ಸಂಪುಟ

ಭಾರತೀಯ ಅಂಚೆ ಪಾವತಿ ಬ್ಯಾಂಕ್ ಸ್ಥಾಪನೆಗಾಗಿ ಪರಿಷ್ಕೃತ ಯೋಜನಾ ವೆಚ್ಚಕ್ಕೆ ಸಂಪುಟದ ಅನುಮೋದನೆ 

Posted On: 29 AUG 2018 1:02PM by PIB Bengaluru

ಭಾರತೀಯ ಅಂಚೆ ಪಾವತಿ ಬ್ಯಾಂಕ್ ಸ್ಥಾಪನೆಗಾಗಿ ಪರಿಷ್ಕೃತ ಯೋಜನಾ ವೆಚ್ಚಕ್ಕೆ ಸಂಪುಟದ ಅನುಮೋದನೆ 
 

ದೇಶಾದ್ಯಂತದ ಅಂಚೆ ಕಚೇರಿಗಳಲ್ಲಿ ಬ್ಯಾಂಕಿಂಗ್ ಸೇವೆಗೆ ಉತ್ತೇಜನ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತೀಯ ಅಂಚೆ ಪಾವತಿ ಬ್ಯಾಂಕ್ (ಐಪಿಪಿಬಿ) ಗಳ ಸ್ಥಾಪನೆಯ ಯೋಜನಾ ಗಾತ್ರವನ್ನು 800 ಕೋಟಿ ರೂಪಾಯಿಗಳಿಂದ 1435 ಕೋಟಿ ರೂಪಾಯಿಗಳಿಗೆ ಪರಿಷ್ಕರಿಸಲು ತನ್ನ ಅನುಮೋದನೆ ನೀಡಿದೆ. 400 ರೂಪಾಯಿಗಳ ತಾಂತ್ರಿಕ ವೆಚ್ಚ ಮತ್ತು 235 ಕೋಟಿ ರೂಪಾಯಿಗಳ ಮಾನವ ಸಂಪನ್ಮೂಲ ವೆಚ್ಚವು ಹೆಚ್ಚುವರಿ 635 ಕೋಟಿ ರೂಪಾಯಿಗಳ ಪರಿಷ್ಕೃತ ಅಂದಾಜು ವೆಚ್ಚಕ್ಕೆ ಕಾರಣವಾಗಿದೆ. 

 

ವಿವರಗಳು: 

 

·   ಐಪಿಪಿಬಿ ಸೇವೆಗಳು ದೇಶಾದ್ಯಂತ 650 ಐಪಿಪಿಬಿ ಶಾಖೆಗಳು ಮತ್ತು 3250 ಕೇಂದ್ರಗಳಲ್ಲಿ ದೊರೆಯಲಿದೆ ಮತ್ತು ಡಿಸೆಂಬರ್ 2018ರೊಳಗೆ ಎಲ್ಲ 1.55 ಲಕ್ಷ ಅಂಚೆ ಕಚೇರಿಗಳಲ್ಲಿ (ಅಕ್ಸೆಸ್ ಪಾಯಿಂಟ್ ಗಳು)2018ರ ಸೆಪ್ಟೆಂಬರ್ 1ರಿಂದ ದೊರಯಲಿವೆ.

 

·   ಈ ಯೋಜನೆಯು 3500 ನುರಿತ ಬ್ಯಾಂಕಿಂಗ್ ವೃತ್ತಿಪರರಿಗೆ ಮತ್ತು ದೇಶದಾದ್ಯಂತ ಆರ್ಥಿಕ ಸಾಕ್ಷರತೆ ಉತ್ತೇಜಿಸುವ ಕಾರ್ಯದಲ್ಲಿ ತೊಡಗಿರುವ ಇತರ ಕಾಯಗಳಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ.

 

·   ಶ್ರೀಸಾಮಾನ್ಯನಿಗೆ ಕೈಗೆಟಕುವ ದರದಲ್ಲಿ, ವಿಶ್ವಾಸಾರ್ಹ ಬ್ಯಾಂಕ್ ಗೆ   ಹೆಚ್ಚಾಗಿ ಪ್ರವೇಶ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ;  ಬ್ಯಾಂಕಿಂಗ್ ಸೇವೆಯೇ ಇಲ್ಲದೆಡೆ ಅಡೆತಡೆ ನಿವಾರಿಸಿ ಹಣ ಪೂರಣ ಕಾರ್ಯಕ್ರಮ ಮುಂದುವರಿಕೆ ಮತ್ತು ಕಡಿಮೆ ಬ್ಯಾಂಕಿಂಗ್ ಸೇವೆಯ ಜನವಸತಿಗಳಲ್ಲಿ ಮನೆ ಬಾಗಿಲಿಗೇ ಬ್ಯಾಂಕಿಂಗ್ ಸೇವೆ ಒದಗಿಸುವ ಮೂಲಕ ಅವಕಾಶದ ವೆಚ್ಚವನ್ನು ತಗ್ಗಿಸುವುದು.

 

·   ಈ ಯೋಜನೆಯು ಸರ್ಕಾರದ ‘ಕಡಿಮೆ ನಗದು’ ಆರ್ಥಿಕತೆಯ ದೃಷ್ಟಿಕೋನಕ್ಕೆ ಪೂರಕವಾಗಿದೆ ಮತ್ತು ಅದೇ ವೇಳೆ ಹಣ ಪೂರಣ ಮತ್ತು ಆರ್ಥಿಕ ಪ್ರಗತಿಯನ್ನು ಉತ್ತೇಜಿಸುತ್ತದೆ.

 

·   ಐಪಿಪಿಬಿಯ ಚೈತನ್ಯದಾಯಕ ಐ.ಟಿ. ವಿನ್ಯಾಸವನ್ನು ಬ್ಯಾಂಕ್ ದರ್ಜೆಯ ಕಾರ್ಯಕ್ಷಮತೆ, ವಂಚನೆ ಮತ್ತು ಅಪಾಯ ತಗ್ಗಿಸುವ ಮಾನದಂಡಗಳನ್ನು ಅನುಸರಿಸಿ ಪಾವತಿಗಳು ಮತ್ತು ಬ್ಯಾಂಕಿಂಗ್ ಅವಶ್ಯಕತೆಗೆ ಅನುಗುಣವಾಗಿ ರೂಪಿಸಲಾಗಿದೆ.

 

ಐಪಿಪಿಬಿ ಸೇವೆಗಳು:

 

 ಐಪಿಪಿಬಿ ತನ್ನ ತಾಂತ್ರಿಕತೆಯಿಂದ ಕೂಡಿದ ಪರಿಹಾರಗಳ ಮೂಲಕ ಪಾವತಿ/ಹಣಕಾಸು ಸೇವೆಗಳ ಗುಚ್ಛವನ್ನು ಒದಗಿಸುತ್ತದೆ, ಇದನ್ನು ಅಂಚೆ ಇಲಾಖೆ (ಡಿಓಪಿ)ಯ ಅಂಚೆ ವಿತರಕರನ್ನು, ಹಣಕಾಸು ಸೇವೆ ಒದಗಿಸುವ ಸಿಬ್ಬಂದಿ/ಲಾಸ್ಟ್ ಮೈಲ್ (ಕೊಟ್ಟ ಕೊನೆಗೂ ತಲುಪುವ) ಏಜೆಂಟರನ್ನಾಗಿ ಪರಿವರ್ತಿಸುವ  ಮೂಲಕ  ಪೂರೈಸಲಾಗುತ್ತದೆ.

 

ಐಪಿಪಿಬಿ ಸೇವೆಗಳನ್ನು ಒದಗಿಸುವುದಕ್ಕಾಗಿ ಲಾಸ್ಟ್ ಮೈಲ್ ಏಜೆಂಟರಿಗೆ ಐಪಿಪಿಬಿ ಪ್ರೋತ್ಸಾಹಕ / ಕಮಿಷನ್ (ಅಂಚೆ ಸಿಬ್ಬಂದಿ ಮತ್ತು ಗ್ರಾಮೀನ್ ಅಂಚೆ ಸೇವಕರಿಗೆ) ಅನ್ನು ನೇರವಾಗಿ ಅವರ ಖಾತೆಗಳಿಗೆ ಪಾವತಿಸುತ್ತದೆ. ಇದು ಐಪಿಪಿಬಿ ಡಿಜಿಟಲ್ ಸೇವೆಯನ್ನು ಗ್ರಾಹಕರಿಗೆ ಒದಗಿಸಲು ಉತ್ತೇಜಿಸುತ್ತದೆ.

 

ಐಪಿಪಿಬಿಯಿಂದ ಅಂಚೆ ಇಲಾಖೆಗೆ ನೀಡಲಾಗುವ ಕಮಿಷನ್ ನ ಒಂದು ಭಾಗವನ್ನು ಅಂಚೆ ಕಚೇರಿಗಳಿಗೆ ಅನುಕೂಲತೆ ಒದಗಿಸಲು ಬಳಸಿಕೊಳ್ಳಲಾಗುತ್ತದೆ.  

 

*****  



(Release ID: 1544470) Visitor Counter : 94