ಪ್ರಧಾನ ಮಂತ್ರಿಯವರ ಕಛೇರಿ

“ಸ್ವಚ್ಛತೆಯೇ ಸೇವೆ”ಉದ್ಘಾಟಿಸಿ, ವಿಡಿಯೋ ಸಂವಾದದ ಮೂಲಕ ದೇಶಾದ್ಯಂತದ ವಿವಿಧ ಜನವರ್ಗದೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ 

Posted On: 15 SEP 2018 2:11PM by PIB Bengaluru

“ಸ್ವಚ್ಛತೆಯೇ ಸೇವೆ”ಉದ್ಘಾಟಿಸಿ, ವಿಡಿಯೋ ಸಂವಾದದ ಮೂಲಕ ದೇಶಾದ್ಯಂತದ ವಿವಿಧ ಜನವರ್ಗದೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸ್ವಚ್ಛ ಭಾರತ ಅಭಿಯಾನದಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ಉತ್ತೇಜಿಸುವ ಮತ್ತು ಸ್ವಚ್ಛ ಭಾರತದ ಬಾಪೂ ಅವರ ಕನಸನ್ನು ನನಸು ಮಾಡುವ ಸಲುವಾಗಿ  ಸ್ವಚ್ಛತೆಯೇ ಸೇವೆ ಆಂದೋಲನಕ್ಕೆ ಚಾಲನೆ ನೀಡಿದರು.

ಇಂದು ಚಾಲನೆ ನೀಡಲಾದ ಸ್ವಚ್ಛತೆಯೇ ಸೇವೆ ಆಂದೋಲನವು ಸ್ವಚ್ಛತೆಯೆಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಸೃಜಿಸುವ ಉದ್ದೇಶ ಹೊಂದಿದೆ. ಅಕ್ಟೋಬರ್ 2, 2018ರಂದು ನಾಲ್ಕು ವರ್ಷ ಪೂರೈಸಲಿರುವ ಸ್ವಚ್ಛ ಭಾರತ ಅಭಿಯಾನ ಮತ್ತು ಮಹಾತ್ಮಾ ಗಾಂಧಿ ಅವರ 150ನೇ ಜಯಂತೋತ್ಸವ ಆರಂಭದ ಅಂಗವಾಗಿ ಸ್ವಚ್ಛತೆಯೇ ಸೇವೆ ಆರಂಭಿಸಲಾಗಿದೆ. ಪ್ರಧಾನಮಂತ್ರಿಯವರು ಸ್ವಚ್ಛ ಭಾರತ ನಿರ್ಮಿಸುವ ಪ್ರಯತ್ನಕ್ಕೆ ಬಲ ನೀಡಲು ಈ ಆಂದೋಲನದ ಭಾಗವಾಗುವಂತೆ ಜನತೆಗೆ ಮನವಿ ಮಾಡಿದರು.

ಪ್ರಧಾನಮಂತ್ರಿಯವರು ವಿಡಿಯೋ ಸಂವಾದದ ಮೂಲಕ ದೇಶದಾದ್ಯಂತದ 17 ಸ್ಥಳಗಳಲ್ಲಿನ ವಿವಿಧ ಜನವರ್ಗದವರೊಂದಿಗೆ ಸಂವಾದ ನಡೆಸಿದರು.

ಸಂವಾದಕ್ಕೆ ಚಾಲನೆ ನೀಡಿದ ಪ್ರಧಾನಮಂತ್ರಿಯವರು, ಕಳೆದ ನಾಲ್ಕುವರ್ಷಗಳ ಅವಧಿಯೊಳಗೆ ಭಾರತದ  450 ಜಿಲ್ಲೆಗಳು ಹೇಗೆ ಬಯಲು ಶೌಚ ಮುಕ್ತವಾಗಿವೆ ಎಂಬುದೂ ಸೇರಿದಂತೆ ಪ್ರಮುಖ ಸಾಧನೆಗಳನ್ನು ಹಂಚಿಕೊಂಡರು. 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಅವಧಿಯಲ್ಲಿ ಬಯಲು ಶೌಚ ಮುಕ್ತ ಎಂದು ತಮ್ಮನ್ನು ಘೋಷಿಸಿಕೊಂಡಿವೆ ಎಂದರು.  ಶೌಚಾಲಯ ಅಥವಾ ತ್ಯಾಜ್ಯದ ಬುಟ್ಟಿಗಳ ಸೌಲಭ್ಯವನ್ನಷ್ಟೇ ನೀಡಿದರೆ ಸಾಲದು ಎಂದು ಪ್ರತಿಪಾದಿಸಿದ ಅವರು, ಸ್ವಚ್ಛತೆ ಅಥವಾ ನೈರ್ಮಲ್ಯ ಒಂದು ಸ್ವಭಾವವಾಗಿ ಅಂತರ್ಗತವಾಗಬೇಕು ಎಂದು ಹೇಳಿದರು. ದೇಶಾದ್ಯಂತದ ಜನರು ಈಗ ಈ ಹವ್ಯಾಸವನ್ನು ರೂಢಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಅಸ್ಸಾಂನ ದಿಬ್ರೂಗಢದ ಶಾಲಾ ಮಕ್ಕಳು ಪ್ರಧಾನಮಂತ್ರಿಯವರಿಗೆ, ತಮ್ಮ ಶಾಲೆ ಮತ್ತು ಪ್ರದೇಶವನ್ನು ಸ್ವಚ್ಛವಾಗಿಡುವಲ್ಲಿ ತಮ್ಮ ಕೊಡುಗೆಯ ಬಗ್ಗೆ ವಿವರಿಸಿದರು. ಪ್ರಧಾನಮಂತ್ರಿಯವರು ಯುವಜನರು ಸಾಮಾಜಿಕ ಬದಲಾವಣೆಯ ರಾಯಭಾರಿಗಳು ಎಂದು ಉಲ್ಲೇಖಿಸಿದರು. ಅವರು ಸ್ವಚ್ಛತೆಯ ಸಂದೇಶವನ್ನು ಮುಂದುವರಿಸುತ್ತಿರುವ ಮಾರ್ಗ ಶ್ಲಾಘನಾರ್ಹ ಎಂದರು.

ಗುಜರಾತ್ ನ ಮೆಹಸಾನಾದಲ್ಲಿ ನೆರೆದಿದ್ದ ಹಾಲು ಮತ್ತು ಕೃಷಿ ಸಹಕಾರ ಸಂಸ್ಥೆಗಳ ಸದಸ್ಯರು, ಪ್ರಧಾನಮಂತ್ರಿಯವರೊಂದಿಗೆ ಸಂವಾದ ನಡೆಸಿ, ಸ್ವಚ್ಛತೆಯೆಡೆಗೆ ತಾವು ಕೈಗೊಂಡ ಉಪಕ್ರಮಗಳನ್ನು ತಿಳಿಸಿದರು. ಸ್ವಚ್ಛ ಭಾರತ ಅಭಿಯಾನವು ಅತಿಸಾರದಂಥ ಕಾಯಿಲೆಗಳನ್ನು ತಗ್ಗಿಸಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು.

ಮುಂಬೈನ ಗೇಟ್ ವೇ ಆಫ್ ಇಂಡಿಯಾದಿಂದ ಚಿತ್ರನಟ ಅಮಿತಾಬ್ ಬಚ್ಚನ್ ಅವರು, ಮುಂಬೈನ ಬೀಚ್ ಸ್ವಚ್ಛಗೊಳಿಸುವುದೂ ಸೇರಿದಂತೆ ತಾವು ಭಾಗಿಯಾಗಿರುವ ವಿವಿಧ ಸ್ವಚ್ಛತಾ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಹೆಸರಾಂತ ಕೈಗಾರಿಕೋದ್ಯಮಿ ರತನ್ ಟಾಟಾ ಅವರೂ ಸಂವಾದದಲ್ಲಿ ಭಾಗಿಯಾದರು. ಭಾರತದ ಪ್ರತಿ ಪ್ರಜೆಯ ಕನಸಾದ ಈ ಆಂದೋಲನ ಆರಂಭಕ್ಕೆ ಸಹಾಯ ಮಾಡುವ ಮಹತ್ವದ ಗೌರವ ಮತ್ತು ಸೌಭಾಗ್ಯ ಇದು ಎಂದರು. ಪ್ರಧಾನಮಂತ್ರಿಯವರು, ಸ್ವಚ್ಛ ಭಾರತ ನಿರ್ಮಾಣದಲ್ಲಿ ಖಾಸಗಿ ವಲಯ ಮಹತ್ವದ ಪಾತ್ರ ವಹಿಸಬೇಕೆಂದು ತಾವು ನಂಬಿರುವುದಾಗಿ ಹೇಳಿದರು.

ಶ್ರೀ ಸಂಜಯ್ ಗುಪ್ತಾ ಸೇರಿದಂತೆ ದೈನಿಕ್ ಜಾಗರಣ್ ನ ಹಿರಿಯ ಪತ್ರಕರ್ತರು ನೋಡಿಯಾದಿಂದ ಸಂವಾದದಲ್ಲಿ ಪಾಲ್ಗೊಂಡು, ಸ್ವಚ್ಛತೆಯನ್ನು ಮುಂದುವರಿಸುವ ತಮ್ಮ ಪ್ರಯತ್ನಗಳನ್ನು ಹಂಚಿಕೊಂಡರು. ಲಡಾಕ್ ನ ಎತ್ತರದ ಗಿರಿ ಪ್ರದೇಶ ಪಾನ್ಗೋಂಗ್ ಸರೋವರದಿಂದ ಐಟಿಬಿಪಿಯ ಯೋಧರು ಪಾಲ್ಗೊಂಡರು. ಪ್ರಧಾನಮಂತ್ರಿಯವರು ಐ.ಟಿ.ಬಿ.ಪಿ. ಯೋಧರು ದೇಶಕ್ಕಾಗಿ ಮಾಡುತ್ತಿರುವ ಸೇವೆ ಮತ್ತು ಧೈರ್ಯವನ್ನು ಶ್ಲಾಘಿಸಿದರು.

ಸದ್ಗುರು ಜಗ್ಗಿ ವಾಸುದೇವ ಅವರು ಕೊಯಮತ್ತೂರಿನಿಂದ ಸಂವಾದದಲ್ಲಿ ಭಾಗಿಯಾಗಿ,  ಸ್ವಚ್ಛತಾ ಆಂದೋಲನದ ಬಗ್ಗೆ ನಿರ್ದಿಷ್ಟ ಮಟ್ಟದ ಉತ್ಸಾಹವಿದ್ದು, ಇದನ್ನು ತಾವು ತಮ್ಮ ಪ್ರವಾಸದ ವೇಳೆ ಕಂಡಿರುವುದಾಗಿ ತಿಳಿಸಿದರು. ಇಂಥ ಇಂಬು ನೀಡಿದ್ದಕ್ಕಾಗಿ ಅವರು ಪ್ರಧಾನಮಂತ್ರಿಯವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ವಚ್ಛ ಭಾರತ ಯಾವುದೇ ಸರ್ಕಾರದ ಅಥವಾ ಯಾವುದೇ ಪ್ರಧಾನಮಂತ್ರಿಯವರ ಆಂದೋಲನವಲ್ಲ ಬದಲಾಗಿ ಇದು ಇಡೀ ದೇಶದ ಆಂದೋಲನ ಎಂದು ಹೇಳಿದರು.

ಛತ್ತೀಸಗಢದ ದಂತೇವಾಡ ಮತ್ತು ತಮಿಳುನಾಡಿನ ಸೇಲಂ ನ ಮಹಿಳಾ ಸ್ವಚ್ಛಾಗ್ರಹಿಗಳು ಸ್ವಚ್ಛತೆಯೆಡೆಗೆ ತಾವು ಕೈಗೊಂಡ ಕ್ರಮಗಳ ಬಗ್ಗೆ ಪ್ರಧಾನಮಂತ್ರಿಯವರಿಗೆ ವಿವರಿಸಿದರು. ಪಾಟ್ನಾ ಸಾಹಿಬ್ ಗುರುದ್ವಾರ ಮತ್ತು ಮೌಂಟ್ ಅಬುವಿನ ದದಿ ಜನ್ಕಿಜಿಯ ಆಧ್ಯಾತ್ಮಿಕ ನಾಯಕರು ಮತ್ತು ನಾಗರಿಕರು ಸಹ ಪ್ರಧಾನಮಂತ್ರಿಯವರೊಂದಿಗೆ ಸಂವಾದ ನಡೆಸಿದರು. ಸ್ವಚ್ಥತೆಯ ನಿಟ್ಟಿನಲ್ಲಿ ಎಲ್ಲರೂ ಅದರಲ್ಲೂ ಬ್ರಹ್ಮಕುಮಾರ ಸಂಸ್ಥಾನದ ಪ್ರಯತ್ನಗಳಿಗೆ ಪ್ರಧಾನಮಂತ್ರಿಯವರು ಧನ್ಯವಾದ ಅರ್ಪಿಸಿದರು. ಮಧ್ಯಪ್ರದೇಶದ ರಾಜಗಢ ಮತ್ತು ಉತ್ತರ ಪ್ರದೇಶದ ಫತೇಪುರ್ ನಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೂ ಸೇರಿದಂತೆ ನಾಗರಿಕರೊಂದಿಗೆ ಪ್ರಧಾನಮಂತ್ರಿಯವರು ಸಂವಾದ ನಡೆಸಿದರು. ಆಧ್ಯಾತ್ಮಿಕ ಗುರುಗಳಾದ ಶ್ರೀ ಶ್ರೀ ರವಿ ಶಂಕರ್ ಅವರು ಬೆಂಗಳೂರಿನಿಂದ ಸಂವಾದದಲ್ಲಿ ಪಾಲ್ಗೊಂಡರು. ಪ್ರಧಾನಮಂತ್ರಿಯವರು ದೇಶದ ಜನರನ್ನು ಅದರಲ್ಲೂ ಯುವಕರನ್ನು ಉತ್ಸಾಹಿಗಳಾಗಿ ಮಾಡಿದ್ದಾರೆ ಎಂದರು.

ಉತ್ತರ ಪ್ರದೇಶದ ಬಿಜ್ನೂರ್ ನಿಂದ ಗಂಗೆಯನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ನಿರತರಾಗಿರುವ ಸ್ವಯಂಸೇವಕರೊಂದಿಗೆ ಪ್ರಧಾನಮಂತ್ರಿಯವರು ಸಂವಾದ ನಡೆಸಿದರು. ಗಂಗಾ ಮಾತೆಯ ಶುದ್ಧೀಕರಣ ಪ್ರಯತ್ನಕ್ಕಾಗಿ ಪ್ರಧಾನಮಂತ್ರಿಯವರು ಅವರನ್ನು ಶ್ಲಾಘಿಸಿದರು. ಗಂಗಾ ನದಿಯ ದಂಡೆಯಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬ ನಾಗರಿಕರೂ ಸ್ವಚ್ಛತೆಯೇ ಸೇವೆ ಆಂದೋಲನದ ವೇಳೆ ನದಿಯನ್ನು ಸ್ವಚ್ಛ ಮಾಡುವ ಕಾರ್ಯದಲ್ಲಿ ಸ್ವಯಂಸೇವಕರಾಗುವಂತೆ ಕರೆ ನೀಡಿದರು. ಅಜ್ಮೀರ್ ಷರೀಫ್ ದರ್ಗಾದ ಭಕ್ತಾದಿಗಳು ಮತ್ತು ಹರಿಯಾಣದ ರೆವಾರಿಯ ರೈಲ್ವೆ ಸಿಬ್ಬಂದಿ ಸಹ ಪ್ರಧಾನಮಂತ್ರಿಯವರೊಂದಿಗೆ ಸಂವಾದ ನಡೆಸಿದರು. ಕೊಲ್ಲಂನಿಂದ ಮಾ ಅಮೃತಾನಂದಮಯಿ ಅವರು ಸಂವಾದದಲ್ಲಿ ಭಾಗಿಯಾದರು.  

ಸಂವಾದದ ಸಾರವನ್ನು ಸಂಕ್ಷಿಪ್ತವಾಗಿ ವಿವರಿಸಿದ ಪ್ರಧಾನಮಂತ್ರಿ, ಸ್ವಚ್ಛಾಗ್ರಹಿಗಳ ಪಾತ್ರವನ್ನು ಶ್ಲಾಘಿಸಿ, ಅವರ ಪಾತ್ರವನ್ನು ಇತಿಹಾಸ ಸದಾ ಸ್ಮರಿಸುತ್ತದೆ ಎಂದರು.  ಸ್ವಚ್ಛತೆಯ ಕಡೆಗೆ ನಮ್ಮ ವಿಶ್ವಾಸ ಹಾಗೂ ದೃಢ ಸಂಕಲ್ಪ ಆಕಾಶದಷ್ಟೇ ಎತ್ತರವಾಗಿದೆ ಎಂದು ಅವರು ಹೇಳಿದರು. ಸ್ವಚ್ಛತೆಯೇ ಸೇವೆಗಾಗಿ ಶ್ರಮಿಸುವಂತೆ ದೇಶದ ಜನತೆಗೆ ಅವರು ಕರೆ ನೀಡಿದರು.

*****



(Release ID: 1546360) Visitor Counter : 170