ಪ್ರಧಾನ ಮಂತ್ರಿಯವರ ಕಛೇರಿ

2018ರ ಜುಲೈ 14 ಮತ್ತು 15ರಂದು ಪೂರ್ವ ಯು.ಪಿ.ಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ

Posted On: 13 JUL 2018 4:26PM by PIB Bengaluru

2018ರ ಜುಲೈ 14 ಮತ್ತು 15ರಂದು ಪೂರ್ವ ಯು.ಪಿ.ಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2018ರ ಜುಲೈ 14 ಮತ್ತು 15ರಂದು ಉತ್ತರ ಪ್ರದೇಶದ ವಾರಾಣಸಿ, ಅಜಮ್ ಘರ್ ಮತ್ತು ಮಿರ್ಜಾಪುರ್ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ.

 

ಜುಲೈ 14ರಂದು ಅಜಮ್ ಘರ್ ನಲ್ಲಿ ಪ್ರಧಾನಮಂತ್ರಿಯವರು, 340 ಕಿ.ಮೀ ಉದ್ದದ ಪೂರ್ವಾಂಚಲ ಎಕ್ಸ್ ಪ್ರೆಸ್ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ರಸ್ತೆಯು ಬಾರಾಬಂಕಿ, ಅಮೇಥಿ, ಸುಲ್ತಾನ್ಪುರ, ಫೈಜಾಬಾದ್, ಅಂಬೇಡ್ಕರ್ ನಗರ, ಅಜಮ್ ಘರ್, ಮಾನು ಮತ್ತು ಗಾಜಿಪುರ ಸೇರಿದಂತೆ ಪೂರ್ವ ಉತ್ತರ ಪ್ರದೇಶದ ಹಲವು ಮಹತ್ವದ ಮತ್ತು ಐತಿಹಾಸಿಕ ಪಟ್ಟಣಗಳನ್ನು ರಾಜಧಾನಿ ಲಖನೌನೊಂದಿಗೆ ಸಂಪರ್ಕಿಸಲಿದೆ. ಈ ಎಕ್ಸ್ ಪ್ರೆಸ್ ದಾರಿ ಪೂರ್ಣಗೊಂಡ ಬಳಿಕ, ಈ ಎಕ್ಸ್ ಪ್ರೆಸ್ ಮಾರ್ಗದ ಮೂಲಕ ಪಶ್ಚಿಮದಲ್ಲಿನ ನೋಯಿಡಾದಿಂದ ಪೂರ್ವದ ಗಾಜಿಪುರದ ತನಕ ಉತ್ತರ ಪ್ರದೇಶದ ಹಲವು ಪ್ರಮುಖ ಪಟ್ಟಣ ಮತ್ತು ನಗರಗಳು ದೆಹಲಿಯೊಂದಿಗೆ ಸಂಪರ್ಕ ಹೊಂದಲಿವೆ.

 

ವಾರಾಣಸಿಯಲ್ಲಿ ಪ್ರಧಾನಮಂತ್ರಿಯವರು ಒಟ್ಟು 900 ಕೋಟಿ ರೂಪಾಯಿ ಮೌಲ್ಯದ ಮಹತ್ವದ ಯೋಜನೆಗಳಿಗೆ ಶಿಲಾನ್ಯಾಸ ಅಥವಾ ಸಮರ್ಪಣೆ ಮಾಡಲಿದ್ದಾರೆ. ಸಮರ್ಪಣೆಯಾಗಲಿರುವ ಯೋಜನೆಗಳಲ್ಲಿ ವಾರಾಣಸಿ ನಗರದ ಅನಿಲ ವಿತರಣಾ ಯೋಜನೆ ಮತ್ತು ವಾರಾಣಸಿ – ಬಲ್ಲಿಯಾ ಇ.ಎಂ.ಯು. ರೈಲು ಯೋಜನೆಗಳು ಸೇರಿವೆ. ಪಂಚಕೋಶಿ ಪರಿಕ್ರಮ ಮಾರ್ಗ, ಮತ್ತು ಸ್ಮಾರ್ಟ್ ಸಿಟಿ ಮತ್ತು ನಮಾಮಿ ಗಂಗೆ ಯೋಜನೆ ಅಡಿಯಲ್ಲಿ ಹಲವು ಯೋಜನೆಗಳಿಗೆ ಪ್ರಧಾನಮಂತ್ರಿಯವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ವಾರಾಣಸಿಯಲ್ಲಿ ಪ್ರಧಾನಮಂತ್ರಿಯವರು ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರಕ್ಕೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

 

ಪ್ರತ್ಯೇಕ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು “ಮೇರಿ ಕಾಶಿ’’ ಎಂಬ ಶೀರ್ಷಿಕೆಯ ಪುಸ್ತಕವನ್ನು ಪ್ರಧಾನಮಂತ್ರಿಯವರ ಸಮ್ಮುಖದಲ್ಲಿ ಬಿಡುಗಡೆ ಮಾಡಲಿದ್ದಾರೆ.

 

ಜುಲೈ 15ರಂದು ಪ್ರಧಾನಮಂತ್ರಿ ಮಿರ್ಜಾಪುರ್ ಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು, ಬನ್ಸಗಾರ್ ನಾಲೆ ಯೋಜನೆಯನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಈ ಯೋಜನೆಯು ಈ ವಲಯದ ನೀರಾವರಿಗೆ ಇಂಬು ನೀಡಲಿದೆ ಮತ್ತು ಉತ್ತರ ಪ್ರದೇಶದ ಮಿರ್ಜಾಪುರ ಮತ್ತು ಅಲಹಾಬಾದ್ ಜಿಲ್ಲೆಗಳ ರೈತರಿಗೆ ಪ್ರಯೋಜನವಾಗಲಿದೆ.

 

ಇದೇ ಕಾರ್ಯಕ್ರಮದಲ್ಲಿ ಶ್ರೀ ನರೇಂದ್ರ ಮೋದಿ ಅವರು, ಮಿರ್ಜಾಪುರ ವೈದ್ಯಕೀಯ ಕಾಲೇಜಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅವರು ರಾಜ್ಯದಲ್ಲಿ 108 ಜನ್ ಔಷಧಿ ಕೇಂದ್ರಗಳನ್ನೂ ಉದ್ಘಾಟಿಸಲಿದ್ದಾರೆ. ಬಾಲುಘಾಟ್, ಚೌನಾರ್ ನಲ್ಲಿ ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆಯನ್ನೂ ಅವರು ಸಮರ್ಪಿಸಲಿದ್ದು, ಇದು ಮಿರ್ಜಾಪುರ ಮತ್ತು ವಾರಾಣಸಿ ನಡುವೆ ಸಂಪರ್ಕ ಕಲ್ಪಿಸಲಿದೆ.

***



(Release ID: 1538714) Visitor Counter : 71