯಲ್ಲಿ ವಿಶ್ವವಿದ್ಯಾಲಯಗಳು ಮತ್ತು ವೈದ್ಯಕೀಯ ಕಾಲೇಜುಗಳಿಗೆ ಬೆಂಬಲ

ರಾಷ್ಟ್ರೀಯ ಕ್ರೀಡಾ ವಿಜ್ಞಾನಗಳು ಮತ್ತು ಸಂಶೋಧನೆಯ ರಾಷ್ಟ್ರೀಯ ಕೇಂದ್ರವು ( ಎನ್.ಸಿ.ಎಸ್.ಎಸ್.ಆರ್.)  ಶ್ರೇಷ್ಟ ಮಟ್ಟದ ಅಥ್ಲೀಟ್ ಗಳ ಉತ್ತಮ ಸಾಧನೆಗೆ ಅನ್ವಯಿಸಿ ಉನ್ನತ ಮಟ್ಟದ ಸಂಶೋಧನೆ, ಶಿಕ್ಷಣ ಮತ್ತು ಅನ್ವೇಷಣೆಯ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆ ಎರಡು ಘಟಕಗಳನ್ನು ಹೊಂದಿದೆ: ಪಟಿಯಾಲಾದ ಎನ್.ಐ.ಎಸ್. ನಲ್ಲಿ ಎನ್.ಸಿ.ಎಸ್.ಎಸ್.ಆರ್. ಸ್ಥಾಪನೆ ಮತ್ತು ಇನ್ನೊಂದು ಆಯ್ದ ವಿಶ್ವವಿದ್ಯಾಲಯಗಳಲ್ಲಿ ಕ್ರೀಡಾ ವಿಜ್ಞಾನಗಳ ವಿಭಾಗಗಳಿಗೆ ಬೆಂಬಲದ  ರೂಪಿಸುವಿಕೆ ಹಾಗು ಆಯ್ದ ವೈದ್ಯಕೀಯ ಕಾಲೇಜುಗಳಲ್ಲಿ / ಸಂಸ್ಥೆಗಳಲ್ಲಿ/ ಆಸ್ಪತ್ರೆಗಳಲ್ಲಿ ಕ್ರೀಡಾ ವೈದ್ಯಕೀಯ ವಿಭಾಗಗಳಿಗೆ ಬೆಂಬಲ ರೂಪಿಸುವಿಕೆ. ಎಂ.ವೈ.ಎ.ಎಸ್. ಆಯ್ದ ವಿಶ್ವವಿದ್ಯಾಲಯಗಳಿಗೆ 25 ಕೋ.ರೂ.ಹಣಕಾಸು ಒದಗಿಸಲಿದೆ ಮತ್ತು ಆಯ್ದ ವೈದ್ಯಕೀಯ ಕಾಲೇಜು/ ಸಂಸ್ಥೆಗಳು/ ಆಸ್ಪತ್ರೆಗಳಿಗೆ 12.5  ಕೋ. ರೂ. ನಿಧಿಯನ್ನು 5 ವರ್ಷಗಳ ಅವಧಿಯಲ್ಲಿ ಒದಗಿಸಲಿದೆ ಮತ್ತು ಆ ಬಳಿಕ ಅವು ಸ್ವಾವಲಂಬಿಯಾಗುತ್ತವೆ. ವೈದ್ಯಕೀಯ ಕಾಲೇಜುಗಳ ಕ್ರೀಡಾ ವೈದ್ಯಕೀಯ ವಿಭಾಗಗಳು ಎಂ.ಬಿ.ಬಿ.ಎಸ್. ಬಳಿಕದ ಪದವಿಗಳಾದ ಕ್ರೀಡಾ ವೈದ್ಯಕೀಯ ಎಂ.ಡಿ., ಮತ್ತು ಕ್ರೀಡಾ ವೈದ್ಯಕೀಯ ಡಿಪ್ಲೊಮಾಗಳನ್ನು ನೀಡಲಿವೆ. ವಿಶ್ವವಿದ್ಯಾಲಯಗಳ ಕ್ರೀಡಾ ವಿಜ್ಞಾನ ವಿಭಾಗಗಳು ಕ್ರೀಡಾ ಫಿಸಿಯಾಲಜಿ, ಕ್ರೀಡಾ ಬಯೋಕೆಮಿಸ್ಟ್ರಿ, ಕ್ರೀಡಾ ನ್ಯೂಟ್ರಿಶನ್, ಕ್ರೀಡಾ ಬಯೋಮೆಕಾನಿಕ್ಸ್ ಎಂ.ಎಸ್ಸಿ. ಮತ್ತು ಕ್ರೀಡಾ ತರಬೇತಿ ವಿಧಾನಗಳಲ್ಲಿ ಕ್ರೀಡಾ ಎಂ.ಪಿ.ಟಿ., ಕ್ರೀಡಾ ಮನೋವಿಜ್ಞಾನದಲ್ಲಿ ಎಂ.ಎ. ಮತ್ತು ಕ್ರೀಡಾ ಆಂಥ್ರೋಪೋಮೆಟ್ರಿಯಲ್ಲಿ ಸರ್ಟಿಫಿಕೇಟ್ ಕೋರ್ಸುಗಳನ್ನು ನೀಡಲಿವೆ. ಯೋಜನೆಯ ಎರಡನೇಯ ಘಟಕಕ್ಕೆ ಪೂರಕವಾಗಿ ಈ ಕೆಳಗಿನ 6 ವಿಶ್ವವಿದ್ಯಾಲಯಗಳು ಮತ್ತು  6 ವೈದ್ಯಕೀಯ ಕಾಲೇಜುಗಳನ್ನು/ ಸಂಸ್ಥೆಗಳನ್ನು/ ಆಸ್ಪತ್ರೆಗಳನ್ನು ದೇಶದ ವಿವಿಧೆಡೆಯಿಂದ ಅನುಕ್ರಮವಾಗಿ ಕ್ರೀಡಾ ವಿಜ್ಞಾನ ವಿಭಾಗಗಳು ಮತ್ತು ಕ್ರೀಡಾ ವೈದ್ಯಕೀಯ ವಿಭಾಗಗಳನ್ನು ಸ್ಥಾಪಿಸುವುದಕ್ಕಾಗಿ  ಆಯ್ಕೆ ಮಾಡಲಾಗಿದೆ. ಕ್ರೀಡಾ ವಿಜ್ಞಾನಗಳ ವಿಭಾಗಗಳನ್ನು ಸ್ಥಾಪಿಸುವುದಕ್ಕೆಂದು ಆಯ್ಕೆ ಮಾಡಲಾದ ವಿಶ್ವವಿದ್ಯಾಲಯಗಳು/ ಸಂಸ್ಥೆಗಳ ಪಟ್ಟಿ: (1) ಗುರು ನಾನಕ್ ದೇವ್ ವಿಶ್ವವಿದ್ಯಾಲಯ, ಅಮೃತ್ ಸರ., (2) ಲಕ್ಷ್ಮೀಬಾಯಿ ದೈಹಿಕ ಶಿಕ್ಷಣ ರಾಷ್ಟ್ರೀಯ ಸಂಸ್ಥೆ, ಗ್ವಾಲಿಯರ್, (3) ಹೈದರಾಬಾದಿನ ರಾಷ್ಟ್ರೀಯ ಪೋಷಣೆ ಸಂಸ್ಥೆ ,(4) ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯ, (5) ರಾಜಸ್ಥಾನದ ಅಜ್ಮೀರ್ ನಲ್ಲಿರುವ ರಾಜಸ್ಥಾನ  ಕೇಂದ್ರೀಯ ವಿಶ್ವವಿದ್ಯಾಲಯ, ಮತ್ತು (6) ಪಶ್ಚಿಮ ಬಂಗಾಲದ ಕೋಲ್ಕೊತ್ತಾದ ಕಲ್ಕತ್ತಾ ವಿಶ್ವವಿದ್ಯಾಲಯ. ಕ್ರೀಡಾ ವೈದ್ಯಕೀಯ ವಿಭಾಗಗಳನ್ನು ಬೆಂಬಲಿಸಲು ಹಣಕಾಸು ಒದಗಿಸುವುದಕ್ಕೆ ಆಯ್ಕೆ ಮಾಡಲಾದ ವಿಶ್ವವಿದ್ಯಾಲಯಗಳು/ ಆಸ್ಪತ್ರೆಗಳು/ ವೈದ್ಯಕೀಯ ಕಾಲೇಜುಗಳ ಪಟ್ಟಿ: (1) ಲಕ್ನೋದಲ್ಲಿಯ  ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ, (2) ಹೊಸದಿಲ್ಲಿಯ ವರ್ಧಮಾನ ಮಹಾವೀರ ವೈದ್ಯಕೀಯ ಕಾಲೇಜು ಮತ್ತು ಸಫ್ದರ್ ಜಂಗ್ ಆಸ್ಪತ್ರೆ, (3) ಹರ್ಯಾನಾದ ರೋಹ್ಟಕ್ ನ ಪಂಡಿತ್ ಭಗವತ್ ದಯಾಲ್ ಶರ್ಮಾ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, (4) ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು , ಕರ್ನಾಟಕ, (5) ಮುಂಬಯಿಯ ಕೆ.ಇ.ಎಂ. ಆಸ್ಪತ್ರೆ ಮತ್ತು ಸೇತ್ ಜಿ.ಎಸ್. ವೈದ್ಯಕೀಯ ಕಾಲೇಜು, ಮತ್ತು (6) ಇಂಫಾಲಾದ ಪ್ರಾದೇಶಿಕ ವೈದ್ಯ ವಿಜ್ಞಾನಗಳ ಸಂಸ್ಥೆ. 

20. ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಗೆದ್ದವರಿಗೆ ಮತ್ತು ಅವರ ಕೋಚ್ ಗಳಿಗೆ ವಿಶೇಷ (ನಗದು) ಪ್ರಶಸ್ತಿ ಯೋಜನೆ: ಈ ಯೋಜನೆ ಅಡಿಯಲ್ಲಿ 2018-19 ನೇ ಸಾಲಿನಲ್ಲಿ ಇದುವರೆಗೆ 11.02 ಕೋ.ರೂ.ಗಳನ್ನು ವಿಜೇತ ಕ್ರೀಡಾಪಟುಗಳಿಗೆ ವಿತರಿಸಲಾಗಿದೆ.

###


(Release ID: 1558037) Visitor Counter : 479