ಪ್ರಧಾನ ಮಂತ್ರಿಯವರ ಕಛೇರಿ

ಶಿಕ್ಷಕರ ದಿನದಂದು ಶಿಕ್ಷಕ ಸಮುದಾಯಕ್ಕೆ ಪ್ರಧಾನಮಂತ್ರಿ ಶ್ರೀ ಮೋದಿ ಅವರಿಂದ ಪತ್ರ. 

Posted On: 05 SEP 2018 7:38PM by PIB Bengaluru

ಶಿಕ್ಷಕರ ದಿನದಂದು ಶಿಕ್ಷಕ ಸಮುದಾಯಕ್ಕೆ ಪ್ರಧಾನಮಂತ್ರಿ ಶ್ರೀ ಮೋದಿ ಅವರಿಂದ ಪತ್ರ. 
 

ಶಿಕ್ಷಕರ ದಿನದಂದು ಶಿಕ್ಷಕರ ಸಮುದಾಯಕ್ಕೆ ಶುಭಾಶಯ ಕೋರಿ, ಡಾ. ಎಸ್. ರಾಧಾಕೃಷ್ಣನ್ ಅವರಿಗೆ ಗೌರವ ಸಲ್ಲಿಸಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶಿಕ್ಷಕರು ಪ್ರೇರಣೆ ನೀಡುವಂತಹವರು ಮಾತ್ರವಲ್ಲದೆ, ಮಾಹಿತಿ ನೀಡುವ, ಸುಶಿಕ್ಷಿತರನ್ನಾಗಿಸುವ, ಜ್ಞಾನದ ಉನ್ನತಕ್ಕೇರಿಸುವವರೂ ಆಗಿದ್ದಾರೆ ಎಂದು ಬಣ್ಣಿಸಿದ್ದಾರೆ. 

ಲಕ್ಷಾಂತರ ಶಿಕ್ಷಕರಿಗೆ ಕಳುಹಿಸಿರುವ ಮಿಂಚಂಚೆ ( ಇಮೇಲ್) ಯಲ್ಲಿ ಪ್ರಧಾನಮಂತ್ರಿ ಅವರು ಮಕ್ಕಳ ಜೀವನದ ಮೇಲೆ ಅವರ ಭಾರೀ ಪ್ರಭಾವವನ್ನು ಪ್ರಸ್ತಾಪಿಸಿ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಬೆಳೆಸುವ ಮೌಲ್ಯಗಳು ಜೀವನ ಪರ್ಯಂತ ಅವರಲ್ಲಿರುತ್ತವೆ ಎಂದಿದ್ದಾರೆ. 

ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ “ಶಿಕ್ಷಕ ವೃತ್ತಿ ವ್ಯಕ್ತಿಯ ಗುಣ, ಸಾಮರ್ಥ್ಯ ಮತ್ತು ಭವಿಷ್ಯವನ್ನು ರೂಪಿಸುವ ಅತ್ಯಂತ ಶ್ರೇಷ್ಟ ವೃತ್ತಿ”ಎಂಬ ಹೇಳಿಕೆಯನ್ನು ಪ್ರಧಾನಮಂತ್ರಿ ಅವರು ಉಲ್ಲೇಖಿಸಿದ್ದಾರೆ.

21 ನೇ ಶತಮಾನವನ್ನು ಶಿಕ್ಷಣ, ಸಂಶೋಧನೆ, ಮತ್ತು ಅನ್ವೇಷಣೆಯನ್ನು ಆದ್ಯತೆಯಾಗಿ ಪರಿಗಣಿಸಿದ ಸಮಾಜಗಳು ರೂಪಿಸುತ್ತವೆ.” ಇದರಲ್ಲಿ ನಮ್ಮ ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖವಾದುದು”ಎಂದು ಪ್ರಧಾನಮಂತ್ರಿ ಅವರು ಹೇಳಿದ್ದಾರೆ. 

“ತಂತ್ರಜ್ಞಾನದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ನೀವು ತಿಳಿದುಕೊಂಡಿದ್ದೀರಿ ಎಂಬ ಬಗ್ಗೆ ಮತ್ತು ನಿಮ್ಮ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಚಾಲ್ತಿಯಲ್ಲಿರುವ ಸಂಗತಿಗಳ ಬಗ್ಗೆ ಅರಿವು ಒದಗಿಸುತ್ತಿದ್ದೀರಿ ಎಂಬ ಬಗ್ಗೆ ನನಗೆ ಖಚಿತವಿದೆ“ ಎಂದು ಪ್ರಧಾನಮಂತ್ರಿ ಅವರು ಶಿಕ್ಷಕರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ. ಭಾರತ ಸರಕಾರವು ಶಿಕ್ಷಣ ಕ್ಷೇತ್ರದಲ್ಲಿ ತರಲುದ್ದೇಶಿಸಿರುವ ಪ್ರಮುಖ ಬದಲಾವಣೆಯ ಪ್ರಯತ್ನಗಳ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. 

“ನಿಮ್ಮಂತಹ ಶಿಕ್ಷಕರ ಚಾರಿತ್ರಿಕ ಪ್ರಯತ್ನಗಳಿಗೆ ಧನ್ಯವಾದಗಳು, ಆದ್ಯತೆ ಈಗ ಗಾತ್ರದಿಂದ ಫಲಿತಾಂಶಗಳತ್ತ ವಾಲಿದೆ. ಬೋಧನೆಯಿಂದ ಕಲಿಕೆಯತ್ತ ಸಾಗಿದೆ. ಅಟಲ್ ಟಿಂಕರಿಂಗ್ ಲ್ಯಾಬ್ ಮೂಲಕ ಕೌಶಲ್ಯ ಅಭಿವೃದ್ದಿಗೆ ಬಹಳಷ್ಟು ಪ್ರಾಮುಖ್ಯತೆ ದೊರಕಿದೆ. ದೇಶಾದ್ಯಂತ ಹಲವಾರು ವಿಶ್ವವಿದ್ಯಾಲಯಗಳು ಸ್ಥಾಪನೆಯಾಗಿವೆ. ಇದರಿಂದಾಗಿ ಯಾವುದೇ ಯುವಜನತೆ ಉತ್ತಮ ಶಿಕ್ಷಣದ ಅವಕಾಶದಿಂದ ವಂಚಿತರಾಗದಂತಹ ಪರಿಸ್ಥಿತಿ ಉದ್ಭವಿಸಿದೆ. “ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. 

ಅಕ್ಟೋಬರ್ 2 ರಂದು ಮಹಾತ್ಮಾ ಗಾಂಧೀಜಿ ಅವರ 150 ನೇ ಜನ್ಮ ದಿನಾಚರಣೆ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ ಎಂಬುದರತ್ತ ಗಮನ ಸೆಳೆದ ಪ್ರಧಾನಮಂತ್ರಿ ಅವರು ಬಾಪು ಅವರ ಶ್ರೇಷ್ಟ ಚಿಂತನೆ ಮತ್ತು ಆದರ್ಶಗಳನ್ನು ಹೊಸ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ಮುಂಚೂಣಿ ಪಾತ್ರ ವಹಿಸಬೇಕು ಎಂದರು ಮತ್ತು “ಸ್ವಚ್ಚ ಭಾರತ ಆಂದೋಲನ ಬಲಪಡಿಸುವಲ್ಲಿ ಶಿಕ್ಷಕ ಸಮುದಾಯದ ಅತಿ ದೊಡ್ಡ ಪಾತ್ರವನ್ನು “ಎಂದು ಪ್ರಧಾನಮಂತ್ರಿ ಅವರು ಪ್ರಶಂಸಿಸಿದರು. 

ದೇಶವು ಸ್ವಾತಂತ್ರ್ಯದ 75ನೇ ವರ್ಷಾಚರಣೆ ಆಚರಿಸುವಾಗ, 2022 ಇಸವಿಯೊಳಗೆ, ನವ ಭಾರತ ಎಂಬ ತಮ್ಮ ಚಿಂತನೆಯನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿ ಅವರು ಬರಲಿರುವ ನಾಲ್ಕು ವರ್ಷಗಳನ್ನು ನಮ್ಮ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವದಾನ ಮಾಡಿದವರ ಚಿಂತನೆ ಮತ್ತು ಕನಸುಗಳನ್ನು ಸಾಕಾರಗೊಳಿಸುವತ್ತ ಮುಡಿಪಾಗಿಡುವಂತೆ ಶಿಕ್ಷಕ ಸಮುದಾಯಕ್ಕೆ ಪ್ರಧಾನಮಂತ್ರಿ ಅವರು ಮನವಿ ಮಾಡಿದರು. 

“ನಿಮ್ಮ ಹೃದಯಕ್ಕೆ ಹತ್ತಿರವಾದ ಯಾವುದಾದರೊಂದು ವಿಷಯದತ್ತ ಗಮನ ಹರಿಸಿ, ಸ್ಥಳೀಯ ಸಮುದಾಯಗಳನ್ನು ಒಂದುಗೂಡಿಸಿ ಮತ್ತು ನಿಮ್ಮ ಸುತ್ತಲಿರುವವರ ಜೀವನದಲ್ಲಿ ಧನಾತ್ಮಕ ಬದಲಾವಣೆಯನ್ನು ತನ್ನಿ ಎಂದು ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ. ಇದು ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಸೂಕ್ತ ಗೌರವವಾಗಿರುತ್ತದೆ ಮತ್ತು ನವ ಭಾರತ ಕಟ್ಟಲು ಸಹಾಯವಾಗುತ್ತದೆ “ ಎಂದು ಪ್ರಧಾನಮಂತ್ರಿ ಅವರು ಹೇಳಿದ್ದಾರೆ.
 

***



(Release ID: 1545532) Visitor Counter : 98