ಸಂಪುಟ

ಸಹ್ಯ ಅಭಿವೃದ್ದಿ ಧ್ಯೇಯಗಳಿಗೆ ಸಂಬಂಧಿಸಿ ರಾಷ್ಟ್ರೀಯ ನಿಗಾ ಚೌಕಟ್ಟಿಗೆ ಸಂಪುಟದ ಒಪ್ಪಿಗೆ

Posted On: 24 OCT 2018 1:06PM by PIB Bengaluru

ಸಹ್ಯ ಅಭಿವೃದ್ದಿ ಧ್ಯೇಯಗಳಿಗೆ ಸಂಬಂಧಿಸಿ ರಾಷ್ಟ್ರೀಯ ನಿಗಾ ಚೌಕಟ್ಟಿಗೆ ಸಂಪುಟದ ಒಪ್ಪಿಗೆ 
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಸಹ್ಯ ಅಭಿವೃದ್ದಿ ಧ್ಯೇಯ (ಎಸ್.ಡಿ.ಜಿ.ಗಳ) ಸಂಬಂಧಿ ಗುರಿಗಳ ನಿಗಾ ವ್ಯವಸ್ಥೆಗಾಗಿ ರಾಷ್ಟ್ರೀಯ ಸೂಚ್ಯಂಕ ಚೌಕಟ್ಟನ್ನು  (ಎನ್.ಐ.ಎಫ್.) ಕಾಲ-ಕಾಲಕ್ಕೆ ಮರುವಿಮರ್ಶಿಸಿ  ಅದನ್ನು ಸೂಕ್ತ ಪರಿವರ್ತನೆಗೆ ಒಳಪಡಿಸಲು ಉನ್ನತಾಧಿಕಾರದ ಚಾಲನಾ ಸಮಿತಿ ರಚನೆಗೆ ಅಂಗೀಕಾರ ನೀಡಿತು.

 

ಭಾರತದ ಮುಖ್ಯ ಸಂಖ್ಯಾಶಾಸ್ತ್ರಜ್ಞರು ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ  ಮತ್ತು ಸಂಖ್ಯಾಶಾಸ್ತ್ರ ಹಾಗು ಕಾರ್ಯಕ್ರಮ ಅನುಷ್ಟಾನ ಸಚಿವಾಲಯದ ಕಾರ್ಯದರ್ಶಿ  (ಎಂ.ಒ.ಎಸ್.ಪಿ.ಐ.) , ದತ್ತಾಂಶ ಮೂಲದ ಸಚಿವಾಲಯಗಳ ಕಾರ್ಯದರ್ಶಿಗಳು ಮತ್ತು ನೀತಿ ಆಯೋಗದ ಸದಸ್ಯರು ಇದರ ಸದಸ್ಯರಾಗಿರುತ್ತಾರೆ  ಮತ್ತು ಇತರ ಸಂಬಂಧಿತ ಇಲಾಖೆಗಳ ಕಾರ್ಯದರ್ಶಿಗಳು  ವಿಶೇಷ ಆಹ್ವಾನಿತರಾಗಿರುತ್ತಾರೆ. ಕಾಲ-ಕಾಲಕ್ಕೆ ರಾಷ್ಟ್ರೀಯ ಸೂಚ್ಯಂಕ ಚೌಕಟ್ಟನ್ನು ಪುನರ್ವಿಮರ್ಶೆ ಮಾಡುವುದು ಮತ್ತು ಅದನ್ನು ಸುಧಾರಿಸುವುದು ಇದರ ಕೆಲಸವಾಗಿರುತ್ತದೆ.

 

 

ಗುರಿಗಳು:

 

ಅ) ಎಸ್.ಡಿ.ಜಿ.ಗಳನ್ನು ಅಭಿವೃದ್ದಿಯ ಸವಾಲುಗಳನ್ನು ಎದುರಿಸುವಂತೆ ಪ್ರಚಲಿತ ರಾಷ್ಟ್ರೀಯ ನೀತಿಗಳು, ಕಾರ್ಯಕ್ರಮಗಳು, ಮತ್ತು ವ್ಯೂಹಾತ್ಮಕ ಕ್ರಿಯಾ ಯೋಜನೆಗಳ ಮೂಲಕ ಮುಖ್ಯವಾಹಿನಿಗೆ ತರಲು ಕ್ರಮವಹಿಸುವುದು.

 

ಆ) ಎನ್.ಐ.ಎಫ್.ನ ಸಂಖ್ಯಾಶಾಸ್ತ್ರೀಯ ಸೂಚ್ಯಂಕಗಳು ರಾಷ್ಟ್ರೀಯ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಎಸ್.ಡಿ.ಜಿ.ಗಳನ್ನು ಮೇಲುಸ್ತುವಾರಿ ಮಾಡುವ ವ್ಯವಸ್ಥೆಯ ಬೆನ್ನೆಲುಬಾಗಿರುತ್ತವೆ. ಮತ್ತು  ಅವು  ವಿವಿಧ ಎಸ್.ಡಿ.ಜಿ.ಗಳ ಗುರಿ ಸಾಧನೆಗಾಗಿರುವ ನೀತಿಗಳ  ಫಲಿತಾಂಶಗಳ ವೈಜ್ಞಾನಿಕ ಅಳತೆಗೋಲಾಗಿರಲಿವೆ.

 

ಇ) ಸಂಖ್ಯಾಶಾಸ್ತ್ರೀಯ ಸೂಚ್ಯಂಕಗಳನ್ನು ಆಧರಿಸಿ ಎಂ.ಒ.ಎಸ್.ಪಿ.ಐ.ಯು  ಎಸ್.ಡಿ.ಜಿ.ಗಳ ಅನುಷ್ಟಾನಕ್ಕೆ  ಸಂಬಂಧಿಸಿ ರಾಷ್ಟ್ರೀಯ ವರದಿಗಳನ್ನು ಹೊರತರುತ್ತದೆ. ಈ ವರದಿಗಳು  ಪ್ರಗತಿಯ ಮೌಲ್ಯಮಾಪನಕ್ಕೆ ಅನುಕೂಲ ಒದಗಿಸುವುದಲ್ಲದೆ, ಸವಾಲುಗಳನ್ನು ಗುರುತಿಸಿ ರಾಷ್ಟ್ರೀಯ ಮಟ್ಟದಲ್ಲಿ ಅನುಸರಣಾ ಕಾರ್ಯಕ್ರಮಕ್ಕೆ ಶಿಫಾರಸುಗಳನ್ನು ನೀಡುವುದು .

 

ಈ) ಉನ್ನತ ಮಟ್ಟದ ಚಾಲನಾ ಸಮಿತಿಯು ರಾಷ್ಟ್ರೀಯ ಸೂಚ್ಯಂಕ ಚೌಕಟ್ಟನ್ನು ನಿಯಮಿತ ಕಾಲಾವಧಿ ಆಧಾರದಲ್ಲಿ ಸುಧಾರಣೆಗೆ ಸಂಬಂಧಿಸಿದಂತೆ ಪರಾಮರ್ಶೆ ನಡೆಸುವುದು

 

ಉ) ದತ್ತಾಂಶ ಮೂಲದ ಸಚಿವಾಲಯಗಳು /ಇಲಾಖೆಗಳು ಈ ಸೂಚ್ಯಂಕಗಳಿಗೆ ಸಂಬಂಧಿಸಿದಂತೆ ಅವಶ್ಯವೆನಿಸಿದ ಮಧ್ಯಂತರ ಅವಧಿಯಲ್ಲಿ ಎಂ.ಒ.ಎಸ್.ಪಿ.ಐ.ಗೆ ನಿಯಮಿತ  ಮಾಹಿತಿಯನ್ನು  ಒದಗಿಸುವ ಜವಾಬ್ದಾರಿಯನ್ನು ಹೊಂದಿರುತ್ತವೆ. ಮತ್ತು ಎಸ್.ಡಿ.ಜಿ.ಗಳ ರಾಷ್ಟ್ರೀಯ  ಹಾಗು ಉಪರಾಷ್ಟ್ರೀಯ ವರದಿಗಾರಿಕೆಯನ್ನು ಪ್ರತ್ಯೇಕಿಸುವ ಹೊಣೆಗಾರಿಕೆಯನ್ನು ಹೊಂದಿರುತ್ತವೆ.

 

ಊ) ನಿಕಟ ಮತ್ತು ಕ್ರಿಯಾಶೀಲ ನಿಗಾ ವ್ಯವಸ್ಥೆಗಾಗಿ ಆಧುನಿಕ ಮಾಹಿತಿ ತಂತ್ರಜ್ಞಾನ ಸಲಕರಣೆಗಳನ್ನು ಬಳಸಲಾಗುವುದು.

 

 

ಪ್ರಮುಖ ಪರಿಣಾಮ:

 

ಅ) ಎಸ್.ಡಿ.ಜಿ.ಗಳು ಅಭಿವೃದ್ದಿಯ  ಆರ್ಥಿಕ, ಸಾಮಾಜಿಕ ಮತ್ತು ಪರಿಸರದ ಆಯಾಮಗಳನ್ನು ಸಮಗ್ರಗೊಳಿಸುತ್ತವೆ. ಅವು ಬಡತನ ನಿರ್ಮೂಲನೆಯ ಉದ್ದೇಶವನ್ನು ಹೊಂದಿರುವುದಲ್ಲದೆ ಬದಲಾಗುತ್ತಿರುವ  ವಿಶ್ವದಲ್ಲಿ ’ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ (ಎಲ್ಲರೊಂದಿಗೆ, ಎಲ್ಲರ ಅಭಿವೃದ್ಧಿ)  ಎಂಬ ಮೂಲ ತತ್ವದಲ್ಲಿ  ಸಮೃದ್ದಿಯನ್ನು ಉತ್ತೇಜಿಸುತ್ತವೆ.

 

ಆ) 17  ಧ್ಯೇಯಗಳು  ಮತ್ತು 169  ಗುರಿಗಳನ್ನು ಹೊಂದಿರುವ ಎಸ್.ಡಿ.ಜಿ.ಗಳು ಸಹ್ಯ, ಎಲ್ಲರನ್ನೂ ಒಳಗೊಳ್ಳುವ ಮತ್ತು ಸಮಾನ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡುವ , ಎಲ್ಲರಿಗೂ ವಿಶಾಲ ವ್ಯಾಪ್ತಿಯ ಅವಕಾಶಗಳ ನಿರ್ಮಾಣ, ಅಸಮಾನತೆಯನ್ನು ಕಡಿಮೆ ಮಾಡುವ , ಜೀವಿಸುವುದಕ್ಕೆ ಸಂಬಂಧಿಸಿದ  ಮೂಲ ಮಾನದಂಡಗಳನ್ನು ಎತ್ತರಿಸುವ , ಸಮಾನ ಸಾಮಾಜಿಕ ಅಭಿವೃದ್ದಿಯನ್ನು ಪ್ರಚುರಪಡಿಸುವ ಮತ್ತು ಎಲ್ಲರನ್ನೂ ಒಳಗೊಳ್ಳುವ , ನೈಸರ್ಗಿಕ ಸಂಪನ್ಮೂಲಗಳು ಮತ್ತು ಪರಿಸರ ವ್ಯವಸ್ಥೆಯನ್ನು ಸಮಗ್ರವಾಗಿ ಮತ್ತು ಸಹ್ಯ ಮಾದರಿಯಲ್ಲಿ ನಿರ್ವಹಿಸುವ ಹಾಗು ಉತ್ತೇಜಿಸುವ ಇಂಗಿತವನ್ನು ಹೊಂದಿವೆ.

 

ಇ) ಫಲಿತಾಂಶ ಆಧಾರಿತ ನಿಗಾ ಮತ್ತು ರಾಷ್ಟ್ರ ಮಟ್ಟದಲ್ಲಿ ಎಸ್.ಡಿ.ಜಿ.ಗಳ ಪ್ರಗತಿಯ ವರದಿಯನ್ನು ದಾಖಲಿಸಲು ಎನ್.ಐ.ಎಫ್. ಸಹಾಯ ಮಾಡಲಿದೆ.

 

ರಾಷ್ಟ್ರೀಯ ಸೂಚ್ಯಂಕ ಚೌಕಟ್ಟಿನ ಅನುಷ್ಟಾನದ ಮೇಲೆ ಯಾವುದೇ ನೇರ ಹಣಕಾಸಿನ ಪರಿಣಾಮ ಇರುವುದಿಲ್ಲ. ಆದಾಗ್ಯೂ ಸಂಬಂಧಿತ ಸಚಿವಾಲಯಗಳು ಎಸ್.ಡಿ.ಜಿ ಸೂಚ್ಯಂಕಗಳತ್ತ ನಿಗಾ ವಹಿಸಲು ತಮ್ಮ ದತ್ತಾಂಶ ವ್ಯವಸ್ಥೆಯನ್ನು ಮರು ಹೊಂದಿಸಿಕೊಳ್ಳಬೇಕಲ್ಲದೆ  ದತ್ತಾಂಶ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳಬೇಕಾಗುತ್ತದೆ.

 

ಎಸ್.ಡಿ.ಜಿ.ಗಳು ಜನರ ಜೀವನದಲ್ಲಿ ಬದಲಾವಣೆಗಳನ್ನು ತರುತ್ತವೆ ಎಂಬ ನಿರೀಕ್ಷೆ ಇರುತ್ತದೆ ಮತ್ತು ಎಸ್.ಡಿ.ಜಿ. ಅನುಷ್ಟಾನದ ಪ್ರಗತಿಯ ಮೇಲೆ ನಿಗಾ ಇಡೀಯ ದೇಶಕ್ಕೆ ಲಾಭ ತರುತ್ತದೆ.

 

 

ಹಿನ್ನೆಲೆ:

 

ನ್ಯೂಯಾರ್ಕಿನ ವಿಶ್ವ ಸಂಸ್ಥೆ ಕೇಂದ್ರ ಕಚೇರಿಯಲ್ಲಿ 2000 ದಲ್ಲಿ ನಡೆದ ಮಿಲೇನಿಯಂ ಶೃಂಗದಲ್ಲಿ ಎಂಟು ಅಭಿವೃದ್ದಿ ಗುರಿಗಳು  “ ಮಿಲೇನಿಯಂ    ಅಭಿವೃದ್ದಿ ಗುರಿಗಳು (ಎಂ.ಡಿ.ಜಿ.ಗಳು ) ಎಂದು ಅಂಗೀಕರಿಸಲ್ಪಟ್ಟಿದ್ದವು , 2000 ದಿಂದ 2015 ರವರೆಗೆ ರಾಷ್ಟ್ರೀಯ ಅಭಿವೃದ್ದಿ ತಂತ್ರಗಳನ್ನು  ಅನುಸರಿಸುವುದಕ್ಕಾಗಿ ದೇಶಗಳಿಗೆ ಅವುಗಳು  ನೀಲ ನಕ್ಷೆಯಂತಿದ್ದವು. ಎಂ.ಜಿ.ಡಿ.ಯು ಎಂಟು ಗುರಿಗಳನ್ನು ನಿಗದಿ ಮಾಡಿತ್ತು ಮತ್ತು ಅದು ವಿವಿಧ ಅಭಿವೃದ್ದಿ ವಿಷಯಗಳನ್ನು ಉದ್ದೇಶಿಸಿತ್ತು. ಎಂ.ಜಿ.ಡಿ ಗುರಿಗಳನ್ನು ಸಾಧಿಸುವಲ್ಲಿ ದೇಶಗಳ ನಡುವೆ  ಅಸಮಾನತೆ ಇರುವುದರಿಂದಾಗಿ ಮತ್ತು ಎಂ.ಜಿ.ಡಿ.ಯ ಉಪಯುಕ್ತತೆಯ ಬಗ್ಗೆ ಮೌಲ್ಯಮಾಪನ ಮಾಡಲು ಹೊಸ ಸಮಾಲೋಚನೆಗಳನ್ನು ಆರಂಭಿಸಬೇಕಾದ ಆವಶ್ಯಕತೆಯನ್ನು ಮನಗಾಣಲಾಯಿತು. ಮತ್ತು  2015 ರ ಬಳಿಕ ವಿಶ್ವದಲ್ಲಿ ಅಭಿವೃದ್ದಿ ಸಹಕಾರ ಸಾಗಬೇಕಾದ ಹಾದಿಯನ್ನು ಮಾರ್ಗದರ್ಶನ ಮಾಡಲು ಉತ್ತರಾಧಿಕಾರಿ ಸಾಧ್ಯತೆಯನ್ನು ಅನ್ವೇಷಿಸುವುದಕ್ಕೂ ಇದು ಅಗತ್ಯವಾಯಿತು. 

 

ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ತನ್ನ 70  ನೇ ಅಧಿವೇಶನದಲ್ಲಿ ಮುಂದಿನ 15  ವರ್ಷಗಳ ಅವಧಿಗೆ ಸಹ್ಯ ಅಭಿವೃದ್ದಿ ಗುರಿಗಳನ್ನು ( ಎಸ್.ಡಿ. ಜಿ.ಗಳನ್ನು ) ಪರಿಗಣಿಸಿ ಅಂಗೀಕರಿಸಿದೆ. 17 ಎಸ್.ಡಿ.ಜಿ.ಗಳು 2016 ರ ಜನವರಿ 1 ರಿಂದ ಜಾರಿಗೆ ಬಂದಿವೆ. ಇವುಗಳು ಕಾನೂನಿನ್ವಯ ಬಂಧಿಸಲ್ಪಡದಿದ್ದರೂ ಅವುಗಳು ಅಂತಾರಾಷ್ಟ್ರೀಯ ಕರಾರುಗಳೆಂಬಂತೆ ಪರಿಗಣಿಸಲ್ಪಡುತ್ತವೆ ಮತ್ತು ಅವು ಮುಂದಿನ ಹದಿನೈದು ವರ್ಷ ದೇಶೀಯ ವೆಚ್ಚ ಆದ್ಯತೆಗಳನ್ನು ಪುನರ್ಮನನಕ್ಕೆ ಒಡ್ಡುತ್ತವೆ. ದೇಶಗಳು ಈ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಜವಾಬ್ದಾರಿ ವಹಿಸಿಕೊಂಡು  ಮತ್ತು ರಾಷ್ಟ್ರೀಯ ಚೌಕಟ್ಟನ್ನು ರೂಪಿಸಬೇಕೆಂಬ ನಿರೀಕ್ಷೆ ಇರುತ್ತದೆ. ಇದರ ಅನುಷ್ಟಾನ ಮತ್ತು ಯಶಸ್ಸು ಆಯಾ ದೇಶಗಳ ಸ್ವಂತ ಸಹ್ಯ ಅಭಿವೃದ್ದಿ ನೀತಿಗಳು, ಯೋಜನೆಗಳು, ಮತ್ತು ಕಾರ್ಯಕ್ರಮಗಳನ್ನು ಅವಲಂಬಿಸಿರುತ್ತವೆ.ರಾಷ್ಟ್ರ ಮಟ್ಟದಲ್ಲಿ ಅವುಗಳ ಗುರಿಗಳ ಅನುಸರಣೆ, ಅನುಷ್ಟಾನ ನಿಟ್ಟಿನಲ್ಲಿಯ ಪ್ರಗತಿ ಮತ್ತು ಪುನರ್ವಿಮರ್ಶೆ ಆಯಾ ದೇಶಗಳ ಹೊಣೆಗಾರಿಕೆ. ದೇಶದ ಮಟ್ಟದಲ್ಲಿ ಎಸ್.ಡಿ.ಜಿ. ಅಡಿಯಲ್ಲಿ ಪ್ರಗತಿಯ ಮೇಲುಸ್ತುವಾರಿ ನಿಗಾ ಕ್ರಮಗಳು ಗುಣಮಟ್ಟ, ತಲುಪುವಿಕೆ ಮತ್ತು ಸಕಾಲದಲ್ಲಿ ದತ್ತಾಂಶಗಳ ಲಭ್ಯತೆಯನ್ನು ಅಪೇಕ್ಷಿಸುತ್ತವೆ.



(Release ID: 1550731) Visitor Counter : 104